Gururaj Gantihole Column: ಜಗತ್ತಿಗೆ ʼಬ್ರಿಕ್ಸ್ʼ ಚಿಂತೆ, ವಿಪಕ್ಷಗಳಿಗೆ ʼಬಾಡೂಟʼದ ಚಿಂತೆ !
ಪಾಶ್ಚಿಮಾತ್ಯ ಒಕ್ಕೂಟಗಳಂತೆ ಇದೇನು ಒಂದೇ ರೀತಿಯ ರಾಜಕೀಯ ವ್ಯವಸ್ಥೆ ಅಥವಾ ಒಂದೇ ವಿದೇಶಾಂಗ ನೀತಿಯನ್ನು ಹೊಂದಿರುವ ರಾಷ್ಟ್ರಗಳ ಗುಂಪಲ್ಲ. ಇಲ್ಲಿರುವ ದೇಶಗಳ ಭೌಗೋಳಿಕ ಹಾಗೂ ರಾಜಕೀಯ ಹಿತಾಸಕ್ತಿಗಳು ಸಂಪೂರ್ಣ ವಿಭಿನ್ನವಾಗಿವೆ. ಗಡಿಯಲ್ಲಿ ಸಂಘರ್ಷವಿರುವ ಭಾರತ-ಚೀನಾ, ಜಾಗತಿಕ ಮಟ್ಟದಲ್ಲಿ ಶೀತಲ ಸಮರ ನಡೆಸುತ್ತಿರುವ ರಷ್ಯಾ-ಪಾಶ್ಚಿಮಾತ್ಯ ರಾಷ್ಟ್ರಗಳು ಹಾಗೂ ಸೈದ್ಧಾಂತಿಕವಾಗಿ ಬದ್ಧ ವೈರಿಗಳಾಗಿರುವ ಇರಾನ್-ಗಲ್ಫ್ ರಾಷ್ಟ್ರಗಳ ನಡುವೆ ತೀವ್ರ ಭಿನ್ನಾಭಿಪ್ರಾಯ ಮತ್ತು ಹಿತಾಸಕ್ತಿಗಳ ಸಂಘರ್ಷವಿದ್ದರೂ, ಅವೆಲ್ಲವನ್ನೂ ಬದಿಗೊತ್ತಿ ಒಂದೇ ವೇದಿಕೆಯಲ್ಲಿ ಆರೋಗ್ಯ ಕರ ಸಂವಾದ ನಡೆಸುವುದು ಈ ಒಕ್ಕೂಟದ ಅತಿ ದೊಡ್ಡ ವಿಶೇಷತೆ.
-
ಗಂಟಾಘೋಷ
ಇತ್ತೀಚೆಗಷ್ಟೇ ನವದೆಹಲಿಯ ಪ್ರತಿಷ್ಠಿತ ಭಾರತ ಮಂಟಪದಲ್ಲಿ (ಸೆಪ್ಟೆಂಬರ್ 12 ಮತ್ತು 13, 2026ರಂದು) 18ನೇ ಬ್ರಿಕ್ಸ್ ಶೃಂಗಸಭೆ ಅತ್ಯಂತ ಯಶಸ್ವಿಯಾಗಿ ಹಾಗೂ ಅದ್ಧೂರಿಯಾಗಿ ಸಂಪನ್ನ ಗೊಂಡಿದೆ. ಜಾಗತಿಕ ಮಟ್ಟದಲ್ಲಿ ಭೌಗೋಳಿಕ, ಆರ್ಥಿಕ ಹಾಗೂ ರಾಜಕೀಯ ಪಲ್ಲಟಗಳು ತ್ವರಿತಗತಿಯಲ್ಲಿ ನಡೆಯುತ್ತಿರುವ ಈ ಅತ್ಯಂತ ಸೂಕ್ಷ್ಮ ಸಂದರ್ಭದಲ್ಲಿ, ಭಾರತವು ಈ ಬೃಹತ್ ಶೃಂಗಸಭೆಯ ಆತಿಥ್ಯ ವಹಿಸಿದ್ದು ಕೇವಲ ಒಂದು ಸಾಮಾನ್ಯ ಔಪಚಾರಿಕ ಕಾರ್ಯಕ್ರಮವಾಗಿರದೆ, ಜಾಗತಿಕ ನಾಯಕತ್ವದ ಕಿರೀಟವನ್ನು ಮುಡಿಗೇರಿಸಿಕೊಂಡ ಐತಿಹಾಸಿಕ ಕ್ಷಣವಾಗಿತ್ತು.
ರೆಸಿಲಿಯೆನ್ಸ್, ನಾವೀನ್ಯತೆ, ಸಹಕಾರ ಮತ್ತು ಸುಸ್ಥಿರತೆಗಾಗಿ ನಿರ್ಮಾಣ ಎಂಬ ಅರ್ಥಗರ್ಭಿತ ಧ್ಯೇಯ ವಾಕ್ಯದೊಂದಿಗೆ ಆಯೋಜನೆಗೊಂಡಿದ್ದ ಈ ಬಾರಿಯ ಶೃಂಗಸಭೆಯು, ಪ್ರಪಂಚದ ಬಲಿಷ್ಠ ಆರ್ಥಿಕತೆ ಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸುವಲ್ಲಿ ಸಂಪೂರ್ಣ ಯಶಸ್ವಿಯಾಗಿದೆ. ಬ್ರೆಜಿಲ್, ರಷ್ಯಾ, ಭಾರತ, ಚೀನಾ ಹಾಗೂ ದಕ್ಷಿಣ ಆಫ್ರಿಕಾದಿಂದ ಶುರುವಾದ ಈ ಒಕ್ಕೂಟ, ಇಂದು ಇರಾನ್, ಯುಎಇ, ಈಜಿಪ್ಟ್, ಇಥಿಯೋಪಿಯಾ, ಸೌದಿ ಅರೇಬಿಯಾ ಹಾಗೂ ಇಂಡೋನೇಷ್ಯಾದಂತಹ ಹೊಸ ರಾಷ್ಟ್ರಗಳ ಸೇರ್ಪಡೆಯೊಂದಿಗೆ 11 ಸದಸ್ಯ ರಾಷ್ಟ್ರಗಳ ಬೃಹತ್ ಒಕ್ಕೂಟವಾಗಿ ಬೆಳೆದು ನಿಂತಿದೆ.
ಇಂತಹ ವಿಸ್ತೃತಗೊಂಡ ಬೃಹತ್ ವೇದಿಕೆಯ ನಾಯಕರನ್ನು ಹಾಗೂ ವಿವಿಧ ಪಾಲುದಾರ ದೇಶಗಳನ್ನು ಒಂದೇ ಸೂರಿನಡಿ ತಂದು ನಿಲ್ಲಿಸಿದ ಭಾರತದ ಅಸಾಧಾರಣ ರಾಜತಾಂತ್ರಿಕ ಕೌಶಲ್ಯವನ್ನು ಇಡೀ ವಿಶ್ವವೇ ಬೆರಗುಗಣ್ಣಿನಿಂದ ನೋಡಿದೆ. ಭಾರತದ ಪ್ರಧಾನಿಯವರು ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರೊಂದಿಗೆ ಭಾರತ ಮಂಟಪದ ಆವರಣದಲ್ಲಿ ಒಂದೇ ಕಾರಿನಲ್ಲಿ ಪ್ರಯಾಣಿಸಿದ್ದು, ಹಾಗೂ ಚೀನಾದ ಅಧ್ಯಕ್ಷರೊಂದಿಗೆ ಅತ್ಯಂತ ಆತ್ಮೀಯವಾಗಿ ಮಾತುಕತೆ ನಡೆಸಿದ್ದು ಜಾಗತಿಕ ಮಾಧ್ಯಮಗಳ ಮುಖಪುಟದಲ್ಲಿ ರಾರಾಜಿಸಿದವು.
ಇದನ್ನೂ ಓದಿ: Gururaj Gantihole Column: ಪರಿಹಾರಕ್ಕಿಂತ ಬರ ಪಟ್ಟಿಯ ಪಿಆರ್ ತಂತ್ರಕ್ಕೆ ಸೀಮಿತವಾಗದಿರಲಿ ಸರಕಾರ
ಇನ್ನು, ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡಗಳು ದಟ್ಟವಾಗಿ ಕವಿದಿರುವ ಈ ಸೂಕ್ಷ್ಮ ಸಂದರ್ಭ ದಲ್ಲಿ, ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರನ್ನು ನಮ್ಮ ಪ್ರಧಾನಿಯವರು ಆತ್ಮೀಯವಾಗಿ ಅಪ್ಪಿಕೊಂಡು ಸ್ವಾಗತಿಸಿದ್ದು, ಶಾಂತಿ, ಸಂಯಮ ಮತ್ತು ಮಾತುಕತೆಯ ಸ್ಪಷ್ಟ ಸಂದೇಶವನ್ನು ಇಡೀ ಜಗತ್ತಿಗೆ ಸಾರಿದೆ.
ತಮಿಳುನಾಡಿನ ಸುಪ್ರಸಿದ್ಧ ರಾಮನಾಥಸ್ವಾಮಿ ದೇವಾಲಯದ ಭವ್ಯ ಹಿನ್ನೆಲೆಯಲ್ಲಿ ಜಾಗತಿಕ ನಾಯಕರನ್ನು ಸ್ವಾಗತಿಸಿದ್ದು ಹಾಗೂ ಎಲ್ಲ ನಾಯಕರು ಸೇರಿ 10 ಆಲದ ಮರದ ಸಸಿಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಯ ಸಂದೇಶ ಸಾರಿದ್ದು ಈ ಶೃಂಗಸಭೆಯ ವಿಶೇಷ ಆಕರ್ಷಣೆಯಾಗಿತ್ತು. ಆದರೆ, ಪ್ರಪಂಚದ ಆಗುಹೋಗುಗಳನ್ನು ನಿರ್ಧರಿಸುವ ಇಂತಹ ಬೃಹತ್ ವೇದಿಕೆಯಲ್ಲೂ ನಮ್ಮ ದೇಶದ ಕೆಲವು ವಿರೋಧ ಪಕ್ಷದ ನಾಯಕರು ಕೇವಲ ‘ಊಟದ ಮೆನು’ವಿನಲ್ಲಿ ರಾಜಕಾರಣ ಹುಡುಕುತ್ತಿರುವುದು ನಿಜಕ್ಕೂ ವಿಪರ್ಯಾಸದ ಹಾಗೂ ಹಾಸ್ಯಾಸ್ಪದ ಸಂಗತಿಯಾಗಿದೆ. ವೈವಿಧ್ಯತೆಯೇ ನಿಜವಾದ ಶಕ್ತಿ ಬ್ರಿಕ್ಸ್‌ನ ನಿಜವಾದ ಶಕ್ತಿ ಅಡಗಿರುವುದು ಅದರ ಸದಸ್ಯ ರಾಷ್ಟ್ರಗಳ ವೈವಿಧ್ಯತೆಯಲ್ಲಿ.
ಪಾಶ್ಚಿಮಾತ್ಯ ಒಕ್ಕೂಟಗಳಂತೆ ಇದೇನು ಒಂದೇ ರೀತಿಯ ರಾಜಕೀಯ ವ್ಯವಸ್ಥೆ ಅಥವಾ ಒಂದೇ ವಿದೇಶಾಂಗ ನೀತಿಯನ್ನು ಹೊಂದಿರುವ ರಾಷ್ಟ್ರಗಳ ಗುಂಪಲ್ಲ. ಇಲ್ಲಿರುವ ದೇಶಗಳ ಭೌಗೋಳಿಕ ಹಾಗೂ ರಾಜಕೀಯ ಹಿತಾಸಕ್ತಿಗಳು ಸಂಪೂರ್ಣ ವಿಭಿನ್ನವಾಗಿವೆ. ಗಡಿಯಲ್ಲಿ ಸಂಘರ್ಷವಿರುವ ಭಾರತ-ಚೀನಾ, ಜಾಗತಿಕ ಮಟ್ಟದಲ್ಲಿ ಶೀತಲ ಸಮರ ನಡೆಸುತ್ತಿರುವ ರಷ್ಯಾ-ಪಾಶ್ಚಿಮಾತ್ಯ ರಾಷ್ಟ್ರಗಳು ಹಾಗೂ ಸೈದ್ಧಾಂತಿಕವಾಗಿ ಬದ್ಧ ವೈರಿಗಳಾಗಿರುವ ಇರಾನ್-ಗಲ್ಫ್ ರಾಷ್ಟ್ರಗಳ ನಡುವೆ ತೀವ್ರ ಭಿನ್ನಾಭಿಪ್ರಾಯ ಮತ್ತು ಹಿತಾಸಕ್ತಿಗಳ ಸಂಘರ್ಷವಿದ್ದರೂ, ಅವೆಲ್ಲವನ್ನೂ ಬದಿಗೊತ್ತಿ ಒಂದೇ ವೇದಿಕೆಯಲ್ಲಿ ಆರೋಗ್ಯಕರ ಸಂವಾದ ನಡೆಸುವುದು ಈ ಒಕ್ಕೂಟದ ಅತಿ ದೊಡ್ಡ ವಿಶೇಷತೆ. ಅದರಲ್ಲೂ ಈ ಬಾರಿಯ ಶೃಂಗಸಭೆಯ ಅತಿ ದೊಡ್ಡ ರಾಜತಾಂತ್ರಿಕ ಕೌಶಲ್ಯವೆಂದರೆ, ಸದ್ಯ ಮಧ್ಯಪ್ರಾಚ್ಯದಲ್ಲಿ ಪರಸ್ಪರ ಬದ್ಧ ವೈರಿಗಳಾಗಿರುವ ಇರಾನ್ ಮತ್ತು ಯುಎಇ, ಸೌದಿ ಅರೇಬಿಯಾ ದಂತಹ ದೇಶಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ ಒಮ್ಮತ ಮೂಡಿಸಿದ್ದು.
ಭೌಗೋಳಿಕ ಮತ್ತು ರಾಜಕೀಯವಾಗಿ ತೀವ್ರ ಭಿನ್ನಾಭಿಪ್ರಾಯ ಹೊಂದಿರುವ ಈ ರಾಷ್ಟ್ರಗಳ ನಡು ವಿನ ವೈಷಮ್ಯದಿಂದಾಗಿ ಶೃಂಗಸಭೆಯ ಜಂಟಿ ಘೋಷಣಾ ಪತ್ರಕ್ಕೆ ಸಹಿ ಬೀಳುವುದು ಬಹುತೇಕ ಅಸಾಧ್ಯ ಎಂದೇ ಭಾವಿಸಲಾಗಿತ್ತು. ವಾಸ್ತವದಲ್ಲಿ, ಈ ಹಿಂದೆ ನಡೆದ ಬ್ರಿಕ್ಸ್ ವಿದೇಶಾಂಗ ಸಚಿವರ ಸಭೆಯು ಯಾವುದೇ ಜಂಟಿ ಹೇಳಿಕೆಯಿಲ್ಲದೆ ಅಪೂರ್ಣವಾಗಿ ಅಂತ್ಯಗೊಂಡಿತ್ತು. ಆದರೆ, ಭಾರತವು ಶನಿವಾರ ಬೆಳಗಿನ ಜಾವ 4 ಗಂಟೆಯವರೆಗೆ ಸತತವಾಗಿ ತೆರೆಮರೆಯ ಸಂಧಾನ ಹಾಗೂ ಕಠಿಣ ಮಾತುಕತೆಗಳನ್ನು ನಡೆಸಿ ಎಲ್ಲರನ್ನೂ ಒಪ್ಪಿಸುವಲ್ಲಿ ಯಶಸ್ವಿಯಾಯಿತು.
ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಮತ್ತು ಅಬುಧಾಬಿಯ ಯುವರಾಜ ಶೇಖ್ ಖಾಲಿದ್ ನಡುವೆ ವಿರಳಾತಿವಿರಳ ಎನ್ನಬಹುದಾದ ಐತಿಹಾಸಿಕ ಮಾತುಕತೆಗೆ ವೇದಿಕೆ ಕಲ್ಪಿಸುವ ಮೂಲಕ ಉಭಯ ದೇಶಗಳ ನಡುವಿನ ವೈಮನಸ್ಸನ್ನು ಭಾರತ ಮೆಟ್ಟಿ ನಿಂತಿತು. ಅಮೆರಿಕ ಮತ್ತು ಇಸ್ರೇಲ್ ದಾಳಿಯ ಭೀತಿಯಲ್ಲಿರುವ ಇರಾನ್‌ಗೆ ಭದ್ರತೆಯ ಅಭಯ ನೀಡುವುದರ ಜೊತೆಗೆ, ಅರಬ್ ರಾಷ್ಟ್ರ ಗಳ ಹಿತಾಸಕ್ತಿ ಗಳನ್ನೂ ಕಾಪಾಡುವಂತಹ ಸಮತೋಲಿತ ‘ನವದೆಹಲಿ ಘೋಷಣೆ 2026’ಗೆ ಸರ್ವಾನುಮತದ ಒಪ್ಪಿಗೆ ಪಡೆಯುವಲ್ಲಿ ಭಾರತ ಸಂಪೂರ್ಣ ಯಶಸ್ವಿಯಾಯಿತು.
ಭಾರತದ ಪ್ರಧಾನಿಯವರು ರಷ್ಯಾದ ಅಧ್ಯಕ್ಷ ಪುಟಿನ್ ಅವರೊಂದಿಗೆ ಒಂದೇ ಕಾರಿನಲ್ಲಿ ಪ್ರಯಾಣಿ ಸಿದ್ದು, ಚೀನಾ ಅಧ್ಯಕ್ಷರೊಂದಿಗೆ ಆತ್ಮೀಯ ಮಾತುಕತೆ ನಡೆಸಿದ್ದು ಹಾಗೂ ಇರಾನ್ ಅಧ್ಯಕ್ಷರನ್ನು ಅಪ್ಪಿಕೊಂಡು ಸ್ವಾಗತಿಸಿದ್ದು ಜಗತ್ತಿಗೆ ಶಾಂತಿಯ ಸ್ಪಷ್ಟ ಸಂದೇಶ ಸಾರಿತು. ಅಜೆಂಡಾ ರೂಪಿಸುವ ಭಾರತ ಈ ಶೃಂಗಸಭೆಯು ಭಾರತಕ್ಕೆ ಕೇವಲ ‘ಆತಿಥೇಯ’ ಸ್ಥಾನದಿಂದ, ಜಾಗತಿಕ ‘ಅಜೆಂಡಾ ರೂಪಿಸುವ ರಾಷ್ಟ್ರ’ವಾಗಿ ಹೊರಹೊಮ್ಮುವ ಬಹುದೊಡ್ಡ ಅವಕಾಶವನ್ನು ಒದಗಿಸಿದೆ.
ಬ್ರಿಕ್ಸ್ ಶೃಂಗಸಭೆ ಆಯೋಜಿಸುವುದು ಮಾತ್ರವಲ್ಲದೆ, ಗ್ಲೋಬಲ್ ಸೌತ್ ಅಥವಾ ಅಭಿವೃದ್ಧಿಶೀಲ ರಾಷ್ಟ್ರಗಳ ಹಿತಾಸಕ್ತಿ, ಭಯೋತ್ಪಾದನೆ ನಿಯಂತ್ರಣ, ತಂತ್ರeನ, ಕೃತಕ ಬುದ್ಧಿಮತ್ತೆ, ಭವಿಷ್ಯದ ಇಂಧನಗಳಾದ ನಿರ್ಣಾಯಕ ಖನಿಜಗಳು, ಸ್ಥಿರ ಪೂರೈಕೆ ಸರಪಳಿ, ಪಾವತಿ ವ್ಯವಸ್ಥೆಗಳು ಮತ್ತು ಸಾಂಸ್ಥಿಕ ಸುಧಾರಣೆಗಳಂತಹ ತನ್ನ ಆದ್ಯತೆಗಳನ್ನು ಬ್ರಿಕ್ಸ್ ಅಜೆಂಡಾಗೆ ತಂದು, ಅವುಗಳನ್ನು ಅಳೆಯಬಹುದಾದ ಫಲಿತಾಂಶಗಳಾಗಿ ಪರಿವರ್ತಿಸಿದ ಭಾರತದ ರಾಜತಾಂತ್ರಿಕ ಮೌಲ್ಯ ಜಗತ್ತಿನೆದುರು ಊಹಿಸಲಾಗದಷ್ಟು ಹೆಚ್ಚಿದೆ.
ಬ್ರಿಕ್ಸ್ ಕೇವಲ ಭಾಷಣ ಮಾಡುವ ಸಭೆಯಲ್ಲ, ಬದಲಾಗಿ ‘ನ್ಯೂ ಡೆವಲಪ್ಮೆಂಟ್ ಬ್ಯಾಂಕ್’ನಂತಹ ಬೃಹತ್ ಸಂಸ್ಥೆಯನ್ನು ಸೃಷ್ಟಿಸಿದ ಶಕ್ತಿ. ಪಾಶ್ಚಿಮಾತ್ಯರ ಹಿಡಿತದಲ್ಲಿರುವ ಜಾಗತಿಕ ಸಂಸ್ಥೆಗಳಿಗೆ ಪರ್ಯಾಯವಾಗಿ, ಮೂಲಸೌಕರ್ಯ ಹಾಗೂ ಸುಸ್ಥಿರ ಅಭಿವೃದ್ಧಿ ಯೋಜನೆಗಳಿಗೆ ಆರ್ಥಿಕ ನೆರವು ಒದಗಿಸುತ್ತಿರುವ ಈ ಬ್ಯಾಂಕ್, ಬ್ರಿಕ್ಸ್‌ನ ಅತ್ಯಂತ ಗಟ್ಟಿ ಹಾಗೂ ಕಾಂಕ್ರೀಟ್ ಸಾಂಸ್ಥಿಕ ಫಲಿತಾಂಶ ಗಳಲ್ಲಿ ಒಂದಾಗಿದೆ. ಆರ್ಥಿಕ ದೃಷ್ಟಿಕೋನದಿಂದ ವಿಶ್ಲೇಷಿಸಿ ನೋಡಿದರೂ ಭಾರತಕ್ಕೆ ಅಪಾರ ಲಾಭಗಳಿವೆ.
ಸದಸ್ಯ ರಾಷ್ಟ್ರಗಳ ನಡುವೆ ‘ಸ್ಥಳೀಯ ಕರೆನ್ಸಿ’ಯಲ್ಲಿಯೇ ವ್ಯಾಪಾರ ವಹಿವಾಟು ನಡೆಸುವ ಕುರಿತು ಮಹತ್ವದ ಹೆಜ್ಜೆಗಳನ್ನು ಇಡಲಾಗಿದೆ. ಅಮೆರಿಕದ ಡಾಲರ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ, ನಮ್ಮದೇ ರೂಪಾಯಿಯಲ್ಲಿ ಗಡಿಯಾಚೆಗಿನ ವಹಿವಾಟು ನಡೆಸುವುದರಿಂದ ಡಾಲರ್ ಪರಿವರ್ತನಾ ವೆಚ್ಚ ಗಣನೀಯವಾಗಿ ಉಳಿಯಲಿದೆ. ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳಿಗೆ ಸುಲಭ ಹಣಕಾಸು ನೆರವು, ಅಂತರಾಷ್ಟ್ರೀಯ ಪಾವತಿ ವ್ಯವಸ್ಥೆ ಸರಳೀಕರಣ ಹಾಗೂ ಯಾವುದೇ ಒಂದು ದೇಶ ಏಕಪಕ್ಷೀಯವಾಗಿ ವಿಽಸುವ ಆರ್ಥಿಕ ದಿಗ್ಬಂಧನಗಳ ವಿರುದ್ಧ ಒಗ್ಗಟ್ಟಿನಿಂದ ನಿಲ್ಲುವ ನಿರ್ಣಯಗಳು ಭಾರತದ ಆರ್ಥಿಕತೆಗೆ ಬೃಹತ್ ಶಕ್ತಿ ತುಂಬಲಿವೆ. ವಿಪಕ್ಷಗಳ ಅಸಂಬದ್ಧ ಟೀಕೆ ಇಡೀ ಜಗತ್ತೇ ಭಾರತದ ಈ ರಾಜತಾಂತ್ರಿಕ ಹಾಗೂ ಆರ್ಥಿಕ ಸಾಧನೆಯನ್ನು ಕೊಂಡಾಡುತ್ತಿದ್ದರೆ, ನಮ್ಮದೇ ದೇಶದ ಕೆಲವು ವಿರೋಧ ಪಕ್ಷದ ನಾಯಕರಿಗೆ ಮಾತ್ರ ಈ ಯಶಸ್ಸು ಕಣ್ಣಿಗೆ ಕುಕ್ಕುತ್ತಿದೆ. ಕೇಂದ್ರದ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಅವರು ತಮ್ಮ ಎಂದಿನ ನಕಾರಾತ್ಮಕ ಶೈಲಿಯಲ್ಲಿ, ಈ ಬ್ರಿಕ್ಸ್ ಶೃಂಗಸಭೆಯಿಂದ ಭಾರತಕ್ಕೆ ಯಾವುದೇ ರೀತಿಯ ಪ್ರಯೋಜನವಿಲ್ಲ ಎಂದು ಲಘುವಾಗಿ ತಳ್ಳಿಹಾಕಿದ್ದಾರೆ.
ವಿರೋಧ ಪಕ್ಷದ ನಾಯಕರ ಈ ಹೇಳಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅವರ ‘ರಾಜತಾಂತ್ರಿಕ ಜ್ಞಾನ’ ಎಷ್ಟರಮಟ್ಟಿಗೆ ಪಾತಾಳಕ್ಕೆ ಕುಸಿದಿದೆ ಎಂಬುದು ಸ್ಪಷ್ಟವಾಗುತ್ತದೆ. ಜಾಗತಿಕ ನಾಯಕರು ಭಾರತದ ನೆಲದಲ್ಲಿ ನಿಂತು ಭವಿಷ್ಯದ ಬೃಹತ್ ಆರ್ಥಿಕ ನೀತಿಗಳನ್ನು ರೂಪಿಸುತ್ತಿದ್ದರೆ, ದಶಕಗಳ ಕಾಲ ದೇಶವನ್ನಾಳಿದ ಹಿರಿಯ ನಾಯಕರೊಬ್ಬರಿಗೆ ಅದರಲ್ಲಿ ಯಾವುದೇ ‘ಪ್ರಯೋಜನ’ ಕಾಣದಿರು ವುದು ನಿಜಕ್ಕೂ ಆಶ್ಚರ್ಯಕರ!
ಚಿದಂಬರಂ ಅವರ ಪ್ರಕಾರ, ಪ್ರಪಂಚದ ಬಲಿಷ್ಠ ರಾಷ್ಟ್ರಗಳನ್ನು ಒಗ್ಗೂಡಿಸಿ, ಭವಿಷ್ಯದಲ್ಲಿ ಡಾಲರ್ ಬದಲು ತಂತಮ್ಮ ಸ್ಥಳೀಯ ಕರೆನ್ಸಿಯಲ್ಲಿಯೇ ವ್ಯಾಪಾರ ಮಾಡಲು ಒಪ್ಪಂದ ಮಾಡಿ ಕೊಳ್ಳುವುದು, ನ್ಯೂ ಡೆವಲಪ್ಮೆಂಟ್ ಬ್ಯಾಂಕ್ ಮೂಲಕ ಅಭಿವೃದ್ಧಿ ಯೋಜನೆಗಳಿಗೆ ಬಂಡವಾಳ ಹೂಡುವುದು ‘ಪ್ರಯೋಜನವಿಲ್ಲದ’ ಕೆಲಸವಂತೆ!
ಬಹುಶಃ ಅವರ ದೃಷ್ಟಿಯಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಹಗರಣಗಳನ್ನು ಮಾಡುವುದು, ಬೆಲೆಯೇರಿಕೆಗೆ ಇಂಬು ನೀಡುವುದು ಹಾಗೂ ಪಾಶ್ಚಿಮಾತ್ಯರ ಕಣ್ಸನ್ನೆಗೆ ತಕ್ಕಂತೆ ಕೈಕಟ್ಟಿ ನಿಲ್ಲುವುದು ಮಾತ್ರ ದೇಶಕ್ಕೆ ‘ಪ್ರಯೋಜನಕಾರಿ’ ಕೆಲಸವಾಗಿತ್ತೇನೋ! ಇನ್ನು ವಿರೋಧ ಪಕ್ಷದ ಪ್ರಮುಖ ನಾಯಕ ರಾಹುಲ್ ಗಾಂಽಯವರ ಊಟದ ಪುರಾಣವಂತೂ ಅಕ್ಷರಶಃ ಹಾಸ್ಯಾಸ್ಪದ ಹಾಗೂ ವಿಪರ್ಯಾಸದ ಪರಮಾವಽಯಾಗಿದೆ. ಶೃಂಗಸಭೆಯ ನಿಮಿತ್ತ ವಿದೇಶಿ ಗಣ್ಯರಿಗೆ ಏರ್ಪಡಿಸಿದ್ದ ರಾತ್ರಿಯ ಭವ್ಯ ಔತಣಕೂಟದಲ್ಲಿ ‘ಸಂಪೂರ್ಣ ಸಸ್ಯಾಹಾರಿ’ ಊಟ ಬಡಿಸಿದ್ದೇ ಅವರ ಅತಿದೊಡ್ಡ ಆಕ್ಷೇಪಣೆಯಾಗಿತ್ತು!
ಜಾಗತಿಕ ನಾಯಕರು ಭಾರತ ಮಂಟಪದಲ್ಲಿ ಗಂಭೀರವಾಗಿ ಕುಳಿತು ಮಧ್ಯಪ್ರಾಚ್ಯದ ಯುದ್ಧದ ಭೀತಿ, ಕೃತಕ ಬುದ್ಧಿಮತ್ತೆ (ಎಐ) ತಂತ್ರeನದ ಅಪಾಯಗಳು, ಜಾಗತಿಕ ಭಯೋತ್ಪಾದನೆ ನಿಯಂತ್ರಣ ಹಾಗೂ ನಿರ್ಣಾಯಕ ಖನಿಜ ಸಂಪನ್ಮೂಲಗಳ ಅಸೀಕರಣದ ಬಗ್ಗೆ ಮಹತ್ವದ ಚರ್ಚೆ ನಡೆಸುತ್ತಿದ್ದರೆ, ನಮ್ಮ ‘ದಾರ್ಶನಿಕ’ ಯುವ ನಾಯಕನ ತಲೆಯಲ್ಲಿ ಮಾತ್ರ ಅಯ್ಯೋ, ಪಾಪ ವಿದೇಶಿ ಗಣ್ಯರಿಗೆ ಚಿಕನ್ ಟಿಕ್ಕಾ ಮತ್ತು ಮಟನ್ ಬಿರಿಯಾನಿ ಸಿಗಲಿಲ್ಲವಲ್ಲ ಎಂಬ ಪರಮೋಚ್ಚ ಚಿಂತೆ ಕಾಡುತ್ತಿತ್ತು!
ಖಾಂಡ್ವಿ, ಪನೀರ್ ಲಬಾಬ್ದಾರ್, ಸಿರಿಧಾನ್ಯದ ಪಲಾವ್, ಗಲೌಟಿ ಮಶ್ರೂಮ್ ಹಾಗೂ ಜಿಲೇಬಿ ಯಂತಹ ಭಾರತದ ಸಾಂಪ್ರದಾಯಿಕ ಹಾಗೂ ಅತ್ಯಂತ ಆರೋಗ್ಯಕರ ಸಸ್ಯಾಹಾರಿ ಭಕ್ಷ ಗಳನ್ನು ವಿದೇಶಿ ನಾಯಕರು ಅತ್ಯಂತ ಖುಷಿಯಿಂದ, ಬಾಯಿ ಚಪ್ಪರಿಸಿಕೊಂಡು ತಿಂದಿದ್ದಾರೆ. ಅದರಲ್ಲೂ ಸಿರಿಧಾನ್ಯಗಳಿಗೆ ಜಾಗತಿಕ ಮಾನ್ಯತೆ ತಂದುಕೊಡುವ ಭಾರತದ ಶ್ರೇಷ್ಠ ಪ್ರಯತ್ನವನ್ನು ಆ ನಾಯಕರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ನಮ್ಮದೇ ಸಂಸ್ಕೃತಿಯನ್ನು, ನಮ್ಮ ಮಣ್ಣಿನ ಪಾರಂಪರಿಕ ಹಾಗೂ ಸುಸ್ಥಿರ ಆಹಾರವನ್ನು ನಮ್ಮದೇ ನೆಲದಲ್ಲಿ ಬಂದ ಅತಿಥಿಗಳಿಗೆ ಉಣಬಡಿಸುವುದನ್ನು ‘ಆಹಾರ ಪದ್ಧತಿಯ ಹೇರಿಕೆ’ ಎಂದು ಕರೆಯುವ ಇವರ ವಿಕೃತ ಮಾನಸಿಕತೆಗೆ ಏನೆನ್ನಬೇಕು? ಇಡೀ ಜಗತ್ತಿಗೆ ನಮ್ಮ ದೇಶದ ವೈವಿಧ್ಯತೆ ಯನ್ನು ಹೆಮ್ಮೆಯಿಂದ ಪ್ರದರ್ಶಿಸುವ ಬದಲು, ತಟ್ಟೆಯಲ್ಲಿ ಮಾಂಸವಿಲ್ಲ ಎಂದು ಗೋಗರೆಯು ವುದು ಎಂತಹ ರಾಜಕೀಯ? ಶೃಂಗಸಭೆಯಲ್ಲಿ ನಡೆದದ್ದು ಜಾಗತಿಕ ಮಟ್ಟದ ರಾಜತಾಂತ್ರಿಕ ಮಾತುಕತೆಯೇ ಹೊರತು, ಇದೇನು ಊರಿನ ಜಾತ್ರೆಯ ಬಾಡೂಟವಲ್ಲ ಎಂಬ ಕನಿಷ್ಠ ಸಾಮಾನ್ಯ eನವೂ ಇವರಿಗೆ ಇಲ್ಲದಿರುವುದು ದುರಂತ.
ಒಟ್ಟಾರೆಯಾಗಿ, 2026ರ ಈ 18ನೇ ಬ್ರಿಕ್ಸ್ ಶೃಂಗಸಭೆಯು ಜಾಗತಿಕ ವೇದಿಕೆಯಲ್ಲಿ ಭಾರತದ ಅಪ್ರತಿಮ ರಾಜತಾಂತ್ರಿಕ ಸಾಮರ್ಥ್ಯವನ್ನು, ಸಂಘಟನಾ ಚಾತುರ್ಯವನ್ನು ಹಾಗೂ ಸಾಂಸ್ಕೃತಿಕ ಹಿರಿಮೆಯನ್ನು ಮತ್ತೊಮ್ಮೆ ಎತ್ತಿ ಹಿಡಿದಿದೆ. ನಮ್ಮ ವಿಪಕ್ಷಗಳು ಇನ್ನೂ ಅಡುಗೆಮನೆಯ ಬಾಣಲೆಯ ರಾಜಕಾರಣ ದ ಗಿರಕಿ ಹೊಡೆಯುತ್ತಿರುವುದು ದೇಶದ ದುರದೃಷ್ಟ.