ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Naveen Sagar Column: ಇದು ನಾರದ ಮಾಧ್ಯಮವಲ್ಲ..ನಾರುವ ಮಾಧ್ಯಮ !

ತ್ರಿಕಾಲಜ್ಞಾನಿ, ತ್ರಿಲೋಕ ಸಂಚಾರಿ ನಾರದನನ್ನು ‘ನಾರದ ಮಹರ್ಷಿ’ಗಳೆಂದು ಸಂಬೋಧಿಸು ವಷ್ಟು ಉದಾತ್ತ ವ್ಯಕ್ತಿತ್ವವದು. ಆದರೆ ನಾರದ ಪಾತ್ರವನ್ನು ಹಾಸ್ಯಗಾರನಂತೆ, ಚಾಡಿಕೋರನಂತೆ ಬಿಂಬಿಸಿ ಬಿಂಬಿಸಿ, ಈಗ ಇಬ್ಬರ ಮಧ್ಯೆ ಜಗಳ ಹಚ್ಚಿ ಹಾಕಿ ಪಲಾಯನ ಮಾಡುವವರನ್ನು, ಮಜ ತೆಗೆದುಕೊಳ್ಳು ವವರನ್ನು ನಾರದ ಎನ್ನಲಾಗುತ್ತಿದೆ.

ಇದು ನಾರದ ಮಾಧ್ಯಮವಲ್ಲ..ನಾರುವ ಮಾಧ್ಯಮ !

-

ಪದಸಾಗರ

ಲೋಕ ಕಲ್ಯಾಣಕ್ಕಾಗಿ ತ್ರಿಲೋಕ ಸಂಚಾರ ಮಾಡುತ್ತಿದ್ದ, ಪುರಾಣಕಾಲದ ಮಹಾನ್ ವ್ಯಕ್ತಿತ್ವ ‘ನಾರದ’. ಅದ್ಯಾವ ಗಳಿಗೆಯಲ್ಲಿ ಆತನಿಗೆ ಚಾಡಿಕೋರ, ಜಗಳ ಅಂಟಿಸಿ ಮಜ ನೋಡುವವ ಎಂಬ ಅಪವಾದ ಬಂತೋ ಗೊತ್ತಿಲ್ಲ. ನಾರದ ಪುರಾಣ ಕಾಲದ ಅತ್ಯಂತ ಶಕ್ತಿಶಾಲಿ ಮಾಧ್ಯಮ. ಆತ ತ್ರಿಲೋಕ ಸಂಚಾರ ಮಾಡಿ ಸುದ್ದಿ ಸಂಗ್ರಹಿಸುತ್ತಿದ್ದ, ಸುದ್ದಿ ಬಿತ್ತರಿಸುತ್ತಿದ್ದ. ಆ ಮೂಲಕ ಜಗತ್ತಿಗೆ ಒಳ್ಳೆಯದೇನನ್ನೋ ಮಾಡುತ್ತಿದ್ದ.

ತ್ರಿಕಾಲಜ್ಞಾನಿ, ತ್ರಿಲೋಕ ಸಂಚಾರಿ ನಾರದನನ್ನು ‘ನಾರದ ಮಹರ್ಷಿ’ಗಳೆಂದು ಸಂಬೋಧಿಸು ವಷ್ಟು ಉದಾತ್ತ ವ್ಯಕ್ತಿತ್ವವದು. ಆದರೆ ನಾರದ ಪಾತ್ರವನ್ನು ಹಾಸ್ಯಗಾರನಂತೆ, ಚಾಡಿಕೋರನಂತೆ ಬಿಂಬಿಸಿ ಬಿಂಬಿಸಿ, ಈಗ ಇಬ್ಬರ ಮಧ್ಯೆ ಜಗಳ ಹಚ್ಚಿ ಹಾಕಿ ಪಲಾಯನ ಮಾಡುವವರನ್ನು, ಮಜ ತೆಗೆದುಕೊಳ್ಳುವವರನ್ನು ನಾರದ ಎನ್ನಲಾಗುತ್ತಿದೆ.

ಹಾಗಾದರೆ ಆಧುನಿಕ ಲೋಕದ ನಾರದ ಯಾರು? ಇನ್ಯಾರು.. ‘ಏನ್ರೀ ಮೀಡಿಯಾ’ ಖ್ಯಾತಿಯ ಮಾಧ್ಯಮಗಳು. ಪರ್ಟಿಕ್ಯುಲರ್ಲೀ.. ಟಿವಿ ನ್ಯೂಸ್ ಮಾಧ್ಯಮಗಳು. ಪ್ರಾದೇಶಿಕ ವಾರ್ತಾ ಮಾಧ್ಯಮ ಗಳಿಗೆ ಏನಾಗಿದೆ? ಯಾಕೆ ಇಷ್ಟೊಂದು ಬರಗೆಟ್ಟಿವೆ? ‘ನಾವು ಟಿಆರ್‌ಪಿಗೋಸ್ಕರ ಇಂಥ ಅಧೋಗತಿಗೆ ಇಳಿದಿಲ್ಲ.

ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಕಾರ್ಯಕ್ರಮ ಮಾಡಿ ಟಿಆರ್‌ಪಿ ಗಿಟ್ಟಿಸುತ್ತಿದ್ದೇವಷ್ಟೇ’ ಎಂಬ ಸಮಜಾಯಿಷಿ-ಸಮರ್ಥನೆಗಳನ್ನು ಮಾಧ್ಯಮಗಳ ದೊಡ್ಡ ತಲೆಗಳು ಹೇಳುತ್ತವೆ. ಆದರೆ ಅಭಿರುಚಿ ತಿದ್ದುವ, ಮೇಲೆತ್ತುವ ಕೆಲಸ ಅಥವಾ ಪ್ರಯತ್ನವನ್ನು ನಿಜಕ್ಕೂ ಮಾಧ್ಯಮಗಳು ಎಂದಾದರೂ ಮಾಡಿವೆಯಾ? ಯುವ ರಾಜಕಾರಣಿಗಳಿಬ್ಬರ ಪರಸ್ಪರ ಕೆಸರೆರಚಾಟ ಮತ್ತು ಸಭ್ಯತೆ ಮೀರಿದ ವಾಕ್ಸಮರದ ಬಗ್ಗೆ ರಾಜ್ಯ ಹೇಸಿಗೆ ಪಟ್ಟುಕೊಳ್ತಾ ಇದೆ.

ಇದನ್ನೂ ಓದಿ: Naveen Sagar Column: ಕಲ್ಲೇಟಿಗಿಂತ ನಿನ್ನ ಕಣ್ಣೇಟು ಜೋರಾಗಿ ನಡುಗಿದೆ ಗಡಗಡ...!

ಆದರೆ ಇಲ್ಲಿ ಅಸಲಿ ವಿಲನ್ ಮಾಧ್ಯಮ ಎಂಬುದನ್ನು ಯಾರೂ ಗಮನಿಸುತ್ತಿಲ್ಲ. ಪ್ರದೀಪ್ ಈಶ್ವರ್ ಮತ್ತು ಪ್ರತಾಪ್ ಸಿಂಹ ನಡುವಣ ಮಾತಿನ ಚಕಮಕಿ ಈ ತನಕ ಬಂದಿರುವುದು ಮಾಧ್ಯಮ ಗಳಿಂದಲೇ. ಬೆಂಕಿ ಆರಿಸುವ ಕೆಲಸ ಮಾಡುವ ಬದಲು ಬೆಂಕಿ ಹಚ್ಚುವ ಕೆಲಸ ಮಾಡುತ್ತಿರುವುದು ಟಿವಿ ನ್ಯೂಸ್ ಚಾನೆಲ್‌ಗಳೇ.

ಮಾಧ್ಯಮಗಳಲ್ಲಿ ವರದಿಗಾರಿಕೆ ಮಾಡುವುದು ಈಗ ಬಹಳ ಸುಲಭ. ಜಗತ್ತಿನ ಯಾವುದೇ ವಿಷಯದ ಬಗ್ಗೆ ಯಾರನ್ನಾದರೂ ಕರೆದು ಮೈಕ್ ಹಿಡಿದು ಕೇಳಿ ಬಿಡುವುದೇ ಇಂದಿನ ವರದಿಗಾರಿಕೆ. ರಾಜಕೀಯದ ಬಗ್ಗೆ ಸಿನಿಮಾದವರ ಬಳಿ, ಸಿನಿಮಾದವರ ಬಗ್ಗೆ ಕ್ರೀಡಾಪಟುಗಳ ಬಳಿ, ಕ್ರೀಡಾಪಟು ಗಳ ಬಗ್ಗೆ ರಾಜಕಾರಣಿಗಳ ಬಳಿ, ಸಂಬಂಧವೇ ಇಲ್ಲದ ವಿಷಯದ ಬಗ್ಗೆ ಕೇಳುವುದು, ಅವರ ಎಡವಟ್ಟು ಉತ್ತರ ಇಟ್ಟುಕೊಂಡು ಸುದ್ದಿ ಮಾಡುವುದು, ಆ ಹೇಳಿಕೆ ಬಗ್ಗೆ ಇನ್ಯಾರನ್ನೋ ಪ್ರಶ್ನಿಸಿ ಮತ್ತೊಂದು ಸುದ್ದಿ ಸೃಷ್ಟಿಸೋದು....!

ನ್ಯೂಸ್ ಚಾನೆಲ್‌ಗಳು ಕಂಟೆಂಟ್ ಕ್ರಿಯೇಟರ್ಸ್ ಆಗುತ್ತಿವೆ. ಅವರಿವರ ಹೇಳಿಕೆಗಳು, ಕಾಂಟ್ರವರ್ಸಿ ಯಲ್ ಮಾತುಗಳೇ ನ್ಯೂಸ್ ಚಾನೆಲ್‌ಗಳ ಸರಕಾಗುತ್ತಿವೆ. ದಿನ ಬೆಳಗಾದರೆ ಒಂದಷ್ಟು ಮಾತುಗಾರ ರಾಜಕಾರಣಿಗಳ ಬಳಿ, ಚಿತ್ರನಟ-ನಟಿಯರ ಬಳಿ, ಟಿವಿ ಪರ್ಸನಾಲಿಟಿಗಳ ಬಳಿ ಹೋಗಿ ಅವರಿಗೆ ಸಂಬಂಧವಿಲ್ಲದ ವಿಷಯಕ್ಕೆ ಅಭಿಪ್ರಾಯ ಕೇಳುವುದು.

RR

ಅವರ ಅಭಿಪ್ರಾಯದಿಂದ ಕಾಂಟ್ರವರ್ಸಿ ಹುಟ್ಟು ಹಾಕಬಹುದೇ ವಿನಾ ಇನ್ಯಾವುದೇ ಪರಿಣಾಮ ಇರುವುದಿಲ್ಲ. ಆದರೂ ಅವರ ಬೈಟ್ ಪಡೆಯಲಾಗುತ್ತದೆ. ಕೆಲವೊಂದನ್ನು ಯಥಾವತ್ ಬಳಸಿ ವಿವಾದದ ಕಿಚ್ಚೆಬ್ಬಿಸಿದರೆ, ಮತ್ತೆ ಕೆಲವೊಮ್ಮೆ ಸರಿಯಾದ ಅಭಿಪ್ರಾಯವನ್ನೂ ಕೆಟ್ಟ/ವಿವಾದಾತ್ಮಕ ಹೆಡ್‌ಲೈನ್, ಥಂಬ್‌ನೈಲ್ ಮೂಲಕ ತಿರುಚಿ ವಿವಾದ ಸೃಷ್ಟಿಸಿ ಬಿಟ್ಟುಬಿಡುವುದು. ಇಬ್ಬರ ಜಗಳದ ಬಗ್ಗೆ, ಮೂರನೆಯವರ ಬಳಿ ಹೋಗಿ ಅಭಿಪ್ರಾಯ ಕೇಳುವುದು, ಅವರ ಮಾತನ್ನು ಬಳಸಿ ಮತ್ತೆ ಹೊಸ ಕಸ ಸೃಷ್ಟಿ ಮಾಡುವುದು...!

‘ಸುವರ್ಣ ನ್ಯೂಸ್’ನ ಅಜಿತ್ ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ, ‘ಇಂದಿನ ಪತ್ರಕರ್ತರಿಗೆ ಮೆಂಟರ್ಸ್ ಇಲ್ಲ, ಇಂದಿನ ಹಿರಿಯ ಪತ್ರಕರ್ತರಿಗೆ ಶ್ರದ್ಧೆ ಇರೋ ವಿದ್ಯಾರ್ಥಿಗಳು, ಕಲಿಕೆಯ ಆಸೆ ಇರೋ ಯುವ ಪತ್ರಕರ್ತರು ಸಿಗುತ್ತಿಲ್ಲ’ ಎಂದು ವ್ಯಥೆ ವ್ಯಕ್ತಪಡಿಸಿದ್ದರು. ಆದರೆ ಅದು ನಿಜವಲ್ಲ. ಯುವ ಪತ್ರಕರ್ತರಿಗೆ ಅಜಿತ್ ಅವರಿಗಿಂತ ಮೆಂಟರ್ ಬೇಕಾ? ರಂಗಣ್ಣನಿಗಿಂತ ಮೆಂಟರ್ ಬೇಕಾ? ಅವರು ಯಾಕೆ ಉತ್ತಮ ಪತ್ರಕರ್ತರನ್ನು ರೂಪಿಸುತ್ತಿಲ್ಲ? ಯಾಕೆಂದರೆ ಅವರೇ ಖುದ್ದು ಒತ್ತಡ ದಲ್ಲಿದ್ದಾರೆ.

ಅವರಿಗೆ ಬೇಕಿರುವುದೇ ಇಂಥ ಹೇಳಿಕೆ ಸಂಗ್ರಹಿಸೋ, ಬೆಂಕಿ ಹಚ್ಚುವ ತಾಕತ್ತಿರುವ ಹುಡುಗರು. ಅಸಂಬದ್ಧ ಪ್ರಶ್ನೆ ಕೇಳಿ ಅಸಂಬದ್ಧ ಉತ್ತರ ತರಬಲ್ಲ ಹುಂಬ ಹುಡುಗರನ್ನೇ ಪತ್ರಕರ್ತರೆಂಬ ಬ್ಯಾಡ್ಜ್ ಕೊಟ್ಟು ಫೀಲ್ಡಿಗೆ ಬಿಡಲಾಗುತ್ತಿದೆ. ಅವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ? ಅವರು ಅಂಥ ಸರಕು ತಂದರೆ ಚಾನೆಲ್ ಹೊಟ್ಟೆ ತುಂಬುವುದು ಎಂಬಂತಾಗಿದೆ.‌

ಎಂಥೆಂಥ ಸ್ಟಾಂಡರ್ಡ್ ಡಿಬೇಟ್‌ಗಳು ಪ್ರಸಾರವಾದ ‘ನ್ಯೂಸ್ ಅವರ್ ’ನಂಥ ಕಾರ್ಯಕ್ರಮದಲ್ಲಿ ಕ್ಷುಲ್ಲಕ ವಿಚಾರದ ಬಗ್ಗೆ ಕಾರ್ಯಕ್ರಮ ಮಾಡುವಂತಾಗುತ್ತದೆ ಅಂದರೆ, ಅದು ಸ್ಪರ್ಧಾತ್ಮಕ ಅಖಾಡದಲ್ಲಿ ಆಗುತ್ತಿರುವ ನೈತಿಕ ಅಧಃಪತನವೇನು ಎಂಬುದನ್ನು ಸಾರಿ ಹೇಳುತ್ತಿದೆ ಅಲ್ಲವೇ? ಅನುಭವಿ ಪತ್ರಕರ್ತರು ಇಂದಿನ ಸೋಷಿಯಲ್ ಮೀಡಿಯಾ ಮತು ಟ್ರೋಲರ್‌ಗಳ ಜತೆ ಸ್ಪರ್ಧೆ ಗಿಳಿಯುತ್ತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಮಾತುಗಳು ಟ್ರೆಂಡ್ ಆಗುವುದರಿಂದ ಉತ್ತೇಜಿತರಾಗುತ್ತಿzರೆ. ಇನ್ನಷ್ಟು ಅಂಥ ಕಂಟೆಂಟ್ ಕೊಡುವ ಸಲುವಾಗಿಯೇ ತಮ್ಮ ಕಾರ್ಯಕ್ರಮಗಳಲ್ಲಿ ಡೈಲಾಗ್ ಹೊಡೆಯುವ ಹುಕಿಗೆ ಬೀಳುತ್ತಿದ್ದಾರೆ.

ಕೆಲವು ಮಾಹಿತಿಗಳ ಪ್ರಕಾರ ಅನುಭವಿ ಮತ್ತು ಹಿರಿಯ ಪತ್ರಕರ್ತರೇ ಪೇಜ್‌ಗಳನ್ನು ಮಾಡಿಸಿ ಅಲ್ಲಿಗೆ ಕಂಟೆಂಟ್ಸ್ ನೀಡುತ್ತಿದ್ದಾರೆ. ದರ್ಶನ್‌ಗೆ, ರಾಜಕಾರಣಿಗಳಿಗೆ ಬಯ್ಯುವುದು, ಕೌಂಟರ್ ಕೊಡುವುದು ಇವೆಲ್ಲವೂ ನಾಳೆ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಲೆಂದು ಹಪಹಪಿಸು ತ್ತಿದ್ದಾರೆ.

24*7 ನ್ಯೂಸ್ ಎನ್ನುವ ಚಾನೆಲ್‌ಗಳ ಇಡೀ ದಿನದ ನ್ಯೂಸ್ ನೋಡಿದರೆ ತೊಂಬತ್ತು ಭಾಗ ಅವರಿವರ ಹೇಳಿಕೆ ಮತ್ತು ಪ್ರತಿಕ್ರಿಯೆಗಳ ಬಗ್ಗೆಯೇ ಇರುತ್ತದೆ. ಪ್ರತಿಕ್ರಿಯೆ ಅಥವಾ ಹೇಳಿಕೆ ಕೊಡೋದಿಲ್ಲ ಅಂತ ಸಭ್ಯವಾಗಿ ಹೇಳಿದರೆ ಬಿಡುವುದಿಲ್ಲ. ಜೋರಾಗಿ ಗದರಿದರೆ, ಅದನ್ನೂ ಸುದ್ದಿ ಯಾಗಿ ಬಳಸಿಕೊಳ್ತಾರೆ.

ತಪ್ಪಿಸಿಕೊಂಡು ಹೋದರೆ, ಅದನ್ನೂ ಇನ್ನೊಂದು ಆಯಾಮ ಕೊಟ್ಟು ಸುದ್ದಿ ಮಾಡ್ತಾರೆ. ತೀರಾ ಜೋರಾಗಿ ಬಯ್ದರೆ, ಅವರ ವಿರುದ್ಧ ನೆಗೆಟಿವ್ ಸುದ್ದಿ ಮಾಡುತ್ತಾರೆ. ಬಹಿಷ್ಕಾರವನ್ನೂ ಹೇರುತ್ತಾರೆ. ಮಾಧ್ಯಮಗಳು ಕೆಲವರಿಗೆ ಭಯ ಹುಟ್ಟಿಸಿ ಮಾತನಾಡುವಂತೆ ಮಾಡುತ್ತವೆ. ಇನ್ನು ಕೆಲವು ಬಾರಿ ಹುಚ್ಚುತನಕ್ಕೆ ವೇದಿಕೆ ಒದಗಿಸಿಕೊಡುತ್ತವೆ.

ಅತಿಯಾಗಿ ಮಾತನಾಡುವವರೇ ಇವರ ಆಸ್ತಿ. ತಲೆಬುಡ ಇಲ್ಲದೇ ಮಾತನಾಡುವವರು, ವಿಷಯ ನವೇ ಇಲ್ಲದೆ ಪ್ಯಾನೆಲ್ ಡಿಸ್ಕಷನ್‌ಗೆ ಬಂದು ಗದ್ದಲ ಮಾಡುವವರು, ಆಂಕರ್ ಕೈಲಿ ಬೈಸಿಕೊಂಡು, ಸೋಷಿಯಲ್ ಮೀಡಿಯಾ ಪೇಜ್ ಮತ್ತು ಟ್ರೋಲರ್‌ಗಳಿಗೆ ಆಹಾರ ಆಗುವವರೇ ಇವರ ಚಾನೆಲ್‌ಗಳ ಅಸೆಟ್.

ಯಾವುದಾದರೂ ಚಾನೆಲ್ ಒಂದು ಸಮಸ್ಯೆಯನ್ನು, ವಿವಾದವನ್ನು ಬೆನ್ನತ್ತಿ ಹೋಗಿ, ತಾರ್ಕಿಕ ಅಂತ್ಯ ತಲುಪಿಸಿದ ಉದಾಹರಣೆ ಇದೆಯಾ? ರಾಜಕಾರಣಿಗಳು ನ್ಯೂಸ್ ಚಾನೆಲ್‌ನ ತಿಕ್ಕಲು ಮನಸ್ಥಿತಿಯನ್ನು ಬಹಳ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ.

ಒಂದು ದೊಡ್ಡ ವಿವಾದವನ್ನು ಮರೆ ಮಾಚುವುದಕ್ಕೆ, ಇನ್ನೊಂದು ಸಣ್ಣ ವಿವಾದವನ್ನು ಮುನ್ನೆಲೆಗೆ ತರುತ್ತಿದ್ದಾರೆ. ಸಮಸ್ಯೆಗಳನ್ನು ಮರೆಮಾಚುವುದಕ್ಕೆ, ಕಾರ್ಯ ವೈಫಲ್ಯಗಳನ್ನು ಮರೆ ಮಾಚುವುದಕ್ಕೆ, ಅನಗತ್ಯ ವಿಷಯಗಳನ್ನು ಮಾಧ್ಯಮಗಳಿಗೆ ಫೀಡ್ ಮಾಡುತ್ತಾರೆ. ಮಾಧ್ಯಮಗಳು ಪ್ರಮುಖ ವಿಷಯ ಬದಿಗಿಟ್ಟು, ಕ್ಷುಲ್ಲಕ ವಿಚಾರಗಳನ್ನು ಜಗ್ಗಾಡತೊಡಗುತ್ತವೆ. ಸದ್ಯ ಬಚಾವಾದೆವು ಎಂದು ಭ್ರಷ್ಟರು ನಿಟ್ಟುಸಿರು ಬಿಡುತ್ತಾರೆ.

ವಿರೋಧಪಕ್ಷವನ್ನು ದಿಕ್ಕು ತಪ್ಪಿಸುವ ಜತೆಗೆ ಮಾಧ್ಯಮಗಳನ್ನೂ ದಿಕ್ಕುತಪ್ಪಿಸುವ ತಂತ್ರಗಾರಿಕೆ ಬಹಳ ಚೆನ್ನಾಗಿಯೇ ವರ್ಕ್ ಆಗುತ್ತಿದೆ. ಸರಕಾರವನ್ನು ಬೀಳಿಸುವಂಥ ಹಗರಣಗಳು ತಣ್ಣಗಾಗಿದ್ದರ ಹಿಂದೆ ಮಾಧ್ಯಮಗಳ ಈ ಬುದ್ಧಿಗೇಡಿತನವಿದೆ. ವಸ್ತುನಿಷ್ಠ ಚರ್ಚೆಗಳು ದಿಕ್ಕುತಪ್ಪಿ ಹೋಗಿ, ಪರಸ್ಪರ ವೈಯಕ್ತಿಕ ನಿಂದನೆ ತನಕ ಹೋಗುತ್ತಿರುವುದರ ಹಿಂದೆ ಮಾಧ್ಯಮದ ಪಾತ್ರವಿದೆ.

ಪ್ರತಾಪ ಸಿಂಹ ಮತ್ತು ಪ್ರದೀಪ್ ಈಶ್ವರ್ ಇಬ್ಬರೆದುರು ಮೈಕು ಹಿಡಿಯದೇ ಹೋಗಿದ್ದರೆ ಏನಾಗಿರು ತ್ತಿತ್ತು. ಇಂಥ ಹೇಳಿಕೆಗಳು ಬರುವ ಅವಕಾಶವೇ ಇರುತ್ತಿರಲಿಲ್ಲ. ಒಂದು ವೇಳೆ ಅವರೇ ಖುದ್ದು ಸಾಮಾಜಿಕ ಜಾಲತಾಣಗಳ ಮೂಲಕ ಬಯ್ದಾಡಿಕೊಂಡರೂ ಇದು ನಮಗೆ ಸುದ್ದಿ ಅಲ್ಲ ಎಂಬಂತೆ ಮಾಧ್ಯಮಗಳು ವರ್ತಿಸಿದ್ದರೆ ಮಾಧ್ಯಮಗಳ ಘನತೆ ಚೂರಾದ್ರೂ ಉಳಿದಿರುತ್ತಿತ್ತು. ಪ್ರಚಾರಕ್ಕೆ ಹಪಹಪಿಸುವ, ಮಾಧ್ಯಮಗಳಿಂದ ಉತ್ತೇಜಿತರಾಗುವ ಮಂದಿಗೆ ಇನ್ನಷ್ಟು ಮತ್ತಷ್ಟು ಅವಕಾಶ ಒದಗಿಸಿದರೆ ಏನಾದೀತು ಹೇಳಿ. ಅದೇ ಆಗಿದೆ.

ಪತ್ರಿಕೆಗಳು ಯಾಕೆ ಇಂದಿಗೂ ಪ್ರಸ್ತುತ ಅನಿಸುತ್ತವೆ, ಯಾಕೆ ಇನ್ನು ಗೌರವ ಉಳಿಸಿಕೊಂಡಿವೆ, ಯಾಕಿನ್ನೂ ಓದುಗರನ್ನು ಉಳಿಸಿಕೊಂಡಿವೆ ಅಂದ್ರೆ, ಇದೇ ಕಾರಣಕ್ಕೆ. ಇಲ್ಲಿ ಅಕ್ಷರ ಬರೆಯುವ ಪತ್ರಕರ್ತರಿzರೆ. ಓದುವ ಪತ್ರಕರ್ತರಿದ್ದಾರೆ. ಮೈಕ್ ಸಿಕ್ಕರೆ ಸಾಕು ನಾನು ಪತ್ರಕರ್ತ, ಕ್ಯಾಮೆರಾ ಎದುರಿದ್ದರೆ ಸಾಕು ನಾನು ಪತ್ರಕರ್ತ ಎಂಬಷ್ಟು ಸಲೀಸಿಲ್ಲ ಮುದ್ರಣ ಮಾಧ್ಯಮ.

ಹಲವು ಹುಳುಕುಗಳ ನಡುವೆಯೂ ಇಂದಿಗೂ ಪ್ರಿಂಟ್ ಮೀಡಿಯಾ ಗೌರವ ಉಳಿಸಿಕೊಂಡಿದೆ ಅಂದ್ರೆ ಪ್ರಜ್ಞಾವಂತ ಓದುಗರ, ಬರಹಗಾರರ, ಪತ್ರಕರ್ತರ ಬಳಗ ಇಲ್ಲಿದೆ. ನ್ಯೂಸ್ ಚಾನೆಲ್ಲಿಗಂಟಿದ ರೋಗ ಪತ್ರಿಕೆಗಳಿಗೆ ಅಂಟಿಲ್ಲ. ನ್ಯೂಸ್ ಮೀಡಿಯಾಗಳು ‘ಹೇಳಿಕೆ ಪತ್ರಿಕೋದ್ಯಮ’ದಿಂದ ಮೊದಲು ಹೊರಬರಬೇಕು.

ಮಾಧ್ಯಮದ ಕೆಲಸ ಸುದ್ದಿ ತಲುಪಿಸುವುದು ನಿಜ. ಆದರೆ ಸುದ್ದಿ ಸೃಷ್ಟಿಸಿ ತಲುಪಿಸುವುದಲ್ಲ. ಕಂಟೆಂಟ್ ಕ್ರಿಯೇಟ್ ಮಾಡುವುದೇ ಆದರೆ ಸಾಕಷ್ಟು ಪಾಸಿಟಿವ್ ಕಂಟೆಂಟ್ ಕ್ರಿಯೇಟ್ ಮಾಡಲು ಅವಕಾಶವಿದೆ. ಈ ವಿಷಯದಲ್ಲಿ ಸೋಷಿಯಲ್ ಮೀಡಿಯಾ ಮೂಲಕವೂ ಟಿವಿ ನ್ಯೂಸ್ ಚಾನೆಲ್‌ ಗಳು ಪಾಠ ಕಲಿಯಬಹುದು. ಗೌರವ ಕಳಕೊಂಡು ಗಳಿಸುವ ಟಿಆರ್‌ಪಿಗೆ ಏನು ಬೆಲೆ? ಅರೆಬೆತ್ತಲೆ ಕುಣಿದು ಕುಪ್ಪಳಿಸಿವವಳಿಗೂ ಮಿಲಿಯನ್ ವೀಕ್ಷಣೆ ಸಿಗುತ್ತದೆ. ಆದರೆ ಮರ್ಯಾದೆ ಇರುತ್ತದೆಯೇ? ಕಮೆಂಟ್ ಬಾಕ್ಸ್ ತುಂಬ ಬಯ್ಗುಳವೇ ಇರುತ್ತದೆ.

ಬಯ್ದರೂ ಸರಿಯೇ ವೀಕ್ಷಣೆ ಮುಖ್ಯ ಅನ್ನೋದು ನ್ಯೂಸ್ ಚಾನೆಲ್‌ಗಳ ಧೋರಣೆ ಆದರೆ, ರಾಜಕಾರಣಿಗಳಿಗೂ ಇವರಿಗೂ ಏನು ವ್ಯತ್ಯಾಸ? ಮಾಧ್ಯಮಗಳು ಬೇಗ ಸರಿದಾರಿಗೆ ಬರಬೇಕಿದೆ. ಆಠಿ ಹೇಗೆ? ಲೋಕಕಲ್ಯಾಣಕ್ಕಾಗಿ ಜಗಳ ಹಚ್ಚಿಹಾಕುತ್ತಿವೆ ಅಂತಾಗಿದ್ರೆ ಇದನ್ನು ‘ನಾರದ ಮಾಧ್ಯಮ’ ಅನ್ನಬಹುದಿತ್ತು. ಆದರೆ ಜಗತ್ತನ್ನು ಕುಲಗೆಡಿಸಲು ಮಾಧ್ಯಮಗಳು ಕಿಡಿಹಚ್ಚುತ್ತಿವೆ. ಹೀಗಾಗಿ ಇದು ‘ನಾರದ’ ಮಾಧ್ಯಮವಲ್ಲ. ‘ನಾರುವ’ ಮಾಧ್ಯಮ ಎನ್ನಬೇಕಾಗಿದೆ...