ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ಗಜೇಂದ್ರ ಮೋಕ್ಷದ ಕಥೆ

ಭಗವಂತನ ಪ್ರಕಾಶಮಾನವಾದ ರೂಪವನ್ನು ಕಂಡು, ಗಜೇಂದ್ರನ ಕಣ್ಣುಗಳು ಆನಂದ ಮತ್ತು ಭಕ್ತಿಭಾವದಿಂದ ತುಂಬಿ ಬಂದವು. ನೋಡನೋಡುತ್ತಿದ್ದಂತೆ ವಿಷ್ಣುವಿನ ಚಕ್ರದಿಂದ ಮೊಸಳೆ ಹತವಾಯಿತು. ಹಿಂದಿನ ಜನ್ಮದಲ್ಲಿ ಋಷಿಯನ್ನು ಹಾಸ್ಯ ಮಾಡಿದ ಕಾರಣ ಶಪಿಸಲ್ಪಟ್ಟು ಮೊಸಳೆಯಾಗಿ ಜನಿಸಿದ್ದ ಗಂಧರ್ವನಾದ ಹುಹು ಭಗವಂತನಿಗೆ ವಂದನೆ ಸಲ್ಲಿಸಿ, ಕೃತಜ್ಞತೆ ಯನ್ನು ವ್ಯಕ್ತಪಡಿಸಿ ಸ್ವರ್ಗಲೋಕಕ್ಕೆ ಏರಿದನು.

Roopa Gururaj Column: ಗಜೇಂದ್ರ ಮೋಕ್ಷದ ಕಥೆ

-

ಒಂದೊಳ್ಳೆ ಮಾತು

ಒಮ್ಮೆ ತ್ರಿಕೂಟ ಪರ್ವತದ ದಿವ್ಯ ಉದ್ಯಾನದಲ್ಲಿ ಗಜೇಂದ್ರ ಎಂಬ ಗಜರಾಜನು ಆಳುತ್ತಿದ್ದ. ತನ್ನ ಗುಂಪಿನಿಂದ ಆವರಿಸಲ್ಪಟ್ಟು, ಸಟಿಕಸ್ವಚ್ಛ ಸರೋವರಗಳಲ್ಲಿ ಸ್ನಾನ ಮಾಡುತ್ತಾ, ದಿವ್ಯ ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸುತ್ತಾ ವೈಭವದ ಜೀವನ ನಡೆಸುತ್ತಿದ್ದ.

ಹಿಂದಿನ ಜನ್ಮದಲ್ಲಿ ಅವನು ಇಂದ್ರದ್ಯುಮ್ನ ಎಂಬ ರಾಜನಾಗಿದ್ದು, ಶ್ರೀವಿಷ್ಣುವಿನ ಆರಾಧಕನಾಗಿದ್ದನು, ಆದರೆ ಕ್ಷಣಿಕ ಅಹಂಕಾರದ ಕಾರಣ ಒಬ್ಬ ಋಷಿಯಿಂದ ಶಪಿಸ ಲ್ಪಟ್ಟು ಆನೆಯಾಗಿ ಜನಿಸಿದ್ದನು, ಆದರೂ ಅವನ ಹೃದಯದಲ್ಲಿ ವಿಷ್ಣು ಸ್ಮರಣೆಯ ಒಂದಂಶ ಉಳಿದಿತ್ತು.

ಆದ್ದರಿಂದಲೇ ಪರಮೇಶ್ವರನು ಅವನೊಳಗೆ ಅಂತಿಮ ಮುಕ್ತಿಗೆ ದಾರಿ ಮಾಡುವ ವಿನಯ ವನ್ನು ಜಾಗೃತಗೊಳಿಸಲು ಹೊಸ ರೂಪವನ್ನು ಕೊಟ್ಟಿದ್ದನು. ಒಂದು ದಿನ ಗಜೇಂದ್ರನು ತನ್ನ ಗುಂಪಿನೊಂದಿಗೆ ದೊಡ್ಡ ಸರೋವರವೊಂದಕ್ಕೆ ಸ್ನಾನಕ್ಕೆ ಇಳಿದನು. ಆನೆಗಳು ಆನಂದದಿಂದ ಆಟವಾಡುತ್ತಿರುವಾಗ, ಆ ಸರೋವರದಲ್ಲೇ ವಾಸಿಸಿದ್ದ ಬಲಿಷ್ಠ ಮೊಸಳೆ ಗಜೇಂದ್ರನ ಕಾಲನ್ನು ತನ್ನ ದವಡೆಗಳಿಂದ ಹಿಡಿದುಕೊಂಡಿತು.

ಇದನ್ನೂ ಓದಿ: Roopa Gururaj Column: ವಿನಯ ಮತ್ತು ಭಕ್ತಿ ಇದ್ದಾಗ ಮಾತ್ರ ಸಿಗುವ ಗುರು ಕೃಪೆ

ಆತಂಕಗೊಂಡ ಗಜೇಂದ್ರನು ಎಷ್ಟೇ ಬಿಡಿಸಿಕೊಳ್ಳಲು ಪ್ರಯತ್ನಿಸಿದರೂ, ಮೊಸಳೆಯ ಹಿಡಿತ ಇನ್ನಷ್ಟು ಬಿಗಿಯಾಗುತ್ತಲೇ ಹೋಯಿತು, ಇಬ್ಬರೂ ಇನ್ನಿಲ್ಲದಂತೆ ಕಾದಾಡಿದರು. ನೀರಿನಲ್ಲಿ ತನ್ನ ನೆಲೆಯಿರುವ ಮೊಸಳೆ ಬಲ ಪಡೆಯುತ್ತಾ ಹೋದರೆ, ಗಜೇಂದ್ರನು ದಣಿದು, ಅಸಹಾಯಕನಾಗಿ ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತಾ ಹೋದನು.

ಕೊನೆಗೆ ಸಂಪೂರ್ಣವಾಗಿ ಮರಣದ ಅಂಚಿಗೆ ಬಂದಾಗ, ದೇಹದ ಶಕ್ತಿ ಅಹಂಕಾರ ಮತ್ತು ಜೊತೆ ಇರುವ ಆನೆಗಳು ತನ್ನನ್ನು ರಕ್ಷಿಸಲಾರರು ಎಂಬ ಸತ್ಯವನ್ನು ಗಜೇಂದ್ರನು ಅರಿತು ಕೊಂಡನು.

ಸಂಪೂರ್ಣ ಅಸಹಾಯಕತೆಯ ಆ ಕ್ಷಣದಲ್ಲಿ, ಅವನ ಹೃದಯದಲ್ಲಿ ಏನೋ ಪುರಾತನ ಸ್ಮರಣೆ ಜಾಗೃತವಾಯಿತು. ಹಿಂದಿನ ಜನ್ಮದಲ್ಲಿ ಇಂದ್ರದ್ಯುಮ್ನ ರಾಜನಾಗಿದ್ದಾಗ ಕಲಿತಿದ್ದ ಪ್ರಾರ್ಥನೆಯ ಪದಗಳು ಮತ್ತೆ ಸ್ಮೃತಿಗೆ ಬಂದವು. ತನ್ನ ಸೊಂಡಿಲನ್ನು ಆಕಾಶದ ಕಡೆ ಎತ್ತಿ, ‘ಎಲ್ಲ ಕಾರಣಗಳಿಗೂ ಕಾರಣನಾದ ಪರಮಪ್ರಭುವೇ, ನಾನು ನಿನಗೆ ಶರಣಾಗುತ್ತೇನೆ.. ನನ್ನ ಶಕ್ತಿ, ನನ್ನ ಗುಂಪು ಮತ್ತು ನನ್ನ ಸಾಮರ್ಥ್ಯದಲ್ಲಿ ನಾನು ಆಶ್ರಯ ಹುಡುಕಿದ್ದೆ, ಆದರೆ ಈಗ ನಿಜವಾದ ಆಶ್ರಯ ನೀನೇ ಎಂಬುದು ನನಗೆ ತಿಳಿಯಿತು’ ಎನ್ನುತ್ತಾ ತನ್ನ ಸೊಂಡಿಲಿನಿಂದ ಸರೋವರದಿಂದ ಒಂದು ಕಮಲ ಹೂವನ್ನು ಕಿತ್ತು, ಕಂಪಿಸುವ ಭಕ್ತಿಯಿಂದ ಭಗವಂತನಿಗೆ ಅರ್ಪಿಸಿದನು.

ಹತಾಶೆ ಮತ್ತು ಭಕ್ತಿಯಿಂದ ಜನಿಸಿದ ಈ ವಿನಮ್ರ ಕ್ರಿಯೆ ಭೌತಿಕ ಮಾಯೆಯ ಪರದೆಯನ್ನು ಭೇದಿಸಿ, ನೇರವಾಗಿ ಶ್ರೀವಿಷ್ಣುವಿನ ಹೃದಯವನ್ನು ತಲುಪಿತು. ಭಕ್ತನ ಆರ್ತನಾದವನ್ನು ಕೇಳಿದ ಕೂಡಲೇ ಶ್ರೀವಿಷ್ಣು ಗರುಡಾರೂಢನಾಗಿ ಸುದರ್ಶನ ಚಕ್ರ, ಶಂಖವನ್ನು ಹಿಡಿದು ಪ್ರತ್ಯಕ್ಷನಾದನು.

ಭಗವಂತನ ಪ್ರಕಾಶಮಾನವಾದ ರೂಪವನ್ನು ಕಂಡು, ಗಜೇಂದ್ರನ ಕಣ್ಣುಗಳು ಆನಂದ ಮತ್ತು ಭಕ್ತಿಭಾವದಿಂದ ತುಂಬಿ ಬಂದವು. ನೋಡನೋಡುತ್ತಿದ್ದಂತೆ ವಿಷ್ಣುವಿನ ಚಕ್ರದಿಂದ ಮೊಸಳೆ ಹತವಾಯಿತು. ಹಿಂದಿನ ಜನ್ಮದಲ್ಲಿ ಋಷಿಯನ್ನು ಹಾಸ್ಯ ಮಾಡಿದ ಕಾರಣ ಶಪಿಸ ಲ್ಪಟ್ಟು ಮೊಸಳೆಯಾಗಿ ಜನಿಸಿದ್ದ ಗಂಧರ್ವನಾದ ಹುಹು ಭಗವಂತನಿಗೆ ವಂದನೆ ಸಲ್ಲಿಸಿ, ಕೃತಜ್ಞತೆಯನ್ನು ವ್ಯಕ್ತಪಡಿಸಿ ಸ್ವರ್ಗಲೋಕಕ್ಕೆ ಏರಿದನು.

ನೋವಿನಿಂದ ಮುಕ್ತನಾದ ಗಜೇಂದ್ರನು ‘ಭಗವಂತ, ನೀನು ನನ್ನನ್ನು ಕೇವಲ ಮೊಸಳೆ ಯಿಂದ ಮಾತ್ರವಲ್ಲ, ಅಹಂಕಾರ ಮತ್ತು ಮಾಯೆಯ ಮಹಾಮೊಸಳೆಯಿಂದಲೂ ರಕ್ಷಿಸಿರುವಿ’ ಎಂದು ಎದ್ದು ಕೈ ಮುಗಿದನು.

ಮಹಾವಿಷ್ಣು ಮಂದಸ್ಮಿತ ನಗೆ ಚೆಲ್ಲುತ್ತಾ, ‘ನೀನು ಸಂಪೂರ್ಣ ಅಸಹಾಯಕತೆಯಲ್ಲಿ ನನ್ನನ್ನು ಸ್ಮರಿಸಿದ್ದೀಯ. ಇಂದಿನಿಂದ ನೀನು ಎಲ್ಲ ಭಯಗಳಿಂದ ಮುಕ್ತನಾಗಿ ನನ್ನ ಧಾಮದಲ್ಲಿ ವಾಸಿಸುವೆ’ ಎಂದು ಗಜೇಂದ್ರನನ್ನು ವೈಕುಂಠಕ್ಕೆ ಕರೆದೊಯ್ದ ಈ ಘಟನೆಗೆ ಸಾಕ್ಷಿಯಾದ ಋಷಿಗಳು ಹೀಗೆ ಘೋಷಿಸಿದರು: ‘ನಿಷ್ಠೆಯಿಂದ ಪ್ರಭುವನ್ನು ಕರೆಯುವ ಆನೆ ಕೂಡ, ತರ್ಕದಲ್ಲಿ ಮುಳುಗಿದ ಅಹಂಕಾರಿ ಪಂಡಿತರಿಗಿಂತ ವೇಗವಾಗಿ ಭಗವಂತನನ್ನು ತಲುಪಬಹುದು" ‘ನಿಜವೇ ಅಲ್ಲವೇ ? ಭಗವಂತನು ಭಕ್ತಿಯನ್ನು ಜನ್ಮದಿಂದಲೂ, ರೂಪದಿಂದಲೂ, ಬುದ್ಧಿಯಿಂದಲೂ ಅಳೆಯುವುದಿಲ್ಲ, ನೀನೇ ಗತಿ’ ಎಂದು ಬೇಡಿದವರಿಗೆ ಭಗವಂತ ಎಲ್ಲವೂ ಆಗಿ ಕಾಪಾಡುತ್ತಾನೆ. ಗಜೇಂದ್ರನು ಒಮ್ಮೆ ಭಗವಂತನನ್ನು ಮರೆತಿ ದ್ದರೂ, ಭಗವಂತನು ಅವನನ್ನು ಎಂದಿಗೂ ಮರೆತಿರಲಿಲ್ಲ. ಗಜೇಂದ್ರನು ಶರಣಾದ ಕ್ಷಣದಲ್ಲೇ, ಆ ಮರೆತ ಬಂಧವು ಆತ್ಮವನ್ನು ತನ್ನ ಮೂಲದ ಕಡೆಗೆ ಎಳೆಯುವ ಶಾಶ್ವತ ಚುಂಬಕದಂತೆ ಪುನಃ ಜಾಗೃತವಾಯಿತು.