Vinayak M Bhat Column: ಹೆಸರು ಮಾತ್ರ ದೊಡ್ಡದು, ಆದರೆ ಮೊಸರು ತೆಳ್ಳಗೇ !
ಲೈಂಗಿಕ ಶೋಷಣೆ ಮತ್ತು ಬಲವಂತದ ಮತಾಂತರದ ಈ ಕೆಟ್ಟ ಕಥೆಯು 2022ರ ಪ್ರಾರಂಭ ವಾದದ್ದಾಗಿದ್ದು, ಈಗಲೂ ಕೆಲವು ಬಲಿಪಶುಗಳು ಕಿರುಕುಳವನ್ನು ಎದುರಿಸುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಮದುವೆಯ ಸುಳ್ಳು ಭರವಸೆಯ ಮೇಲೆ ಸಹೋದ್ಯೋಗಿಯೊಬ್ಬ ತನ್ನೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ಆರೋಪಿಸಿದ ಮಹಿಳೆಯೊಬ್ಬರು ನೀಡಿದ ದೂರಿನಿಂದ ಈ ಪ್ರಕರಣ ಬೆಳಕಿಗೆ ಬಂತು.
-
ವಿದ್ಯಮಾನ
ಸುಮಾರು 20 ವರ್ಷಗಳ ಹಿಂದಿರಬಹುದು, ನಾನು ಹಾಸನದಲ್ಲಿ ಒಂದು ಖಾಸಗಿ ಕಂಪನಿಯಲ್ಲಿ ಮಾನವ ಸಂಪನ್ಮೂಲ ವಿಭಾಗದ ವ್ಯವಸ್ಥಾಪಕನಾಗಿ ಕೆಲಸ ಮಾಡುತ್ತಿದ್ದೆ. ಹಳ್ಳಿ-ಹಳ್ಳಿ ತಿರುಗಿ ಮೂರು ಸಾವಿರಕ್ಕೂ ಹೆಚ್ಚು ಹೆಣ್ಣುಮಕ್ಕಳನ್ನು ಕೆಲಸಕ್ಕೆ ಸೇರಿಸಿ ಅಲ್ಲಿ ಅವರಿಗೆ ತರಬೇತಿ ನೀಡಲಾ ಗುತ್ತಿತ್ತು. ಅವರನ್ನು ವ್ಯವಸ್ಥಿತವಾದ ಹಾಸ್ಟೆಲ್‌ಗಳಲ್ಲಿ ಇರಿಸಿ, ಯಾವುದಕ್ಕೂ ತೊಂದರೆ ಇಲ್ಲದ ರೀತಿಯಲ್ಲಿ ಬಹಳ ಸುರಕ್ಷಿತವಾಗಿ ನೋಡಿಕೊಳ್ಳಲಾಗುತ್ತಿತ್ತು. ಎಲ್ಲವೂ ಚನ್ನಾಗಿ ನಡೆಯುತ್ತಿತ್ತು.
ಒಂದು ದಿನ ಮಹಿಳಾ ಭದ್ರತಾ ಸಿಬ್ಬಂದಿಯೊಬ್ಬರು ಬಂದು, ಸರ್ ಹಾಸ್ಟೆಲ್‌ನಲ್ಲಿ ಸಾಯಂಕಾಲ ಯಾವುದೋ ಇಂಗ್ಲಿಷ್ ಪುಸ್ತಕವನ್ನು ಎಲ್ಲರಿಗೂ ಕೊಡಲಾಗುತ್ತದೆ, ಅದರ ಪಾಠಗಳು ನಡೆಯುತ್ತವೆ, ಆಪ್ತಸಮಾಲೋಚನೆ ನಡೆಯುತ್ತವೆ, ಇದು ಕೆಲವು ಹೆಣ್ಣುಮಕ್ಕಳಿಗೆ ಇಷ್ಟವಾಗುತ್ತಿಲ್ಲ ಎಂದು ದೂರು ನೀಡಿದ್ದಾರೆ ಎಂದರು. ನೀವು ಹೇಳುವ ಆ ಇಂಗ್ಲಿಷ್ ಪುಸ್ತಕ ಯಾವುದು ಎನ್ನುವುದನ್ನು ನೋಡಬೇಕು ಎಂದೆ, ಆಕೆ ತಂದು ತೋರಿಸಿದಾಗ ಅದು ಬೈಬಲ್ಲಿನ ಪುಸ್ತಕ ಎನ್ನುವುದು ತಿಳಿಯಿತು.
ಅಲ್ಲಿ ನಡೆಯುತ್ತಿರುವುದು ಮತಾಂತರದ ಪ್ರಕ್ರಿಯೆಯಾಗಿತ್ತು. ನಾನು ಕುಸಿದು ಬೀಳುವುದೊಂದು ಬಾಕಿ!. ರಾಜಕೀಯವಾಗಿ ಹಾಸನ ಬಹಳ ಸೂಕ್ಷ್ಮ ಪ್ರದೇಶ, ದೇವೇಗೌಡರ ಕುಟುಂಬ ಸಕ್ಷಮವಾಗಿದ್ದ ಕಾಲವದು. ದೇವೇಗೌಡರು ಆಗತಾನೆ ಪ್ರಧಾನಮಂತ್ರಿ ಹುದ್ದೆಯಿಂದ ಪದಚ್ಯುತಗೊಂಡು ಬಂದವರು, ಅವರ ಒಂದು ಮಗ ಮುಖ್ಯಮಂತ್ರಿ, ಇನ್ನೊಂದು ಮಗ ಮಂತ್ರಿ. ಯಾವುದೋ ಕಂಪನಿಯವರು ತಮ್ಮೂರಿಗೆ ಬಂದು ಮತಾಂತರ ಮಾಡುತ್ತಿದ್ದಾರೆ ಎನ್ನುವುದು ತಿಳಿದರೆ ಸುಮ್ಮನೆ ಬಿಟ್ಟಾರೆಯೇ ನಮ್ಮನ್ನು? ಕೊನೆಗೆ ಇದರ ಹಿಂದೆ ಇರುವವರು ಯಾರು ಎಂದು ನೋಡಿದರೆ, ಮಾನವ ಸಂಪನ್ಮೂಲ ವಿಭಾಗದಲ್ಲಿ ನನ್ನ ಕಿರಿಯ ಸಹೋದ್ಯೋಗಿಯಾಗಿದ್ದ ಒಬ್ಬ ಕ್ರೈಸ್ತ ಹುಡುಗಿ ಈ ಕೆಲಸ ಮಾಡಿದ್ದಳು.
ಹಿಂದೆಲ್ಲ ಹಣಕಾಸಿನ ಅಗತ್ಯವಿರುವ ಬಡ ಜನರನ್ನು ಹೀಗೆ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುವ ಕೆಲಸ ಅಲ್ಲಲ್ಲಿ ನಡೆಯುತ್ತಿತ್ತು. ಈಗ ಬರೇ ಬಡವರಲ್ಲ, ವೈದ್ಯರು, ಐಟಿ ಕಂಪನಿಗಳಲ್ಲಿ ಕೆಲಸ ಮಾಡುತ್ತಾ ಕೈತುಂಬ ಕೆಲಸ ಮಾಡುವ ಜನರನ್ನೇ ಟಾರ್ಗೆಟ್ ಮಾಡಲಾಗುತ್ತಿದೆ.
ಇದನ್ನೂ ಓದಿ: Vinayak M Bhat Column: ಒಂದು ದೇಶ, ಒಂದೇ ಭಾಷೆ ಎನ್ನುವುದು ಸರಿಯಲ್ಲ
ವಿವಿಧ ವಿಧಾನಗಳಿಂದ ಅವರ ಬ್ರೇನ್ ವಾಶ್ ಮಾಡಿ ಮತಾಂತರ ಮಾಡುವ ವ್ಯವಸ್ಥಿತ ಪ್ರಯತ್ನ ಗಳು ನಡೆಯತ್ತಿವೆ. ಐಟಿ ಕಂಪನಿಗಳಲ್ಲಿ ಅದರಲ್ಲೂ ‘ಟಿಸಿಎಸ್’ನಂಥಾ ದಿಗ್ಗಜ ಐಟಿ ಕಂಪನಿಗಳು ಮಹಿಳೆಯರಿಗೆ ಕೆಲಸ ಮಾಡಲು ಅತ್ಯಂತ ಸೂಕ್ತ ಹಾಗೂ ಸುರಕ್ಷಿತ ಸ್ಥಳ ಎನ್ನುವ ಪ್ರತೀತಿ ಇತ್ತು, ಮಹಿಳೆಯರ ರಕ್ಷಣೆಗೆ ಅಲ್ಲಿ ‘ಪೊಶ್’ ( POSH-Prevention of sexsual Harassment) ನಂಥಾ ಅಗತ್ಯ ನೀತಿನಿಯಮಗಳು ಇರುತ್ತವೆ, ದೂರುಗಳನ್ನು ಸ್ವೀಕರಿಸಿ ಪರಿಹರಿಸಲು ಸಮಿತಿಗಳಿರುತ್ತವೆ, ಇವನ್ನೆಲ್ಲ ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗುತ್ತದೆ ಎಂಬ ನಂಬಿಕೆಯಿತ್ತು.
ಆದರೆ ಇಂಥಾ ಹೆಸರುವಾಸಿ ಸಂಸ್ಥೆಗಳ ನಿಜಬಣ್ಣ ಈಗ ಬಯಲಾಗುತ್ತಿದೆ. ಅಂತೂ, ಎಲ್ಲರ ಮನೆಯ ದೋಸೆಯೂ ತೂತೇ ಎನ್ನುವುದು ಸಾಬೀತಾದಂತಾಯ್ತು. ಅಥವಾ ಈ ಪ್ರಕರಣವನ್ನು ಹೀಗೂ ನೋಡಬಹುದು, ವ್ಯವಸ್ಥೆಗಳೆಲ್ಲ ಅತ್ಯಂತ ಸರಿಯಾಗಿದೆ ಎಂದು ಹೇಳಲಾಗಿರುವ ಟಿಸಿಎಸ್‌ನಂಥ ಪ್ರತಿಷ್ಠಿತ ಸಂಸ್ಥೆಯ ಇಷ್ಟೆಲ್ಲ ಅವಾಂತರಗಳು ಆಗುವಾಗ, ಸಣ್ಣ-ಪುಟ್ಟ ಸಂಸ್ಥೆಗಳಲ್ಲಿ ಕೆಲಸ ಮಾಡುವ, ಅಥವಾ ಮಹಿಳೆಯರೇ ಹೆಚ್ಚಾಗಿ ಕೆಲಸ ಮಾಡುವ ಗಾರ್ಮೆಂಟ್ಸ್ ನಂಥ ಕಂಪನಿಗಳ ಕಥೆಯೇನು ಎನ್ನುವುದು ಆತಂಕದ ವಿಷಯವಾಗಿದೆ.
ಒಂದು ಕಡೆ, ಕೆಲಸದ ಸ್ಥಳದಲ್ಲಿ Diversity, Equity and Inclusion ಬಗ್ಗೆ ಉದ್ದುದ್ದ ಭಾಷಣ ಬಿಗಿಯುವ ಇಂಥಾ ಕಂಪನಿಗಳು, ತಿನ್ನುವುದು ಮಾತ್ರ ಬದನೆಕಾಯಿಯನ್ನೇ ಅಂದಂಗಾಯ್ತು. ಇಂಥಾ ಕಂಪನಿಗಳ ಹೆಸರು ಮಾತ್ರ ದೊಡ್ಡದು, ಆದರೆ ಮೊಸರು ತೆಳ್ಳಗೇ ಇದೆ ಎನ್ನುವುದು ಸಾಬೀತಾಗುತ್ತಿದೆ.
ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್‌ನ ಬಿಪಿಒ ಘಟಕದಲ್ಲಿ ಕೆಲಸ ಮಾಡುವ ಹಿಂದೂ ಮಹಿಳೆಯರ ವ್ಯವಸ್ಥಿತ ಲೈಂಗಿಕ ಶೋಷಣೆ, ಬಲವಂತದ ಮತಾಂತರದ ಸುದ್ದಿಗಳು ದೇಶಾದ್ಯಂತ ಆಘಾತದ ಅಲೆಗಳನ್ನು ಸೃಷ್ಟಿಸಿವೆ. ಹಿಂದೂ ಸಿಬ್ಬಂದಿಗಳನ್ನು ಗುರಿಯಾಗಿಸಿಕೊಂಡು ಲೈಂಗಿಕ ಕಿರುಕುಳ, ಶೋಷಣೆ ಮತ್ತು ಬಲವಂತದ ಧಾರ್ಮಿಕ ಮತಾಂತರ ಪ್ರಯತ್ನಗಳ ಮಾದರಿ ಇದಾಗಿದೆ ಎಂದು ಆರೋಪಿಸಿ ಅನೇಕ ಮಹಿಳಾ ಉದ್ಯೋಗಿಗಳು ನಾಸಿಕ್ ನಗರ ಪೊಲೀಸರಿಗೆ ದೂರು ನೀಡಿದ್ದಾರೆ.
ಲೈಂಗಿಕ ಶೋಷಣೆ ಮತ್ತು ಬಲವಂತದ ಮತಾಂತರದ ಈ ಕೆಟ್ಟ ಕಥೆಯು 2022ರ ಪ್ರಾರಂಭ ವಾದದ್ದಾಗಿದ್ದು, ಈಗಲೂ ಕೆಲವು ಬಲಿಪಶುಗಳು ಕಿರುಕುಳವನ್ನು ಎದುರಿಸುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಮದುವೆಯ ಸುಳ್ಳು ಭರವಸೆಯ ಮೇಲೆ ಸಹೋದ್ಯೋಗಿಯೊಬ್ಬ ತನ್ನೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ಆರೋಪಿಸಿದ ಮಹಿಳೆಯೊಬ್ಬರು ನೀಡಿದ ದೂರಿ ನಿಂದ ಈ ಪ್ರಕರಣ ಬೆಳಕಿಗೆ ಬಂತು.
ತನಿಖೆ ಮುಂದುವರೆದಂತೆ, ಹೆಚ್ಚಿನ ಮಹಿಳೆಯರು ಸಹೋದ್ಯೋಗಿಗಳ ವಿರುದ್ಧ ಲೈಂಗಿಕ ಕಿರುಕುಳ ದ ಆರೋಪಗಳೊಂದಿಗೆ ಮುಂದೆ ಬಂದರು. ಈ ಘಟನೆಗಳು ಇಂದು ನೆನ್ನೆಯದಲ್ಲ, ಫೆಬ್ರವರಿ 2022 ರಿಂದಲೇ ನಡೆಯುತ್ತಿತ್ತು ಎಂದು ಆರೋಪಿಸಲಾಗಿದೆ.
ನಾಸಿಕ್ ಪೊಲೀಸರು ರಹಸ್ಯ ಕಾರ್ಯಾಚರಣೆಯನ್ನು ನಡೆಸಿದ್ದು, ಇದರಲ್ಲಿ ಮಹಿಳಾ ಪೊಲೀಸ್ ಅಧಿಕಾರಿಗಳು ಮಾರುವೇಷದಲ್ಲಿ ಟಿಸಿಎಸ್ ಕಚೇರಿಗೆ ಪ್ರವೇಶಿಸಿ ಅಲ್ಲಿನ ಆಗುಹೋಗುಗಳನ್ನು ಗಮನಿಸಿzರೆ. ಇದುವರೆಗೂ ಒಂಬತ್ತು ಪ್ರಕರಣಗಳನ್ನು ದಾಖಲಿಸಲಾಗಿದ್ದು, ಏಳು ಆರೋಪಿಗಳನ್ನು ಗುರುತಿಸಲಾಗಿದೆ. ಆರು ಮಂದಿ ನ್ಯಾಯಾಂಗ ಬಂಧನದಲ್ಲಿದ್ದರೆ, ಒಬ್ಬ ಆರೋಪಿ ತಲೆಮರೆಸಿ ಕೊಂಡಿದ್ದಾಳೆ.
ಬಂಧನಕ್ಕೊಳಗಾದ ಆರೋಪಿಗಳು; ಆಸಿಫ್ ಅನ್ಸಾರಿ, ಶಫಿ ಶೇಖ್, ಶಾರುಖ್ ಖುರೇಷಿ (ಶಾರುಖ್ ಖುರೇಷಿ ಎಂದೂ ಕರೆಯಲ್ಪಡುತ್ತಾರೆ), ರಜಾ ಮೆಮನ್, ತೌಸಿಫ್ ಅತ್ತರ್ ಮತ್ತು ಡ್ಯಾನಿಶ್ ಶೇಖ್ ಎಂದು ಗುರುತಿಸಲಾಗಿದೆ. ಪದೇ ಪದೆ ಅನುಚಿತ ದೈಹಿಕ ಸ್ಪರ್ಶ, ಅಶ್ಲೀಲ ಟೀಕೆಗಳು, ಲೈಂಗಿಕ ಕಿರುಕುಳ ಮತ್ತು ಕೆಲವು ಸಂದರ್ಭಗಳಲ್ಲಿ ಮದುವೆಯ ಸುಳ್ಳು ಭರವಸೆಗಳ ಅಡಿಯಲ್ಲಿ ಮತಾಂತರ ಗಳು ನಡೆಯುತ್ತಿತ್ತು. ಈ ಕುರಿತು ಮಾನವ ಸಂಪನ್ಮೂಲ ಇಲಾಖೆ ಸೇರಿದಂತೆ ಸಂಸ್ಥೆಯ ಉನ್ನತ ಅಧಿಕಾರಿಗಳಿಗೆ ನೀಡಿದ ದೂರುಗಳನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಲಾಗಿದೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ.
ನಿದಾ ಖಾನ್ ಎಂದು ಗುರುತಿಸಲಾದ ಮಾನವ ಸಂಪನ್ಮೂಲ ಮುಖ್ಯಸ್ಥರು ಇದರಲ್ಲಿ ನೇರವಾಗಿ ಭಾಗಿಯಾಗಿದ್ದಾರೆ ಮತ್ತು ಪುನರಾವರ್ತಿತ ದೂರುಗಳಿಗೆ ಆಕೆ ಕಿವಿಗೊಡಲಿಲ್ಲ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಸಂಸ್ಥೆಯ ಹಿರಿಯ ಮುಸ್ಲಿಂ ಅಧಿಕಾರಿಗಳು ಹುಡುಗಿಯರಿಗೆ ಉದ್ಯೋಗ ಮತ್ತು ಉತ್ತಮ ಸಂಬಳದ ಭರವಸೆ ನೀಡುವ ಮೂಲಕ ಆಮಿಷವೊಡ್ಡಿ ಅವರನ್ನು ಬಲೆಗೆ ಬೀಳಿಸಿ ಮತಾಂತರಿಸಿದರು, ನಮಾಜ್ ಮಾಡುವಂತೆ ಮಾಡಿದರು, ರೋಜಾ ಆಚರಿಸುವಂತೆ ಮಾಡಿದರು ಮತ್ತು ಗೋಮಾಂಸ ವನ್ನು ಬಲವಂತವಾಗಿ ತಿನ್ನಿಸಿದ್ದರು ಎನ್ನುವುದು ತಿಳಿದುಬಂದಿದೆ. ತನಿಖಾಧಿಕಾರಿಗಳು ಇವರಿಬ್ಬ ರನ್ನು ತೌಸಿಫ್ ಅತ್ತರ್ ಮತ್ತು ನಿದಾ ಖಾನ್ ಎಂದು ಗುರುತಿಸಿದ್ದು. ತಲೆಮರೆಸಿ ಕೊಂಡಿರುವ ನಿದಾ ಖಾನ್ ಅವರನ್ನು ಪತ್ತೆ ಹಚ್ಚಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ಮುಂಬೈಗೆ ವರ್ಗಾವಣೆಯಾಗುವ ಮೊದಲು ನಿದಾ ಖಾನ್ ನಾಸಿಕ್ ಕಚೇರಿಯಲ್ಲಿ ಮಾನವ ಸಂಪನ್ಮೂಲ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದರು. ತೌಸಿಫ್ ಮತ್ತು ನಿದಾ ಇಬ್ಬರೂ ಇತರ ಉದ್ಯೋಗಿಗಳನ್ನು ಬ್ರೈನ್ ವಾಶ್ ಮಾಡಲು ಪ್ರಯತ್ನಿಸುತ್ತಿದ್ದರು, ತೌಸಿಫ್ ಮೂರು ವರ್ಷಗಳ ಹಿಂದೆ ಮೆಕ್ಕಾದಿಂದ ಹಿಂದಿರುಗಿದ ನಂತರ ಅತ್ಯಂತ ತೀವ್ರಗಾಮಿಯಾಗಿದ್ದರು ಎನ್ನುವ ವಿಚಾರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ಆತ ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳನ್ನು ಹೊಂದಿದ್ದವ ಎಂಬ ಸತ್ಯವನ್ನು ಮರೆಮಾಚಿ, ಮದುವೆಯ ಸುಳ್ಳು ಭರವಸೆಗಳ ಮೇಲೆ ಸಂತ್ರಸ್ತೆಯ ಮೇಲೆ ಅತ್ಯಾಚಾರ ಎಸಗಿದ್ದಾನಂತೆ. ನಿದಾ ಖಾನ್, ಯುವತಿಯರನ್ನು ಆರೋಪಿಗಳಿಗೆ ಪರಿಚಯಿಸುತ್ತಿದ್ದಳು ಮತ್ತು ಹಿಂದೂ ಧರ್ಮದ ಬಗ್ಗೆ ನಿರಂತರವಾಗಿ ಕೆಟ್ಟದಾಗಿ ಮಾತನಾಡುತ್ತಿದ್ದಳು, ಸಂತ್ರಸ್ತರಿಗೆ ನಮಾಝ್ ಮಾಡುವುದು ಮತ್ತು ಕಲ್ಮಾ ಪಠಿಸುವುದು ಹೇಗೆ ಎಂದು ಕಲಿಸುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಆಪಾದಿತೆ ನಿದಾ ಖಾನ್ ಅವರಿಗೆ ಕೆಂಪುಕೋಟೆ ಭಯೋತ್ಪಾದನಾ ಕೃತ್ಯದಲ್ಲಿ ಆಪಾದಿತಳಾಗಿ ಎನ್‌ಐಏ ಕಸ್ಟಡಿಯಲ್ಲಿರುವ ಡಾ. ಶಾಹೀನ್ ಮತ್ತು ಭಾರತದಿಂದ ಪರಾರಿಯಾಗಿ ಮಲೇಷ್ಯಾದಲ್ಲಿ ಕುಳಿತಿರುವ ಮತಾಂಧ ಝಾಕಿರ್ ನಾಯಕ್ ಅವರ ಜತೆಗೂ ಸಂಬಂಧವಿದೆ ಎನ್ನಲಾಗುತ್ತಿದೆ. ಹಾಗಾಗಿ, ಈ ಪ್ರಕರಣವನ್ನು ಪೊಲೀಸರು ಕೇವಲ ಲೈಂಗಿಕದೌರ್ಜನ್ಯದ ಅಥವಾ ಬಲವಂತದ ಮತಾಂತರದ ಪ್ರಕರಣವಾಗಿಯಷ್ಟೇ ಅಲ್ಲದೇ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಪ್ರಕರಣ ವಾಗಿಯೂ ನೋಡುವ ಅಗತ್ಯವಿದೆ.
ಟಿಸಿಎಸ್ ಈಗ ತನ್ನ ಹಿತಾಸಕ್ತಿಗಳನ್ನು ಭದ್ರಪಡಿಸಿಕೊಳ್ಳುವ ಪ್ರಯತ್ನದಲ್ಲಿದ್ದು, ಟಾಟಾ ಸನ್ಸ್ ಅಧ್ಯಕ್ಷ ಎನ್.ಚಂದ್ರಶೇಖರನ್, ಸಂಸ್ಥೆಯ ನಾಸಿಕ್ ಶಾಖೆಯಿಂದ ಹೊರಹೊಮ್ಮುತ್ತಿರುವ ಘಟನೆ ಗಳು ತೀವ್ರ ಕಳವಳಕಾರಿ ಮತ್ತು ದುಃಖಕರವಾಗಿವೆ ಎಂದು ಹೇಳುವ ಮೂಲಕ ತಿಪ್ಪೆ ಸಾರಿಸುವ ಕೆಲಸಮಾಡು ತ್ತಿದ್ದಾರೆ. ಈ ಘಟನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗುತ್ತಿದೆ.
ಆರೋಪಿ ನೌಕರರ ವಿರುದ್ಧ ಈಗಾಗಲೇ ಕ್ರಮ ಕೈಗೊಳ್ಳಲಾಗಿದ್ದು, ನಡೆಯುತ್ತಿರುವ ತನಿಖೆಗೆ ಕಂಪನಿ ಸಂಪೂರ್ಣ ಸಹಕಾರ ನೀಡುತ್ತಿದೆ. ಟಾಟಾ ಗ್ರೂಪ್ ತನ್ನ ಉದ್ಯೋಗಿಗಳ ಯಾವುದೇ ರೀತಿಯ ಬಲವಂತ ಅಥವಾ ದುರ್ನಡತೆಯ ಬಗ್ಗೆ ಶೂನ್ಯ ಸಹಿಷ್ಣುತೆ ನೀತಿಯನ್ನು ಹೊಂದಿದೆ. ಸತ್ಯವನ್ನು ಹೊರ ತರಲು ಮತ್ತು ಈ ಪರಿಸ್ಥಿತಿಗೆ ಕಾರಣವಾದ ಎಲ್ಲ ವ್ಯಕ್ತಿಗಳನ್ನು ಗುರುತಿಸಲು ಸಮಗ್ರ ತನಿಖೆ ನಡೆಯುತ್ತಿದೆ ಎಂದು ಪಕ್ಕಾ ರಾಜಕಾರಣಿಗಳ ಧಾಟಿಯಲ್ಲಿ ಮಾತನಾಡುತ್ತಿದ್ದಾರೆ.
ಅಲ್ಲಿಗೆ ಇವರ ಜವಾಬ್ದಾರಿ ಮುಗಿದಂತಾಯಿತ? ದೇಶಾದ್ಯಂತ ಇದನ್ನು ಕಾರ್ಪೊರೇಟ್ ಜಿಹಾದ್ ಪ್ರಕರಣಎಂದು ಪರಿಗಣಿಸಲಾಗುತ್ತಿದ್ದು, ಲಕ್ಷಾಂತರ ಐಟಿ ಉದ್ಯೋಗಿಗಳಿಗೆ ರಕ್ಷಣೆ ನೀಡುವಂತೆ ಎಡೆಯಿಂದ ಒತ್ತಾಯ ಕೇಳಿ ಬರುತ್ತಿದೆ.
ನಿಮ್ಮ ನಾಸಿಕ್ ಬಿಪಿಒ ದಲ್ಲಿ ಹೊರಹೊಮ್ಮಿದ ವಿಷಯಗಳಿಗೆ ನಿಮ್ಮ ಮಂದ ಪ್ರತಿಕ್ರಿಯೆ ಅಸಮರ್ಪಕ ಮಾತ್ರ ವಲ್ಲದೆ ಆಕಸ್ಮಿಕ ಎನ್ನುವಂತೆ ಬಿಂಬಿಸಿ ತಳ್ಳಿ ಹಾಕುವಂತಿದೆ, ನಿಮ್ಮ ಅತ್ಯಂತ ಸೌಮ್ಯ ಪ್ರತಿಕ್ರಿಯೆ ನಿರಾಶಾದಾಯಕವಾಗಿದೆ ಎಂದು ಅನೇಕ ಹಿಂದೂ ಮಹಿಳಾ ಸಂಘಟನೆಗಳು ಟಿಸಿಎಸ್ ಸಂಸ್ಥೆಯನ್ನು ದೂರುತ್ತಿವೆ.
ಸಾಮಾಜಿಕ ಮಾಧ್ಯಮ ಮತ್ತು ಸಾರ್ವಜನಿಕ ಸಂವಾದವು ಐಟಿ ವಲಯದಲ್ಲಿ ಕೆಲಸದ ಸ್ಥಳದ ಸುರಕ್ಷತೆ, ಯುವ ಉದ್ಯೋಗಿಗಳ ದುರ್ಬಲತೆ ಮತ್ತು ಧಾರ್ಮಿಕ ಬಲವಂತದೊಂದಿಗೆ ವೃತ್ತಿಪರ ಸುರಕ್ಷಿತ ಪರಿಸರದ ಬಗ್ಗೆ ಕಳವಳಗಳನ್ನು ಎತ್ತಿ ತೋರಿಸುತ್ತಿದೆ. ಕಾರ್ಪೊರೇಟ್ ಭಾರತದಲ್ಲಿ ಆಂತರಿಕ ದೂರು ಕಾರ್ಯವಿಧಾನಗಳ ಬಗ್ಗೆ ನಡೆಯುತ್ತಿರುವ ಚರ್ಚೆಗಳು ಮತ್ತು ಎಲ್ಲ ರೀತಿಯ ಕೆಲಸದ ಸ್ಥಳದ ಕಿರುಕುಳದ ವಿರುದ್ಧ ದೃಢವಾದ ರಕ್ಷಣೆಗಳ ಅಗತ್ಯವನ್ನು ಈ ಪ್ರಕರಣವು ಒತ್ತಿ ಹೇಳುತ್ತದೆ.
ಭಾರತದಲ್ಲಿ ಅಲ್ಪಸಂಖ್ಯಾತರು ಅದರಲ್ಲೂ ಮುಸ್ಲಿಮರು ಸಂಕಟದಲ್ಲಿದ್ದಾರೆ ಎಂದು ಬೊಬ್ಬೆ ಹೊಡೆಯುವುದು ಒಂದುಕಡೆಯಾದರೆ, ಇದೇ ಅಲ್ಪಸಂಖ್ಯಾತ ಮೂಲಭೂತವಾದಿಗಳಿಂದ ಹಿಂಸೆ, ಅತ್ಯಾಚಾರ, ‘ಲವ್ ಜಿಹಾದ್’ಗಳಿಗೊಳಗಾವುವ ಹಿಂದೂ ಮಹಿಳೆಯರ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಲೇ ಇದೆ.
ಇತ್ತೀಚೆಗೆ ವರದಿಯಾದ ಟಿಸಿಎಸ್ ಸಂಸ್ಥೆಯಲ್ಲಿ ನಡೆದಿದೆ ಎನ್ನಲಾದ ಹಿಂದೂ ಹುಡುಗಿಯರ ಮೇಲಿನ ದೌರ್ಜನ್ಯವನ್ನು, ಮತಾಂತರದ ಪ್ರಯತ್ನಗಳನ್ನು ನೋಡುವಾಗ, ಅತ್ಯಂತ ದೊಡ್ಡ, ಹೆಸರುಮಾತಿನ ಐಟಿ ಸಂಸ್ಥೆಯಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದು ಸಾಬೀತಾಗುತ್ತದೆ. ಎಂದಿನಂತೆ ಈ ಪ್ರಕರಣದಲ್ಲೂ ಆಪಾದಿತರು ಮುಸ್ಲಿಮ್ ಮತಾಂಧರು ಹಾಗೂ ದೌರ್ಜನ್ಯಕ್ಕೊಳಗಾದವರು ಮುಗ್ಧ ಹಿಂದೂ ಹುಡುಗಿಯರು ಎನ್ನುವುದು ಗಮನಾರ್ಹ ಸಂಗತಿಯಾಗಿದೆ.
ಹಾಗಂತ ಈ ಥರದ ಅವ್ಯವಹಾರಗಳು ಕೇವಲ ಟಿಸಿಎಸ್‌ಗೆ ಸೀಮಿತವಾಗಿಲ್ಲ, ನಾಸಿಕ್‌ನ ಘಟನೆಯ ನಂತರ ದೇಶದ ದೊಡ್ಡ ಐಟಿ ಕಂಪನಿಗಳಲ್ಲಿಯೂ ತಲ್ಲಣ ಶುರುವಾಗಿದೆ. ಈ ಕುರಿತು ದೂರುಗಳು ಬರಲು ಶುರುವಾಗಿದೆ, ಅಲ್ಲಿನ ಮಹಿಳಾ ಉದ್ಯೋಗಿಗಳು ತಮ್ಮ ದೂರು ದುಮ್ಮಾನಗಳನ್ನು ಈಗ ಸಾಮಾಜಿಕ ಜಾಲತಾಣಗಳಲ್ಲಿ ತೇಲಿಬಿಡಲು ಶುರುವಿಟ್ಟುಕೊಂಡಾಗಿದೆ.
ಯಾರ ಬಣ್ಣ ಏನು? ಎಂದು ತಿಳಿಯಲು ಬಹಳ ಸಮಯ ಹಿಡಿಯಲಿಕ್ಕಿಲ್ಲ. ಸದಕ್ಕೆ ಸಿಕ್ಕಿ ಬಿದ್ದಿರು ವುದು ಟಿಸಿಎಸ್ ಕಂಪನಿ ಅಷ್ಟೆ, ಕದ್ದವರೆಲ್ಲ ಕಳ್ಳರಲ್ಲ, ಸಿಕ್ಕಿಬಿದ್ದವ ಮಾತ್ರ ಕಳ್ಳ ಎನ್ನುವುದು ಇದ್ದೇ ಇದೆಯಲ್ಲ.
ಇಷ್ಟೆಲ್ಲ ನಡೆಯುತ್ತಿದ್ದರೂ, ಈ ಪ್ರಕರಣ ಮಾಧ್ಯಮಗಳಲ್ಲಿ ಎಷ್ಟು ಸುದ್ದಿಯಾಗಬೇಕಾಗಿತ್ತೋ ಅಷ್ಟು ಆಗುತ್ತಿಲ್ಲ. ಕಾರಣ ಸರಳ, ಒಂದು ಇದು ಐಟಿ ದಿಗ್ಗಜ ಸಂಸ್ಥೆ ಟಿಸಿಎಸ್‌ನಲ್ಲಿ ನಡೆದ ಘಟನೆ ಯಾಗಿದೆ, ಎರಡನೇಯದಾಗಿ ಈ ಘಟನೆ ಬಿಜೆಪಿ ಅಧಿಕಾರದಲ್ಲಿರುವ ಮಹಾರಾಷ್ಟ್ರದಲ್ಲಿ ನಡೆಯುತ್ತಿದೆ. ಈ ಪ್ರಕರಣವನ್ನು ಇಲ್ಲಿಗೇ ಬಿಡುವುದಿಲ್ಲ, ಅದರ ಮೂಲಕ್ಕೆ ಹೋಗಿ ಸಂಪೂರ್ಣ ಸತ್ಯವನ್ನು ಬಯಲಿಗೆಳೆದು, ತಪ್ಪಿತಸ್ಥರಿಗೆ ಕಠಿಣಾತಿಕಠಿಣ ಶಿಕ್ಷೆ ನೀಡಲಾಗುವುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿಗಳೇನೋ ತಡವಾಗಿಯಾದರೂ ಹೇಳುತ್ತಿದ್ದಾರೆ.
ಸಂಸ್ಥೆ, ಬಿಜೆಪಿ ಹಾಗೂ ಮಹಾರಾಷ್ಟ್ರಾ ಸರಕಾರ ಏನು ಕ್ರಮ ತೆಗೆದುಕೊಳ್ಳುತ್ತದೆ ಎಂದು ಕಾದು ನೋಡಬೇಕಿದೆ. ಭಾರತದ ಗುಪ್ತಚರರು ಪಾಕಿಸ್ತಾನದ ಒಳಹೊಕ್ಕು ಅಲ್ಲಿನ ವ್ಯವಸ್ಥೆಯ ಭಾಗ ವಾಗಿದ್ದುಕೊಂಡು ಭಾರತದ ವಿರುದ್ಧ ಕೆಲಸಮಾಡುತ್ತಿದ್ದವರನ್ನು ಒಬ್ಬೊಬ್ಬರನ್ನಾಗಿ ಮುಗಿಸಿದ ಕಥೆಯನ್ನು ‘ಧುರಂಧರ್’ ಸಿನಿಮಾದಲ್ಲಿ ನೋಡಿ ಸಂತೋಷ ಪಡುವ ಭರದಲ್ಲಿ, ನಮ್ಮಲ್ಲಿ ಏನೆಲ್ಲ ನಡೆಯುತ್ತಿದೆ ಎನ್ನುವುದನ್ನು ನಿರ್ಲಕ್ಷ್ಯ ಮಾಡುತ್ತಿದ್ದೇವೇನೋ ಅನಿಸುತ್ತಿದೆ.
ನಮ್ಮಲ್ಲಿ ಮೋದಿಯಿದ್ದಾರೆ ಎನ್ನುವ ಅತಿ ಆತ್ಮವಿಶ್ವಾಸವೂ ಭಾರತೀಯರಿಗಿರಬಹುದು. ದೇಶದೊಳ ಗಿನ ಸುಶಿಕ್ಷಿತ ಮತಾಂಧರು, ಮೆಡಿಕಲ್ ಕಾಲೇಜುಗಳಲ್ಲಿ, ದೊಡ್ಡ ದೊಡ್ಡ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಾ, ಗಡಿಯಾಚೆಗಿನ ಮತಾಂಧರ ಅಜೆಂಡಾಗಳನ್ನು ಸಲೀಸಾಗಿ ಮುನ್ನಡೆಸು ತ್ತಿದ್ದರೂ ಗೊತ್ತಾಗದ ಭಾರತೀಯರ ಪೆದ್ದುತನವನ್ನು ತೋರಿಸಲು ಪಾಕಿಸ್ತಾನ, ಬಾಂಗ್ಲಾದೇಶಗಳೂ ಸಿನಿಮಾ ಮಾಡಬಹುದೇನೋ!