Srivathsa Joshi Column: ಚರಣಶೃಂಗರಹಿತ ಸ್ತೋತ್ರವೂ ಪತಂಜಲಿಯ ಕಥೆಯೂ !
ಸಾಂಪ್ರದಾಯಿಕ ರಂಗಪ್ರವೇಶದಂತೆಯೇ, ಆದರೆ ಲೈವ್ ಸಂಗೀತ ತಂಡ ಇರಲಿಲ್ಲ, ಧ್ವನಿಮುದ್ರಿತ ಆಡಿಯೊಟ್ರ್ಯಾಕ್ಸ್ ಅಷ್ಟೇ ವ್ಯತ್ಯಾಸ. ಗುರು-ಶಿಷ್ಯೆ ಇಬ್ಬರೂ ಮೈಸೂರು ಮೂಲದ ಕನ್ನಡಿತಿಯರು ಅಂದ ಮೇಲೆ ಒಂದು ಮಟ್ಟದ ವಿಶೇಷ ಸಾಂಸ್ಕೃತಿಕ ಸೌರಭ ಅಲ್ಲಿ ಮೇಳೈಸಿತ್ತೆಂದು ನೀವು ಸುಲಭವಾಗಿ ಊಹಿಸಬಹುದು.
-
ತಿಳಿರುತೋರಣ
ಅಗೆವ ಬುದ್ಧಿಗೆ ಅನಂತ ಅವಕಾಶ... ಹೊಳೆದದ್ದು ತಾರೆ, ಉಳಿದದ್ದು ಆಕಾಶ... ಹೆಕ್ಕಿದ್ದು ಮುತ್ತು, ಮಿಕ್ಕಿದ್ದು ಸಾಗರ... ಮಲ್ಲಿಗೆಕವಿ ಕೆ.ಎಸ್. ನರಸಿಂಹಸ್ವಾಮಿಯವರ ಈ ಪದಪುಂಜಗಳು ಬಲು ಅರ್ಥಗರ್ಭಿತ. ಭಾಷಣಗಳಲ್ಲಿ, ಬರೆವಣಿಗೆಯಲ್ಲಿ ಆಗಾಗ ಉದ್ಧೃತ. ಸಾಮಾನ್ಯವಾಗಿ ವ್ಯಕ್ತಿ- ವ್ಯಕ್ತಿತ್ವ ಗಳ ಪ್ರಶಂಸೆಯ ಸಂದರ್ಭದಲ್ಲಿ ಇವುಗಳನ್ನು ಬಳಸಲಾಗುತ್ತದಾದರೂ ಅದಕ್ಕಿಂತ ಮಿಗಿಲಾಗಿ ನಮ್ಮ ಸನಾತನ ಸಂಸ್ಕೃತಿ, ಧರ್ಮ, ಪರಂಪರೆ, ಆಚಾರ-ವಿಚಾರಗಳ ವೈಶಾಲ್ಯವನ್ನು, ಅಗಾಧತೆ ಯನ್ನು ಬಣ್ಣಿಸುವಾಗ ಇವು ಇನ್ನಷ್ಟು ಸೂಕ್ತವೆನಿಸುತ್ತವೆ.
ವಿಪರ್ಯಾಸವೆಂದರೆ ನನ್ನಿಂದ ಮೊದಲ್ಗೊಂಡು ನಮ್ಮಲ್ಲಿ ಹೆಚ್ಚಿನವರಿಗೆ ಅಗೆವ ಬುದ್ಧಿಯೂ ಇರುವುದಿಲ್ಲ; ಬುದ್ಧಿ ಅಷ್ಟಿಷ್ಟು ಇದ್ದರೂ ಅಗೆಯುವುದಕ್ಕೆ ಸಮಯ, ವ್ಯವಧಾನಗಳು ಇರುವುದಿಲ್ಲ; ಒಂದುವೇಳೆ ಅವುಗಳನ್ನು ಹೇಗೋ ಹೊಂದಿಸಿಕೊಂಡರೂ ಬೇರೆ ಅಗತ್ಯವಾದ ಸಂಪನ್ಮೂಲಗಳ ಲಭ್ಯತೆ ಇರುವುದಿಲ್ಲ.
ಹಾಗಾಗಿ ಬೌದ್ಧಿಕವಾಗಿ ಆರಕ್ಕೇರದ ಮೂರಕ್ಕಿಳಿಯದ ಯಥಾಸ್ಥಿತಿಯಲ್ಲಿ ಮುಂದುವರೆಯುವುದು ಅನಿವಾರ್ಯವಾಗುತ್ತದೆ. ಪರಂತು ಚೂರೇ ಚೂರು ಬುದ್ಧಿಯನ್ನು ಉಪಯೋಗಿಸಿ, ಸ್ವಲ್ಪೇಸ್ವಲ್ಪ ಸಮಯವನ್ನೂ ವ್ಯಯಿಸಿ, ಸೀಮಿತ ಸಂಪನ್ಮೂಲಗಳನ್ನೇ ಬಳಸಿಕೊಂಡು ಅಗೆದದ್ದೇ ಆದರೆ ಎಂತೆಂಥ ಸೋಜಿಗದ ಸಂಗತಿಗಳಅನಾವರಣವಾಗುತ್ತದೆ, ಥಳಥಳ ಹೊಳೆವ ಜ್ಞಾನನಿಧಿ ಸಿಗುತ್ತದೆ ಎಂಬುದಕ್ಕೆ ಒಂದು ಚಿಕ್ಕ ನಿದರ್ಶನವನ್ನು ಇಂದು ನಿಮ್ಮ ಮುಂದಿಡುವವನಿದ್ದೇನೆ.
ಅದಾದದ್ದು ಹೀಗೆ. ಕಳೆದ ಶನಿವಾರ ಇಲ್ಲಿ ನಮ್ಮ ವಾಷಿಂಗ್ಟನ್ ಡಿಸಿ ಪ್ರದೇಶದ ಚಿನ್ಮಯ ಮಿಷನ್ ಸಭಾಂಗಣದಲ್ಲಿ ಸುಂದರವಾದೊಂದು ಭರತನಾಟ್ಯ ಪ್ರದರ್ಶನ ನಡೆಯಿತು. ಇಲ್ಲಿಯ ‘ಸೃಷ್ಟಿ ಸ್ಕೂಲ್ ಆಫ್ ಡ್ಯಾನ್ಸ್‌ನ ನೃತ್ಯಗುರು ವಿದುಷಿ ವಾಣಿ ರಮೇಶ್ ಅವರಿಂದ ನೃತ್ಯ ಕಲಿತ ಶಿಲ್ಪಾ ಶ್ರೀಕಂಠ ಅವರ ಕಲಾಸಮರ್ಪಣ ಕಾರ್ಯಕ ಮವದು.
ಸಾಂಪ್ರದಾಯಿಕ ರಂಗಪ್ರವೇಶದಂತೆಯೇ, ಆದರೆ ಲೈವ್ ಸಂಗೀತ ತಂಡ ಇರಲಿಲ್ಲ, ಧ್ವನಿಮುದ್ರಿತ ಆಡಿಯೊಟ್ರ್ಯಾಕ್ಸ್ ಅಷ್ಟೇ ವ್ಯತ್ಯಾಸ. ಗುರು-ಶಿಷ್ಯೆ ಇಬ್ಬರೂ ಮೈಸೂರು ಮೂಲದ ಕನ್ನಡಿತಿಯರು ಅಂದ ಮೇಲೆ ಒಂದು ಮಟ್ಟದ ವಿಶೇಷ ಸಾಂಸ್ಕೃತಿಕ ಸೌರಭ ಅಲ್ಲಿ ಮೇಳೈಸಿತ್ತೆಂದು ನೀವು ಸುಲಭ ವಾಗಿ ಊಹಿಸಬಹುದು.
ಇದನ್ನೂ ಓದಿ: Srivathsa Joshi Column: ಮಾವು ಹಣ್ಣುಗಳ ರಾಜನಾದರೆ ಅಮಟೆ ದಾಸೀಪುತ್ರನೇ ?
ಅಲ್ಲದೇ, ಶಿಲ್ಪಾ ಪೂರ್ಣಾವಧಿ ಐಟಿ ಉದ್ಯೋಗಿಯಾಗಿದ್ದು, ಎರಡು ಮಕ್ಕಳ ತಾಯಿಯಾದ ಮೇಲೆ ನೃತ್ಯಶಿಕ್ಷಣ ಪಡೆದು ಕಾರ್ಯಕ್ರಮ ನೀಡಿದರೆಂದರೆ ಅವರ ಅಪರಿಮಿತ ಹುಮ್ಮಸ್ಸನ್ನೂ ನೀವು ಊಹಿಸಬಹುದು. ಎರಡು ಗಂಟೆಗಳ ನೃತ್ಯಪ್ರದರ್ಶನದಲ್ಲಿ- ಕನಕದಾಸರ ಬಗೆಗೊಂದು ಪ್ರಸ್ತುತಿ, ಡಿವಿಜಿಯವರ ಅಂತಃಪುರ ಗೀತೆಗಳಿಂದ ಒಂದು, ಹೀಗೆ ವಿವಿಧ ಆಕರ್ಷಕ ಪ್ರಸ್ತುತಿಗಳಿದ್ದವು.
ವಾಣಿಯವರ ವಿದ್ಯಾರ್ಥಿನಿಯರ ಕೆಲ ರಂಗಪ್ರವೇಶಗಳನ್ನು ಈ ಹಿಂದೆಯೂ ನೋಡಿದ್ದೇನಾದ್ದ ರಿಂದ ಕನ್ನಡ ಮತ್ತು ಸಂಸ್ಕೃತ ಕೃತಿಗಳಿಗೆ ಪ್ರಾಶಸ್ತ್ಯ, ಸದಭಿರುಚಿಯ ವೈವಿಧ್ಯ ಗೊತ್ತಿದ್ದದ್ದೇ. ಹಾಗೆ ಮೊನ್ನೆಯೂ ಒಂದು ಅನನ್ಯ ಪ್ರಸ್ತುತಿ ಇತ್ತು: ಚರಣಶೃಂಗರಹಿತ ನಟರಾಜ ಸ್ತೋತ್ರ! ಪ್ರೇಕ್ಷಕರಲ್ಲಿ ಕನ್ನಡೇತರರೂ ಸಾಕಷ್ಟು ಸಂಖ್ಯೆಯಲ್ಲಿದ್ದುದರಿಂದ ಕಾರ್ಯಕ್ರಮ ನಿರೂಪಣೆ ಇಂಗ್ಲಿಷ್‌ನಲ್ಲಿ ದ್ದದ್ದು.
ವಾಣಿಯವರ ಪುತ್ರ ಭರತ್ ಅದನ್ನು ಚೆನ್ನಾಗಿ ನಿರ್ವಹಿಸಿದ್ದನು. ಸರಿ, ಈ ಚರಣಶೃಂಗರಹಿತ ಸ್ತೋತ್ರದ ನಿರೂಪಣೆಯೂ ಕುತೂಹಲಕರವಾಗಿತ್ತು. ಸ್ತೋತ್ರದ ವಿಶೇಷತೆ ಏನು, ಯಾವ ಸನ್ನಿವೇಶ ದಲ್ಲಿ ಪತಂಜಲಿ ಮಹರ್ಷಿ ಅದನ್ನು ರಚಿಸಿದ್ದು ಅಂತೆಲ್ಲ ವಿವರಣೆ. ಜತೆಗೆ ಒಂದು ಪುರಾಣಕಥೆ ಕೂಡ. ಆ ಕ್ಷಣದಲ್ಲಿ ಕಿವಿಗೆ ಬಿದ್ದದ್ದನ್ನಷ್ಟೇ ಕೇಳಿಸಿಕೊಂಡು ನೃತ್ಯವನ್ನು ವೀಕ್ಷಿಸಿದೆ. “ಸದಂಚಿತ ಮುದಂಚಿತ ನಿಕುಂಚಿತ ಪದಂ ಝಲಝಲಂಚಲಿತ ಮಂಜುಕಟಕಮ್| ಪತಂಜಲಿ ದೃಗಂಜನ ಮನಂಜನ ಮಚಂಚಲಪದಂ ಜನನ ಭಂಜನಕರಮ್..." ಅಂತ ಸ್ತೋತ್ರ ಸಾಹಿತ್ಯ, ಶಿವತಾಂಡವ ನೃತ್ಯಕ್ಕೆ ತಕ್ಕುದಾದ ಹಿನ್ನೆಲೆ ಸಂಗೀತದ ಅಬ್ಬರದಲ್ಲಿ ಅಷ್ಟೇನೂ ಅರ್ಥವಾಗಲಿಲ್ಲ.
ಕಾರ್ಯಕ್ರಮ ಮುಗಿದ ಮೇಲೆ ವಾಣಿಯವರನ್ನು ಮಾತಾಡಿಸಿ, “ಚರಣಶೃಂಗರಹಿತ ಸ್ತೋತ್ರ ಅಂತ ನಾನು ಈವತ್ತೇ ಮೊದಲಬಾರಿಗೆ ಕೇಳ್ತಿರೋದು. ಅದರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ಕುತೂಹಲ ಮೂಡಿದೆ. ಭರತ್‌ನ ನಿರೂಪ ಣೆಯಿಂದ ಆ ಭಾಗವನ್ನಷ್ಟೇ ನನಗೆ ವಾಟ್ಸ್ಯಾಪ್‌ನಲ್ಲಿ ಕಳುಹಿಸು ವಿರಾ?" ಎಂದು ಕೇಳಿದೆ.
ಇಂಥ ವಿಚಾರಗಳಲ್ಲಿ ನನ್ನ ಆಸಕ್ತಿ ಅವರಿಗೆ ಗೊತ್ತಿರುವುದರಿಂದ ಸಂತೋಷದಿಂದ ಒಪ್ಪಿ ಕಳುಹಿಸಿ ದರು. ಅದರ ಸಾರಾಂಶ ಕನ್ನಡದಲ್ಲಿ ಹೀಗೆ: “ಚರಣಶೃಂಗರಹಿತ ನಟರಾಜ ಸ್ತೋತ್ರ ಅಥವಾ ಶಂಭು ನಟನಂ ಎಂದು ಕರೆಯಲಾಗುವ ಈ ವಿಶಿಷ್ಟ ರಚನೆಯಲ್ಲಿ, ಶಿವಭಕ್ತನಾದ ಮಹರ್ಷಿ ಪತಂಜಲಿ, ಪರಮೇಶ್ವರನ ಆನಂದ ತಾಂಡವವನ್ನು ವರ್ಣಿಸುತ್ತಾನೆ.
ಪತಂಜಲಿಯನ್ನು ಆದಿಶೇಷನ ಅವತಾರವೆಂದು ನಂಬಲಾಗುತ್ತದೆ. ಅವನಿಗೆ ಮನುಷ್ಯನ ಪರ್ವತಕ್ಕೆ ಮುಖವಿದ್ದು, ದೇಹದ ಕೆಳಭಾಗವು ಹಾವಿನಂತೆ ಇತ್ತು. ಶಿವತಾಂಡವ ನೃತ್ಯವನ್ನು ನೋಡಿ ಕಣ್ತುಂಬಿಕೊಳ್ಳಬೇಕೆಂಬ ಆಶಯದಿಂದ, ಪತಂಜಲಿ ಮಹರ್ಷಿ ಮತ್ತೊಬ್ಬ ಋಷಿಯಾದ ವ್ಯಾಘ್ರ ಪಾದನೊಂದಿಗೆ ಕೈಲಾಸ ಯಾತ್ರೆ ಕೈಗೊಂಡನು. ವ್ಯಾಘ್ರಪಾದನಿಗೆ ಹುಲಿಯ ಕಾಲುಗಳಿದ್ದವು. ಪತಂಜಲಿಗೆ ಕಾಲುಗಳಿಲ್ಲದ ಕಾರಣ, ನಿಧಾನವಾಗಿ ತೆವಳಿಕೊಂಡು ಹೋಗಬೇಕಾಯಿತು.
ಆದರೆ, ವ್ಯಾಘ್ರಪಾದ ಹುಲಿಯ ಕಾಲುಗಳಿಂ ದಾಗಿ ವೇಗವಾಗಿ ಕೈಲಾಸ ಶಿಖರ ತಲುಪಿದನು. ಅಲ್ಲಿ ನಂದಿ ಮತ್ತು ಭೃಂಗಿಯೂ ಸೇರಿ, ಪತಂಜಲಿಯನ್ನು ನಿಧಾನದವನೆಂದು ಹಾಸ್ಯ ಮಾಡಿದರು. ‘ಸಂಜೆಯ ಪ್ರದೋಷ ಕಾಲಕ್ಕೆ ನಡೆಯುವ ಶಿವನ ದಿವ್ಯ ನೃತ್ಯವನ್ನು ನೀನು ನೋಡಲು ಸಾಧ್ಯ ವಾಗಲಿಕ್ಕಿಲ್ಲ. ನಿನಗೆ ಬಲವಾದ ಕಾಲುಗಳೂ ಇಲ್ಲ, ಕೊಂಬುಗಳೂ ಇಲ್ಲ; ವೇಗವಾಗಿ ಓಡಲಿಕ್ಕೂ ಆಗದು. ದಾರಿಯನ್ನು ತೋಡಿಕೊಂಡು ಹೋಗುತ್ತೇನೆಂದರೆ ಅದೂ ಸಾಧ್ಯವಾಗದು! ಎಂದು ಅವಮಾನಿಸಿದರು.
ಇದರಿಂದ ಪತಂಜಲಿಗೆ ತುಂಬ ಬೇಸರವಾಯಿತು. ಕ್ರುದ್ಧನಾಗಿ ಅವನು ಈ ಸ್ತೋತ್ರವನ್ನು ರಚಿಸಿ ದನು. ಇದರಲ್ಲಿ ಯಾವುದೇ ದೀರ್ಘಸ್ವರಗಳು ಮತ್ತು ರ-ಕಾರ ಸಂಯು ಕ್ತಾಕ್ಷರಗಳು ಇಲ್ಲದಿರುವುದು ಪತಂಜಲಿಗೂ ಕಾಲುಗಳು-ಕೊಂಬುಗಳು ಇಲ್ಲದಿದ್ದ ಸ್ಥಿತಿಯನ್ನು ಸೂಚಿಸುತ್ತದೆ. ಅಷ್ಟಾದರೂ ಅದ್ಭುತವಾದ ಈ ಸ್ತೋತ್ರದ ನಡೆ ಶಿವತಾಂಡವಕ್ಕೆ ಹೇಳಿಮಾಡಿಸಿದಂತಿದೆ!" ಸ್ವಾರಸ್ಯ ಶುರುವಾಗು ವುದು ಇಲ್ಲಿಂದಲೇ.
ಇದನ್ನು ಸವಿಯಲಿಕ್ಕೆ ನಮಗೆ ದೇವನಾಗರಿ ಲಿಪಿಯ ಪರಿಚಯಬೇಕಾಗುತ್ತದೆ. ದೇವನಾಗರಿಯಲ್ಲಿ ಯಾವುದೇ ವ್ಯಂಜನಕ್ಕೆ ಆ, ಈ, ಏ, ಓ, ಔ ಮುಂತಾದ ದೀರ್ಘಸ್ವರ ಸೇರಿದರೆ ಆ ಅಕ್ಷರವನ್ನು ಬರೆಯುವಾಗ ಪ್ರಾಣಿಯ ಚಿತ್ರದಲ್ಲಿ ಕಾಲುಗಳಿದ್ದಂತೆ ಉದ್ದ ಗೀಟು, ಅಥವಾ ಪ್ರಾಣಿಯ ಕೊಂಬು ಗಳಂತೆ ತಲೆಮೇಲೆ ಕೊಂಬು ಬರೆಯಬೇಕಾಗುತ್ತದೆ.
ರ-ಕಾರ ಸಂಯುಕ್ತಾ ಕ್ಷರವಿದ್ದರೂ (ಸೂರ್ಯ, ಕರ್ಮ, ಸ್ವರ್ಗ ಮುಂತಾದುವುಗಳಲ್ಲಿರುವಂತೆ) ದೇವನಾಗರಿಯಲ್ಲಿ ಬರೆಯುವಾಗ ಬಲಕ್ಕೆ ಚಾಚಿದ ಕೊಂಬು ಬೇಕಾಗುತ್ತದೆ. ಈ ಸ್ತೋತ್ರದಲ್ಲಿ ಅಂಥ ಯಾವ ಅಕ್ಷರಗಳೂ ಬರುವುದಿಲ್ಲ. ಎಲ್ಲ ಹೃಸ್ವಾಕ್ಷರಗಳಿಂದಲೇ ಅರ್ಥಪೂರ್ಣವಾದ ಪದಲಾಲಿತ್ಯ. ತಾಂಡವನೃತ್ಯ ಮಾಡುತ್ತಿರುವ ಶಿವನ ಗೆಜ್ಜೆಗಳೇ ಘಲ್‌ಘಲ್ ಎನ್ನುತ್ತಿವೆಯೇನೋ ಅನಿಸುವಂಥ ಲಯ!
ನಿಜ, ಸಂಸ್ಕೃತದಲ್ಲಿ ಈ ರೀತಿಯ ಅಕ್ಷರ ಚಮತ್ಕಾರಗಳಿಗೇನೂ ಬರವಿಲ್ಲ. ಇದಕ್ಕಿಂತ ಕಠಿಣ ರೀತಿಯವು- ಇಡೀ ಶ್ಲೋಕದಲ್ಲಿ ಒಂದೇ ವ್ಯಂಜನದ ಬಳಕೆ, ವರ್ಣಮಾಲೆಯ ಅಷ್ಟೂ ಅಕ್ಷರಗಳನ್ನು ಬಳಸಿದ ಶ್ಲೋಕ, ಉ-ಕಾರವನ್ನಷ್ಟೇ ಬಳಸಿದ ಶ್ಲೋಕ, ಬರೆದಾಗ ಅಕ್ಷರಗಳ ನಡೆಯು ನಿರ್ದಿಷ್ಟ ವಿನ್ಯಾಸವನ್ನು ತರುವಂಥವು ಅಂತೆಲ್ಲ ಹತ್ತು ಹಲವು ಪ್ರಕಾರದವು ಇವೆ.
ಆದರೂ ಕಾಲಿಲ್ಲ ಕೊಂಬಿಲ್ಲ ಎಂಬ ಮೂದಲಿ ಕೆಯನ್ನೇ ಸವಾಲಾಗಿ ಸ್ವೀಕರಿಸಿ ಸ್ತೋತ್ರ ರಚಿಸಿದ ಪತಂಜಲಿಯ ಪಾಂಡಿತ್ಯ ಬೆರಗಾಗುವಂಥದೇ. ಇದರಿಂದ ಪತಂಜಲಿಯ ಬಗ್ಗೆ ಇನ್ನಷ್ಟು ತಿಳಿದು ಕೊಳ್ಳುವ ಕುತೂಹಲವೂ ಮೂಡುತ್ತದೆ. ಅಲ್ಲದೇ ಆದಿಶೇಷನ ಅವತಾರವೆಂದು ನಂಬಲಾಗುತ್ತದೆ ಎಂದಿತ್ತಲ್ಲ, ಅದೇನು ಕಥೆ? ಬಹಳ ಸ್ವಾರಸ್ಯಕರವಾಗಿದೆ ಅದು ಕೂಡ!
ವಿಷ್ಣುವು ಒಮ್ಮೆ ಕ್ಷೀರಸಾಗರದಲ್ಲಿ ಯಥಾಪ್ರಕಾರ ಆದಿಶೇಷನ ಮೇಲೆ ಮಲಗಿ ವಿಶ್ರಾಂತಿ ಪಡೆ ಯುತ್ತಿದ್ದನು. ಅದೇ- “ಪರಮಪದದೊಳಗೆ ವಿಷಧರನ ತಲ್ಪದಲಿ ನೀ ಸಿರಿಸಹಿತ ಕ್ಷೀರ ವಾರಿಧಿ ಯೊಳಿರಲೂ..." ಎಂದು ಕನಕದಾಸರು ಬಣ್ಣಿಸಿದ್ದಾರಲ್ವಾ ಹಾಗೆ. ಆ ಸಮಯದಲ್ಲಿ ವಿಷ್ಣು ಅತೀವ ಆನಂದದಿಂದ ನಗುತಿರುವುದನ್ನು ನೋಡಿ, ದೇಹದ ಭಾರವೂ ಅತಿಯಾಗಿ ಹೆಚ್ಚಾಗಿದೆ ಎಂದು ಆದಿಶೇಷ ಗಮನಿಸಿದನು.
ಆತ ತನ್ನ ಕಷ್ಟವನ್ನು ವಿಷ್ಣುವಿಗೆ ತಿಳಿಸಿ, ಏಕೆ ಇಷ್ಟು ಸಂತೋಷವಾಗಿದ್ದೀರಿ ಎಂದು ಕೇಳಿದನು. ವಿಷ್ಣು ಉತ್ತರಿಸುತ್ತ “ಬಹಳ ವರ್ಷಗಳ ಹಿಂದೆ ದಾರುಕ ವನದಲ್ಲಿ ನಟರಾಜ ಶಿವನ ದರ್ಶನ ಪಡೆದ ಕ್ಷಣವನ್ನು ನೆನಪಿಸಿಕೊಂಡೆ. ಆ ಸಮಯದಲ್ಲಿ ನಾನು ಮೋಹಿನಿಯ ರೂಪ ತಾಳಿದ್ದೆ ಮತ್ತು ಭಿಕ್ಷಾಟನ ರೂಪದಲ್ಲಿದ್ದ ಶಿವನ ಜತೆ ಹೋಗಿದ್ದೆ. ದಾರುಕ ವನದ ಋಷಿಗಳು ಯಾಗಗಳಲ್ಲಿ ಮಾತ್ರ ತೊಡಗಿ, ಭಕ್ತಿ ಇಲ್ಲದೆ ಕರ್ಮವೇ ಮೋಕ್ಷ ಕೊಡುತ್ತದೆ ಎಂದು ತಪ್ಪಾಗಿ ಭಾವಿಸಿದ್ದರು.
ಅವರಿಗೆ ವೇದಗಳ ನಿಜ ಅರ್ಥ ಮತ್ತು ಭಕ್ತಿಯ ಮಹತ್ತ್ವವನ್ನು ತಿಳಿಸಲು ಶಿವನು ಬಯಸಿದನು. ಋಷಿಗಳ ಅಜ್ಞಾನ ಮರೆಯಾದಮೇಲೆ, ಶಿವನು ನಟರಾಜನಾಗಿ ತನ್ನ ವಿಶ್ವರೂಪವನ್ನು ಅವರಿಗೆ ತೋರಿಸಿದನು. ನಾನು ಆ ನೃತ್ಯಕ್ಕೆ ಸಾಕ್ಷಿಯಾಗಿದ್ದೆ. ಆ ನೆನಪು ನನಗೆ ಅಪಾರ ಸಂತೋಷವನ್ನು ನೀಡಿತು" ಎಂದನು.
ಇದನ್ನು ಕೇಳಿದ ಆದಿಶೇಷನಿಗೆ ತಾನೂ ಒಮ್ಮೆ ನಟರಾಜನ ನೃತ್ಯವನ್ನು ನೋಡಬೇಕೆಂಬ ತೀವ್ರ ಆಸೆಯಾಯಿತು. ವಿಷ್ಣುವಿನ ಆಣತಿಯಂತೆ ಆತ ಭೂಲೋಕಕ್ಕೆ ಬಂದು ಕಠಿಣ ತಪಸ್ಸು ಮಾಡಲು ಹೊರಟನು. ತನ್ನ ಸ್ಥಾನದಲ್ಲಿ ವಿಷ್ಣುವಿಗೆ ಸೇವೆ ಮಾಡಲು ತನ್ನ ಮಗನನ್ನು ನೇಮಿಸಿ, ಆದಿಶೇಷ ಭೂಲೋಕಕ್ಕೆ ಬಂದನು.
ಯಾವ ರೂಪದಲ್ಲಿ? ಗೋಣಿಕಾ ಎಂಬ ಋಷಿಪುತ್ರಿಯು ಸೂರ್ಯನಿಗೆ ಅರ್ಘ್ಯ ನೀಡುತ್ತಿದ್ದಾಗ, ಆದಿಶೇಷನು ಸಣ್ಣ ಹಾವಿನ ರೂಪ ತಾಳಿ ಆಕೆಯ ಬೊಗಸೆಯೊಳಗೆ ಬಿದ್ದನು. ಆಕೆಯ ಕೈಗಳಲ್ಲಿದ್ದ ನೀರಿನೊಂದಿಗೆ ಕೆಳಗೆ ಬಿದ್ದ ಕಾರಣ, ‘ಪತಂಜಲಿ’ (ಅಂಜಲಿ ಅಂದರೆ ಬೊಗಸೆ. ಅಂಜಲಿಯಿಂದ ಪತನನಾದವನು) ಎಂಬ ಹೆಸರು ಬಂದಿತು. ಅನಂತರ ಅವನು ಅರ್ಧಮಾನವ, ಅರ್ಧಸರ್ಪ ರೂಪದ ಬಾಲಕನಾಗಿ ಬದಲಾದನು.
ಅರಣ್ಯಕ್ಕೆ ತೆರಳಿ ದೀರ್ಘಕಾಲ ತಪಸ್ಸು ಮಾಡಿದನು. ಬಳಿಕ ಶಿವನು ಬ್ರಹ್ಮನ ರೂಪದಲ್ಲಿ ಬಂದು ಅವನಿಗೆ ಮಹಾಸಿದ್ಧಿಗಳು ಮತ್ತು ವಿದ್ಯೆಗಳನ್ನು ಕರುಣಿಸಲು ಮುಂದಾದನು. ಆದರೆ ಪತಂಜಲಿ ಅವಗಳನ್ನು ನಿರಾಕರಿಸಿ, ತನಗೆ ನಟರಾಜನ ದರ್ಶನವೇ ಬೇಕೆಂದು ಬೇಡಿಕೊಂಡನು. ಶಿವನು ಅವನಿಗೆ ಚಿದಂಬರಂಗೆ ಹೋಗುವಂತೆ ಹೇಳಿದನು.
ಪತಂಜಲಿಯು ಭೂಮಿಯನ್ನು ಭೇದಿಸಿ ನಾಗಲೋಕಕ್ಕೆ ಹೋಗಿ, ಅಲ್ಲಿಂದ ಒಂದು ಬಿಲದ ದ್ವಾರದಿಂದ ಚಿದಂಬರಂಗೆ ಬಂದನು. ಅಲ್ಲಿನ ಪಶ್ಚಿಮ ಭಾಗದಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಿ ಭಕ್ತಿಯಿಂದ ಪೂಜೆ ಮಾಡಿದನು. ಈ ದೇವರನ್ನು ‘ಅನಂತೇಶ್ವರ’ ಎಂದು ಕರೆಯಲಾಗುತ್ತದೆ ಮತ್ತು ಇಂದಿಗೂ ನಾಗಚೇರಿ ಕೆರೆಯ ಬಳಿಯ ದೇವಾಲಯದಲ್ಲಿ ಪೂಜಿಸಲಾಗುತ್ತಿದೆ. ಅದೇ ಸಮ ಯದಲ್ಲಿ ವ್ಯಾಘ್ರಪಾದ ಎಂಬ ಇನ್ನೊಬ್ಬ ಋಷಿಯೂ ನಟರಾಜನ ದರ್ಶನಕ್ಕಾಗಿ ತೀವ್ರವಾಗಿ ಪ್ರಾರ್ಥಿಸು ತ್ತಿದ್ದನು.
ಅವನೂ ‘ಮೂಲನಾಥ’ ಎಂಬ ಶಿವಲಿಂಗವನ್ನು ಪ್ರತಿಷ್ಠಾಪಿಸಿ ಪೂಜಿಸಿದನು. ಈ ದೇವಾಲಯವು ಚಿದಂಬರಂ ನಟರಾಜ ದೇವಸ್ಥಾನದ ಒಳಭಾಗದಲ್ಲಿದೆ. ವ್ಯಾಘ್ರಪಾದ (ಹುಲಿಯ ಪಾದಗಳನ್ನು ಹೊಂದಿದವನು) ಶಿವಪೂಜೆಗೆಂದು ಕತ್ತಲೆಯ ಲ್ಲಿಯೂ ಉತ್ತಮ ಹೂಗಳನ್ನು ಕೊಯ್ಯಲಿಕ್ಕಾಗು ವಂತೆ ಶಿವನ ನ್ನು ಪ್ರಾರ್ಥಿಸಿ ಹುಲಿಯ ಪಾದಗಳು ಮತ್ತು ಜೇನುನೊಣದ ಕಣ್ಣುಗಳನ್ನು ಪಡೆದಿದ್ದನು. ಅಂದರೆ ಜೇನುನೊಣಗಳೂ ಸ್ಪರ್ಶಿಸುವ ಮೊದಲೇ ಪರಿಶುದ್ಧ ಹೂಗಳನ್ನು ತಾನು ಶಿವನಿಗೆ ಅರ್ಪಿಸಬೇಕೆಂದು ಆತನ ಬಯಕೆ.
ಅಷ್ಟೂ ಗಾಢವಾದ ಶಿವಭಕ್ತಿ. ಪತಂಜಲಿ ಮತ್ತು ವ್ಯಾಘ್ರಪಾದ ಇಬ್ಬರೂ ನಟರಾಜನ ದರ್ಶನಕ್ಕಾಗಿ ಘೋರ ತಪಸ್ಸು ಮಾಡಿದರು. ಆಗ ವಿಶ್ವಕರ್ಮನು ಬಂಗಾರದ ಸಭಾಮಂಟಪವನ್ನು ನಿರ್ಮಿಸಿದನು. ಪುಷ್ಯ ಮಾಸದಲ್ಲಿ ಪುಷ್ಯಾ ನಕ್ಷತ್ರದ ದಿನ, ಶಿವನು ಪಾರ್ವತಿಯೊಂದಿಗೆ ತನ್ನ ವಾಹನವಾದ ನಂದಿಯಿಂದ ಇಳಿದು, ವಿಷ್ಣುವಿನ ಕೈ ಹಿಡಿದು ಪ್ರತ್ಯಕ್ಷನಾದನು.
ಇಬ್ಬರೂ ಋಷಿಗಳಿಗೆ ದಿವ್ಯದೃಷ್ಟಿ ನೀಡಿ, ನಟರಾ ಜನಾಗಿ ಆನಂದದಿಂದ ನೃತ್ಯ ಮಾಡಿದನು. ಇಬ್ಬರೂ ಋಷಿಗಳು ಶಿವ ನನ್ನು ಚಿದಂಬರಂನಲ್ಲಿ ಸದಾಕಾಲ ವಾಸಿಸಿ ಎಲ್ಲರಿಗೂ ದರ್ಶನ ನೀಡು ವಂತೆ ಪ್ರಾರ್ಥಿಸಿದರು.
ಶಿವನು ಅದನ್ನು ಅಂಗೀಕರಿಸಿ ಅಲ್ಲಿ ಸ್ಥಿರನಾ ದನು. ಇದೇ ಸಂದರ್ಭದಲ್ಲಿ ನಟರಾಜನು ಪತಂಜಲಿಗೆ ಪಾಣಿನಿಯ ‘ಅಷ್ಟಾಧ್ಯಾಯೀ’ ವ್ಯಾಕರಣಗ್ರಂಥಕ್ಕೆ ಭಾಷ್ಯ (ವಿಶ್ಲೇಷಣೆ) ಬರೆಯುವಂತೆ ದೇಶವಿತ್ತನು. ಚರಣಶೃಂಗರಹಿತ ಸ್ತೋತ್ರ ಪತಂಜಲಿಯಿಂದ ರಚನೆಯಾದದ್ದು ಕೈಲಾಸಪರ್ವತದಲ್ಲಿ ಅಲ್ಲ, ಚಿದಂಬರಂನಲ್ಲಿ ಎಂದು ಕೂಡ ಪ್ರತೀತಿಯಿದೆ.
ಎಲ್ಲ ಹತ್ತು ಶ್ಲೋಕಗಳಲ್ಲೂ ಕೊನೆಯ ಪಾದದಲ್ಲಿ “ಚಿದಂಬರನಟಂ ಹೃದಿ ಭಜ" ಎಂದಿರುವುದು ಇದನ್ನು ಪುಷ್ಟೀಕರಿಸುತ್ತದೆ. ನಟರಾಜನ ದರ್ಶನಕ್ಕೆ ಅಡ್ಡಬಂದ ನಂದಿಯನ್ನು ಕೆಣಕಲೆಂದೇ- ನಂದಿಗಾದರೆ ಕಾಲುಗಳು ಮತ್ತು ಕೊಂಬುಗಳೇ ಆಯುಧ, ಅವುಗಳೇ ಇಲ್ಲದಂತೆ ಮಾಡುವೆ ನೆಂದು- ಪತಂಜಲಿ ಚರಣಶೃಂಗರಹಿತ ಸ್ತೋತ್ರ ರಚಿಸಿದ್ದಂತೆ. ಅದೇನೇ ಇರಲಿ, ಭರತನಾಟ್ಯ, ಮೋಹಿನಿ ಯಾಟ್ಟಂ ಮತ್ತಿತರ ನೃತ್ಯಕಲೆಗಳಲ್ಲಿ ಶಿವತಾಂಡವವನ್ನು ಪರಿಣಾಮಕಾರಿಯಾಗಿ ಬಿಂಬಿಸಲಿಕ್ಕೆ ಈ ಸ್ತೋತ್ರವನ್ನೇ ಆಯ್ದುಕೊಳ್ಳುತ್ತಾರೆ.
ಪಾಣಿನಿಯ ಅಷ್ಟಾಧ್ಯಾಯೀಗೆ ವಿವರವಾದ ವಿಶ್ಲೇಷಣೆ ಬರೆಯುವ ಕೆಲಸವನ್ನು ನಟರಾಜನೇ ಪತಂಜಲಿಗೆ ಆದೇಶಿಸಿದ್ದನಷ್ಟೆ? ಅದೇ ಪತಂಜಲಿಯ ‘ಮಹಾಭಾಷ್ಯ’. ಪಾಣಿನಿಯ ಅಷ್ಟಾಧ್ಯಾಯಿ ಯಲ್ಲಿರುವ ಒಟ್ಟು 3959 ಸೂತ್ರಗಳಲ್ಲಿ 1228 ಸೂತ್ರಗಳಿಗಷ್ಟೇ ವಿಶ್ಲೇಷಣೆ ಬರೆಯುವುದು ಪತಂಜಲಿಗೆ ಸಾಧ್ಯವಾಯಿತು.
ಇದನ್ನು 85 ‘ಆಹ್ನಿಕ’(ಅಧ್ಯಾಯ/ಭಾಗ)ಗಳಲ್ಲಿ ವಿಭಾಗಿಸಲಾಗಿದೆ. ಇದರ ಭಾಷೆ ಬಹಳ ಸುಂದರ ವಾಗಿದ್ದು, ಸಂಸ್ಕೃತ ಗದ್ಯಕ್ಕೆ ಮಾದರಿಯೆಂದು ಪರಿಗಣಿಸಲಾಗುತ್ತದೆ. ಪತಂಜಲಿಯಿಂ ದಾಗಿಯೇ ಭಾಷಾಶಾಸ್ತ್ರವು ಭಾರತದಲ್ಲಿ ಪೂರ್ಣರೂಪ ಪಡೆಯಿತು. ಈ ವ್ಯವಸ್ಥೆಯಲ್ಲಿ ಶಿಕ್ಷಾ (ಧ್ವನಿಶಾಸ್ತ್ರ, ಸ್ವರವರಸೆ) ಮತ್ತು ವ್ಯಾಕರಣ (ರೂಪಶಾಸ)ಗಳನ್ನು ವಿಸ್ತಾರವಾಗಿ ವಿವರಿಸಲಾಗಿದೆ.
ಸಂಸ್ಕೃತ ಭಾಷೆಯು ರೂಪಾಂತರ ಧರ್ಮಿಯಾದ್ದರಿಂದ ವಾಕ್ಯರಚನೆಗೆ ಪ್ರಾಮುಖ್ಯ ಕೊಟ್ಟಿಲ್ಲ. ಪದಗಳ ಮೂಲಾರ್ಥವನ್ನು ವಿವರವಾಗಿ ಚರ್ಚಿಸಲಾಗಿದೆ. ಅರ್ಥದ ವಿವರಣೆಗಳೂ ಇವೆ. ಒಟ್ಟಾರೆಯಾಗಿ ಪತಂಜಲಿಯ ಕೃತಿಯು ಪಾಣಿನಿಯ ಸೂತ್ರಗಳನ್ನು ರಕ್ಷಿಸುವ ಹಾಗೂ ವಿವರಿಸುವ ಮಹತ್ತರ ಕೆಲಸ ಮಾಡುತ್ತದೆ.
ಮಹಾಭಾಷ್ಯ ಪೂರ್ಣಗೊಳಿಸಿದ ತರುವಾಯ ಪತಂಜಲಿಯು ಶಿಷ್ಯರಿಗೆ ಅದನ್ನು ಬೋಧಿಸಲು ನಿರ್ಧರಿಸಿದನು. ಚಿದಂಬರಂನಲ್ಲಿ ಸಾವಿರಾರು ವಿದ್ಯಾರ್ಥಿಗಳನ್ನು ಸೇರಿಸಿ, ತಾನು ಪರದೆಯ ಹಿಂದೆ ಕುಳಿತು ಪಾಠ ಮಾಡುತ್ತಿದ್ದನು. ಪಾಠದ ವೇಳೆ ಯಾರೂ ಪರದೆಯನ್ನೆತ್ತಿ ನೋಡಬಾರದೆಂದು ಕಟ್ಟುನಿಟ್ಟಾಗಿ ಸೂಚಿಸಲಾಗಿತ್ತು.
ಪ್ರತಿಯೊಬ್ಬ ವಿದ್ಯಾರ್ಥಿಗೂ ಪ್ರತ್ಯೇಕವಾಗಿ ಸ್ಪಷ್ಟೀಕರಣ ನೀಡುವಷ್ಟು ಚಾಣಾಕ್ಷತೆ ಒಬ್ಬನೇ ಶಿಕ್ಷಕ ನಿಂದ ಹೇಗೆ ಸಾಧ್ಯ ಎಂಬ ಅನುಮಾನ ವಿದ್ಯಾರ್ಥಿಗಳಿಗೆ. ಕುತೂಹಲದಿಂದ ಕೆಲವರು ಒಂದು ದಿನ ಪರದೆಯನ್ನು ತೆರೆದರು. ಒಡನೆಯೇ, ಸಾವಿರ ತಲೆಗಳ ಆದಿಶೇಷನ ವಿಷಶ್ವಾಸದಿಂದ ಅವರು ಬೂದಿಯಾದರು. ಅಂದರೆ ಆದಿಶೇಷನೇ ಸಾವಿರ ಬಾಯಿಗಳಿಂದ ಪಾಠ ಮಾಡುತ್ತಿದ್ದದ್ದು!
ಒಬ್ಬ ವಿದ್ಯಾರ್ಥಿ ಮಾತ್ರ ಪ್ರಕೃತಿ ಕರೆಗೆಂದು ಹೊರಹೋಗಿದ್ದರಿಂದ ಉಳಿದನು. ಆದರೆ ಅವನು ಶಿಕ್ಷಕರ ಅನುಮತಿ ಇಲ್ಲದೆ ಹೊರಹೋಗಿದ್ದ ಕಾರಣ, ಪತಂಜಲಿ ಅವನಿಗೆ ಬ್ರಹ್ಮರಾಕ್ಷಸನಾಗುವಂತೆ ಶಾಪವಿತ್ತನು. ಆತ ಗೋಗರೆದಾಗ ಶಾಪವನ್ನು ಸ್ವಲ್ಪ ತಗ್ಗಿಸಿ, ಸಂಸ್ಕೃತ ವ್ಯಾಕರಣದ ಅತಿಕಠಿಣ ಪ್ರಶ್ನೆಗೆ ಉತ್ತರಿಸುವ ಶಿಷ್ಯನನ್ನು ಕಂಡರೆ ಶಾಪ ವಿಮೋಚನೆ ಆಗುತ್ತದೆಂದನು.
ಬ್ರಹ್ಮರಾಕ್ಷಸ ವಿದ್ಯಾರ್ಥಿ ಉತ್ತರ ಭಾರತಕ್ಕೆ ಹೋಗಿ ಮರದ ಮೇಲೆ ಕುಳಿತು ಜನರನ್ನು ಪ್ರಶ್ನಿಸು ತ್ತಿದ್ದನು. ಸರಿಯಾದ ಉತ್ತರ ಕೊಡದವರನ್ನು ತಿನ್ನುತ್ತಿದ್ದನು. ಹಲವು ವರ್ಷಗಳ ಬಳಿಕ, ಪತಂಜಲಿ ಯೇ ‘ಚಂದ್ರ ಶರ್ಮ’ ಎಂಬ ಹೆಸರಿನಲ್ಲಿ ಅವನನ್ನು ಭೇಟಿ ಮಾಡಿದನು. ಬ್ರಹ್ಮ ರಾಕ್ಷಸನು “ಪಚ್ ಧಾತುವಿನ ಭೂತಕಾಲದ ರೂಪ ಯಾವುದು?" ಎಂಬ ಪ್ರಶ್ನೆ ಕೇಳಿದನು.
ಬೇರೆಯವರೆಲ್ಲ ತಪ್ಪಾಗಿ ‘ಪಚಿತ’ ಎಂದೇ ಉತ್ತರಿಸುತ್ತಿದ್ದರು, ಆದರೆ ಚಂದ್ರ ಶರ್ಮ ಸರಿಯಾಗಿ ‘ಪಕ್ವ’ ಎಂದು ಉತ್ತರಿಸಿದನು. ಬ್ರಹ್ಮರಾಕ್ಷಸ ಶಾಪಮುಕ್ತನಾದನು. ಬದರೀನಾಥಕ್ಕೆ ಹೋಗಿ ಅದ್ವೈತ ವೇದಾಂತದ ಮಹಾ ಗುರುಗಳಾದ ಗೌಡಪಾದ ನಾದನು. ಚಂದ್ರ ಶರ್ಮ (ಅದೇ ಪತಂಜಲಿ) ಗೋವಿಂದ ಭಗವತ್ಪಾದ ನಾಗಿ ಗೌಡಪಾದರ ಶಿಷ್ಯನಾದನು. ಮುಂದೆ ಗೋವಿಂದ ಭಗವತ್ಪಾದರು ಆದಿ ಶಂಕರಾಚಾರ್ಯರ ಗುರುಗಳಾದರು! ಈಗ ಹೇಳಿ. ಅಗೆವ ಬುದ್ಧಿ ಅಲ್ಪಸ್ವಲ್ಪವಾದರೂ ಇದ್ದರೆ ಎಷ್ಟೆಲ್ಲ ಅರಿವು ಆವರಿಸಿಕೊಳ್ಳುತ್ತದೆ ಅಲ್ಲವೇ?