ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

250 Years for USA: ಜಸ್‌ ಸೋಲಿ ಎಂಬ ಮಾನವೀಯತೆ: ‌ಅಮೆರಿಕದಲ್ಲಿ ಹುಟ್ಟಿದವರೆಲ್ಲ ಅಮೆರಿಕನ್ನರೇ ಎಂದ ಕೋರ್ಟ್

ಅಮೆರಿಕದ ಸುಪ್ರೀಂ ಕೋರ್ಟ್‌ನಲ್ಲಿ ನಡೆದ ಈ ಐತಿಹಾಸಿಕ ವಿಚಾರಣೆಯಲ್ಲಿ ‘ಜಸ್ ಸೋಲಿ’ (Jus soli) ಎನ್ನುವ ಸಾಂವಿಧಾನಿಕ ಮತ್ತು ಕಾನೂನಾತ್ಮಕ ಪದವನ್ನು ಬಹುಮತದ ತೀರ್ಪು ಬರೆದ ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್, ಸೋನಿಯಾ ಸೊಟೊ ಮೇಯರ್, ಎಲೆನಾ ಕಗನ್ ಮತ್ತು ಕೆಟಾಂಜಿ ಬ್ರೌನ್ ಜಾಕ್ಸನ್ ಅವರು ವ್ಯಾಪಕವಾಗಿ ಉಲ್ಲೇಖಿಸಿದ್ದಾರೆ.

ಅಮೆರಿಕದಲ್ಲಿ ಹುಟ್ಟಿದವರೆಲ್ಲ ಅಮೆರಿಕನ್ನರೇ ಎಂದ ಕೋರ್ಟ್

-

Profile
Ashok Nayak Jul 4, 2026 8:04 AM

ನಾರಾಯಣ ಯಾಜಿ

ಜೂನ್ 30ರಂದು ಅಮೆರಿಕದ ಸುಪ್ರೀಂ ಕೋರ್ಟ್ ಮತ್ತೊಮ್ಮೆ ಅಮೆರಿಕದ ಸಂವಿಧಾನದ 14ನೆಯ ತಿದ್ದುಪಡಿಯನ್ನು ಎತ್ತಿ ಹಿಡಿಯುವ ಮೂಲಕ ಅಧ್ಯಕ್ಷ ಟ್ರಂಪ್ ಅಧಿಕಾರಕ್ಕೆ ಬಂದ ಮೊದಲ ದಿನವೇ ಹೊರಡಿಸಿದ, ಅಮೆರಿಕದಲ್ಲಿ ಜನಿಸಿದ ಮಾತ್ರಕ್ಕೆ ಪೌರತ್ವ ಸಿಗಲಾರದು ಎನ್ನುವ ಕಾರ್ಯ ನಿರ್ವಾಹಕ ಆದೇಶವನ್ನು 6-3 ಬಹುಮತದಿಂದ ರದ್ದುಗೊಳಿಸಿದೆ. ಈ ತೀರ್ಪು ಅನೇಕ ಅನಿವಾಸಿ ಗಳಿಗೆ ಸಮಾಧಾನದ ನಿಟ್ಟಿಸಿರು ತಂದಿದೆ.

ಅಮೆರಿಕದ ಸುಪ್ರೀಂ ಕೋರ್ಟ್‌ನಲ್ಲಿ ನಡೆದ ಈ ಐತಿಹಾಸಿಕ ವಿಚಾರಣೆಯಲ್ಲಿ ‘ಜಸ್ ಸೋಲಿ’ (Jus soli) ಎನ್ನುವ ಸಾಂವಿಧಾನಿಕ ಮತ್ತು ಕಾನೂನಾತ್ಮಕ ಪದವನ್ನು ಬಹುಮತದ ತೀರ್ಪು ಬರೆದ ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್, ಸೋನಿಯಾ ಸೊಟೊ ಮೇಯರ್, ಎಲೆನಾ ಕಗನ್ ಮತ್ತು ಕೆಟಾಂಜಿ ಬ್ರೌನ್ ಜಾಕ್ಸನ್ ಅವರು ವ್ಯಾಪಕವಾಗಿ ಉಲ್ಲೇಖಿಸಿದ್ದಾರೆ.

ಅಧ್ಯಕ್ಷ ಟ್ರಂಪ್ ಅವರ ಆದೇಶವನ್ನು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಿದಾಗ ಮೂಲಭೂತವಾಗಿ ಅಲ್ಲಿನ ಸಂವಿಧಾನದ 13 ಮತ್ತು 14ನೆಯ ತಿದ್ದುಪಡಿ ಬಹಳ ಮಹತ್ವದ್ದಾಗಿತ್ತು. ಜೊತೆಗೆ ಇದಕ್ಕೆ ಕಾರಣನಾದ ಅಬ್ರಹಾಂ ಲಿಂಕನ್ ಎನ್ನುವ ಮಹಾಪುರುಷ.

ಇದನ್ನೂ ಓದಿ: 250 Years for USA: ಶಕ್ತಿವಂತನ ಸ್ವಾತಂತ್ರ್ಯ ದಿನ ಇಂದು

ಜಸ್ ಸೋಲಿ’ ನೆಲದ ಹಕ್ಕಿನ ಸಿದ್ಧಾಂತ: ಯಾವ ಮಗು ಯಾವ ದೇಶದ ಮಣ್ಣಿನಲ್ಲಿ, ಆ ದೇಶದ ಭೌಗೋಳಿಕ ವ್ಯಾಪ್ತಿಯೊಳಗೆ ಜನಿಸುತ್ತದೆಯೋ, ಆ ಮಗುವಿಗೆ ಆ ದೇಶದ ಪೌರತ್ವವು ಜನ್ಮಸಿದ್ಧ ವಾಗಿ, ಅತ್ಯಂತ ಸಹಜವಾಗಿ ಒಲಿದು ಬರುತ್ತದೆ. ಇಲ್ಲಿ ಪೋಷಕರ ಧರ್ಮ, ಜಾತಿ, ರಾಷ್ಟ್ರೀಯತೆ ಅಥವಾ ಅವರ ವಲಸೆಯ ಕಾನೂನು ಸ್ಥಿತಿಗತಿಗಳು ಮುಖ್ಯವಾಗುವುದಿಲ್ಲ. ಮಗು ಜನಿಸಿದ ‘ಆ ನೆಲ’ವೇ ಇಲ್ಲಿ ಪರಮೋಚ್ಚ ಸಾಕ್ಷಿ. ಈ ಕಾಯ್ದೆಯನ್ನು ತರುವಲ್ಲಿ ಅಬ್ರಹಾಂ ಲಿಂಕನ್ ಮೊದಲು ಉಪಕ್ರಮಿಸಿದ್ದು. ಇದಕ್ಕೆ ಕಾರಣವಾಗಿದ್ದು 1857ರಲ್ಲಿ ಅಮೆರಿಕದ ಸರ್ವೋಚ್ಚ ನ್ಯಾಯಾ ಲಯವು ‘ಡ್ರೆಡ್ ಸ್ಕಾಟ್’ (Dred Scott) ಎಂಬ ಅತ್ಯಂತ ವಿವಾದಾತ್ಮಕ ತೀರ್ಪನ್ನು ನೀಡಿತ್ತು. ಆ ತೀರ್ಪಿನ ಪ್ರಕಾರ, ಆಫ್ರಿಕನ್ ಮೂಲದ ಕಪ್ಪು ವರ್ಣೀಯರು ಅಮೆರಿಕದ ಮಣ್ಣಿನಲ್ಲಿಯೇ ಹುಟ್ಟಿದ್ದರೂ ಅವರು ಈ ದೇಶದ ಪ್ರಜೆಗಳಾಗಲು ಸಾಧ್ಯವೇ ಇಲ್ಲ ಎಂದು ಕಠೋರವಾಗಿ ಹೇಳಿತ್ತು. ‌

ನ್ಯಾಯಾಂಗವೇ ನೀಡಿದ ಈ ಜನಾಂಗೀಯ ತಾರತಮ್ಯದ ತೀರ್ಪಿನ ವಿರುದ್ಧ ಮಾನವ ಹಕ್ಕುಗಳ ಕಾರ್ಯಕರ್ತರು ತಿರುಗಿಬಿದ್ದರು. ಇದನ್ನು ತೊಡೆದು ಹಾಕಲು ಕಟಿಬದ್ಧನಾದವನೇ ಅಧ್ಯಕ್ಷನಾಗಿ ಆಯ್ಕೆಯಾದ ಅಬ್ರಹಾಂ ಲಿಂಕನ್.

ಸಂವಿಧಾನದ 13ನೆ ತಿದ್ದುಪಡಿಯ ಮೂಲಕ ಗುಲಾಮಿ ಪದ್ಧತಿಯನ್ನು ಶಾಶ್ವತವಾಗಿ ಕೊನೆಗಾಣಿ ಸಲು ಆತ ಯತ್ನಿಸಿದ. ಇದೇ ಕಾರಣಕ್ಕಾಗಿ 1861-65ರವರೆಗಿನ ನಾಲ್ಕು ವರ್ಷ ಅಮೆರಿಕದಲ್ಲಿ ಅಂತರ್ಯುದ್ಧವೂ ಆಗಿ ಲಿಂಕನ್ ವಿಜಯಿಯಾದರೂ 13ನೆ ತಿದ್ದುಪಡಿ ಜಾರಿಗೊಳ್ಳುವ ಮೊದಲೇ ಆತನ ಹತ್ಯೆ ಮಾಡಲಾಯಿತು. ಇಷ್ಟಾದರೂ ಉಪಾಧ್ಯಕ್ಷನಾಗಿ ನಂತರ ಅಧ್ಯಕ್ಷನಾಗಿದ್ದ ಆಂಡ್ರ್ಯೂ ಜಾನ್ಸನ್, ಧೃತಿಗೆಡದೇ ಡಿಸೆಂಬರ್ ತಿಂಗಳ 6, 1865ರಂದು ಕಾಯಿದೆಯಾಗುವಂತೆ ನೋಡಿಕೊಂಡ. ಅಲ್ಲಿಂದ ಅಮೆರಿಕದಲ್ಲಿ ಗುಲಾಮಿ ಪದ್ಧತಿ ನಿಷೇಧ ಶಾಶ್ವತವಾಗಿ ಜಾರಿಗೆ ಬಂದಿತು.

ಗುಲಾಮಿ ಪದ್ಧತಿ ಶಾಶ್ವತವಾಗಿ ನಿಷೇಧವಾದರೂ ಕಪ್ಪುವರ್ಣೀಯರಿಗೆ ಪೌರತ್ವವನ್ನು ಕೊಡುವ ವಿಷಯದಲ್ಲಿ ಗೊಂದಲ ಉಂಟಾದವು. ಅದನ್ನು ನಿವಾರಿಸಲು ಆಂಡ್ರ್ಯೂ ಜಾನ್ಸನ್ ಜೂನ್ 13, 1866ರಂದು ಅಮೆರಿಕದಲ್ಲಿ ಜನಸಿದ ಎಲ್ಲರಿಗೂ ಸಮಾನ ಪೌರತ್ವವನ್ನು ಕೊಡುವ ಉದ್ದೇಶದಿಂದ ಸಂವಿಧಾನಕ್ಕೆ 14ನೆಯ ತಿದ್ದುಪಡಿಯನ್ನು ತರಲು ಉಪಕ್ರಮಿಸುತ್ತಾನೆ.

ಇದೂ ಸಹ ಚರ್ಚೆಗಳಾಗಿ ನಂತರದಲ್ಲಿ 1868ರ ಜುಲೈ ತಿಂಗಳ 9ರಂದು ಜಾರಿಗೆ ಬಂದಿತು. ಅದರ ಸೆಕ್ಷನ್ 1ರ ಪ್ರಕಾರ All persons born or naturalized in the United States, and subject to the jurisdiction thereof, are citizens of the United States and of the state wherein they reside ಎಂದಿದೆ.

ಇದೊಂದು ನಿರ್ಣಾಯಕ ಕಾನೂನಿನ ಪ್ರತಿಕ್ರಿಯೆಯಾಗಿದ್ದು, ಬಳಸಿದ ಭಾಷೆಯು ನೇರವಾಗಿ ಅಮೆರಿಕದಲ್ಲಿ ಜನಿಸಿದ ಎಲ್ಲರಿಗೂ ಜನ್ಮಕಾರಣ ಪೌರತ್ವವನ್ನು ನೀಡಿದೆ. ಯಾರೆಲ್ಲಾ ಗುಲಾಮರಾಗಿ ಬದುಕನ್ನು ಸವೆಸಿದ್ದರೋ ಆ ಕ್ರೂರಪರಂಪರೆಯನ್ನು ಸ್ಪಷ್ಟವಾಗಿ ನಿಷೇಧಿಸಿ ಅವರ ನಾಗರಿಕ ಹಕ್ಕುಗಳನ್ನು ರಕ್ಷಿಸಿದೆ. ಈ ಕಾರಣದಿಂದ ಅಮೆರಿಕ ಸಂವಿಧಾನದಲ್ಲಿ 13 ಮತ್ತು 14ನೆಯ ತಿದ್ದುಪಡಿ ಯನ್ನು ವ್ಯಕ್ತಿ ಸ್ವಾತಂತ್ರ್ಯದ ದೃಷ್ಟಿಯಿಂದ ಮಹತ್ವದ ಮೈಲಿಗಲ್ಲಾಗಿ ಪರಿಗಣಿಸುತ್ತಾರೆ.

ಅಮೆರಿಕದ ಗಡಿಯೊಳಗೆ ಜನಿಸುವ ಪ್ರತಿಯೊಬ್ಬ ವ್ಯಕ್ತಿಯೂ ಈ ದೇಶದ ಸಾರ್ವಭೌಮ ಪ್ರಜೆ ಎಂದು ಅಧಿಕೃತವಾಗಿ ಹೇಳಿರುವುದೇ ‘ಜಸ್ಟ್‌ ಸೋಲಿ’ ಅಥವಾ ಮಣ್ಣಿನ ಹಕ್ಕು. ಈ ತತ್ವವನ್ನು ಸಂವಿಧಾನದ ನಿಯಮವನ್ನಾಗಿ ಅಧಿಕೃತವಾಗಿ ಘೋಷಿಸಲಾಯಿತು.

ವಾಂಗ್ ಕಿಮ್ ಆರ್ಕ್ ಎನ್ನುವ ಹುಡುಗನ ಪೌರತ್ವ: ಇನ್ನೊಂದು ಮಹತ್ವದ ಅಂಶವನ್ನು ನ್ಯಾಯಾಧೀಶರು ಉಲ್ಲೇಖಿಸಿದ್ದು ವಾಂಗ್ ಕಿಮ್ ಆರ್ಕ್ ಎನ್ನುವ ಚೀನಾ ಮೂಲದ ಹುಡುಗನ ಪೌರತ್ವದ ವಿಚಾರವಾಗಿ. ಜಸ್ ಸೋಲಿ ಎನ್ನುವ ನಿಯಮ ಇನ್ನಷ್ಟು ಬಿಗಿಯಾಗಲು ಕಾರಣವೇ ಚೈನಾಮೂಲದ ಈ ಹುಡುಗ.

14ನೇ ತಿದ್ದುಪಡಿಯ ವ್ಯಾಪ್ತಿ ಸ್ಪಷ್ಟವಾದರೂ, ಇದರ ಅರ್ಥೈಸುವಿಕೆಯು ವಿವಾದದಿಂದ ಹೊರತಾ‌ ಗಿರ‌ಲಿಲ್ಲ. ಕೆಲವೊಂದಿಷ್ಟು ಕಾನೂನು ತಜ್ಞರು 14ನೆಯ ತಿದ್ದುಪಡಿ ವಿದೇಶಿ ನಾಗರಿಕರಾಗಲಿ, ಅಕ್ರಮ ವಲಸೆ ಬಂದವರ ಮಕ್ಕಳಿಗೆ ಅನ್ವಯಿಸುವುದಿಲ್ಲ ಎಂದು ವಾದ ಮಾಡುತ್ತಲೇ ಬಂದಿದ್ದಾರೆ. ಈ ಕುರಿತು ಮೊದಲನೇ ಕಾನೂನು ಸವಾಲು ಎದುರಾದದ್ದು 1898ರಲ್ಲಿ. ಯುನೈಟೆಡ್ ಸ್ಟೇಟ್ಸ್ ವರ್ಸಸ್ ವಾಂಗ್ ಕಿಮ್ ಆರ್ಕ್ ಎಂದು ಪ್ರಸಿದ್ಧವಾಗಿದೆ. ವಾಂಗ್ ಕಿಮ್ ಆರ್ಕ್ ಎನ್ನುವಾತ ಚೀನಾದ ವಲಸೆಗಾರನೋರ್ವನ ಮಗ. 1873ರಲ್ಲಿ ಸಾನ್ ಫ್ರಾನ್ಸಿಸ್ಕೋದಲ್ಲಿ ಹುಟ್ಟಿದ್ದ. ಒಮ್ಮೆ ಚೀನಾಗೆ ತೆರಳಿ ಪುನಃ ಅಮೆರಿಕಕ್ಕೆ ವಾಪಾಸ್ ಬಂದಾಗ ಆತನಿಗೆ ಅಮೆರಿಕದ ಪ್ರಜೆ ಅಲ್ಲವೆನ್ನುವ ಕಾರಣ ನೀಡಿ ದೇಶದೊಳಗೆ ಪ್ರವೇಶ ನಿರಾಕರಿಸಲಾಯಿತು.

ಈ ವಿಷಯ ಸುಪ್ರೀಂ ಕೋರ್ಟಿನ ಮೆಟ್ಟಿಲನ್ನು ಹತ್ತಿತು. ಪರಿಣಾಮವಾಗಿ 1882ರಲ್ಲಿ The Chinese Exclusion Act 1882 ಮೂಲಕವಾಗಿ ಚೀನಾದ ನುರಿತ ಮತ್ತು ನುರಿತವರಲ್ಲದ ಉದ್ಯೋಗಿಗಳನ್ನೂ ಸೇರಿಸಿ ಅಮೆರಿಕದೊಳಗೆ ಪ್ರವೇಶವನ್ನು ಹತ್ತು ವರ್ಷಗಳಿಗೆ ಅನ್ವಯಿಸುವಂತೆ ನಿರ್ಭಂಧಿಸಲಾಗಿತ್ತು. (ಇದನ್ನು ವಿಸ್ತರಿಸುತ್ತಾ 1943ರಲ್ಲಿ ದ್ವಿತೀಯ ಮಹಾಯುದ್ಧದ ವೇಳೆ ಯಾವಾಗ ಚೀನಾ ಅಮೆರಿಕಕ್ಕೆ ಅನಿವಾರ್ಯವಾಯಿತೋ ಆಗ ರದ್ದುಗೊಳಿಸಲಾಗಿತ್ತು).

Chinese Exclusion Act 1882 ಜಾರಿಯಲ್ಲಿರುವಾಗಲೇ ಅದರ ಮತ್ತು ಇನ್ನಿತರ ಎಲ್ಲ ವಿವೇಚಿಸಿಯೇ ಕಾನೂನು ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲು ಮತ್ತು ದೂರಗಾಮಿ ಪರಿಣಾಮವನ್ನು ಬೀರಬಲ್ಲ ತೀರ್ಪನ್ನು 1898ರಲ್ಲಿ ಅಮೆರಿಕದ ಸುಪ್ರೀಂ ಕೋರ್ಟಿನ ನ್ಯಾಯಾಧೀಶರಾದ ಹೋರಸ್ ಗ್ರೇ ಎನ್ನುವವರ ನೇತೃತ್ವದಲ್ಲಿ ವ್ಯಾಪಕವಾದ ಬಹುಮತದೊಂದಿಗೆ ವಾಂಗ್ ಕಿಮ್ ಆರ್ಕ್‌ನ ಪರವಾಗಿ ನೀಡಲಾಯಿತು.

ಅಮೆರಿಕದಲ್ಲಿ ಜನಿಸಿದ ಯಾರಿಗಾದರೂ ಜನ್ಮಕಾರಣ ಪೌರತ್ವ, ಅಂಥವರ ಪಾಲಕರ ಪೌರತ್ವ ಯಾವುದೇ ಇರಲಿ, 14ನೆಯ ತಿದ್ದುಪಡಿಯ ಪ್ರಕಾರ ಅನ್ವಯವಾಗುತ್ತದೆ. ವಿದೇಶಿ ರಾಜತಾಂತ್ರಿಕರಿಗೆ ಅಥವಾ ಶತ್ರು ಸೈನಿಕರಿಗೆ ಜನಿಸಿದ ಮಕ್ಕಳನ್ನು ಹೊರತುಪಡಿಸಿ ಉಳಿದವರಿಗೆ ಅನ್ವಯಿಸುವ ವಿಶಾಲವಾದ ಅಂತರ್ಗತ ಆಶಯವನ್ನು 14ನೆಯ ತಿದ್ದುಪಡಿ ಹೊಂದಿದೆ ಹಾಗೂ ಯುನೈಟೆಡ್ ಸ್ಟೇಟ್ಸನಲ್ಲಿ ಜನಿಸಿದ ಎಲ್ಲಾ ಮಕ್ಕಳಿಗೆ ಅವರ ಜನ್ಮಸಿದ್ಧ ಪೌರತ್ವವನ್ನು ರಕ್ಷಿಸಲಾಗಿದೆ ಎನ್ನುವು ದನ್ನು ಆ ತಿದ್ದುಪಡಿ ಖಚಿತಗೊಳಿಸಿದೆ ಎಂದು ವಿವರಣೆಯನ್ನು ನೀಡಿದರು.

ಮೇಲಿನ ಎರಡೂ ತೀರ್ಪನ್ನು ವಿವೇಚಿಸಿಯೇ ಸುಪ್ರೀಂ ಕೋರ್ಟ್ ಇದೀಗ ತೀರ್ಪು ನೀಡಿರುವುದು. ಇದಕ್ಕೆಲ್ಲ ಕಾರಣ ಅಮೆರಿಕ ಇತಿಹಾಸದಲ್ಲಿ ಅತ್ಯುತ್ತಮ ಅಧ್ಯಕ್ಷನಾಗಿದ್ದ ಅಬ್ರಹಾಂ ಲಿಂಕನ್ ತಂದ ಜಸ್ ಸೋಲಿ ಎನ್ನುವ ಮಾನವೀಯತೆ.