Prakash Shesharaghavachar Column: ಸಂಕಷ್ಟದ ಸಮಯದಲ್ಲಿ ಇದೆಂಥ ವಿಕೃತಿ !
‘ಮುಂಬೈ ದಾಳಿಗೆ ಆರೆಸ್ಸೆಸ್ ಕಾರಣ’ ಎಂಬುದಾಗಿ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಆರೋಪಿಸಿ, ಪಾಕ್ ಬೆಂಬಲಿತ ಉಗ್ರಗಾಮಿಗಳಿಗೆ ಕ್ಲೀನ್‌ಚಿಟ್ ಕೊಡುವ ಹೀನಾಯ ಪ್ರಯತ್ನವನ್ನು ನಡೆಸಿದರು. ಮುಂಬೈನಲ್ಲಿ ನಡೆದ 26/11ರ ನರಮೇಧದ ಪ್ರಮುಖ ಆಪಾದಿತ ತಹಾವುರ್ ರಾಣಾ ನನ್ನು ಕಳೆದ ತಿಂಗಳು ಅಮೆರಿಕದಿಂದ ಭಾರತದ ವಶಕ್ಕೆ ಪಡೆದು, ಯುಪಿಎ ಅವಧಿಯಲ್ಲಿ ಆಗದ್ದನ್ನು ಮೋದಿ ಸರಕಾರ ಮಾಡಿ ತೋರಿಸಿತು.


ಪ್ರಕಾಶಪಥ
ಪ್ರಕಾಶ್ ಶೇಷರಾಘವಾಚಾರ್
ಅದು 2008ರ ನವೆಂಬರ್ 26ರ ದಿನ. ಮುಂಬೈನ ರಸ್ತೆ ರಸ್ತೆಗಳಲ್ಲಿ ಭಯೋತ್ಪಾದಕರ ಗುಂಡು ಸದ್ದು ಮಾಡಿತು. ಪ್ರತಿಷ್ಠಿತ ತಾಜ್ ಹೋಟೆಲ್, ಟ್ರೈಡೆಂಟ್ ಹೋಟೆಲ್, ರೈಲು ನಿಲ್ದಾಣ ಹೀಗೆ ವಿವಿಧೆಡೆ ಗಳಲ್ಲಿ ಅವರು ತಮ್ಮ ಪೈಶಾಚಿಕ ಕೃತ್ಯವನ್ನು ನಡೆಸಿ ನೂರಾರು ಜನರ ಮಾರಣಹೋಮ ಮಾಡಿ ದರು. ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಭಯೋತ್ಪಾದಕರು ಈ ರೀತಿ ದಾಳಿ ಮಾಡಿ ಜನರನ್ನು ತಲ್ಲಣಗೊಳಿಸಿದ್ದು; ದೇಶದ ಹಣಕಾಸು ರಾಜಧಾನಿ ಎನಿಸಿಕೊಂಡಿರುವ ಮುಂಬೈ ನಡುಗಿ ಹೋಗಿತ್ತು. ಈ ದುರ್ಘಟನೆ ನಡೆದ ಕೂಡಲೇ ಅಂದಿನ ಯುಪಿಎ ಸರಕಾರದೊಂದಿಗೆ ಎಲ್ಲಾ ವಿರೋಧ ಪಕ್ಷಗಳೂ ಒಂದೇ ದನಿಯಲ್ಲಿ ಮಾತನಾಡಿದವು, ಅಲ್ಲಿ ಒಡಕಿಗೆ ಆಸ್ಪದವೇ ಇರಲಿಲ್ಲ.
ಅಂದು ಪಾಕಿಸ್ತಾನದಿಂದ ಬಂದಿದ್ದ ಲಷ್ಕರ್-ಎ-ತೈಬಾ ಉಗ್ರರ ಗುರಿಯೂ ಹಿಂದೂಗಳೇ ಆಗಿದ್ದರು ಮತ್ತು ತಮ್ಮ ಗುರಿ ಸಾಧನೆಯಲ್ಲಿ ಉಗ್ರರು ಬಹುತೇಕ ಯಶಸ್ವಿಯೂ ಆದರು. ಅಂದಿನ ಮಾಧ್ಯಮ ಗಳು ವಿಪರೀತವಾದ ಜಾತ್ಯತೀತತೆಯನ್ನು ಆಲಿಂಗಿಸಿದ್ದ ಕಾರಣ, ‘ಈ ದಾಳಿಯನ್ನು ಧಾರ್ಮಿಕ ದೃಷ್ಟಿಕೋನದಿಂದ ನೋಡಬಾರದು; ಇದು ಭಾರತದ ಸಾರ್ವಭೌಮತ್ವದ ಮೇಲೆ ನಡೆದಿರುವ ದಾಳಿ’ ಎಂದು ವಿಷಯಾಂತರಿಸಿ, ಸತ್ಯವನ್ನು ಹುದುಗಿಸಿ, ಇಡೀ ಪ್ರಕರಣಕ್ಕೆ ಧಾರ್ಮಿಕ ತಿರುವು ಸಿಗದಂತೆ ಅವು ನೋಡಿಕೊಂಡವು.
ದೌರ್ಭಾಗ್ಯವೆಂದರೆ, ಈ ದಾಳಿಯ ಸಂದರ್ಭದಲ್ಲಿನ ಭದ್ರತಾ ಮತ್ತು ಬೇಹುಗಾರಿಕಾ ವ್ಯವಸ್ಥೆಗಳ ವೈಫಲ್ಯ, ಪಾಕ್ ಭಯೋತ್ಪಾದಕರಿಗೆ ದಕ್ಕಿದ ಸ್ಥಳೀಯರ ನೆರವು ಇಂಥ ವಿಷಯಗಳ ಕುರಿತು ತನಿಖೆ ಯಾಗಬೇಕಿತ್ತು. ಆದರೆ ಅಂದಿನ ಪ್ರಧಾನಿ ಮನಮೋಹನ್ ಸಿಂಗ್‌ರವರು ಇಂಥ ಯಾವುದೇ ಪ್ರಯತ್ನವನ್ನು ಮಾಡಲೇ ಇಲ್ಲ. ಈ ಅಮಾನುಷ ಹತ್ಯೆಗೆ ಕಾರಣರಾದ ಉಗ್ರರ ವಿರುದ್ಧ ಮತ್ತು ಅವರನ್ನು ಬೆಂಬಲಿಸಿದ್ದ ಪಾಕಿಸ್ತಾನದ ವಿರುದ್ಧ ಕಾರ್ಯಾಚರಣೆ ನಡೆಸುವ ದುಸ್ಸಾಹಸಕ್ಕೂ ಹೋಗಲಿಲ್ಲ. ಅವರಿಗೆ ಈ ಪ್ರಕರಣವನ್ನು ಶೀಘ್ರವಾಗಿ ತೆರೆಮರೆಗೆ ಸರಿಸುವ ಆತುರವಿತ್ತು, ಅದರಲ್ಲಿ ಯಶಸ್ವಿಯೂ ಆದರು. ಮುಂಬೈ ದಾಳಿಯ ತರುವಾಯ ಮಹಾ ರಾಷ್ಟ್ರದ ಮುಖ್ಯಮಂತ್ರಿ ಮತ್ತು ಕೇಂದ್ರ ಗೃಹ ಸಚಿವರು ರಾಜೀನಾಮೆ ನೀಡಿದ್ದರು ಎಂಬ ಅಂಶ ವನ್ನು ಪಹಲ್ಗಾಮ್‌ನಲ್ಲಿನ ಭಯೋತ್ಪಾದಕರ ದಾಳಿಯ ನಂತರ ಕೆಲ ಕಾಂಗ್ರೆಸ್ಸಿಗರು ಮತ್ತು ರಾಜಕೀಯ ವಿಶ್ಲೇಷಕರು ಪ್ರಸ್ತಾಪಿಸುತ್ತಿದ್ದಾರೆ.
ಇದನ್ನೂ ಓದಿ: Prakash Shesharaghavachar Column: 'ಹೋಗಿ ನಿಮ್ಮ ಮೋದಿಗೆ ಹೇಳಿʼ ಎಂದ ಆ ಮತಾಂಧ ರಾಕ್ಷಸ !
ಶಿವರಾಜ್ ಪಾಟೀಲರು ರಾಜೀನಾಮೆ ನೀಡಿದ ಸಂದರ್ಭವನ್ನೇ ಅವಲೋಕಿಸೋಣ. ಮುಂಬೈ ದಾಳಿ ನಡೆದ ಸ್ಥಳಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ನಾಲ್ಕಾರು ಬಾರಿ ತಮ್ಮ ಬಟ್ಟೆ ಬದಲಾ ಯಿಸಿದ್ದು ದೊಡ್ಡ ವಿವಾದವಾಯಿತು. ಮಹಾರಾಷ್ಟ್ರದ ಅಂದಿನ ಮುಖ್ಯಮಂತ್ರಿ ವಿಲಾಸ್‌ರಾವ್ ದೇಶ್‌ಮುಖ್ ರವರು ತಮ್ಮೊಂದಿಗೆ ಚಲನಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮಾರನ್ನು ಕರೆದೊಯ್ದಿದ್ದು ಬಹುದೊಡ್ಡ ವಿವಾದವಾದಾಗ, ಅವರು ಅನಿವಾರ್ಯವಾಗಿ ರಾಜೀನಾಮೆ ನೀಡಬೇಕಾಯಿತು.
‘ಮುಂಬೈ ದಾಳಿಗೆ ಆರೆಸ್ಸೆಸ್ ಕಾರಣ’ ಎಂಬುದಾಗಿ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಆರೋಪಿಸಿ, ಪಾಕ್ ಬೆಂಬಲಿತ ಉಗ್ರಗಾಮಿಗಳಿಗೆ ಕ್ಲೀನ್‌ಚಿಟ್ ಕೊಡುವ ಹೀನಾಯ ಪ್ರಯತ್ನವನ್ನು ನಡೆಸಿದರು. ಮುಂಬೈನಲ್ಲಿ ನಡೆದ 26/11ರ ನರಮೇಧದ ಪ್ರಮುಖ ಆಪಾದಿತ ತಹಾವುರ್ ರಾಣಾ ನನ್ನು ಕಳೆದ ತಿಂಗಳು ಅಮೆರಿಕದಿಂದ ಭಾರತದ ವಶಕ್ಕೆ ಪಡೆದು, ಯುಪಿಎ ಅವಧಿಯಲ್ಲಿ ಆಗದ್ದನ್ನು ಮೋದಿ ಸರಕಾರ ಮಾಡಿ ತೋರಿಸಿತು.
ಗಮನಾರ್ಹ ಸಂಗತಿಯೆಂದರೆ, ಕಳೆದ 10 ವರ್ಷದಲ್ಲಿ, ವಿದೇಶದಲ್ಲಿ ಆಶ್ರಯ ಪಡೆದಿದ್ದ 107 ಕುಖ್ಯಾತ ಅಪರಾಧಿಗಳ ಹೆಡೆಮುರಿ ಕಟ್ಟಿ ಭಾರತಕ್ಕೆ ತರುವ ಕೆಲಸವಾಗಿದೆ. 2014ರ ತರುವಾಯ ನಡೆದ ‘ಉರಿ’ ಮತ್ತು ‘ಪುಲ್ವಾಮ’ ಭಯೋತ್ಪಾದಕ ಕೃತ್ಯಕ್ಕೆ ಕಾರಣರಾದವರಿಗೆ, ಅವರು ನಿರೀಕ್ಷಿಸಿ ಯೂ ಇಲ್ಲದ ರೀತಿಯಲ್ಲಿ ತಪರಾಕಿ ನೀಡಲಾಗಿತ್ತು.
ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತವು ಸರ್ಜಿಕಲ್ ಸ್ಟ್ರೈಕ್ ಕೈಗೊಂಡು ಈ ಪಾಠವನ್ನು ಕಲಿಸಿತ್ತು. ರಕ್ತಬೀಜಾಸುರನ ಸಂತಾನದ ಮೂಲಭೂತವಾದಿಗಳು ಹುಟ್ಟುತ್ತಲೇ ಇರುತ್ತಾರೆ, ಅವರನ್ನು ಯಮಪುರಿಗೆ ಅಟ್ಟುವ ಕೆಲಸವೂ ನಡೆಯುತ್ತಲೇ ಇದೆ. ಆದರೆ, ‘ಸರ್ಜಿಕಲ್ ಸ್ಟ್ರೈಕ್’ ಕಾರ್ಯಾಚರಣೆ ನಡೆದಿದ್ದನ್ನೇ ಅನುಮಾನಿಸಿ, ಅದಕ್ಕೆ ಸಂಬಂಧಿಸಿದ ಪುರಾವೆ ನೀಡುವಂತೆ ಕಾಂಗ್ರೆಸ್ಸಿನ ಒಬ್ಬರಲ್ಲಾ ಒಬ್ಬರು ನಾಯಕರು ಪದೇಪದೆ ಕೇಳುತ್ತಲೇ ಇದ್ದಾರೆ.
ಈಗ ಹೊಸದಾಗಿ ಈ ಪಟ್ಟಿಯನ್ನು ಸೇರಿದ್ದಾರೆ ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಚರಣ್‌ಜಿತ್ ಚೆನ್ನಿ. ನಮ್ಮ ಸೈನ್ಯವನ್ನು ಲೇವಡಿ ಮಾಡುವುದೆಂದರೆ ಕಾಂಗ್ರೆಸ್ ನಾಯಕರಿಗೆ ಎಲ್ಲಿಲ್ಲದ ಉತ್ಸಾಹ. ಉತ್ತರ ಪ್ರದೇಶ ಕಾಂಗ್ರೆಸ್ ಘಟಕದ ಅಧ್ಯಕ್ಷ ಅಜಯ್‌ರಾವ್, ಆಟಿಕೆಯ ವಿಮಾನಕ್ಕೆ ನಿಂಬೆಹಣ್ಣು ಮತ್ತು ಮೆಣಸಿನಕಾಯಿ ಕಟ್ಟಿ, ಅದಕ್ಕೆ ‘ರಫೆಲ್’ ಎಂಬ ಹಣೆಪಟ್ಟಿ ಅಂಟಿಸಿ ಲೇವಡಿ ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಳ್ಳುತ್ತಾರೆ.
ಶತ್ರುವನ್ನು ಸದೆ ಬಡಿಯುವ ಗಳಿಗೆಯು ಬಂದಿರುವಾಗ ಕ್ಷುಲ್ಲಕ ರಾಜಕೀಯವು ನೇಪಥ್ಯಕ್ಕೆ ಸರಿಯ ಬೇಕಿತ್ತು; ಆದರೆ ಕಾಂಗ್ರೆಸ್‌ಗೆ ದೇಶದ ಹಿತಕ್ಕಿಂತ ರಾಜಕೀಯವೇ ಮುಖ್ಯವಾಗಿರುವುದು ವಿಷಾದದ ಸಂಗತಿ.
ರಾಷ್ಟ್ರೀಯತೆಯೊಂದಿಗೆ ಗುರುತಿಸಲ್ಪಡುತ್ತಿದ್ದ ಕಾಂಗ್ರೆಸ್ ಮತ್ತೆ ಅಧಿಕಾರ ಗಳಿಸಲು ರಾಷ್ಟ್ರೀಯ ಹಿತಾಸಕ್ತಿಯಿಂದ ದೂರ ಸರಿದು, ತನ್ನ ಶತಮಾನಗಳ ಸಿದ್ಧಾಂತಕ್ಕೆ ತಿಲಾಂಜಲಿ ನೀಡಿ, ಮೋದಿ ಯವರನ್ನು ನಕಾರಾತ್ಮಕತೆಯಿಂದ ಮಣಿಸಲು ತನ್ನ ಶಕ್ತಿಯನ್ನು ಅಪವ್ಯಯ ಮಾಡುತ್ತಿದೆ. ಪಹಲ್ಗಾಮ್‌ನಲ್ಲಿ ಭಯೋತ್ಪಾದಕರ ಭೀಷಣ ಕೃತ್ಯಕ್ಕೆ 26 ಪ್ರವಾಸಿಗರ ಹತ್ಯೆಯಾಗಿ, ದೇಶದಲ್ಲಿ ತಲ್ಲಣ ಉಂಟಾಗಿರುವ ಸಂದರ್ಭದಲ್ಲಿ 140 ಕೋಟಿ ಜನರ ಜತೆಗೆ ಕಾಂಗ್ರೆಸ್ ಕೈಜೋಡಿಸಿ, ಆ ದೇಶದ್ರೋಹಿಗಳ ಮತ್ತು ಅವರ ಹಿಂದಿರುವ ಶಕ್ತಿಗಳ ದಮನಕ್ಕೆ ಒಕ್ಕೊರಲಿನ ದನಿಯಾಗಬೇಕಿತ್ತು.
ಆದರೆ ಶತ್ರುವಿನ ವಿರುದ್ಧದ ಹೋರಾಟಕ್ಕಿಂತ ಮೋದಿಯವರ ವಿರುದ್ಧ ಸೆಣಸುವುದು ನಮ್ಮ ವಿರೋಧ ಪಕ್ಷದ ನಾಯಕರುಗಳಿಗೆ ಮುಖ್ಯವಾಗಿಬಿಟ್ಟಿದೆ. ಕಾಂಗ್ರೆಸ್‌ನ ಕಾರ್ಯಕಾರಿ ಸಮಿತಿಯಲ್ಲಿ ‘ಕೇಂದ್ರ ಸರಕಾರದ ಜತೆ ನಾವಿದ್ದೇವೆ’ ಎಂಬ ಠರಾವನ್ನು ಅನುಮೋದಿಸಿ ಕೇಂದ್ರದ ಜತೆಗೆ ಸಹಕರಿ ಸುವ ಭರವಸೆಯನ್ನೇನೋ ನೀಡಲಾಯಿತು; ಆದರೆ ಈ ಪ್ರಸ್ತಾವನೆ ಕೇವಲ ಕಾಗದಕ್ಕೆ ಸೀಮಿತ ವಾಗಿದೆ.
ಕಾಂಗ್ರೆಸ್‌ನ ಅನೇಕ ನಾಯಕರು ಸರಕಾರವನ್ನು ತೀಕ್ಷ್ಣವಾಗಿ ಟೀಕಿಸುವ ಭರದಲ್ಲಿ ಪಾಕಿಸ್ತಾನದ ಮಾಧ್ಯಮಗಳಿಗೆ ಪ್ರಚಾರದ ವಸ್ತುವಾಗಿ ಬಿಟ್ಟಿದ್ದಾರೆ. ಕಾಂಗ್ರೆಸ್ ಪಕ್ಷದ ನೀತಿಗೂ, ಅದರ ಸಾಮಾಜಿಕ ಜಾಲತಾಣ ವಿಭಾಗದ ನಿಲುವಿಗೂ ಅಗಾಧ ವ್ಯತ್ಯಾಸವಿದೆ. ತಲೆಯಿಲ್ಲದ ಪ್ರಧಾನಿಯವರ ಚಿತ್ರ ವನ್ನು ರೂಪಿಸಿ, ‘ಗಾಯಬ್’ ಎಂಬ ಹಣೆ ಪಟ್ಟಿ ಕೊಟ್ಟು ಅದನ್ನು ಎಲ್ಲೆಡೆ ಹಂಚಿಕೊಳ್ಳಲಾಯಿತು. ಆ ಚಿತ್ರವು ಎಲ್ಲೆಡೆ ಕಟುವಾದ ಟೀಕೆಗೊಳಗಾಗಿ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಹಿನ್ನಡೆಯಾಯಿತು.
ಆ ಚಿತ್ರವನ್ನು ಬಿಜೆಪಿ ‘ಸರ್ ತನ್ ಸೇ ಜುದಾ’ಗೆ ಹೋಲಿಸಿ ಕಾಂಗ್ರೆಸ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದ ಪರಿಣಾಮ, ಆ ಪೋಸ್ಟ್ ಅನ್ನು ಅಳಿಸಿ ಹಾಕಬೇಕಾಯಿತು. ತನ್ನ ನಾಯಕರುಗಳು ಸಭ್ಯತೆಯ ಗೆರೆ ದಾಟಿ ಪಾಕಿಸ್ತಾನವನ್ನು ಪರೋಕ್ಷವಾಗಿ ಬೆಂಬಲಿಸುವ ವಿಚಾರವನ್ನು ಮುಂದಿಡುವ ಅತಿರೇಕಕ್ಕೆ ಹೋದ ಮೇಲೆ ಎಚ್ಚೆತ್ತುಕೊಂಡ ಕಾಂಗ್ರೆಸ್, ‘ಪ್ರತಿಕ್ರಿಯೆಗಳು ಪಕ್ಷದ ಕಾರ್ಯಕಾರಿ ಸಮಿತಿಯ ಪ್ರಸ್ತಾವನೆಗೆ ಅನುಗುಣವಾಗಿರಬೇಕು.
ಅದನ್ನು ಮೀರಿದವರು ಶಿಸ್ತನ್ನು ಉಲ್ಲಂಘಿಸಿದ ಹಾಗೆ’ ಎಂಬರ್ಥದ ಒಕ್ಕಣೆಯಿದ್ದ ಸುತ್ತೋಲೆಯ ಮೂಲಕ ತನ್ನ ಸದಸ್ಯರಿಗೆ ಎಚ್ಚರಿಕೆ ನೀಡಬೇಕಾಗಿ ಬಂತು. ‘ಪಹಲ್ಗಾಮ್ ಹತ್ಯಾಕಾಂಡ ನಡೆದು 12 ದಿನವಾಯಿತು, ಅದರಲ್ಲಿ ಬಲಿಯಾದ 26 ಜನರಿಗೆ ಇನ್ನೂ ನ್ಯಾಯ ದೊರೆತಿಲ್ಲ’ ಎಂದು ಕೆಲವರು ಅಪಸ್ವರದಲ್ಲಿ ಹಾಡಲು ಶುರುಮಾಡಿಕೊಂಡಿದ್ದಾರೆ. ಇದರ ಹಿಂದೆ, ‘ಮೋದಿ ಸರಕಾರವು ಒತ್ತಡಕ್ಕೆ ಮಣಿದು ಕಾರ್ಯಾಚರಣೆ ಕೈಗೊಳ್ಳಲಿ; ಒಂದೊಮ್ಮೆ ಅದು ವಿಫಲವಾದರೆ ಅವರ ರಾಜೀನಾಮೆ ಯನ್ನು ಕೇಳಬಹುದು’ ಎಂಬ ದುರುದ್ದೇಶ ಇರುವುದನ್ನು ತಳ್ಳಿ ಹಾಕಲಾಗದು.
ಪಾಕ್-ಪ್ರೇರಿತ ಪಹಲ್ಗಾಮ್ ನರಮೇಧದ ತರುವಾಯ ಭಾರತವು ಪಾಕಿಸ್ತಾನದ ವಿರುದ್ಧ ಹಲವು ಕ್ರಮಗಳನ್ನು ಕೈಗೊಂಡಿದೆ. ಸಿಂಧೂ ನದಿಯ ನೀರು ಪಾಕ್‌ಗೆ ಹರಿಯುವುದನ್ನು ತಡೆಯುವುದರಿಂದ ಮೊದಲ್ಗೊಂಡು, ಪಾಕ್‌ನ ಎಲ್ಲಾ ಪದಾರ್ಥಗಳ ಮೇಲೆ ಆಮದು ನಿರ್ಬಂಧವನ್ನು ಹೇರುವವರೆಗೆ ಅನೇಕ ಚಾಟಿಯೇಟುಗಳು ಇದರಲ್ಲಿ ಸೇರಿವೆ.
ಇದಲ್ಲದೆ, ಪಾಕ್‌ನ ನಾಗರಿಕರನ್ನು ದೇಶದಿಂದ ಹೊರಹಾಕುವ ಕ್ರಮವನ್ನೂ ಕೈಗೊಳ್ಳಲಾಗಿದೆ. ಇದರಿಂದಾಗಿ, 40 ವರ್ಷದಿಂದಲೂ ಭಾರತದಲ್ಲಿ ವಾಸವಾಗಿದ್ದರೂ ಇಲ್ಲಿನ ಪೌರತ್ವವನ್ನು ಪಡೆಯದೇ ಉಳಿದಿದ್ದ ನೂರಾರು ಪಾಕ್ ಪ್ರಜೆಗಳ ಮಾಹಿತಿ ಬಯಲಾಗಿದೆ. ಮುನೀರ್ ಅಹಮದ್ ಎಂಬ ಸಿಆರ್‌ಪಿಎಫ್ ಯೋಧನು ಪಾಕ್ ಪ್ರಜೆಯನ್ನು ಮದುವೆಯಾಗಿರುವ ಆಘಾತಕಾರಿ ಸಂಗತಿ ಯೂ ಹೊರಬಿದ್ದಿದೆ.
ಪಾಕ್‌ನಿಂದ ಭಾರತದೊಳಕ್ಕೆ ಅಕ್ರಮವಾಗಿ ನುಸುಳಿ ಬಂದವರು ಸರಕಾರಿ ಜಾಗಗಳನ್ನು ಅತಿಕ್ರಮಿಸಿ ತಮ್ಮದೇ ಕಾಲನಿಗಳನ್ನು ಕಟ್ಟಿಕೊಂಡಿದ್ದರು. ತಡವಾಗಿಯಾದರೂ ಎಚ್ಚೆತ್ತುಕೊಂಡ ರಾಜ್ಯ ಸರಕಾರಗಳು ಇಂಥ ಅಕ್ರಮ ಬಡಾವಣೆಗಳ ಮೇಲೆ ಬುಲ್ಡೋಜರ್ ಕಾರ್ಯಾಚರಣೆ ಕೈಗೊಳ್ಳುತ್ತಿವೆ. ಅಹಮದಾಬಾದ್‌ನ ಚಂಡೋಲಾ ಸರೋವರದ ತಟದಲ್ಲಿದ್ದ 2000 ಮನೆಗಳನ್ನು ನೆಲಸಮ ಮಾಡಿ, ಅಲ್ಲಿ ಅಕ್ರಮವಾಗಿ ನೆಲೆಸಿದ್ದ ಸಾವಿರಕ್ಕೂ ಹೆಚ್ಚು ಬಾಂಗ್ಲಾದೇಶೀಯರನ್ನು ಬಂಧಿಸಲಾಗಿದೆ.
ಹೀಗೆ ತಡವಾಗಿಯಾದರೂ ಅಕ್ರಮ ವಲಸಿಗರ ಅಡ್ಡಾಗಳ ಮೇಲೆ ಕ್ರಮ ಜರುಗುತ್ತಿರುವುದು ಸಮಾಧಾನದ ಸಂಗತಿ. ನಮ್ಮ ಸುತ್ತಲೂ ಶತ್ರುಪಾಳಯವೇ ಹೊಂಚಿ ಕೂತಿದೆ. ದೇಶದೊಳಗೆ ನುಸುಳಿ ಬರುವವರಿಗೆ ಈ ದೇಶದ ಹಿತವು ಎಂದಿಗೂ ಮುಖ್ಯವಲ್ಲ. ಆದರೆ ಇಂಥವರಿಗೆ ನಾವು ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಮತ್ತು ಪಡಿತರ ಚೀಟಿಗಳನ್ನು ಕೊಟ್ಟು ಅಪಾಯ ವನ್ನು ಮನೆಗೆ ಕರೆದುಕೊಂಡಿದ್ದೇವೆ.
ಅಮೆರಿಕದಲ್ಲಿ 9/11ರ ದುರಂತ ನಡೆದು ಸಾವಿರಾರು ಜನರ ಪ್ರಾಣ ಹೋದಾಗ ಅಲ್ಲಿನ ಡೆಮಾ ಕ್ರಟರು ಅಧ್ಯಕ್ಷ ಬುಶ್ ಅವರ ರಾಜೀನಾಮೆ ಕೇಳಲಿಲ್ಲ, ಬದಲಿಗೆ ರಿಪಬ್ಲಿಕನ್ನರ ಜತೆಗೆ ಭುಜಕ್ಕೆ ಭುಜ ಕೊಟ್ಟು ನಿಂತರು. ಆ ಮಾರಣಹೋಮವನ್ನು ನಡೆಸಿದ ಒಸಾಮಾ ಬಿನ್ ಲಾಡೆನ್‌ನನ್ನು ಹುಡುಕಿ ಕೊಲ್ಲಲು ಅಮೆರಿಕಕ್ಕೆ 10 ವರ್ಷ ಹಿಡಿಯಿತು; ಆದರೆ ಇದನ್ನು ಸರಕಾರದ ವೈಫಲ್ಯ ಎಂದು ಅಮೆರಿಕನ್ನರು ಟೀಕಿಸಲಿಲ್ಲ.
ಲಾಡೆನ್‌ನ ಆಟಾಟೋಪಗಳಿಗೆ ಇತಿಶ್ರೀ ಹಾಡಲಾಗುತ್ತದೆ ಎಂಬುದರಲ್ಲಿ ಅವರಿಗೆ ವಿಶ್ವಾಸವಿತ್ತು. ಪಾಕಿಸ್ತಾನದ ಭಾರತ-ವಿರೋಧಿ ಪ್ರಚಾರಕ್ಕೆ ಆಹಾರವಾಗುವ ನಕಾರಾತ್ಮಕ ನಿಲುವಿನಿಂದ ಭಾರತಕ್ಕೆ ಅಪಾಯ ಎಂಬುದನ್ನು ಮನಗಂಡು ವಿವೇಕಯುತ ವರ್ತನೆ ತೋರುವುದಕ್ಕೆ ಇದು ಸಮಯ ವಾಗಿದೆ.
ರಾಜಕೀಯ ನಾಯಕರು ವಿಕೃತಿಯನ್ನು ತೊರೆದು ಸುಕೃತಿಯೆಡೆಗೆ ಸಾಗುವ ಪ್ರಬುದ್ಧತೆಯನ್ನು ತೋರಲಿ ಎಂದು ದೇಶವಾಸಿಗಳು ನಿರೀಕ್ಷಿಸುತ್ತಿದ್ದಾರೆ. ದೇಶವು ಸವಾಲು ಎದುರಿಸುತ್ತಿರುವ ಈ ಸಂದರ್ಭದಲ್ಲಿ ಬಿಜೆಪಿಯಾಗಲೀ ಅಥವಾ ಕಾಂಗ್ರೆಸ್ ಆಗಲೀ ಇತರ ಪಕ್ಷಗಳಿಗೆ ಮೇಲ್ಪಂಕ್ತಿ ಹಾಕಿ ಕೊಡುವ ನಡೆಯನ್ನು ತೋರಿಸಬೇಕಿದೆ. ಸಂಕಷ್ಟ ಸಮಯದಲ್ಲಿ ರಾಜಕೀಯ ಭಿನ್ನಾಭಿಪ್ರಾ ಯಕ್ಕೆ ವಿರಾಮ ನೀಡಬೇಕು. ಅದನ್ನು ಬಿಟ್ಟು, ‘ದೇಶದ ಹಿತಕ್ಕೆ ಧಕ್ಕೆಯಾದರೂ ನಮ್ಮ ರಾಜಕೀಯ ಹಿತಾಸಕ್ತಿ ಮುಖ್ಯ’ ಎಂಬ ನಿಲುವನ್ನು ಯಾರಾದರೂ ತಳೆದರೆ, ಅದು 140 ಕೋಟಿ ಜನರ ಸುರಕ್ಷತೆ ಯೊಂದಿಗೆ ಚೆಲ್ಲಾಟವಾಡಿದಂತೆ ಎಂಬುದನ್ನು ಮರೆಯಬಾರದು.
(ಲೇಖಕರು ಬಿಜೆಪಿಯ ವಕ್ತಾರರು)