ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ಭಗವದ್ಗೀತೆಯ ಸಾರ ತಿಳಿದವರು

ಜೀವನದಲ್ಲಿ ಅನೇಕ ಸಂದರ್ಭಗಳಲ್ಲಿ, ಕಷ್ಟದಲ್ಲಿರುವವರನ್ನು ನೋಡಿದಾಗ ಅವರಿಗೆ ಏನಾದರೂ ಮಾಡಬೇಕು ಅನ್ನುವ ತುಡಿತ, ಮಾನವೀಯ ಮೌಲ್ಯ, ವೈಚಾರಿಕತೆ ಇವೆಲ್ಲವನ್ನೂ ರೂಢಿಸಿಕೊಂಡಾಗ ನಾವು ಗಳಿಸಿದ ವಿದ್ಯೆಗೂ ಒಂದು ಮೌಲ್ಯ. ಅದಿಲ್ಲದೆ ‘ನಾನು ಮಾತ್ರ ಉದ್ಧಾರವಾಗ ಬೇಕು, ನನ್ನ ಕುಟುಂಬ ಚೆನ್ನಾಗಿದ್ದರೆ ಸಾಕು, ನಾನು ನನ್ನದು’ ಎನ್ನುವ ಸ್ವಾರ್ಥದ ಆಲೋಚನೆಗಳ ಬಂದಿಯಾದವರು ಸಮಾಜಕ್ಕೆ ಒಂದು ಹೊರೆ ಎಂತಲೇ ಹೇಳಬೇಕು.

Roopa Gururaj Column: ಭಗವದ್ಗೀತೆಯ ಸಾರ ತಿಳಿದವರು

-

ಒಂದೊಳ್ಳೆ ಮಾತು

ಒಬ್ಬ ರಾಜ ತನಗೆ ಭಗವದ್ಗೀತೆಯನ್ನು ಯಾರು ಅರ್ಥ ಮಾಡಿಸುವರೋ ಅವರಿಗೆ ಅರ್ಧ ರಾಜ್ಯ ಕೊಡುವುದಾಗಿ ಘೋಷಣೆ ಮಾಡಿದ. ಇದನ್ನು ಕೇಳಿ ಅನೇಕ ಪಂಡಿತರು ರಾಜನಿಗೆ ಗೀತೆ ಕಲಿಸಲು ಬಂದರು. ಆದರೆ ರಾಜನ ಒಂದೆರಡು ಪ್ರಶ್ನೆಗಳಿಗೆ ಹೆದರಿ ಹಿಂದಿರುಗಿದರು. ಒಬ್ಬ ಮಹಾಪಂಡಿತ ಬಂದು ರಾಜನ ಪ್ರಶ್ನೆಗಳಿಗೆ ಉತ್ತರ ಹೇಳಿ ಗೀತೆಯನ್ನು ಕಲಿಸಿದ. ರಾಜ ಆತನ ವಿದ್ವತ್ತನ್ನು ಮೆಚ್ಚಿ ದಕ್ಷಿಣೆಯನ್ನು ನೀಡಿ ಗೌರವಿಸಿದ. ಆದರೆ ಅರ್ಧ ರಾಜ್ಯ ಕೊಡಲಿಲ್ಲ.

ಪಂಡಿತ ಪಟ್ಟು ಹಿಡಿದ. ಗೀತೆಯು ತನಗೆ ಸರಿಯಾಗಿ ಅರ್ಥವಾಗಿಲ್ಲವೆಂದು ರಾಜ ಜಾರಿಕೊಂಡ. ಪಂಡಿತ ಬಿಡಲಿಲ್ಲ. ತೀರ್ಮಾನಕ್ಕೆ ವಿಂಧ್ಯಾಚಲದ ತಪೋವನದಲ್ಲಿರುವ ಮುನಿಯ ಬಳಿಗೆ ಕರೆದೊಯ್ದ. ಮುನಿಗಳು, “ನೀನು ರಾಜನಿಗೆ ಗೀತೆ ಕಲಿಸಿದ್ದು ನಿಜವೇ?" ಎಂದು ಪ್ರಶ್ನಿಸಿದರು.

“ಪ್ರತಿ ಪದದ ಪ್ರಕೃತಿ ಪ್ರತ್ಯಯ, ಭಿನ್ನ ಭಿನ್ನ ಅರ್ಥ ಎಲ್ಲಾ ತಿಳಿಸಿದ್ದೇನೆ" ಎಂದ ಪಂಡಿತ. ರಾಜನಿಗೆ ಪ್ರಶ್ನಿಸಿದಾಗ ಹೌದೆಂದು ಒಪ್ಪಿದ. ಆಗ ಮುನಿಗಳು, “ನೀನು ಕಲಿಸಿಯೂ ಇಲ್ಲ, ರಾಜ ಅದನ್ನು ಕಲಿತೂ ಇಲ್ಲ. ಗೀತೆಯನ್ನು ನೀನು ತಿಳಿದ ವನಾದರೆ ನಿನಗೆ ರಾಜ್ಯದ ಲೋಭವೇಕೆ? ರಾಜನು ಗೀತೆಯನ್ನು ಅರ್ಥ ಮಾಡಿಕೊಂಡಿದ್ದರೆ ಕೊಟ್ಟ ಮಾತು ಉಳಿಸಿಕೊಳ್ಳಲು ಹಿಂಜರಿಕೆ ಏಕೆ? ನಾಲಿಗೆ -ಹೃದಯದಲ್ಲಿ ಶುದ್ಧಿ ಇಲ್ಲದ ಮೇಲೆ ಗೀತೆ ಕಲಿತರೇನು?" ಎಂದರು. ರಾಜ , ಪಂಡಿತ ಇಬ್ಬರಿಗೂ ಮುನಿಗಳ ಮಾತು ಅರ್ಥವಾಗಿ ತಲೆತಗ್ಗಿಸಿದರು.

ಇದನ್ನೂ ಓದಿ: Roopa Gururaj Column: ಬದುಕಿರುವ ಕೊನೆಯ ಕ್ಷಣದವರೆಗೂ ಕಲಿಕೆ ನಿಲ್ಲುವುದಿಲ್ಲ

ನಿಜ ಜೀವನದಲ್ಲೂ ನಮ್ಮ ಸುತ್ತಲೂ ಅನೇಕ ವಿದ್ಯಾವಂತರನ್ನು ನೋಡುತ್ತೇವೆ. ಹೆಸರಿಗೆ ಡಿಗ್ರಿ, ಡಬಲ್ ಡಿಗ್ರಿ ಮಾಡಿಕೊಂಡಿರುತ್ತಾರೆ. ಆದರೆ ಅವರ ಓದಿಗೂ ಅವರ ಸಂಸ್ಕಾರಕ್ಕೂ ಸಂಬಂಧವೇ ಇರುವು ದಿಲ್ಲ. ಹೆಚ್ಚು ಓದಿದವರಿಗೂ ಕೆಲವೊಮ್ಮೆ ಸಾಮಾನ್ಯ ಜ್ಞಾನ ಕಡಿಮೆ ಇರುವುದನ್ನು ನೋಡುತ್ತೇವೆ.

ವಿದ್ಯಾರ್ಜನೆ ಮಾಡಿದ ಕ್ಷಣ ಜೀವನ ಮೌಲ್ಯಗಳು ಮನವರಿಕೆ ಆಗಿರುತ್ತವೆ ಎಂದು ಯಾವ ಗ್ಯಾರಂಟಿ ಯೂ ಇಲ್ಲ. ತಂದೆ ತಾಯಿಗಳು ಮಕ್ಕಳನ್ನು ಬೆಳೆಸುವಾಗ ಬದುಕಿಗೆ ಬೇಕಾದಂಥ ಅನೇಕ ವಿಷಯ ಗಳನ್ನು ಅವರಿಗೆ ತಿದ್ದಿ ತೀಡಿ ಕಲಿಸಿ, ಬೆಳೆಸಬೇಕಾಗುತ್ತದೆ. ಬದುಕು ನಡೆಸಲು ವಿದ್ಯಾರ್ಜನೆ ಒಂದೇ ಸಾಲದು, ಜೀವನ ಕೌಶಲ, ಸಾಮಾನ್ಯ ಜ್ಞಾನ, ಹತ್ತು ಜನರೊಡನೆ ಬೆರೆತು ಬದುಕುವ ಕಲೆ ಎಲ್ಲವೂ ಗೊತ್ತಿರಬೇಕಾಗುತ್ತದೆ.

ಅದಿಲ್ಲದೆ ಹೋದರೆ ಅವರು ಅದೆಂಥ ಮೇಧಾವಿಗಳಾದಾರು? ಹತ್ತು ಜನರೊಡನೆ ಬೆರೆತು ಹೇಗೆ ನಡೆದುಕೊಳ್ಳಬೇಕು ಎನ್ನುವ ಸಾಮಾನ್ಯ ಜ್ಞಾನವೂ ಇಲ್ಲದೆ ಎಲ್ಲರ ಹತ್ತಿರ ನಿಷ್ಠುರ ವಾಗಬೇಕಾಗುತ್ತದೆ. ಜೀವನದಲ್ಲಿ ಅನೇಕ ಸಂದರ್ಭಗಳಲ್ಲಿ, ಕಷ್ಟದಲ್ಲಿರುವವರನ್ನು ನೋಡಿದಾಗ ಅವರಿಗೆ ಏನಾದರೂ ಮಾಡಬೇಕು ಅನ್ನುವ ತುಡಿತ, ಮಾನವೀಯ ಮೌಲ್ಯ, ವೈಚಾರಿಕತೆ ಇವೆಲ್ಲವನ್ನೂ ರೂಢಿಸಿಕೊಂಡಾಗ ನಾವು ಗಳಿಸಿದ ವಿದ್ಯೆಗೂ ಒಂದು ಮೌಲ್ಯ. ಅದಿಲ್ಲದೆ ‘ನಾನು ಮಾತ್ರ ಉದ್ಧಾರವಾಗ ಬೇಕು, ನನ್ನ ಕುಟುಂಬ ಚೆನ್ನಾಗಿದ್ದರೆ ಸಾಕು, ನಾನು ನನ್ನದು’ ಎನ್ನುವ ಸ್ವಾರ್ಥದ ಆಲೋಚನೆಗಳ ಬಂದಿಯಾದವರು ಸಮಾಜಕ್ಕೆ ಒಂದು ಹೊರೆ ಎಂತಲೇ ಹೇಳಬೇಕು.

ಅವರಿಂದ ಯಾರಿಗೂ ಕಿಂಚಿತ್ತೂ ಸಹಾಯ ಆಗುವುದಿಲ್ಲ, ಅವರು ಬೆಳೆಸುವ ಮಕ್ಕಳು ಕೂಡ ಸಮಾಜಕ್ಕೆ ಹೊರೆಯಾಗುತ್ತಾರೆ. ಆದ್ದರಿಂದಲೇ ವಿದ್ಯಾರ್ಜನೆಯ ಜತೆಗೆ ಜೀವನ ಕೌಶಲ, ಮಾನವೀಯ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಕೂಡ ಬಹಳ ಮುಖ್ಯ ವಾಗುತ್ತದೆ.

ಇವುಗಳಿಂದ ನಮಗೆ ಯಾವುದೇ ರೀತಿಯ ಆರ್ಥಿಕ ಸಹಾಯ ಆಗದೆ ಹೋದರೂ, ಬೌದ್ಧಿಕವಾಗಿ ಇವು ನಮ್ಮನ್ನು ಸಮಾಜದಲ್ಲಿ ಬಹಳ ಎತ್ತರಕ್ಕೆ ಕೊಂಡೊಯ್ಯುವ ಸಾಮರ್ಥ್ಯವಿರುವ ಗುಣ ಗಳಾಗಿರುತ್ತವೆ. ನಾವು ಇವನ್ನು ಅಳವಡಿಸಿಕೊಂಡಾಗ ನಮ್ಮ ಸುತ್ತಲೂ ಇರುವ ಅನೇಕರನ್ನು ನಾವು ಚೆನ್ನಾಗಿ ನೋಡಿಕೊಂಡು ನೂರಾರು ಜನರಿಗೆ ಮಾದರಿಯಾಗಿ ಬದುಕುವ ಜೀವವಾಗುತ್ತೇವೆ. ಇಂಥ ಸಮಾಜಮುಖಿ ಜೀವನ ನಮ್ಮೆಲ್ಲರದೂ ಆಗಲಿ ಎನ್ನುವ ಶುಭ ಹಾರೈಕೆ ಮಾತ್ರ ನನ್ನದು...