ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Raghavendra E Horabailu Column: ಬೀದಿನಾಯಿ ಹಾವಳಿ: ಬೇಕಿದೆ ತಿಳಿವಳಿಕೆ

ಬೀದಿನಾಯಿಗಳ ಆಕ್ರಮಣದ ಸಾವಿರಾರು ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಲಭ್ಯವಿದ್ದು, ಇವಲ್ಲಿ ಒಂದೊಂದನ್ನು ನೋಡಿದಾಗಲೂ ಎದೆ ಝಲ್ ಎನಿಸದಿರದು. ಮುಂಜಾವಿನಲ್ಲಿ ಮತ್ತು ತಡರಾತ್ರಿಯಲ್ಲಿ ಓಡಾಡಲೇಬೇಕಿರುವ ವಿದ್ಯಾರ್ಥಿಗಳು, ದುಡಿಯುವ ವರ್ಗದವರು, ಕಾರು/ಬೈಕು ಗಳಿಲ್ಲದೆ ನಡೆದೇ ಸಾಗುವವರು ಬೀದಿ ನಾಯಿಗಳ ಕಡಿತಕ್ಕೆ ಒಳಗಾಗುತ್ತಿದ್ದಾರೆ.

ಬೀದಿನಾಯಿ ಹಾವಳಿ: ಬೇಕಿದೆ ತಿಳಿವಳಿಕೆ

-

Ashok Nayak Ashok Nayak Aug 30, 2025 7:43 AM

ನಾಯಿನೆರಳು

ರಾಘವೇಂದ್ರ ಈ ಹೊರಬೈಲು

ನಾಯಿಕಡಿತಕ್ಕೆ ಸಂಬಂಧಿಸಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿರುವ ಅಂಕಿ-ಅಂಶಗಳು ಭಯ ಹುಟ್ಟಿಸುವಂತಿವೆ. ರಾಜ್ಯದಲ್ಲಿ ಈ ವರ್ಷದ ಮೊದಲ 8 ತಿಂಗಳಲ್ಲೇ, 3 ಲಕ್ಷಕ್ಕೂ ಅಧಿಕ ಜನರಿಗೆ ನಾಯಿಗಳು ಕಚ್ಚಿವೆ. ಈ ಪೈಕಿ ಶೇ.96ರಷ್ಟು ಪಾಲು ಬೀದಿನಾಯಿಗಳ ಕಡಿತವಾಗಿವೆ ಎಂಬುದು ಗಮನಾರ್ಹ.

ದಾವಣಗೆರೆಯ ಶಾಸಿ ಲೇ ಔಟಿನ, ಪ್ರಪಂಚವನ್ನು ಚೂರೂ ಅರಿಯದ ನಾಲ್ಕು ವರ್ಷದ ಪುಟ್ಟ ಕಂದ ಖಾದಿರಾ ಬಾನು. ಇದೇ ವರ್ಷದ ಏಪ್ರಿಲ್ 27ನೇ ತಾರೀಖು ಮನೆಯ ಹೊರಗೆ ಆಟವಾಡುತ್ತಾ ಕುಳಿತಿದ್ದಳು. ಏಕಾಏಕಿ ನಾಲ್ಕೈದು ನಾಯಿಗಳು ಆಕೆಯ ಮೇಲೆ ದಾಳಿ ಮಾಡಿ ಮುಖ-ಮೈಯನ್ನೆ ಕಚ್ಚಿ ಗಂಭೀರವಾಗಿ ಗಾಯಗೊಳಿಸಿದವು.

ಆಸ್ಪತ್ರೆಗೆ ದಾಖಲಿಸಿ ಎಷ್ಟೆಲ್ಲ ಪ್ರಯತ್ನಿಸಿದರೂ ರೇಬಿಸ್ ಹರಡಿ, ಆ ಪುಟ್ಟ ಮಗು ನರಳಿ ನರಳಿ, ಪ್ರಪಂಚವನ್ನು ಸರಿಯಾಗಿ ನೋಡುವುದರೊಳಗೆ ಅಸು ನೀಗಿತು. ಈ ಸುದ್ದಿ ಕೇಳಿದರೆ ಎಂಥವರ ಮನಸ್ಸೂ ಕರಗದೇ ಇರಲಾರದು.

ಬೀದಿನಾಯಿ ದಾಳಿಗೆ ಸಿಲುಕಿ ಸಂಕಷ್ಟಕ್ಕೆ ಈಡಾಗುವವರ ಸಂಖ್ಯೆ ದಿನಗಳೆದಂತೆ ಹೆಚ್ಚುತ್ತಿದೆ ಎಂಬುದಕ್ಕೆ ಇಲ್ಲೊಂದಿಷ್ಟು ಉದಾಹರಣೆಗಳಿವೆ. ಇವೆಲ್ಲವೂ ವಿಭಿನ್ನ ಪತ್ರಿಕೆಗಳಲ್ಲಿ ಹಾಗೂ ವಾಹಿನಿಗಳಲ್ಲಿ ಪ್ರಕಟವಾದ/ಬಿತ್ತರವಾದ ಸುದ್ದಿಗಳು ಎಂಬುದು ನಿಮ್ಮ ಗಮನಕ್ಕೆ. ಇದೇ ಆಗಸ್ಟ್ ತಿಂಗಳ 23ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಪಟ್ಟಣದಲ್ಲಿ ಮನೆಯ ಸಮೀಪದ ಅಂಗಡಿಗೆ ನಡೆದುಕೊಂಡು ಹೋಗುತ್ತಿದ್ದ 5 ವರ್ಷದ ಹುಡುಗಿಯ ಮೇಲೆ ಬೀದಿನಾಯಿಗಳು ದಾಳಿ ನಡೆಸಿ, ಕಚ್ಚಿ ಗಾಯಗೊಳಿಸಿದವು.

raghavenda Col 3008

ಆಗಸ್ಟ್ ೧೬ರಂದು, ಕೊಪ್ಪಳ ಜಿಲ್ಲೆಯ ತಳಕಲ್ ಹಾಗೂ ತಳಬಾಳ ಗ್ರಾಮಗಳಲ್ಲಿ ಬೀದಿನಾಯಿ ದಾಳಿಗೆ ೩೦ಕ್ಕೂ ಹೆಚ್ಚು ಜನ ಗಾಯಗೊಂಡರು. ಮನೆಯ ಮುಂದೆ ಆಡಿಕೊಳ್ಳುತ್ತಿದ್ದ 8 ವರ್ಷದ ಮಗುವಿನ ಮೇಲೆ ನಾಯಿ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿತು. ಜುಲೈ 30ರಂದು ಬೆಂಗಳೂರಿನ ಕೊಡಿಗೇಹಳ್ಳಿ ಬಳಿ ವಯೋವೃದ್ಧರೊಬ್ಬರು ಬೀದಿನಾಯಿ ಕಡಿತಕ್ಕೆ ಬಲಿಯಾಗಿ ಅಸು ನೀಗಿದರು.

ಜುಲೈ 24ರಂದು ಚಿಕ್ಕಮಗಳೂರಿನ ಎಂ.ಜಿ.ರಸ್ತೆ ಮತ್ತು ಮಾರ್ಕೆಟ್ ರಸ್ತೆಯಲ್ಲಿ 20ಕ್ಕೂ ಹೆಚ್ಚು ಜನರ ಮೇಲೆ ಬೀದಿನಾಯಿಗಳು ದಾಳಿ ಮಾಡಿ ಗಾಯ ಗೊಳಿಸಿದವು. ಇವೆಲ್ಲಾ ಕೆಲವೇ ಉದಾಹರಣೆ ಗಳಷ್ಟೇ. ಇಂಥ ಗಣನೀಯ ಸಂಖ್ಯೆಯ ಘಟನೆಗಳು ಪ್ರತಿದಿನ ನಡೆಯುತ್ತಿವೆ. ಆದರೆ ಈ ಪೈಕಿ ಶೇ.10-15ರಷ್ಟು ಮಾತ್ರವೇ ಹೀಗೆ ವರದಿಯಾಗುತ್ತವೆ, ಅಷ್ಟೇ.

ಬೀದಿನಾಯಿಗಳ ಆಕ್ರಮಣದ ಸಾವಿರಾರು ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಲಭ್ಯ ವಿದ್ದು, ಇವಲ್ಲಿ ಒಂದೊಂದನ್ನು ನೋಡಿದಾಗಲೂ ಎದೆ ಝಲ್ ಎನಿಸದಿರದು. ಮುಂಜಾವಿ ನಲ್ಲಿ ಮತ್ತು ತಡರಾತ್ರಿಯಲ್ಲಿ ಓಡಾಡಲೇಬೇಕಿರುವ ವಿದ್ಯಾರ್ಥಿಗಳು, ದುಡಿಯುವ ವರ್ಗದವರು, ಕಾರು/ಬೈಕುಗಳಿಲ್ಲದೆ ನಡೆದೇ ಸಾಗುವವರು ಬೀದಿ ನಾಯಿಗಳ ಕಡಿತಕ್ಕೆ ಒಳಗಾಗುತ್ತಿದ್ದಾರೆ.

ಇದನ್ನೂ ಓದಿ: Stray Dogs: ತನ್ನ ಪಾಡಿಗೆ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯ ಮೇಲೆ ಬೀದಿನಾಯಿಗಳ ದಾಳಿ; ಮುಂದೇನಾಯ್ತು?

ಈ ಪೈಕಿ ಮಕ್ಕಳು, ವೃದ್ಧರು ಮತ್ತು ಮಹಿಳೆಯರ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿದೆ. ದ್ವಿಚಕ್ರ ವಾಹನ ಸವಾರರಿಗಂತೂ ಬೀದಿ ನಾಯಿಗಳು ಸಾಕ್ಷಾತ್ ಯಮಸ್ವರೂಪಿಗಳೇ ಆಗಿವೆ (ನಾನೂ ಪ್ರತಿದಿನ ದ್ವಿಚಕ್ರ ವಾಹನದಲ್ಲೇ ಓಡಾಡುವುದರಿಂದ, ಈ ಅನುಭವ ನನಗೆ ಚೆನ್ನಾಗಿ ಆಗಿದೆ!). ಇಂಥ ಎಷ್ಟೋ ಮಂದಿ, ತಮ್ಮನ್ನು ಬೆನ್ನತ್ತುವ ಬೀದಿನಾಯಿಗಳಿಂದ ತಪ್ಪಿಸಿಕೊಳ್ಳಲು ಹೋಗಿ ಕೆಳಗೆ ಬಿದ್ದು ಗಾಯಗೊಂಡಿರುವ ಅಥವಾ ಆ ಧಾವಂತದಲ್ಲಿ ಎದುರಿನಿಂದ ಅಥವಾ ಹಿಂಭಾಗದಿಂದ ಬರುವ ವಾಹನಗಳಿಗೆ ಅಪ್ಪಳಿಸಿ ಪ್ರಾಣ ಕಳೆದುಕೊಂಡಿರುವ ನಿದರ್ಶನಗಳು ಸಾಕಷ್ಟಿವೆ.

ನಾಯಿಕಡಿತಕ್ಕೆ ಸಂಬಂಧಿಸಿದಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ನೀಡಿರುವ ಅಂಕಿ-ಅಂಶಗಳು ಭಯ ಹುಟ್ಟಿಸುವಂತಿವೆ. ರಾಜ್ಯದಲ್ಲಿ ಈ ವರ್ಷದ ಮೊದಲ 8 ತಿಂಗಳಲ್ಲೇ, ಮೂರು ಲಕ್ಷಕ್ಕೂ ಅಧಿಕ ಜನರಿಗೆ ನಾಯಿಗಳು ಕಚ್ಚಿವೆ (ಈ ಪೈಕಿ ಶೇ.96ರಷ್ಟು ಪಾಲು ಬೀದಿ ನಾಯಿಗಳ ಕಡಿತವಾಗಿವೆ ಎಂಬುದು ಗಮನಾರ್ಹ). ಇದು ಪರಿಸ್ಥಿತಿಯ ಗಂಭೀರತೆಯನ್ನು ಸೂಚಿಸುತ್ತದೆ.

ರಾಷ್ಟ್ರ ರಾಜಧಾನಿ ದೆಹಲಿ ಪ್ರದೇಶದಲ್ಲೂ ಸುಮಾರು 10 ಲಕ್ಷದಷ್ಟು ಬೀದಿನಾಯಿಗಳಿವೆ ಎಂದು ಅಂದಾಜಿಸಲಾಗಿದ್ದು, ಅಲ್ಲಿಯೂ ಪ್ರತಿದಿನ ಬೀದಿನಾಯಿಗಳ ನೂರಾರು ಆಕ್ರಮಣಗಳಾಗುತ್ತಿವೆ. ಇದನ್ನು ಗಮನಿಸಿಯೇ, ಬೀದಿನಾಯಿಗಳ ಹಾವಳಿಯ ತಡೆಗೆ ಸುಪ್ರೀಂ ಕೋರ್ಟ್ ಆದೇಶಿಸಿದ್ದು.

ಕಾರಿನಿಂದ ಕಾಲನ್ನು ಕೆಳಗಿಳಿಸದೆಯೇ ರಸ್ತೆಯಲ್ಲಿ ಸಾಗುವಂಥವರ ಪೈಕಿ ಒಂದಷ್ಟು ಮಂದಿ ಸುಪ್ರೀಂ ಕೋರ್ಟ್‌ನ ಈ ಆದೇಶದ ವಿರುದ್ಧ ಹಾಗೂ ಬೀದಿನಾಯಿಗಳ ಪರವಾಗಿ ಮಾತನಾಡು ತ್ತಿದ್ದಾರೆ. ಆದರೆ ಪ್ರತಿದಿನ ಕಾಲ್ನಡಿಗೆಯಲ್ಲೋ, ದ್ವಿಚಕ್ರ ವಾಹನಗಳಲ್ಲೋ ಸಂಚರಿಸಬೇಕಾದವರು ಬೀದಿ ನಾಯಿಗಳ ಪರವಾಗಿ ಖಂಡಿತ ನಿಲ್ಲಲಾರರು, ಏಕೆಂದರೆ ಅವರೆಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ಅವುಗಳ ಉಪಟಳವನ್ನು ಅನುಭವಿಸಿದವರೇ.

ಬೀದಿನಾಯಿಗಳ ಪರವಾಗಿ ಮಾತನಾಡುವವರು, ಶ್ವಾನಪ್ರಿಯರು, ಸೆಲೆಬ್ರಿಟಿಗಳು ಒಂದು ಪುಟ್ಟ ಕೆಲಸವನ್ನು ಮಾಡಬಹುದು. ಅದೆಂದರೆ- ತಮಗೆ ಸಾಧ್ಯವಾದಷ್ಟು ಬೀದಿನಾಯಿಗಳನ್ನು ದತ್ತು ತೆಗೆದುಕೊಂಡು, ಬೀದಿಗೆ ಬರದಂತೆ ಅವನ್ನು ತಮ್ಮದೇ ಆಶ್ರಯತಾಣಗಳಲ್ಲಿ ಇಟ್ಟುಕೊಂಡು ಪೋಷಿಸಬಹುದು.

ಇನ್ನು, ಸ್ಥಳೀಯ ಆಡಳಿತ ವ್ಯವಸ್ಥೆಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಿದರೆ, ಈ ಸಮಸ್ಯೆಯಲ್ಲಿ ಅರ್ಧಭಾಗವು ಪರಿಹಾರವಾಗುತ್ತದೆ. ಕಾಲಕಾಲಕ್ಕೆ ಬೀದಿನಾಯಿಗಳ ಸಂತಾನ ಶಕ್ತಿಹರಣ ಚಿಕಿತ್ಸೆ ಮಾಡಿದರೆ ಅವುಗಳ ಸಂತತಿ ಕಡಿಮೆಯಾಗುತ್ತದೆ. ಆಹಾರ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಬಿಸಾಡ ದಂತೆ ನಾಗರಿಕರಲ್ಲಿ ಎಚ್ಚರಿಕೆ ಮೂಡಿಸಿ, ಸರಿಯಾಗಿ ವಿಲೇವಾರಿ ಮಾಡಿದರೂ ಬೀದಿನಾಯಿ ಹಾವಳಿ ತಗ್ಗುತ್ತದೆ.

ಎಲ್ಲಾ ಜೀವಿಗಳಂತೆ ಬೀದಿನಾಯಿಗಳಿಗೂ ಬದುಕುವ ಹಕ್ಕಿದೆ, ಅವನ್ನು ಬದುಕಲು ಬಿಡೋಣ. ಆದರೆ ಅವುಗಳಿಂದ ಮನುಷ್ಯರ ಮೇಲಾಗುವ ದಾಳಿಯನ್ನೂ ತಡೆಯಬೇಕಾದ ಅನಿವಾರ್ಯತೆ ಇದೆ. ಈ ಸೂಕ್ಷ್ಮವನ್ನು ಎಲ್ಲರೂ ಅರಿಯಬೇಕಾದ್ದು ಮುಖ್ಯ. ಶ್ವಾನಪ್ರಿಯನಾದ ನಾನು ಕೂಡ ಒಂದೆರಡು ಬೀದಿನಾಯಿಗಳನ್ನು ಮನೆಗೆ ತಂದು ಸಾಕಿದ್ದೇನೆ.

ಆದರೆ ಅವುಗಳ ಸಂಖ್ಯೆ ಅಧಿಕವಾದರೆ ಒದಗಬಹುದಾದ ಉಪಟಳವನ್ನೂ ಕಣ್ಣಾರೆ ಕಂಡಿದ್ದೇನೆ. ಹಾಗಾಗಿ ಬೀದಿನಾಯಿಗಳ ಹಾವಳಿ ತಗ್ಗಿಸಲು ಎಲ್ಲರೂ ಶ್ರಮಿಸೋಣ. ನಾಯಿ ಕಡಿತವು ನಮ್ಮ ರಾಜ್ಯದಲ್ಲಿ ಕಾಣಬರುವ ಎಷ್ಟೋ ಕಾಯಿಲೆಗಳು/ಸಾಂಕ್ರಾಮಿಕ ರೋಗಗಳಿಗಿಂತ ಅಧಿಕ ಪ್ರಮಾಣ ದಲ್ಲಿ ಜನರನ್ನು ಬಾಧಿಸುತ್ತಿರುವ ದುರವಸ್ಥೆಯು ನಮ್ಮ ಕಂಗಳನ್ನು ತೆರೆಸಬೇಕಿದೆ.

ಜತೆಗೆ, ರೇಬಿಸ್ ಕಾಯಿಲೆಯಿಂದಾಗುವ ಮರಣ ಪ್ರಮಾಣವೂ ಹೆಚ್ಚುತ್ತಿದೆ ಎಂಬುದನ್ನೂ ಮರೆಯ ದಿರೋಣ. ರೇಬಿಸ್ ರೋಗಕ್ಕೆ ತುತ್ತಾಗಿ, ನರಳಾಡಿ ಪ್ರಾಣಬಿಟ್ಟ ರಾಷ್ಟ್ರಮಟ್ಟದ ಕಬಡ್ಡಿ ಆಟಗಾರ ಬ್ರಿಜೇಶ್ ಸೋಲಂಕಿಯ ಉದಾಹರಣೆಯು ನಮ್ಮ ಕಣ್ಣು ತೆರೆಸಬೇಕಿದೆ.

(ಲೇಖಕರು ಶಿಕ್ಷಕರು)