Ranjith H Ashwath Column: ಜೇಡರ ಬಲೆಯಂತಿರುವ ನದಿ ಜೋಡಣೆ ಆಲೋಚನೆ
ಕುಮಾರಸ್ವಾಮಿ ಅವರು ಈ ರೀತಿ ಟೀಕಿಸುವುದರ ಹಿಂದೆ ರಾಜಕೀಯ ಲೆಕ್ಕಾಚಾರಗಳು ಒಂದೆಡೆ ಯಾದರೆ, ನದಿ ಜೋಡಣೆಯಿಂದ ಆಗಬಹುದಾದ ಸಾಧಕ-ಬಾಧಕ, ಸದ್ಯ ಈ ಯೋಜನೆ ಯಾವ ಹಂತ ದಲ್ಲಿದೆ? ಈ ಹಿಂದೆ ನದಿ ಜೋಡಣೆಯ ವಿಷಯ ಬಂದಾಗ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸೇರಿದಂತೆ, ನೀರಾವರಿ ತಜ್ಞರು ಕೇಂದ್ರದ ಲೆಕ್ಕಾಚಾರಗಳಿಗೆ ವಿರೋಧಿಸಿದ್ದೇಕೆ? ಗೋದಾವರಿ ನದಿ ಜೋಡಣೆಯ ಗೊಂದಲದ ನಡುವೆ ವರದಾ-ಬೇಡ್ತಿ ನದಿ ಜೋಡಣೆ ತಳಕು ಹಾಕಿಕೊಂಡಿರುವುದೇಕೆ ಎನ್ನುವುದನ್ನು ಗಮನಿಸಬೇಕು.
-
ಅಶ್ವತ್ಥಕಟ್ಟೆ
ಯಾವುದೇ ದೇಶ ಅಥವಾ ರಾಜ್ಯದ ಅಭಿವೃದ್ಧಿಯಲ್ಲಿ ಆ ಪ್ರದೇಶದ ನೀರಾವರಿ ಯೋಜನೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಅದರಲ್ಲಿಯೂ ಒಣಭೂಮಿ ಹೆಚ್ಚಾಗಿರುವ ಭಾರತದಂತಹ ಅದರಲ್ಲಿ ಯೂ ದಕ್ಷಿಣ ಭಾರತದ ರಾಜ್ಯಗಳಲ್ಲಿ ಮಳೆ ಕೈಕೊಟ್ಟ ಸಮಯದಲ್ಲಿ ಎದುರಾಗುವ ಹಾಹಾಕಾರಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸರಕಾರಗಳು ಹತ್ತು ಹಲವು ಯೋಜನೆಗಳನ್ನು ರೂಪಿಸಿಕೊಂಡೇ ಬಂದಿದೆ. ಅಂತಹ ಯೋಜನೆಗಳಲ್ಲಿ ಬಹುದಶಕದ ಇತಿಹಾಸವಿರುವುದು ನದಿ ಜೋಡಣೆ.
ದಕ್ಷಿಣ ಗಂಗಾ ಎಂದೇ ಪ್ರಸಿದ್ಧವಾಗಿರುವ ಗೋದಾವರಿ ಮಹಾರಾಷ್ಟ್ರದ ನಾಸಿಕ್‌ನಲ್ಲಿ ಹುಟ್ಟಿ ಬಂಗಾಳ ಕೊಲ್ಲಿಯಲ್ಲಿ ಲೀನವಾಗಲಿದೆ. ಗೋದಾವರಿಯಲ್ಲಿ ಸರಾಸರಿ ಪ್ರತಿವರ್ಷ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಟಿಎಂಸಿ ನೀರು ಹರಿಯಲಿದೆ. ಆದ್ದರಿಂದ ಈ ನದಿಯನ್ನು ದಕ್ಷಿಣ ಭಾರತದ ಕಾವೇರಿಗೆ ಜೋಡಿಸುವ ಮೂಲಕ ದಕ್ಷಿಣ ಭಾರತದ ರಾಜ್ಯಗಳಾದ ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ ಹಾಗೂ ತಮಿಳುನಾಡಿಗೆ ನೀರು ನೀಡುವ ಉದ್ದೇಶದೊಂದಿಗೆ ನದಿ ಜೋಡಣೆ ಯೋಜನೆಗೆ ‘ಓಂಕಾರ’ ಹಾಡಲಾಗಿತ್ತು. ಆದರೆ ಯೋಜನೆಯ ಘೋಷಣೆಯಾದಾಗಿನಿಂದ ಗೊಂದಲಗಳಿಗೆ ಸ್ಪಷ್ಟ ಉತ್ತರ ಮಾತ್ರ ದೊರಕಿಲ್ಲ.
ದಕ್ಷಿಣ ಭಾರತದ ನೀರಿನ ಸಮಸ್ಯೆಯನ್ನು ನೀಗಿಸಲು ಹಾಗೂ ಸಮುದ್ರಕ್ಕೆ ಹೋಗುವ ಹೆಚ್ಚುವರಿ ನೀರನ್ನು ಬಳಸಿಕೊಳ್ಳಲು ಆರಂಭಗೊಂಡಿದ್ದೇ ‘ನದಿ ಜೋಡಣೆ’ ಎನ್ನುವ ಬೃಹತ್ ಯೋಜನೆ. ಮಹಾನದಿಗಳಾದ ಗಂಗಾ, ಗೋದಾವರಿಯಿಂದ ದಕ್ಷಿಣ ಭಾರತಕ್ಕೆ ನೀರು ಹರಿಸುವ ಆಲೋಚನೆ 80ರ ದಶಕದಲ್ಲಿಯೇ ಆರಂಭವಾಗಿದ್ದರೂ, ಕೆಲ ವರ್ಷದ ಹಿಂದೆ ಕೇಂದ್ರ ಬಜೆಟ್‌ನಲ್ಲಿ ಪ್ರಸ್ತಾಪ ವಾಗಿದ್ದು ಮಾತ್ರ ಗೋದಾವರಿಯಿಂದ ಕೃಷ್ಣಾ, ಕಾವೇರಿ-ಪೆನ್ನಾರ್‌ಗೆ ನೀರು ಹರಿಸುವುದಾಗಿತ್ತು.
ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರ ಯೋಜನೆಯನ್ನು ರೂಪಿಸಿದ್ದರೂ, ಸ್ಪಷ್ಟ ತೀರ್ಮಾನ ಕೈಗೊಂಡಿಲ್ಲ. ಅದಕ್ಕೂ ಮೊದಲೇ ಕರ್ನಾಟಕದಲ್ಲಿ ರಾಜಕೀಯ ತಿಕ್ಕಾಟ ಜೋರಾಗಿದೆ.
ಇದನ್ನೂ ಓದಿ: Ranjith H Ashwath Column: ಶುದ್ಧ ಮತಪಟ್ಟಿ ಸಿದ್ದಪಡಿಸಿದರೆ ತಪ್ಪೇನು ?
ಕಳೆದ ಕೆಲ ದಿನಗಳ ಹಿಂದೆ ಬೆಳಗಾವಿ ಪ್ರವಾಸದಲ್ಲಿದ್ದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಗೋದಾವರಿಯಿಂದ ಕೃಷ್ಣ, ಕಾವೇರಿಗೆ ನೀರು ಹರಿಸಲು ಕೇಂದ್ರ ಸರಕಾರ ಒಂದು ಲಕ್ಷ ಕೋಟಿ ಯೋಜನೆಯನ್ನು ರೂಪಿಸಿದೆ. ಇದರಲ್ಲಿ ರಾಜ್ಯಗಳು ನೀಡಬೇಕಿರುವ ಶೇ.10ರಷ್ಟು ಅನುದಾನವನ್ನು ನೀಡಲು ಆಂಧ್ರ, ತೆಲಂಗಾಣ ಹಾಗೂ ಕರ್ನಾಟಕ ಸರಕಾರ ಬದ್ಧವಾಗಿದೆ ಎಂದು ಘೋಷಣೆ ಮಾಡಿದ್ದರು. ಆದರೆ ಡಿಕೆಶಿ ಅವರ ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಕೇಂದ್ರ ಸಚಿವ ಕುಮಾರಸ್ವಾಮಿ ಅವರು, ‘ಸ್ಪಷ್ಟನೆ ಇಲ್ಲದೇ ಯಾವುದೇ ಹೇಳಿಕೆ ನೀಡಬೇಡಿ’ ಎನ್ನುವ ತಿರುಗೇಟು ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರದ ಈ ಯೋಜನೆಯನ್ನು ಜಾರಿಗೊಳಿಸಲು ನಾವು ಬದ್ಧ ಎಂದು ಕಾಂಗ್ರೆಸ್ ಸರಕಾರ ಹೇಳಿದ್ದರೂ, ಅದೇ ಸಂಪುಟದಲ್ಲಿರುವ ಕುಮಾರಸ್ವಾಮಿ ಅವರು ವಿರೋಧಿಸಲು ಕಾರಣವೇನು ಎನ್ನುವ ಪ್ರಶ್ನೆಗಳು ಏಳುವುದು ಸಹಜ. ನದಿ ಜೋಡಣೆ ಬಗ್ಗೆ ನನ್ನ ವಿರೋಧವಿಲ್ಲ ಎಂದು ಹೇಳುತ್ತಲೇ, ಗೋದಾವರಿ ಮತ್ತು ಕಾವೇರಿ ನದಿಗಳ ಜೋಡಣೆ ಯೋಜನೆ ಯಿಂದ ರಾಜ್ಯಕ್ಕೆ ಹಂಚಿಕೆಯಾಗಿರುವ ನೀರು ಎಷ್ಟು? ಎಂಬುದನ್ನು ತಿಳಿದುಕೊಂಡು ಯೋಜನೆ ಯ ಬಗ್ಗೆ ಚರ್ಚಿಸಬೇಕು. ಡಿಕೆಶಿ ಅವರಿಗೆ ಈ ಬಗ್ಗೆ ಮಾಹಿತಿ ಇಲ್ಲದಿದ್ದರೆ ನೀರಾವರಿ ತಜ್ಞರು ಅಥವಾ ಇಲಾಖೆಯ ಎಂಜಿನಿಯರ್‌ಗಳಿಂದ ಅಥವಾ ರಾಜ್ಯದ ಪರ ವಕಾಲತ್ತು ವಹಿಸುವ ವಕೀಲರ ಬಳಿ ಮಾಹಿತಿ ಪಡೆಯಬೇಕಿತ್ತು. ಅದನ್ನು ಇದ್ಯಾವುದನ್ನು ಮಾಡದೇ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು ಎಷ್ಟು ಸರಿ ಎಂದು ವಾಗ್ದಾಳಿ ನಡೆಸಿದ್ದರು.
ಕುಮಾರಸ್ವಾಮಿ ಅವರು ಈ ರೀತಿ ಟೀಕಿಸುವುದರ ಹಿಂದೆ ರಾಜಕೀಯ ಲೆಕ್ಕಾಚಾರಗಳು ಒಂದೆಡೆ ಯಾದರೆ, ನದಿ ಜೋಡಣೆಯಿಂದ ಆಗಬಹುದಾದ ಸಾಧಕ-ಬಾಧಕ, ಸದ್ಯ ಈ ಯೋಜನೆ ಯಾವ ಹಂತದಲ್ಲಿದೆ? ಈ ಹಿಂದೆ ನದಿ ಜೋಡಣೆಯ ವಿಷಯ ಬಂದಾಗ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಸೇರಿದಂತೆ, ನೀರಾವರಿ ತಜ್ಞರು ಕೇಂದ್ರದ ಲೆಕ್ಕಾಚಾರಗಳಿಗೆ ವಿರೋಧಿಸಿದ್ದೇಕೆ? ಗೋದಾವರಿ ನದಿ ಜೋಡಣೆಯ ಗೊಂದಲದ ನಡುವೆ ವರದಾ-ಬೇಡ್ತಿ ನದಿ ಜೋಡಣೆ ತಳಕು ಹಾಕಿಕೊಂಡಿರುವುದೇಕೆ ಎನ್ನುವುದನ್ನು ಗಮನಿಸಬೇಕು.
ಹಾಗೇ ನೋಡಿದರೆ, ದೇಶದಲ್ಲಿ ನದಿ ಜೋಡಣೆಯ ಪ್ರಸ್ತಾಪ ಶುರುವಾಗಿದ್ದು ಇಂದು ನಿನ್ನೆಯದಲ್ಲ. ಇಂದಿರಾ ಗಾಂಧಿ ಅವರ ಕಾಲದಲ್ಲಿಯೇ ಗಂಗಾ-ಕಾವೇರಿಯನ್ನು ಜೋಡಿಸಬೇಕು ಎನ್ನುವ ಆಲೋಚನೆ ಕೇಂದ್ರ ಸರಕಾರದಲ್ಲಿ ಮೂಡಿತ್ತು. ಇದಕ್ಕಾಗಿ ರಾಷ್ಟ್ರೀಯ ನೀರು ಅಭಿವೃದ್ಧಿ ಏಜೆನ್ಸಿ (ನ್ಯಾಷನಲ್ ವಾಟರ್ ಡೆವಲಪ್ಮೆಂಟ್ ಏಜೆನ್ಸಿ)ಯನ್ನು ರಚಿಸಲಾಗಿತ್ತು. ಇದಾದ ಬಳಿಕ ಈ ಯೋಜನೆಯ ಪ್ರಸ್ತಾಪವಿರಲಿಲ್ಲ. ಇದಾದ ಬಳಿಕ ಅಟಲ್ ಬಿಹಾರಿ ವಾಜಪೇಯಿ ಅವರ ಅವಧಿ ಯಲ್ಲಿ ನದಿ ಜೋಡಣೆಯ ಪ್ರಸ್ತಾಪ ಮಾಡಲಾಗಿತ್ತು.
ಇದಾದ ಬಳಿಕ ಈ ಇಡೀ ಯೋಜನೆಗೆ ಜೀವ ಬಂದಿದ್ದು, 2022-23ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್ ಅವರು ನದಿ ಜೋಡಣೆಗೆ ಅನುದಾನ ಮೀಸಲಿಡುವುದಾಗಿ ಘೋಷಿಸಿದ ಬಳಿಕ. ಅಂದಿನ ಭಾಷಣದಲ್ಲಿ ನಿರ್ಮಲಾ ಸೀತಾರಾಮನ್ ಅವರು 1400 ಕೋಟಿ ರು. ಅನುದಾನ ಮೀಸಲಿಡಲಾಗುವುದು ಎಂದು ಘೋಷಿಸಿದ್ದರು. ಕೇಂದ್ರ ಬಜೆಟ್ ಅವಧಿಯಲ್ಲಿಯೂ, ಮೂರು ರಾಜ್ಯಗಳ ಒಪ್ಪಿಗೆಯನ್ನು ಪಡೆದುಕೊಂಡೇ ಯೋಜನೆಯನ್ನು ಆರಂಭಿಸುವುದಾಗಿ ಘೋಷಿಸಿದ್ದರು.
ಇದಾದ ಬಳಿಕ ಈ ಯೋಜನೆ ಕೈಗೆತ್ತಿಕೊಳ್ಳಲು ವೇಗ ಸಿಕ್ಕರೂ, ಡಿಪಿಆರ್‌ನಲ್ಲಿ ಏನಿದೆ? ಎನ್ನುವ ಬಗ್ಗೆ ಸ್ಪಷ್ಟನೆ ನೀಡದೇ ಜಲಶಕ್ತಿ ಇಲಾಖೆ ಸಭೆ ಕರೆದು, ಅದರಲ್ಲಿ, ನದಿ ಜೋಡಣೆಯಿಂದ ಸುಮಾರು 247 ಟಿಎಂಸಿ ನೀರು ಸಿಗಲಿದ್ದು, ಇದರಲ್ಲಿ ಆಂಧ್ರಪ್ರದೇಶಕ್ಕೆ 90, ತೆಲಂಗಾಣಕ್ಕೆ 60 ಹಾಗೂ ತಮಿಳು ನಾಡಿಗೆ 97 ಟಿಎಂಸಿ ನೀರು ಮೀಸಲಿಡಲಾಗುವುದು ಎಂದು ವಿವರಿಸಿದರು. ಆದರೆ ಕರ್ನಾಟಕಕ್ಕೆ ಒಂದು ಹನಿಯೂ ಮೀಸಲಿಟ್ಟಿರಲಿಲ್ಲ. ಇದಕ್ಕೆ ರಾಜ್ಯ ಸರಕಾರವನ್ನು ಪ್ರತಿನಿಧಿಸಿದ್ದ ಅಧಿಕಾರಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಕ್ಕೆ ಚರ್ಚೆ ಅಲ್ಲಿಗೆ ನಿಂತಿತ್ತು.
ಇದಾದ ಬಳಿಕ 2022ರ ಫೆಬ್ರವರಿ 22ರಂದು ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಜಲಶಕ್ತಿ ಸಚಿವರಿಗೆ ಪತ್ರ ಬರೆದು, ಕಾವೇರಿ ನದಿ ಪಾತ್ರವು ಈಗಾಗಲೇ ಒಂದು ‘ಕೊರತೆಯುಳ್ಳ ಜಲಾನಯನ ಪ್ರದೇಶ’ (Deficit Basin) ಆಗಿದೆ. ಕಾವೇರಿ ಟ್ರಿಬ್ಯುನಲ್ ಪ್ರಕಾರವೇ ಇಲ್ಲಿ ನೀರಿನ ತೀವ್ರ ಅಭಾವವಿದೆ.
2011ರ ಜನಗಣತಿಯ ಆಧಾರದ ಮೇಲೆ ಬೆಂಗಳೂರಿಗೆ ಕೇವಲ 4.75 ಟಿಎಂಸಿ ನೀರನ್ನು ಹಂಚಿಕೆ ಮಾಡಲಾಗಿದೆ. ಆದರೆ ಇಂದಿನ ಜನಸಂಖ್ಯೆ 1.65 ಕೋಟಿ ದಾಟಿದ್ದು, ಇದು ಸಾಕಾಗುವುದಿಲ್ಲ. ಆದ್ದರಿಂದ ನದಿ ಜೋಡಣೆ ಯೋಜನೆಯಲ್ಲಿ ಕರ್ನಾಟಕಕ್ಕೆ ಶೇ.25ರಷ್ಟು ನೀಡಬೇಕು ಎಂದು ಆಗ್ರಹಿಸಿದ್ದರು. ಇದಕ್ಕೆ ಪ್ರತಿಯಾಗಿ ಜಲಶಕ್ತಿ ಸಚಿವಾಲಯದ ಅಂದಿನ ರಾಜ್ಯ ಸಚಿವ ಬಿಶ್ವೇಶ್ವರ ಟುಡು, ‘ನದಿ ಜೋಡಣೆ ಯೋಜನೆಗೆ ಸಂಬಂಧಿಸಿದ ಯಾವುದೇ ಟೆಂಡರ್ ಅಂತಿಮವಾಗಿಲ್ಲ. ಕೇವಲ ಪರಿಶೀಲನಾ ಹಂತದಲ್ಲಿದೆ. ಎಲ್ಲ ರಾಜ್ಯಗಳ ಅಭಿಪ್ರಾಯ ಪಡೆದ ಬಳಿಕವೇ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಉತ್ತರಿಸುವ ಮೂಲಕ, ಡಿಪಿಆರ್ ಅಂತಿಮವಾಗದಿರುವುದನ್ನು ಒಪ್ಪಿಕೊಂಡರು.
ಇದಾದ ಬಳಿಕ 2023-24ರಲ್ಲಿ ಮತ್ತೊಂದು ಸಭೆಯನ್ನು ಕರೆದು, ಈ ಹಿಂದೆ ನಿಗದಿಮಾಡಿದ್ದ 247 ಟಿಎಂಸಿ ನೀರನ್ನು ನೀಡಲು ಸಾಧ್ಯವಿಲ್ಲ. ಆದ್ದರಿಂದ ಪರಿಷ್ಕೃತ ಹಂಚಿಕೆಯಲ್ಲಿ 147 ಟಿಎಂಸಿ ನೀರು ಮಾತ್ರ ನೀಡಬಹುದು ಎಂದು ವಿವರಿಸಿ, ಅದರಲ್ಲಿ ಆಂಧ್ರಪ್ರದೇಶ, ತೆಲಂಗಾಣ ಹಾಗೂ ತಮಿಳುನಾಡಿಗೆ ಸರಾಸರಿ 45-47 ಟಿಎಂಸಿ ಹಂಚಿಕೆ ಮಾಡಿರುವುದಾಗಿ ಹೇಳಿ ಕರ್ನಾಟಕಕ್ಕೆ 15 ಟಿಎಂಸಿ ನೀರನ್ನು ನೀಡಲಾಗುವುದು ಎಂದು ಹೇಳಿದ್ದರು. ಆದರೆ ಈ 15 ಟಿಎಂಸಿ ನೀರನ್ನು ಮಲಪ್ರಭಾ ಭಾಗದಲ್ಲಿ ಹಾಗೂ ಕುಡಿಯುವ ನೀರಿಗೆ ಮಾತ್ರ ಬಳಕೆ ಮಾಡಿಕೊಳ್ಳಬೇಕು ಎಂದು ‘ಷರತ್ತು’ ವಿಧಿಸಿತ್ತು.
ಮಲಪ್ರಭಾ ಭಾಗದಲ್ಲಿ ಬಳಸಿಕೊಳ್ಳಬೇಕು ಎಂದರೆ, ಕೃಷ್ಣಾ ನದಿಪಾತ್ರದಲ್ಲಿ ಕರ್ನಾಟಕಕ್ಕೆ ಹಂಚಿಕೆ ಯಾಗಿರುವ ನೀರಿನೊಂದಿಗೆ ಹೆಚ್ಚುವರಿಯಾಗಿ 15 ಟಿಎಂಸಿ ಬಳಸಬಹುದು ಎಂದು ಹೇಳಲಾಗಿತ್ತು. ಆದರೆ ಮಲಪ್ರಭಾಕ್ಕೆ ಕಟ್ಟಲಾಗಿರುವ ಜಲಾಶಯ ಕಳೆದ ನಾಲ್ಕು ದಶಕದಲ್ಲಿ ಒಂದೆರಡು ಬಾರಿ ಹೊರತುಪಡಿಸಿ, ಇನ್ನುಳಿದ ಎಲ್ಲ ಸಮಯದಲ್ಲಿಯೂ ಖಾಲಿಯಿರುತ್ತದೆ. ಹೀಗಿರುವಾಗ, ಈ ಭಾಗ ದಲ್ಲಿ 15 ಟಿಎಂಸಿ ನೀರನ್ನು ಬಳಸಿಕೊಳ್ಳುವುದು ಹೇಗೆ? ಇದರೊಂದಿಗೆ ಕೃಷ್ಣಾ ನೀರು ಹಂಚಿಕೆ ಈಗಾಗಲೇ ಅಂತಿಮಗೊಂಡಿದೆ.
ಹೀಗಿರುವಾಗ ಹೆಚ್ಚುವರಿವಾಗಿ ನೀರು ಪಡೆಯಲು ಅವಕಾಶವೆಲ್ಲಿದೆ ಎನ್ನುವ ಪ್ರಶ್ನೆಗೆ ಕೇಂದ್ರ ಜಲಶಕ್ತಿಯ ಬಳಿ ಉತ್ತರವಿಲ್ಲವಾಗಿದೆ. ಇದೇ ಪ್ರಶ್ನೆಯನ್ನು ಇಟ್ಟುಕೊಂಡು ದೇವೇಗೌಡರು ಪುನಃ ಮತ್ತೊಂದು ಪತ್ರವನ್ನು ಬರೆದು, ಈ ಲೆಕ್ಕಾಚಾರ ಸರಿಯಿಲ್ಲ ಎಂದು ಹೇಳುವು ದರೊಂದಿಗೆ ಕೇವಲ ಕುಡಿಯುವ ನೀರಿಗೆ ಈ ನೀರನ್ನು ಬಳಸಬೇಕು ಎನ್ನುವ ಷರತ್ತು ಸರಿಯಲ್ಲ. ಆದ್ದರಿಂದ ಈ ರೀತಿ ಷರತ್ತುಬದ್ಧವಾಗಿ ನೀರು ನೀಡದೇ, 147 ಟಿಎಂಸಿಯಲ್ಲಿ ಶೇ.25ರಷ್ಟು ನೀರನ್ನು ಕಾವೇರಿ ನದಿಪಾತ್ರ ದಲ್ಲಿ ಬಳಸಿಕೊಳ್ಳಲು ಅವಕಾಶ ನೀಡಬೇಕು ಎಂದು ಮತ್ತೊಂದು ಪತ್ರ ಬರೆದರು.
ಈ ಎಲ್ಲ ಗೊಂದಲ-ಗೋಜಲು, ಪತ್ರವ್ಯವಹಾರಗಳ ಬಳಿಕ ಕೇಂದ್ರ ಜಲಶಕ್ತಿ ಇಲಾಖೆಗೆ 2025ರ ಜೂನ್‌ನಲ್ಲಿ ಪತ್ರ ಬರೆದು, ದಕ್ಷಿಣ ರಾಜ್ಯಗಳಿಗೆ ಹೆಚ್ಚುವರಿಯಾಗಿ ನೀರು ನೀಡಲು ಗೋದಾವರಿ ಯಲ್ಲಿ ಹೆಚ್ಚುವರಿ ನೀರಿಲ್ಲ ಎಂದು ಸಿಡ್ಲ್ಯೂಸಿ ಅಭಿಪ್ರಾಯಪಟ್ಟಿದೆ. ಆದರೆ ಸದ್ಯ ದಕ್ಷಿಣ ರಾಜ್ಯ ಗಳಿಗೆ ನೀಡಲು ಉದ್ದೇಶಿಸಿರುವ ನೀರು ಛತ್ತೀಸ್‌ಗಢಕ್ಕೆ ಹಂಚಿಕೆಯಾಗಿರುವ ನೀರು. ಈ ಹಿಂದೆ 1976ರ ಗೋದಾವರಿ ಟ್ರಿಬ್ಯೂನಲ್ ಆದೇಶದಂತೆ ಮಧ್ಯಪ್ರದೇಶಕ್ಕೆ ಹಂಚಿಕೆಯಾಗಿದ್ದ ನೀರಿನಲ್ಲಿ, ಮಧ್ಯಪ್ರದೇಶದಿಂದ ಬೇರ್ಪಟ್ಟ ಬಳಿಕ ಛತ್ತೀಸ್‌ಗಢಕ್ಕೆ ನೀಡಲಾಗಿರುವ 148 ಟಿಎಂಸಿ ನೀರನ್ನು ದಕ್ಷಿಣ ಭಾಗದ ರಾಜ್ಯಗಳಿಗೆ ಹಂಚಿಕೆ ಮಾಡಲಾಗುತ್ತಿದೆ.
ಛತ್ತೀಸ್‌ಗಢದವರು ತಮ್ಮ ಪಾಲಿನ ನೀರನ್ನು ಬಳಸಿಕೊಳ್ಳಲು ಬೃಹತ್ ಯೋಜನೆಗಳನ್ನು ಮಾಡದೇ ಇರುವುದರಿಂದ ಈ ನೀರನ್ನು ಡೈವರ್ಟ್ ಮಾಡಲಾಗುತ್ತಿದೆ ಎಂದು ಉತ್ತರಿಸಿದ್ದಾರೆ. ಆದರೆ ಈ ರೀತಿ ಛತ್ತೀಸ್‌ಗಢದ ನೀರನ್ನು ದಕ್ಷಿಣ ರಾಜ್ಯಗಳಿಗೆ ಹಂಚಿಕೆ ಮಾಡುವುದಕ್ಕೆ ಆ ರಾಜ್ಯದ ಅಕ್ಷೇಪಣೆ ಇಲ್ಲವೇ? ಒಂದು ವೇಳೆ ಮುಂದಿನ ಕೆಲ ವರ್ಷದಲ್ಲಿ ಛತ್ತೀಸ್‌ಗಢ ತನಗೆ ಹಂಚಿಕೆಯಾಗಿ ರುವ ನೀರನ್ನು ಬಳಸಿಕೊಳ್ಳಲು ಯೋಜನೆಗಳನ್ನು ಕೈಗೆತ್ತಿಕೊಂಡರೆ ಆಗ ಈ ಇಡೀ ನದಿ ಜೋಡಣೆ ಯೋಜನೆಯ ಕಥೆಯೇನು? ಎನ್ನುವ ಪ್ರಶ್ನೆಗಳಿಗೆ ಕೇಂದ್ರ ಜಲಶಕ್ತಿ ಇಲಾಖೆಯ ‘ಸ್ಪಷ್ಟ’ ಉತ್ತರವಿಲ್ಲ.
ಯೋಜನೆಯ ಬಗ್ಗೆಯೇ ಸ್ಪಷ್ಟನೆ ಇಲ್ಲದಿರುವಾಗ, ಭಾರಿ ಹಣ ವ್ಯಯಿಸಿ, ಗೋದಾವರಿಯನ್ನು ದಕ್ಷಿಣ ರಾಜ್ಯಗಳಿಗೆ ತಂದರೂ ನೀರು ಎಷ್ಟು ವರ್ಷ ಹರಿಯಲಿದೆ ಎನ್ನುವ ಸ್ಪಷ್ಟನೆ ಕೇಂದ್ರ ಜಲಶಕ್ತಿ ಇಲಾಖೆಗೆ ಇಲ್ಲ. ಛತ್ತೀಸ್‌ಗಢ ರಾಜ್ಯ ಬಳಸಿಕೊಳ್ಳಬೇಕಿರುವ 148 ಟಿಎಂಸಿ ನೀರನ್ನು ಕೃಷ್ಣ, ಕಾವೇರಿಗೆ ಹರಿಸಲು ಯೋಜನೆ ಆರಂಭಿಸಿದ ಕೆಲವೇ ವರ್ಷದಲ್ಲಿ ಛತ್ತೀಸ್‌ಗಢ ತನ್ನ ನೀರನ್ನು ಬಳಸಿಕೊಳ್ಳಲು ನೀರಾವರಿ ಯೋಜನೆಗಳಿಗೆ ಕೈಹಾಕಿದರೆ ಆಗ ಏನು ಮಾಡಬೇಕು? ಒಂದು ವೇಳೆ ಛತ್ತೀಸ್‌ಗಢ ಸರಕಾರ ಯೋಜನೆ ಆರಂಭಿಸಿ 148 ಟಿಎಂಸಿ ನೀರನ್ನು ತನ್ನ ರಾಜ್ಯದ ಬಳಕೆ ಮಾರ್ಗ ಕಂಡುಕೊಂಡರೆ ಗೋದಾವರಿ ನದಿಯಲ್ಲಿ ಹೆಚ್ಚುವರಿ ನೀರು ಎನ್ನುವ ಪ್ರಶ್ನೆಯೇ ಇರುವುದಿಲ್ಲ. ಆಗ ಇಡೀ ಯೋಜನೆಯೇ ಪ್ರಶ್ನಾರ್ಥಕವಾಗಲಿದೆ.
ತುಂಗಭದ್ರಾ ಜಲಾಶಯದ ಗೇಟ್‌ಗಳ ಅಳವಡಿಕೆ ಕಾರ್ಯಕ್ರಮಕ್ಕೆ ಆಂಧ್ರ-ತೆಲಂಗಾಣ ಮುಖ್ಯ ಮಂತ್ರಿಗಳು ಆರಂಭಿಸಿದಾಗ ಅನೌಪಚಾರಿಕವಾಗಿ ಈ ಯೋಜನೆಗೆ ಸಂಬಂಧಿಸಿದಂತೆ ‘ಗುಡ್ ವಿಲ್’ ನಲ್ಲಿ ಚರ್ಚಿಸಿರ ಬಹುದು. ಇದಕ್ಕೆ ಬೇಕಾಗುವ ಅನುದಾನವನ್ನು ಹಾಕುವುದಕ್ಕೆ ಮೂರು ಸರಕಾರ ಗಳು ಒಪ್ಪಿರಬಹುದು. ಆದರೆ ಕೇಂದ್ರ ಜಲಶಕ್ತಿ ಇಲಾಖೆಯ ಮುಂದೆ ಮಾಜಿ ಪ್ರಧಾನಿ ದೇವೇಗೌಡರು ಬರೆದಿರುವ ಪತ್ರಕ್ಕೆ ಸ್ಪಷ್ಟನೆ ಸಿಕ್ಕಿಲ್ಲ. ಛತ್ತೀಸ್‌ಗಢದಿಂದ ಆ ರಾಜ್ಯದ ಪಾಲಿನ ನೀರನ್ನು ಬಳಸಿ ಕೊಳ್ಳಲು ಆಗಬೇಕಿರುವ ಒಪ್ಪಂದಗಳೂ ಆಗಿಲ್ಲ. ಹೀಗಿರುವಾಗ, ತಾಂತ್ರಿಕವಾಗಿ, ಕಾನೂನಾತ್ಮಕ ವಾಗಿ ಇಷ್ಟೆಲ್ಲ ಗೊಂದಲ, ಗೋಜಲುಗಳಿರುವ ಯೋಜನೆ ಏಕಾಏಕಿ ಒಪ್ಪಿಗೆ ಸಾಧ್ಯವಿಲ್ಲ. ಈ ವಿಷಯದಲ್ಲಿ ರಾಜಕೀಯ ಮೀರಿದ ಆಲೋಚನೆ ಚರ್ಚೆ ಅಗತ್ಯ ಎನ್ನುವುದು ವಾಸ್ತವ.
1972ರಲ್ಲಿ ಅಂದಿನ ಕೇಂದ್ರ ನೀರಾವರಿ ಸಚಿವರಾಗಿದ್ದ ಪ್ರಖ್ಯಾತ ಕೆ.ಎಲ್.ರಾವ್ ಅವರು ಕೃಷಿ ಮತ್ತು ನೀರಾವರಿ ಉದ್ದೇಶಕ್ಕಾಗಿ ಗೋದಾವರಿ ಮತ್ತು ಕೃಷ್ಣಾ ನದಿಗಳನ್ನು ಜೋಡಿಸುವ ಪ್ರಸ್ತಾಪ ವನ್ನು ಅಧಿಕೃತವಾಗಿ ಮಂಡಿಸಿದರು. ಅದಾಗಿ ದಶಕಗಳೇ ಕಳೆದ ಬಳಿಕ ಈಗ ಈ ವಿಷಯ ಮತ್ತೆ ಮುನ್ನಲೆಗೆ ಬಂದಿದೆ. ಈಗಾಗಲೇ ಕರ್ನಾಟಕದ ನೀರಾವರಿಯ ವಿಷಯದಲ್ಲಿ ನೆರೆ ರಾಜ್ಯ ಗಳೊಂದಿಗೆ ಹತ್ತು ಹಲವು ವಿವಾದಗಳಿರುವುದರಿಂದ, ನದಿ ಜೋಡಣೆಯ ವಿಷಯದಲ್ಲಿ ಏಕಾಏಕಿಯ ತೀರ್ಮಾನಕ್ಕಿಂತ, ನೀರಾವರಿ ತಜ್ಞರ ಅಭಿಪ್ರಾಯಗಳು, ಕಾನೂನಾತ್ಮಕವಾಗಿ ಎದುರಾಗಬಹುದಾದ ಸಮಸ್ಯೆ ಬಗ್ಗೆ ಕಾನೂನು ತಜ್ಞರಿಂದ ಮಾಹಿತಿ, ಸರ್ವಪಕ್ಷ ಸಭೆ ಜತೆಗೆ ಸಾರ್ವಜನಿಕರಿಂದ ಈ ವಿಷಯದಲ್ಲಿ ಯಾವ ನಿಲುವು ಪಡೆಯಬೇಕೆಂಬ ಬಗ್ಗೆ ಚರ್ಚಿಸುವುದು ಅಗತ್ಯ. ಏಕೆಂದರೆ, ನೀರಾವರಿ ಯೋಜನೆಗಳ ವಿಷಯದಲ್ಲಿ ರಾಜಕೀಯ ‘ಲಾಭ-ನಷ್ಟ’ಗಳನ್ನು ಮೀರಿದ ತೀರ್ಮಾನ ಗಳನ್ನು ತೆಗೆದುಕೊಳ್ಳದೇ ಹೋದರೆ ಭವಿಷ್ಯದಲ್ಲಿ ರಾಜ್ಯ ಇದಕ್ಕೆ ದೊಡ್ಡ ದಂಡ ತೆರಬೇಕಾದ ಆತಂಕವಿರುವುದು ಸುಳ್ಳಲ್ಲ.