ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Raghava Sharma Nidle Column: ಅಖಿಲೇಶ್‌ ಗೆಲುವಿಗೆ ಯೋಗಿ ಬ್ರ್ಯಾಂಡ್‌ʼನದೇ ಸವಾಲು

ಕಳೆದ 10 ವರ್ಷಗಳಿಂದ ವಿಪಕ್ಷ ಸ್ಥಾನದಲ್ಲಿ ಕುಳಿತಿರುವ ಅಖಿಲೇಶ್ ಯಾದವ್‌ಗೆ ರಾಜ್ಯದಲ್ಲಿ ತಮ್ಮ ರಾಜಕೀಯ ಭವಿಷ್ಯ ಬಿಗಿಗೊಳಿಸುವ ದೃಷ್ಟಿಯಿಂದ ಅಧಿಪತ್ಯವನ್ನು ಮರುಸ್ಥಾಪಿಸುವುದು ಅನಿ ವಾರ್ಯ. ಇಲ್ಲವಾದಲ್ಲಿ, ಸಮಾಜವಾದಿ ಪಕ್ಷದೊಳಗೇ ಅವರ ನಾಯಕತ್ವ ಮತ್ತು ಸಾಮರ್ಥ್ಯ ಪ್ರಶ್ನಿಸುವ ಧ್ವನಿಗಳು ಹೆಚ್ಚಾಗಲಿವೆ.

ಅಖಿಲೇಶ್‌ ಗೆಲುವಿಗೆ ಯೋಗಿ ಬ್ರ್ಯಾಂಡ್‌ʼನದೇ ಸವಾಲು

-

ಜನಪಥ

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ವಿವಿಧ ಸವಾಲುಗಳನ್ನು ಎದುರಿಸುತ್ತಿರುವ ನಡುವೆ 2027ರ ಆರಂಭದಲ್ಲಿ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಫಲಿತಾಂಶ ಎನ್‌ಡಿಎ ಮೈತ್ರಿಕೂಟದ ಭವಿಷ್ಯಕ್ಕೆ ದಿಕ್ಸೂಚಿಯಾಗಲಿದೆ. 2022ರಂತೆ ಈ ಬಾರಿಯೂ ಉತ್ತರ ಪ್ರದೇಶವನ್ನು ಎನ್‌ಡಿಎ ಮೈತ್ರಿಕೂಟ ಅನಾಯಾಸವಾಗಿ ಗೆದ್ದರೆ, ರಾಷ್ಟ್ರ ರಾಜಕಾರಣದಲ್ಲಿ ವಿಪಕ್ಷಗಳ ಒಗ್ಗಟ್ಟು ಮತ್ತೆ ದುರ್ಬಲಗೊಳ್ಳುವ ಸಾಧ್ಯತೆ ಹೆಚ್ಚಲಿದೆ.

2024ರ ಲೋಕಸಭೆ ಚುನಾವಣೆಯಲ್ಲಿ 43 (ಸಮಾಜವಾದಿ 37, ಕಾಂಗ್ರೆಸ್ 6) ಸೀಟುಗಳನ್ನು ಗೆಲ್ಲುವ ಮೂಲಕ ಬಿಜೆಪಿಗೆ ಆಘಾತ ಉಂಟು ಮಾಡಿದ್ದ ಅಖಿಲೇಶ್-ರಾಹುಲ್ ಗಾಂಧಿ ಜೋಡಿ, 2027ರ ವಿಧಾನಸಭೆ ಚುನಾವಣೆಯಲ್ಲೂ ಇದೇ ಒಗ್ಗಟ್ಟನ್ನು ಮುಂದುವರಿಸಿ, 403 ವಿಧಾನಸಭಾ ಕ್ಷೇತ್ರಗಳುಳ್ಳ ಉತ್ತರ ಪ್ರದೇಶವನ್ನು ತಮ್ಮದಾಗಿಸಿಕೊಳ್ಳಲು ಶತ ಪ್ರಯತ್ನ ಮಾಡುತ್ತಿದೆ.

ಕಳೆದ 10 ವರ್ಷಗಳಿಂದ ವಿಪಕ್ಷ ಸ್ಥಾನದಲ್ಲಿ ಕುಳಿತಿರುವ ಅಖಿಲೇಶ್ ಯಾದವ್‌ಗೆ ರಾಜ್ಯದಲ್ಲಿ ತಮ್ಮ ರಾಜಕೀಯ ಭವಿಷ್ಯ ಬಿಗಿಗೊಳಿಸುವ ದೃಷ್ಟಿಯಿಂದ ಅಧಿಪತ್ಯವನ್ನು ಮರುಸ್ಥಾಪಿಸುವುದು ಅನಿವಾರ್ಯ. ಇಲ್ಲವಾದಲ್ಲಿ, ಸಮಾಜವಾದಿ ಪಕ್ಷದೊಳಗೇ ಅವರ ನಾಯಕತ್ವ ಮತ್ತು ಸಾಮರ್ಥ್ಯ ಪ್ರಶ್ನಿಸುವ ಧ್ವನಿಗಳು ಹೆಚ್ಚಾಗಲಿವೆ.

ಇದನ್ನೂ ಓದಿ: Raghava Sharma Nidle Column: ತುಳು ಅಸ್ತ್ರ: ಡಿಕೆಶಿ ಹೊಸ ರಾಜಕೀಯ ಲೆಕ್ಕಾಚಾರ ?

2024ರ ಫಲಿತಾಂಶ ಸಹಜವಾಗಿಯೇ ಎಸ್ಪಿ-ಕಾಂಗ್ರೆಸ್ ಹುಮ್ಮಸ್ಸನ್ನು ದ್ವಿಗುಣಗೊಳಿಸಿತು. ಹಾಗಂತ, 2027ರ ವಿಧಾನಸಭೆ ಚುನಾವಣೆ ಫಲಿತಾಂಶದಲ್ಲೂ ಇದೇ ಪ್ರತಿಫಲಿಸಬಹುದು ಎಂದು ಈಗಲೇ ಹೇಳಲಾಗುವುದಿಲ್ಲ. ಏಕೆಂದರೆ, ರಾಜ್ಯ ಚುನಾವಣೆಗಳಲ್ಲಿ ವಿಷಯಗಳು ಹಾಗೂ ಸಾಮಾಜಿಕ-ರಾಜಕೀಯ ಸಮೀಕರಣಗಳು ಬೇರೆಯದೇ ಆಗಿರುತ್ತವೆ. 2029ರ ಲೋಕಸಭೆ ಚುನಾವಣೆಯಲ್ಲಿ 62 ಸೀಟುಗಳನ್ನು ಗೆದ್ದು, 2024ರಲ್ಲಿ ತನ್ನ ಸ್ವಯಂಕೃತ ಅಪರಾಧದಿಂದಾಗಿ 33 ಸೀಟುಗಳಿಗೆ ತಗ್ಗಿದ ಬಿಜೆಪಿ, 2024ರಲ್ಲಿ ಹಿನ್ನಡೆ ಕಂಡ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರನ್ನು ತಲುಪಲು ಗ್ರೌಂಡ್‌ವರ್ಕ್ ಮಾಡುತ್ತಿದೆ.

ಖುದ್ದು ಸಿಎಂ ಯೋಗಿ ಆದಿತ್ಯನಾಥ್ ಅವರೇ ಇಂತಹ ಸುಮಾರು 115 ಕ್ಷೇತ್ರಗಳಿಗೆ ಪ್ರವಾಸ ಮಾಡಿ, ಅಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. 2022ರಲ್ಲಿ ಈ 115 ಕ್ಷೇತ್ರಗಳಲ್ಲಿ ಎನ್‌ಡಿಎ 76 ಸ್ಥಾನಗಳನ್ನು ಗೆದ್ದಿತ್ತು. ಆದರೆ ಇದೇ ಪ್ರದೇಶಗಳನ್ನು 2024ರ ಲೋಕಸಭಾ ಫಲಿತಾಂಶದಲ್ಲಿ ವಿಶ್ಲೇಷಿಸಿದಾಗ ಸಮಾಜವಾದಿ 54 ಹಾಗೂ ಕಾಂಗ್ರೆಸ್ 13 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿರುವುದು ಕಾಣುತ್ತದೆ. ಅಂದರೆ, 115ರಲ್ಲಿ 67 ಕ್ಷೇತ್ರಗಳು ಅಖಿಲೇಶ್-ರಾಹುಲ್ ಜೋಡಿಯ ಪ್ರಭಾವಕ್ಕೆ ಒಳಗಾದವು.

ಬಿಜೆಪಿ 47ರಲ್ಲಿ ಮಾತ್ರ ಮುನ್ನಡೆ ಸಾಧಿಸಿತ್ತು. ಅಖಿಲೇಶ್ ಯಾದವ್ 2024ರಂತೆ ಈ ಚುನಾವಣೆಗೂ ಪಿಡಿಎ (ಪಿಚ್ಡಾ+ಪಂಡಿತ್+ದಲಿತ+ಅಲ್ಪಸಂಖ್ಯಾಕ್) ಸಾಮಾಜಿಕ ಸಮೀಕರಣದೊಂದಿಗೆ ಅಖಾಡಕ್ಕಿಳಿಯುತ್ತಿದ್ದಾರೆ.

Buldozer baba

ಕಾಂಗ್ರೆಸ್ ತನ್ನ ಜತೆಗಿದ್ದರೆ ಪಕ್ಷದ ಸಾಂಪ್ರದಾಯಿಕ ನೆಲೆಯಾಚೆಗೆ ಕೆಲವು ದಲಿತ, ಮೇಲ್ಜಾತಿ ಹಾಗೂ ಇತರ ಮತದಾರರನ್ನು ತಲುಪಲು ಸಹಾಯವಾಗಬಹುದು ಎನ್ನುವುದು ಅಖಿಲೇಶ್ ಲೆಕ್ಕಾಚಾರ. ಬಿಜೆಪಿ ಸೋಲಿಸಬೇಕೆಂದರೆ ಒಗ್ಗಟ್ಟಿನ ಹೋರಾಟವೇ ದಾರಿ ಎನ್ನುವುದು ಎರಡೂ ಪಕ್ಷಗಳಿಗೆ ಅರ್ಥವಾಗಿದೆ. ಎರಡೂ ಪಕ್ಷಗಳು 403 ಕ್ಷೇತ್ರಗಳ ಕುರಿತು ತಮ್ಮದೇ ಸಮೀಕ್ಷೆ ನಡೆಸುತ್ತಿವೆ.

ಗೆಲುವಿನ ಸಾಧ್ಯತೆಯ ಕ್ಷೇತ್ರಗಳತ್ತ ಕಣ್ಣು ಹಾಯಿಸುತ್ತಿರುವ ಕಾಂಗ್ರೆಸ್, ಗೆಲ್ಲುವ ಸಾಮರ್ಥ್ಯದ ಆಧಾರದಲ್ಲಿ ಟಿಕೆಟ್ ಹಂಚಿಕೆ ಆಗಬೇಕು ಎಂದು ಬಯಸುತ್ತಿದೆ. 2017ರಲ್ಲಿ ಚುನಾವಣೆ ಆರಂಭ ದವರೆಗೂ ಮೈತ್ರಿ ಕುರಿತ ಅನಿಶ್ಚಿತತೆಯಿತ್ತು ಮತ್ತು ಸೀಟು ಹಂಚಿಕೆಯಲ್ಲೂ ವ್ಯಾಪಕ ಗೊಂದಲ ಏರ್ಪಟ್ಟಿತ್ತು.

ವಿಚಿತ್ರ ಎಂದರೆ 20ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಸಮಾಜವಾದಿ-ಕಾಂಗ್ರೆಸ್ ನಡುವೆ ಫ್ರೆಂಡ್ಲಿ ಫೈಟ್ ಹೆಸರಲ್ಲೇ ಚುನಾವಣಾ ಕದನ ನಡೆದಿತ್ತು! ಇದು ಒಟ್ಟಾರೆ ಮೈತ್ರಿ ಮೇಲೆ ಭಾರೀ ಹಾನಿ ಮಾಡಿತ್ತು. ಮೇಲಾಗಿ, ಮುಲಾಯಂ ಸಿಂಗ್ ಯಾದವ್ ಕುಟುಂಬದೊಳಗೇ ಕಲಹವೆದ್ದಿತ್ತು ಮತ್ತು ಅಪ್ಪ-ಮಗನ ನಡುವೆಯೇ ಪ್ರತ್ಯೇಕ ಗುಂಪು ನಿರ್ಮಾಣವಾಗಿತ್ತು. ಮುಲಾಯಂ ಸೋದರ ಶಿವಪಾಲ್ ಯಾದವ್ ಬಂಡಾಯ ಪಕ್ಷಕ್ಕೆ ಮತ್ತಷ್ಟು ಡ್ಯಾಮೇಜ್ ಮಾಡಿ, ಸಂಘಟನೆಯ ಏಕತೆಗೆ ಹೊಡೆತ ನೀಡಿತು. ಆದರೆ, 2024ರ ಲೋಕಸಭೆ ಚುನಾವಣೆ ವೇಳೆ ಕುಟುಂಬದೊಳಗಿನ ಯಾದವ ಕಲಹಗಳಿರಲಿಲ್ಲ.

ಕಾಂಗ್ರೆಸ್-ಎಸ್ಪಿ ಸೀಟು ಹಂಚಿಕೆ ಮೊದಲೇ ಮಾಡಿದ ಪರಿಣಾಮ, ಉತ್ತಮ ಫಲಿತಾಂಶವೂ ಸಾಧ್ಯವಾಯ್ತು. ಅಖಿಲೇಶ್ ಕೂಡ ಈಗ ಕ್ಷೇತ್ರಗಳ ಹಂಚಿಕೆಗಿಂತ ಮೈತ್ರಿಯ ಒಟ್ಟಾರೆ ಫಲಿತಾಂಶ ಮುಖ್ಯ ಎಂಬ ಸಂದೇಶ ನೀಡುತ್ತಿದ್ದಾರೆ. ಆದರೆ, ಮೇಲ್ಮಟ್ಟದ ನಾಯಕರು ನೀಡುವ ಸಂದೇಶ ಸ್ಥಳೀಯ ಮಟ್ಟದಲ್ಲಿ ಹೊಂದಿಕೆಯಾಗುವುದೇ ಎನ್ನುವುದು ಪ್ರಶ್ನೆ.

2022ರ ಚುನಾವಣೆಯಲ್ಲಿ ಸಮಾಜವಾದಿ ಮತ್ತು ಕಾಂಗ್ರೆಸ್ ಪ್ರತ್ಯೇಕವಾಗಿ ಸ್ಪರ್ಧಿಸಿದ್ದವು. ಎಸ್ಪಿ 32.06% ಮತಗಳೊಂದಿಗೆ 111 ಸ್ಥಾನ ಪಡೆದರೆ, 41.29% ಮತಗಳೊಂದಿಗೆ ಬಿಜೆಪಿ 255 ಸೀಟುಗಳನ್ನು ಪಡೆದು ಅಧಿಕಾರ ಸ್ಥಾಪಿಸಿತು. ಈಗಾಗಲೇ ಕಾಂಗ್ರೆಸ್ ಕಡೆಯಿಂದ ಸುಮಾರು 150 ಸೀಟುಗಳ ಬೇಡಿಕೆ ಬಂದಿದ್ದು, ಸಮಾಜವಾದಿ ನಾಯಕರಿಂದ ಅಪಸ್ವರ ಕೇಳಿ ಬರುತ್ತಿದೆ.

ಸಮಾಜವಾದಿ ಪಕ್ಷ ಸ್ವತಃ ಬಲವಾಗಿರುವ ಅಥವಾ ಎರಡನೇ ಸ್ಥಾನದಲ್ಲಿರುವ ಕ್ಷೇತ್ರವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಟ್ಟರೆ ಅಲ್ಲಿ ಕಾಂಗ್ರೆಸ್‌ಗೆ ಬೂತ್ ಹಂತದ ಸಂಘಟನೆ ಅಥವಾ ಸೂಕ್ತ ಅಭ್ಯರ್ಥಿಗಳಿಲ್ಲದಿದ್ದರೆ ಮೈತ್ರಿಗೆ ನಷ್ಟವಾಗಬಹುದು. ಇದೇ ಕಾರಣಕ್ಕೆ ಅಖಿಲೇಶ್ ಯಾದವ್ ಕ್ಷೇತ್ರ ಹಂಚಿಕೆ winnability ಆಧಾರದಲ್ಲಿರಬೇಕು ಎಂದು ಬಹಿರಂಗವಾಗಿ ಹೇಳಿದ್ದಾರೆ.

ಸದ್ಯದ ಸನ್ನಿವೇಶದಲ್ಲಿ ಕಾಂಗ್ರೆಸ್ ಎಷ್ಟು ಕ್ಷೇತ್ರ ಕೇಳುತ್ತದೆ? ಎಂಬುದಕ್ಕಿಂತ ಕಾಂಗ್ರೆಸ್‌ಗೆ ಎಸ್ಪಿ ಯಾವ ಕ್ಷೇತ್ರಗಳನ್ನು ಬಿಟ್ಟು ಕೊಡುತ್ತದೆ? ಎನ್ನುವುದು ಕುತೂಹಲ. ಕಾಂಗ್ರೆಸ್‌ನ ಹೊಸ ರಾಜ್ಯಾಧ್ಯಕ್ಷೆ, ಬ್ರಾಹ್ಮಣ ಸಮಾಜದ ಆರಾಧನಾ ಮಿಶ್ರಾ ಕೂಡ ಎರಡೂ ಪಕ್ಷಗಳಿಗೆ winnability ಮುಖ್ಯ ಎಂದು ಹೇಳಿರುವುದು ಚುನಾವಣಾ ಪೂರ್ವದಲ್ಲಿ ಮೇಲ್ಮಟ್ಟದ ನಾಯಕರಲ್ಲಿರುವ ಸ್ಪಷ್ಟತೆಯನ್ನು ತೋರಿಸುತ್ತಿದೆ.

ಹಾಗಾಗಿ, ಇಂಡಿ ಒಕ್ಕೂಟಕ್ಕೆ ಇದು ಶುಭ ಸೂಚಕ. ತಮ್ಮ ಸಮಾಜವಾದಿ ಪಕ್ಷವನ್ನು ಮುಸ್ಲಿಂ ಪಕ್ಷ ಎಂಬ ಇಮೇಜ್ ನಿಂದ ಹೊರತರುವುದು ಅಖಿಲೇಶ್ ಉದ್ದೇಶ. ಅದಕ್ಕಾಗಿಯೇ ಅವರು ತಮ್ಮ ಪ್ರತಿ ಮಾತಿನಲ್ಲಿ ಪಿಡಿಎ ಮಂತ್ರ ಜಪಿಸುತ್ತಾ, ದಲಿತರು ಮತ್ತು ಯಾದವೇತರ ಒಬಿಸಿ ಸಮುದಾಯಗಳತ್ತ ಹೆಚ್ಚು ಗಮನ ಕೊಡುತ್ತಿದ್ದಾರೆ.

ಬಿಎಸ್ಪಿ ನಾಯಕಿ ಮಾಯಾವತಿ ಪ್ರತಿನಿಧಿಸುವ ದಲಿತ ಸಮುದಾಯವನ್ನು ಸಂಘಟಿತವಾಗಿ ಸೆಳೆಯಲು ಯತ್ನಿಸುತ್ತಿರುವ ಅಖಿಲೇಶ್, ಪಕ್ಷದ ವಿದ್ಯಾರ್ಥಿ ಘಟಕದಲ್ಲಿ ನೀಲಿ ಬಣ್ಣದ ಬಳಕೆ, ಅಂಬೇಡ್ಕರ್ ಸಂಕೇತಗಳಿಗೆ ಹೆಚ್ಚಿನ ಪ್ರಾಮುಖ್ಯತೆ, ಆಗ್ರಾದಲ್ಲಿ ದಲಿತ ಸಮಾವೇಶ ನಡೆಸುತ್ತಾ ಅವರಲ್ಲಿ ಇಂಡಿ ಒಕ್ಕೂಟದ ಬಗ್ಗೆ ಒಲವು ಹುಟ್ಟಿಸುವ ಕಾರ್ಯತಂತ್ರ ಜಾರಿ ಮಾಡಿದ್ದಾರೆ.

ಉತ್ತರ ಪ್ರದೇಶದ ಪರಿಶಿಷ್ಟ ಜಾತಿಗಳ ಜನಸಂಖ್ಯೆಯಲ್ಲಿ ಜಾಟವ್ ಸಮುದಾಯದ (ಮಾಯಾವತಿ ಇದೇ ಸಮುದಾಯದವರು) ಪಾಲು ಅರ್ಧಕ್ಕಿಂತ ಹೆಚ್ಚು ಎಂಬುದೂ ಗಮನಾರ್ಹ. ಕಾಂಗ್ರೆಸ್ ಅನ್ನು ಕಡೆಗಣಿಸಿದರೆ ಸಮಾಜವಾದಿ ಪಕ್ಷಕ್ಕೆ ಮುಸ್ಲಿಂ ಮತಗಳ ಕ್ರೋಢೀಕರಣ ಕಷ್ಟವಾಗಬಹುದು ಎನ್ನುವುದು ಕೆಲ ಎಸ್ಪಿ ನಾಯಕರ ಅಂಬೋಣ. ಮೇಲ್ಜಾತಿ ಮತ್ತು ಕೆಲ ದಲಿತ ಮತದಾರರು ಎಸ್ಪಿಯನ್ನು ಹತ್ತಿರವೂ ಸೇರಿಸಲಿಕ್ಕಿಲ್ಲ. ಆದರೆ, ಕಾಂಗ್ರೆಸ್ ಜತೆಗಿದ್ದರೆ ಮೈತ್ರಿಯೊಳಗಿನ ಸಾಮಾಜಿಕ ಸಮೀಕರಣಕ್ಕೆ ಅನುಕೂಲ ಎಂಬ ಲೆಕ್ಕಾಚಾರವೂ ಇದೆ. ಇವೆಲ್ಲವನ್ನೂ ಮೀರಿ ಕಾಂಗ್ರೆಸ್-ಸಮಾಜವಾದಿಗೆ ದೊಡ್ಡ ಸವಾಲಾಗಿರುವುದು ಯೋಗಿ ನಾಯಕತ್ವದ ಬ್ರ್ಯಾಂಡ್.

ವೈಯಕ್ತಿಕವಾಗಿ ಯಾವುದೇ ಭ್ರಷ್ಟಾಚಾರ, ಸ್ವಜನಪಕ್ಷಪಾತ, ಅರಾಜಕ ಆಡಳಿತದ ಆರೋಪ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮೇಲಿಲ್ಲ. ಸಮಾಜವಾದಿ ಮತ್ತು ಬಹುಜನ ಸಮಾಜವಾದಿ ಪಕ್ಷಗಳ ಅಧಿಕಾರವಧಿಯಲ್ಲಿ ಸೃಷ್ಟಿಯಾಗಿದ್ದ ಗೂಂಡಾರಾಜ್ಯದ ಮೂಲೋತ್ಪಾಟನೆ ಮಾಡಿ, ಜನ ಸಾಮಾನ್ಯರು ನೆಮ್ಮದಿಯಿಂದ ಜೀವಿಸುವಂತೆ ಮಾಡಿದ್ದು ಯೋಗಿ ಬಾಬಾ ಎಂಬ ಸರ್ವಸಮ್ಮತಿಯ ಅಭಿಪ್ರಾಯ ಈಗಲೂ ರಾಜ್ಯದೆಡೆ ಇದೆ.

ಬಿಜೆಪಿ ವಿರೋಧಿಗಳು ಯೋಗಿಯನ್ನು ಒಪ್ಪಿಕೊಳ್ಳದಿದ್ದರೂ, ಹಣಬಲ-ತೋಳ್ಬಲದಿಂದ ಮಧ್ಯಮ, ಕೆಳ ಮಧ್ಯಮ ಹಾಗೂ ಸಾಮಾನ್ಯ ಕುಟುಂಬಗಳ ನೆಮ್ಮದಿ ಕೆಡಿಸಿದ್ದ ದುಷ್ಟ ಶಕ್ತಿಗಳ ಧ್ವನಿ ಅಡಗಿಸಿದ ಅವರ ಕ್ರಮಗಳು ಈಗಲೂ ಚರ್ಚೆಯಾಗುತ್ತವೆ ಮತ್ತು ಕಾನೂನು-ಸುವ್ಯವಸ್ಥೆ ಸರಿ ಹಾದಿಗೆ ಬಂದದ್ದೇ ಯೋಗಿ ಅವಧಿಯಲ್ಲಿ ಎಂದು ಜನ ಮಾತಾಡಿಕೊಳ್ಳುತ್ತಾರೆ.

2022ರ ಚುನಾವಣೆಯಲ್ಲಿ ಅವರನ್ನು ಬುಲ್ಡೋಜರ್ ಬಾಬಾ ಎಂದು ಬಿಂಬಿಸುವ ಕಾರ್ಯತಂತ್ರ ಪಕ್ಷಕ್ಕೆ ಚುನಾವಣಾ ಡಿವಿಡೆಂಡ್ ತಂದುಕೊಟ್ಟಿದ್ದು ಸುಳ್ಳಲ್ಲ. ಆದರೆ, 2024ರಲ್ಲಿ ಯೋಗಿ ಅವರ Arm-twist ಮಾಡುವ ದಿಲ್ಲಿ ನಾಯಕರ ನಡೆಯಿಂದಾಗಿ ಪಕ್ಷ ಹಿನ್ನಡೆ ಅನುಭವಿಸಿತು. ಹೀಗಾಗಿ, ಯೋಗಿಯವರ ನಾಯಕತ್ವಕ್ಕೆ ಅಥವಾ ಅವರ ಅನಿಸಿಕೆಗೆ ತದ್ವಿರುದ್ಧ ಎನಿಸುವ ಯಾವುದೇ ನಿರ್ಧಾರವನ್ನು ಬಿಜೆಪಿಯ ದಿಲ್ಲಿ ನಾಯಕರು ತೆಗೆದುಕೊಂಡರೂ, ಅದರ ನೇರ ಪರಿಣಾಮ ಚುನಾವಣೆ ಮೇಲೆ ಆಗಲಿದೆ.

2024ರ ಲೋಕಸಭೆ ಚುನಾವಣೆಯಲ್ಲಿ ಇದು ಅರಿವಿಗೆ ಬಂದಿರುವುದರಿಂದ ಬಹುಶಃ 2027ರ ಚುನಾವಣೆಗೆ ದಿಲ್ಲಿ ನಾಯಕರು ಎಚ್ಚರಿಕೆಯ ಹೆಜ್ಜೆ ಇಡಬಹುದು. ಏಕೆಂದರೆ, ಯೋಗಿಯವರು ಮಧ್ಯಪ್ರದೇಶದ ಶಿವರಾಜ್ ಸಿಂಗ್ ಚೌಹಾಣ್ ಅಥವಾ ರಾಜಸ್ಥಾನದ ವಸುಂಧರಾ ರಾಜೆ ಸಿಂಧಿಯಾರಂತೆ ಇಲ್ಲ.

ಯೋಗಿಗೆ ಯೋಗಿಯೇ ಸಾಟಿ. ಅವರ ಜನಪ್ರಿಯತೆ ಉತ್ತರಪ್ರದೇಶದಾಚೆಗೂ ಇದೆ. ಯೋಗಿ ಬ್ರ್ಯಾಂಡ್ ಮೊದಲ ಅವಧಿಯಲ್ಲಿ ಹಿಂದುತ್ವ ಮತ್ತು ಕಾನೂನು ಸುವ್ಯವಸ್ಥೆಯೊಂದಿಗೆ ಹೆಚ್ಚು ಗುರುತಿಸಿ ಕೊಂಡಿದ್ದರೆ, ಈಗ ಬಿಜೆಪಿ ಅದಕ್ಕೆ ಅಭಿವೃದ್ಧಿ ಮತ್ತು ಆಡಳಿತದ ಕಥನವನ್ನು ಸೇರಿಸಲು ಪ್ರಯತ್ನಿಸುತ್ತಿದೆ. 2026ರ ಮೇ ನಂತರದಿಂದ ಇಲ್ಲಿವರೆಗೆ ಯೋಗಿ 44ಕ್ಕೂ ಹೆಚ್ಚು ಜಿಲ್ಲೆಗಳಿಗೆ ಭೇಟಿ ನೀಡಿ, ಸುಮಾರು 38000 ಕೋಟಿಯ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ಅಥವಾ ಶಂಕುಸ್ಥಾಪನೆ ಮಾಡಿದ್ದಾರೆ. ವಿಶೇಷವಾಗಿ ಮೇಲೆ ತಿಳಿಸಿದಂತೆ 2024ರಲ್ಲಿ ಬಿಜೆಪಿ-ಎನ್‌ಡಿಎಗೆ ಹಿನ್ನಡೆಯಾದ 115 ವಿಧಾನಸಭಾ ಕ್ಷೇತ್ರಗಳತ್ತ ಅವರ ಪ್ರವಾಸಕ್ಕೆ ಹೆಚ್ಚಿನ ಗಮನ ನೀಡಲಾಗಿದೆ.

ಅಂದರೆ ಸಂದೇಶ ಸ್ಪಷ್ಟ: ಯೋಗಿ ಎಂದರೆ ಕೇವಲ ಹಿಂದುತ್ವದ ನಾಯಕ ಅಲ್ಲ; ಅಭಿವೃದ್ಧಿ ಮತ್ತು ಆಡಳಿತದ ಮುಖವೂ ಹೌದು. ಸಿಎಂ ಯೋಗಿ ಮತ್ತು ಡಿಸಿಎಂ ಕೇಶವ ಪ್ರಸಾದ್ ಮೌರ್ಯ ನಡುವಿನ ಒಳ ಮುನಿಸು ಉ.ಪ್ರ.ದಲ್ಲಿ ಗುಟ್ಟಿನ ವಿಷಯವೇನಲ್ಲ. ಮುಖ್ಯಮಂತ್ರಿ ಹುದ್ದೆ ಮೇಲೆ ಕಣ್ಣಿಟ್ಟಿದ್ದ ಮೌರ್ಯಗೆ, ತಾವು ಉ.ಪ್ರ. ಬಿಜೆಪಿ ಅಧ್ಯಕ್ಷರಾಗಿದ್ದ ಹೊರತಾಗಿಯೂ 2017ರಲ್ಲಿ ಯೋಗಿ ಸಿಎಂ ಆಗಿದ್ದು ಆಘಾತ ಉಂಟುಮಾಡಿತ್ತು. 2022ರಲ್ಲಿ ಮೌರ್ಯ ತಾವು ಸ್ಪರ್ಧಿಸಿದ್ದ ಸಿರಥು ಕ್ಷೇತ್ರದಿಂದ ಸೋತರೂ, ಅವರ ಒಬಿಸಿ ನಾಯಕತ್ವದ ವರ್ಚಸ್ಸಿನ ಕಾರಣಕ್ಕಾಗಿಯೇ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿ, ಉಪ ಮುಖ್ಯಮಂತ್ರಿ ಹುದ್ದೆ ನೀಡಲಾಯಿತು. ಮೇಲಾಗಿ, ದಿಲ್ಲಿ ನಾಯಕರೊಂದಿಗೂ ಮೌರ್ಯ ಉತ್ತಮ ಸಂಬಂಧ ಕಾಪಾಡಿ ಕೊಂಡಿದ್ದಾರೆ.

2024ರ ಲೋಕಸಭಾ ಫಲಿತಾಂಶದ ನಂತರ ಮೌರ್ಯ ಹೇಳಿದ ಸಂಘಟನೆ ಸರ್ಕಾರಕ್ಕಿಂತ ದೊಡ್ಡದು. ಕಾರ್ಯಕರ್ತರ ನೋವು ನನ್ನ ನೋವು ಎಂಬ ಮಾತು ರಾಜಕೀಯ ಸಂಚಲನ ಸೃಷ್ಟಿಸಿತ್ತು. 2024ರ ಹಿನ್ನಡೆ ನಂತರ ಯೋಗಿ ಸರ್ಕಾರದ ಕಾರ್ಯವೈಖರಿಯ ಬಗ್ಗೆ ಪಕ್ಷದೊಳಗೆ ಚರ್ಚೆ ನಡೆಯುತ್ತಿದ್ದ ಸಮಯದಲ್ಲಿ ಮೌರ್ಯ ಅದನ್ನು ಹೇಳಿದ್ದರಿಂದ ಅದು ಯೋಗಿ ನಾಯಕತ್ವದ ಮೇಲಿನ ಪರೋಕ್ಷ ಟೀಕೆ ಎಂದು ವ್ಯಾಖ್ಯಾನಿಸಲಾಯಿತು.

ಮೌರ್ಯ ಬಿಜೆಪಿಯ ಯಾದವೇತರ ಒಬಿಸಿ ಮುಖಗಳಲ್ಲಿ ಪ್ರಮುಖರು. 2017ರಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಪಡೆಯುವಾಗ ಮೇಲ್ಜಾತಿ ಮತಗಳ ಜೊತೆಗೆ ಯಾದವೇತರ ಒಬಿಸಿ ಸಮುದಾಯಗಳನ್ನು ತನ್ನತ್ತ ಸೆಳೆಯುವುದು ಪಕ್ಷದ ಸಾಮಾಜಿಕ ಸಮೀಕರಣದ ಪ್ರಮುಖ ಭಾಗವಾಗಿತ್ತು. ಹೀಗಾಗಿ ಕೇಶವ ಮೌರ್ಯರದ್ದು ರಾಜಕೀಯವಾಗಿ ಮಹತ್ವದ ವ್ಯಕ್ತಿತ್ವವೇ.

ಯೋಗಿ-ಮೌರ್ಯ ಹೊಂದಾಣಿಕೆ ಬಿಗಿಯಾದಷ್ಟು ಲಾಭ ಬಿಜೆಪಿಗೇ. 2026ರಲ್ಲೂ ಯೋಗಿ-ಮೌರ್ಯ ಸಂಬಂಧದ ಬಗ್ಗೆ ಊಹಾಪೋಹಗಳು ಮುಂದುವರಿದಿವೆ. ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಇಬ್ಬರನ್ನೂ ಪ್ರತ್ಯೇಕವಾಗಿ ಭೇಟಿಯಾದ ಸಂದರ್ಭವೂ 2027ರ ಹಿನ್ನೆಲೆಯ ಚರ್ಚೆಗೆ ಕಾರಣವಾಗಿತ್ತು.

2027ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಯೋಗಿ ಆದಿತ್ಯನಾಥ್ ನೇತೃತ್ವದಲ್ಲಿ ಮೂರನೇ ಬಾರಿಗೆ ಸರ್ಕಾರ ರಚಿಸಿದರೆ, ಅತಿ ಹೆಚ್ಚು ಲೋಕಸಭಾ ಸ್ಥಾನಗಳಿರುವ ರಾಜ್ಯದಲ್ಲಿ ದೀರ್ಘಕಾಲ ಸರ್ಕಾರ ನಡೆಸಿದ ಬಿಜೆಪಿ ನಾಯಕ ಎಂದು ದಾಖಲೆ ಬರೆಯುವ ಜತೆಗೆ ಅವರ ರಾಷ್ಟ್ರೀಯ ರಾಜಕೀಯ ಪ್ರಭಾವವೂ ದ್ವಿಗುಣಗೊಳ್ಳಲಿದೆ.

ಯೋಗಿಯವರನ್ನು ಲಖನೌ ಬದಲು ದಿಲ್ಲಿಯಲ್ಲಿ (ಪ್ರಧಾನಿ ಸ್ಥಾನ) ನೋಡಬೇಕೆಂದು ಬಯಸು ತ್ತಿರುವ ಅಭಿಮಾನಿಗಳೂ ಅದನ್ನೇ ನಿರೀಕ್ಷಿಸುತ್ತಿದ್ದಾರೆ. ಏನೇ ಇರಲಿ, ದಿಲ್ಲಿ ನಾಯಕರ ಲೆಕ್ಕಾಚಾರ ಬಲ್ಲವರಾರು?