Roopa Gururaj Column: ಹತ್ತು ಹೆಜ್ಜೆಗಳ ಬೆಲೆ ಅರಿತ ಪುಟ್ಟ ಹುಡುಗನ ಸಾಧನೆ
2003ರಲ್ಲಿ ಕಾನೂನು ಹೋರಾಟ ನಡೆಸಿ ಜಿಮ್ಮಿಯನ್ನು ಕೆನಡಾಕ್ಕೆ ಕರೆ ತಂದು ತಮ್ಮ ಮನೆಯ ಮಗನನ್ನಾಗಿ ಮಾಡಿಕೊಂಡರು. ಅಂದು ಪೆನ್-ಪಾಲ್‌ಗಳಾಗಿದ್ದ ಇಬ್ಬರು ಇಂದು ಸಹೋದರ ರಾಗಿ ಬದುಕುತ್ತಿದ್ದಾರೆ. ಇಂದು ‘ರಯಾನ್ ವೆಲ್ ಫೌಂಡೇಷನ್’ 17 ದೇಶಗಳಲ್ಲಿ 1700ಕ್ಕೂ ಹೆಚ್ಚು ನೀರಿನ ಯೋಜನೆಗಳನ್ನು ಪೂರೈಸಿದೆ. 15 ಲಕ್ಷಕ್ಕೂ ಹೆಚ್ಚು ಜನರಿಗೆ ಇಂದು ಶುದ್ಧ ಕುಡಿಯುವ ನೀರು ಸಿಗುತ್ತಿದೆ.
-
ಒಂದೊಳ್ಳೆ ಮಾತು
ಕೆನಡಾದ ಕೆಂಪ್ಟ್‌ವಿಲ್ಲೆ ಎಂಬ ಪುಟ್ಟ ಹಳ್ಳಿಯ ಆ ಶಾಲೆ ಅಂದು ಎಂದಿನಂತಿತ್ತು. ಆದರೆ ಆರು ವರ್ಷದ ರಯಾನ್ ಹ್ರೆಲ್ಜಾಕ್‌ಗೆ ಮಾತ್ರ ಆ ದಿನ ಬದುಕಿನ ದಿಕ್ಕನ್ನೇ ಬದಲಿಸಿತು. ಅವನ ಶಿಕ್ಷಕಿ ಮಿಸೆಸ್ ಪ್ರೆಸ್ಟ್ ಅಂದು ಆಫ್ರಿಕಾದ ಮಕ್ಕಳ ಕಷ್ಟಗಳ ಬಗ್ಗೆ ಪಾಠ ಮಾಡು ತ್ತಿದ್ದರು. ‘ಅಲ್ಲಿನ ಮಕ್ಕಳು ಶುದ್ಧ ನೀರಿಲ್ಲದೆ ಸಾಯುತ್ತಿದ್ದಾರೆ, ಒಂದು ಬಕೆಟ್ ನೀರಿಗಾಗಿ ಮೈಲಿಗಟ್ಟಲೆ ನಡೆಯಬೇಕು’ ಎಂಬ ಶಿಕ್ಷಕಿಯ ಮಾತು ರಯಾನ್‌ನ ಪುಟ್ಟ ಹೃದಯವನ್ನು ಚುಚ್ಚಿತು. ಅವನು ತನ್ನ ತರಗತಿಯ ಪಕ್ಕದ ಇದ್ದ ಹೊಳೆಯುವ ವಾಟರ್ ಫೌಂಟೇನ್ ಕಡೆ ನೋಡಿದ. ಕೇವಲ ಹತ್ತು ಹೆಜ್ಜೆಗಳು! ತನಗೆ ಬೇಕಾದಾಗ ಕೈಗೆಟುಕುವ ಈ ನೀರು, ಸಮಾನ ವಯಸ್ಸಿನ ಆಫ್ರಿಕಾದ ಮಕ್ಕಳಿಗೆ ಏಕಿಲ್ಲ ಎಂಬ ಪ್ರಶ್ನೆ ಅವನನ್ನು ಕಾಡತೊಡಗಿತು.
ಮನೆಗೆ ಬಂದ ಕೂಡಲೇ ಅವನು ಅಮ್ಮನ ಬಳಿ, “ಅಮ್ಮ, ನನಗೆ ಆಫ್ರಿಕಾದಲ್ಲಿ ಬಾವಿ ತೋಡಲು 70 ಡಾಲರ್ ಹಣ ಬೇಕು" ಎಂದು ಹಠ ಹಿಡಿದ. ಮಗನ ಉತ್ಸಾಹ ಕಂಡು ತಾಯಿ ಸುಸಾನ್ ನಿರಾಕರಿಸಲಿಲ್ಲ, ಬದಲಾಗಿ ಒಂದು ಸವಾಲು ಹಾಕಿದರು: “ನೀನೇ ಕೆಲಸ ಮಾಡಿ ಆ ಹಣ ಗಳಿಸು". ರಯಾನ್ ಹಿಂದೆ ಸರಿಯಲಿಲ್ಲ.
ಕಿಟಕಿ ತೊಳೆಯುವುದು, ಕಸ ಗುಡಿಸುವುದು, ನೆರೆಹೊರೆಯವರ ಗಾರ್ಡನ್ ಸ್ವಚ್ಛಗೊಳಿಸು ವುದು ಹೀಗೆ ನಾಲ್ಕು ತಿಂಗಳು ಸತತವಾಗಿ ಶ್ರಮಿಸಿದ. ಆಟವಾಡುವ ವಯಸ್ಸಿನಲ್ಲಿ ಅವನು ಆರಿಸಿಕೊಂಡಿದ್ದು ‘ಸೇವೆ’. ಆದರೆ ವಾಸ್ತವ ಬೇರೆಯೇ ಇತ್ತು. ಅವನು ಸಂಗ್ರಹಿಸಿದ 70 ಡಾಲರ್ ಹಿಡಿದು ‘ವಾಟರ್ ಕ್ಯಾನ್’ ಸಂಸ್ಥೆಗೆ ಹೋದಾಗ ತಿಳಿದ ವಿಷಯವೆಂದರೆ, ಒಂದು ಬಾವಿ ತೋಡಲು ಬೇಕಾಗಿದ್ದುದು 2000 ಡಾಲರ್!
ಇದನ್ನೂ ಓದಿ: Roopa Gururaj Column: ಅವಶೇಷಗಳ ನಡುವೆ ಅರಳಿದ ಸಹೋದರತ್ವ
ಯಾವುದೇ ದೊಡ್ಡವರಿಗಾದರೂ ಇದು ಅಸಾಧ್ಯವೆನಿಸುತ್ತಿತ್ತು. ಆದರೆ ರಯಾನ್ ಕ್ಷಣಕಾಲ ಮೌನವಾಗಿದ್ದು ನಂತರ ಹೇಳಿದ- ‘ಹಾಗಾದರೆ ನಾನು ಇನ್ನೂ ಹೆಚ್ಚಿನ ಕೆಲಸ ಮಾಡು ತ್ತೇನೆ’. ಅವನ ಈ ದೃಢ ಸಂಕಲ್ಪದ ಕಥೆ ಪತ್ರಿಕೆಗಳಲ್ಲಿ ಪ್ರಕಟವಾಗಿ, ಜಗತ್ತಿ ನಾದ್ಯಂತದ ಜನರು ಹಣ ಕಳುಹಿಸಲು ಆರಂಭಿಸಿದರು. 1999ರಲ್ಲಿ, ರಯಾನ್ ತನ್ನ ಏಳನೇ ವಯಸ್ಸಿ ನಲ್ಲಿ ಉಗಾಂಡಾದ ಆಂಗೊಲೊ ಶಾಲೆಯಲ್ಲಿ ತನ್ನ ಮೊದಲ ಬಾವಿಯನ್ನು ನಿರ್ಮಿಸಿದ.
ಅಲ್ಲಿ ಅವನಿಗೆ ಜಿಮ್ಮಿ ಅಕಾನಾ ಎಂಬ ‘ಪೆನ್ ಪಾಲ್’ (ಲೇಖನಿ ಗೆಳೆಯ) ಸಿಕ್ಕಿದ. ಜಿಮ್ಮಿಯ ಬದುಕು ದುಸ್ತರವಾಗಿತ್ತು. ಬಂಡಾಯಗಾರರಿಂದ ಅಪಹರಣಕ್ಕೊಳಗಾಗಿ, ನರಕಯಾತನೆ ಅನುಭವಿಸಿ ತಪ್ಪಿಸಿಕೊಂಡು ಬಂದಿದ್ದ ಜಿಮ್ಮಿಯನ್ನು ರಯಾನ್ ಮತ್ತು ಅವನ ಕುಟುಂಬ ಕೈಬಿಡಲಿಲ್ಲ.
2003ರಲ್ಲಿ ಕಾನೂನು ಹೋರಾಟ ನಡೆಸಿ ಜಿಮ್ಮಿಯನ್ನು ಕೆನಡಾಕ್ಕೆ ಕರೆ ತಂದು ತಮ್ಮ ಮನೆಯ ಮಗನನ್ನಾಗಿ ಮಾಡಿಕೊಂಡರು. ಅಂದು ಪೆನ್-ಪಾಲ್‌ಗಳಾಗಿದ್ದ ಇಬ್ಬರು ಇಂದು ಸಹೋದರರಾಗಿ ಬದುಕುತ್ತಿದ್ದಾರೆ. ಇಂದು ‘ರಯಾನ್ ವೆಲ್ ಫೌಂಡೇಷನ್’ 17 ದೇಶಗಳಲ್ಲಿ 1700ಕ್ಕೂ ಹೆಚ್ಚು ನೀರಿನ ಯೋಜನೆಗಳನ್ನು ಪೂರೈಸಿದೆ. 15 ಲಕ್ಷಕ್ಕೂ ಹೆಚ್ಚು ಜನರಿಗೆ ಇಂದು ಶುದ್ಧ ಕುಡಿಯುವ ನೀರು ಸಿಗುತ್ತಿದೆ.
ಬದಲಾವಣೆ ತರಲು ವಯಸ್ಸು ಅಥವಾ ಅಧಿಕಾರ ಮುಖ್ಯವಲ್ಲ, ‘ಮಾಡಲೇಬೇಕು’ ಎಂಬ ಛಲವಿದ್ದರೆ ಸಾಕು. ರಯಾನ್ ಹೇಳುವಂತೆ, ‘ಜಗತ್ತು ಎಂಬ ಈ ಒಗಟಿಗೆ ನನ್ನ ಉತ್ತರ ನೀರು. ನಿಮ್ಮ ಉತ್ತರ ಯಾವುದು ಎಂದು ನೀವು ಕಂಡುಕೊಳ್ಳಿ’. ಒಬ್ಬ ಬಾಲಕನ ಹತ್ತು ಹೆಜ್ಜೆಗಳು ಇಂದು ಲಕ್ಷಾಂತರ ಜನರ ಬದುಕಿನಲ್ಲಿ ಭರವಸೆಯ ನಡಿಗೆಯಾಗಿ ಮಾರ್ಪಟ್ಟಿವೆ.
ಇಂಥ ಕಥೆಗಳನ್ನು ನಮ್ಮ ಮಕ್ಕಳಿಗೆ ಹೇಳಿದರೆ, ಎಲ್ಲಾ ಅನುಕೂಲಗಳು ಇರುವ ಸಾಮಾನ್ಯ ಬದುಕಿನ ಮಹತ್ವವನ್ನು ಅವರಿಗೆ ತಿಳಿಸಿ ಕೊಟ್ಟಂತಾಗುತ್ತದೆ. ಎಳೆ ವಯಸಿನಲ್ಲಿ ಮಕ್ಕಳಿಗೆ ಪ್ರಪಂಚದ ಆಗುಹೋಗುಗಳ ಬಗ್ಗೆ ತಿಳಿಸಿದಾಗ ತಾವು ಎಂಥ ಸೌಕರ್ಯದಲ್ಲಿ ಬದುಕು ತ್ತಿದ್ದೇವೆ ಹಾಗೂ ತಮಗಿಂತ ಕೆಳಸ್ತರದಲ್ಲಿ ಇರುವವರಿಗೆ ಹೇಗೆ ಸಹಾಯ ಮಾಡಬಹುದು ಎನ್ನುವ ಸಹಾನುಭೂತಿ ಬೆಳೆಯುತ್ತದೆ. ಇದರಿಂದ ಅವರು ಇರುವ ಸೌಲಭ್ಯಗಳನ್ನು ಪೋಲು ಮಾಡದೆ, ಜವಾಬ್ದಾರಿಯುತ ನಾಗರಿಕರಾಗಿ ಬೆಳೆಯಲು ನಾವು ಪ್ರೇರೇಪಿಸಿ ದಂತಾಗುತ್ತದೆ.