ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shishir Hegde Column: ಸಾವನ್ನು ಮುಂದೂಡುವ ಶ್ರೀಮಂತರ ಪ್ರಯೋಗಗಳು

ಮನುಷ್ಯನಿಗೆ ಒಂದು ‘ಪರಮಮಿತಿ’ ಎಂಬುದಿದೆ. ಉದಾಹರಣೆಗೆ ಮನುಷ್ಯ ಹೆಚ್ಚೆಂದರೆ ಎಷ್ಟು ಭಾರ ಎತ್ತಬಹುದು? ಗ್ರೆಗ್ ಅರ್ನ್ಸ್‌ಟ್ ಎನ್ನುವ ಕೆನೆಡಿಯನ್ 24 ಕ್ವಿಂಟಲ್ ಎತ್ತಿದ್ದ. ಅದು 1993ರಲ್ಲಿ. ಆ ದಾಖಲೆಯನ್ನು ಇಂದಿಗೂ, ಯಾರಿಗೂ ಮುರಿಯಲಾಗಿಲ್ಲ. ವೇಗದ ಓಟ ಎಂದರೆ- ಹೆಚ್ಚೆಂದರೆ ಉಸೇನ್ ಬೋಲ್ಟನಷ್ಟು. ಉಸೇನ್ ಬೋಲ್ಟ್‌ ನ ನೂರು ಮೀಟರ್ ಓಟದ ದಾಖಲೆ 9.58 ಸೆಕೆಂಡ್. ಹಿಂದಿನ ದಾಖಲೆಯೂ ಅವನದೇ- 9.63 ಸೆಕೆಂಡ್. ಇಲ್ಲಿನ ಎರಡು ದಾಖಲೆಯ ಸಮಯದ ಅಂತರ ನೋಡಿ. 0.18 ಸೆಕೆಂಡ್- ಅಷ್ಟರಲ್ಲಿ ಉಸೇನ್ ಬೋಲ್ಟ್‌ ಕ್ರಮಿಸಿದ್ದು 1.87 ಮೀಟರ್! ಆತ ಅಷ್ಟು ವೇಗದಲ್ಲಿ ಓಡಿದ್ದು 2009ರಲ್ಲಿ. ಅದಾಗಿ ಒಂದೂ‌ ವರೆ ದಶಕವೇ ಕಳೆದಿದೆ.

ಸಾವನ್ನು ಮುಂದೂಡುವ ಶ್ರೀಮಂತರ ಪ್ರಯೋಗಗಳು

ಶಿಶಿರಕಾಲ

shishirh@gmail.com

ಅಡಾಲ್ಫ್ ಹಿಟ್ಲರ್ ವಿಶ್ವಯುದ್ಧದ ಸಮಯದಲ್ಲಿ ತನ್ನ ಸೈನಿಕರಿಗೆ ಮೆತ್ (ಮೆತಾಂಫಿಟಮೈನ್) ತಿನ್ನಿಸುತ್ತಿದ್ದನಂತೆ. ಅದು ನಿಷೇಧಿತ ಡ್ರಗ್. ಅದನ್ನು ತಿಂದ ಸೈನಿಕರು 2-3 ದಿನ ನಿದ್ರಿಸುತ್ತಿರಲಿಲ್ಲ, ಯಾವುದೇ ಕ್ರೌರ್ಯಕ್ಕೂ ಹಿಂದೇಟು ಹಾಕುತ್ತಿರಲಿಲ್ಲ. ನೂರುಗಟ್ಟಲೆ ಮೈಲಿ ಸುಸ್ತಿಲ್ಲದೆ ನಡೆಯುತ್ತಿದ್ದರು. ‌ಅವರಿಗೆ ಎಲ್ಲಿಲ್ಲದ ಭಂಡ ಧೈರ್ಯ, ಅತಿಮಾನುಷ ಶಕ್ತಿ. ಎಲ್ಲದಕ್ಕೂ ಕಾರಣ ನಶೆ. ಹಿಟ್ಲರ್ ತನ್ನ ಸೈನಿಕರ ಶಕ್ತಿ, ಶೌರ್ಯ, ಧೈರ್ಯ, ಸಾಮರ್ಥ್ಯ ಹೆಚ್ಚಿಸಲು ಏನೇನೆಲ್ಲ ಅಮಾನವೀಯ ಪ್ರಯೋಗ ಮಾಡಿದ್ದ ಎಂಬುದು ಈಗ ಇತಿಹಾಸ.

ಮನುಷ್ಯನಿಗೆ ಒಂದು ‘ಪರಮಮಿತಿ’ ಎಂಬುದಿದೆ. ಉದಾಹರಣೆಗೆ ಮನುಷ್ಯ ಹೆಚ್ಚೆಂದರೆ ಎಷ್ಟು ಭಾರ ಎತ್ತಬಹುದು? ಗ್ರೆಗ್ ಅರ್ನ್ಸ್‌ಟ್ ಎನ್ನುವ ಕೆನೆಡಿಯನ್ 24 ಕ್ವಿಂಟಲ್ ಎತ್ತಿದ್ದ. ಅದು 1993ರಲ್ಲಿ. ಆ ದಾಖಲೆಯನ್ನು ಇಂದಿಗೂ, ಯಾರಿಗೂ ಮುರಿಯಲಾಗಿಲ್ಲ. ವೇಗದ ಓಟ ಎಂದರೆ- ಹೆಚ್ಚೆಂದರೆ ಉಸೇನ್ ಬೋಲ್ಟ್‌ನಷ್ಟು. ಉಸೇನ್ ಬೋಲ್ಟ್‌ ನ ನೂರು ಮೀಟರ್ ಓಟದ ದಾಖಲೆ 9.58 ಸೆಕೆಂಡ್. ಹಿಂದಿನ ದಾಖಲೆಯೂ ಅವನದೇ- 9.63 ಸೆಕೆಂಡ್. ಇಲ್ಲಿನ ಎರಡು ದಾಖಲೆಯ ಸಮಯದ ಅಂತರ ನೋಡಿ. 0.18 ಸೆಕೆಂಡ್- ಅಷ್ಟರಲ್ಲಿ ಉಸೇನ್ ಬೋಲ್ಟ್‌ ಕ್ರಮಿಸಿದ್ದು 1.87 ಮೀಟರ್!

ಆತ ಅಷ್ಟು ವೇಗದಲ್ಲಿ ಓಡಿದ್ದು 2009ರಲ್ಲಿ. ಅದಾಗಿ ಒಂದೂ‌ ವರೆ ದಶಕವೇ ಕಳೆದಿದೆ. ಅದಾದ ಮೇಲೆ ಒಲಿಂಪಿಕ್ಸ್ ಮತ್ತು ಉಳಿದ ಪಂದ್ಯಾವಳಿಯಲ್ಲಿ ಅದೆಷ್ಟೋ ಲಕ್ಷ ಮಂದಿ 100 ಮೀಟರ್ ಓಡಿದ್ದಾರೆ. ಯಾರಿಗೂ ಆ ದಾಖಲೆ ಮುರಿಯಲಾಗಿಲ್ಲ. ಖುದ್ದು ಉಸೇನ್ ಬೋಲ್ಟ್‌ನಿಗೆ ಕೂಡ. ಈಗ ಇನ್ಯಾರಿಗೂ ಯಾವತ್ತೂ ಇಷ್ಟು ವೇಗವಾಗಿ ಓಡಲಿಕ್ಕೆ ಸಾಧ್ಯವೇ ಇಲ್ಲ ಎಂಬಂತಾಗಿದೆ. ಒಟ್ಟಾರೆ ಆ ದಿನ ಬೋಲ್ಟ ಓಡಿದ ವೇಗ ಮನುಷ್ಯನ ಗರಿಷ್ಠಮಿತಿ. ಅಂತೆಯೇ ಗ್ರೆಗ್ ಅರ್ನ್ಸ್‌ಟ್ ಎತ್ತಿದ ಭಾರವನ್ನೇ ಮೂರು ದಶಕ ಮೀರಿದರೂ ಮುರಿಯಲಾಗದ್ದಕ್ಕೆ ಅದು ಕೂಡ ಮನುಷ್ಯನ ಗರಿಷ್ಠಮಿತಿ ಎಂದೇ ನಂಬಬಹುದು. ಬೋಲ್ಟ್‌ನ ದಾಖಲೆ ಮುರಿಯಲು ಖುದ್ದು ಬೋಲ್ಟ್‌ಗೂ ಸಾಧ್ಯವಿಲ್ಲ. ಗ್ರೆಗ್‌ಗೆ ಈಗ 63 ವರ್ಷ.

ಇದನ್ನೂ ಓದಿ: Shishir Hegde Column: ದೊಡ್ಡಣ್ಣ ಟ್ರಂಪನ ಸುಂಕಸಂಧಾನ; ಮಾರುಕಟ್ಟೆ ಕಂಪನ

ಒಲಿಂಪಿಕ್ಸ್ ಮೊದಲಾದ ಪಂದ್ಯಾವಳಿ ನಡೆಯುವಾಗ ‘ಡೋಪಿಂಗ್’ ವಿಷಯ ಪ್ರಚಾರಕ್ಕೆ ಬರುತ್ತದೆ. ಕೆಲವೊಂದಿಷ್ಟು ಶಕ್ತಿವರ್ಧಕ ಕೆಮಿಕಲ್‌ಗಳನ್ನು ಕ್ರೀಡಾಪಟುಗಳು ಬಳಸುವಂತಿಲ್ಲ. ಅದು ನಿಯಮ ಬಾಹಿರ. ಏಕೆಂಬುದು ನಿಮಗೆಲ್ಲ ತಿಳಿದೇ ಇದೆ. ಆದರೆ ಗ್ರೆಗ್ ಅಥವಾ ಉಸೇನ್ ಬೋಲ್ಟ್‌ ಏನಾದರೂ ಡೋಪ್- ಶಕ್ತಿವರ್ಧಕ ರಾಸಾಯನಿಕವನ್ನು ಸೇವಿಸಿದಲ್ಲಿ ಈ ದಾಖಲೆ ಮುರಿಯ‌ ಬಹುದಿತ್ತು ಅಲ್ಲವೇ? ಆದರೆ ಅದು ನಿಯಮಬಾಹಿರ. ಆದರೂ ಇಂಥ ಕ್ರೀಡಾಪಟುಗಳು ರಾಸಾಯನಿಕ- ಸ್ಟಿರಾಯ್ಡ್ ಮೊದಲಾದವನ್ನು ಬಳಸಿದಾಗ ಎಷ್ಟು ಗರಿಷ್ಠ ವೇಗ ಸಾಧ್ಯ? ಭಾರ ಎತ್ತುವಿಕೆ, ಗುಂಡೆಸೆತ, ಡಿಸ್ಕ್ ಎಸೆತ, ಭರ್ಜಿ ಎಸೆತ, ಉದ್ದ-ಎತ್ತರ ಜಿಗಿತ ಇವೆಲ್ಲದರ ಕ್ರೀಡಾಪಟುಗಳು ಡೋಪ್- ನಿಷೇಧಿತ ರಾಸಾಯನಿಕಗಳನ್ನು ಸೇವಿಸಲು ಬಿಟ್ಟರೆ ಆ ದಾಖಲೆ ಈ ದಾಖಲೆಯ ಅಂತರ ಎಷ್ಟಾಗ‌ ಬಹುದು? ‘ಇಕನಾಮಿಸ್ಟ್’ ಪತ್ರಿಕೆಯಲ್ಲಿ ಇತ್ತೀಚೆಗೆ ಒಂದು ವರದಿ ಬಂದಿತ್ತು.

ಕ್ರಿಶ್ಚನ್ ಆಂಗರ್ಮೇಯರ್ ಜರ್ಮನಿಯ ಶ್ರೀಮಂತ ಹೂಡಿಕೆದಾರ. ಇನ್ನೂ 50 ದಾಟದ ಯಶಸ್ವಿ ಬಯೋಟೆಕ್ ಉದ್ಯಮಿ, ಬಿಲಿಯನೇರ್. ಅವನೊಂದು ಹೊಸ ಆಟದ ವ್ಯವಸ್ಥೆಯನ್ನು ಹುಟ್ಟು ಹಾಕುವ ಭರದಲ್ಲಿದ್ದಾನೆ ಎಂದು. ಅದರ ಹೆಸರು Enhanced Games. ಈ ಪಂದ್ಯಾವಳಿಯಲ್ಲಿ ಏನೆಂದರೆ, ಕ್ರೀಡಾಪಟುಗಳಿಗೆ ಯಾವುದೇ ದೈಹಿಕ ಪರೀಕ್ಷೆ ಇರುವುದಿಲ್ಲ.

ಭಾಗವಹಿಸುವಾಗ ಯಾವುದೇ ಶಕ್ತಿವರ್ಧಕ, ಸ್ಟಿರಾಯ್ಡ ಏನನ್ನು ಬೇಕಾದರೂ ತಿಂದು-ಕುಡಿದು ಇದರಲ್ಲಿ ಭಾಗವಹಿಸಬಹುದು. ಅಷ್ಟೇ ಅಲ್ಲ ಇದರಲ್ಲಿ ಭಾಗವಹಿಸಿ ಒಲಿಂಪಿಕ್ಸ್‌ ನ ಅಪರೂಪದ ದಾಖಲೆ ಮುರಿದರೆ ಅವರಿಗೆ ಕೋಟಿ ರುಪಾಯಿ ಬಹುಮಾನ. ಈಗ ಈ ಪಂದ್ಯಾವಳಿಗೆ ನೂರಾರು ಕೋಟಿ ಕೊಟ್ಟಿರುವ ಆಂಗರ್ಮೇಯರ್ ಜತೆ ವಿಜ್ಞಾನಿಗಳು, ಒಲಿಂಪಿಕ್ಸ್ ಮಾಜಿ ಸಲಹೆಗಾರರು ಇತ್ಯಾದಿ ಸೇರಿಕೊಂಡಿದ್ದಾರೆ.

ಕ್ರಿಶ್ಚನ್ ಆಂಗರ್ಮೇಯರ್ ಹೇಳಿ ಕೇಳಿ ಒಬ್ಬ ಬಯೋಟೆಕ್ ಉದ್ಯಮಿ. ಅವನ ಕಂಪನಿಗಳು ಇಂಥ ಶಕ್ತಿವರ್ಧಕ ಉತ್ಪನ್ನಗಳನ್ನು ಆವಿಷ್ಕರಿಸುತ್ತವೆ ಮತ್ತು ತಯಾರಿಸಿ ಮಾರುತ್ತವೆ. ಆದರೆ ಇದೆಲ್ಲ ಅಷ್ಟೇ ಆಗಿದ್ದರೆ ಆಂಗರ್ಮೇಯರ್‌ನದು ಏನೋ ಒಂದು ಹುಚ್ಚು ಪ್ರಯತ್ನ, ಇದೊಂದು ಬಿಸಿನೆಸ್ ಟ್ಯಾಕ್ಟಿಕ್ ಎಂದು ಅಲಕ್ಷಿಸಿ ಬಿಡಬಹುದಿತ್ತು. ಏಕೆಂದರೆ ಈ ಹಿಂದೆಯೂ ಮನುಷ್ಯ ಸಾಮರ್ಥ್ಯ ಹೆಚ್ಚಿಸುವ ಆವಿಷ್ಕಾರದಲ್ಲಿ ತೊಡಗಿಕೊಂಡು ಸೋತು ಸುಣ್ಣವಾದವರು ಹಲವರಿದ್ದಾರೆ.

ಆದರೆ ಈ ಬಾರಿ ಮಾತ್ರ ಕಾಲಘಟ್ಟ ಬದಲಾಗಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಕೃತಕ ಬುದ್ಧಿ ಮತ್ತೆ) ಮುನ್ನೆಲೆಗೆ ಬಂದಾಗಿನಿಂದ ಜೀವ ವಿಜ್ಞಾನದಲ್ಲಿನ ಸಾಧ್ಯತೆ ಬಹುಗುಣಗೊಂಡಿದೆ. ಆ ಕಾರಣಕ್ಕೆ ಶ್ರೀಮಂತ ಎಲಾನ್ ಮಸ್ಕ್, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಗ- ಮರಿ ಟ್ರಂಪ್, ಅಮೆಜಾನ್‌ನ ಜೆಫ್‌ ಬೆಜೋಸ್, ಮತ್ತಿನ್ನೊಂದಿಷ್ಟು ಘಟಾನುಘಟಿಗಳು- ಅವರೆಲ್ಲ ಶಕ್ತಿವರ್ಧಕ, ಜೀವವರ್ಧಕ, ಜೀವಧಾತು ಡಿಎನ್‌ಎ ಬದಲಿಸುವ ಜೀನ್ ಎಡಿಟಿಂಗ್ ಮೂಲಕ ಅತಿ‌ಮಾನುಷ ರಾಗುವ, ವಯಸ್ಸಾಗುವ ಲಕ್ಷಣಗಳನ್ನು ನಿಲ್ಲಿಸುವ, ಒಟ್ಟಾರೆ ದೀರ್ಘಾಯುಷ್ಯ ಸಾಧ್ಯತೆಯ ಆವಿಷ್ಕಾರಗಳಲ್ಲಿ ಯಥೇಚ್ಛ ಶ್ರಮ, ಸಮಯ ಮತ್ತು ಹಣವನ್ನು ತೊಡಗಿಸುತ್ತಿದ್ದಾರೆ.

ದೀರ್ಘಾಯುಷ್ಯ, ಅತಿಮಾನುಷ ಸಾಧ್ಯತೆ ಇವೆಲ್ಲ ಮನುಷ್ಯನ ಅತ್ಯಂತ ದೀರ್ಘಕಾಲದ ಹುಚ್ಚು, ಆಸೆ. ಅನಾದಿಕಾಲದಿಂದಲೂ ನಮ್ಮ ಸಹಜ ದೇಹಸಾಮರ್ಥ್ಯಕ್ಕಿಂತ ಹೆಚ್ಚಿನ ಸಾಮರ್ಥ್ಯವನ್ನು ಪಡೆಯಬೇಕು ಎಂಬ ಗೀಳು ಮನುಷ್ಯನಲ್ಲಿ ಇದ್ದದ್ದೇ. ಆದರೆ ಈಗ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ ಬಂದಿದೆಯಲ್ಲ. ಇದನ್ನು ಇಟ್ಟುಕೊಂಡು ಊಹಿಸಲಸಾಧ್ಯವಾದದ್ದನ್ನೆಲ್ಲ ಪ್ರಯೋಗಾಲಯ, ಪ್ರಯೋಗ ಪಶು, ಕ್ಲಿನಿಕಲ್ ಟ್ರಯಲ್ ಯಾವುದೂ ಇಲ್ಲದೆ ಕಂಡುಹಿಡಿಯಬಹುದು.

ಅನಂತ ಸಾಧ್ಯತೆಗಳು. ಕೃತಕ ಬುದ್ಧಿಮತ್ತೆ ಮತ್ತು ಆಧುನಿಕ ತಂತ್ರಾಂಶಗಳ ಅಭಿವೃದ್ಧಿಯಿಂದಾಗಿ ದೀರ್ಘಾಯುಷ್ಯ ಮತ್ತು ಹೆಚ್ಚಿನ ದೇಹ ಸಾಮರ್ಥ್ಯ ಇವುಗಳ ಸುತ್ತ ಹೊಸ ಆವಿಷ್ಕಾರಗಳು ಸಾಧ್ಯ ವೆನಿಸತೊಡಗಿವೆ. ಆ ಕಾರಣಕ್ಕೆ ಈ ಎಲ್ಲ ಬಿಲಿಯನೇರ್ ಉದ್ಯಮಿಗಳು ಸ್ಪರ್ಧೆಗೆ ನಿಂತಿದ್ದಾರೆ.

ಇದು ವೈಯಕ್ತಿಕ ಬಯಕೆಯಷ್ಟೇ ಅಲ್ಲ, ಸದ್ಯ ಇವರೆಲ್ಲರ ಮುಂದಿರುವ ವ್ಯಾಪಾರಿ ಅವಕಾಶ ಕೂಡ ಹೌದು. ಇವರೆಲ್ಲ ಎಂದರೆ ಯಾರೋ ಕಾಕಪೋಕರಲ್ಲ! ಇವರು ‘ಫೋರ್ಬ್ಸ್‌ʼ ಪಟ್ಟಿಯ ಮೊದಲ 100 ಶ್ರೀಮಂತರ ಸ್ಥಾನದಲ್ಲಿರುವವರು. ಇಂಥ ಅಸಮಾಸುರರೆಲ್ಲ ಇಷ್ಟು ಗಂಭೀರವಾಗಿ ತೊಡಗಿಸಿ ಕೊಂಡಿದ್ದಾರೆ ಎಂದರೆ ಅನೋ ನಡೆಯುತ್ತಿದೆ ಎಂದೇ ಅರ್ಥವಲ್ಲವೇ? ಅಲ್ಲದಿದ್ದರೆ ಇವರೆಲ್ಲ ಸುಮ್ಸುಮ್ಮನೆ ದುಡ್ಡು ಹಾಕಿ ಕೈಸುಟ್ಟುಕೊಳ್ಳುವ ಅಸಾಮಿಗಳೇನಲ್ಲ.

ಇವರೆಲ್ಲ ಬುದ್ಧಿಯನ್ನು ಬಳಸಿ ಶ್ರೀಮಂತರಾದವರು, ಬುದ್ಧಿವಂತರೇ ಇದ್ದಾರೆ. ಅಲ್ಲದೆ ಇವರು ತೊಡಗಿಸುತ್ತಿರುವ ಹಣವೂ ಸಣ್ಣ ಮೊತ್ತವೇನಲ್ಲ- ಸಾವಿರಾರು ಕೋಟಿ. ಹಾಗಾಗಿ ಇದೆಲ್ಲ ಕೆಲವೇ ಶ್ರೀಮಂತರ ಶೋಕಿಯೂ ಅಲ್ಲ. ಇವರೆಲ್ಲರ ಅಂತಿಮ ಉದ್ದೇಶ ವಯಸ್ಸಾಗುವುದನ್ನು ನಿಧಾನಿಸು ವುದು, ಮನುಷ್ಯನನ್ನು ದೀರ್ಘಾಯುಷಿಯನ್ನಾಗಿಸುವುದು, ಸಾಧ್ಯವಾದರೆ ಸಾವೇ ಇಲ್ಲದ ಅವಸ್ಥೆ ಯನ್ನು ತಲುಪುವುದು. ಅಂತ್ಯವಾಗುವುದನ್ನು ನಿಧಾನಿಸುವುದು ಇಲ್ಲವೇ ತಡೆಯುವುದು! ಈಗಾ ಗಲೇ ವಿಟಮಿನ್, ಪ್ರೋಟೀನ್ ಮೊದಲಾದವುಗಳನ್ನು ಪುಡಿ ಇತ್ಯಾದಿಯ ಮೂಲಕ ಸೇವಿಸುವುದು ಇದೆ.

ಏನೋ ಒಂದು ಪೋಷಕಾಂಶದ ಕೊರತೆ ಇದೆ ಎಂದರೆ ಇಂಥ ಗುಳಿಗೆ ನುಂಗಿ ಎಂದು ಡಾಕ್ಟರ್ ಬರೆದುಕೊಡುತ್ತಾರೆ. ವಿಟಮಿನ್, ಫೋಲೇಟ್, ಕಬ್ಬಿಣ, ಮೆಗ್ನೀಷಿಯಂ, ಕ್ಯಾಲ್ಸಿಯಂ, ಮೀನಿನ ಎಣ್ಣೆ, ಪ್ರೋಟೀನ್ ಪೌಡರ್, ಅರಿಶಿಣ, ಗಿಡಮೂಲಿಕೆಗಳು, ಕ್ರಿಯಾಟಿನ್ ಫ್ಸಾಪೆಟ್ ಇತ್ಯಾದಿ ಅಸಂಖ್ಯ Health Supplements- ಜೀವಪೂರಕ ರಾಸಾಯನಿಕಗಳು ಈಗಾಗಲೇ ಸಾಮಾನ್ಯವಾಗಿವೆ.

ಈ ಉದ್ಯಮವೇ ಇಂದು ಜಾಗತಿಕ 4500 ಕೋಟಿ ರುಪಾಯಿ ವ್ಯವಹಾರ. ಅವುಗಳಲ್ಲಿ ಅದೆಷ್ಟೋ ಉತ್ಪನ್ನಗಳು ನಿಜವಾಗಿಯೂ ಅವು ಹೇಳುವಂತೆ ಜೀವಪೂರಕವಾಗಿಯೇ ಎಲ್ಲರಲ್ಲೂ ಕೆಲಸ ಮಾಡುತ್ತವೆ ಎಂಬ ಯಾವ ಗ್ಯಾರಂಟಿಯೂ ಇಲ್ಲ. ಆದರೆ ಇದೊಂದು ದೊಡ್ಡ ವ್ಯವಹಾರವಂತೂ ಹೌದು.

ಈಗ ಕೃತಕ ಬುದ್ಧಿಮತ್ತೆಯಿಂದಾಗಿ ಈ ಕಂಪನಿಗಳು ಇನ್ನೊಂದು ಹೆಜ್ಜೆ ಮುಂದೆ ಹೋಗಲು ದಾಪು ಗಾಲು ಎತ್ತಿವೆ. ಆದರೆ ಮುಂದಿನ ಹೆಜ್ಜೆಯಿಡಲು ಒಂದು ಸಮಸ್ಯೆ ಇದೆ. ಇಷ್ಟುಕಾಲ ಔಷಧ ಮತ್ತು ಬಯೋಟೆಕ್ ಕಂಪನಿಗಳು ರೋಗ ಕೇಂದ್ರಿತ ಪರಿಹಾರವನ್ನು ಅರಸಿ ಹೊರಡುತ್ತಿದ್ದವು. ಇಂಥ ರೋಗ ಬಂದರೆ ಇದು ಪರಿಹಾರ, ಇದು ಅಡ್ಡ ಪರಿಣಾಮ ಎಂದಾಗಿತ್ತು. ಅದನ್ನು ಸರಕಾರಗಳು ಪ್ರಯೋಗಿಸಿ, ಪರಾಮರ್ಶಿಸಿ ಹದಿನೈದಿಪ್ಪತ್ತು ವರ್ಷದಲ್ಲಿ ಒಂದು ಔಷಧ ತಯಾರಾಗುತ್ತಿತ್ತು.

ಇಂದಿಗೂ ಸ್ಥಿತಿ ಹಾಗೆಯೇ ಇದೆ. ಔಷಧವೊಂದು ಆವಿಷ್ಕಾರಗೊಂಡು ರೋಗಿಗೆ ಮುಟ್ಟುವಲ್ಲಿ ಯವರೆಗೆ ಎರಡು ದಶಕದ ಕಳೆದಿರುತ್ತದೆ. ಹಾಗಿರುವಾಗ, ಈ ರೀತಿ ಕೃತಕ ಬುದ್ಧಿಮತ್ತೆ ಸೂಚಿಸುವ ಆರೋಗ್ಯ, ಶಕ್ತಿ, ಆಯುರ್ವರ್ಧಕ ಔಷಧಿಗಳನ್ನು ಪ್ರಯೋಗಿಸಿ ಪರಾಮರ್ಶಿಸಲು ಯಾವುದೇ ವ್ಯವಸ್ಥೆ ಇಲ್ಲ. ಆದರೆ ಕೆಲವೊಂದಿಷ್ಟು ಅಚಾನಕ್ ನಡೆದ ಆವಿಷ್ಕಾರಗಳಿವೆ. ಅವು ಏನೋ ಒಂದು ರೋಗ ಕ್ಕೆಂದು ಕಂಡುಹಿಡಿದ ರಾಸಾಯನಿಕಗಳು.

ಅವುಗಳ ಅಡ್ಡಪರಿಣಾಮ ಇನ್ನೇನೋ ಒಂದು ಸಮಸ್ಯೆಯ ಪರಿಹಾರವಾದ, ಇನ್ನೊಂದು ಸಂಬಂಧ ವೇ ಇಲ್ಲದ ರೋಗಕ್ಕೆ ಉತ್ತರವಾದ ಉದಾಹರಣೆಗಳಿವೆ. ಇತ್ತೀಚಿನ ಉದಾಹರಣೆ Ozempic ಎಂಬ ಔಷಧಿ. ಇದು ಅಮೆರಿಕದಲ್ಲಿ ಸದ್ಯ ಬಹಳ ಪ್ರಚಾರದಲ್ಲಿದೆ. ಒಜೆಂಪಿಕ್ ಮೂಲತಃ ಡಯಾಬಿಟಿಸ್ ಔಷಧಿ. ಆದರೆ ಇದನ್ನು ಡಯಾಬಿಟಿಸ್ ಇಲ್ಲದಿರುವವರು ಸೇವಿಸಿದಾಗ ತೂಕ ಇಳಿಕೆಯಾಗುತ್ತದೆ. ವಿಷಯ ಏನೆಂದರೆ ಇದು ನಮ್ಮ ಹೊಟ್ಟೆ ಖಾಲಿಯಾದರೂ ತುಂಬಿದೆ ಎಂಬ ಸಂದೇಶವನ್ನು ಮಿದುಳಿಗೆ ರವಾನಿಸುತ್ತದೆ. ಆ ಮೂಲಕ ಹೆಚ್ಚಿನ ಉಪವಾಸ- ಹೆಚ್ಚಿನ ತೂಕ ಇಳಿಕೆ. ಸ್ವಲ್ಪವೇ ತಿಂದರೂ ಈ ಔಷಽಯಿಂದಾಗಿ ಹೊಟ್ಟೆ ತುಂಬಿದ ಸಂದೇಶ ಮಿದುಳಿಗೆ ರವಾನೆಯಾಗುತ್ತದೆ.

ಮಿತಾಹಾರ- ತೂಕ ಇಳಿಕೆ. ಹೀಗಾಗಿ ಇದೇ ಔಷಧಿ ಈಗ ತೂಕ ಇಳಿಕೆಯ ಔಷಧಿಯಾಗಿ ಬಳಕೆ ಯಾಗಲು ಚರ್ಚೆಯಲ್ಲಿದೆ. ಈ ರೀತಿ ನಮಗೆ ತಿಳಿದಿರುವ ಔಷಧಿ, ರಾಸಾಯನಿಕಗಳನ್ನು ಸೇರಿಸಿ ಸರಿಯಾಗಿ ಇಂತಿಷ್ಟೇ ಎಂಬ ಪ್ರಮಾಣದಲ್ಲಿ ಸೇವಿಸಿದರೆ ದೀರ್ಘಾಯುಷ್ಯ ಪಡೆಯಬಹುದು ಎಂದು ಕೃತಕ ಬುದ್ಧಿಮತ್ತೆ ಈಗ ಹೇಳುತ್ತಿದೆ- ಆದರೆ ಪ್ರಯೋಗ ಸಾಧ್ಯತೆ ಸದ್ಯಕ್ಕಂತೂ ಇಲ್ಲ. ಸರಕಾರಿ ಪ್ರಯೋಗ ಸಾಧ್ಯವಿಲ್ಲವೆಂದು ಎಲ್ಲರೂ ಸುಮ್ಮನೆ ಕೂರುವುದಿಲ್ಲವಲ್ಲ. ಇದರಲ್ಲಿ ತೊಡಗಿಸಿಕೊಂಡ ಕೆಲವು ಶ್ರೀಮಂತರು ಕೃತಕ ಬುದ್ಧಿಮತ್ತೆಯನ್ನು ನಂಬುತ್ತ, ತಾವೇ ತಮ್ಮ ದೇಹದ ಮೇಲೆ ಪ್ರಯೋಗ ಕ್ಕೆ ಮುಂದಾಗಿಬಿಟ್ಟಿದ್ದಾರೆ. ಎಲ್ಲರಿಗೂ ಏನು ಬೇಕಾದರೂ ಸೇವಿಸುವ ವೈಯಕ್ತಿಕ ಸ್ವಾತಂತ್ರ್ಯ ವಿದೆಯಲ್ಲ.

ಬ್ರಯಾನ್ ಜಾನ್ಸನ್ ಎಂಬ 47 ವರ್ಷದ ಅಮೆರಿಕನ್ ಬಿಲಿಯನೇರ್ ಉದ್ಯಮಿ ಅಮರನಾಗಲು, ಅಥವಾ ಕೊನೆ ಪಕ್ಷ ದೀರ್ಘಾಯುಷ್ಯ ಹೊಂದಲು ವಾರ್ಷಿಕ 180 ಕೋಟಿ ರುಪಾಯಿ ವ್ಯಯಿಸು ತ್ತಾನೆ. ಅವನ ದಿನಚರಿಯೇ ವಿಚಿತ್ರವಿದೆ. ಆತ ನಿತ್ಯ 5 ಗಂಟೆಗೆ ಏಳುತ್ತಾನೆ. ಎದ್ದಾಕ್ಷಣ 100 (ಅಕ್ಷರಶಃ) ಗುಳಿಗೆಗಳನ್ನು ನುಂಗುತ್ತಾನೆ. ಏನೇನೋ ಜೀವಪೂರಕ ರಾಸಾಯನಿಕಗಳು ಮತ್ತು ಒಂದಿಷ್ಟು ಔಷಧಿಗಳು. ಒಂದು ಗಂಟೆ ವ್ಯಾಯಾಮ. ಶುದ್ಧ ಸಸ್ಯಾಹಾರ. ಬೆಳಗ್ಗೆ 11ರ ನಂತರ ಏನನ್ನೂ ತಿನ್ನುವುದಿಲ್ಲ.

ರಾತ್ರಿ 8.30ಕ್ಕೆ ನಿದ್ರೆಗೆ. ತೊಂದರೆಯಾಗಬಾರದು ಎಂದು ಒಬ್ಬನೇ ಮಲಗುವುದು. ಆತ ಕೆಲ ದಿನಗಳ ಹಿಂದೆ ತನ್ನ ದೇಹದ ಸಂಪೂರ್ಣ ಪ್ಲಾಸ್ಮಾ (ರಕ್ತದಲ್ಲಿರುವ ದ್ರವಾಂಶ) ಬದಲಿಸಿಕೊಂಡ. ಅಷ್ಟೇ ಅಲ್ಲ. ಮರಿ ಇಲಿಯ ರಕ್ತವನ್ನು ತಾಯಿ ಇಲಿಗೆ ನೀಡಿದರೆ ತಾಯಿ ದೀರ್ಘಾಯುಷ್ಯ ಪಡೆಯುತ್ತದೆ ಎಂಬುದು ಸಾಬೀತಾದ ವಿಷಯ. ಈತ ಅದನ್ನೂ ಪರೀಕ್ಷಿಸಲು ತನ್ನ ಮಗನಿಂದಲೇ ರಕ್ತ ಪಡೆದ. ಅದೂ ಸುದ್ದಿಯಾಗಿತ್ತು.

ಆದರೆ ಆತ ಮಾಡುತ್ತಿರುವ ಸ್ವಯಂ ಪ್ರಯೋಗ ಸುದ್ದಿಗಲ್ಲ, ಸದ್ದಿಗಲ್ಲ. ಇದೆಲ್ಲ ರಾಸಾಯನಿಕಗಳು, ಗುಳಿಗೆ, ಔಷಧಿ, ರಕ್ತ ಬದಲಾವಣೆ ಇತ್ಯಾದಿ ಪ್ರಯೋಗಗಳು ಒಂದೆಡೆ ನಡೆಯುತ್ತಿದ್ದರೆ ಇನ್ನೊಂದೆಡೆ ವಿeನ ತಂತ್ರಜ್ಞಾನವು ಮನುಷ್ಯನ ಮೂಲಧಾತುವಾದ ಡಿಎನ್‌ಎ ಬದಲಾವಣೆ ಯತ್ತ ಮುಖ ಮಾಡಿವೆ. ಈ ವಿಷಯದಲ್ಲಿ ಹಾರ್ವರ್ಡ್ ಜೀವತಳಿಶಾಸ್ತ್ರಜ್ಞರು ಹೇಳುವುದು ಸರಿಯಿದೆ.

ಯೋಗ, ಪೂರ್ಣ ವ್ಯಾಯಾಮ, ಧ್ಯಾನ, ಆಟೋಟ, ಉತ್ತಮ ಆಹಾರ ಇವೆಲ್ಲವುಗಳಿಂದ ಸರಾಸರಿ 80 ವರ್ಷ ಬದುಕಬಹುದು. ಅದುವೇ ಮನುಷ್ಯನ ಗರಿಷ್ಠ ಮಿತಿ. ಅದಕ್ಕಿಂತ ಜಾಸ್ತಿ ಬದುಕಬೇಕೆಂದರೆ ಮನುಷ್ಯನ ಮೂಲ ಜೀವಧಾತುವಾದ ಡಿಎನ್‌ಎಯನ್ನೇ ಬದಲಿಸಬೇಕು ಎಂದು. ಒಲಂಪಿಕ್ಸ್‌ ನಲ್ಲಿ, ಗಣಿತ, ವಿಜ್ಞಾನ ಮೊದಲಾದ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಮುಟ್ಟಿದ ಮಿತಿಯೇ ಮನುಷ್ಯನ ಪರಮಮಿತಿ ಎಂದು. ಅದನ್ನು ಮೀರಬೇಕೆಂದರೆ ಡಿಎನ್‌ಎ (ಪ್ರಧಾನ ಅನುವಂಶಿಕ ಜೈವಿಕ ಅಣು) ಬದಲಿಸಬೇಕು ಎಂದು.

ಟೆಸ್ಲಾ, ಸ್ಪೇಸ್ ಎಕ್ಸ್ ಖ್ಯಾತಿಯ ಜಗತ್ತಿನ ಮೊದಲ‌ ಶ್ರೀಮಂತ ಎಲಾನ್ ಮಸ್ಕ್ ‘ನ್ಯೂರೋಲಿಂಕ್’ ಎಂಬ ಕಂಪನಿಯೊಂದನ್ನೂ ಹೊಂದಿದ್ದಾನೆ. ಈಗಾಗಲೇ ಮಿದುಳಿನ ಮೇಲೆ ಚಿಕ್ಕದೊಂದು ಮೈಕ್ರೋಚಿಪ್ ಅಳವಡಿಸಿ ಅದು ಮಿದುಳಿನ ಜತೆಯಲ್ಲಿ ಸಂವಹಿಸುವ ಆವಿಷ್ಕಾರವಾಗಿದೆ. ಇದು ಪಕ್ಷವಾತವಾದವರಿಗೆ, ಪಾರ್ಕಿನ್ಸನ್ ಹೊಂದಿದವರಿಗೆ ದೇಹ ಚಲನೆಗೆ ಸಹಕಾರವಾಗಿ ವರವಾಗಿದೆ. ಆ ಆವಿಷ್ಕಾರವೇ ಮುಂದುವರಿದು ಕಂಪ್ಯೂಟರ್ ಅನ್ನು ಮಿದುಳಿಗೆ ಜೋಡಿಸುವ ಪ್ರಯೋಗಗಳು ನ್ಯೂರೋಲಿಂಕ್ ಮತ್ತಿತರ ಇಂಥದ್ದೇ ಕಂಪನಿಗಳ ದೂರದೃಷ್ಟಿ.

ಆ ನಿಟ್ಟಿನಲ್ಲಿ ತಕ್ಕಮಟ್ಟಿಗಿನ ಯಶಸ್ಸನ್ನು ಎಲಾನ್ ಮಸ್ಕ್ ಕಂಪನಿ ಕಂಡಿದೆ. ಮಿದುಳಿಗೆ ಕಂಪ್ಯೂ‌ ಟರ್, ಇಂಟರ್ನೆಟ್ ಆ ಮೂಲಕ ಕೃತಕ ಬುದ್ಧಿಮತ್ತೆ ಅಳವಡಿಸುವುದು. ಸುಮ್ಮನೆ ಒಮ್ಮೆ ಕಲ್ಪಿಸಿ ಕೊಂಡು ನೋಡಿ. ಜಾನ್ಸನ್‌ನ ಪ್ರಯೋಗ ಯಶಸ್ವಿಯಾದರೆ, ಮನುಷ್ಯರೆಲ್ಲರಿಗೂ ಅದು ಲಭ್ಯವಾ ದರೆ- ಎಲ್ಲರೂ ಇನ್ನೊಂದಿಪ್ಪತ್ತು ವರ್ಷ ಹೆಚ್ಚಿಗೆ ಬದುಕಬಹುದು. ವಯೋಸಹಜ ದೇಹ ಬದಲಾವಣೆ ನಿಂತರೆ ಯಾರಿಗೆ ಬೇಡ? ವಯಸ್ಸಾಗುತ್ತಿದ್ದಂತೆ ದೈಹಿಕ ನೋವುಗಳೇ ಬದುಕನ್ನು ಅಸಹನೀಯ ವಾಗಿಸುವುದಲ್ಲವೇ? ಇನ್ನು ಕಂಪ್ಯೂಟರ್ ಚಿಪ್ ಮಿದುಳಿನ ಜತೆಯಲ್ಲಿ ಸಂವಹಿಸಲು ಆರಂಭಿಸಿದಲ್ಲಿ ಇಡೀ ಜಗತ್ತಿನ ಜ್ಞಾನವೆಲ್ಲ ಪ್ರತಿಯೊಬ್ಬರ ಮಿದುಳಿನಲ್ಲಿ. ಇವೆಲ್ಲ ಯಾವುದೋ ಕಾಗಕ್ಕ ಗುಬ್ಬಕ್ಕನ ಕಥೆಯಲ್ಲ. ಅಥವಾ ಹಾಲಿವುಡ್ ‘ಸೈ-ಫೈ’ ಸಿನಿಮಾವೂ ಅಲ್ಲ. ಈಗ ಕಳೆದ ನಾಲ್ಕೈದು ವರ್ಷದಲ್ಲಿ ಆಗುತ್ತಿರುವ ಬದಲಾವಣೆ ಮತ್ತು ತೆರೆದುಕೊಳ್ಳುತ್ತಿರುವ ಸಾಧ್ಯತೆಗಳನ್ನು ಗ್ರಹಿಸಿದ್ದಲ್ಲಿ ಇದೆಲ್ಲ ಸಾಧ್ಯವೆನಿಸುತ್ತದೆ.

ಕೃತಕ ಬುದ್ಧಿಮತ್ತೆ ಇಡೀ ಜಗತ್ತನ್ನೇ ಬದಲಿಸುವುದಷ್ಟೇ ಅಲ್ಲ- ಮುಂದೊಂದು ದಿನ ಮನುಷ್ಯನ ಬದುಕನ್ನು ದೈಹಿಕವಾಗಿಯೂ ಬದಲಿಸಬಲ್ಲದು ಎನ್ನುವುದು ಈಗಂತೂ ನಿರ್ವಿವಾದ. ಸದ್ಯ ಇವೆಲ್ಲ ಊಹೆಯೇ ಇರಬಹುದು. ಆದರೆ ಸಂಭವಿಸುತ್ತಿರುವ ಬದಲಾವಣೆ, ಅದರ ವೇಗವನ್ನು ಕಂಡರೆ ಇನ್ನೊಂದೆರಡು ತಲೆಮಾರಿನ ನಂತರ ಮನುಷ್ಯನ ಬದುಕೂ ಹಾಲಿವುಡ್ ಕಲ್ಪನಾ ವಿಜ್ಞಾನದ ಚಲನಚಿತ್ರವೇ ಆಗಬಹುದು.

ದೀರ್ಘಕಾಲ ಬದುಕುವುದು ಮನುಷ್ಯನ ಹುಚ್ಚು ಆಸೆಯೇ ಇರಬಹುದು. ಆದರೆ ಸಮರ್ಥ ದೇಹವನ್ನು ಹೊಂದಿ ಬಿಟ್ಟರಷ್ಟೇ ಬದುಕು ನಡೆದು ಬಿಡುವುದಿಲ್ಲವಲ್ಲ. ಸದ್ಯಕ್ಕಂತೂ ಮನುಷ್ಯನ ಮಿತಿ ದೈಹಿಕವಷ್ಟೇ ಅಲ್ಲ, ಮಾನಸಿಕ ಮಿತಿಯೂ ಇದೆಯಲ್ಲ. ಒಂದಿಷ್ಟು ವಯಸ್ಸಿನ ನಂತರ ನಮ್ಮೆಲ್ಲರ ಬದುಕು ಸಾವಿಗಿಂತ ಅಸಹನೀಯವೆನಿಸುತ್ತದೆ.

ಇದು ಸಹಜ. ವಾರಿಗೆಯವರೆಲ್ಲ ಸತ್ತು ನಾನಷ್ಟೇ ಉಳಿದುಕೊಳ್ಳುವ ಸ್ಥಿತಿ ಸುಲಭದ್ದಲ್ಲ. ಈಗಿರುವ ಸಮಾಜ, ವ್ಯವಸ್ಥೆ ಎಲ್ಲವೂ ಆ ಮಿತಿಗೆ ಅವಲಂಬಿತವಾಗಿಯೇ ರೂಪುಗೊಂಡಿವೆ. ಈಗಲೂ ಕೆಲವರು 100-110 ವರ್ಷ ಬದುಕಿಬಿಡುತ್ತಾರಲ್ಲ. ಅವರೆಲ್ಲರಿಗೆ ಕೊನೆಯಲ್ಲಿ ಉಳಿದಿರುವುದು ಜೀವ ಮಾತ್ರ. ಮನುಷ್ಯ ತನ್ನ ಯಾವುದೇ ಮಿತಿ ಮೀರುವುದೆಂದರೆ ಅದು ಅಷ್ಟು ಸುಲಭವಲ್ಲ.

ಒಂದಂತೂ ನಿಜ. ನಾವು ನೀವೆಲ್ಲ ನೋಡಲಾಗದ ಒಂದೆರಡು ಶತಮಾನದ ಮನುಷ್ಯನ ಬದುಕಿನ ಭವಿಷ್ಯ ಸದ್ಯಕ್ಕಂತೂ ಊಹಿಸಲೂ ಕಷ್ಟವೇ ಸೈ.