Hari Paraak Column: ಶಾಲೆಗೆ ಎಲ್ಲರಿಗಿಂತ ಮುಂಚೆ ಬರೋ ಮೇಷ್ಟ್ರು ಲಗೂ ಗುರು
ಯಶ್ ಅವರ ಟಾಕ್ಸಿಕ್ ಸಿನಿಮಾ ಬಿಡುಗಡೆಯ ಸಮಯ ಇದು. ಈಗ ಅದು ಸದ್ದು ಮಾಡೋದು ಸಹಜ. ಅಲ್ಲದೆ ಚಿತ್ರದ ಟ್ರೈಲರ್ ಬೇರೆ ಬಿಡುಗಡೆ ಆಗಿದೆ. ಕೆಲವರು ಸೂಪರ್ ಅಂದ್ರೆ ಇನ್ನು ಕೆಲವರು ಹಿಂಸಾ ತ್ಮಕ, ಅಶ್ಲೀಲ ಅಂತ ರಾಗ ತೆಗೆಯುತ್ತಿದ್ದಾರೆ. ಈ ರಾಗ ತೆಗೆಯುವವರ ಗುಂಪಿಗೆ ನಟಿ, ಸಾರಿ, ಒಂದು ಕಾಲದ ನಟಿ ರಿಷಿಕಾ ಸಿಂಗ್ ಕೂಡಾ ಸೇರಿಕೊಂಡು ಅಪಸ್ವರದ ಈ ರಾಗವನ್ನು ಸಿಂಗ್ ಮಾಡುತ್ತಿದ್ದಾರೆ
-
ತುಂಟರಗಾಳಿ
ಸಿನಿಗನ್ನಡ
ಯಶ್ ಅವರ ಟಾಕ್ಸಿಕ್ ಸಿನಿಮಾ ಬಿಡುಗಡೆಯ ಸಮಯ ಇದು. ಈಗ ಅದು ಸದ್ದು ಮಾಡೋದು ಸಹಜ. ಅಲ್ಲದೆ ಚಿತ್ರದ ಟ್ರೈಲರ್ ಬೇರೆ ಬಿಡುಗಡೆ ಆಗಿದೆ. ಕೆಲವರು ಸೂಪರ್ ಅಂದ್ರೆ ಇನ್ನು ಕೆಲವರು ಹಿಂಸಾತ್ಮಕ, ಅಶ್ಲೀಲ ಅಂತ ರಾಗ ತೆಗೆಯುತ್ತಿದ್ದಾರೆ. ಈ ರಾಗ ತೆಗೆಯುವವರ ಗುಂಪಿಗೆ ನಟಿ, ಸಾರಿ, ಒಂದು ಕಾಲದ ನಟಿ ರಿಷಿಕಾ ಸಿಂಗ್ ಕೂಡಾ ಸೇರಿಕೊಂಡು ಅಪಸ್ವರದ ಈ ರಾಗವನ್ನು ಸಿಂಗ್ ಮಾಡುತ್ತಿದ್ದಾರೆ. ಇನ್ ಫ್ಯಾಕ್ಟ್ ಪ್ರಾಸಬದ್ಧವಾಗಿ ಕಂದ, ಅಂದ, ಚೆಂದ ಅಂತೆಲ್ಲ ಮಾತು ಜೋಡಿಸಿ ಕೊಂಡು ಇನ್‌ಡೈರೆಕ್ಟ್ ಆಗಿ ಟಾಕ್ಸಿಕ್ ಮತ್ತು ಯಶ್ ಕಾಲೆಳೆದಿದ್ದಾರೆ.
ಇದನ್ನು ಕಂಡ ಯಶ್ ಅಭಿಮಾನಿಗಳು ರೊಚ್ಚಿಗೆದ್ದಿದ್ದೇ ತಡ, ನಾನು ಟಾಕ್ಸಿಕ್ ಸಿನಿಮಾ ಬಗ್ಗೆ ಯಶ್ ಬಗ್ಗೆ ಮಾತಾಡಿದ್ದು ಅಂತ ಯಾರ್ ಹೇಳಿದ್ದು ಅಂತ ರಾಗ ಬದಲಿಸಿದರೂ ಮತ್ತೆ ಟ್ರ್ಯಾಕ್‌ಗೆ ಬಂದು ಟಾಕ್ಸಿಕ್ ಸಿನಿಮಾವನ್ನು ನೇರವಾಗಿಯೇ ತೆಗಳುತ್ತಿದ್ದಾರೆ ರಿಷಿಕಾ.
ನಿಂಗೆ ಹೆಂಡ್ತಿ ಮಕ್ಕಳು ಇದ್ದಾರೆ ಇಂಥ ಅಶ್ಲೀಲ ಸಿನಿಮಾ ಮಾಡ್ತೀಯ ಅಂತ ಕಿಡಿಕಾರಿರುವ ರಿಷಿಕಾ ಈಗ ಸದ್ಯಕ್ಕೆ ಟಾಕ್ಸಿಕ್ ಮೂಲಕ ಟಾಕ್ ಆಫ್ ದಿ ಟೌನ್ ಆಗಿದ್ದಾರೆ. ಆದರೆ ವಿಶೇಷ ಅಂದ್ರೆ ಅಶ್ಲೀಲತೆ ವಿರುದ್ಧ ಹೀಗೆ ಮಾತಾಡ್ತಾ ಇರೋ ರಿಷಿಕಾ ಮಾಡಿದ್ದೆಲ್ಲ ರಸಿಕರಿಗೆ ಇಷ್ಟ ಆಗುವಂಥ ಪಾತ್ರಗಳನ್ನೇ. ಬೆತ್ತಲೆ ಮೈಗೆ ಮಣ್ಣಿನ ಮೇಕಪ್ ಮಾಡಿಕೊಂಡು ಅವರು ಕೊಟ್ಟ ಪೋಸು ಇಂದಿಗೂ ಎಲ್ಲರಿಗೂ ನೆನಪಿದೆ. ಅವರ ಈ ಇಮೇಜಿಗೆ ತಕ್ಕಂತೆ ಅವರು ಶೃಂಗಾರ ಪ್ರಧಾನ ಪಾತ್ರ ಮತ್ತು ದೃಶ್ಯಗಳ ಹೆಚ್ಚು ಕಾಣಿಸಿಕೊಂಡಿದ್ದು.
ಇದನ್ನೂ ಓದಿ: Hari Paraak Column: ಸಚಿವರಾಗೋಕೆ ಎಂಥ ಜನ? ಅನ್ನೋದಕ್ಕಿಂತ ಯಾವ್ ಜನ? ಅನ್ನೋದ್ ಮುಖ್ಯ ?
ಹಾಗಾಗಿ ಅವರಿಗೆ ಅಪ್ಲೈ ಆಗದ ವಿಷಯ ಯಶ್‌ಗೆ ಮಾತ್ರ ಆಗಬೇಕು ಅಂತ ಅವರು ಬಯಸೋದು ಎಷ್ಟು ಸರಿಯೋ ಗೊತ್ತಿಲ್ಲ. ಅಂತಹ ಪಾತ್ರಗಳನ್ನು ಮಾಡುವಾಗ ಇವರಿಗೆ ಅಪ್ಪ, ಅಮ್ಮ, ಅಣ್ಣ ಇದ್ದಾರೆ ಅನ್ನೋದು ಮರೆತೋಯ್ತಾ ಗೊತ್ತಿಲ್ಲ.
ಲೂಸ್ ಟಾಕ್-ಸಿಟಿ ಬಸ್ಸಲ್ಲಿ ಸಿಕ್ಕ ರೇಪಿಸ್ಟ್
ಅಲ್ರೀ, ಯಜಮಾನ್ರೇ, ನಿಮ್ ಕೈಯಲ್ಲಿರೋ ಬುಕ್ ನೋಡಿ, ಈ ವಯಸ್ಸಲ್ಲಿ ವಿಷ್ಣು ಸಹಸ್ರ ನಾಮ ಓದ್ತಾ ಇದೀರೇನೋ ಅಂದ್ಕೊಂಡ್ರೆ, ಇಲ್ಲಿ, ನಿಮ್ ಕೈಯಲ್ಲಿ ಅಶ್ವಾರೋಹಿಣಿ ಸೈನ್ಯನೇ ಇದೆ?
- ಏನ್ ಮಾಡೋದಪ್ಪಾ, ಜೀವನ ಪೂರ್ತಿ ಅದೃಷ್ಟದ ವಿಷಯದಲ್ಲಿ ದೇವರು ಕೈ ಹಿಡೀಲಿಲ್ಲ ಅದಕ್ಕೆ ಈಗ, ಬೆಳಗ್ಗೆ ಎದ್ದು, ಕುದುರೆ ಮುಖ ನೋಡಿದ್ರಾದ್ರೂ, ನಸೀಬು ಕುದುರುತ್ತಾ ನೋಡೋಣ ಅಂತ.
ಓಕೆ. ಓಕೆ. ‘ಅಶ್ವನಿ’ ನಕ್ಷತ್ರ ನಿಮ್ದು. ಆದ್ರೆ, ಒಂದ್ ಮಾತು ನೆನಪಿರಲಿ, ನಾಯಿ ಬಾಲ ಅಷ್ಟೇ ಅಲ್ಲ, ಕುದುರೆ ಬಾಲನೂ ಡೊಂಕೇ. ಅದ್ಸರಿ, ರೇಸ್‌ನಲ್ಲಿ ಇದೇ ಕುದುರೆ ಗೆಲ್ಲುತ್ತೆ ಅಂತ ಹೆಂಗೆ ಡಿಸೈಡ್ ಮಾಡ್ತೀರಿ?
- ಅದು ತುಂಬಾ ಸಿಂಪಲ್, ಗೆದ್ದೆತ್ತಿನ ಬಾಲ ಹಿಡಿಯೋದು ಅಷ್ಟೇ. ಗೆದ್ರೆ, ಆನೆ ನಡೆದಿದ್ದೇ ಹಾದಿ, ಸೋತ್ರೆ, ಕತ್ತೆ ಬಾಲ, ಕುದುರೆ ಜುಟ್ಟು.
ಓಹೋ, ಕಂಪ್ಲೀಟ್ ಪ್ರಾಣಿಪ್ರಿಯರು ನೀವು. ಆದ್ರೂ, ಎಷ್ಟೋ ಸಲ ಸೋತ್ರೂ ಮತ್ತೆ ಮತ್ತೆ ಕುದುರೆ ಹಿಂದೆ ಹೋಗ್ತಾನೇ ಇದ್ದೀರಲ್ಲ?
- ನೀವು ಹುಡುಗರು ಎಷ್ಟೇ ಸಲ ಹಾಳಾದ್ರೂ ಮತ್ತೆ ಮತ್ತೆ ಹುಡುಗೀರ್ ಹಿಂದೆ ಹೋಗಲ್ವಾ ಇದೂ ಹಂಗೆ. ಸರಿ ಬಿಡಿ. ಎವೆರಿ ಹಾರ್ಸ್ ಹ್ಯಾಸ್ ಇಟ್ಸ್ ಡೇ. ಬಟ್, ಅಕಸ್ಮಾತ್ ನೀವು ಗೆದ್ರೂ, ಈ ವಯಸ್ಸಲ್ಲಿ ದುಡ್ಡು ತಗೊಂಡು ಏನ್ರೀ ಮಾಡ್ತೀರಾ?
- ಬರೀ ದುಡ್ಡಿಗೋಸ್ಕರ ಅಂತೇನು ಅಲ್ಲ, ನಿಮಗೆ ಕಿವಿಗೆ ಇಯರ್ ಫೋನ್ ಹಾಕ್ಕೊಂಡ್ ಹಾಡೋ ಕೇಳೋ ಚಟ ಇಲ್ವಾ? ಇದೂ ಹಂಗೆ.
ಓಹೋ, ನಮಗೇ ಕೌಂಟರ್ರಾ. ಓಕೆ, ನಿಮ್ ಸ್ಟಾಪ್ ಬಂತು. ಅಲ್ಲಿ ನಿಮ್ ಕೌಂಟರ್ ಓಪನ್ ಆಗಿದೆ. ಹೋಗ್ಬನ್ನಿ. ಹೋಗೋಕ್ ಮುಂಚೆ ಕೊನೇ ಪ್ರಶ್ನೆ, ನಿಮಗೆ ಬರೀ ಈ ಕುದುರೆ ಹುಚ್ಚಷ್ಟೇ ಇರೋದಾ, ಹಾಡು ಕೇಳೋ, ಸಿನಿಮಾ ನೋಡೋ ಚಟ ಎಲ್ಲ ಇಲ್ವಾ, ಇದ್ರೆ, ನಿಮ್ಮ ಫೇವರೆಟ್ ಹಾಡು, ಸಿನಿಮಾ? - ಅದೂ ಇದೆ ಕಣೋ, ನನ್ ಫೇವರೆಟ್ ಹಾಡು: ಮೂರು ಕಾಸಿನ ಕುದುರೆ, ಏರಿ ಬಂದ ಓ ಚೆಲುವೆ. ಫೇವರೆಟ್ ಸಿನಿಮಾ: ಬಹದ್ದೂರ್ ಗಂಡು
(ಕಾಲ್ಪನಿಕ ಸಂದರ್ಶನ)
ನೆಟ್ ಪಿಕ್ಸ್
ರೇಸ್‌ಕೋರ್ಸ್‌ನಲ್ಲಿದ್ದ ಒಂದು ಕುದುರೆಗೆ ವಯಸ್ಸಾಯ್ತು ಅಂತ ಅದನ್ನು ಹೊರಗೆ ಹಾಕಿದ್ರು. ಪಾಪ ಅಷ್ಟು ವರ್ಷ ಅಲ್ಲಿ ಕೆಲಸ ಮಾಡಿದ ಕುದುರೆ ಬೇಜಾರು ಮಾಡ್ಕೊಂಡು ಅಲ್ಲಿಂದ ಹೊರಗೆ ಬಂತು. ಅಲ್ಲಿ ಪಕ್ಕದ ಇದ್ದ ಗ್ರೌಂಡ್‌ನಲ್ಲಿ ಒಂದಷ್ಟು ಹುಡುಗರು ಕ್ರಿಕೆಟ್ ಆಡ್ತಿದ್ರು. ಈ ಕುದುರೆ ಕಾಂಪೌಂಡ್ ಹತ್ರ ನಿಂತ್ಕಂಡು ಮ್ಯಾಚ್ ನೋಡ್ತಾ ಇತ್ತು.
ಬಾಲ್ ಬೌಂಡರಿ ಹತ್ರ ಬಂದಾಗ ಅದರ ಹಿಂದೆ ಓಡಿ ಬಂದ ಕ್ಯಾಪ್ಟನ್ ಕುದುರೆ ಕೇಳಿತು, ‘ನೋಡಿ ನೋಡಿ ಸಾಕಾಯ್ತು, ನನ್ನನ್ನೂ ಆಟಕ್ಕೆ ಸೇರಿಸ್ಕೊಳ್ತಿಯಾ?’. ಕ್ರಿಕೆಟ್ ಟೀಮ್ ಕ್ಯಾಪ್ಟನ್‌ಗೆ, ಕುದುರೆಗೆ ಕ್ರಿಕೆಟ್ ಆಡೋಕೆ ಬರುತ್ತಾ ಅಂತ ಡೌಟು. ಆದ್ರೂ ಒಂದ್ಸಲ ಕುದುರೆ ಮುಖ ನೋಡಿ, ‘ಸರಿ ಬಾ’ ಅಂದ. ಕುದುರೆ ಅವನ ಹಿಂದೆ ಬಾಲ ಅಡಿಸಿಕೊಂಡ್ ಹೋಯ್ತು. ನೆಕ್ಸ್ಟ್ ಮ್ಯಾಚ್‌ನಲ್ಲಿ ಕ್ಯಾಪ್ಟನ್ ಟಾಸ್ ಗೆದ್ದು ಕುದುರೆನಾ ಓಪನಿಂಗ್ ಬ್ಯಾಟ್ಸಮನ್ ಆಗಿ ಕಳಿಸಿದ. ಅದರ ಜೊತೆಗೆ ನಾನ್ ಸ್ಟ್ರೈಕರ್ ಜಾಗದಲ್ಲಿ ಅವನೇ ನಿಂತುಕೊಂಡ. ಮ್ಯಾಚ್ ಶುರುವಾಯ್ತು.
ಬೌಲರ್ ಓಡಿ ಬಂದು ಬಾಲ್ ಎಸೆದ, ಕುದುರೆ ಬ್ಯಾಟ್ ತಿರುಗಿಸಿ ಮೊದಲ ಬಾಲ ಸಿಕ್ಸರ್ ಹೊಡೀತು. ಎರಡನೇ ಬಾಲು ಬಂತು. ಅದೂ ಸಿಕ್ಸರ್. ಹೀಗೆ ಮೊದಲ ಓವರ್‌ನ ಆರು ಬಾಲೂ, ಆರು ಸಿಕ್ಸರ್ ಹೊಡೆದಾಗ ಕ್ಯಾಪ್ಟನ್ ಫುಲ್ ಖುಷ್.
ಸರಿ ನೆಕ್ಸ್ಟ್ ಓವರ್‌ನಲ್ಲಿ ಕ್ಯಾಪ್ಟನ್ ಬ್ಯಾಟಿಂಗ್. ಫಸ್ಟ್ ಬಾಲ್‌ನಲ್ಲಿ ಅವನು ಸುಮ್ನೆ ಟಚ್ ಮಾಡಿ ಒಂದು ರನ್‌ಗಾಗಿ ಓಡಿದ. ಆದರೆ ಕುದುರೆ ರಿಯಾಕ್ಟ್ ಮಾಡಲಿಲ್ಲ. ‘ಓಡು, ಓಡು’ ಅಂತ ಕ್ಯಾಪ್ಟನ್ ಕೂಗಿಕೊಳ್ತಾನೇ ಇದ್ರು ಕುದುರೆ ತಲೆಕೆಡಿಸಿಕೊಳ್ಳದೆ ಅ ನಿಂತಿತ್ತು. ಓಡಿ ಬಂದ ಕ್ಯಾಪ್ಟನ್ ರನ್ ಔಟ್ ಆದ. ಅವನಿಗೆ ಸಿಟ್ಟು ನೆತ್ತಿಗೇರಿತ್ತು. ಕುದುರೆ ಬಳಿ ಬಂದು ಬೈದು ಕೇಳಿದ ‘ಅ, ಈಸಿ ಸಿಂಗಲ್ ಇತ್ತು ಅಲ್ಲಿ. ಓಡು ಓಡು ಅಂತ ನಾನು ಅಷ್ಟೊಂದ್ ಬಡ್‌ಕೋತಾ ಇದ್ರೂ ಯಾಕೆ ಓಡ್ಲಿಲ್ಲ ನೀನು? ಕಿವಿ ಕೇಳಲ್ವಾ ನಿಂಗೆ?’. ಕುದುರೆ ಕೂಲ್ ಆಗಿ ಹೇಳಿತು ‘ತಲೆ ಇದ್ಯಾ ನಿಂಗೆ? ನಂಗೆ ಓಡೋ ಕೆಪ್ಯಾಸಿಟಿ ಇದ್ದಿದ್ರೆ, ನಾನು ರೇಸ್ ಕೋರ್ಸ್‌ನ ಇರ್ತಿದ್ದೆ, ಇಲ್ ಬಂದು ನಿನ್ ಜೊತೆ ಡಬ್ಬಾ ಕ್ರಿಕೆಟ್ ಮ್ಯಾಚ್ ಆಡ್ತಿದ್ನಾ?’
ಲೈನ್ ಮ್ಯಾನ್
ಅಹಂ ಜಾಸ್ತಿ ಆಗಿ ಅವನಿಗೆ ‘ಕಣ್ಣೇ ಕಾಣಲ್ಲ’ ಅಂತಾರಲ್ಲ ಅದರರ್ಥ,
- ಅವನು ‘ಸೀ’ ಲೆವೆಲ್‌ಗಿಂತ ಮೇಲಿದಾನೆ ಅಂತಾನಾ? ಅಥವಾ ಕೆಳಗಿದಾನೆ ಅಂತಾನಾ?
ಜೂನಿಯರ್ ಡುಂಡಿ ಹೇಳಿದ್ದು
- ಪ್ರೀತಿ ಪ್ರೇಮದಲ್ಲಿ ಬರಿ ನೋವೇ, ಸುಖ, ಸಂತೋಷ No Way
ರಾತ್ರಿ ಹೊತ್ತು ರೇಸಿಂಗ್ ಮಾಡೋ ಕುದುರೆಯನ್ನು ಏನೆನ್ನಬಹುದು?
- ನೈಟ್ ‘ಮೇರ್’
ಯಾವುದೋ ಹಗರಣದಲ್ಲಿ ಇವರದ್ದೇನೂ ತಪ್ಪಿಲ್ಲ ಅಂತಾ ಮಂತ್ರಿಯೊಬ್ಬರ ಬಗ್ಗೆ ಕೋರ್ಟ್ ತೀರ್ಪು ಬಂದರೆ ಆಗ
- ‘ಮಂತ್ರಿಮುಗ್ಧ’
ಹುಲಿಗಳನ್ನು ಟ್ರೈನ್ ಮಾಡುವ ಜಾಗಕ್ಕೆ ಏನಂತಾರೆ?
- ‘ಹುಲಿ’ಗೆ ತರಬೇತಿ ಕೇಂದ್ರ
ಈ ಸಾಲಗಾರರಿಂದ ತಪ್ಪಿಸಿಕೊ ಳ್ಳಲು ಹೇಳದೆ ಕೇಳದೆ ಆರಬ್ ದೇಶಕ್ಕೆ ಓಡಿ ಹೋದ ಖೇಮು, ನಾನಿಲ್ಲಿ ದೀನಿ ಅಂತ ಹೆಂಡ್ತಿಗೆ ಫೋನ್ ಮಾಡಿದಾಗ, ಏರ್‌ಟೆಲ್ ಹುಡುಗಿಯ ವಾಯ್ಸ್ ಓವರ್ ಕೇಳಿ, ನಾನಿಲ್ಲಿರೋದು ಇವರಿಗೆಂಗೆ ಗೊತ್ತಾಯ್ತು ಅಂತ ಗಾಬರಿಯಾದ.
- ಕಾರಣ, ಹೆಂಡ್ತಿ ಫೋನು ಬ್ಯುಸಿ ಇತ್ತು. ಹಾಗಾಗಿ ಖೇಮುಗೆ ವಾಯ್ಸ್ ಓವರ್ ಬಂದಿತ್ತು: ‘ಆಪ್ ‘ಖತಾರ್’ ಮೇ ಹೈ’
ಶಾಲೆಗೆ ಎಲ್ಲರಿಗಿಂತ ಮುಂಚೆ ಬರೋ ಮೇಷ್ಟ್ರು
- ಲಗೂ ಗುರು
ಬಿಟ್ಟಿ ಫಿಲಾಸಫಿ
- ಮನುಷ್ಯ ಸತ್ತಾಗ ಅವನು ಹೆಂಗ್ ಬದುಕಿದ ಅನ್ನೋ ಪ್ರಶ್ನೆಗಿಂತ, ಅವ್ನ್ ಉತ್ತರ ಕ್ರಿಯೆ ಬಗ್ಗೆನೇ ಎಲ್ಲರೂ ಜಾಸ್ತಿ ತಲೆ ಕೆಡಿಸ್ಕೊತಾರೆ.