ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Vijay Kumar S A Column: ಕಾನೂನು ವ್ಯವಸ್ಥೆ ಮತ್ತು ಆಂಥ್ರೋಪಿಕ್ ಎಐ: ಭಯವೋ, ಭ್ರಮೆಯೋ ?

ಕಾನೂನು ಎಂಬುದು ಕೇವಲ ಅಂಕಿ-ಅಂಶ ಅಥವಾ ತರ್ಕವಲ್ಲ; ಅದು ಮಾನವೀಯ ಮೌಲ್ಯ ಗಳ ಮೇಲೆ ನಿಂತಿದೆ. ಸೆಕ್ಷನ್ ಮತ್ತು ಕಲಮುಗಳನ್ನು ಓದುವುದು ಸುಲಭ, ಆದರೆ ಸಾಂದರ್ಭಿಕ ಪುರಾವೆಗಳನ್ನು ವಿಶ್ಲೇಷಿಸುವಾಗ ಬೇಕಾದ ‘ಸಾಮಾನ್ಯ ಜ್ಞಾನ’ ( Common Sense) ಮತ್ತು ‘ಸಹಾನುಭೂತಿ’ ( Empathy) ಯಂತ್ರಗಳಿಗಿಲ್ಲ.

ಕಾನೂನು ವ್ಯವಸ್ಥೆ ಮತ್ತು ಆಂಥ್ರೋಪಿಕ್ ಎಐ: ಭಯವೋ, ಭ್ರಮೆಯೋ ?

-

Ashok Nayak
Ashok Nayak Mar 1, 2026 7:49 AM

ತಂತ್ರಯೋಗ

ವಿಜಯಕುಮಾರ್‌ ಎಸ್.ಎ

ಭಾರತದಲ್ಲಿ ‘ಗಂಟೆಯ ಲೆಕ್ಕ’ಕ್ಕಿಂತ ಹೆಚ್ಚಾಗಿ ‘ಕೇಸಿನ ಲೆಕ್ಕ’ ನಡೆಯುತ್ತದೆ. ಅಮೆರಿಕ ದಲ್ಲಿ ಇದು ಉದ್ಯೋಗವನ್ನು ಕಸಿದುಕೊಳ್ಳುತ್ತಿರಬಹುದು. ಆದರೆ ನಮ್ಮ ಹಳ್ಳಿ ಗಳಲ್ಲಿ ‘ಪಂಚಾಯತ್ ರಾಜ್’ ವ್ಯವಸ್ಥೆ ಇದೆ, ಹಿಂದೂ ಉತ್ತರಾಧಿಕಾರ ಕಾಯ್ದೆ ಇದೆ. ಈ ಎಲ್ಲದರ ನಡುವೆ ಇರುವ ಸೂಕ್ಷ್ಮ ವ್ಯತ್ಯಾಸಗಳನ್ನು ಅರ್ಥಮಾಡಿಕೊಳ್ಳಲು ಆಂಥ್ರೋಪಿಕ್ ‘ಎಐ’ಗೆ ನಮ್ಮ ಮಣ್ಣಿನ ವಾಸನೆ ಗೊತ್ತಿರಬೇಕು.

ಇಂದಿನ ತಂತ್ರಜ್ಞಾನದ ಯುಗದಲ್ಲಿ ಕೃತಕ ಬುದ್ಧಿಮತ್ತೆ (ಎಐ) ಎಲ್ಲಾ ಕ್ಷೇತ್ರಗಳಲ್ಲೂ ತನ್ನ ಹೆಜ್ಜೆ ಗುರುತು ಮೂಡಿಸುತ್ತಿದೆ. ಅಮೆರಿಕದ ಆಂಥ್ರೋಪಿಕ್ ಸಂಸ್ಥೆಯ ‘ಕ್ಲಾಡ್’ನಂಥ ( Claude) ಸುಧಾರಿತ ‘ಎಐ’ ಮಾದರಿಗಳು ಕಾನೂನು ಸಂಬಂಧಿತ ಸೇವೆ/ಸಂಶೋಧನೆಯಲ್ಲಿ ಕ್ರಾಂತಿ ಮಾಡುತ್ತಿವೆ ಎಂದು ನಂಬಲಾಗಿದೆ. ಆದರೆ, ಭಾರತದಂಥ ವೈವಿಧ್ಯಮಯ ಮತ್ತು ಸಂಕೀರ್ಣ ಕಾನೂನು ಚೌಕಟ್ಟನ್ನು ಹೊಂದಿರುವ ದೇಶದಲ್ಲಿ, ಇವುಗಳ ಪ್ರಭಾವವು ಕೇವಲ ‘ಸಹಾಯಕ’ ಮಟ್ಟಕ್ಕೆ ಸೀಮಿತವಾಗಿದೆಯೇ ಹೊರತು, ಇದು ವ್ಯವಸ್ಥೆಯನ್ನು ಬುಡಮೇಲು ಮಾಡಲು ಸಾಧ್ಯವಿಲ್ಲ.

ಕಾನೂನು ಎಂಬುದು ಕೇವಲ ಅಂಕಿ-ಅಂಶ ಅಥವಾ ತರ್ಕವಲ್ಲ; ಅದು ಮಾನವೀಯ ಮೌಲ್ಯಗಳ ಮೇಲೆ ನಿಂತಿದೆ. ಸೆಕ್ಷನ್ ಮತ್ತು ಕಲಮುಗಳನ್ನು ಓದುವುದು ಸುಲಭ, ಆದರೆ ಸಾಂದರ್ಭಿಕ ಪುರಾವೆಗಳನ್ನು ವಿಶ್ಲೇಷಿಸುವಾಗ ಬೇಕಾದ ‘ಸಾಮಾನ್ಯ ಜ್ಞಾನ’ ( Common Sense) ಮತ್ತು ‘ಸಹಾನುಭೂತಿ’ (Empathy) ಯಂತ್ರಗಳಿಗಿಲ್ಲ.

ಇತ್ತೀಚೆಗೆ ಸುಪ್ರೀಂ ಕೋರ್ಟ್ ಕೂಡ ಹೇಳಿರುವಂತೆ, ‘ಎಐ’ ಕೇವಲ ಪ್ರಕ್ರಿಯೆಗಳಿಗೆ ಸಹಾಯ ಮಾಡಬಹುದೇ ಹೊರತು ತೀರ್ಪು ನೀಡುವಲ್ಲಿ ನ್ಯಾಯಾಧೀಶರ ಸ್ಥಾನ ತುಂಬಲಾರದು. ಭಾರತದಲ್ಲಿ ಪ್ರಾದೇಶಿಕ ಭಾಷೆಗಳಲ್ಲಿ ಕಲಾಪಗಳು ನಡೆಯುತ್ತವೆ. ಆಂಥ್ರೋಪಿಕ್ ‘ಎಐ’ ಇಂಗ್ಲಿಷ್‌ನಲ್ಲಿ ಪ್ರಬಲವಾಗಿದ್ದರೂ, ಕರ್ನಾಟಕದ ಹಳ್ಳಿಗಳಲ್ಲಿ ನಡೆಯುವ ಜಮೀನು ವಿವಾದಗಳು ಅಥವಾ ಸ್ಥಳೀಯ ಸಂಪ್ರದಾಯಬದ್ಧ ಕಾನೂನುಗಳ ಸೂಕ್ಷ್ಮತೆಗಳನ್ನು ಅರ್ಥಮಾಡಿಕೊಳ್ಳಲು ಅದಕ್ಕೆ ಸಾಧ್ಯವಿಲ್ಲ.

ಇತ್ತೀಚಿನ ವರದಿಗಳ ಪ್ರಕಾರ, ಅನೇಕ ವಕೀಲರು ‘ಎಐ’ ಬಳಸಿ ಅರ್ಜಿ ಸಿದ್ಧಪಡಿಸಿದಾಗ, ಅಸ್ತಿತ್ವದ ಇಲ್ಲದ ತೀರ್ಪುಗಳನ್ನು ( Non existent judgments) ‘ಎಐ’ ಸೃಷ್ಟಿಸಿದೆ. ಭಾರತೀಯ ಕಾನೂನು ವ್ಯವಸ್ಥೆಯಲ್ಲಿ ಇಂಥ ತಪ್ಪುಗಳು ಶಿಕ್ಷಾರ್ಹ; ಇವು ನ್ಯಾಯಾಂಗದ ಅಮೂಲ್ಯ ಸಮಯವನ್ನು ವ್ಯರ್ಥಮಾಡುತ್ತವೆ.

ಇದನ್ನೂ ಓದಿ: Vinayaka V Bhat Column: ಭಾರತೀಯರಲ್ಲಿ ಮರೆಯಾಗುತ್ತಿರುವ ಅಭಿವಾದನ ಸಂಸ್ಕೃತಿ

ಅಮೆರಿಕದಲ್ಲಿ ಕಾನೂನು ಸೇವೆ ಎಂಬುದು ಒಂದು ಬೃಹತ್ ಉದ್ಯಮ. ಅಲ್ಲಿನ ವಕೀಲರು ಪ್ರತಿ ಗಂಟೆಗೆ (Billable Hours) ಹಣ ವಿಧಿಸುತ್ತಾರೆ. ಆಂಥ್ರೋಪಿಕ್‌ನ ‘ಕ್ಲಾಡ್’ ಎಐ ಮಾದರಿ ಯು ಎಷ್ಟು ಪ್ರಬಲವಾಗಿದೆ ಎಂದರೆ, ಒಬ್ಬ ಜೂನಿಯರ್ ವಕೀಲರು 15 ಗಂಟೆ ಕಾಲ ಓದಿ ಸಿದ್ಧಪಡಿಸುತ್ತಿದ್ದ ‘ಕಾಂಟ್ರಾಕ್ಟ್ ರಿವ್ಯೂ’ ಅಥವಾ ‘ಡಾಕ್ಯುಮೆಂಟ್ ಅನಾಲಿಸಿಸ್’ ಅನ್ನು ಇದು ಕೇವಲ 15 ನಿಮಿಷಗಳಲ್ಲಿ ಮುಗಿಸಿಬಿಡುತ್ತದೆ!.

ಅಮೆರಿಕದ ಅನೇಕ ದೊಡ್ಡ ಕಂಪನಿಗಳು ‘ನಮ್ಮ ವಕೀಲರಿಗೆ ನಾವೇಕೆ 15 ಗಂಟೆಯ ಹಣ ಕೊಡಬೇಕು? ‘ಎಐ’ ಇದನ್ನು 15 ನಿಮಿಷದಲ್ಲಿ ಮಾಡಿದೆ ಅಲ್ವಾ?’ ಎಂದು ಪ್ರಶ್ನಿಸಲು ಶುರುಮಾಡಿದ್ದಾರೆ. ಇದರಿಂದಾಗಿ ಅಲ್ಲಿನ ಪ್ರತಿಷ್ಠಿತ ಲಾ-ಫರ್ಮ್‌ಗಳ ಆದಾಯದಲ್ಲಿ ಭಾರಿ ಕುಸಿತ ಕಂಡುಬಂದಿದೆ.

Baker McKenzie ನಂಥ ಬೃಹತ್ ಸಂಸ್ಥೆಗಳು ನೂರಾರು ಉದ್ಯೋಗಿಗಳನ್ನು (ವಿಶೇಷವಾಗಿ ಸಪೋರ್ಟ್ ಸ್ಟಾ- ಮತ್ತು ಜೂನಿಯರ್ ಅಸೋಸಿಯೇಟ್ಸ್) ಕೆಲಸದಿಂದ ತೆಗೆದು ಹಾಕುತ್ತಿವೆ. ಆಂಥ್ರೋಪಿಕ್ ತನ್ನ ಹೊಸ ‘Claude Cowork’ ಎಂಬ ಪ್ಲಗಿನ್ ಬಿಡುಗಡೆ ಮಾಡಿದಾಗ ಅಮೆರಿಕದ ಷೇರು ಮಾರುಕಟ್ಟೆಯಲ್ಲಿ ದೊಡ್ಡ ಕಂಪನವೇ ಉಂಟಾಯಿತು.

ಕಾನೂನು ಮಾಹಿತಿಯನ್ನು ಒದಗಿಸುವ ‘ಥಾಮ್ಸನ್ ರಾಯಿಟರ್ಸ್’ ಮತ್ತು ‘ಲೆಕ್ಸಿಸ್ ನೆಕ್ಸಿಸ್’ ನಂಥ ಕಂಪನಿಗಳ ಷೇರುಗಳು ದಿಢೀರ್ ಕುಸಿದವು. ಹೂಡಿಕೆದಾರರ ಭಯವೇನೆಂದರೆ, ಇನ್ನು ಮುಂದೆ ಈ ದುಬಾರಿ ಸಾಫ್ಟ್‌ʼವೇರ್‌ಗಳು ಯಾರಿಗೂ ಬೇಕಿಲ್ಲ, ಆಂಥ್ರೋಪಿಕ್ ಒಂದೇ ಎಲ್ಲವನ್ನೂ ನಿಭಾಯಿಸುತ್ತದೆ ಎಂಬುದು. ಅಲ್ಲಿನ ಹೆಚ್ಚಿನ ಪ್ರಕರಣಗಳು ಸೆಟಲ್ಮೆಂಟ್ ಅಥವಾ ಫಿಕ್ಸೆಡ್ ಪ್ರೋಟೋಕಾಲ್ ಮೇಲೆ ನಡೆಯುತ್ತವೆ.

anthropic

ಅಂತಹ ‘ದತ್ತಾಂಶ’ಗಳನ್ನು ಆಂಥ್ರೋಪಿಕ್ ‘ಎಐ’ ನುಂಗಿ ನೀರು ಕುಡಿಯುತ್ತದೆ. ಆದರೆ ಭಾರತದಲ್ಲಿ ಪ್ರತಿ ಪ್ರಕರಣ ಒಂದು ಹೊಸ ಕಥೆ! ಇಲ್ಲಿ ತಾಂತ್ರಿಕತೆಗಿಂತ ‘ತರ್ಕ’ (Logic) ಹೆಚ್ಚು ಕೆಲಸ ಮಾಡುತ್ತದೆ.

ನಮ್ಮಲ್ಲಿ ‘ಗಂಟೆಯ ಲೆಕ್ಕ’ಕ್ಕಿಂತ ಹೆಚ್ಚಾಗಿ ‘ಕೇಸಿನ ಲೆಕ್ಕ’ ನಡೆಯುತ್ತದೆ. ಅಮೆರಿಕದಲ್ಲಿ ಇದು ಉದ್ಯೋಗವನ್ನು ಕಸಿದುಕೊಳ್ಳುತ್ತಿರಬಹುದು. ಆದರೆ ನಮ್ಮ ಹಳ್ಳಿಗಳಲ್ಲಿ ‘ಪಂಚಾಯತ್ ರಾಜ್’ ವ್ಯವಸ್ಥೆ ಇದೆ, ಮುಸ್ಲಿಂ ವೈಯಕ್ತಿಕ ಕಾನೂನು ಇದೆ, ಹಿಂದೂ ಉತ್ತರಾಧಿಕಾರ ಕಾಯ್ದೆ ಇದೆ. ಈ ಎಲ್ಲದರ ನಡುವೆ ಇರುವ ಸೂಕ್ಷ್ಮ ವ್ಯತ್ಯಾಸಗಳನ್ನು ಅರ್ಥಮಾಡಿ ಕೊಳ್ಳಲು ಆಂಥ್ರೋಪಿಕ್ ‘ಎಐ’ಗೆ ನಮ್ಮ ಮಣ್ಣಿನ ವಾಸನೆ ಗೊತ್ತಿರಬೇಕು.

ಅಮೆರಿಕದ ಸರ್ವರ್‌ನಲ್ಲಿ ಕುಳಿತಿರುವ ಸಾಫ್ಟ್‌ʼವೇರ್‌ಗೆ ನಮ್ಮ ಉತ್ತರ ಕರ್ನಾಟಕದ ‘ಲವಲವಿಕೆ’ ಅಥವಾ ಕರಾವಳಿಯ ‘ದೈವದ ಕಾನೂನು’ ಅರ್ಥವಾಗುವುದು ಅಸಾಧ್ಯ. ‘ಎಐ’ಗೆ ಇರುವ ದೊಡ್ಡ ರೋಗವೆಂದರೆ ‘ಹ್ಯಾಲುಸಿನೇಷನ್’. ಅಂದರೆ, ತನಗೆ ಉತ್ತರ ಗೊತ್ತಿಲ್ಲದಿದ್ದಾಗ ಅದು ಅತ್ಯಂತ ಆತ್ಮವಿಶ್ವಾಸದಿಂದ ಸುಳ್ಳು ಹೇಳುತ್ತದೆ.

ಉದಾಹರಣೆಗೆ, ಅಮೆರಿಕದಲ್ಲಿ ಒಬ್ಬ ವಕೀಲರು ‘ಎಐ’ ಕೊಟ್ಟ ತೀರ್ಪನ್ನು ಕೋರ್ಟ್‌ನಲ್ಲಿ ಮಂಡಿಸಿದ್ದಾರೆ. ಆಮೇಲೆ ತಿಳಿದುಬಂದದ್ದೇನೆಂದರೆ, ಆ ತೀರ್ಪನ್ನು ‘ಎಐ’ ಸೃಷ್ಟಿಸಿತ್ತು! ಭಾರತದಲ್ಲಿ ಜಡ್ಜ್ ಸಾಹೇಬರ ಮುಂದೆ ಇಂಥ ಕಿತಾಪತಿ ಮಾಡಿದರೆ, ವಕೀಲರ ಲೈಸೆನ್ಸ್ ಹೋಗುವುದರಲ್ಲಿ ಎಳ್ಳಷ್ಟೂ ಅನುಮಾನವಿಲ್ಲ. ‌

ನಮ್ಮ ಜಡ್ಜ್‌ಗಳು ‘ಫಿಸಿಕಲ್ ಕಾಪಿ’ ಕೇಳುತ್ತಾರೆ, ‘ಎಐ’ ಲಿಂಕ್ ಅನ್ನು ಅಲ್ಲ! ಯಾರೋ ಒಬ್ಬರು ಬಂದು “ಸರ್, ಇನ್ಮೇಲೆ ವಕೀಲರಿಗೆ ಕೆಲಸಾನೇ ಇರಲ್ಲ, ಕಂಪ್ಯೂಟರ್‌ಗಳೇ ಜಡ್ಜ್‌ಮೆಂಟ್ ಕೊಡುತ್ತವೆ!" ಅಂದರು. ಆಂಥ್ರೋಪಿಕ್ ‘ಎಐ’ ಅಥವಾ ಯಾವುದೇ ತಂತ್ರಜ್ಞಾನವು ವಕೀಲರಿಗೆ ಸಂಶೋಧನೆ ಮಾಡಲು ( Legal Research) ಮತ್ತು ದಸ್ತಾವೇಜು ಗಳನ್ನು ಭಾಷಾಂತರಿಸಲು (Translation) ಉಪಯುಕ್ತವಾಗಬಹುದಷ್ಟೇ.

ನನಗೆ ಆತನ ಮಾತು ಕೇಳಿ ನಗು ಬಂತು. ಇವರಿಗೆ ನಮ್ಮ ಸಿವಿಲ್ ಕೋರ್ಟಿನ ಮುನ್ಸಿ- ಸಾಹೇಬರ ಮುಂದೆ ನಡೆಯುವ ಕಲಾಪದ ಅರಿವಿಲ್ಲ ಎನಿಸುತ್ತದೆ. ನಮ್ಮ ದೇಶದ ಕಾನೂನು ವ್ಯವಸ್ಥೆ ಅಷ್ಟು ಸುಲಭವಾಗಿ ಈ ‘ರೋಬೋಟ್’ಗಳಿಗೆ ಬಗ್ಗುವಂಥದ್ದಲ್ಲ. ನಮ್ಮಲ್ಲಿ ಒಬ್ಬ ಜೂನಿಯರ್ ವಕೀಲರು ಹೀಗೆಯೇ ಮಾಡಿದ್ದರು. ‘ಎಐ’ ಬಳಸಿ ಒಂದು ಅರ್ಜಿ ಸಿದ್ಧಪಡಿಸಿ ಅದರಲ್ಲಿ ‘ಸುಪ್ರೀಂ ಕೋರ್ಟ್ 1984ರಲ್ಲಿ ರಾಮಣ್ಣ ವರ್ಸಸ್ ಭೀಮಣ್ಣ ಕೇಸಿನಲ್ಲಿ ಹೀಗೆ ಹೇಳಿದ’ ಎಂದು ಬರೆದಿದ್ದರು.

ಜಡ್ಜ್ ಸಾಹೇಬರು ಲೈಬ್ರರಿ ಪರಿಶೀಲಿಸಿ ನೋಡಿದರೆ ಅಂಥ ಪ್ರಕರಣವೇ ಇಲ್ಲ! ಆ ಜೂನಿ ಯರ್‌ಗೆ ಜಡ್ಜ್ ಕೊಟ್ಟ ‘ಡೋಸ್’ ನೋಡಿದ ಮೇಲೆ ಅನ್ನಿಸಿತು- ‘ಎಐ’ ನಂಬಿ ಕೋರ್ಟಿಗೆ ಹೋದರೆ ಜೈಲು ಗ್ಯಾರಂಟಿ ಅಂತ! ‌

ಕಕ್ಷಿದಾರನೊಬ್ಬ ವಕೀಲರ ಚೇಂಬರ್‌ಗೆ ಬಂದು ಅತ್ತಾಗ, ಅವನ ಭುಜದ ಮೇಲೆ ಕೈ ಹಾಕಿ “ಧೈರ್ಯವಾಗಿರು, ನಾವು ಗೆಲ್ಲುತ್ತೇವೆ" ಎಂದು ಹೇಳುವ ಆ ‘ಭರವಸೆ’ಗೆ ಬೆಲೆ ಕಟ್ಟಲಾಗದು. ಆಂಥ್ರೋಪಿಕ್ ಅಥವಾ ಕ್ಲಾಡ್‌ನಂಥ ತಂತ್ರಜ್ಞಾನಗಳು ನಮಗೆ ಕಾನೂನು ಸೇವೆ/ಸಂಶೋ ಧನೆ ಮಾಡಲು ಸಹಾಯಮಾಡಬಹುದು. ಅಂದರೆ ನಮಗೆ ಬೇಕಾದ ತೀರ್ಪನ್ನು ಅವು ಹುಡುಕಿಕೊಡಬಹುದು. ಆದರೆ ವಾದ ಮಾಡುವುದು, ತೀರ್ಪು ಬರೆಯುವುದು ಮತ್ತು ನ್ಯಾಯ ಒದಗಿಸುವುದು ಇಂದಿಗೂ ಮತ್ತು ಎಂದೆಂದಿಗೂ ಮನುಷ್ಯನೇ. ಆದ್ದರಿಂದ ಯುವ ವಕೀಲರು ‘ಎಐ’ ಬರುತ್ತದೆ ಎಂದು ಹೆದರಬೇಕಿಲ್ಲ, ಬದಲಾಗಿ ಅದನ್ನು ಸರಿಯಾಗಿ ಬಳಸಲು ಕಲಿಯಬೇಕು ಅಷ್ಟೇ.

ಆಂಥ್ರೋಪಿಕ್ ಬೇಕಾದರೆ ಕಾನೂನಿನ ನೂರಾರು ಸೆಕ್ಷನ್‌ಗಳನ್ನು ಓದಬಹುದು, ಆದರೆ ಒಬ್ಬ ಅಸಹಾಯಕನಿಗೆ ಧೈರ್ಯ ತುಂಬಲು ಅದಕ್ಕೆ ಸಾಧ್ಯವಿಲ್ಲ. ಕಾನೂನು ಎಂದರೆ ಕೇವಲ ನ್ಯಾಯವಲ್ಲ, ಅದೊಂದು ಭಾವನೆ ಕೂಡ. ನಮ್ಮ ಭಾರತೀಯ ವಕೀಲರು ಇದರಿಂದ ಕಲಿಯಬೇಕಾದ ಪಾಠವೆಂದರೆ- ‘ಎಐ’ ನಿಮ್ಮ ಕೆಲಸವನ್ನು ಕಸಿದುಕೊಳ್ಳುವು ದಿಲ್ಲ, ಆದರೆ ‘ಎಐ’ ಬಳಸುವ ಇನ್ನೊಬ್ಬ ವಕೀಲ ನಿಮ್ಮ ಕೆಲಸ ಕಸಿದುಕೊಳ್ಳಬಹುದು.

ಆಂಥ್ರೋಪಿಕ್ ‘ಎಐ’ ನಮ್ಮ ಕೆಲಸವನ್ನು ಸುಲಭ ಮಾಡಬಹುದು (ಟೈಪಿಂಗ್, ಸಂಶೋ ಧನೆ ಇತ್ಯಾದಿ). ಆದರೆ ಒಬ್ಬ ವಕೀಲರ ಸ್ಥಾನವನ್ನು ಅದು ಯಾವತ್ತೂ ತುಂಬಲಾರದು. ಅಮೆರಿಕದ ಲಾ-ಫಾರ್ಮ್‌ಗಳು ಬಿದ್ದಿರಬಹುದು, ಆದರೆ ಭಾರತೀಯ ವಕೀಲರು ‘ಅಪ್ ಡೇಟ್’ ಆದರೆ ಮಾತ್ರ ಸದಾ ಗೆಲ್ಲುತ್ತಾರೆ. ‌

ತಂತ್ರಜ್ಞಾನವು ನಮಗೆ ‘ಗುಲಾಮ’ನಾಗಿರಬೇಕೇ ಹೊರತು ‘ಯಜಮಾನ’ ನಾಗಬಾರದು. ತಂತ್ರeನವು ಸಮುದ್ರದ ಅಲೆಯಂತೆ ಬರಲಿ, ನಾವು ಅದರಲ್ಲಿ ಈಜುವುದನ್ನು ಕಲಿಯೋಣ. ಆದರೆ ಸಮುದ್ರವೇ ನಮ್ಮನ್ನು ನುಂಗಲು ಬಿಡಬಾರದು. ಆಂಥ್ರೋಪಿಕ್ ‘ಎಐ’ ಎಂಬುದು ವಕೀಲರಿಗೆ ಒಂದು ದಿಕ್ಸೂಚಿಯಾಗಬಹುದೇ ಹೊರತು, ಅದು ಯಾವತ್ತೂ ಹಡಗಿನ ಕಪ್ತಾನನಾಗಲು ಸಾಧ್ಯವಿಲ್ಲ!

(ಲೇಖಕರು ಕಾನೂನು ಸಲಹೆಗಾರರು)