Raghava Sharma Nidle Column: ಚರ್ಚೆ ಹುಟ್ಟು ಹಾಕಿದ ಕೊಲಿಜಿಯಂ ತೀರ್ಮಾನ
ದೇಶದಲ್ಲಿ ನ್ಯಾ. ಪಾಂಚೋಲಿ ಅವರಿಗಿಂತ ಹೆಚ್ಚು ಸೇವಾ ಹಿರಿತನ ಹೊಂದಿದ ಅನೇಕ ನ್ಯಾಯ ಮೂರ್ತಿ ಗಳಿರುವಾಗ, ನ್ಯಾ.ಪಾಂಚೋಲಿಯವರನ್ನೇ ಆಯ್ಕೆ ಮಾಡುವುದಕ್ಕೆ ನನ್ನ ಸಹಮತಿಯಿಲ್ಲ ಎಂದಿದ್ದ ನ್ಯಾ.ಬಿ.ವಿ. ನಾಗರತ್ನ, ತಮ್ಮ ವಿರೋಧದ ಅಭಿಪ್ರಾಯಗಳನ್ನು ಸುಪ್ರೀಂಕೋರ್ಟ್ ವೆಬ್ ಸೈಟಿನಲ್ಲೂ ಪ್ರಕಟಿಸಬೇಕು ಎಂದು ಈಜಿooಛ್ಞಿಠಿ ಘೆಟಠಿಛಿ (ಅಸಮ್ಮತಿಯ ಟಿಪ್ಪಣಿ)ನಲ್ಲಿ ದಾಖಲಿಸಿದ್ದಾರೆ.

-

ಮೈ ಲಾರ್ಡ್
ರಾಘವ ಶರ್ಮಾ ನಿಡ್ಲೆ
50ಕ್ಕೂ ಹೆಚ್ಚು ನ್ಯಾಯಮೂರ್ತಿಗಳ ಸೇವಾ ಹಿರಿತನವನ್ನು ಕಡೆಗಣಿಸಿ ಗುಜರಾತ್ ಮೂಲದ ನ್ಯಾಯಮೂರ್ತಿ ವಿಪುಲ್ ಪಾಂಚೋಲಿ ಅವರಿಗೆ ಸುಪ್ರೀಂಕೋರ್ಟ್‌ಗೆ ಬಡ್ತಿ ನೀಡುವ ಪ್ರಸ್ತಾಪವನ್ನು ಕೊಲಿಜಿಯಂ ಸದಸ್ಯೆ, ಕರ್ನಾಟಕ ಮೂಲದ ನ್ಯಾಯಮೂರ್ತಿ ಬಿ.ವಿ.ನಾಗ ರತ್ನ ವಿರೋಧಿಸಿದ್ದರು. ಅವರ ವಿರೋಧವನ್ನು ಲೆಕ್ಕಿಸದೆ ಪಾಂಚೋಲಿ ಅವರನ್ನು ನೇಮಿಸಲಾಗಿದೆ. ಭಾರತೀಯ ನ್ಯಾಯಾಂಗ ವ್ಯವಸ್ಥೆ ಪಾರದರ್ಶಕವಾಗಿಲ್ಲ, ನ್ಯಾಯಪೀಠ ಗಳಿಗೆ ಪ್ರಕರಣಗಳ ಹಂಚಿಕೆ ಸಮರ್ಥ ರೀತಿಯಲ್ಲಿ ನಡೆಯುವುದಿಲ್ಲ, ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಗಳ ನೇಮಕವೂ ಕೆಲವೊಮ್ಮೆ ಸಂಶಯಗಳನ್ನು ಮೂಡಿಸುತ್ತವೆ ಎಂಬ ಚರ್ಚೆಗಳೀಗ ಮತ್ತೊಮ್ಮೆ ಮುನ್ನೆಲೆಗೆ ಬಂದಿವೆ.
ನ್ಯಾಯಮೂರ್ತಿಗಳ ನೇಮಕಕ್ಕೆ ಶಿಫಾರಸು ಮಾಡುವ ಸುಪ್ರೀಂಕೋರ್ಟ್ ಕೊಲಿಜಿಯಂ ಕಾರ್ಯ ವೈಖರಿಗಳ ಬಗ್ಗೆ ಮತ್ತೊಮ್ಮೆ ಟೀಕೆಗಳು ಕೇಳಿ ಬರುತ್ತಿವೆ. ಇದಕ್ಕೆ ಕಾರಣ- ಪಟನಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದ ವಿಪುಲ್ ಮನುಭಾಯ್ ಪಾಂಚೋಲಿ ಅವರನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕ ಮಾಡುವ ಸಿಜೆಐ ಬಿ.ಆರ್.ಗವಾಯಿ ನೇತೃತ್ವದ ಸುಪ್ರೀಂ ಕೋರ್ಟ್ ಕೊಲಿಜಿಯಂ ನಿರ್ಧಾರ. ಆ.27ರಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಗಳಾಗಿ ಬಾಂಬೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಆಗಿದ್ದ ನ್ಯಾಯಮೂರ್ತಿ ಅಲೋಕ್ ಆರಾಧೆ ಜತೆಗೆ ನ್ಯಾ. ವಿಪುಲ್ ಪಾಂಚೋಲಿ ಅವರೂ ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿ ಕಾರ್ಯಾರಂಭ ಮಾಡಿದ್ದಾರೆ.
ಆದರೆ, ನ್ಯಾ.ವಿಪುಲ್ ಪಾಂಚೋಲಿ ನೇಮಕ ಕಾನೂನು ವಲಯದಲ್ಲಿ ವ್ಯಾಪಕ ಚರ್ಚೆಗೀಡಾಗಿದ್ದು, ಕೊಲಿಜಿಯಂ ನಡೆ ಬಗ್ಗೆ ಅಸಮಾಧಾನದ ಧ್ವನಿಗಳೆದ್ದಿವೆ. ನ್ಯಾ.ವಿಪುಲ್ ಪಾಂಚೋಲಿ ನೇಮಕ ಮಾಡಿ ಎಂದು ಕೊಲಿಜಿಯಂ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿತ್ತಾದರೂ, ಐವರು ಸದಸ್ಯರ ಕೊಲಿಜಿಯಂ ಸದಸ್ಯೆಯಾಗಿದ್ದ ನ್ಯಾ.ಬಿ.ವಿ.ನಾಗರತ್ನ ಅವರು ಮಾತ್ರ ಅಸಮ್ಮತಿ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: Roopa Gururaj Column: ಲಲಿತಾ ಸಹಸ್ರನಾಮದ ಮಹತ್ವ
ದೇಶದಲ್ಲಿ ನ್ಯಾ. ಪಾಂಚೋಲಿ ಅವರಿಗಿಂತ ಹೆಚ್ಚು ಸೇವಾ ಹಿರಿತನ ಹೊಂದಿದ ಅನೇಕ ನ್ಯಾಯ ಮೂರ್ತಿಗಳಿರುವಾಗ, ನ್ಯಾ.ಪಾಂಚೋಲಿಯವರನ್ನೇ ಆಯ್ಕೆ ಮಾಡುವುದಕ್ಕೆ ನನ್ನ ಸಹಮತಿಯಿಲ್ಲ ಎಂದಿದ್ದ ನ್ಯಾ.ಬಿ.ವಿ. ನಾಗರತ್ನ, ತಮ್ಮ ವಿರೋಧದ ಅಭಿಪ್ರಾಯಗಳನ್ನು ಸುಪ್ರೀಂಕೋರ್ಟ್ ವೆಬ್ ಸೈಟಿನಲ್ಲೂ ಪ್ರಕಟಿಸಬೇಕು ಎಂದು ಈಜಿooಛ್ಞಿಠಿ ಘೆಟಠಿಛಿ (ಅಸಮ್ಮತಿಯ ಟಿಪ್ಪಣಿ)ನಲ್ಲಿ ದಾಖಲಿಸಿದ್ದಾರೆ.
ನ್ಯಾ.ಪಾಂಚೋಲಿ ನೇಮಕಕ್ಕೆ ನ್ಯಾ. ನಾಗರತ್ನ ಒಪ್ಪಿಗೆ ಏಕಿಲ್ಲ ಎಂಬ ಬಗೆಗಿನ ಮಾಹಿತಿ ಅಧಿಕೃತ ವಾಗಿ ಹೊರಬರದಿದ್ದರೂ, ಟಿಪ್ಪಣಿಯಲ್ಲಿದ್ದ ಅಂಶಗಳನ್ನು ‘ಹಿಂದೂಸ್ತಾನ್ ಟೈಮ್ಸ್’ ಪತ್ರಿಕೆ ಸವಿಸ್ತಾರವಾಗಿ ವರದಿ ಮಾಡಿದೆ. ನ್ಯಾ. ಪಾಂಚೋಲಿ ಅವರನ್ನು ನೇಮಕ ಮಾಡುವುದು ನ್ಯಾಯ ದಾನದ ಮೇಲೆ ’ಪ್ರತಿಕೂಲ’ ಪರಿಣಾಮ ಬೀರಲಿದೆ.
ಕೊಲಿಜಿಯಂ ವ್ಯವಸ್ಥೆಯ ವಿಶ್ವಾಸಾರ್ಹತೆಗೆ ಧಕ್ಕೆ ತರಲಿದೆ ಎನ್ನುವುದು ನ್ಯಾ. ನಾಗರತ್ನ ಅವರ ಆತಂಕ. 2023ರಲ್ಲಿ ನ್ಯಾ. ಪಾಂಚೋಲಿ ಅವರನ್ನು ಗುಜರಾತ್ ಹೈಕೋರ್ಟಿನಿಂದ ಪಟನಾ ಹೈಕೋ ರ್ಟಿಗೆ ವರ್ಗಾವಣೆ ಮಾಡಿದ್ದು ಏಕೆ ಎಂಬುದನ್ನು ಗಂಭೀರವಾಗಿ ಪರಿಗಣಿಸಬೇಕು. ಏಕೆಂದರೆ ಇದು ಸಾಮಾನ್ಯ ವರ್ಗಾವಣೆಯಾಗಿರಲಿಲ್ಲ ಎಂದಿರುವ ನ್ಯಾ. ನಾಗರತ್ನ, ರಾಷ್ಟ್ರವ್ಯಾಪಿ ಇರುವ ಹೈಕೋರ್ಟ್ ನ್ಯಾಯಮೂರ್ತಿಗಳಲ್ಲಿ ನ್ಯಾ.ಪಾಂಚೋಲಿ 57ನೇ ಸ್ಥಾನದಲ್ಲಿದ್ದಾರೆ.
ಅವರಿಗಿಂತ ಹೆಚ್ಚು ಸೇವಾ ಹಿರಿತನ ಮತ್ತು ಅರ್ಹ ನ್ಯಾಯಾಧೀಶರು ಬೇರೆ ಬೇರೆ ರಾಜ್ಯ ಗಳಲ್ಲಿರುವು ದನ್ನು ಆದ್ಯತೆಗೆ ತೆಗೆದುಕೊಳ್ಳಲಾಗಿಲ್ಲ ಎಂಬ ಬೇಸರವನ್ನು ತಮ್ಮ ಅಸಮ್ಮತಿಯ ಟಿಪ್ಪಣಿಯಲ್ಲಿ ದಾಖಲು ಮಾಡಿರುವ ಬಗ್ಗೆ ಚರ್ಚೆಯಾಗಿದೆ. ಅವರ ಅಸಮ್ಮತಿಯ ಅಭಿಪ್ರಾಯಗಳು ಈಗ ಸಾರ್ವ ಜನಿಕ ಚರ್ಚೆಗೆ ಗ್ರಾಸವಾಗಿದ್ದು, ಈ ಅಂಶಗಳು ಆಧಾರರಹಿತ ಎಂದು ಕೊಲಿಜಿಯಂ ಅಥವಾ ಕೇಂದ್ರ ಸರಕಾರ ಇದುವರೆಗೆ ಅಲ್ಲಗಳೆದಿಲ್ಲ.
ಸುಪ್ರೀಂಕೋರ್ಟಿನಲ್ಲಿ ಈಗಾಗಲೇ ಗುಜರಾತ್ ಮೂಲದ ಇಬ್ಬರು ನ್ಯಾಯ ಮೂರ್ತಿಗಳು (ನ್ಯಾ.ಜಿ.ಬಿ. ಪರ್ದಿ ವಾಲಾ ಮತ್ತು ನ್ಯಾ.ಎನ್.ವಿ. ಅಂಜಾ ರಿಯಾ) ಇರುವಾಗ ಅದೇ ರಾಜ್ಯದ ಮತ್ತೋರ್ವ ನ್ಯಾಯಮೂರ್ತಿಯನ್ನು ನೇಮಕ ಮಾಡುವ ಔಚಿತ್ಯವೇನು ಎಂದು ನ್ಯಾ.ನಾಗರತ್ನ ಅವರ ಪ್ರಶ್ನೆಗೆ ಸುಪ್ರೀಂ ಕೋರ್ಟಿನ ಮಹಾಲಕ್ಷ್ಮಿ ಪಾವನಿ, ಶೋಭಾ ಗುಪ್ತಾ, ಅಪರ್ಣಾ ಭಟ್, ಕವಿತಾ ವಾಡಿಯಾ ಎಂಬ ನಾಲ್ವರು ಹಿರಿಯ ಮಹಿಳಾ ವಕೀಲರೂ ದನಿಗೂಡಿಸಿದ್ದಾರೆ.
ಭಿನ್ನಾಭಿಪ್ರಾಯವೇ ಪ್ರಜಾಪ್ರಭುತ್ವದ ಆಧಾರಸ್ತಂಭ. ಭಿನ್ನಾಭಿಪ್ರಾಯವು ಚೈತನ್ಯಶೀಲ ಪ್ರಜಾ ಪ್ರಭುತ್ವದ ಸಂಕೇತ. ಜನಪ್ರಿಯವಲ್ಲದ ಉದ್ದೇಶಗಳನ್ನು ಕೈಗೆತ್ತಿಕೊಳ್ಳುವವರನ್ನು ಹಿಂಸಿಸುವ ಮೂಲಕ ವಿರೋಧದ ಧ್ವನಿಗಳನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ತನ್ನ ತೀರ್ಪೊಂದರಲ್ಲಿ ಹೇಳಿರುವುದನ್ನು ಉಲ್ಲೇಖಿಸಿರುವ ಈ ಮಹಿಳಾ ವಕೀಲರು, ನಿಮ್ಮ (ನ್ಯಾ.ನಾಗರತ್ನ) ಭಿನ್ನಾಭಿಪ್ರಾಯವನ್ನು ನಾವು ಬೆಂಬಲಿಸಿದ್ದೇವೆ.
ನಿಮ್ಮ ಅಸಮ್ಮತಿಯ ಟಿಪ್ಪಣಿಯನ್ನು ಕಡೆಗಣಿಸಿದ್ದಕ್ಕಾಗಿ ನೋವಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಒಂದೇ ಒಂದು ಮಹಿಳಾ ನ್ಯಾಯಮೂರ್ತಿಯನ್ನು ಸುಪ್ರೀಂಕೋ ರ್ಟಿಗೆ ನೇಮಕ ಮಾಡಿಲ್ಲವೇಕೆ ಎಂದು ಕೊಲಿಜಿಯಂನ್ನು ಪ್ರಶ್ನಿಸಿದ್ದಾರೆ. ತಪ್ಪಲ್ಲ, ಆದರೆ ಉದ್ದೇಶ ಬಹಿರಂಗವಾಗಬೇಕು: ಆಗ 30ರಂದು ಹಿರಿಯ ವಕೀಲ ವಿಕಾಸ್ ಸಿಂಗ್ ಅಧ್ಯಕ್ಷರಾಗಿರುವ ಸುಪ್ರೀಂಕೋರ್ಟ್ ಬಾರ್ ಅಸೋಸಿ ಯೇಷನ್ ಕೂಡ ಈಚಿನ ನೇಮಕಾತಿಗಳು ನಮಗೆ ಸಮಾಧಾನ ತಂದಿಲ್ಲ ಎಂದು ಸಿಜೆಐ ಬಿ.ಆರ್. ಗವಾಯಿ ಅವರಿಗೆ ಪತ್ರ ಬರೆದಿದ್ದು, ಸುಪ್ರೀಂಕೋರ್ಟ್‌ನಲ್ಲಿ ಸಮಾನ ಮಹಿಳಾ ಪ್ರಾತಿನಿಧ್ಯತೆಗೆ ಒತ್ತು ನೀಡಲಾಗಿಲ್ಲ. ನ್ಯಾಯಾಂಗದ ಮೇಲಿನ ವಿಶ್ವಾಸಾರ್ಹತೆ ಉಳಿಸಿಕೊಳ್ಳಲು ಲಿಂಗ ಸಮಾನತೆ ಅತ್ಯಗತ್ಯ ಎಂದು ಹೇಳಿದೆ. ಆದರೆ, ನ್ಯಾ.ಪಾಂಚೋಲಿ ನೇಮಕದ ಬಗ್ಗೆ ಪತ್ರದಲ್ಲಿ ಯಾವುದೇ ಉಲ್ಲೇಖ ಇಲ್ಲ.
1998ರ Third Judges case ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪಿನ ಪ್ರಕಾರ, ಕೊಲಿಜಿಯಂನ ಇಬ್ಬರು ನ್ಯಾಯಮೂರ್ತಿಗಳು ನಿರ್ದಿಷ್ಟ ವ್ಯಕ್ತಿಯ ನೇಮಕದ ವಿರುದ್ಧ ಬಲವಾದ ಆಕ್ಷೇಪಣೆಗಳನ್ನು ವ್ಯಕ್ತಪಡಿಸಿದರೆ, ಅಂತಹ ನೇಮಕವನ್ನು ಮುಂದುವರಿಸಲು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಮುಂದಾಗಬಾರದು. ಆದರೆ, ನ್ಯಾ.ಪಾಂಚೋಲಿ ವಿಚಾರದಲ್ಲಿ ಕೊಲಿ ಜಿಯಂ 4:1ರ ಆಧಾರದಲ್ಲಿ ನಿರ್ಧಾರ ಮಾಡಿರುವುದರಿಂದ ಈ ನಿರ್ಣಯಕ್ಕೆ ಕಾನೂನಾತ್ಮಕ ವಾದ ಅನುಮೋದನೆ ಇರುತ್ತದೆ.
ವಾಸ್ತವದಲ್ಲಿ, ನ್ಯಾಯಮೂರ್ತಿ/ನ್ಯಾಯಾಧೀಶರ ನೇಮಕಕ್ಕೆ ಸೇವಾ ಹಿರಿತನ ಮಾನದಂಡವೇನಲ್ಲ ಮತ್ತು ಹಿರಿಯರನ್ನು ಬಿಟ್ಟು ಕಿರಿಯರನ್ನೇಕೆ ನೇಮಕ ಮಾಡಿದ್ದೀರಿ ಎಂದು ಪ್ರಶ್ನಿಸುವುದು ಸೂಕ್ತ ವೂ ಅಲ್ಲ. ಆದರೆ, 57 ಉಳಿದ ಹಿರಿಯ ನ್ಯಾಯಾಧೀಶರನ್ನು ಬಿಟ್ಟು ನ್ಯಾ.ಪಾಂಚೋಲಿಯವರನ್ನೇ ಸುಪ್ರೀಂಕೋರ್ಟಿಗೆ ತರಬೇಕು ಎಂಬುದರ ಹಿಂದಿನ ಉದ್ದೇಶವೇನು ಎಂಬುದನ್ನು ಕೊಲಿಜಿಯಂ ಬಹಿರಂಗಪಡಿಸಬೇಕಲ್ಲವೇ? ಸಾಮಾನ್ಯವಾಗಿ ಹೊಸ ನ್ಯಾಯಮೂರ್ತಿಗಳನ್ನು ಸುಪ್ರೀಂಕೋರ್ಟಿಗೆ ನೇಮಕ ಮಾಡುವಾಗ ಇಂತಿಂಥಾ ಕಾರಣಗಳಿಗಾಗಿ ನೇಮಕ ಮಾಡುತ್ತಿದ್ದೇವೆ ಎಂಬ ಸಂಕ್ಷಿಪ್ತ ಮಾಹಿತಿಯನ್ನು ಕೋರ್ಟ್ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗುತ್ತಿತ್ತು.
ಆದರೆ, ಇತ್ತೀಚಿನ ನೇಮಕಾತಿ ಬಗ್ಗೆ ಆ ವಿವರಣೆ ಇಲ್ಲ. ನ್ಯಾಯಾಧೀಶರ ಪಟ್ಟಿಯಲ್ಲಿ 57ನೇ ಸ್ಥಾನ ದಲ್ಲಿದ್ದ ನ್ಯಾ. ಪಾಂಚೋಲಿ ಅವರನ್ನು, ಉಳಿದ 56 ಅರ್ಹ ನ್ಯಾಯಾಧೀಶರ ಹೆಸರನ್ನು ಬದಿಗೆ ಸರಿಸಿ ನೇಮಕ ಮಾಡಿದ್ದು ಏಕೆ ಎಂಬುದಕ್ಕೆ ಸಮರ್ಥ ವಿವರಣೆಯನ್ನು ನೀಡುವುದು ಕೊಲಿಜಿಯಂ ಕರ್ತವ್ಯವಲ್ಲವೇ? ಅಥವಾ ‘ಈ 56 ನ್ಯಾಯಾಧೀಶರು ಕರ್ತವ್ಯಲೋಪ ಎಸಗಿದ್ದಾರೆ.
ಹಾಗಾಗಿ ಸುಪ್ರೀಂಕೋರ್ಟ್‌ಗೆ ಬಡ್ತಿ ಸಿಕ್ಕಿಲ್ಲ’ ಎಂದು ಭಾವಿಸಬೇಕೆ? ಇಲ್ಲಿ ಕೊಲಿಜಿಯಂ ವಿಶ್ವಾಸಾ ರ್ಹತೆಯನ್ನು ಯಾರೂ ಪ್ರಶ್ನಿಸುತ್ತಿಲ್ಲ. ಆದರೆ, ಕೊಲಿಜಿಯಂ ಕೈಗೊಂಡ ತೀರ್ಮಾನಗಳಿಗೆ ಸೂಕ್ತ ಸಮರ್ಥನೆ ಬೇಕು ಎಂದಷ್ಟೇ ಕೇಳಲಾಗುತ್ತಿದೆ. ಯಾವಾಗ ನೇಮಕಾತಿಗಳು ಊಹಾಪೋಹ, ಅನುಮಾನಗಳಿಗೆ ಎಡೆ ಮಾಡಿಕೊಡುತ್ತವೋ ಆಗ ದೇಶದ ಸರ್ವೋಚ್ಛ ನ್ಯಾಯವ್ಯವಸ್ಥೆ ತನ್ನ ನಡಾವಳಿಗಳಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವುದು ಮುಖ್ಯವಾಗುತ್ತದೆ.
ಇಲ್ಲದಿದ್ದಾಗ, ಸಹಜವಾಗಿಯೇ ಇಂತಹಾ ಬೆಳವಣಿಗೆಗಳನ್ನು ಜನರು ಅನುಮಾನದಿಂದಲೇ ನೋಡುತ್ತಾರೆ. ನ್ಯಾ. ನಾಗರತ್ನ ಅವರು ನ್ಯಾ. ಪಾಂಚೋಲಿ ಅವರನ್ನು ಗುಜರಾತ್ ಹೈಕೋರ್ಟಿ ನಿಂದ ಪಟನಾ ಹೈಕೋರ್ಟಿಗೆ ವರ್ಗಾವಣೆ ಮಾಡಿದ್ದರ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ.
ಬಹುಶಃ ಅವರ ವರ್ಗಾವಣೆ ಆಗಿದ್ದು ಏಕೆ ಎಂಬ ಮಾಹಿತಿ ಬಹಿರಂಗವಾಗುತ್ತಿದ್ದರೆ, ಬಹುಶಃ ಇಷ್ಟೊಂದು ಅನುಮಾನಗಳು ಮೂಡುತ್ತಿರಲಿಲ್ಲವೇನೋ. ಮೇಲಾಗಿ, ನನ್ನ ಅಸಮ್ಮತಿಯ ಟಿಪ್ಪಣಿ ಯನ್ನು ಸಾರ್ವಜನಿಕಗೊಳಿಸಿ (ಕೋರ್ಟ್ ವೆಬ್ ಸೈಟಿನಲ್ಲಿ ಪ್ರಕಟಿಸಿ) ಎಂಬ ನ್ಯಾ. ನಾಗರತ್ನ ಅವರ ಕೋರಿಕೆಯನ್ನು ಕೊಲಿಜಿಯಂ ಈವರೆಗೆ ಪರಿಗಣಿಸಿಲ್ಲ. ಹೀಗಾಗಿ, ಈ ವಿಚಾರ ಕಾನೂನು ವಲಯದಲ್ಲಿ ಮತ್ತಷ್ಟು ಪರ/ವಿರೋಧದ ಚರ್ಚೆಗೆ ಎಡೆ ಮಾಡಿದೆ.
2022ರಲ್ಲಿ ನ್ಯಾ.ಪಾಂಚೋಲಿ ಅವರನ್ನು ಪಟನಾ ಹೈಕೋರ್ಟಿಗೆ ವರ್ಗಾವಣೆ ಮಾಡಿ ಎಂದು ಅಂದಿನ ಸಿಜೆಐ ನೇತೃತ್ವದ ಕೊಲಿಜಿಯಂ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿತ್ತಾದರೂ, ಕೇಂದ್ರ ತನ್ನ ಅಂತಿಮ ಒಪ್ಪಿಗೆ ನೀಡಲು ಬರೋಬ್ಬರಿ 9 ತಿಂಗಳುಗಳನ್ನು ತೆಗೆದುಕೊಂಡಿತ್ತು. ಗುಜರಾತ್ ಮೂಲದ ನ್ಯಾಯಾಧೀಶರ ವರ್ಗಾವಣೆ ವಿಷಯದಲ್ಲಿ ಹಾಲಿ ಕೇಂದ್ರ ಸರಕಾರದ ಇಷ್ಟೊಂದು ವಿಳಂಬ ಮಾಡಿದ್ದೇಕೆ ಎನ್ನುವುದೂ ಅಂದು ಚರ್ಚೆಗೆ ಗ್ರಾಸವಾಗಿತ್ತು.
ನ್ಯಾ.ಪಾಂಚೋಲಿ 2014ರ ಅ.೧ರಂದು ಗುಜರಾತ್ ಹೈಕೋರ್ಟ್ ನ್ಯಾಯಾಧೀಶರನ್ನಾಗಿ ನೇಮಕ ಗೊಂಡಿದ್ದರು. 2023ರ ಜುಲೈ 14ರಂದು ಪಟನಾ ಹೈಕೋರ್ಟಿಗೆ ಅವರನ್ನು ವರ್ಗಾವಣೆ ಮಾಡಲಾ ಯಿತು. ನಂತರ, 2025ರ ಜುಲೈ 21ರಂದು ಅಲ್ಲಿನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಲಾ ಯಿತು. ಈಗ ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿರುವ ಅವರು, ಹಿರಿತನದ ಆಧಾರದಲ್ಲಿ 2031ರ ಅಕ್ಟೋಬರ್ 3ರಿಂದ 2033ರ ಮೇ 27ರ ತನಕ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಯಾಗಬಹುದು.
ಪ್ರಸ್ತುತ, ಸುಪ್ರೀಂಕೋರ್ಟಿನಲ್ಲಿ ಜಾರ್ಖಂಡ್, ಒಡಿಶಾ, ಜಮ್ಮು-ಕಾಶ್ಮೀರ, ಲಡಾಖ್, ಉತ್ತರಾಖಂಡ್, ಮೇಘಾಲಯ, ಸಿಕ್ಕಿಂ ಅಥವಾ ತ್ರಿಪುರ ರಾಜ್ಯಗಳನ್ನು ಪ್ರತಿನಿಧಿಸುವ ನ್ಯಾಯಮೂರ್ತಿಗಳಿಲ್ಲ. ಬಾಂಬೆ, ಪಂಜಾಬ್ ಮತ್ತು ಹರಿಯಾಣ, ಅಲಹಾಬಾದ್ ಹೈಕೋರ್ಟ್‌ಗಳ ತಲಾ ಮೂವರು ನ್ಯಾಯಮೂರ್ತಿಗಳು ಸುಪ್ರೀಂಕೋರ್ಟಿನಲ್ಲಿzರೆ. ನ್ಯಾ. ಅಲೋಕ್ ಆರಾಧೆ ಮತ್ತು ನ್ಯಾ.ವಿಪುಲ್ ಪಾಂಚೋಲಿ ನೇಮಕದಿಂದಾಗಿ ಮಧ್ಯಪ್ರದೇಶ ಮತ್ತು ಗುಜರಾತ್ ಹೈಕೋರ್ಟ್ ಮೂಲದ ತಲಾ ಮೂವರು ನ್ಯಾಯಮೂರ್ತಿಗಳು ಸುಪ್ರೀಂಕೋರ್ಟಿಗೆ ಬಂದಂತಾಗಿದೆ.
ಕರ್ನಾಟಕ, ಮದ್ರಾಸ್, ಕಲ್ಕತ್ತಾ, ರಾಜಸ್ಥಾನ ಹೈಕೋರ್ಟ್ ಮೂಲದ ಇಬ್ಬರು ನ್ಯಾಯಮೂರ್ತಿಗಳು ಸುಪ್ರೀಂಕೋರ್ಟಿನಲ್ಲಿದ್ದರೆ, ಹಿಮಾಚಲ ಪ್ರದೇಶ, ತೆಲಂಗಾಣ, ಪಟನಾ, ಛತ್ತೀಸ್‌ಗಢ, ಗುವಾಹಟಿ, ಆಂಧ್ರ ಪ್ರದೇಶ, ಮಣಿಪುರ, ದೆಹಲಿ ಮತ್ತು ಕೇರಳ ಹೈಕೋರ್ಟ್ ಮೂಲದ ಒಬ್ಬೊಬ್ಬ ನ್ಯಾಯ ಮೂರ್ತಿಗಳಿದ್ದಾರೆ.
ಸದ್ಯ ಸುಪ್ರೀಂಕೋರ್ಟಿನಲ್ಲಿ ನ್ಯಾ. ಬಿ.ವಿ.ನಾಗರತ್ನ ಬಿಟ್ಟರೆ ಬೇರೆ ಮಹಿಳಾ ನ್ಯಾಯಮೂರ್ತಿಗಳಿಲ್ಲ. ೨೦೨೧ರಲ್ಲಿ ಅಂದಿನ ಕೊಲಿಜಿಯಂ ಮೂವರು ಮಹಿಳಾ ನ್ಯಾಯಮೂರ್ತಿಗಳ ನೇಮಕಕ್ಕೆ ಶಿಫಾರಸು ಮಾಡಿದ್ದು ಬಿಟ್ಟರೆ, ನಂತರದಲ್ಲಿ ಯಾವುದೇ ಶಿಫಾರಸು ಹೊರಬಿದ್ದಿಲ್ಲ.
ಹಾಗೆ ನೋಡಿದರೆ, ಗುಜರಾತ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿರುವ ನ್ಯಾ.ಸುನೀತಾ ಅಗರ್ವಾಲ್ ಅವರು 2011ರ ಹೈಕೋರ್ಟ್ ನ್ಯಾಯಾಧೀಶೆಯಾಗಿ ನೇಮಕಗೊಂಡಿದ್ದರು. ಅವರು ಕೂಡ ನ್ಯಾ.ಪಾಂಚೋಲಿ ಅವರಿಗಿಂತ ಹಿರಿಯರಾಗಿದ್ದಾರೆ. ಅದೇ ರೀತಿ, ಬೇರೆ ರಾಜ್ಯಗಳಲ್ಲಿರುವ ಕೆಲ ಹಿರಿಯ ಮಹಿಳಾ ನ್ಯಾಯಾಧೀಶರು ಸುಪ್ರೀಂ ಕೋರ್ಟಿಗೆ ಬಡ್ತಿ ಹೊಂದಲು ಅರ್ಹರಿದ್ದರು. ಆದರೆ, ಅವರನ್ನೆ ನೇಮಕಾತಿಗೆ ಪರಿಗಣಿಸದೆ, ನ್ಯಾ. ಪಾಂಚೋಲಿ ಹೆಸರನ್ನೇ ಆಯ್ಕೆ ಮಾಡಿದ್ದೇಕೆ ಎನ್ನುವ ಪ್ರಶ್ನೆ ಮಾತ್ರ ಹಾಗೆಯೇ ಉಳಿದುಕೊಂಡಿದೆ.