Prof R G Hegde Column: ಮಾತು ಸೋತವರು ಸುಳ್ಳು ನಾಯಕರ ದೂರವಿಡಬೇಕು
ಹೊಸ್ತಿಲುಗಳೊಳಗಿನ ಕತ್ತಲಿನಲ್ಲಿ, ಕಪ್ಪು ಪರದೆಯ ಹಿಂದಿನ ಕಣ್ಣೀರಿನಲ್ಲಿ ಪಿಸುಮಾತಾಗಿ ಅವು ಕಾಣೆಯಾಗಿವೆ. ಹೀಗೆ, ಅವರಿಗೆ ಹೇಳಲು ವಿಷಯಗಳೇ ಇಲ್ಲ. ಅವರ ಬದುಕಿನ ದೊಡ್ಡ ದುರಂತ ಇದು. ಎರಡನೆಯ ವಿಷಯ. ಈ ಸಮುದಾಯಗಳಿಗೆ ಇದ್ದಬಿದ್ದ ತಮ್ಮ ಮಾತುಗಳನ್ನು ಕೂಡ ಹೇಳಲು ಬರುವುದಿಲ್ಲ. ಅಂದರೆ ಪಶ್ಚಿಮದ ಅಥವಾ ಪಾಶ್ಚಿಮಾತ್ಯರಾಗಿ ಹೋದ ಜನರಿಗೆ ತಿಳಿಯುವಂತೆ ಹೇಳಲು ಬರುವುದಿಲ್ಲ.
-
ಬಹುವಚನ
ಪ್ರೊ.ಆರ್.ಜಿ.ಹೆಗಡೆ
ಈ ಮಾತುಗಳಿಗೆ ಜಾಗತಿಕ ಖ್ಯಾತಿಯ ಭಾರತೀಯ ವಿಮರ್ಶಕಿ ಗಾಯತ್ರಿ ಚಕ್ರವರ್ತಿ ಸ್ಪಿವಾಕ್ ಅವರ ಬರಹ ‘Can the sabaltern speak?’ ದ ಹಿನ್ನೆಲೆ ಇದೆ. ‘ಸಬಾಲ್ಟರ್ನ್ ಸ್ಟಡೀಸ್’ ಅಂದರೆ ಹುದುಗಿ ಹೋದ ಧ್ವನಿಗಳ ಅಧ್ಯಯನದಲ್ಲಿ (ಉದಾ. ಮಹಿಳೆಯರ, ಆದಿವಾಸಿಗಳ, ದಲಿತರ, ಬುಡಕಟ್ಟು ಜನಾಂಗದವರ, ಉಳಿಗಮಾನ್ಯ ಪದ್ಧತಿಯ/ ವಸಾಹತುಶಾಹಿ ವ್ಯವಸ್ಥೆಯ ಅಡಿಯಲ್ಲಿದ್ದವರ ಸಂಸ್ಕೃತಿಗಳ ಅಧ್ಯಯನದಲ್ಲಿ) ಆಕೆ ಮುಂಚೂಣಿಯ ಹೆಸರು. ಮೇಲೆ ಹೇಳಲಾದ ವರ್ಗಗಳು ತಮ್ಮ ನಿಜದ ಮಾತುಗಳನ್ನು, ಅಥವಾ ಸಂಸ್ಕೃತಿಯನ್ನೇ ಕಳೆದುಕೊಂಡಿರುವುದರ ಕುರಿತು ಈ ಅಧ್ಯಯನ ಗಳು ಇವೆ. ತಮ್ಮ ಅಸ್ಮಿತೆಯನ್ನು ಅಂತಹವರು ಮರಳಿ ಪಡೆಯುವುದು ಹೇಗೆ ಎಂಬುದರ ಕುರಿತಾದಂತೆಯೂ ಪದ್ಮಪ್ರಶಸ್ತಿ ವಿಜೇತೆ ಸ್ಪಿವಾಕ್ ವಿಸ್ತೃತ ಅಧ್ಯಯನ ನಡೆಸಿದ್ದಾರೆ. ಸ್ಪಿವಾಕ್ ಹೇಳುತ್ತಾರೆ.
ಏನೆಂದರೆ, ಸಾಂಸ್ಕೃತಿಕವಾಗಿ ದಮನಕಾರಿ ವ್ಯವಸ್ಥೆಯ ಅಡಿಯಲ್ಲುಳಿದವರಿಗೆ ತಮ್ಮ ಮಾತನ್ನು, ಸಂಸ್ಕೃತಿಯನ್ನು ಹೇಳಿಕೊಳ್ಳುವುದು ತುಂಬ ಕಷ್ಟದ ಕೆಲಸ ಅಥವಾ ಅಸಾಧ್ಯ. ತಮ್ಮ ಕುರಿತಾಗಿ ಹೇಳಿಕೊಳ್ಳಲು, ದಾಖಲಿಸಲು ಚಾರಿತ್ರಿಕವಾಗಿ ಈ ಸಮುದಾಯಗಳಿಗೆ ಸಾಧ್ಯವಾಗಿಯೇ ಇಲ್ಲ. ಸಾಧ್ಯವಾಗಲಿಕ್ಕೂ ಇಲ್ಲ.
ಇಂತಹ ಪರಿಸ್ಥಿತಿ ಹುಟ್ಟಿಕೊಳ್ಳುವುದಕ್ಕೆ ಮೂರು ಕಾರಣಗಳಿವೆ. ಒಂದನೆಯದು. ಸುದೀರ್ಘ ಕಾಲ ಬೇರೆಯವರ ಮಾತು ಕೇಳಿದ ಅವರಿಗೆ ತಮ್ಮ ಮಾತು, ಸಂಸ್ಕೃತಿ ಈಗ ಮರೆತು ಹೋಗಿದೆ. ಮತ್ತು ಆ ‘ಮಾತನ್ನು’ ಈಗ ಹುಡುಕಿಕೊಳ್ಳುವುದು ಅವರಿಗೆ ಬಹಳ ಕಷ್ಟದ ವಿಷಯ.
ಇದನ್ನೂ ಓದಿ: Prof R G Hegde Column: ಜಿರಲೆ ಕ್ರಾಂತಿ ನಡೆಯುವುದಿಲ್ಲ, ಆದರೆ..
ಏಕೆಂದರೆ ಅವರಿಗೆ ಅವರದ್ದೇ ಆಗಿ ಇದ್ದ ಬದುಕು, ಪರಂಪರೆ, ನೆನಪು ಎಲ್ಲವೂ ಕಳೆದುಹೋಗಿದೆ. ತಮ್ಮ ಬದುಕಿಗೆ ತಾವೇ ಅನ್ಯರಾಗಿ, ಹೊರಗಿನವರಾಗಿ ಹೋಗಿರುವವರು ಅವರು. ಉದಾಹರಣೆಗೆ ಸಿಧಿ ಗೌಳಿ, ಹಾಲಕ್ಕಿಗಳು ಇಂತಹ ಸಹಸ್ರಾರು ಆದಿವಾಸಿ, ಬುಡಕಟ್ಟು ಸಂಸ್ಕೃತಿಗಳ ಧ್ವನಿಗಳು ಕಳೆದುಹೋಗಿವೆ. ಮಾಯವಾಗಿವೆ. ಮಹಿಳೆಯರ ಧ್ವನಿಗಳನ್ನಂತೂ ಬಿಡಿ. ಅವರ ಒಳ ಮಾತು ಗಳನ್ನು ಹೇಳಿಕೊಳ್ಳಲು ಅವರಿಗೆ ಸಾಧ್ಯವಾಗಿಲ್ಲ.
ಹೊಸ್ತಿಲುಗಳೊಳಗಿನ ಕತ್ತಲಿನಲ್ಲಿ, ಕಪ್ಪು ಪರದೆಯ ಹಿಂದಿನ ಕಣ್ಣೀರಿನಲ್ಲಿ ಪಿಸುಮಾತಾಗಿ ಅವು ಕಾಣೆಯಾಗಿವೆ. ಹೀಗೆ, ಅವರಿಗೆ ಹೇಳಲು ವಿಷಯಗಳೇ ಇಲ್ಲ. ಅವರ ಬದುಕಿನ ದೊಡ್ಡ ದುರಂತ ಇದು. ಎರಡನೆಯ ವಿಷಯ. ಈ ಸಮುದಾಯಗಳಿಗೆ ಇದ್ದಬಿದ್ದ ತಮ್ಮ ಮಾತುಗಳನ್ನು ಕೂಡ ಹೇಳಲು ಬರುವುದಿಲ್ಲ. ಅಂದರೆ ಪಶ್ಚಿಮದ ಅಥವಾ ಪಾಶ್ಚಿಮಾತ್ಯರಾಗಿ ಹೋದ ಜನರಿಗೆ ತಿಳಿಯುವಂತೆ ಹೇಳಲು ಬರುವುದಿಲ್ಲ. ಈಗ ಇರುವ ‘ಕೇಳುಗರು’ ಹೆಚ್ಚಾಗಿ ಅಂಥವರು- ಸರಕಾರಿ ವ್ಯವಸ್ಥೆಗಳು, ವಿಶ್ವವಿದ್ಯಾಲಯಗಳು, ಮಾಧ್ಯಮ ಸಂಸ್ಥೆಗಳು ಇಂತಹ ಒಂದು ಖಡಕ್ ಆದ ಸ್ವರೂಪ ( structure ) ಹೊಂದಿರುವ ವ್ಯವಸ್ಥೆಗಳು.
‘ತರ್ಕ’ ಆಧರಿಸಿ ಅಥವಾ ‘ವೈಜ್ಞಾನಿಕ’ ಮಾನಸಿಕತೆಯ ಮೂಲಕ ಕೇಳುವಂತವು. ಇಂತವಕ್ಕೆ ತಿಳಿಯುವಂತೆ ಹೇಳಲು ‘ಹೂತು ಹೋದ’ ಸಂಸ್ಕೃತಿಗಳಿಗೆ ಸಾಧ್ಯವಾಗುವುದಿಲ್ಲ. ಏಕೆಂದರೆ ಈ ಸಂಸ್ಕೃತಿಗಳು ಪಾಶ್ಚಾತ್ಯ ಅಥವಾ ಅಂತಹ ರೀತಿಯಲ್ಲಿ ಬದುಕುವವು ಅಥವಾ ಯೋಚನೆ ಮಾಡುವವುಗಳು ಅಲ್ಲವೇ ಅಲ್ಲ.
ಇವು ಬದುಕುವ, ಯೋಚಿಸುವ ವಿಧಾನ ಮತ್ತು ಲಯವೇ ಬೇರೆ. ‘ತಾರ್ಕಿಕತೆ’ ಮತ್ತು ‘ವೈಜ್ಞಾನಿಕತೆ’ ಪಾಶ್ಚಿಮಾತ್ಯ ವಿಧಾನಗಳು. ಆದರೆ ಪೌರಾತ್ಯ (ಹೆಚ್ಚು ಕಡಿಮೆ ಏಶಿಯಾದ, ಆಫ್ರಿಕಾದ) ವಿಶೇಷವಾಗಿ ಭಾರತೀಯ ಸಂಸ್ಕೃತಿಗಳು ತಮ್ಮ ಮಾತುಗಳನ್ನು ಹೇಳುವ ವಿಧಾನ ಬೇರೆಯೇ. ಅವು ತರ್ಕದ ಮೇಲೆ ಅವಲಂಬಿತವಾದವಲ್ಲ. ಈ ಸಂಸ್ಕೃತಿಗಳು ‘ಕಟ್ಟುಕಥೆ’, ಪುರಾಣ, (ಮಿಥ್) ಅಥವಾ ‘ಜನಪದೀಯ’/ ತರ್ಕ ಆಧರಿತವಲ್ಲದ ವಿಧಾನದಲ್ಲಿ ತಮ್ಮ ಕಥಾನಕಗಳನ್ನು/ ಮಾತುಗಳನ್ನು ಕಟ್ಟಿಕೊಳ್ಳುತ್ತವೆ.
ನಮ್ಮ ರಾಮಾಯಣ ಮತ್ತು ಮಹಾಭಾರತಗಳು ಕಥೆ ಹೇಳುವುದು ಹೀಗೆ. ಇಲ್ಲಿ ಕಥಾನಕಗಳಿಗೆ ಚೌಕಟ್ಟು ಇತ್ಯಾದಿ ಇರುವುದಿಲ್ಲ. ಬೇಕಿರುವುದಿಲ್ಲ. ನಮ್ಮ ಜನ ಮಾತನಾಡುವುದು ಕೂಡ ಹಾಗೆಯೇ. ಕಥೆ, ಉಪಕಥೆ, ಒಂದರೊಳಗೊಂದು ಬೆರೆತುಕೊಳ್ಳುತ್ತ ಮಾತು ಅಂಕುಡೊಂಕಾಗಿ, ಆಕೃತಿರಹಿತವಾಗಿ, ನಿರಂತರವಾಗಿ ಹರಿಯುತ್ತದೆ.
ಭಾರತೀಯ ಕಾದಂಬರಿಕಾರ ರಾಜಾರಾವ್ ಹೇಳುವಂತೆ ನಮ್ಮ ಮಾತುಗಳು ನಿಲ್ಲುವುದು ಉಸಿರು ನಿಂತಾಗ ಮಾತ್ರ. ಬ್ರಿಟಿಷ್ ಬರಹಗಾರ ಮಾರ್ಕ ಟುಲ್ಲಿ ಭಾರತದಲ್ಲಿ ಪೂರ್ಣಬಿಂದುಗಳೇ ಇಲ್ಲ ಎಂದು ಹೇಳಿದ್ದು ಕೂಡ ಈ ಹಿನ್ನೆಲೆಯಲ್ಲಿಯೇ. ನಮ್ಮ ಸಂಸ್ಕೃತಿಗಳ ಕಥೆಗಳು/ ಮಾತುಗಳು ಇಂತವು. ತಾರ್ಕಿಕತೆಯನ್ನು ಮೀರಿದ ಮಾತುಗಳು. ಉದಾಹರಣೆಗೆ ಕಾದಂಬರಿಕಾರ ರಾಜಾರಾವ್ ತಮ್ಮ ಕಾದಂಬರಿ (?) ’On the Ganga Ghat’ದಲ್ಲಿ ಹೇಳುವ ಒಂದು ಕಥೆಯನ್ನು ಗಮನಿಸಿ. ಕಲ್ಲು, ಕಟ್ಟಿಗೆ ಕಡಿಯುವ ಕೆಲಸದಲ್ಲಿರುವ ಯುವಕನೊಬ್ಬನಿಗೆ ಒಬ್ಬಳು ಪ್ರೇಯಸಿ ಇದ್ದಾಳೆ.
ಹಾಗಾಗಿ ಆತನಿಗೆ ತನ್ನ ಸುತ್ತಮುತ್ತ ಇರುವ ಹುಡುಗಿಯರ ಕುರಿತು ಆಸಕ್ತಿ ಇಲ್ಲ. ಅವರಿಂದ ಬಲು ದೂರ ಆತ. ಆದರೆ ವಿಷಯವೆಂದರೆ ಅವನ ಪ್ರೇಯಸಿ ಇರುವುದು ಅವನ ಕನಸಿನಲ್ಲಿ ಮಾತ್ರ. (ನಿಜವಾಗಿ ಅವಳು ಈ ಜಗತ್ತಿನಲ್ಲಿ ಇಲ್ಲ) ಅಥವಾ ಅವನ ಕಲ್ಪನೆಯಲ್ಲಿ ಮಾತ್ರ. ಆದರೆ ವಾಸ್ತವ ವನ್ನು ನಂಬಲು ಆತ ಸಿದ್ಧನಿಲ್ಲ. ಏಕೆಂದರೆ ವಾಸ್ತವದ ಕುರಿತಾದ ಆತನ ಗ್ರಹಿಕೆಯ ರೀತಿಯೇ ಬೇರೆ. ಅವನಿಗೆ ಅನಿಸುವಂತೆ ಆ ಹುಡುಗಿ ಇದ್ದಾಳೆ.
ಏಕೆಂದರೆ ಅವಳು ಅವನ ಕನಸಿನಲ್ಲಿ ಬರುತ್ತಾಳೆ ಮತ್ತು ಅವಳು ಬಂದಾಗ ಅವನ ಮೂಗಿಗೆ ದಟ್ಟವಾದ ಮಲ್ಲಿಗೆ ಹೂವಿನ ಪರಿಮಳ ಬರುತ್ತದೆ. ಅವಳನ್ನು ಭೆಟ್ಟಿಯಾಗುವ ಸಲುವಾಗಿ ಆತ ಆದಷ್ಟು ನಿದ್ರಿಸುತ್ತಲೇ ಇರುತ್ತಾನೆ. ನಿದ್ರೆ ಅಂದರೆ ಪರಮ ಪ್ರೀತಿ ಅವನಿಗೆ. ಏಕೆಂದರೆ ಅವಳು ಭೆಟ್ಟಿಯಾಗುವುದು ಅಲ್ಲಿ. ಆತನಿಗೆ ಅದು ವಾಸ್ತವ.
ಇಂಥಹುದೇ ಒಂದು ಕಥೆ ನಾನು ಚಿಕ್ಕವನಿದ್ದಾಗ ನೋಡಿದ ಹಾಲಕ್ಕಿ ಸಮುದಾಯದ ಯಕ್ಷಗಾನ ಒಂದರಲ್ಲಿ ಬರುತ್ತಿತ್ತು. ಅಲ್ಲಿ ಒಬ್ಬ ಕಾಡಿಗೆ ಹೋಗಿರುತ್ತಾನೆ. ಆತನನ್ನು ಹುಲಿಯೊಂದು ಅಟ್ಟಿಸಿಕೊಂಡು ಬರುತ್ತದೆ. ಆತ ಓಡಿ ಹೋಗಿ ಒಂದು ಎತ್ತರದ ಮರವನ್ನೇರಿ ಬಿಡುತ್ತಾನೆ. ಈಗ ಆ ಹುಲಿ ಆತ ಏರಿರುವ ಮರದ ಕೆಳಗೆ ಬಂದು ಜೋರಾಗಿ ಅರ್ಭಟಿಸುತ್ತದೆ. ಹೆದರಿದ ಆತನಿಗೆ ಉಚ್ಚೆ ಬಂದುಬಿಡುತ್ತದೆ. ಆದರೆ ಅವನ ಆ ಮೂತ್ರದ ಧಾರೆಯನ್ನೇ ಹಗ್ಗವಾಗಿಸಿಕೊಂಡ ಹುಲಿ ಅದನ್ನು ಹಗ್ಗದಂತೆ ಹಿಡಿದು ಮೇಲೇರಿ ಬಂದು ಆತನನ್ನು ತಿಂದುಬಿಡುತ್ತದೆ. ಅಂದರೆ ಉಚ್ಚೆಯೇ ಹಗ್ಗವಾಗಿ ಬಿಡುತ್ತದೆ. ನಮ್ಮ ಸಂಸ್ಕೃತಿಗಳ ಕಥೆಗಳು ಹೀಗೆ ವಾಸ್ತವಿಕ ಸತ್ಯವನ್ನು ಮೀರಿ ಹೇಳಲ್ಪಡುವವು. ನಮ್ಮ ಚರಿತ್ರೆಗಳು ಕೂಡ ಇದೇ ರೀತಿ ಹೇಳಲ್ಪಡುತ್ತವೆ.
ನಮ್ಮ ಪ್ರತಿರೋಧದ, ಹೋರಾಟದ ಮಾತುಗಳು ಕೂಡ ಹೀಗೆಯೇ. ಪಶ್ಚಿಮಕ್ಕಿಂತ ವಿಭಿನ್ನವಾಗಿಯೇ ಇರುವವು. ಗಮನಿಸಿ. ಗಾಂಧೀಜಿಯವರ ‘ಹೋರಾಟ’ ಆರಂಭವಾಗುತ್ತಿದ್ದುದು ಭಜನೆಯಿಂದ. ಮತ್ತು ಅವರ ಹೋರಾಟವೆಂದರೆ ಉಪವಾಸ ಕೂಡುವುದು. ಸಹಕರಿಸದೆ ಇರುವುದು. ಇವೆಲ್ಲ ಏನು? ಹೇಗೆ ಕೆಲಸ ಮಾಡುತ್ತವೆ? ಎಂಬುದು ಪಾಶ್ಚಿಮಾತ್ಯರಿಗೆ ಅರ್ಥವಾಗದ ವಿಷಯಗಳು.
ಇವೆಲ್ಲ ನೋಡಿಯೇ ಅವರು ಭಾರತ ಹಾವಾಡಿಗರ, ಮಾಂತ್ರಿಕರ ಇಂಥವರ ದೇಶ ಅಂದು ಕೊಂಡಿದ್ದು. ಗಮನಿಸಿ. ಈ ‘ಹುದುಗಿ ಹೋದ ಧ್ವನಿಗಳು’ ಮತ್ತು ಮಾತುಗಳು (ಹಾಡುಗಳು) ರೂಪಕಗಳು ಮತ್ತು ಸಂಕೇತಗಳಿಂದ ತುಂಬಿಹೋಗಿವೆ. ಹಾಗಾಗಿ ಹುದುಗಿಹೋದ ಧ್ವನಿಗಳ ಮಾತುಗಳು ನಾಗರಿಕವೆಂದು ಹೇಳಿಕೊಳ್ಳುವ ಜಗತ್ತಿಗೆ ಅರ್ಥವಾಗುವುದೇ ಇಲ್ಲ.
ಉದಾಹರಣೆಗೆ ಗಾನಕೋಗಿಲೆ ಅಂಕೋಲಾದ ಪದ್ಮಶ್ರೀ ಸುಕ್ರಿ ಗೌಡರ ಅದ್ಭುತ ಹಾಡುಗಳು ಏನನ್ನು ಹೇಳುತ್ತವೆ ಎನ್ನುವುದನ್ನು ಅರ್ಥೈಸುವುದು ಸುಲಭವಲ್ಲ. ನಿಗೂಢ ಸಂಸ್ಕೃತಿಯೊಂದರ ಮಾತುಗಳು ಅವು. ಸ್ಪಿವಾಕ್ ಹೇಳುವುದೆಂದರೆ, ಹೀಗೆಲ್ಲ ಆಗಿ ‘ಹುದುಗಿ ಹೋದ’ ಸಂಸ್ಕೃತಿಗಳಿಗೆ ‘ಮಾತನಾಡಲು’ ಬರುವುದಿಲ್ಲ.
ಆದರೆ ಸ್ಪಿವಾಕ್ ಹೇಳುವ ಮೂರನೆಯ ಮಾತು ಸಮಕಾಲೀನ ಸಂದರ್ಭದಲ್ಲಿ ಹೆಚ್ಚು ಪ್ರಸ್ತುತ ವಾದುದು. ಆಕೆ ಹೇಳುವಂತೆ ಇಂತಹ ಹೂತು ಹೋದ ಸಮುದಾಯಗಳಿಗೆ ತಮ್ಮ ಮಾತನ್ನು ಆಡಲು ಎಂದೂ, ಎಂದೆಂದೂ ಸಾಧ್ಯವಾಗುವುದಿಲ್ಲ. ಏಕೆಂದರೆ ಅವರ ಮಾತುಗಳನ್ನು ಈಗ ಬೇರೆಯವರು ಕದ್ದುಬಿಟ್ಟಿದ್ದಾರೆ. ಅಂದರೆ ಅವರ ಪರವಾಗಿ ಮಾತನಾಡುವ ಪೇಟೆಂಟ್ ಪಡೆದಂತೆ, ಅವರ ಸಂಸ್ಕೃತಿಯ ಯಜಮಾನಿಕೆ ಪಡೆದಂತೆ ಇರುವ ಬೇರೆಯವರು, ವಂಚಕರು ಅವರ ಮಾತುಗಳನ್ನು ಕದ್ದುಬಿಟ್ಟಿದ್ದಾರೆ. ಅವರ ಮೂಲ ಧ್ವನಿಗಳನ್ನು ತಿರುಚಿ, ವಿರೂಪಗೊಳಿಸಿ ಬಿಟ್ಟಿದ್ದಾರೆ.
ಮುಖ್ಯವಾಗಿ ಹೀಗಾಗಿ ‘ಹೂತು ಹೋದ’ ಧ್ವನಿಗಳಿಗೆ ತಮ್ಮ ಮೂಲ ಮಾತುಗಳನ್ನು ತಿರುಗಿ ಪಡೆ ಯಲು, ಆಡಲು ಸಾಧ್ಯವೇ ಇಲ್ಲ. ಸ್ಪಿವಾಕ್ ಹೇಳುವ ಈ ಅಪ್ಪಟ ಸತ್ಯದ ಮಾತನ್ನು ಅರ್ಥ ಮಾಡಿ ಕೊಳ್ಳುವುದಿದ್ದರೆ ಸಮಕಾಲೀನ ಭಾರತದ ಕೆಲವು ವಿಷಯಗಳನ್ನು ಗಮನಿಸಬೇಕು.
‘ಹೂತು ಹೋದ ಮಾತು’ಗಳನ್ನು ಹೇಗೆ ಬೇರೆಯವರು ಕದ್ದುಬಿಟ್ಟಿದ್ದಾರೆ ಎಂಬುದನ್ನು ಗಮನಿಸ ಬೇಕು. ಉದಾಹರಣೆಗೆ ಕೆಲವು ವರ್ಷಗಳ ಹಿಂದೆ ಸಾವಿಗೀಡಾದ ಕರ್ನಾಟಕದ ‘ಪತ್ರಿಕೆ’ ಯೊಂದರ ಸಂಪಾದಕಿಯೊಬ್ಬರು ಮಹಿಳೆಯರ ಹಕ್ಕಿನ, ಪಿತೃಪ್ರಧಾನ ಸಮಾಜದ ಕುರಿತು ‘ಮಹಿಳೆಯರ ಧ್ವನಿಯಾಗಿ’ ಮಾತನಾಡುತ್ತಿದ್ದರು.
ಮಹಿಳಾ ಧ್ವನಿಗಳನ್ನು ಗುತ್ತಿಗೆ ತೆಗೆದುಕೊಂಡಂತೆ ಮಾತನಾಡುತ್ತಿದ್ದರು. (ಎಂತಹ ಮಾತುಗಳು ಎಂದರೆ ಕೇಳಲು ಮಹಿಳೆಯರಿಗೇ ಮುಜುಗರವಾಗುವಂತವು.) ಆದರೆ ನಿಜವಾಗಿಯೂ ಆ ಮಾತುಗಳು ದಮನಿತರ ಧ್ವನಿಗಳ ವಿರೂಪಗೊಳಿಸಿದ ಮಾತಾಗಿದ್ದವು ಎಂಬುದು ಎಲ್ಲರಿಗೂ ಗೊತ್ತಿದೆ. ಹಾಗೆಯೇ ಸಮಾಜವಾದದ ಮಾತನಾಡುವ ಉತ್ತರ ಪ್ರದೇಶದ ಸಮಾಜವಾದಿ ಪಕ್ಷ ಮೂಲತಃ ಊಳಿಗಮಾನ್ಯ(ಫ್ಯೂಡಲ್) ಮನಸ್ಥಿತಿಯದು.
ಸಂಸತ್ತು ಮತ್ತು ವಿಧಾನಸಭೆಯಲ್ಲಿ ಮಹಿಳೆಯರಿಗೆ ಸೀಟುಗಳನ್ನು ಮೀಸಲಿಡುವ ಕಾನೂನಿನ ವಿರೋಧವಾಗಿರುವ ಪಕ್ಷ ಅದು. ಅದು ನಿಜಕ್ಕೂ ಸಮಾಜವಾದಿ ಧ್ವನಿಗಳನ್ನು ಅಪಹರಿಸಿಬಿಟ್ಟಿದೆ. ಹಾಗೆಯೇ ದೇಶದಲ್ಲಿ ‘ಅಲ್ಪಸಂಖ್ಯಾತರ’ ರಕ್ಷಣೆಗೆ ನಿಂತಿರುವ ಬಹುತೇಕ ರಾಜಕೀಯ ಪಕ್ಷಗಳು ಆ ಸಮುದಾಯದ ಮಹಿಳೆಯರ ವಿರುದ್ಧವಾಗಿ ಇರುವಂತವು. ಅವರ ಧ್ವನಿಯನ್ನು ಹತ್ತಿಕ್ಕಿದವು. ಮಮತಾ ಬ್ಯಾನರ್ಜಿ ಅಲ್ಪಸಂಖ್ಯಾತರ ಮಾತುಗಳಿಗೆ (ನಕಲಿ) ಧ್ವನಿಯಾಗಿರುವ ಹಾಗೆ. ಇಂತಹ ನೂರಾರು ಉದಾಹರಣೆಗಳನ್ನು ಕೊಡಬಹುದು. ಆದರೆ ಬೇಡ.
ಸ್ಪಿವಾಕ್ ಹೇಳುತ್ತಿರುವುದು ಇದು. ಏನೆಂದರೆ ಹೀಗೆ ಶೋಷಿತರ ನಿಜದ ಮಾತುಗಳನ್ನು ಮುಖವಾಡ ಧರಿಸಿದವರು ಕದ್ದುಬಿಟ್ಟಿದ್ದಾರೆ. ಅಂತಹವರಿಂದ ತಮ್ಮ ಮಾತುಗಳನ್ನು ಬಿಡಿಸಿಕೊಳ್ಳಲು ದಮನಿತ ರಿಗೆ ಸಾಧ್ಯವಾಗುತ್ತಲೇ ಇಲ್ಲ. ದೊಡ್ಡ ಸಮಸ್ಯೆ ಇದು. ತಮ್ಮ ವಕ್ತಾರರಿಂದಲೇ, ನಾಯಕರು ಗಳಿಂದಲೇ ತಮ್ಮ ಮಾತುಗಳನ್ನು ಪ್ರತ್ಯೇಕಿಸಿ ಹೇಳುವುದು. ತಮ್ಮ ‘ಪರವಾಗಿ’ ಮಾತನಾಡುವವರ ವಿರುದ್ಧವೇ ಬಂಡೆದ್ದು ತಮ್ಮ ಅಸಲಿ ಮಾತುಗಳನ್ನು ಹೇಳುವುದು.
ಇಂತಹ ವರ್ಗಗಳಿಗೆ ತಮ್ಮ ಮಾತನ್ನು ಕಟ್ಟಿಕೊಳ್ಳಲು ಸಾಧ್ಯವಿದೆಯೇ? ಇದು ಪ್ರಶ್ನೆ. ಅದು ಸಾಧ್ಯ ವಿದೆ. ಆದರೆ ಹಾಗೆ ಮಾಡುವುದಿದ್ದರೆ ಇಂತಹ ವರ್ಗಗಳು ಈಗಿರುವ ತಮ್ಮ ಸುಳ್ಳು ನಾಯಕರನ್ನು ಬದಿಗೆ ಬದಿಗೆ ಸರಿಸಿ ತಾವೇ ಮಾತನಾಡಲು ಆರಂಭಿಸಬೇಕು. ತಮ್ಮ ಧ್ವನಿಯನ್ನು ಕದ್ದಿರುವ ಸುಳ್ಳು ನಾಯಕರ ವಿರುದ್ಧವೇ ಅವರು ಬಂಡೆದ್ದಾಗ ಮಾತ್ರ ಅವುಗಳಿಗೆ ತಮ್ಮ ಒಳಗಿನ ಮಾತನ್ನು ವಾಪಸು ಪಡೆಯಲು, ಹೇಳುವುದು ಸಾಧ್ಯವಿದೆ.