ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಇದು ಅಧಿಕಾರದ ಅಮಲಷ್ಟೇ !

ಎರಡನೇ ಅವಧಿಗೆ ಅಧ್ಯಕ್ಷರಾದಾಗಿನಿಂದ ಅವರ ನಡವಳಿಕೆ ವಿಲಕ್ಷಣವಾಗತೊಡಗಿದೆ. ಅತ್ಯುತ್ತಮ ಬಾಂಧವ್ಯ ಹೊಂದಿದ್ದ ಭಾರತದ ಮೇಲೂ ಅವರು ಉರಿಗಣ್ಣು ಬೀರುತ್ತಿದ್ದಾರೆಂದರೆ, ಅಧಿಕಾರದ ಪಿತ್ತ ನೆತ್ತಿಗೇರಿದೆ ಅಂತಲೇ ಅರ್ಥ, ಅಲ್ಲವೇ? ತಾವು ಏನು ಮಾಡಿದರೂ ನಡೆಯುತ್ತದೆ ಮತ್ತು ನಡೆಯಬೇಕು ಎಂಬ ಅವರ ದರ್ಪವು ವಿಶ್ವದ ಅನೇಕ ರಾಷ್ಟ್ರಗಳಿಗೆ ಅಪಥ್ಯವಾಗಿರುವುದಂತೂ ಖರೆ.

ಇದು ಅಧಿಕಾರದ ಅಮಲಷ್ಟೇ !

-

Ashok Nayak Ashok Nayak Aug 30, 2025 10:07 AM

ಪ್ರತಿಸ್ಪಂದನ

ಶಂಕರನಾರಾಯಣ ಭಟ್

ಮಿತಿ ತಪ್ಪಿದರೆ ಗತಿಗೇಡು’ ಎಂಬ ಮಾತು ಟ್ರಂಪ್‌ರಿಗೆ ಹೊಂದುತ್ತದೆ. ಅಧಿಕಾರ ಬಂದಾಗ ಕುರುಡರಾದರೆ ಏನಾದೀತು ಎಂಬುದಕ್ಕೂ ಅವರೇ ಉದಾಹರಣೆ.

‘ಇದು ನಿಜನಾಯಕನ ತಾಕತ್ತು’ ಶೀರ್ಷಿಕೆಯ ಸಂಪಾದಕೀಯವು (ಆ.29) ಬದುಕಿನ ಸಾರಾಂಶವನ್ನು ಸಂಕ್ಷಿಪ್ತವಾಗಿ ವಿವರಿಸಿದಂತಿದೆ. “ಏರುವನು ರವಿ ಏರುವನು, ಬಾನೊಳು ಸಣ್ಣಗೆ ತೋರುವನು; ಏರಿದವನು ಚಿಕ್ಕವನಿರಬೇಕಲೆ ಎಂಬ ಮಾತನು ಸಾರುವನು" ಎಂಬ ಕವಿವಾಣಿಯು ನಮ್ಮ ಬದು ಕಿಗೆ ಮೇಲ್ಪಂಕ್ತಿಯಾಗಬೇಕು.

ಯಾರೇ ಆಗಲಿ, ಉನ್ನತ ಸ್ಥಾನದಲ್ಲಿದ್ದಾಗಲೂ ‘ನನಗಿಂತ ಕಿರಿಯರಿಲ್ಲ’ ಎಂಬ ಭಾವನೆಯನ್ನು ಹೊಂದಿದ್ದರೆ ಅದಕ್ಕಿಂತ ಶ್ರೇಯ ಮತ್ತೊಂದಿಲ್ಲ. ಅಷ್ಟೇ ಅಲ್ಲ, ಬೆಳಕಿನ ಮೂಲವನ್ನು ಹೊಂದಿದಾ ತನು ಕತ್ತಲೆಯನ್ನು ಹೋಗಲಾಡಿಸಲು ಯತ್ನಿಸಬೇಕೇ ಹೊರತು, ಇನ್ನೂ ಕತ್ತಲೆ ಯಾಗಿಸುವುದಲ್ಲ. ‘ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ’ ಎಂಬ ಮಾತೂ ಇಲ್ಲಿ ನೆನಪಿಗೆ ಬರುತ್ತಿದೆ.

ಇವೆಲ್ಲವೂ ‘ದೊಡ್ಡಣ್ಣ’ ಎಂಬ ಹಣೆಪಟ್ಟಿ ಹೊತ್ತಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಅನ್ವಯ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಮಹತ್ವಾಕಾಂಕ್ಷೆ ತಪ್ಪಲ್ಲ, ಆದರೆ ಅತಿ ಮಹತ್ವಾಕಾಂಕ್ಷೆಯು ಒಳಿತಿಗಿಂತ ಕೆಡುಕನ್ನೇ ಹೆಚ್ಚು ಮಾಡುತ್ತದೆ. ‘ಮಿತಿ ತಪ್ಪಿದರೆ ಗತಿಗೇಡು’ ಎಂಬ ಮಾತೂ ಟ್ರಂಪ್ ಅವರಿಗೆ ಹೊಂದುವಂಥದ್ದೇ. ಅಧಿಕಾರ ಬಂದಾಗ ಯಾರಾದರೂ ಕುರುಡ ರಾದರೆ ಏನಾದೀತು ಎಂಬುದಕ್ಕೂ ಟ್ರಂಪ್ ಅವರೇ ಉದಾಹರಣೆ.

ಇದನ್ನೂ ಓದಿ: Vishweshwar Bhat Column: ಭೈರಪ್ಪನವರ ಸ್ನೇಹಿತರು

ಎರಡನೇ ಅವಧಿಗೆ ಅಧ್ಯಕ್ಷರಾದಾಗಿನಿಂದ ಅವರ ನಡವಳಿಕೆ ವಿಲಕ್ಷಣವಾಗತೊಡಗಿದೆ. ಅತ್ಯುತ್ತಮ ಬಾಂಧವ್ಯ ಹೊಂದಿದ್ದ ಭಾರತದ ಮೇಲೂ ಅವರು ಉರಿಗಣ್ಣು ಬೀರುತ್ತಿದ್ದಾರೆಂದರೆ, ಅಧಿಕಾರದ ಪಿತ್ತ ನೆತ್ತಿಗೇರಿದೆ ಅಂತಲೇ ಅರ್ಥ, ಅಲ್ಲವೇ? ತಾವು ಏನು ಮಾಡಿದರೂ ನಡೆಯುತ್ತದೆ ಮತ್ತು ನಡೆಯಬೇಕು ಎಂಬ ಅವರ ದರ್ಪವು ವಿಶ್ವದ ಅನೇಕ ರಾಷ್ಟ್ರಗಳಿಗೆ ಅಪಥ್ಯವಾಗಿರುವುದಂತೂ ಖರೆ.

ಭಾರತ ಮತ್ತು ಚೀನಾದಿಂದ ಅಮೆರಿಕಕ್ಕೆ ಆಮದಾಗುವ ವಸ್ತುಗಳ ಮೇಲೆ ವಿಪರೀತ ಸುಂಕ ವಿಧಿಸಿ, ಅವು ಅತಿ ದುಬಾರಿಯಾಗುವಂತೆ ಮಾಡಿ, ಉಭಯ ದೇಶಗಳ ಆರ್ಥಿಕತೆಯನ್ನೇ ಕುಗ್ಗಿಸುವ ಹುನ್ನಾರ ವಿಟ್ಟುಕೊಂಡಿದ್ದರು ಟ್ರಂಪ್. ಇದಕ್ಕೆ ಪ್ರತಿಯಾಗಿ ‘ಶತ್ರುವಿನ ಶತ್ರು, ಮಿತ್ರ’ ಎಂಬ ಮಾತಿನಂತೆ ಭಾರತ ಮತ್ತು ಚೀನಾ ಒಂದಾಗುತ್ತಿರುವುದು ಅಮೆರಿಕಕ್ಕೆ ಕಸಿವಿಸಿ ಉಂಟು ಮಾಡಿದೆ.

ಈ ಹಿಂದೆ, ಹೆಸರಿಗಷ್ಟೇ ‘ಹಿಂದಿ-ಚೀನಿ ಭಾಯಿ ಭಾಯಿ’ ಎಂದಿದ್ದು ಇಂದು ವಾಸ್ತವವಾಗುತ್ತಿದೆ. ಭಾರತವಿಂದು ಅಮೆರಿಕದ ಜತೆಗಿನ ತನ್ನ ಬಾಂಧವ್ಯವನ್ನೇ ಸಡಿಲಿಸುವ ಅಥವಾ ಕಡಿತಗೊಳಿಸುವ ಯತ್ನದಲ್ಲಿದೆ ಎಂಬುದು ಸ್ಪಷ್ಟವಾಗುತ್ತಿದೆ. ಇಲ್ಲವೆಂದರೆ, ಹಿಂದೊಮ್ಮೆ ಮೋದಿಯವರಿಗೆ ಅಮೆರಿಕ ದ ವೀಸಾವನ್ನು ತಿರಸ್ಕರಿಸಿದವರು, ಇಂದು ‘ಮಾತುಕತೆ’ಯ ಹೆಸರಲ್ಲಿ ನಾಲ್ಕು ಬಾರಿ ದೂರವಾಣಿ ಸಂಪರ್ಕಕ್ಕೆ ಯತ್ನಿಸಿದಾಗಲೂ ಮೋದಿ ‘ನಾಟ್ ರೀಚಬಲ್’ ಆಗಿರುತ್ತಿದ್ದರೇ? ಇದರ ಹಿಂದಿನ ಉದ್ದೇಶವನ್ನು ವಿವರಿಸಬೇಕಿಲ್ಲ.

ಇದು ‘ನಿಮ್ಮ ಕಾಲ ಮುಗಿದಿದೆ, ಈಗೇನಿದ್ದರೂ ನಮ್ಮ ಕಾಲ’ ಎಂಬುದನ್ನು ಟ್ರಂಪ್ ಅವರಿಗೆ ಮನದಟ್ಟು ಮಾಡಿಕೊಡುವ ಒಂದು ವಿಧ ಎಂದರೆ ತಪ್ಪೇ? ಹೇಗಾದರೂ ಮಾಡಿ ಭಾರತವನ್ನು ತಮ್ಮ ಬಿಗಿ ಮುಷ್ಟಿಯಲ್ಲಿ ಹಿಡಿದಿಟ್ಟುಕೊಳ್ಳಬೇಕೆಂಬ ಟ್ರಂಪ್ ಅವರ ಯತ್ನಗಳೆಲ್ಲವೂ ನೀರಿನಲ್ಲಿ ಹೋಮ ಮಾಡಿದಂತಾಗುತ್ತಿವೆ. ಅವರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತನ್ನೂ ಕೊಡದೆ, ನಮ್ಮ ವಿದೇಶಾಂಗ ನೀತಿಯನ್ನು ಕಡ್ಡಿ ಮುರಿದ ಹಾಗೆ ಒಂದೇ ವಾಕ್ಯದಲ್ಲಿ ಹೇಳುತ್ತಿದ್ದಾರೆ ನಮ್ಮ ವಿದೇಶಾಂಗ ಸಚಿವ ಎಸ್.ಜೈಶಂಕರ್; ತಮ್ಮ ನೆಲದಲ್ಲೇ ನಿಂತು, ತಮ್ಮನ್ನೇ ಟೀಕಿಸುವ ಮಟ್ಟಕ್ಕೆ ಪರಿಸ್ಥಿತಿ ಒದಗಿರುವುದನ್ನು ಕಂಡು ಟ್ರಂಪ್ ತತ್ತರಿಸುತ್ತಿದ್ದಾರೆ!

ಹೀಗೆ ಒಂದೆಡೆ, ‘ನಾಯಕ ಎನಿಸಿಕೊಂಡಾತ ಹೇಗಿರಬಾರದು’ ಎಂಬುದಕ್ಕೆ ಟ್ರಂಪ್ ಸಾಕ್ಷಿಯಾಗಿದ್ದರೆ, ‘ನಾಯಕನೊಬ್ಬ ಹೇಗಿರಬೇಕು’ ಎಂಬುದಕ್ಕೆ ಮೋದಿ ಉದಾಹರಣೆಯಾಗಿ ನಿಲ್ಲುತ್ತಿದ್ದಾರೆ. ಒಬ್ಬ ನಿಜನಾಯಕನ ತಾಕತ್ತು ಅರ್ಥವಾಗುವುದು ದೇಶವು ಸಂಕಷ್ಟದಲ್ಲಿದ್ದಾಗಲೇ. ಒಂದೆಡೆ ನೆರೆರಾಷ್ಟ್ರ ಗಳ ಕಿರಿಕಿರಿ, ಇನ್ನೊಂದೆಡೆ ಪ್ರಬಲ ರಾಷ್ಟ್ರಗಳ ಮೇಲಾಟ, ಇವುಗಳ ನಡುವೆ ತನ್ನತನವನ್ನು ಕಾಪಾಡಿಕೊಂಡು, ಉಳಿದವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯಬೇಕಾಗಿ ಬರುವುದು ನಿಜನಾಯಕನಿಗೆ ಒದಗುವ ಸತ್ವಪರೀಕ್ಷೆಯೇ ಸರಿ.

ಪ್ರಸ್ತುತ, ಮೋದಿ ಮತ್ತು ಅವರ ತಂಡಕ್ಕೆ ಇದೇ ಒದಗಿರುವಂಥದ್ದು. ಜತೆಗೆ, ಹೊರಗಿನ ವೈರಿಗಳು ಸಾಲದೆಂಬಂತೆ, ದೇಶದೊಳಗಿನ ವೈರಿಗಳ ಉಪಟಳವೂ ಅವರಿಗೆ ಹೆಚ್ಚಾಗುತ್ತಿದೆ.

ಇಷ್ಟಾಗಿಯೂ, ಇಲ್ಲಿಯ ತನಕ ಎಲ್ಲವೂ ಸುಸೂತ್ರವಾಗಿಯೇ ಸಾಗುತ್ತಿದೆ. ಯಾರು ಎಷ್ಟೇ ಕಸರತ್ತು ಮಾಡಿದರೂ, ಮೋದಿಯವರ ನಾಯಕತ್ವಕ್ಕೆ ಮಸಿ ಬಳಿಯುವ ಅವರ ತಂತ್ರ ಸಫಲವಾಗಿಲ್ಲ, ಆಗುವುದೂ ಇಲ್ಲ! ಸ್ವಹಿತಾಸಕ್ತಿಯೇ ಇಲ್ಲದೆ ದೇಶಕ್ಕಾಗಿ, ದೇಶದ ಜನರಿಗಾಗಿ ಹಗಲಿರುಳೂ ಶ್ರಮಿಸು ತ್ತಿರುವವರಿಗೆ ಎಲ್ಲಿಂದ ಬಂದೀತು ಕುತ್ತು?! ಇಂಥ ನಾಯಕನನ್ನು ಪಡೆದ ಭಾರತೀಯರು ನಿಜಕ್ಕೂ ಧನ್ಯರು...

(ಲೇಖಕರು ಹವ್ಯಾಸಿ ಬರಹಗಾರರು)