ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ಚಂದ್ರಘಂಟಾ ದೇವಿಯಾದ ಶಿವೆ

ಚಿನ್ನದ ಮೈಬಣ್ಣವನ್ನು ಹೊಂದಿದ ಚಂದ್ರಘಂಟೆಯಲ್ಲಿ ಹತ್ತು ತೋಳುಗಳು ಮೂಡುತ್ತದೆ. ಒಂಭತ್ತು ತೋಳುಗಳಲ್ಲಿ ತ್ರಿಶೂಲ, ಗದೆ, ಬಿಲ್ಲು-ಬಾಣ, ಖಡ್ಗ, ಕಮಲ, ಘಂಟೆ, ಕಮಂಡಲ ಹಾಗೂ ಒಂದು ತೋಳಿನಲ್ಲಿ ಅಭಯ ಮುದ್ರೆಯಿಂದ ಸಿಂಹವಾಹಿನಿಯಾಗಿ ರೂಪ ತಾಳುತ್ತಾಳೆ. ತನ್ನ ಭಕ್ತರಿಗೆ ತಾಯಿ ಯಂತೆ ಆದಿಶಕ್ತಿಯು ಸಹಾನುಭೂತಿಯನ್ನು ತೋರುತ್ತಾಳೆ ಹಾಗೂ ಕೆಟ್ಟವರಿಗೆ ಭಯಾನಕ ರೂಪದಲ್ಲಿ ಕಾಣಿಸಿಕೊಳ್ಳುತ್ತಾಳೆ.

Roopa Gururaj Column: ಚಂದ್ರಘಂಟಾ ದೇವಿಯಾದ ಶಿವೆ

-

ಒಂದೊಳ್ಳೆ ಮಾತು

rgururaj628@gmail.com

ಹಿಮವಂತ ಹಾಗೂ ಮೈನಾದೇವಿಯ ಪುತ್ರಿಯಾಗಿ ಜನಿಸಿದ ಪಾರ್ವತಿಯು ಶಿವನನ್ನು ಪಡೆಯಲು ಕಠಿಣ ತಪಸ್ಸನ್ನು ಕೈಗೊಳ್ಳುತ್ತಾಳೆ. ಪಾರ್ವತಿಯ ಕಠೋರ ತಪಸ್ಸನ್ನು ಮೆಚ್ಚಿದ ಶಿವನು ಮದುವೆ ಯಾಗಲು ಒಪ್ಪಿಕೊಳ್ಳುತ್ತಾನೆ. ಇದರಂತೆ ಹಿಮವಾನನ ಅರಮನೆಯಲ್ಲಿ ಮದುವೆಯ ಏರ್ಪಾಡು ಗಳು ನಡೆಯುತ್ತದೆ.

ಸ್ಮಶಾನವಾಸಿಯಾದ ಶಿವನು ತನ್ನ ಮೂಲ ಭಯಾನಕ ರೂಪದಲ್ಲೇ, ತನ್ನ ಗಣಗಳೊಂದಿಗೆ ಮೆರವಣಿಗೆಯಲ್ಲಿ ಅರಮನೆಯನ್ನು ತಲುಪುತ್ತಾನೆ. ಬೂದಿಯಿಂದ ಮುಚ್ಚಲ್ಪಟ್ಟ ಶರೀರ, ಕೊರಳಿ ನಲ್ಲಿ ಸುತ್ತಿದ ಹಾವುಗಳು, ಗಂಟಿನಂತಿರುವ ಜಟಾಧಾರಿ ಯಾದ ಶಿವ, ಅವನೊಂದಿಗೆ ದೆವ್ವಗಳು, ಪಿಶಾಚ, ಗಣಗಳು, ಋಷಿಮುನಿಗಳು, ಅಘೋರಿಗಳನ್ನು ಒಳಗೊಂಡ ವಿಚಿತ್ರ ಮೆರವಣಿಗೆ ಯನ್ನು ನೋಡಿ, ಪಾರ್ವತಿಯ ತಾಯಿ ಮೂರ್ಛೆ ಹೋಗುತ್ತಾಳೆ.

ವಿವಾಹಕ್ಕೆಂದು ಸೇರಿದ್ದವರು ಶಿವನ ರೂಪ, ಅವನ ಗಣಗಳನ್ನು ನೋಡಿ ಆಘಾತವನ್ನು ಅನು ಭವಿಸುತ್ತಾರೆ. ಇದನ್ನು ಕಂಡ ಪಾರ್ವತಿಯು ಶಿವನಿಗೆ ಮುಜುಗರವಾಗದಿರಲೆಂದು ತಾನೂ ಭಯಾನಕ ರೂಪದ ಚಂದ್ರಘಂಟೆಯಾಗಿ ಪರಿವರ್ತನೆಯಾಗುತ್ತಾಳೆ.

ಇದನ್ನೂ ಓದಿ: Roopa Gururaj Column: ಕಠೋರ ತಪಸ್ಸಿನಿಂದ ಶಿವನನ್ನು ಒಲಿಸಿಕೊಂಡ ಬ್ರಹ್ಮಚಾರಿಣಿ

ಚಿನ್ನದ ಮೈಬಣ್ಣವನ್ನು ಹೊಂದಿದ ಚಂದ್ರಘಂಟೆಯಲ್ಲಿ ಹತ್ತು ತೋಳುಗಳು ಮೂಡುತ್ತದೆ. ಒಂಭತ್ತು ತೋಳುಗಳಲ್ಲಿ ತ್ರಿಶೂಲ, ಗದೆ, ಬಿಲ್ಲು-ಬಾಣ, ಖಡ್ಗ, ಕಮಲ, ಘಂಟೆ, ಕಮಂಡಲ ಹಾಗೂ ಒಂದು ತೋಳಿನಲ್ಲಿ ಅಭಯ ಮುದ್ರೆಯಿಂದ ಸಿಂಹವಾಹಿನಿಯಾಗಿ ರೂಪ ತಾಳುತ್ತಾಳೆ. ತನ್ನ ಭಕ್ತರಿಗೆ ತಾಯಿಯಂತೆ ಆದಿಶಕ್ತಿಯು ಸಹಾನುಭೂತಿಯನ್ನು ತೋರುತ್ತಾಳೆ ಹಾಗೂ ಕೆಟ್ಟವರಿಗೆ ಭಯಾನಕ ರೂಪದಲ್ಲಿ ಕಾಣಿಸಿಕೊಳ್ಳುತ್ತಾಳೆ.

ಚಂದ್ರಘಂಟಾ ಅಂದರೆ ಘಂಟೆಯಾಕಾರದ ಚಂದ್ರನನ್ನು ಮಸ್ತಕದಲ್ಲಿ ಧರಿಸಿದವಳು ಹಾಗೂ ಚಂದ್ರೆಘಂಟೆಯ ಮೂರನೇ ಕಣ್ಣು ತೆರೆದೇ ಇದ್ದು ಯಾವ ಸಮಯದಲ್ಲಿಯಾದರೂ ದುಷ್ಟ ಶಕ್ತಿಗಳ ನಿಗ್ರಹಕ್ಕೆ ಸಿದ್ಧಳಾಗಿರುವಂತೆ ಕಾಣುತ್ತಾಳೆ. ಚಂದ್ರಘಂಟೆಯನ್ನು ಚಂದ್ರಿಕಾ, ರಣಚಂಡಿ ಎಂದೂ ಕರೆಯುತ್ತಾರೆ. ಇವಳಿಗೆ ಹತ್ತು ಕೈಗಳಿದ್ದು, ಹತ್ತೂ ಕೈಗಳಲ್ಲಿ ಶಸ್ತ್ರಾಸ್ತ್ರವನ್ನು ಹಿಡಿದುಕೊಂಡು ಸಿಂಹ ವಾಹಿನಿಯಾಗಿ ರಾರಾಜಿಸುತ್ತಾಳೆ.

ಚಂದ್ರಘಂಟೆಯ ರೂಪ ತಾಳಿದ ಪಾರ್ವತಿಯು ಶಿವನಿಗೆ ಸುಂದರ ವಾದ ವರನ ರೂಪವನ್ನು ತಾಳಲು ಭಿನ್ನವಿಸುತ್ತಾಳೆ. ಆಗ ಪರಶಿವನಿಗೆ ಸಂದರ್ಭದ ಸೂಕ್ಷ್ಮತೆ ಅರಿವಾಗಿ ಪ್ರಸನ್ನಚಿತ್ತನಾಗಿ ಪಾರ್ವತಿಯ ಮಾತಿಗೆ ಒಪ್ಪುತ್ತಾನೆ. ಪಾರ್ವತಿಯ ಇಚ್ಛೆಯಂತೆ ಶಿವನು ಸುಂದರ ರೂಪ ತಾಳಿ, ಆಭರಣಗಳಿಂದ ಅಲಂಕೃತನಾಗಿ ಕಾಣಿಸಿಕೊಳ್ಳುತ್ತಾನೆ. ಶಿವ ಹಾಗೂ ಪಾರ್ವತಿಯ ವಿವಾಹವು ಸಾಂಗವಾಗಿ ನೆರವೇರುತ್ತದೆ.

ದುಷ್ಟರನ್ನು ಸಂಹಾರ ಮಾಡಲು ಸದಾ ಸಿದ್ಧ ವಾಗಿರುವ ಚಂದ್ರಘಂಟೆಯ ಘಂಟಾನಾದದಿಂದಲೇ ಸಾವಿರಾರು ಅಸುರರು ನಿರ್ನಾಮವಾದರು. ಈಕೆಯ ಕೃಪೆಯಿಂದ ಭಕ್ತರ ಎಲ್ಲಾ ಪಾಪಗಳು, ಕಷ್ಟ ಗಳು, ದೈಹಿಕ ನೋವು, ಮಾನಸಿಕ ತೊಂದರೆಗಳು ನಿವಾರಣೆಯಾಗುತ್ತವೆ. ಸಿಂಹವಾಹಿನಿಯಾದ ಈಕೆಯು ಭಕ್ತರಲ್ಲಿ ನಿರ್ಭಯತೆಯನ್ನು ಮೂಡಿಸುತ್ತಾಳೆ.

ನವರಾತ್ರಿಯ ಪ್ರತೀ ದಿನದ ತಾಯಿ ಪಾರ್ವತಿಯ ಅವತಾರವೂ ನಮಗೆ ಜೀವನ ಮೌಲ್ಯಗಳನ್ನು, ಬದುಕಿನ ಅನೇಕ ಪಾಠಗಳನ್ನು ತನ್ನದೇ ವಿಶಿಷ್ಟ ರೀತಿಯಲ್ಲಿ ಕಲಿಸುತ್ತಾ ಹೋಗುತ್ತದೆ. ಕೆಲವೊಮ್ಮೆ ಕೆಲವರನ್ನು ತಿದ್ದಲು ನಾವು ಅವರ ರೀತಿಯಲ್ಲೇ ಅವರಿಗೆ ತಿಳಿಸಬೇಕಾಗುತ್ತದೆ. ಅಂತೆಯೇ ಪಾರ್ವತಿ ದೇವಿಯು ಚಂದ್ರಘಂಟಾ ರೂಪದಲ್ಲಿ ಶಿವನ ಮುಂದೆ ನಿಂತಾಗ ಮಾತ್ರ ಶಿವನಿಗೆ ತನ್ನ ರೂಪ ಇತರರಿಗೆ ಭಯ ಉಂಟು ಮಾಡುತ್ತಿದೆ ಎಂದು ಅರಿವಾಗಿದ್ದು. ನಾವು ಮನೆಯವರೊಡನೆ, ಮಕ್ಕಳೊಡನೆ ಅಥವಾ ಹೊರಗಿನ ಸಮಾಜದಲ್ಲಿ ಅನೇಕ ಬಾರಿ ನಮ್ಮ ನಿಲುವುಗಳನ್ನು ಅವರಿಗೆ ತಲುಪಿಸಲು ಪ್ರಯತ್ನಿಸುತ್ತಿರುತ್ತೇವೆ.

ಅದನ್ನು ಅನೇಕರು ಸರಿಯಾದ ರೀತಿಯಲ್ಲಿ ಅರ್ಥಮಾಡಿಕೊಳ್ಳದೆ ಹೋಗುತ್ತಾರೆ. ಆಗ ಕೆಲವೊಮ್ಮೆ ಅವರದ್ದೇ ರೀತಿಯಲ್ಲಿ ಅವರಿಗೆ ನಾವು ನಮ್ಮ ಮಾತುಗಳನ್ನು ತಲುಪಿಸಬೇಕಾಗುತ್ತದೆ. ಇಲ್ಲಿ ಯಾರು ಸರಿ, ಯಾರು ತಪ್ಪು ಎನ್ನುವುದಕ್ಕಿಂತ ನಮ್ಮ ಮನಸ್ಸಿನ ಅಭಿವ್ಯಕ್ತಿಯನ್ನು ಮತ್ತೊಬ್ಬರಿಗೆ ತಿಳಿಸುವ ರೀತಿ ಮತ್ತು ನಮಗೆ ನಮ್ಮ ಯೋಚನೆಗಳ ಬಗ್ಗೆ ಇರುವ ಪ್ರಾಮಾಣಿಕ ನಂಬಿಕೆ ಮುಖ್ಯ ವಾಗುತ್ತದೆ. ಚಂದ್ರಘಂಟಾ ದೇವಿಯ ಆತ್ಮಶಕ್ತಿ, ಕೆಡುಕನ್ನು ನಿರ್ನಾಮ ಮಾಡುವ ಮನೋಬಲ ನಮ್ಮೆಲ್ಲರಿಗೂ ಶಕ್ತಿ ತುಂಬಲಿ, ನವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು.