ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Roopa Gururaj Column: ಕರ್ದಮ ಮತ್ತು ದೇವಹೂತಿಯರ ತ್ಯಾಗ ಮತ್ತು ಭಕ್ತಿಯ ಮಹಾನ್‌ ಪಯಣ

ಸರಸ್ವತಿ ನದಿಯ ತೀರದಲ್ಲಿ ಕರ್ದಮ ಎಂಬ ಮಹಾನ್ ತಪಸ್ವಿ ಇದ್ದರು. ಬ್ರಹ್ಮನ ಮಾನಸ ಪುತ್ರರಾಗಿದ್ದರೂ, ಸಂಸಾರಕ್ಕಿಂತ ಆಧ್ಯಾತ್ಮಿಕ ಶಕ್ತಿಯ ಅವರಿಗೆ ಆಸಕ್ತಿ ಹೆಚ್ಚು. ಸೃಷ್ಟಿ ಕಾರ್ಯ ಕ್ಕಾಗಿ ದಂಪತಿಗಳ ಅಗತ್ಯವಿದ್ದ ಕಾರಣ, ಕರ್ದಮರು ಮಹಾವಿಷ್ಣುವನ್ನು ಕುರಿತು ಸಾವಿರ ವರ್ಷಗಳ ಕಾಲ ಕಠಿಣ ತಪಸ್ಸು ಮಾಡಿದರು.

ಕರ್ದಮ ಮತ್ತು ದೇವಹೂತಿಯರ ತ್ಯಾಗ ಮತ್ತು ಭಕ್ತಿಯ ಮಹಾನ್‌ ಪಯಣ

-

ಒಂದೊಳ್ಳೆ ಮಾತು

ಸರಸ್ವತಿ ನದಿಯ ತೀರದಲ್ಲಿ ಕರ್ದಮ ಎಂಬ ಮಹಾನ್ ತಪಸ್ವಿ ಇದ್ದರು. ಬ್ರಹ್ಮನ ಮಾನಸ ಪುತ್ರರಾಗಿದ್ದರೂ, ಸಂಸಾರಕ್ಕಿಂತ ಆಧ್ಯಾತ್ಮಿಕ ಶಕ್ತಿಯ ಅವರಿಗೆ ಆಸಕ್ತಿ ಹೆಚ್ಚು. ಸೃಷ್ಟಿ ಕಾರ್ಯಕ್ಕಾಗಿ ದಂಪತಿಗಳ ಅಗತ್ಯವಿದ್ದ ಕಾರಣ, ಕರ್ದಮರು ಮಹಾವಿಷ್ಣುವನ್ನು ಕುರಿತು ಸಾವಿರ ವರ್ಷಗಳ ಕಾಲ ಕಠಿಣ ತಪಸ್ಸು ಮಾಡಿದರು. ಅವರ ತಪಸ್ಸಿಗೆ ಮೆಚ್ಚಿದ ಶ್ರೀಹರಿ ಪ್ರತ್ಯಕ್ಷನಾಗಿ, ‘ನಿನಗೆ ಗುಣವಂತಳಾದ ಪತ್ನಿ ಮತ್ತು ಒಂಬತ್ತು ಹೆಣ್ಣುಮಕ್ಕಳು ಜನಿಸುತ್ತಾರೆ. ಅಂತಿಮವಾಗಿ ನಾನೇ ನಿನಗೆ ಮಗನಾಗಿ ಹುಟ್ಟಿ ಬರುತ್ತೇನೆ’ ಎಂದು ವರವಿತ್ತನು.

ಅದೇ ಸಮಯದಲ್ಲಿ, ಮನುವಿನ ಮಗಳಾದ ದೇವಹೂತಿ, ಸಕಲ ರಾಜ ವೈಭೋಗಗಳ ನಡುವೆ ಬೆಳೆದಿದ್ದರೂ, ಆಕೆಯ ಮನಸ್ಸು ಮಾತ್ರ ಭಕ್ತಿ ಮತ್ತು ಜ್ಞಾನದ ಕಡೆಗೆ ಇತ್ತು. ನಾರದರ ಮೂಲಕ ಕರ್ದಮರ ಮಹಿಮೆಯನ್ನು ಕೇಳಿದ್ದ ಅವಳು, ಮನಸ್ಸಿನ ಅವರನ್ನು ವರಿಸಲು ನಿರ್ಧರಿಸಿದ್ದಳು. ಮನು ಮತ್ತು ಶತರೋಪ ತಮ್ಮ ಮಗಳನ್ನು ಕರ್ದಮರ ಆಶ್ರಮ ಕ್ಕೆ ಕರೆತಂದಾಗ, ಆ ಮಹಾನ್ ತಪಸ್ವಿಯ ತೇಜಸ್ಸನ್ನು ಕಂಡು ದೇವಹೂತಿ ಮಂತ್ರಮುಗ್ಧ ಳಾದಳು.

ಕರ್ದಮರು ಮದುವೆಗೆ ಒಂದು ಕಠಿಣವಾದ ಆದರೆ ಆಧ್ಯಾತ್ಮಿಕವಾದ ಷರತ್ತನ್ನು ವಿಧಿಸಿ ದರು: ‘ನಾವು ಮದುವೆಯಾಗೋಣ, ಆದರೆ ನಮಗೆ ಒಬ್ಬ ಮಗ ಹುಟ್ಟಿದ ತಕ್ಷಣ ನಾನು ಸನ್ಯಾಸ ಸ್ವೀಕರಿಸಿ ಹೊರಟು ಹೋಗುತ್ತೇನೆ’.

ಇದನ್ನೂ ಓದಿ: Roopa Gururaj Column: ಮೃತ್ಯುವನ್ನೇ ಗೆದ್ದ ಮಾರ್ಕಂಡೇಯನ ಅಚಲ ಭಕ್ತಿ

ಅರಮನೆಯ ಸುಖವನ್ನು ನೋಡಿದ್ದ ದೇವಹೂತಿ, ತನ್ನ ಪತಿಯ ಸನ್ನಿಧಿಗಾಗಿ ಆ ಷರತ್ತಿಗೆ ಒಪ್ಪಿಕೊಂಡಳು. ರಾಜಕುಮಾರಿಯಾಗಿದ್ದ ದೇವಹೂತಿ, ಕರ್ದಮರ ಆಶ್ರಮದ ಜೀವನಕ್ಕೆ ಹೊಂದಿಕೊಂಡು ಕಠಿಣ ತಪಸ್ವಿ ಜೀವನವನ್ನು ನಡೆಸಿದಳು. ತನ್ನ ಸೌಂದರ್ಯ, ಹಸಿವು, ನಿದ್ದೆ ಎಲ್ಲವನ್ನೂ ಮರೆತು ಪತಿಯ ಸೇವೆ ಮಾಡಿದಳು.

ಆಕೆಯ ನಿಷ್ಠೆಗೆ ಒಲಿದ ಕರ್ದಮರು ತಮ್ಮ ಯೋಗಶಕ್ತಿಯಿಂದ ಆಕೆಗೆ ಅಪಾರ ಸುಖವನ್ನು ನೀಡಿದರು. ಕಾಲಾನಂತರದಲ್ಲಿ ಅವರಿಗೆ ಒಂಬತ್ತು ಪುತ್ರಿಯರು ಜನಿಸಿದರು. ಈ ಒಂಬತ್ತು ಹೆಣ್ಣುಮಕ್ಕಳನ್ನು ಒಂಬತ್ತು ಪ್ರಜಾಪತಿಗಳಿಗೆ ಮದುವೆ ಮಾಡಿಕೊಡಲಾಯಿತು.

ಅಂತಿಮವಾಗಿ ಮಹಾವಿಷ್ಣುವೇ ಅವರ ಮಗನಾಗಿ ‘ಕಪಿಲ’ ರೂಪದಲ್ಲಿ ಜನ್ಮತಾಳಿದನು. ಕಪಿಲನು ಜನಿಸಿದಾಗ ದೇವತೆಗಳೇ ಹೂಮಳೆ ಸುರಿಸಿದರು. ನಂತರ ಕರ್ದಮರು ಷರತ್ತು ಹಾಕಿದಂತೆ ಕಾಡಿಗೆ ಹೋಗುವ ಸಮಯ ಬಂದಿತ್ತು. ತನ್ನ ಪ್ರೀತಿಯ ಪತಿಯನ್ನು ಅಗಲುವ ನೋವು ದೇವಹೂತಿಯ ಕಣ್ಣಲ್ಲಿತ್ತು. ಆದರೆ ಕರ್ದಮರು ತಮ್ಮ ಮಗನಾದ ಕಪಿಲನಿಗೆ ಪ್ರದಕ್ಷಿಣೆ ಹಾಕಿ, ಸಂಸಾರದ ಬಂಧನದಿಂದ ಮುಕ್ತಿ ಪಡೆಯಲು ಕಾಡಿಗೆ ತೆರಳಿದರು.

ಇದು ದೇವಹೂತಿಗೆ ಅತ್ಯಂತ ಕಠಿಣ ಸಮಯವಾಗಿತ್ತು. ತನ್ನ ಪತಿ ಹೋದ ನಂತರ ಅವಳು ದುಃಖಿತಳಾಗಲಿಲ್ಲ, ಬದಲಾಗಿ ತನ್ನ ಮಗನಾದ ಕಪಿಲನ ಬಳಿ ಸಾಗಿ, ‘ನನಗೆ ಜನನ-ಮರಣಗಳ ಚಕ್ರದಿಂದ ಮುಕ್ತಿ ಪಡೆಯುವ ಹಾದಿಯನ್ನು ತೋರಿಸು’ ಎಂದು ಕೇಳಿಕೊಂಡಳು.

ಕಪಿಲಮುನಿಯು ತನ್ನ ತಾಯಿಗೆ ‘ಸಾಂಖ್ಯ ಶಾಸ್ತ್ರ’ ಮತ್ತು ಭಕ್ತಿಯ ರಹಸ್ಯವನ್ನು ಬೋಧಿಸಿ ದನು. ಮಗನ ಬೋಧನೆಯಿಂದ ದೇವಹೂತಿಯು ಪರಮ ಜ್ಞಾನವನ್ನು ಪಡೆದು ಸಿದ್ಧಿ ಯನ್ನು ಹೊಂದಿದಳು. ಈ ಕಥೆಯು ಕೇವಲ ದಂಪತಿಗಳ ಪ್ರೇಮವನ್ನಷ್ಟೇ ಅಲ್ಲದೆ, ಭಕ್ತಿ, ತ್ಯಾಗ ಮತ್ತು ಪರಮಾತ್ಮನ ಸಾಕ್ಷಾತ್ಕಾರದ ಹಾದಿಯನ್ನು ನಮಗೆ ತೋರಿಸಿ ಕೊಡುತ್ತದೆ.

ಬದುಕಿನಲ್ಲಿ ಕೆಲವೊಮ್ಮೆ ನಾವಂದುಕೊಂಡಂತೆ ಎಲ್ಲವೂ ನಡೆಯುವುದಿಲ್ಲ. ಕೆಲವು ಸಂತೋಷಗಳಂತೂ ಷರತ್ತಿನೊಡನೆ ಬರುತ್ತವೆ. ಆಗ ಎಲ್ಲವನ್ನೂ ಸಮಾನವಾಗಿ ಸ್ವೀಕರಿ ಸುವ ಸಮಚಿತ್ತವನ್ನು ಬೆಳೆಸಿಕೊಳ್ಳಬೇಕು. ದಾಂಪತ್ಯದಲ್ಲಿ ಗಂಡ-ಹೆಂಡತಿಯ ಮಧ್ಯೆ ಅನ್ಯೋನ್ಯತೆ ಇದ್ದಾಗ ಎಂಥದ್ದೇ ಪರಿಸ್ಥಿತಿಯನ್ನು ನಿಭಾಯಿಸುವ ಶಕ್ತಿ ಮೂಡುತ್ತದೆ.

ಒಬ್ಬರ ನಿರ್ಧಾರಗಳನ್ನು ಮತ್ತೊಬ್ಬರು ಗೌರವಿಸಿ ಪರಿಸ್ಥಿತಿಗೆ ತಕ್ಕಂತೆ ನಡೆದುಕೊಂಡಾಗ ದಾಂಪತ್ಯದಲ್ಲಿ ಸೌಹಾರ್ದವು ಇರುತ್ತದೆ. ಒಳ್ಳೆಯ ಸಂಸ್ಕಾರವಂತ, ಯೋಗ್ಯ ಮಕ್ಕಳನ್ನು ಬೆಳೆಸಿದಾಗ ನಾಳೆ ಅವರು ಕೂಡ ನಮಗೆ ಬೆಳಕಾಗಿ ಮುಂದೆ ದಾರಿ ತೋರುತ್ತಾರೆ. ಆದ್ದರಿಂದಲೇ ಇಂದಿನ ನಮ್ಮ ಜವಾಬ್ದಾರಿಗಳನ್ನ ಪ್ರಾಮಾಣಿಕವಾಗಿ ಮಾಡಿದಾಗ ಮಾತ್ರ ನಾಳಿನ ಬದುಕು ಬೆಳಕಾಗುವುದು ಎಂಬುದನ್ನು ಮರೆಯದಿರೋಣ...