ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Kiran Upadhyay Column: ಈ ಕಪ್ಪು ಸುಂದರಿ ರೊಕ್ಕದ ಬಂಗಾರಿ!

ಈ ಸುಂದರಿಯ ಜನ್ಮರಹಸ್ಯದ ಹಿಂದೆ ಕೆಲವು ಮಿಲಿಯನ್ ವರ್ಷಗಳ ಹಿಂದಿನ ಇತಿಹಾಸವಿದೆ. ಸುಮಾರು 250 ಮಿಲಿಯನ್ ಅಥವಾ ಅದಕ್ಕೂ ಹೆಚ್ಚು ವರ್ಷಗಳ ಹಿಂದೆ, ಈಗ ತೈಲನಿಕ್ಷೇಪ ಇರುವೆಡೆ ಯೆಲ್ಲಾ ಜಲಚರಗಳೂ, ದೊಡ್ಡ ಪ್ರಮಾಣದ ಆಲ್ಗೈ ಮುಂತಾದ ಸಸ್ಯಗಳೂ, ಜೀವಿಗಳೂ ಇದ್ದವು. ಭೌಗೋಳಿಕ ಬದಲಾವಣೆಯಿಂದಾಗಿ ಅವೆಲ್ಲ ಭೂಮಿಯಡಿ ಸೇರಿಕೊಂಡವು.

Kiran Upadhyay Column: ಈ ಕಪ್ಪು ಸುಂದರಿ ರೊಕ್ಕದ ಬಂಗಾರಿ!

-

ವಿದೇಶವಾಸಿ

ಕೆಲ ವರ್ಷದ ಹಿಂದೆ, ‘ಈ ತೈಲಮಹಿಮೆ ಏನಾದರೂ ಬಲ್ಲಿರಾ..’ ಎಂಬ ಶೀರ್ಷಿಕೆಯಡಿ, ಕೃಷ್ಣ ಸುಂದರಿ, ಕಪ್ಪು ಚಿನ್ನ ಎಂದೆಲ್ಲ ಕರೆಯಲ್ಪಡುವ ಕಚ್ಚಾತೈಲದ ಬಗ್ಗೆ ಈ ಅಂಕಣದಲ್ಲಿ ಬರೆದಿದ್ದೆ. ಅದಕ್ಕೆ ಪ್ರತಿಕ್ರಿಯಿಸಿದ್ದ ಓದುಗರು, ಇನ್ನಷ್ಟು ಆಳಕ್ಕಿಳಿದು ಈ ‘ಕೃಷ್ಣ ಸುಂದರಿ’ಯ ಜಾತಕವನ್ನು ಅರಿಯುವಷ್ಟರ ಮಟ್ಟಿಗಿನ ಕುತೂಹಲವನ್ನು ವ್ಯಕ್ತಪಡಿಸಿದ್ದರು (ಈ ಕಚ್ಚಾತೈಲಕ್ಕೇನಾದರೂ ಜೀವವಿದ್ದಿದ್ದರೆ ಮದುವೆಯಾಗುತ್ತಿದ್ದರೇನೋ!) ಇರಲಿ. ಭೂಗರ್ಭದಲ್ಲಿ ಅಡಗಿರುವ ಕಡಲ ಒಡಲ ಆಳವನ್ನು ಶಬ್ದಗಳಲ್ಲಿ ಕಟ್ಟಿಕೊಡಲಾದೀತೇ? ಅದೊಂದು ಬತ್ತದ ಅಕ್ಷಯಪಾತ್ರೆ. ಅಗೆದಷ್ಟೂ ಆಶ್ಚರ್ಯ, ಬಗೆದಷ್ಟೂ ವಿಸ್ಮಯ! ಸಾಧ್ಯವಾದಷ್ಟನ್ನು ಇಲ್ಲಿ ತೆರೆದಿಟ್ಟಿರುವೆ:

ಈ ಸುಂದರಿಯ ಜನ್ಮರಹಸ್ಯದ ಹಿಂದೆ ಕೆಲವು ಮಿಲಿಯನ್ ವರ್ಷಗಳ ಹಿಂದಿನ ಇತಿಹಾಸವಿದೆ. ಸುಮಾರು 250 ಮಿಲಿಯನ್ ಅಥವಾ ಅದಕ್ಕೂ ಹೆಚ್ಚು ವರ್ಷಗಳ ಹಿಂದೆ, ಈಗ ತೈಲನಿಕ್ಷೇಪ ಇರುವೆಡೆಯೆಲ್ಲಾ ಜಲಚರಗಳೂ, ದೊಡ್ಡ ಪ್ರಮಾಣದ ಆಲ್ಗೈ ಮುಂತಾದ ಸಸ್ಯಗಳೂ, ಜೀವಿಗಳೂ ಇದ್ದವು. ಭೌಗೋಳಿಕ ಬದಲಾವಣೆಯಿಂದಾಗಿ ಅವೆಲ್ಲ ಭೂಮಿಯಡಿ ಸೇರಿಕೊಂಡವು. ತೀವ್ರ ಉಷ್ಣತೆ ಮತ್ತು ಒತ್ತಡದಿಂದಾಗಿ ಅವು ಕೊಳೆತು, ಭೂಮಿಯಲ್ಲಿನ ಇತರ ಖನಿಜಾಂಶಗಳ ಜತೆ ಸೇರಿ, ಕಪ್ಪುಬಣ್ಣದ ಕಚ್ಚಾತೈಲವಾಗಿ ಜನ್ಮತಳೆದವು.

ಭೂಮಿಯೊಳಗಿನ ತೈಲನಿಕ್ಷೇಪವನ್ನು ಕಂಡುಹಿಡಿಯುವುದು ಹೇಗೆ? ಮುಂಚಿನ ದಿನಗಳಲ್ಲಿ, ಭೂಸ್ತರ ವನ್ನು ಸೋಟಗೊಳಿಸಿದಾಗ ಉಂಟಾಗುವ ಕಂಪನವನ್ನು ಅವಲೋಕಿಸಿ ತೈಲನಿಕ್ಷೇಪ ವನ್ನು ಪತ್ತೆ ಹಚ್ಚುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಈ ಬಾಬತ್ತಿಗೆ ವಿಶೇಷ ವಾಹನವನ್ನು ಬಳಸುತ್ತಾರೆ.

ಇದನ್ನೂ ಓದಿ: Kiran Upadhyay Column: ಎಣ್ಣೆಯ ಗುಣ ತಿಳಿಯುವುದು ಬಣ್ಣದಿಂದ...

ಭಾರಿಗಾತ್ರದ ಈ ಶಕ್ತಿಶಾಲಿ ವಾಹನಕ್ಕೆ ಮರುಭೂಮಿಯಲ್ಲೂ ಚಲಿಸಬಲ್ಲ ಚಕ್ರವಿರುತ್ತದೆ. ವಾಹನದ ಕೆಳಭಾಗದಲ್ಲಿ ದಪ್ಪನೆಯ ಲೋಹದ ತಟ್ಟೆಯನ್ನು ಅಳವಡಿಸಿರುತ್ತಾರೆ. ಹೈಡ್ರಾಲಿಕ್ ಜ್ಯಾಕ್ ಮೂಲಕ ಭೂಮಿಯನ್ನು ಸ್ಪರ್ಶಿಸಿ ಕಂಪನ ಉಂಟುಮಾಡುವುದು ಇದರ ಕೆಲಸ. ಇಂಥ 8-10 ವಾಹನಗಳು ಒಂದು ಸ್ಥಳದಲ್ಲಿ ಒಟ್ಟಿಗೆ ನಿಂತು ಏಕಕಾಲದಲ್ಲಿ ಕಂಪನವನ್ನು ಉಂಟು ಮಾಡಿ ದಾಗ, ಭೂಮಿಯ ಒಡಲಲ್ಲಿರುವ ದ್ರವಸಾಗರದಲ್ಲಿ ಅಲೆ ಉಂಟಾಗುತ್ತದೆ. ಆ ಅಲೆಯ ಪ್ರಮಾಣ, ಗಾತ್ರಗಳು ಅದೇ ವಾಹನದಲ್ಲಿರುವ ಯಂತ್ರಗಳಲ್ಲಿ ದಾಖಲಾಗುತ್ತವೆ.

ನಮ್ಮ ದೇಹದ ಎಕ್ಸ್‌ರೇ, ಇಸಿಜಿಯನ್ನು ದಾಖಲು ಮಾಡಿದಂತೆಯೇ ಈ ಯಂತ್ರವು ಭೂಮಿಯ (ವಿಶೇಷವಾಗಿ ತೈಲ ಸರೋವರದ) ಎಕ್ಸ್‌ರೇ, ಇಸಿಜಿ ಇತ್ಯಾದಿಗಳನ್ನು ದಾಖಲಿಸುತ್ತದೆ. ಅದಕ್ಕನುಗುಣವಾಗಿ ಆ ಸ್ಥಳದಲ್ಲಿ ಎಷ್ಟು ತೈಲವಿದೆ? ಯಾವ ಗಾತ್ರದ ಬಾವಿ ಕೊರೆಯಬೇಕು? ಇತ್ಯಾದಿಗಳು ನಿರ್ಣಯಿಸಲ್ಪಡುತ್ತವೆ. ಮುಂದಿನ ಕಾರ್ಯ ‘ರಿಗ್’ನದ್ದು.

ತೈಲಜಗತ್ತಿನ ಪರಿಭಾಷೆಯಲ್ಲಿ ‘ರಿಗ್’ ಎಂದರೆ ತೈಲವನ್ನು ಭೂಮಿಯಿಂದ ಹೊರತೆಗೆಯಲು ಬಳಸುವ ಯಂತ್ರ ಮತ್ತು ಸಂಬಂಧಿತ ವ್ಯವಸ್ಥೆ. ಇದರ ಕಾರ್ಯವೈಖರಿಯು, ಕೊಳವೆಬಾವಿ (ಬೋರ್‌ವೆಲ್) ಕೊರೆಯುವ ಪ್ರಕ್ರಿಯೆಯಂತೆಯೇ ಇರುತ್ತದೆ, ಆದರೆ ಗಾತ್ರ ಮತ್ತು ಪ್ರಮಾಣದಲ್ಲಿ ಅದಕ್ಕಿಂತ ದೊಡ್ಡದು ಎನ್ನಬಹುದು. ತೈಲಬಾವಿ ಕೊರೆಯಲು ದೊಡ್ಡ ಗಾತ್ರದ, ತುದಿಯಲ್ಲಿ ವಜ್ರಾಕಾರವಿರುವ ‘ಡ್ರಿಲ್ ಬಿಟ್’ ಅಥವಾ ‘ಡ್ರಿಲ್ಲಿಂಗ್ ಶಾಫ್ಟ್’ ಬಳಸಲಾಗುತ್ತದೆ. ಬಾವಿಯ ವ್ಯಾಸಕ್ಕೆ ಬೇಕಾದ ವ್ಯಾಸ ಹೊಂದಿರುವ ಈ ಶಾಫ್ಟ್ ಸುಮಾರು 10 ಮೀ. ಉದ್ದವಿರುತ್ತದೆ. ಪ್ರತಿ ಗಂಟೆಗೆ ಸುಮಾರು 5 ಮೀ. ಆಳ ಕೊರೆಯುವ ಈ ಯಂತ್ರ ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತದೆ.

7 ಒಕ

ಕೊರೆಯುವಾಗ ಉಷ್ಣತೆ ಹೆಚ್ಚಾಗದಂತೆ ತಡೆಯಲು ಶಾಫ್ಟ್‌ʼನ ತುದಿಗೆ ನೀರು ಸಿಂಪಡಿಸಲಾಗುತ್ತದೆ. ಸುಲಭವಲ್ಲದ ಈ ಕ್ರಿಯೆಯಲ್ಲಿ ಹೊಮ್ಮುವ ಅಸಹನೀಯ ಶಬ್ದ ಮತ್ತು ವಾಸನೆಯು, ಆ ಕೆಲಸ ದಲ್ಲಿ ತೊಡಗಿದವರನ್ನು ಹೈರಾಣಾಗಿಸುತ್ತದೆ. ಜತೆಗೆ, ಭೂಮಿಯೊಳಗಿನ ವಿಷಾನಿಲ ಸೋರುವ ಭಯವಂತೂ ಇದ್ದದ್ದೇ. ಈ ಕಾರಣಕ್ಕಾಗಿಯೇ, ರಿಗ್‌ಗಳಲ್ಲಿ ಕೆಲಸ ಮಾಡುವವರಿಗೆ ತಿಂಗಳಿಗೋ ಒಂದೂವರೆ ತಿಂಗಳಿಗೋ ಒಮ್ಮೆ ಕಮ್ಮಿಯೆಂದರೂ 15 ದಿನಗಳ ರಜೆಯಿರುತ್ತದೆ.

ತೈಲಬಾವಿ ಕೊರೆಯಬೇಕಾದ ಸ್ಥಳವನ್ನು ‘ಸೆಲ್ಲಾರ್ ಏರಿಯಾ’ ಎನ್ನುತ್ತಾರೆ. ರಿಗ್‌ನ (ಪ್ಲಾಟ್ʼ ಫಾರ್ಮ್‌ನ) ನಾಲ್ಕೂ ಮೂಲೆಗಳು ಭೂಮಿಯ ಮೇಲೆ ಸಮನಾಗಿರುವುದು ಅವಶ್ಯವಾದ್ದರಿಂದ, ಆ ಸ್ಥಳದ ಸುತ್ತಲೂ ಸುಮಾರು 25ರಿಂದ 50 ಮೀ. ಸುತ್ತಳತೆಯಲ್ಲಿ, ರಿಗ್‌ನ ಸಾಮರ್ಥ್ಯಕ್ಕೆ ತಕ್ಕಂತೆ ಭೂಮಿಯನ್ನು ಸಮತಟ್ಟು ಮಾಡಲಾಗುತ್ತದೆ.

ಇಲ್ಲವಾದರೆ, ಭೂಮಿಯೊಳಗೆ ಕಿಲೋಮೀಟರ್‌ಗಟ್ಟಲೆ ಸಾಗುವ ಕೊರೆತವು ನೇರವಾಗಿರದೇ ಓರೆಕೋರೆಯಾಗಿ, ಬೇರೆ ಸ್ಥಳವನ್ನು ತಲುಪುವ ಸಾಧ್ಯತೆಯಿರುತ್ತದೆ. ಹೊಸ ತೈಲನಿಕ್ಷೇಪದ ಬಾವಿ ತೋಡಲು ಕಮ್ಮಿಯೆಂದರೂ 3-4 ವಾರ ಸಮಯ ಬೇಕಾಗುತ್ತದೆ. ಬಾವಿ ಕೊರೆದ ನಂತರ ಅದರೊ ಳಗೆ ಲೋಹದ ಕೊಳವೆಯನ್ನು ಇಳಿಸಲಾಗುತ್ತದೆ. ಈ ಕೊಳವೆಯ ಬುಡದಲ್ಲಿರುವ ರಂಧ್ರಗಳಿಂದ ತೈಲ ಮೇಲೆ ಬರುತ್ತದೆ. ಈ ಕೊಳವೆಯು ಭೂಮಿಯ ಮೇಲೆ ಬರುತ್ತಿದ್ದಂತೆ ಅದಕ್ಕೆ ‘ಕ್ರಿಸ್‌ಮಸ್ ಟ್ರೀ’ ವಿನ್ಯಾಸದ ಸಲಕರಣೆಯನ್ನು ಅಳವಡಿಸಲಾಗುತ್ತದೆ. ಇದು ತೈಲ ಪ್ರವಾಹದ ಗತಿ, ಒತ್ತಡಗಳನ್ನು ನಿಯಂತ್ರಿಸಲು ಇರುವ ಕವಾಟಗಳನ್ನು ಹೊಂದಿದ ಲೋಹದ ಬುರುಡೆ ಎಂಬುದು ನಿಮ್ಮ ಗಮನಕ್ಕೆ.

ಕೊಲ್ಲಿ ರಾಷ್ಟ್ರಗಳಲ್ಲಿ, ಅದರಲ್ಲೂ ಸೌದಿ ಅರೇಬಿಯಾದಲ್ಲಿ ತೈಲವು ನೈಸರ್ಗಿಕ ಒತ್ತಡದಿಂದಲೇ ಭೂಮಿಯ ಮೇಲ್ಭಾಗಕ್ಕೆ ಬರುತ್ತದೆ. ಹಾಗೆ ಬರುವ ತೈಲದ ಒತ್ತಡವನ್ನು ನಿಯಂತ್ರಿಸಿ, ತನ್ಮೂಲಕ ಕೊಳವೆಗಳು ಒಡೆವ ಅಪಾಯವನ್ನು ತಪ್ಪಿಸುವಲ್ಲಿ ‘ಕ್ರಿಸ್‌ಮಸ್ ಟ್ರೀ’ ವಿನ್ಯಾಸದ ಸಲಕರಣೆ ಮಹತ್ತರ ಪಾತ್ರ ವಹಿಸುತ್ತದೆ. ಸೌದಿ ಅರೇಬಿಯಾದಂಥ ದೇಶದಲ್ಲಿ ತೈಲ ಸರೋವರದ ಬುಡದಲ್ಲಿ ನೀರನ್ನು ಇಂಜೆಕ್ಟ್ ಮಾಡುತ್ತಾರೆ. ಇದು ತೈಲದ ಮಟ್ಟವು ಸ್ವಾಭಾವಿಕವಾಗಿ ಮೇಲೇರಲು ನೆರವಾಗುತ್ತದೆ.

ಜತೆಗೆ, ತೈಲ ತೆಗೆದ ಜಾಗವನ್ನು ಆವರಿಸಿಕೊಂಡು, ಅದು ನಿರ್ವಾತ ಪ್ರದೇಶವಾಗುವುದನ್ನೂ ಟೊಳ್ಳಾಗುವುದನ್ನೂ ತಪ್ಪಿಸುತ್ತದೆ. ಈ ಕಾರ್ಯಕ್ಕೆಂದು ಸಮುದ್ರದ ನೀರನ್ನು ಪೈಪ್‌ಲೈನ್ ಮೂಲಕ ನೂರಾರು ಕಿ.ಮೀ. ದೂರದವರೆಗೆ ಹರಿಸುವುದೂ ಇದೆ. ಕೆಲವು ದೇಶಗಳಲ್ಲಿ ನೀರಿನ ಬದಲು ಅಥವಾ ನೀರಿನೊಂದಿಗೆ ವಿವಿಧ ಅನಿಲಗಳು, ಆಮ್ಲಗಳು, ಉಗಿಯನ್ನು ಭೂಮಿಯೊಳಗೆ ಇಳಿಸುವುದೂ ಇದೆ. ನೈಸರ್ಗಿಕ ಒತ್ತಡವಿಲ್ಲದ ಸ್ಥಳಗಳಲ್ಲಿ ಕೊಳವೆಯ ಬುರುಡೆಗೆ ಪಂಪ್ ಅಳವಡಿಸಿ, (ಚುಚ್ಚುಮದ್ದಿನ ಸಿರಿಂಜ್ ಬಳಸಿ ರಕ್ತ ತೆಗೆಯುವಂತೆ) ತೈಲವನ್ನು ಭೂಮಿಯಿಂದ ಹೊರಸೆಳೆಯುತ್ತಾರೆ.

ಏತನೀರಾವರಿ ಸಜ್ಜಿಕೆಯಂತೆ ಕಾಣುವ, ತೈಲವನ್ನು ಮೇಲೆತ್ತುವ ಈ ರೇಚಕ ಯಂತ್ರಕ್ಕೆ ‘ಪಂಪಿಂಗ್ ಜ್ಯಾಕ್’ ಅಥವಾ Nodding Donkey (ತಲೆ ಅಲ್ಲಾಡಿಸುವ ಕತ್ತೆ) ಎಂದು ಹೆಸರು. ಇದು ದಿನವಿಡೀ ತಲೆ ಅಲ್ಲಾಡಿಸುವುದರಿಂದ ಈ ಹೆಸರು ಬಂದಿರಬಹುದಾ? ಗೊತ್ತಿಲ್ಲ, ಇರಲೂಬಹುದು! ಆದರೆ ಈ ‘ಕತ್ತೆ’ಯ ತಲೆಯು ಭೂಮಿಯೊಳ ಗಿನ ದಿವ್ಯದ್ರವವನ್ನೂ, ದ್ರವ್ಯವನ್ನೂ ಹೊರತರುವುದಂತೂ ಸತ್ಯ!

ಭೂಮಿಯ ಮೇಲೆ ಬಂದ ತೈಲವನ್ನು ಸಂಸ್ಕರಣಾ ಸ್ಥಾವರಕ್ಕೆ ಪೈಪ್‌ಲೈನ್ ಮೂಲಕ ಒಯ್ಯಲಾಗು ತ್ತದೆ. ಈ ಲೈನ್‌ಗಳ ತಪಾಸಣೆಗೆಂದು ಪಕ್ಕದಲ್ಲೇ ವಾಹನ ಸಂಚಾರಕ್ಕೆ ಕಚ್ಚಾರಸ್ತೆ ನಿರ್ಮಿಸಿರುತ್ತಾರೆ. ಅದು ಪೈಪ್‌ಲೈನ್‌ನ ಬಲಕ್ಕಿದ್ದರೂ ಎಡಕ್ಕಿದ್ದರೂ ಅದಕ್ಕೆ ‘ರೈಟ್ ಆಫ್ ವೇ’ ಎಂದೇ ಹೆಸರು. ಸಂಸ್ಕರಿಸದ ಕಚ್ಚಾತೈಲವು ಯಾವ ಕೆಲಸಕ್ಕೂ ಬಾರದ ದದ್ದೋಡಿ; ಅದರಲ್ಲಿ ಪೆಟ್ರೋಲ್, ಡೀಸೆಲ್‌ ನಂಥ ವಸ್ತುಗಳಿದ್ದರೂ ಅದನ್ನು ಹಾಗೆಯೇ ವಾಹನಗಳಲ್ಲಿ, ಯಂತ್ರಗಳಲ್ಲಿ ಬಳಸುವಂತಿಲ್ಲ.

ಅದರಲ್ಲಿ ನೀರಿನಂಶ ಸೇರಿದಂತೆ ಖನಿಜ, ಅಲ್ಪಪ್ರಮಾಣದ ಅನಿಲದ ಅಂಶಗಳೂ ಸೇರಿರುತ್ತವೆ. ಇವನ್ನೆಲ್ಲಾ ಬೇರ್ಪಡಿಸುವ ಸ್ಥಾವರದಲ್ಲಿ ದೊಡ್ಡ ಟ್ಯಾಂಕ್‌ಗಳಲ್ಲಿ ಅಳವಡಿಸಲಾಗಿರುತ್ತದೆ. ಕಚ್ಚಾತೈಲದ ಸಂಸ್ಕರಣೆ ನಡೆಯುವುದು ಈ ಟ್ಯಾಂಕ್‌ಗಳಲ್ಲಿಯೇ. ಕಚ್ಚಾತೈಲವೆಂದರೆ ಪ್ರಮುಖ ವಾಗಿ ಹೈಡ್ರೋಕಾರ್ಬನ್‌ನ ಮಿಶ್ರಣ. ಇದರಲ್ಲಿ ವಿವಿಧ ಪ್ರಮಾಣದಲ್ಲಿ ಇಂಗಾಲದ ಪರಮಾಣುಗಳು ಸೇರಿಕೊಂಡಿರುತ್ತವೆ. ಅವುಗಳ ತೂಕದಲ್ಲೂ ವ್ಯತ್ಯಾಸವಿರುತ್ತದೆ.

ಕಚ್ಚಾತೈಲದಿಂದ ಪೆಟ್ರೋಲ್ ತೆಗೆಯುವ ಕಾರ್ಯವೂ ಒಂದು ಸಾಹಸವೇ. ಪೈಪ್‌ಲೈನ್‌ನಿಂದ ಬರುವ ಕಚ್ಚಾತೈಲವನ್ನು ಸುಮಾರು 350 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದಲ್ಲಿ, ದೊಡ್ಡ ಲೋಹದ ಟ್ಯಾಂಕ್‌ನ ಕೆಳಭಾಗಕ್ಕೆ ತರಲಾಗುತ್ತದೆ. ಈ ಬಿಸಿತೈಲದ ಉಗಿ ಮೇಲೇಳುವಾಗ ಅದರಲ್ಲಿರುವ ಅಣು ಗಳನ್ನು ವಿಭಿನ್ನ ಸ್ತರದಲ್ಲಿ ಸೋಸಿ ತಣ್ಣಗೆ ಮಾಡುತ್ತಾರೆ. ಆಗ, ಭಾರವಾದ ಅಣುಗಳು ಕೆಳಸ್ತರದಲ್ಲಿ ಡಾಂಬರ್ ಆಗಿ ಉಳಿದುಕೊಳ್ಳುತ್ತವೆ. ‌

ಅಣುಗಳು ಎಲ್ಲಕ್ಕಿಂತ ಮೇಲಿನ ಸ್ಥಾಯಿ ತಲುಪಿದಾಗ, 20 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶಕ್ಕೆ ತಂದಾಗ ‘ಲಿಕ್ವಿಫೈಡ್ ಪೆಟ್ರೋಲಿಯಂ ಗ್ಯಾಸ್’ (ಅಡುಗೆ ಅನಿಲಕ್ಕೆ ಬಳಸುವ ಎಲ್‌ಪಿಜಿ) ಆಗಿ ಮಾರ್ಪಡುತ್ತದೆ. ಅದರ ಕೆಳಗೆ ಸ್ಥಾಯಿಯಾದ ಅಣುಗಳು ಪ್ರೊಪೇನ್ ಆಗಿ ಬೇರ್ಪಡುತ್ತವೆ. ಆದರೆ ಕೆಳಗಿನ ಮನೆಯ ಅಣುಗಳು 30ರಿಂದ 150 ಡಿಗ್ರಿಗೆ ಬಂದಾಗ, ನಳನಳಿಸುವ ‘ಪೆಟ್ರೋಲ್’ ಮತ್ತು ಅದರ ಕೆಳಗಿನ ಮನೆಯ ಅಣುಗಳು ‘ನಾಫ್ತಾ’ (ಪ್ಲಾಸ್ಟಿಕ್, ಕಾಸ್ಮೆಟಿಕ್ಸ್, ಔಷಧಗಳಲ್ಲಿ ಬಳಸಲಾಗುತ್ತದೆ), ಅದಕ್ಕೂ ಕೆಳಗಿನದ್ದು (ಸುಮಾರು 200 ಡಿಗ್ರಿ) ‘ಕೆರೋಸಿನ್’, ಅದಕ್ಕೂ ಕೆಳಗಿನದ್ದು ‘ಡೀಸೆಲ್’ ಆಗಿ ಬೇರ್ಪಡುತ್ತವೆ.

ಎಲ್ಲಕ್ಕಿಂತ ಕೆಳಗೆ ಉಳಿಯುವ ಅಣುಗಳು (ಸುಮಾರು 450 ಡಿಗ್ರಿ) ಹಡಗಿನ ಇಂಧನ, ಡಾಂಬರ್ ಆಗಿ ಉಳಿಯುತ್ತವೆ. ಸಾಮಾನ್ಯವಾಗಿ ಒಂದು ಬ್ಯಾರೆಲ್‌ನಲ್ಲಿರುವ 159 ಲೀ. ಕಚ್ಚಾತೈಲದಿಂದ 73 ಲೀ. ಪೆಟ್ರೋಲ್, 35 ಲೀ. ಡೀಸೆಲ್, 20 ಲೀ. ಜೆಟ್ ಫ್ಯೂಯೆಲ್, 6 ಲೀ. ಪ್ರೊಪೇನ್ ಅನ್ನು ಉತ್ಪಾದಿಸ ಲಾಗುತ್ತದೆ. ಉಳಿದವು ಸಲರ್, ಬ್ಯುಟೀನ್, ಆಕ್ರಿಲಿಕ್, ಪ್ಯಾರಾಕ್ಸಲೀನ್, ಪ್ಲಾಸ್ಟಿಕ್, ಕೀಟನಾಶಕಗಳು, ಡಾಂಬರ್ ಇತ್ಯಾದಿಗಳ ಉತ್ಪಾದನೆಗೆ ಬಳಕೆಯಾಗುತ್ತವೆ.

ವಿಶ್ವದ ಅತಿದೊಡ್ಡ ತೈಲನಿಕ್ಷೇಪ ಎಂಬ ಹೆಗ್ಗಳಿಕೆಗೆ ಪಾತ್ರವಾದದ್ದು ಅಮೆರಿಕದ ಟೆಕ್ಸಾಸ್ ಪ್ರದೇಶ. ಇಲ್ಲಿ ತೈಲನಿಕ್ಷೇಪವನ್ನು ಗುರುತಿಸಿದ್ದು 1890ರ ಮಧ್ಯಭಾಗದಲ್ಲಿ. ಆಗಿನಿಂದ ಇದುವರೆಗೆ ಈ ಪ್ರದೇಶ ದಿಂದ 60 ಬಿಲಿಯನ್ ಬ್ಯಾರೆಲ್‌ಗೂ ಹೆಚ್ಚಿನ ತೈಲವನ್ನು ಹೊರತೆಗೆದಿದ್ದು, ಇನ್ನೂ ಸಾಕಷ್ಟು ಪ್ರಮಾಣದ ತೈಲನಿಕ್ಷೇಪ ಅಲ್ಲಿ ಉಳಿದಿದೆಯಂತೆ. ಕೊಲ್ಲಿರಾಷ್ಟ್ರಗಳಲ್ಲಿ ಮೊಟ್ಟಮೊದಲ ತೈಲ ನಿಕ್ಷೇಪವನ್ನು ಗುರುತಿಸಿದ್ದು ದ್ವೀಪರಾಷ್ಟ್ರ ಬಹ್ರೈನ್‌ನಲ್ಲಿ, 1931ರಲ್ಲಿ. 7 ವರ್ಷದ ನಂತರ ಸೌದಿ ಅರೇಬಿಯಾದ ಮೊದಲ ತೈಲಬಾವಿ ಕಾರ್ಯಾರಂಭ ಮಾಡಿತು.

ಹಿಂದೆಲ್ಲಾ ಡಾಂಬರ್‌ಗಾಗಿ ಬಳಸುತ್ತಿದ್ದ ಕಚ್ಚಾತೈಲಕ್ಕೆ ಮೊದಲು ಬೇಡಿಕೆ ಬಂದಿದ್ದು ವಿಶ್ವಯುದ್ಧದ ಸಂದರ್ಭದಲ್ಲಿ. ಯುದ್ಧ ವಾಹನ/ವಿಮಾನಗಳು ಮತ್ತು ಯಂತ್ರಗಳಲ್ಲಿ ಬಹಳಷ್ಟು ಪೆಟ್ರೋಲ್ ಬಳಕೆಯಾಯಿತು. ನಂತರದ ದಿನಗಳಲ್ಲಿ ವಾಹನ ಸಂಚಾರ ಹೆಚ್ಚಾಗಿ ಇನ್ನಷ್ಟು ಬೇಡಿಕೆ ಬಂತು. ಪೆಟ್ರೋಲ್, ಡೀಸೆಲ್, ಪ್ಲಾಸ್ಟಿಕ್ ಮುಂತಾದ ಪೆಟ್ರೋಲಿಯಂ ಉತ್ಪನ್ನಗಳ ಬಳಕೆಯಿಂದಾಗಿ ಪರಿಸರ ಮತ್ತು ಹವಾಮಾನದ ಮೇಲೆ ಹೆಚ್ಚಿನ ದುಷ್ಪರಿಣಾಮವಾಗುತ್ತಿದೆ ಎಂಬುದಂತೂ ಸತ್ಯ. ಈ ಕಾರಣದಿಂದಲೇ ಇಂದು ವಿಶ್ವಾದ್ಯಂತ ಪರ್ಯಾಯ ವ್ಯವಸ್ಥೆಗೆ ಹುಡುಕಾಟ ನಡೆದಿದ್ದು, ಅದರ ಪರಿಣಾಮವಾಗಿ ಸೌರ ಇಂಧನ, ಜೈವಿಕ ಇಂಧನ ಮೊದಲಾದವು ಪೆಟ್ರೋಲಿಯಂ ಉತ್ಪನ್ನಗಳ ಸ್ಥಳವನ್ನು ಆಕ್ರಮಿಸುತ್ತಿವೆ. ಈ ಬದಲಾವಣೆ ಎಷ್ಟೇ ಕ್ಷಿಪ್ರಗತಿಯಲ್ಲಾದರೂ, ‘ಕೃಷ್ಣ ಸುಂದರಿ’ಯು ಯೌವನದಿಂದ ಮುಪ್ಪಿಗೆ ಜಾರಲು ಇನ್ನೂ 40 ವರ್ಷಗಳೇ ಬೇಕು.

ನೋಡಲು ಕಪ್ಪು, ಮುಟ್ಟಿದರೆ ಸ್ವಲ್ಪ ಅಂಟಂಟು, ಬಟ್ಟೆಗೆ ತಾಗಿದರೆ ಕಲೆ ಶಾಶ್ವತ, ಹತ್ತಿರ ಹೋದರೆ ಕೊಳೆತ ಕೋಳಿಮೊಟ್ಟೆಯಂಥ ವಾಸನೆ ಈ ಕಪ್ಪು ಸುಂದರಿಯದ್ದು! ಆದರೆ, ವಿಶ್ವಾದ್ಯಂತ ಪ್ರತಿನಿತ್ಯ ಸುಮಾರು 100 ಮಿಲಿಯನ್ ಬ್ಯಾರೆಲ್‌ನಷ್ಟು ಬಳಕೆಯಿಂದ ಬರುವ ಆದಾಯದ ಮುಂದೆ ಅದೆಲ್ಲಾ ಯಾವ ಲೆಕ್ಕ? ಕಪ್ಪು ಬಂಗಾರವೆಂದು ಕರೆಸಿಕೊಳ್ಳುವ ಕಚ್ಚಾತೈಲವೆಂದರೆ ರೊಕ್ಕವೋ ರೊಕ್ಕ!