ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Yagati Raghu Naadig Column: ಬೌಬೌ ಬಾಲವೆಂಬುದು ಯಾವತ್ತಿದ್ರೂ ಡೊಂಕೇ!

ಪಾಕಿಸ್ತಾನದ ಮಿಲಿಟರಿ ಮುಖ್ಯಸ್ಥ ಜನರಲ್ ಅಸೀಮ್ ಮುನೀರ್ ಮಹಾಶಯರು, ಅಮೆರಿಕದ ಅಧ್ಯಕ್ಷರ ಜತೆಯಲ್ಲಿ ಮೇಜಿನ ಮುಂದೆ ಕೂತು ‘ಭೋಜನ’ ಮಾಡಿದ್ದು ಕೆಲ ದಿನಗಳ ಹಿಂದೆ ಸುದ್ದಿಯಾಗಿತ್ತು. ಆಗ ಕೆಲವಷ್ಟು ರಾಜಕೀಯ ಪಂಡಿತರು, “ಆ ಟ್ರಂಪಣ್ಣನೋ ಮಹಾನ್ ತಲೆ ತಿರುಕ, ಈ ಮುನೀರಣ್ಣನೋ ಮಹಾನ್ ತಲೆಹರಟೆ; ಎರಡೂ ಜತೆಗೂಡಿದರೆ ಏನಾದರೊಂದು ಯಡವಟ್ಟು ಗ್ಯಾರಂಟಿ ಕಣ್ರೀ" ಎಂಬ ಧಾಟಿಯಲ್ಲಿ ಮಾತಾಡುತ್ತಾ ಸಿಗರೇಟಿನ ಬೂದಿಯನ್ನು ಕೊಡವಿದ್ದರು.

ಬೌಬೌ ಬಾಲವೆಂಬುದು ಯಾವತ್ತಿದ್ರೂ ಡೊಂಕೇ!

ನಾರದ ಸಂಚಾರ

ಕಲಹ ಪ್ರಿಯ

ಪಾಕಿಸ್ತಾನದ ಮಿಲಿಟರಿ ಮುಖ್ಯಸ್ಥ ಜನರಲ್ ಅಸೀಮ್ ಮುನೀರ್ ಮಹಾಶಯರು, ಅಮೆರಿಕದ ಅಧ್ಯಕ್ಷರ ಜತೆಯಲ್ಲಿ ಮೇಜಿನ ಮುಂದೆ ಕೂತು ‘ಭೋಜನ’ ಮಾಡಿದ್ದು ಕೆಲ ದಿನಗಳ ಹಿಂದೆ ಸುದ್ದಿಯಾಗಿತ್ತು. ಆಗ ಕೆಲವಷ್ಟು ರಾಜಕೀಯ ಪಂಡಿತರು, “ಆ ಟ್ರಂಪಣ್ಣನೋ ಮಹಾನ್ ತಲೆ ತಿರುಕ, ಈ ಮುನೀರಣ್ಣನೋ ಮಹಾನ್ ತಲೆಹರಟೆ; ಎರಡೂ ಜತೆಗೂಡಿದರೆ ಏನಾದರೊಂದು ಯಡವಟ್ಟು ಗ್ಯಾರಂಟಿ ಕಣ್ರೀ" ಎಂಬ ಧಾಟಿಯಲ್ಲಿ ಮಾತಾಡುತ್ತಾ ಸಿಗರೇಟಿನ ಬೂದಿಯನ್ನು ಕೊಡವಿದ್ದರು. ಆ ಮಾತೀಗ ನಿಜವಾಗಿದೆ ನೋಡಿ. ಟ್ರಂಪಣ್ಣ ತಮ್ಮ ಬೆನ್ನಿಗಿದ್ದಾರೆ ಎಂಬ ಭಂಡ ಧೈರ್ಯದಲ್ಲಿ ಮುನೀರಣ್ಣ ಮತ್ತೆ ಎದ್ದು ನಿಂತು ‘ಬೌ ಬೌ’ ಅಂದಿದ್ದಾರೆ!

‘ಆಪರೇಷನ್ ಸಿಂದೂರ’ ಕಾರ್ಯಾಚರಣೆಯ ವೇಳೆ ಬುಡಕ್ಕೆ ಬರೆ ಹಾಕಿಸಿಕೊಂಡು ‘ಅಬ್ಬಾಜಾನ್, ಅಬ್ಬು ಆಯ್ತೂ...’ ಎಂಬ ವರಸೆಯಲ್ಲಿ ಗೋಳಿಟ್ಟು ‘ಕದನ ವಿರಾಮ’ದ ಘೋಷಣೆಯಾಗುವಂತೆ ಪರೋಕ್ಷವಾಗಿ ನೋಡಿಕೊಂಡಿದ್ದರು ಈ ‘ಮುನೀರ್ ಮಿಯಾ’. ಆದರೆ ಯಾವಾಗ, ಪಾಕಿಸ್ತಾನ ದೊಂದಿಗಿನ ಪಾಲುದಾರಿಕೆಯಲ್ಲಿ ಅಲ್ಲಿನ ಬೃಹತ್ ತೈಲನಿಕ್ಷೇಪಗಳನ್ನು ಅಮೆರಿಕ ಅಭಿವೃದ್ಧಿಪಡಿಸ ಲಿದೆ ಎಂಬ ಆಣಿಮುತ್ತನ್ನು ಟ್ರಂಪಣ್ಣ ಉದುರಿಸಿ ಬಿಟ್ಟರೋ ಹಾಗೂ ಭಾರತದಿಂದ ಅಮೆರಿಕಕ್ಕೆ ಬಂದು ಬೀಳುವ ಸರಕು-ಸಾಮಗ್ರಿಗಳ ಮೇಲಿನ ಸುಂಕವನ್ನು ಶೇ.50ಕ್ಕೆ ಏರಿಸಿಬಿಟ್ಟರೋ, ಆಗ ‘ಡೊನಾಲ್ಡ್ ಟ್ರಂಪ್ ಇನ್ನು ಮುಂದೆ ನಮ್ಮ ಸೋದರಮಾವನೇ’ ಎಂಬ ಧಾಟಿಯಲ್ಲಿ ಮುನೀರ್ ಬೀಗತೊಡಗಿದರು ಎನಿಸುತ್ತೆ.

ಇದನ್ನೂ ಓದಿ: Yagati Raghu Naadig Column: ಕಾವಿಯನ್ನು ಸಡಿಲಿಸಿ ಸ್ವಾಮೀಜಿ ಅಪಚಾರ ಎಸಗಿದರೇ ?

ಹೀಗಾಗಿ, ‘ಭಾರತದ ವಿಷಯದಲ್ಲಿ ತಾವು ಯಾವ ಥರದಲ್ಲಿ ಬಾಲ ಅಲ್ಲಾಡಿಸಿದರೂ, ಟ್ರಂಪಣ್ಣ ನಮಗೆ ಬಿಸ್ಕೆಟ್ ಹಾಕ್ತಾರೆ’ ಎಂಬ ಭಂಡಧೈರ್ಯದಲ್ಲಿ ‘ಮುನೀರ್ ಮಿಯಾ’ ಮತ್ತೆ ಬಾಲ ಬಿಚ್ಚಿದ್ದಾರೆ. ಅಮೆರಿಕದ ನೆಲದಲ್ಲಿ ನಿಂತು ಈತ ಭಾರತ-ವಿರೋಧಿ ಹೇಳಿಕೆ ನೀಡಿರುವುದರ ಜತೆಜತೆಗೆ, “ನಾವು ಅಣ್ವಸ್ತ್ರಗಳನ್ನು ಹೊಂದಿದ್ದೇವೆ. ಒಂದು ವೇಳೆ ಯುದ್ಧಗಳು ನಡೆದು ನಾವು ಸೋತುಹೋಗುತ್ತೇವೆ ಎಂದಾದರೆ, ಆಗ ಅರ್ಧ ಪ್ರಪಂಚವನ್ನೇ ಮುಳುಗಿಸಿ ಹೋಗುತ್ತೇವೆ.

ಸಿಂಧೂ ನದಿಗೆ ಭಾರತವೇನಾದರೂ ಅಣೆಕಟ್ಟನ್ನು ಕಟ್ಟಿದರೆ, ನಮ್ಮ ಹತ್ತೇ ಹತ್ತು ಕ್ಷಿಪಣಿಗಳಿಂದ ಅದನ್ನು ಚಿಂದಿ ಉಡಾಯಿಸುತ್ತೇವೆ" ಎಂದು ಉತ್ತರಕುಮಾರನ ಪೌರುಷದ ಮಾತನ್ನು ಆಡಿದ್ದಾರೆ! ಇಷ್ಟು ‘ಗಾಂಚಲಿ’ ಇರುವ ಮಹಾಶಯರು, ‘ಆಪರೇಷನ್ ಸಿಂದೂರ’ ಕಾರ್ಯಾಚರಣೆಯ ವೇಳೆ ಭಾರತವು ಪಾಕಿಸ್ತಾನದ ‘ಚಟ್ನಿ ನಿಕಾಲ್’ ಮಾಡುತ್ತಿದ್ದಾಗ ತಮ್ಮ ಸಂಗ್ರಹದಲ್ಲಿದ್ದ ಈ ಅಣ್ವಸ್ತ್ರ ಗಳೆಂಬ ‘ಸುರ್‌ಸುರ್ ಬತ್ತಿಗಳನ್ನು’ ಯಾಕೆ ಹೊರಕ್ಕೆ ತೆಗೆಯಲಿಲ್ಲ? ಆಗ ದಮ್ಮಯ್ಯ ಗುಡ್ಡೆ ಹಾಕಿ ‘ಕದನ ವಿರಾಮ’ ಜಾರಿಗೆ ಬರುವಂತೆ ನೋಡಿಕೊಂಡಿದ್ದೇಕೆ? ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ.

“ಯುದ್ಧ ನಡೆದು ನಾವು ಸೋಲುತ್ತೇವೆ ಎಂದಾದರೆ, ಅರ್ಧ ಪ್ರಪಂಚವನ್ನೇ ಮುಳುಗಿಸಿ ಹೋಗು ತ್ತೇವೆ" ಎಂಬ ಮುನೀರ್ ಮಾತೇ, ಪಾಕಿಸ್ತಾನದ್ದು ಯಾವತ್ತಿಗೂ ವಿಧ್ವಂಸಕ ಚಿತ್ತಸ್ಥಿತಿ ಎಂಬುದನ್ನು ಮನವರಿಕೆ ಮಾಡಿಕೊಡುತ್ತದೆ. ಇಂಥ ದುರಾತ್ಮರನ್ನು ಪಕ್ಕದಲ್ಲಿಟ್ಟುಕೊಂಡು ಶ್ವೇತಭವನದಲ್ಲಿ ದರ್ಬಾರು ಮಾಡುತ್ತಿರುವ ಡೊನಾಲ್ಡ್ ಟ್ರಂಪ್ ಮಹಾಶಯರು, ತಾವು ಅಲಂಕರಿಸಿರುವ ಅಧ್ಯಕ್ಷ ಸಿಂಹಾಸನಕ್ಕೆ ಸ್ವತಃ ಡಾಂಬರ್ ಬಳಿಯುತ್ತಿದ್ದಾರೆ ಎಂಬುದು ಯಾರೇ ಆದರೂ ಒಪ್ಪುವಂಥ ಮಾತು. ಮಾಡಿಕೊಳ್ಳಲಿ ಬಿಡಿ... ‘ವಿನಾಶಕಾಲೇ ವಿಪರೀತ ಬುದ್ಧಿಃ’ ಎಂಬ ಜಾಣನುಡಿಯೇ ಇದೆಯಲ್ಲಾ..!