ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Lokesh Kayarga Column: ಉಳ್ಳವರಿಗೆ ಮೇಲ್‌ ರಸ್ತೆ, ಇಲ್ಲದವರಿಗೆ ದುರವಸ್ಥೆ !

ಸಾರ್ವಜನಿಕರ ನೆಲವನ್ನು ಬಳಸಿದ, ಸರಕಾರದ ದುಡ್ಡಿನಲ್ಲಿ ನಿರ್ಮಾಣಗೊಂಡ ರಸ್ತೆಗಳು ಸಾರ್ವಜನಿಕ ರಸ್ತೆಗಳೇ ಹೊರತು ಇವು ಖಾಸಗಿ ರಸ್ತೆಗಳಾಗಲು ಸಾಧ್ಯವಿಲ್ಲ. ಆದರೆ ಸಾರ್ವಜನಿಕ ರಸ್ತೆಗಳನ್ನು ಕೆಲವರಿ ಗಷ್ಟೇ ಮೀಸಲಿಡುವ ‘ಸೇವಾತಾರತಮ್ಯ ನೀತಿ’ಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳೆರಡೂ ಸಮಾನ ಆದ್ಯತೆ ನೀಡುತ್ತಿವೆ. ಹೀಗಾಗಿ ಹೊಸದಾಗಿ ಕಟ್ಟಿದೆಲ್ಲವೂ ಉಳ್ಳವರಿಗೆ ಸೀಮಿತವಾಗುತ್ತಿವೆ.

ಉಳ್ಳವರಿಗೆ ಮೇಲ್‌ ರಸ್ತೆ, ಇಲ್ಲದವರಿಗೆ ದುರವಸ್ಥೆ !

-

ಲೋಕಮತ

ಬೆಂಗಳೂರು ಉಳ್ಳವರ ಪಾಲಾಗುತ್ತಿದೆಯೇ ಎಂದು ಹಿಂದೊಮ್ಮೆ ಹಿಂದೆ ಇದೇ ಅಂಕಣದಲ್ಲಿ ಬರೆದಿದ್ದೆ. ಆ ಮಾತು ಈಗ ನಿಜವಾಗುತ್ತಿದೆ. ಬೆಂಗಳೂರಿನ ಪ್ರಮುಖ ಫ್ಲೈ ಓವರ್‌ಗಳಲ್ಲಿ ದ್ವಿಚಕ್ರ, ತ್ರಿಚಕ್ರ ಮತ್ತು ಗೂಡ್ಸ್ ವಾಹನಗಳ ಸಂಚಾರವನ್ನು ನಿಷೇಧಿಸಲು ರಾಜ್ಯ ಸರಕಾರ ಮುಂದಾಗಿದೆ. ಸಾರ್ವಜನಿಕರ ತೀವ್ರ ವಿರೋಧದಿಂದಾಗಿ ಈ ಆದೇಶ ಸದ್ಯಕ್ಕೆ ಮಾರ್ಪಾಡು ಕಂಡಿದೆ. ರಸ್ತೆ ಸುರಕ್ಷತೆ ಮತ್ತು ಸಂಚಾರ ದಟ್ಟಣೆ ನಿವಾರಣೆ ಹೆಸರಿನಲ್ಲಿ ಜಾರಿಗೊಳಿಸಿದ ಈ ಆದೇಶ ಮೇಲ್ನೋಟಕ್ಕೆ ಸರಿ ಕಾಣಬಹುದು. ಆದರೆ ವೇಗವಾಗಿ ಸಾಗುವ ವಾಹನಗಳಿಗೆ ಅನುವು ಮಾಡಿಕೊಡಲು ಬಡವರು ಪ್ರಯಾಣಿಸುವ ವಾಹನಗಳಿಗೆ ನಿರ್ಬಂಧ ಹೇರುವುದು ಸಾಮಾಜಿಕ ತಾರತಮ್ಯದ ಇನ್ನೊಂದು ವರಸೆ.

ಸಂವಿಧಾನದ ಪೀಠಿಕೆಯಲ್ಲಿಯೇ ತಿಳಿಸಿರುವ ಪ್ರಕಾರ ನಮ್ಮ ಪ್ರಜಾಸತ್ತೆಯಲ್ಲಿ ಸಮಪಾಲು, ಸಮ ಬಾಳು ತಿರುಳಿನ ಸಮಾಜವಾದದ ಆಶಯವೂ ಇದೆ. ನೆಲದ ಕಾನೂನುಗಳು ಎಲ್ಲರಿಗೂ ಸಮಾನ ವಾಗಿ ಅನ್ವಯವಾಗುವಂತೆ ಕಟ್ಟಕಡೆಯ ಪ್ರಜೆಗೂ ಸರಕಾರಿ ಸೌಲಭ್ಯಗಳೂ ದಕ್ಕುವಂತೆ ನೋಡಿ ಕೊಳ್ಳಬೇಕಾದುದು ಸರಕಾರದ ಕರ್ತವ್ಯ.

ಸಂವಿಧಾನ ನಿರ್ಮಾತೃ ಡಾ.ಬಿ.ಆರ್.ಅಂಬೇಡ್ಕರ್ ಅವರ ಚಿಂತನೆಯಂತೆ ಸಾಮಾಜಿಕ ನ್ಯಾಯ ವನ್ನು ಖಾತರಿಪಡಿಸುವ ಉದ್ದೇಶದಿಂದಲೇ ಸರಕಾರ ಶೋಷಿತ ವರ್ಗಕ್ಕೆ ವಿಶೇಷವಾದ ಸವಲತ್ತು ಗಳನ್ನು ಕೊಡುತ್ತಿದೆ. ಹಾಗೆಯೇ ಮೀಸಲು ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ.

ಹೀಗಿರುವಾಗ ಸಾರ್ವಜನಿಕ ರಸ್ತೆಯಲ್ಲಿ ಸಂಚರಿಸಲು ಕೆಲವರಿಗಷ್ಟೇ ಅನುಮತಿ ನೀಡಿ ಇನ್ನುಳಿದವ ರನ್ನು ನಿರ್ಬಂಧಿಸುವುದು ಹೊಸ ಬಗೆಯ ‘ಅಸಮಾನತೆ’ ಸಾರ್ವಜನಿಕ ಸ್ಥಳಗಳಲ್ಲಿ ಜಾತಿ, ಲಿಂಗ, ಬಣ್ಣ, ಅಂತಸ್ತಿನ ಆಧಾರದಲ್ಲಿ ಯಾವುದೇ ತಾರತಮ್ಯ ಎಸಗುವುದು ಈ ನೆಲದ ಕಾನೂನಿನ ಪ್ರಕಾರ ಕ್ರಿಮಿನಲ್ ಅಪರಾಧ. ಹಾಗಿದ್ದರೆ ಈ ಬಗೆಯ ತಾರತಮ್ಯವೂ ಕ್ರಿಮಿನಲ್ ಅಪರಾಧ ಎನಿಸುವು ದಿಲ್ಲವೇ? ಈ ಪ್ರಶ್ನೆಗೆ ಕೇಂದ್ರ ಮತ್ತು ರಾಜ್ಯದಲ್ಲಿ ಕುಳಿತ ನಮ್ಮ ಆಡಳಿತಾರೂಢರು ಉತ್ತರಿಸಬೇಕಾ ಗಿದೆ.

ಇದನ್ನೂ ಓದಿ:Lokesh Kayarga Column: ಮತ ವಂಚಿತರೇ ದೇಶ ಬಿಟ್ಟು ತೆರಳಲು ಸಜ್ಜಾಗಿ !

ಸಾರ್ವಜನಿಕರ ನೆಲವನ್ನು ಬಳಸಿದ, ಸರಕಾರದ ದುಡ್ಡಿನಲ್ಲಿ ನಿರ್ಮಾಣಗೊಂಡ ರಸ್ತೆಗಳು ಸಾರ್ವಜನಿಕ ರಸ್ತೆಗಳೇ ಹೊರತು ಇವು ಖಾಸಗಿ ರಸ್ತೆಗಳಾಗಲು ಸಾಧ್ಯವಿಲ್ಲ. ಆದರೆ ಸಾರ್ವಜನಿಕ ರಸ್ತೆಗಳನ್ನು ಕೆಲವರಿಗಷ್ಟೇ ಮೀಸಲಿಡುವ ‘ಸೇವಾತಾರತಮ್ಯ ನೀತಿ’ಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳೆರಡೂ ಸಮಾನ ಆದ್ಯತೆ ನೀಡುತ್ತಿವೆ. ಹೀಗಾಗಿ ಹೊಸದಾಗಿ ಕಟ್ಟಿದೆಲ್ಲವೂ ಉಳ್ಳವರಿಗೆ ಸೀಮಿತವಾಗುತ್ತಿವೆ. ದೇಶಾದ್ಯಂತ ರಸ್ತೆಗಳ ಅಗಲೀಕರಣಕ್ಕೆ ಮುಂದಾದಾಗ, ಬೆಂಗಳೂರಿನಂತಹ ನಗರಗಳಲ್ಲಿ -ಓವರ್‌ಗಳನ್ನು ಕಟ್ಟಿದಾಗ, ಮೆಟ್ರೋಗಳನ್ನು ಅನುಷ್ಠಾನಕ್ಕೆ ತಂದಾಗ ಲಕ್ಷಾಂತರ ಮಂದಿ ಸಾರ್ವಜನಿಕರ ಭೂಮಿಯನ್ನು ವಶಪಡಿ ಸಿಕೊಳ್ಳಲಾಗಿದೆ.

ಸರಕಾರ ಭೂಸ್ವಾಧೀನದ ಪ್ರಕಟಣೆ ಹೊರಡಿಸಿದಾಗ, ಸಾರ್ವಜನಿಕ ಹಿತಾಸಕ್ತಿಯಿಂದ ಭೂಸ್ವಾಧೀನ ಮಾಡಲಾಗುತ್ತಿದೆ ಎಂದೇ ಜಾಹೀರಾತು ನೀಡಲಾಗಿತ್ತು. ನಾಗರಿಕರಿಗೆ ಹೆಚ್ಚಿನ ಸವಲತ್ತು ನೀಡುವ ಹೆಸರಿನಲ್ಲಿ ನಿರ್ಮಾಣವಾದ, ದಿನವೂ ಸಾವಿರಾರು ಜನರು ಓಡಾಡುವ ರಸ್ತೆಗಳು ಸಾರ್ವಜನಿಕ ರಸ್ತೆಗಳಾಗಿವೆಯೇ ಖಾಸಗಿ ರಸ್ತೆಗಳಾಗಲು ಸಾಧ್ಯವಿಲ್ಲ. ಈ ಸೌಲಭ್ಯವನ್ನು ಹೊಂದುವ ಹಕ್ಕು ಎಲ್ಲ ನಾಗರಿಕರಿಗೂ ಇದೆ. ಸಂಚಾರಿ ಸುರಕ್ಷತೆ ಮತ್ತು ವಾಹನ ಸಂಚಾರ ದಟ್ಟಣೆಯನ್ನು ನಿಯಂತ್ರಿಸುವ ಯಾವುದೇ ನಿಯಮಗಳು ಉಳ್ಳವರು ಮತ್ತು ಇಲ್ಲದವನ್ನು ಪ್ರತ್ಯೇಕಿಸುವ ಹೊಸ ಬಗೆಯ ‘ಧನಭೇದ’ ನೀತಿಯಾಗಬಾರದು.

ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸರಕಾರ ದೇಶದಲ್ಲಿ ಸ್ವರ್ಣ ಚತುಷ್ಪಥ ರಸ್ತೆಗಳ ನಿರ್ಮಾಣಕ್ಕೆ ಮುಂದಾದಾಗ ದೇಶದಲ್ಲಿ ಅಭಿವೃದ್ಧಿಯ ಹೊಸ ಪರ್ವ ಶುರುವಾಗಿದ್ದು ನಿಜ. ದೇಶದ ಮೂಲಸೌಕರ್ಯ ಅಭಿವೃದ್ಧಿಗೆ ಸರಕಾರದ ಬಳಿ ಹಣಕಾಸು ಕೊರತೆಯಾದಾಗ ಈ ರಸ್ತೆಗಳ ನಿರ್ಮಾಣಕ್ಕೆ ಬಿಒಟಿ ನೀತಿ ( ಬಿಲ್ಡ್, ಓಪರೇಟ್ ಆಂಡ್ ಟ್ರಾನ್ಸ್ʼಫರ್) ನೀತಿಯನ್ನು ಅಳವಡಿಸಿಕೊಳ್ಳ ಲಾಯಿತು. ಈ ನೀತಿಯಡಿ ನಿರ್ಮಾಣಗೊಂಡ ರಸ್ತೆಗಳಲ್ಲಿ ಸಂಚರಿಸಲು ಸೇವಾ ಶುಲ್ಕ ಜಾರಿಗೆ ಬಂತು.

Traffic

ಆರಂಭದಲ್ಲಿ ಜನರು ಇದನ್ನು ವಿರೋಧಿಸಿದರೂ ಬಳಿಕ ಅನಿವಾರ್ಯ ಎಂಬಂತೆ ಒಪ್ಪಿಕೊಂಡರು. ಮುಂದೆ ನೈಸ್ ಮಾದರಿ ರಸ್ತೆಗಳಿಗಾಗಿ ಬೂಟ್ (ಬಿಲ್ಡ್, ಓನ್, ಓಪರೇಟ್ ಆಂಡ್ ಟ್ರಾನ್ಸ್ʼಫರ್) ನೀತಿಯನ್ನು ಜಾರಿಗೊಳಿಸಲಾಯಿತು. ಇದೀಗ ಕೇಂದ್ರ, ರಾಜ್ಯ ಸರಕಾರಗಳು ಜತೆಯಾಗಿ ಖಾಸಗಿ ಬಂಡವಾಳ ಹೂಡಿಕೆದಾರರನ್ನು ಆಹ್ವಾನಿಸಿ, ‘ನೀವೇ ಕಟ್ಟಿ, ನೀವೇ ವಸೂಲಿ ಮಾಡಿ’ ಎಂಬ ಹೈಬ್ರೀಡ್ ಮಾದರಿಯ ಅಭಿವೃದ್ಧಿಗೆ ಜೋತು ಬಿದ್ದಿವೆ. ರಸ್ತೆ, ರೈಲು, ವಿಮಾನ ನಿಲ್ದಾಣ, ಬಂದರು ಗಳೆಲ್ಲವೂ ಒಂದೊಂದಾಗಿ ಖಾಸಗಿಯವರ ಸೊತ್ತಾಗುತ್ತಿವೆ.

ಸಾರ್ವಜನಿಕರು ಶತಮಾನಗಳಿಂದ ಮುಕ್ತವಾಗಿ ಓಡಾಡುತ್ತಿದ್ದ ರಸ್ತೆಗಳು ಈಗ ಕೆಲವರಿಗಷ್ಟೇ ಸೀಮಿತ ವಾಗುತ್ತಿವೆ. ರಸ್ತೆಗಳಲ್ಲಿ ಟೋಲ್ ನೀತಿ ಜಾರಿಗೆ ಬಂದ ತಕ್ಷಣವೇ ಎತ್ತಿನ ಗಾಡಿ, ತಳ್ಳುಗಾಡಿ, ಸೈಕಲ್, ಟಾಂಗಾ, ಸೈಕಲ್ ರಿಕ್ಷಾ ಮುಂತಾದ ಈ ದೇಶದ ಬಡವರ ವಾಹನಗಳನ್ನು ನಿರ್ಬಂಧಿಸ ಲಾಯಿತು. ಸುರಕ್ಷತೆ ದೃಷ್ಟಿಯಿಂದ ಇದು ಅಗತ್ಯ ಎಂದು ಜನರೂ ಇದಕ್ಕೆ ಒಗ್ಗಿಕೊಂಡರು.

ಈ ಸಂದರ್ಭದಲ್ಲಿ ಇಂತಹ ವಾಹನಗಳಿಗಾಗಿ ಟೋಲ್ ಇಲ್ಲದ ಸರ್ವಿಸ್ ರಸ್ತೆಗಳನ್ನು ನಿರ್ಮಿಸ ಲಾಗುತ್ತಿದೆ ಎಂದು ಸಮಜಾಯಿಷಿ ನೀಡಲಾಯಿತು. ಆದರೆ ಒಂದಷ್ಟು ಕಡೆ ಸರ್ವಿಸ್ ರಸ್ತೆಗಳನ್ನು ನಿರ್ಮಿಸಿ ನಂತರ ಅವುಗಳನ್ನು ಹಾಗೆಯೇ ಬಿಡಲಾಯಿತು. ಕೇವಲ 10 ವರ್ಷಗಳ ಹಿಂದೆ ಬೆಂಗಳೂರು-ಮೈಸೂರು ನಡುವಣ ಹೆದ್ದಾರಿಯಲ್ಲಿ ಕಬ್ಬು ಹೇರಿಕೊಂಡು ನೂರಾರು ಎತ್ತಿನ ಗಾಡಿಗಳು ಓಡಾಡುತ್ತಿದ್ದವು. ಈಗ ಎಕ್ಸ್‌ಪ್ರೆಸ್ ಹೆದ್ದಾರಿಯ ಇಕ್ಕೆಲಗಳಲ್ಲಿ ನಿರ್ಮಿಸಲಾದ ಏರು ತಗ್ಗಿನ, ಕಿಲೋ ಮೀಟರ್‌ಗೊಂದು ‘ಹಂಪ್ಸ್’ ಹಾಕಿರುವ ಸರ್ವಿಸ್ ರಸ್ತೆಗಳಲ್ಲಿ ಎತ್ತಿನ ಗಾಡಿಗಳು ಬಿಡಿ, ಮೋಟಾರು ಗಾಡಿಗಳೂ ಓಡಾಡುವುದು ಕಷ್ಟ.

ಎತ್ತಿನ ಗಾಡಿಗಳ ಬದಲು ಬಡ ರೈತನೂ ಈಗ ದುಬಾರಿ ಬಾಡಿಗೆ ಕೊಟ್ಟು ಟ್ರ್ಯಾಕ್ಟರ್ ಮೊರೆ ಹೋಗ ಬೇಕಾಗಿದೆ. ಹೊಸದಾಗಿ ನಿರ್ಮಾಣವಾಗುತ್ತಿರುವ ‘ಸೂಪರ್ ಎಕ್ಸ್‌ಪ್ರೆಸ್’ ಹೆದ್ದಾರಿಗಳಲ್ಲಿ ಎತ್ತಿನ ಗಾಡಿಗಳು ಮಾತ್ರವಲ್ಲ, ರೈತರ ಟ್ರ್ಯಾಕ್ಟರ್‌ಗಳು, ದ್ವಿಚಕ್ರ ವಾಹನಗಳು, ತ್ರಿಚಕ್ರ, ಗೂಡ್ಸ್ ಆಟೋಗಳೂ ಓಡಾಡುವಂತಿಲ್ಲ. ಇಲ್ಲಿ ನಿಧಾನವಾಗಿ ಚಲಿಸುವವರಿಗೆ ಮಾತ್ರವಲ್ಲ, ವೇಗವಾಗಿ ಸಾಗುವವರಿಗೂ ನಿರ್ಬಂಧಗಳಿವೆ. ಮೋಟಾರು ವಾಹನಗಳನ್ನೂ ಅವುಗಳ ಗಾತ್ರ, ಚಕ್ರ, ವಿನ್ಯಾಸವಷ್ಟೇ ಅಲ್ಲ, ಅವುಗಳ ಉಪಯೋಗದ ಆಧಾರದಲ್ಲಿಯೂ ನಿರ್ಬಂಧಿಸಲಾಗುತ್ತಿದೆ.

ರಾಜಧಾನಿ ಬೆಂಗಳೂರಿನಲ್ಲೀಗ ಈ ನೀತಿಯ ಮುಂದುವರಿದ ಸರಣಿ ಆರಂಭವಾಗಿದೆ. ಮೊನ್ನೆ ತನಕ ನಿಧಾನವಾಗಿ ಚಲಿಸುವ ವಾಹನಗಳಿಗಷ್ಟೇ ನಿರ್ಬಂಧ ಹೇರಲಾಗಿದ್ದ ಫ್ಲೈ ಓವರ್‌ಗಳಲ್ಲಿ ಇನ್ನು ದ್ವಿಚಕ್ರ ವಾಹನಗಳು, ತ್ರಿಚಕ್ರ ವಾಹನಗಳೂ ಓಡಾಡುವಂತಿಲ್ಲ. ಗೂಡ್ಸ್ ಆಟೋಗಳು ಚಲಿಸು ವಂತಿಲ್ಲ. ಅಂದರೆ ಸಾಮಾನ್ಯ ವ್ಯಕ್ತಿಯೊಬ್ಬ ಬಳಸುವ ವಾಹನ ಈ ರಸ್ತೆಗಳಲ್ಲಿ ನಿಷೇಧಕ್ಕೊಳ ಗಾಗುತ್ತಿವೆ. ಸಾರ್ವಜನಿಕರ ತೀವ್ರ ವಿರೋಧದ ಬಳಿಕ ಈ ನಿಯಮಗಳಲ್ಲಿ ಒಂದಷ್ಟು ತಿದ್ದುಪಡಿ ಮಾಡಲಾಗಿದೆ. ಆದರೆ ಮುಂದೊಂದು ದಿನ ಈ ನೀತಿ ಕಟ್ಟು ನಿಟ್ಟಾಗಿ ಜಾರಿಗೆ ಬರುವುದು ಖಚಿತ.

ಫ್ಲೈ ಓವರ್‌ಗಳಲ್ಲಿ ದ್ವಿಚಕ್ರ ವಾಹನ ಮತ್ತು ಗೂಡ್ಸ್ ಆಟೋಗಳನ್ನು ನಿಷೇಧಿಸಿದ ಮಾತ್ರಕ್ಕೆ ಟ್ರಾಫಿಕ್ ಸಮಸ್ಯೆ ನಿವಾರಣೆಯಾಗುತ್ತದೆ ಎಂಬ ನಮ್ಮ ಸಂಚಾರಿ ಪೊಲೀಸರ ವಾದವೇ ಹಾಸ್ಯಾಸ್ಪದ. ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್‌ನಲ್ಲಿ ದ್ವಿಚಕ್ರ ವಾಹನ ಬಳಸುವವರಲ್ಲಿ ಹೆಚ್ಚಿನವರಲ್ಲಿ ಕಾರುಗಳೂ ಇವೆ. ಆದರೆ ಸಂಚಾರ ದಟ್ಟನೆಯ ಕಾರಣದಿಂದ ಚತುಷ್ಚಕ್ರ ಬಿಟ್ಟು ದ್ವಿಚಕ್ರ ವಾಹನಗಳನ್ನು ಆಶ್ರಯಿಸಿದ್ದಾರೆ.

ಸ್ಕೂಟರ್, ಬೈಕ್‌ಗೆ ನಿಷೇಧ ಹೇರಿದ ಮರುದಿನದಿಂದಲೇ ಇವರೆಲ್ಲರೂ ಕಾರು ಹತ್ತಿ ಬರತೊಡಗಿದರೆ ಸಂಚಾರ ದಟ್ಟನೆ ಇನ್ನಷ್ಟೂ ಬಿಗಡಾಯಿಸುತ್ತದೆ. ಇನ್ನು ಗೂಡ್ಸ್ ಆಟೋ, ಲಾರಿಗಳು, ದ್ವಿಚಕ್ರ ವಾಹನಗಳು ಸರ್ವಿಸ್ ರಸ್ತೆಯಲ್ಲಿಯೇ ಸಂಚರಿಸಿದರೂ - ಓವರ್ ಕೆಳಭಾಗದಲ್ಲಿ ವಾಹನ ದಟ್ಟನೆ ನಿರ್ಮಾಣವಾಗುವುದು ಖಚಿತ. ಸರ್ವಿಸ್ ರಸ್ತೆ ಬಂದ್ ತಕ್ಷಣವೇ - ಓವರ್ ಸಂಚಾರವೂ ಸ್ಥಗಿತ ಗೊಳ್ಳುತ್ತದೆ. ಈ ಬಗ್ಗೆ ಯೋಚಿಸದ ಬೆಂಗಳೂರಿನ ಸಂಚಾರಿ ಪೊಲೀಸರು ನಿರ್ದಿಷ್ಟ ವಾಹನಗಳನ್ನು ನಿಷೇಧಿಸಲು ಮುಂದಾಗಿದ್ದಾರೆ.

ಈ ಆದೇಶದ ಸಾಮಾಜಿಕ ತಾರತಮ್ಯತೆಯನ್ನು ಬದಿಗಿಟ್ಟರೂ ಇವುಗಳ ಪ್ರಾಯೋಗಿಕ ಅನುಕೂಲತೆ ಅಷ್ಟಕ್ಕಷ್ಟೇ. ಎಲ್ ಆಂಡ್ ಟಿ ಸಂಸ್ಥೆಯು ಮೈಸೂರು ರಸ್ತೆಯಲ್ಲಿ ಬೆಂಗಳೂರಿನ ಮೊಟ್ಟ ಮೊದಲ ಫ್ಲೈ ಓವರ್ (ಬಿಜಿಎಸ್ ಮೇಲು ಸೇತುವೆ) ನಿರ್ಮಿಸಿದಾಗ ಪಾದಚಾರಿ ರಸ್ತೆಗೂ ಅವಕಾಶ ನೀಡಿತ್ತು. ಆ ಬಳಿಕ ನಿರ್ಮಾಣವಾದ ಯಾವ - ಓವರ್‌ನಲ್ಲೂ ಪಾದಚಾರಿಗಳಿಗೆ ಸಂಚರಿಸಲು ಅವಕಾಶವೇ ಇಲ್ಲ.

ನಮ್ಮ ಯೋಜನಾ ನಿರ್ಮಾತೃಗಳು ಮೇಲುರಸ್ತೆಗಳ ನಿರ್ಮಾಣ ಸಂದರ್ಭದಲ್ಲಿ ದ್ವಿಚಕ್ರ ಸಂಚಾರಕ್ಕೆ ಪ್ರತ್ಯೇಕ ಲೇನ್ ಅವಕಾಶ ಏಕೆ ಕೊಟ್ಟಿಲ್ಲ ಎನ್ನುವುದು ಈಗಲೂ ಕೇಳಬೇಕಾದ ಪ್ರಶ್ನೆ. ಬಂಡವಾಳ ಶಾಹಿ ಯನ್ನೇ ಹೊದ್ದು ಮಲಗಿದ ಪಾಶ್ಚಾತ್ಯ ರಾಷ್ಟ್ರಗಳಲ್ಲೂ ಕೂಡ ರಸ್ತೆಗಳ ವಿಚಾರಕ್ಕೆ ಬಂದರೆ ಪಾದಚಾರಿ ಗಳು, ವೃದ್ಧರಿಗೆ, ಅಂಗವಿಕಲರ ಬಗ್ಗೆ ವಿಶೇಷ ಕಾಳಜಿ ವಹಿಸಲಾಗುತ್ತದೆ.

ಪ್ರತಿಯೊಂದು ರಸ್ತೆಯಲ್ಲೂ ಪ್ರತ್ಯೇಕ ಸೈಕಲ್ ಲೇನ್‌ಗಳಿವೆ. ಸೂಪರ್ ಎಕ್ಸ್‌ಪ್ರೆಸ್ ಹೆದ್ದಾರಿಗಳಾ ದರೂ ಅಲ್ಲಿನ ರಸ್ತೆಗಳಲ್ಲಿ ಸೈಕಲ್ ಸವಾರರನ್ನು, ದ್ವಿಚಕ್ರ ವಾಹನ ಸವಾರರನ್ನು ರಸ್ತೆಗಿಳಿಯದಂತೆ ನಿರ್ಬಂಧಿ ಸಿಲ್ಲ. ಆದರೆ ಎಲ್ಲರಿಗೂ ಮೋಟಾರು ವಾಹನಗಳ ನಿಯಮ ಪಾಲನೆಯನ್ನು ಕಡ್ಡಾಯ ಗೊಳಿಸಲಾಗಿದೆ. ನಮ್ಮಲ್ಲಿ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲಾಗದ ಅಧಿಕಾರಿಗಳು ಮತ್ತಷ್ಟು ನಿಯಮಗಳನ್ನು ಜಾರಿಗೊಳಿಸುವ ಮೂಲಕ ತಮ್ಮ ಜೇಬು ತುಂಬಿಸುವ ಮಾರ್ಗೋ ಪಾಯಗಳನ್ನು ಕಂಡುಕೊಳ್ಳುತ್ತಿದ್ದಾರೆ.

ನಮ್ಮ ತಿಳಿಗೇಡಿ ನಾಯಕರು ಅಧಿಕಾರಿಗಳ ಮಾತಿಗೆ ತಲೆಯಾಡಿಸುತ್ತಿದ್ದಾರೆ. ಬೆಂಗಳೂರನ್ನು ಜಾಗತಿಕ ನಗರವಾಗಿ ರೂಪಿಸಲು ಹೊರಟಿರುವ ನಮ್ಮ ಸಿಎಂ ಡಿ.ಕೆ ಶಿವಕುಮಾರ್ ಅವರು ನಗರದ ನಾಲ್ಕು ಮೂಲೆಗಳಲ್ಲಿಯೂ ಸುರಂಗ ರಸ್ತೆ ನಿರ್ಮಾಣ ಮಾಡಲು ಹೊರಟಿದ್ದಾರೆ. ಆರೇಳು ಕಿಲೋ ಮೀಟರ್ ಉದ್ದದ ಈ ಸುರಂಗ ರಸ್ತೆಗಳನ್ನು ಬಳಸಬೇಕಾದರೆ ಸದ್ಯದ ಅಂದಾಜು ಪ್ರಕಾರವೇ 600 ರು.ಗಳಿಗಿಂತ ಹೆಚ್ಚಿನ ಟೋಲ್ ಕಟ್ಟಬೇಕು. ಈ ರಸ್ತೆಗಳಲ್ಲಿ ಓಡಾಡಬೇಕಾದರೆ ಕೇವಲ ಕಾರಿದ್ದರೆ ಸಾಲದು.

ಜೇಬು ದೊಡ್ಡದಿರಬೇಕು. ಬೆಂಗಳೂರಿನ ಶೇ.5ಕ್ಕಿಂತಲೂ ಕಡಿಮೆ ವರ್ಗದ ಜನರಿಗಷ್ಟೇ ಈ ಸುರಂಗ ಮಾರ್ಗಗಳಲ್ಲಿ ಓಡಾಡಲು ಸಾಧ್ಯ. ಅಭಿವೃದ್ಧಿಯೆಂದರೆ ಕೇವಲ ವೇಗವಾಗಿ ಚಲಿಸುವ ದುಬಾರಿ ಕಾರುಗಳಿಗೆ ಸುಸಜ್ಜಿತ ರಸ್ತೆ ನಿರ್ಮಿಸುವುದಷ್ಟೇ ಅಲ್ಲ. ನಗರ ಮತ್ತು ದೇಶದ ಪ್ರತಿಯೊಬ್ಬ ನಾಗರಿಕ ನಿಗೂ ಸುರಕ್ಷಿತ ಮತ್ತು ಸುಲಭ ಸಂಚಾರದ ಹಕ್ಕನ್ನು ಕಲ್ಪಿಸುವುದು ಸರಕಾರದ ಕರ್ತವ್ಯ. ವೇಗದ ವಾಹನಗಳಿಗೆ ಪ್ರತ್ಯೇಕ ಪಥಗಳನ್ನು ಕಲ್ಪಿಸುವುದು ತಪ್ಪಲ್ಲ.

ಆದರೆ ಮೂಲಸೌಕರ್ಯಗಳಿಂದ ಸಮಾಜದ ಬಹುಸಂಖ್ಯಾತ ಬಡ ಮತ್ತು ಮಧ್ಯಮ ವರ್ಗವನ್ನು ಹೊರಗಿಡುವುದು ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ವಿರುದ್ಧ. ಸರಕಾರಗಳು ಯೋಜನಾ ಹಂತದ ಸಮಗ್ರ ಹಾಗೂ ಸಮಾನ ಅವಕಾಶ ನೀಡುವ ಸಾರಿಗೆ ನೀತಿಗಳನ್ನು ರೂಪಿಸಬೇಕಿದೆ. ಇಲ್ಲವಾದರೆ ಅಭಿವೃದ್ಧಿ ಎಂಬುದು ಕೇವಲ ಉಳ್ಳವರ ಆಸ್ತಿಯಾಗಿ ಉಳಿಯಲಿದೆ. ನಮ್ಮ ಶಿಕ್ಷಣ ವ್ಯವಸ್ಥೆ ಈಗಾಗಲೇ ದೊಡ್ಡ ಮಟ್ಟದ ಸಾಮಾಜಿಕ ಕಂದರವನ್ನು ಹುಟ್ಟು ಹಾಕಿದೆ. ಈಗ ಗುಂಡಿ ಬಿದ್ದ ರಸ್ತೆಗಳೂ ಸಾಮಾಜಿಕ ಮತ್ತು ಆರ್ಥಿಕ ಕಂದರವನ್ನು ಸೃಷ್ಟಿಸದಂತೆ ನೋಡಿಕೊಳ್ಳಬೇಕಾಗಿದೆ.