ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Janamejaya Umarji Column: ನಿಜಮಹಾತ್ಮ ಬಾಬಾಸಾಹೇಬ: ಒಂದು ಶುರುವಾತು

ಸಾಮಾಜಿಕ ನ್ಯಾಯದ ವಿಚಾರದಲ್ಲಿ ರಾಜಕೀಯ ಅನುಕೂಲತೆ ಮೇಲುಗೈ ಸಾಧಿಸಿದ ಈ ನಡೆ, ಅಂಬೇಡ್ಕರ್ ಅವರೊಂದಿಗೆ ಕಾಂಗ್ರೆಸ್ ಹೊಂದಿದ್ದ ಮೂಲಭೂತ ಭಿನ್ನತೆಯನ್ನು ಬಹಿರಂಗ ಪಡಿಸಿತು. ಇದಾದ ಬಳಿಕ 1952ರ ಮೊದಲ ಲೋಕಸಭಾ ಚುನಾವಣೆಯಲ್ಲಿ, ಜಾಗತಿಕ ಮಟ್ಟ ದಲ್ಲಿ ಗೌರವ ಪಡೆದ ಬಾಬಾಸಾಹೇಬರನ್ನು ಕಾಂಗ್ರೆಸ್ ತನ್ನ ಎಲ್ಲಾ ಶಕ್ತಿ ಬಳಸಿ ಸೋಲಿಸಿತು.

ನಿಜಮಹಾತ್ಮ ಬಾಬಾಸಾಹೇಬ: ಒಂದು ಶುರುವಾತು

-

Ashok Nayak
Ashok Nayak Jan 24, 2026 8:57 AM

ಕಹಿಸತ್ಯ

ಜನೇಮೇಜಯ ಉಮರ್ಜಿ

ಬಾಬಾಸಾಹೇಬರ ಜೀವನವನ್ನು ರಾಜಕೀಯ ಕಥಾನಕಗಳಿಂದ ಹೊರ ತಂದು, ರಾಷ್ಟ್ರೀಯತೆಯ ನೆಲೆಯಲ್ಲಿ ಪುನರ್ ಸ್ಥಾಪಿಸುವ ಧೈರ್ಯಶಾಲಿ ಪ್ರಯತ್ನ ಮಾಡಿದೆ ‘ನಿಜಮಹಾತ್ಮ ಬಾಬಾಸಾಹೇಬ’ ನಾಟಕ. ಬಾಬಾಸಾಹೇಬರನ್ನು ಯಾವುದೋ ಒಂದು ರಾಜಕೀಯ ಚೌಕಟ್ಟಿಗೆ ಸೀಮಿತಗೊಳಿಸುವ ಬದಲಿಗೆ ಅವರ ನೈಜ ಸ್ವಭಾವ ಗಳಾದ ಚಿಕಿತ್ಸಕ ಬುದ್ಧಿ, ತಪ್ಪನ್ನು ಪ್ರಶ್ನಿಸುವ, ವಿರೋಧಿಸುವ ಧೈರ್ಯ ಮತ್ತು ಸತ್ಯಕ್ಕಾಗಿ ಒಬ್ಬಂಟಿಯಾಗಲು ಸಿದ್ಧನಾದ ಮಹಾಮಾನವತೆಯ ನೆಲೆಯಲ್ಲಿ ಅವರನ್ನು ನೋಡಬೇಕು.

ಸತ್ಯ ಯಾವಾಗಲೂ ಕಹಿಯೇ. ಸತ್ಯವನ್ನು ಹೇಳಲು ಧೈರ್ಯ ಬೇಕು, ಸತ್ಯವನ್ನು ಮರೆ ಮಾಚುವುದು ರಾಜಕೀಯದ ಜಾಣತನ. ಸತ್ಯಕ್ಕೆ ಪಕ್ಷವೂ ಇಲ್ಲ, ಬಣ್ಣವೂ ಇಲ್ಲ; ಅದು ಸ್ಪಷ್ಟ ಮತ್ತು ಶುಭ್ರ. ಆದರೆ ಪಕ್ಷಗಳು ತಮಗೆ ಬೇಕಾದಂತೆ ಬಣ್ಣ ಬಳಿಯಬಹುದು.

ಎಷ್ಟೇ ಕಥಾನಕಗಳ ಹೊರತಾಗಿಯೂ ಸತ್ಯ ಒಂದು ದಿನ ಹೊರಬರುತ್ತದೆ. ಕಣ್ಣಿದೆ, ಪುಸ್ತಕವಿದೆ; ಆದರೆ ಓದಲು ಬೆಳಕು ಬೇಕು, ಅಂದರೆ ಸಾಧನ ಬೇಕು. ಡಾ. ಬಾಬಾಸಾಹೇಬರ ಬದುಕು ತೆರೆದ ಪುಸ್ತಕ. ಅವರು ಬದುಕನ್ನು ಅಕ್ಷರಗಳಲ್ಲಿ ಬರೆದಿಟ್ಟಿದ್ದಾರೆ.

ಅವಿನಾಶಿಯಾಗಿದ್ದು ಅಕ್ಷರ. ಡಾ.ಬಾಬಾಸಾಹೇಬರನ್ನು ರಾಜಕೀಯ ಕಾರಣಗಳಿಗಾಗಿ ಬಳಸಿಕೊಳ್ಳಲಾಗಿದೆ. ಅವರ ಬದುಕಿನ ಹಲವು ಸತ್ಯಗಳು ಹಿನ್ನೆಲೆಗೆ ಸರಿದಿವೆ. ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬರು ನಿಜಮಹಾತ್ಮರು. ಅವರ ಮಾತು ಮತ್ತು ಬರಹಗಳ ಹಿಂದೆ ಸಂಶೋಧನೆ ಮತ್ತು ತಲಸ್ಪರ್ಶಿ ಅಧ್ಯಯನಗಳಿವೆ.

ಇಷ್ಟೆ ನೆನಪಾಗಲು ಕಾರಣ ಮೊನ್ನೆ ಮೊನ್ನೆ ಅಡ್ಡಂಡ ಅವರ ‘ನಿಜಮಹಾತ್ಮ ಬಾಬಾ ಸಾಹೇಬ’ ನಾಟಕ ನೋಡಿದೆ. ಅಡ್ಡಂಡ ನಿಜದ ಬೆನ್ನು ಹತ್ತಿದ್ದಾರೆ. ‘ಟಿಪ್ಪುವಿನ ನಿಜ ಕನಸು’ ನಂತರ ಇದು. ಈಗ ಮೇಲಿನ ಸಾಲುಗಳನ್ನು ಮತ್ತೊಮ್ಮೆ ಓದಿ. ಬಾಬಾಸಾಹೇಬರು ಏನು? ನಾಟಕದಲ್ಲಿ ಅವರ ಜೀವನ ತೆರೆದಿಡುವುದರಲ್ಲಿ ಅಡ್ಡಂಡ ಅವರ ಸಾಹಸವೇನು? ಗೊತ್ತಾಗುತ್ತದೆ.

ಇದನ್ನೂ ಓದಿ: Janamejaya Umarji Column: ಬಸವಾದಿ ಶರಣರ ಹಿಂದೂ ಸಮಾವೇಶ

ನಾಟಕವನ್ನೆ ಪೂರಾ ಹೇಳಿದರೆ ನೋಡಲು ಏನೂ ಉಳಿದಿರುವುದಿಲ್ಲ, ಆದರೆ ಅದರಲ್ಲಿ ಬಂದಿರುವ ಕೆಲ ವಿಷಯಗಳ ಚರ್ಚೆ ಮಾಡಲು ಅಡ್ಡಿಯಿಲ್ಲ. ಬಾಬಾಸಾಹೇಬರ ಬಗ್ಗೆ ‘ಸಾಮಾಜಿಕ ಕ್ರಾಂತಿ ಸೂರ್ಯ’ ಪುಸ್ತಕ ಬರೆದ ದತ್ತೋಪಂತ್ ಠೇಂಗಡಿ ಅವರು ನಿರೂಪಣೆ ಮಾಡುವಂತೆ ಚಿತ್ರಿಸಿರುವ ನಾಟಕ, ಬಾಬಾಸಾಹೇಬರ ಜೀವನವನ್ನು ರಾಜಕೀಯ ಕಥಾನಕ ಗಳಿಂದ ಹೊರತಂದು, ರಾಷ್ಟ್ರೀಯತೆಯ ನೆಲೆಯಲ್ಲಿ ಪುನರ್ ಸ್ಥಾಪಿಸುವ ಧೈರ್ಯಶಾಲಿ ಪ್ರಯತ್ನ ಮಾಡಿದೆ.

ಬಾಬಾಸಾಹೇಬರನ್ನು ಯಾವುದೋ ಒಂದು ರಾಜಕೀಯ ಚೌಕಟ್ಟಿಗೆ ಸೀಮಿತಗೊಳಿಸ ಬಾರದು, ಬದಲಾಗಿ ಅವರ ನೈಜ ಸ್ವಭಾವಗಳಾದ ಚಿಕಿತ್ಸಕ ಬುದ್ಧಿ, ತಪ್ಪನ್ನು ಪ್ರಶ್ನಿಸುವ, ವಿರೋಧಿಸುವ ಧೈರ್ಯ ಮತ್ತು ಸತ್ಯಕ್ಕಾಗಿ ಒಬ್ಬಂಟಿಯಾಗಲು ಸಿದ್ಧನಾದ ಮಹಾ ಮಾನವತೆಯ ನೆಲೆಯಲ್ಲಿ ಅವರನ್ನು ನೋಡಬೇಕು.

ಕೆಲವೊಂದು ಮರೆಯಲಾಗದ ಕಹಿಸತ್ಯಗಳಿವೆ, ಅವುಗಳನ್ನು ನೋಡೋಣ. ಹಿಂದೂ ಸಮಾಜದಲ್ಲಿ ಮಹಿಳೆಯರಿಗೆ ಕಾನೂನುಬದ್ಧ ಸಮಾನ ಹಕ್ಕುಗಳನ್ನು ನೀಡುವ ಉದ್ದೇಶದ ‘ಹಿಂದೂ ಕೋಡ್ ಬಿಲ್’ ಅನ್ನು ಕಾಂಗ್ರೆಸ್ ಸರಕಾರ ರಾಜಕೀಯ ಲಾಭ-ನಷ್ಟದ ಲೆಕ್ಕಾಚಾರ ದಿಂದ ಉದ್ದೇಶಪೂರ್ವಕವಾಗಿ ಮುಂದೂಡಿದ ಕಾರಣ ಬಾಬಾಸಾಹೇಬರು 1951ರಲ್ಲಿ ಪ್ರಧಾನಿ ಜವಾಹರಲಾಲ್ ನೆಹರು ಅವರ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದರು.

Screenshot_4 R

ಸಾಮಾಜಿಕ ನ್ಯಾಯದ ವಿಚಾರದಲ್ಲಿ ರಾಜಕೀಯ ಅನುಕೂಲತೆ ಮೇಲುಗೈ ಸಾಧಿಸಿದ ಈ ನಡೆ, ಅಂಬೇಡ್ಕರ್ ಅವರೊಂದಿಗೆ ಕಾಂಗ್ರೆಸ್ ಹೊಂದಿದ್ದ ಮೂಲಭೂತ ಭಿನ್ನತೆಯನ್ನು ಬಹಿರಂಗಪಡಿಸಿತು. ಇದಾದ ಬಳಿಕ 1952ರ ಮೊದಲ ಲೋಕಸಭಾ ಚುನಾವಣೆಯಲ್ಲಿ, ಜಾಗತಿಕ ಮಟ್ಟದಲ್ಲಿ ಗೌರವ ಪಡೆದ ಬಾಬಾಸಾಹೇಬರನ್ನು ಕಾಂಗ್ರೆಸ್ ತನ್ನ ಎಲ್ಲಾ ಶಕ್ತಿ ಬಳಸಿ ಸೋಲಿಸಿತು.

ಪ್ರಜಾಪ್ರಭುತ್ವದಲ್ಲಿ ಇದು ಸಾಮಾನ್ಯ ಎಂದು ತೇಪೆ ಹಚ್ಚಲಾಗುತ್ತಿರುವುದು ವಿಪರ್ಯಾಸ. 1956ರ ಡಿಸೆಂಬರ್ 6ರಂದು ಸಾಮಾಜಿಕ ಕ್ರಾಂತಿಸೂರ್ಯ ಅಸ್ತಂಗತನಾದಾಗ, ಅಂದಿನ ಕಾಂಗ್ರೆಸ್ ಸರಕಾರ ನಡೆದುಕೊಂಡ ರೀತಿ, ಅವರ ಅಂತ್ಯಕ್ರಿಯೆಗೆ ದೆಹಲಿಯಲ್ಲಿ ದೊರೆಯದ ಜಾಗ, ಈ ಎಲ್ಲ ಘಟನೆಗಳು ಒಟ್ಟಾಗಿ ಅಂಬೇಡ್ಕರ್ ಅವರ ವಿಚಾರಗಳನ್ನು ಉಪಯೋಗಿಸಿ ಕೊಂಡು ಅವರನ್ನು ಕಡೆಗಣಿಸಿದ ಕಾಂಗ್ರೆಸ್ಸಿನ ದ್ವಂದ್ವ ಮತ್ತು ಅವಕಾಶವಾದಿ ರಾಜಕೀಯದ ಪ್ರಶ್ನೆಗಳನ್ನು ಮುಂದಿಟ್ಟಿವೆ.

1927ರಲ್ಲಿ ಮಹಾರಾಷ್ಟ್ರದ ಮಹಾಡ್ನಲ್ಲಿ ನಡೆದ ಚವದಾರ್ ಕೆರೆ ಸತ್ಯಾಗ್ರಹ ಮತ್ತು 1930ರಲ್ಲಿ ನಾಸಿಕ್‌ನ ಕಾಳಾರಾಮ ದೇವಸ್ಥಾನ ಪ್ರವೇಶ ಚಳವಳಿ ಇವು, ಡಾ. ಬಾಬಾ ಸಾಹೇಬರ ಸಾಮಾಜಿಕ ಹೋರಾಟಗಳ ಪ್ರಮುಖ ಮೈಲಿಗಲ್ಲುಗಳಾಗಿವೆ. ಚವದಾರ್ ಕೆರೆಯ ಘಟನೆ ಕೇವಲ ಸಾಮಾಜಿಕ ಪ್ರತಿಭಟನೆ ಅಲ್ಲ, ಅದು ಸಾಮರಸ್ಯದ ಪ್ರಯಾಸವೂ ಆಗಿದೆ.

ಅದೇ ರೀತಿಯಾಗಿ ಕಾಳಾರಾಮ ದೇವಸ್ಥಾನ ಪ್ರವೇಶ ಆಂದೋಲನದಲ್ಲಿ, ದೇವಾಲಯಗಳು ಸಾರ್ವಜನಿಕ ಸಂಸ್ಥೆಗಳಾಗಿದ್ದರೆ, ಅವುಗಳ ಪ್ರವೇಶದ ಹಕ್ಕನ್ನು ಜಾತಿಯ ಆಧಾರದಲ್ಲಿ ನಿರಾಕರಿಸಲಾಗದೆಂಬ ಬಾಬಾಸಾಹೇಬರ ನಿಲುವು ಸ್ಪಷ್ಟವಾಗಿದೆ. ಈ ಎರಡು ಹೋರಾಟ ಗಳು ಕೇವಲ ಹಕ್ಕಿನ ಬೇಡಿಕೆಗಳಲ್ಲ, ಅವು ಸಾಮಾಜಿಕ ಸಾಮರಸ್ಯದ ಹೋರಾಟಗಳೂ ಆಗಿವೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕರಾದ ಡಾ.ಕೇಶವ ಬಲಿರಾಮ ಹೆಡ್ಗೆವಾರ್ ಮತ್ತು ಡಾ. ಬಾಬಾಸಾಹೇಬರು ಒಂದೇ ಕಾಲಘಟ್ಟದಲ್ಲಿದ್ದವರು. ಇವರಿಬ್ಬರ ನಡುವೆ ನಡೆದಿರುವ ಭೇಟಿ ಮತ್ತು ವಿಚಾರ ವಿನಿಮಯಕ್ಕೆ ಇತಿಹಾಸ ಸಾಕ್ಷಿಯಿದೆ; ಸಂಘದ ಶಿಬಿರಕ್ಕೆ ಭೇಟಿಯಿತ್ತ ಬಾಬಾಸಾಹೇಬರು ಅಲ್ಲಿ ಯಾರೂ ಜಾತಿಯಿಂದ ಗುರುತಿಸಿಕೊಳ್ಳದೇ ಹಿಂದೂ ಗಳಾಗಿ ಗುರುತಿಸಿಕೊಂಡಿದ್ದನ್ನು ನೋಡಿ ಆನಂದ ಪಟ್ಟಿದ್ದಾರೆ ಮತ್ತು ಪ್ರಶಂಸಿಸಿದ್ದಾರೆ.

ಹೆಡ್ಗೆವಾರರು ಹಿಂದೂ ಸಮಾಜದ ಒಳಗಿನ ವಿಭಜನೆಗಳನ್ನು ನಿವಾರಿಸಿ ರಾಷ್ಟ್ರವನ್ನು ಬಲಪಡಿಸಲು ಸಂಘಟನೆಯ ಮೂಲಕ ವ್ಯಕ್ತಿ ನಿರ್ಮಾಣದ ಮಾರ್ಗವನ್ನು ಆಯ್ದರೆ, ಬಾಬಾಸಾಹೇಬರು ಸಂವಿಧಾನ, ಕಾನೂನು ಮತ್ತು ಸಂಸ್ಥಾತ್ಮಕ ಸುಧಾರಣೆಗಳ ಮೂಲಕ ಸಾಮಾಜಿಕ ಸಾಮರಸ್ಯವನ್ನು ಸ್ಥಾಪಿಸುವ ಧ್ಯೇಯ ಹೊತ್ತವರು.

ಇಬ್ಬರ ಮಾರ್ಗಗಳು ಭಿನ್ನವಾಗಿದ್ದರೂ, ಇಬ್ಬರಲ್ಲೂ ಭಾರತವನ್ನು ಶಕ್ತಿಶಾಲಿ, ಸ್ವಾಭಿಮಾನಿ ರಾಷ್ಟ್ರವನ್ನಾಗಿ ರೂಪಿಸಬೇಕೆಂಬ ಮೂಲಚಿಂತನೆ ಸ್ಪಷ್ಟವಾಗಿತ್ತು. ಅವರಿಬ್ಬರ ವಿಚಾರ ವಿನಿಮಯದಲ್ಲಿ ಕಮ್ಯುನಿಸ್ಟರು ತರುವ ಅಪಾಯಗಳನ್ನು ನಾಟಕದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.

ಅಸ್ಪೃಶ್ಯತೆ ಹಿಂದೂ ಸಮಾಜಕ್ಕೆ ಅಂಟಿದ ಶಾಪ. ಇದನ್ನು ತೊಡೆಯಲು ಸಾವರ್ಕರರು ಸಾಕಷ್ಟು ಪ್ರಯತ್ನಿಸಿದ್ದರು. ರತ್ನಾಗಿರಿಯಲ್ಲಿ ಇದಕ್ಕಾಗಿ ‘ಪತಿತ ಪಾವನ ಮಂದಿರ’ ಸ್ಥಾಪಿಸಿ ದ್ದರು. ಇದು ಜಾತಿಭೇದವಿಲ್ಲದೆ ಎಲ್ಲರಿಗೂ ಪ್ರವೇಶವಿದ್ದ ದೇವಾಲಯವಾಗಿ, ಸಾವರ್ಕರರ ಹಿಂದೂ ಸಾಮರಸ್ಯ ನಿಲುವಿನ ಪ್ರತೀಕವಾಗಿತ್ತು.

ಇದೇ ಸಂದರ್ಭದಲ್ಲಿ ಬಾಬಾಸಾಹೇಬರು ಮತ್ತು ಸಾವರ್ಕರರ ನಡುವೆ ರಾಷ್ಟ್ರ, ಧರ್ಮ ಮತ್ತು ಭವಿಷ್ಯದ ಭಾರತದ ಕುರಿತ ಚರ್ಚೆಗಳು ನಡೆದಿರುವುದನ್ನು ಸಮಕಾಲೀನ ಉಲ್ಲೇಖ ಗಳು ಸೂಚಿಸುತ್ತವೆ. ಬಾಬಾಸಾಹೇಬರು ‘Thoughts on Pakistan’ (1940) ಕೃತಿ ಬರೆದದ್ದು ದೇಶ ವಿಭಜನೆಯ ಉದ್ದೇಶದಿಂದಲ್ಲ.

ವಿಭಜನೆ ತರುವ ರಾಜಕೀಯ, ಸಾಮಾಜಿಕ ಮತ್ತು ಭೌಗೋಳಿಕ ಪರಿಣಾಮಗಳನ್ನು ತರ್ಕ ಬದ್ಧವಾಗಿ ಅಲ್ಲಿ ವಿಶ್ಲೇಷಿಸಿದ್ದರು. ಧರ್ಮದ ಆಧಾರದಲ್ಲಿ ದೇಶ ಒಡೆಯುವುದೇ ಆದರೆ ಸಂಪೂರ್ಣ ಪ್ರಜಾ ವಿನಿಮಯವಾಗಬೇಕು ಎಂಬುದು ಅವರ ಸ್ಪಷ್ಟ ನಿಲುವಾಗಿತ್ತು.

“ಮುಸ್ಲಿಮರ ನಿಷ್ಠೆಯು ದೇಶಾತೀತವಾಗಿ ಅವರ ಬ್ರದರ್‌ಹುಡ್‌ಗೇ ಹೊರತು, ದೇಶಕ್ಕಲ್ಲ" ಎಂದು ಅವರು ಸ್ಪಷ್ಟವಾಗಿ ಹೇಳಿದ್ದರು. ಇತ್ತ ಸಾವರ್ಕರರು ಧರ್ಮಾಧಾರಿತ ವಿಭಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿ, ‘ಅಖಂಡ ಭಾರತ’ ಎಂಬ ರಾಷ್ಟ್ರಕಲ್ಪನೆಯನ್ನು ಸ್ಪಷ್ಟವಾಗಿ ಪ್ರತಿಪಾದಿಸಿದರು.

ಹಿಂದುಳಿದ ಮತ್ತು ದಮನಿತ ವರ್ಗಗಳ ಉತ್ಥಾನ ಕುರಿತು ಮಹಾತ್ಮ ಗಾಂಧೀಜಿ ಮತ್ತು ಬಾಬಾಸಾಹೇಬರ ಚಿಂತನಾ ಪ್ರಕ್ರಿಯೆಗಳು ಮೂಲಭೂತವಾಗಿ ಭಿನ್ನವಾಗಿದ್ದವು. ಗಾಂಧಿ ಯವರ ‘ಹರಿಜನ’ ಎಂಬ ಪರಿಕಲ್ಪನೆಯು ಆತ್ಮಪರಿವರ್ತನೆ ಮತ್ತು ಸಹಾನುಭೂತಿ ಯ ಮೂಲಕ ಸಮಾಜ ಸುಧಾರಣೆಯನ್ನು ಮತ್ತು ಅಸ್ಪೃಶ್ಯತೆಯನ್ನು ತೊಡೆದು ಹಾಕುವು ದಾಗಿದ್ದರೂ, ಎಲ್ಲ ಹಿಂದೂಗಳನ್ನು ಒಂದೇ ಎಂದು ಗುರುತಿಸದೆ ದಮನಿತರನ್ನು ಪ್ರತ್ಯೇಕ ವಾಗಿ ಗುರುತಿಸುವಂತೆ ಮಾಡಿದ್ದು ಸರಿ ಇರಲಿಲ್ಲ.

ಬಾಬಾಸಾಹೇಬರು “ದಮನವು ಈಗ ಕೇವಲ ನೈತಿಕ ಸಮಸ್ಯೆಯಲ್ಲ, ಅದು ಸಂಸ್ಥಾತ್ಮಕ ಅನ್ಯಾಯವಾಗಿದೆ. ಅದಕ್ಕೆ ಪರಿಹಾರವೂ ಸಂವಿಧಾನಾತ್ಮಕ ಮಾರ್ಗಗಳಿಂದ ಮಾತ್ರ ಸಾಧ್ಯ" ಎಂಬ ನಿಲುವು ತಳೆದಿದ್ದರು. ಈ ಭಿನ್ನತೆಯೇ 1932ರ ಪೂನಾ ಒಪ್ಪಂದದ ಸಂದರ್ಭದಲ್ಲಿ ಸ್ಪಷ್ಟವಾಗಿ ವ್ಯಕ್ತವಾಯಿತು; ಅಂಬೇಡ್ಕರ್ ಅವರು ನಂತರ ತಮ್ಮ ಬರಹಗಳಲ್ಲಿ ಈ ಒಪ್ಪಂದವು ದಲಿತರ ಸ್ವತಂತ್ರ ರಾಜಕೀಯ ಶಕ್ತಿಗೆ ಸಂಪೂರ್ಣ ನ್ಯಾಯ ನೀಡಲಿಲ್ಲ ಎಂದು ಒಪ್ಪಿಕೊಂಡಿದ್ದಾರೆ.

ಅಷ್ಟೇ ಅಲ್ಲದೆ, ಗಾಂಧಿಯವರ ತುಷ್ಟೀಕರಣ ನೀತಿಯ ಬಗ್ಗೆ ಬಾಬಾಸಾಹೇಬರಿಗೆ ಸ್ಪಷ್ಟ ವಿರೋಧವಿತ್ತು. ಸೆಕ್ಯುಲರ್ ಮತ್ತು ಸೋಷಲಿಸ್ಟ್ ಎಂಬ ಪದಗಳನ್ನು ಸಂವಿಧಾನದ ಪೀಠಿಕೆಯೊಳಗೆ ಸೇರಿಸಲು ಅವರು ನಿರಾಕರಿಸಿದ್ದರು. ಮುಂದೆ ಅವುಗಳನ್ನು, ಪ್ರಜಾ ಪ್ರಭುತ್ವವನ್ನು ಗಾಳಿಗೆ ತೂರಿ, ತುರ್ತು ಪರಿಸ್ಥಿತಿ ಹೇರಿ ಸೇರಿಸಲಾಯಿತು.

ಭಾರತದ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬರಿಗೆ ಸಂವಿಧಾನ ಸಭೆಯೊಳಗೆ ದೊರೆತ ಸ್ಥಾನಮಾನ ಮತ್ತು ನಂತರದ ರಾಜಕೀಯ ವರ್ತನೆ, ಸ್ವತಂತ್ರ ಭಾರತದ ಪ್ರಾರಂಭಿಕ ವರ್ಷ ಗಳ ಒಂದು ಮಹತ್ವದ ವಿರೋಧಾಭಾಸವಾಗಿದೆ.

ಬಾಬಾಸಾಹೇಬರು ಸಂವಿಧಾನ ಸಭೆಗೆ ಮೊದಲಿನಿಂದಲೇ ಕಾಂಗ್ರೆಸ್ಸಿನ ಆಯ್ಕೆಯ ಅಭ್ಯರ್ಥಿ ಯಾಗಿರಲಿಲ್ಲ. ಬಾಂಬೆ ಪ್ರಾಂತ್ಯದಿಂದ ಒದಗಿದ ಸೋಲಿನ ನಂತರ ಅವರು ಬಂಗಾಳದಿಂದ ಸಂವಿಧಾನ ಸಭೆಗೆ ಪ್ರವೇಶ ಪಡೆದರು. ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾಗಿ ಅವರು ಅನನ್ಯ ಬೌದ್ಧಿಕ ಕೊಡುಗೆ ನೀಡಿದರೂ, ಅವರನ್ನು ಮುಂದೆ ಸರಿಯಾಗಿ ನಡೆಸಿಕೊಳ್ಳಲಿಲ್ಲ.

ಸಂವಿಧಾನ ಸ್ವೀಕೃತಿಯ ಸಂದರ್ಭದಲ್ಲಿ ನಡೆದ ಪ್ರಲಾಪಗಳು ಇದಕ್ಕೆ ಪುಷ್ಟಿ ಕೊಡುತ್ತವೆ. 1950ರಲ್ಲಿ ಸಂವಿಧಾನ ಸ್ವೀಕೃತಿಯಾದ ನಂತರ ಕಾಂಗ್ರೆಸ್ ನೇತೃತ್ವದ ರಾಜಕೀಯ ವ್ಯವಸ್ಥೆ ಯಲ್ಲಿ ಅವರಿಗೆ ಸಮರ್ಪಕ ಸ್ಥಾನ ಅಥವಾ ಬೆಂಬಲ ದೊರಕಲಿಲ್ಲ. ನಂತರದ ಚುನಾವಣಾ ಸೋಲುಗಳು, ಸಚಿವ ಸಂಪುಟದಿಂದ ರಾಜೀನಾಮೆ ಹಾಗೂ ನಿರಂತರ ರಾಜಕೀಯ ನಿರ್ಲಕ್ಷ್ಯ ಇವೆಲ್ಲವುಗಳು, ‘ಬಾಬಾಸಾಹೇಬರನ್ನು ಲಾಭಕ್ಕಾಗಿ ಬಳಸಿಕೊಂಡು ನಂತರ ನಿರ್ಲಕ್ಷಿಸಲಾಯಿತೆ? ಹಿಂದೆ ಮಾಡಿದ ತಪ್ಪುಗಳ ನೆನಪೂ ಇಲ್ಲದೇ ಅವುಗಳನ್ನು ಮುಚ್ಚಿಟ್ಟು ಇಂದಿಗೂ ಅವರನ್ನು ಬಳಸಿಕೊಳ್ಳುವ, ಕಥಾನಕಗಳನ್ನು ಸೃಷ್ಟಿಸಿ ಲಾಭ ಮಾಡಿಕೊಳ್ಳುವ ಕಾರ್ಖಾನೆಗಳು ಮುಂದುವರಿದಿವೆಯಾ?’ ಎಂಬ ಪ್ರಶ್ನೆಗಳನ್ನು ಸಾರ್ವಜನಿಕ ವಲಯದಲ್ಲಿ ಈ ನಾಟಕವು ಎತ್ತಿದೆ.

(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)