ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬೆಳಗ್ಗಿನ ಜಾವ ನಿದ್ದೆ ಬರುತ್ತಿಲ್ಲವೆ? ಇದಕ್ಕೇನು ಕಾರಣ? ಪರಿಹಾರ ಇಲ್ಲಿದೆ

Health Tips: ಸಮಯ ನೋಡಿದರೆ ಇನ್ನೂ ನಸುಕಿನ ಮೂರೂವರೆ. ಈಗೇಕೆ ಎಚ್ಚರವಾಯಿತು ಎಂದು ಅಚ್ಚರಿಗೊಳ್ಳುತ್ತೀರಿ. ಕೆಟ್ಟ ಕನಸೇನೂ ಬಿದ್ದಿಲ್ಲ, ಸೆಕೆ-ಚಳಿ ಎಲ್ಲವೂ ಹದವಾಗಿಯೇ ಇದೆ. ಹೀಗೇ ಕಾಯಿತು ಎಂದು ಯೋಚಿಸುತ್ತಾ ಮಗ್ಗುಲು ಬದಲಿಸಿ ನಿದ್ದೆ ಮಾಡಲು ಯತ್ನಿಸುತ್ತೀರಿ. ಊಹುಂ, ನಿಚ್ಚಳವಾಗಿ ಎಚ್ಚರವಾಗಿಬಿಟ್ಟಿದೆ. ಬಾತ್‌ರೂಂ ಭೇಟಿ ಮಾಡುತ್ತೀರಿ, ನೀರು ಕುಡಿಯುತ್ತೀರಿ… ಇಲ್ಲಪ್ಪ! ಏನು ಮಾಡಿದರೂ ನಿದ್ರೆ ಬರುತ್ತಿಲ್ಲ. ಹೀಗೇಕಾಯಿತು? ಇದರಿಂದ ಆರೋಗ್ಯಕ್ಕೆ ಸಮಸ್ಯೆಯೇ?

ನಸುಕಿಗೆ ಎಚ್ಚರಾಗಿ ನಿದ್ದೆ ಬರುತ್ತಿಲ್ಲವೇ? ಇಲ್ಲಿದೆ ಪರಿಹಾರ

ಸಾಂದರ್ಭಿಕ ಚಿತ್ರ -

Profile
Pushpa Kumari Oct 18, 2026 7:00 AM

ಬೆಂಗಳೂರು: ರಾತ್ರಿ ಯಾವುದೋ ಹೊತ್ತಿನಲ್ಲಿ ಇದ್ದಕ್ಕಿದ್ದಂತೆ ಎಚ್ಚರಗೊಳ್ಳುತ್ತೀರಿ. ಸಮಯ ನೋಡಿದರೆ ಇನ್ನೂ ನಸುಕಿನ (Sleeping Problem) ಮೂರೂವರೆ. ಈಗೇಕೆ ಎಚ್ಚರವಾಯಿತು ಎಂದು ಅಚ್ಚರಿ ಗೊಳ್ಳುತ್ತೀರಿ. ಕೆಟ್ಟ ಕನಸೇನೂ ಬಿದ್ದಿಲ್ಲ, ಸೆಕೆ-ಚಳಿ ಎಲ್ಲವೂ ಹದವಾಗಿಯೇ ಇದೆ. ಹೀಗೇಕಾಯಿತು ಎಂದು ಯೋಚಿಸುತ್ತಾ ಮಗ್ಗುಲು ಬದಲಿಸಿ ನಿದ್ದೆ ಮಾಡಲು ಯತ್ನಿಸುತ್ತೀರಿ. ಊಹುಂ, ನಿಚ್ಚಳವಾಗಿ ಎಚ್ಚರವಾಗಿಬಿಟ್ಟಿದೆ. ಬಾತ್‌ರೂಂ ಭೇಟಿ ಮಾಡುತ್ತೀರಿ, ನೀರು ಕುಡಿಯುತ್ತೀರಿ… ಏನು ಮಾಡಿದರೂ ನಿದ್ರೆ ಬರುತ್ತಿಲ್ಲ. ಹೀಗೇಕಾಯಿತು? ಇದರಿಂದ ಆರೋಗ್ಯಕ್ಕೆ ಸಮಸ್ಯೆಯೇ?

ಯಾವತ್ತೋ ಒಂದು ದಿನ ಹೀಗಾದರೆ ಸಮಸ್ಯೆಯಲ್ಲ. ಆದರೆ ಪದೇ ಪದೆ ಇದೇ ರೀತಿ ನಸುಕಿನಲ್ಲಿ ಎಚ್ಚರವಾಗುತ್ತಿದ್ದರೆ ಆರೋಗ್ಯದ ಸಮಸ್ಯೆ ಬರಬಹುದು. ನಿದ್ರಾ ಹೀನತೆಯಿಂದ ಆಗುವ ತೊಂದರೆಗಳೆಲ್ಲ ಗಂಟಿಕ್ಕಿಕೊಳ್ಳಬಹುದು. ಹೀಗಾಗದಿರುವಂತೆ ತಡೆಯಲು ಸಾಧ್ಯವಿದ್ದು, ಮುಂಬರುವ ಆರೋಗ್ಯ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿದೆ. ಇದಕ್ಕೆ ಕಾರಣಗಳೇನು ಮತ್ತು ಇದನ್ನ ತಡೆಗಟ್ಟುವುದು ಹೇಗೆ ಎನ್ನುವುದನ್ನು ಅರ್ಥ ಮಾಡಿಕೊಳ್ಳೋಣ.

ಎಚ್ಚರವಾಗುವುದೇಕೆ?: ಇದಕ್ಕಿರುವ ಕಾರಣ ಹೆಚ್ಚಿನದಾಗಿ ಮಾನಸಿಕ ಸ್ವರೂಪದ್ದು ಎನ್ನುತ್ತಾರೆ ಆರೋಗ್ಯ ತಜ್ಞರು. ರಾತ್ರಿ ಇಡೀ ನಿದ್ರೆಯೇ ಬರುತ್ತಿಲ್ಲ ಅಥವಾ ಮಲಗಿದ ಎಷ್ಟೋ ಹೊತ್ತಿನವರೆಗೆ ನಿದ್ರೆ ಬರುತ್ತಿಲ್ಲ ಎಂದಾದರೆ ಅತಿಯಾಗಿ ಮೊಬೈಲ್‌ ನೋಡುವುದರಿಂದ ಹಿಡಿದು ಬೇರೆ ಬೇರೆ ಆರೋಗ್ಯ ಕಾರಣ ಇರಬಹುದು. ಆದರೆ ನಸುಕಿಗೆ ಎಚ್ಚರವಾಗಿ ನಂತರ ನಿದ್ದೆ ಬರುತ್ತಿಲ್ಲ ಎಂದಾದರೆ ಬಹುತೇಕ ಮಾನಸಿಕ ಒತ್ತಡವೇ ಇದಕ್ಕೆ ಕಾರಣ ಇದ್ದೀತು ಎನ್ನುವುದು ತಜ್ಞರ ಅಭಿಮತ. ಒತ್ತಡಕ್ಕೆ ನಮ್ಮ ದೇಹ ಸ್ಪಂದಿಸುವ ರೀತಿಯೇ ಇದಕ್ಕೆ ಮುಖ್ಯವಾಗಿ ಕಾರಣ. ಏನು ಸಂಬಂಧ ಇದಕ್ಕೆ ಎನ್ನುವುದನ್ನು ನೋಡೋಣ.

ಕಾರ್ಟಿಸೋಲ್‌: ನಸುಕಿನ 2-4 ಗಂಟೆಯ ಸಮಯದಲ್ಲಿ ನಮ್ಮೆಲ್ಲರ ದೇಹವೂ ಒಂದಿಷ್ಟು ಕಾರ್ಟಿಸೋಲ್‌ ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ. ಈ ಚೋದಕಗಳ ಬಿಡುಗಡೆಯು ದೇಹದ ಸಹಜ ಕ್ರಿಯೆ. ಅಂದರೆ ಇನ್ನು ಕೆಲವು ತಾಸುಗಳಲ್ಲಿ ಮೆದುಳು ಎಚ್ಚರಗೊಳ್ಳುವುದಕ್ಕೆ ಬೇಕಾದ ದೈಹಿಕ ತಯಾರಿಯನ್ನು ಮಾಡುವ ಉದ್ದೇಶ ಈ ಚೋದಕದ್ದು. ಹೆಚ್ಚಿನ ಜನ, ಈ ಅವಸ್ಥೆಯಲ್ಲಿ ಸಹಜವಾಗಿಯೇ ತಮ್ಮ ನಿದ್ದೆಯನ್ನು ಮುಂದುವರಿಸಿಕೊಂಡು ಹೋಗುತ್ತಾರೆ.

ಇಂಗ್ಲೆಂಡ್‌ನ ದುಬಾರಿ ಶಸ್ತ್ರಚಿಕಿತ್ಸೆಯಿಂದ ಬೇಸತ್ತು ಭಾರತಕ್ಕೆ ಬಂದ ವ್ಯಕ್ತಿ

ಯಾವಾಗ ಎಚ್ಚರ ಆಗಬೇಕೋ ಆಗಲೇ ಕಣ್ಣು ಬಿಡುತ್ತಾರೆ. ಆದರೆ ಮನಸ್ಸಿನಲ್ಲಿ ಒತ್ತಡದ ಮೂಟೆ ಹೇರಿಕೊಂಡು ಕುಳಿತಿರುವಾಗ ಕಾರ್ಟಿಸೋಲ್‌ ಬಿಡುಗಡೆ ಆಗುತ್ತಿದ್ದಂತೆ ಎಚ್ಚರಾಗಿ ಬಿಡುತ್ತದೆ. ಅಷ್ಟೇ ಅಲ್ಲ, ಯಾರೋ ಲೈಟು ಹಾಕಿದರು, ಇನ್ಯಾರೋ ಬಾತ್‌ರೂಮಿಗೆ ಹೋದರೂ ನಿಮಗೆ ಎಚ್ಚರಾಗಿಬಿಡುವಷ್ಟು ನಿದ್ದೆ ಸೂಕ್ಷ್ಮವಾಗುತ್ತದೆ. ಮಾತ್ರವಲ್ಲ, ಕಾರ್ಟಿಸೋಲ್‌ ಈಗಾಗಲೇ ದೇಹದಲ್ಲಿ ಬಿಡುಗಡೆ ಆಗಿರುವುದರಿಂದ ನಿಚ್ಚಳವಾಗಿ ಎಚ್ಚರವಾಗಿ ಬಿಡುತ್ತದೆ. ಒದ್ದಾಡಿದರೂ ಮತ್ತೆ ನಿದ್ದೆ ಬರುವುದಿಲ್ಲ. ರೊಟ್ಟಿ ಬೇಯಿಸಿದಂತೆ ಹಾಸಿಗೆಯ ಮೇಲೆ ಹಿಂದೆ-ಮುಂದೆ ಒದ್ದಾಡುತ್ತಾ, ಪಕ್ಕದವರ ನಿದ್ದೆಗೂ ಎರವಾಗುವಂತಾಗುತ್ತದೆ.

ಪರಿಹಾರವೇನು?: ಮೊದಲಿಗೆ ಮಾಡಬೇಕಾದ ಕೆಲಸವೆಂದರೆ ಮನಸ್ಸಿನ ಒತ್ತಡ ಕಡಿಮೆ ಮಾಡುವುದು. ರಾತ್ರಿ ಮಲಗುವಾಗ ಆರಾಮದಾಯಕ ಸಂಗೀತ ಕೇಳಿ, ಭ್ರಾಮರಿಯಂಥ ಪ್ರಾಣಾಯಾಮ ನಿದ್ದೆ ಹೆಚ್ಚಿಸುವುದಕ್ಕೆ ನೆರವಾಗಬಲ್ಲದು. ಮಲಗುವ ಮೊಬೈಲ್‌ ಬಿಸಾಡಿ, ಪುಸ್ತಕ ಹಿಡಿಯುವುದು ಒಳ್ಳೆಯ ಉಪಾಯ. ಜತೆಗೆ ಬೆಚ್ಚಗಿನ ಸ್ನಾನ, ಸೊಖೋಷ್ಣವಾದ ಕೋಣೆ-ಹಾಸಿಗೆ ಇತ್ಯಾದಿಗಳು ನಿದ್ದೆಯನ್ನು ಗಾಢವಾಗಿಸಬಲ್ಲವು. ಬೆಳಗಿನ ಜಾವದಲ್ಲಿ ಒತ್ತಾಯದಿಂದ ಬಾರದ ನಿದ್ದೆಯನ್ನು ಬರಿಸಿಕೊಳ್ಳುವುದಕ್ಕೆ ಪ್ರಯತ್ನಿಸುವುದರಿಂದ ಇನ್ನಷ್ಟು ಹೊಳಪಾಗಿ ಎಚ್ಚರವಾಗುತ್ತದೆ. ಒಂದಿಷ್ಟು ದೀರ್ಘ ಉಸಿರಾಟ ಮಾಡಿ, ಸಹಜವಾಗಿ ಮಲಗಿ.