M J Akbar Column: ಟ್ರಂಪ್ʼರ ಎಡವಟ್ಟುಗಳು
ಒಂದು ಶತಮಾನದ ಹೋರಾಟ ಹಾಗೂ ಸಾಧನೆಯ ಬಳಿಕ ಭಾರತವಿಂದು ಆರ್ಥಿಕ ವಿಕ್ರಮದ ಮುಂಚೂಣಿಗೆ ಬಂದಿದೆ. ಟ್ರಂಪ್ ನೀಡಿದ ಮಾಹಿತಿಯಲ್ಲಿ ಎಡವಟ್ಟುಗಳೇ ತುಂಬಿವೆ. ರಷ್ಯಾದಿಂದ ಭಾರತ ಹೆಚ್ಚು ತೈಲ ಖರೀದಿಸುತ್ತಿರುವುದರಿಂದ ಭಾರತಕ್ಕೆ ಹೆಚ್ಚು ಟ್ಯಾಕ್ಸ್ ಹಾಕುತ್ತೇನೆ ಎಂದು ಟ್ರಂಪ್ ಬಡಬಡಿಸಿದ್ದರು.

-

ಅಕ್ಬರ್ ನಾಮಾ
ಎಂ.ಜೆ.ಅಕ್ಬರ್
ಭಾರತ’ ಎಂದರೆ ಸಾಕು ಈಗ ಟ್ರಂಪ್ ಮೈಮೇಲೆ ಗುಳ್ಳೆಯೇಳುತ್ತದೆ. ಕಾರಣ ಎಲ್ಲರಿಗೂ ಗೊತ್ತಿದೆ. ಟ್ರಂಪ್ ಅತಿರೇಕದ ಸುಂಕ ಹೇರುತ್ತಿದ್ದಂತೆ ವಿವಿಧ ದೇಶಗಳು ಅದನ್ನು ಇಳಿಸುವಂತೆ ಅಮೆರಿಕಕ್ಕೆ ದುಂಬಾಲು ಬಿದ್ದವು ಅಥವಾ ತಮ್ಮಲ್ಲಿ ಟ್ರಂಪ್ ಟವರ್ ನಿರ್ಮಿಸಲು ಜಾಗ ಕೊಡುವುದೋ, ಇನ್ನೇ ನೋ ಹೊಂದಾಣಿಕೆ ಮಾಡಿಕೊಂಡು ಮಂಡಿಯೂರಿದವು. ಆದರೆ ಪ್ರಧಾನಿ ಮೋದಿ ಮಾತ್ರ ಟ್ರಂಪ್ ಕನಸಿನಲ್ಲೂ ಯೋಚಿಸಿರದ ಕೆಲಸ ಮಾಡಿಬಿಟ್ಟರು.
ಅವರು ಟ್ರಂಪ್ ವಿಧಿಸಿದ ಟ್ಯಾರಿಫ್ ಗೇ ಸವಾಲೆಸೆದು, ‘ಇದು 21ನೇ ಶತಮಾನದ ವಸಾಹತೀಕರಣ’ ಎಂದರು ಬಹಿರಂಗವಾಗಿ. ಟ್ರಂಪ್‌ರನ್ನು ಗೋಗರೆಯುವ ಬದಲು, ಸ್ವತಃ ಟ್ರಂಪ್ 4 ಬಾರಿ ಕರೆ ಮಾಡಿದರೂ ಮೋದಿ ಸ್ವೀಕರಿಸಲಿಲ್ಲ. ಕುತ್ತಿಗೆ ಅಮುಕಿಹಿಡಿದು ಚೌಕಾಶಿ ಮಾಡುವಾತನಿಗೆ ಈಗ ಬಹುಶಃ ಭಾರತವೊಂದು ದುಃಸ್ವಪ್ನವಾಗಿ ಕಾಡತೊಡಗಿದೆ.
ಯುರೋಪಿನ ವಸಾಹತುಶಾಹಿ ಆಡಳಿತದಿಂದ ಬಿಡಿಸಿಕೊಂಡು ಸ್ವಾತಂತ್ರ್ಯ ಪಡೆಯಲು ಭಾರತವು ಸ್ವದೇಶಿ ಮಾರ್ಗ ಹಿಡಿದಿದ್ದನ್ನು ಮೋದಿ ಭಾರತೀಯರಿಗೆ ನೆನಪಿಸಿದ್ದಾರೆ. ಅದರ ಬೆನ್ನಲ್ಲೇ ಅಮೆರಿಕದ ತೆರಿಗೆಗೆ ಭಾರತೀಯರು ‘ಭಾರತೀಯ ವಸ್ತುವನ್ನೇ ಖರೀದಿಸಿರಿ, ಭಾರತೀಯರಾಗಿರಿ’ ಎಂಬ ಒಗ್ಗಟ್ಟಿನ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: M J Akbar Column: ಅಮೆರಿಕವನ್ನು ದುರ್ಬಲಗೊಳಿಸುತ್ತಿರುವ ಸುಳ್ಳಿನ ದೇವರು
1920ರ ದಶಕದಲ್ಲಿ ಗಾಂಧೀಜಿ ಚರಕವನ್ನು ಸ್ವಾತಂತ್ರ್ಯದ ಚಿಹ್ನೆಯನ್ನಾಗಿಸಿದ್ದರು; ಮೊನ್ನೆ ಆಗಸ್ಟ್ 26ರಂದು ಮೋದಿ, ಮಾರುತಿ ಸುಜುಕಿಯ ಮೊದಲ ಇಲೆಕ್ಟ್ರಿಕ್ ವಾಹನ ‘ಇ-ವಿಟಾರಾ’ವನ್ನು ಲೋಕಾರ್ಪಣೆ ಮಾಡಿದರು. ಇದು ಜಗತ್ತಿಗಾಗಿ ‘ಮೇಡ್ ಇನ್ ಇಂಡಿಯಾ’ ಇಲೆಕ್ಟ್ರಿಕ್ ಕಾರು. ಅದರ ಬೆನ್ನಲ್ಲೇ ಮಾರುತಿ ಸುಜುಕಿ ಕಂಪನಿ ಭಾರತದಲ್ಲಿ 70000 ಕೋಟಿ ರು. ಹೂಡಿಕೆಯನ್ನು ಘೋಷಿಸಿತು.
ಒಂದು ಶತಮಾನದ ಹೋರಾಟ ಹಾಗೂ ಸಾಧನೆಯ ಬಳಿಕ ಭಾರತವಿಂದು ಆರ್ಥಿಕ ವಿಕ್ರಮದ ಮುಂಚೂಣಿಗೆ ಬಂದಿದೆ. ಟ್ರಂಪ್ ನೀಡಿದ ಮಾಹಿತಿಯಲ್ಲಿ ಎಡವಟ್ಟುಗಳೇ ತುಂಬಿವೆ. ರಷ್ಯಾದಿಂದ ಭಾರತ ಹೆಚ್ಚು ತೈಲ ಖರೀದಿಸುತ್ತಿರುವುದರಿಂದ ಭಾರತಕ್ಕೆ ಹೆಚ್ಚು ಟ್ಯಾಕ್ಸ್ ಹಾಕುತ್ತೇನೆ ಎಂದು ಟ್ರಂಪ್ ಬಡಬಡಿಸಿದ್ದರು.
ಆದರೆ ಭಾರತಕ್ಕಿಂತ ಹೆಚ್ಚು ರಷ್ಯನ್ ತೈಲವನ್ನು ಚೀನಾ ಖರೀದಿಸುತ್ತಿದೆ. ಇನ್ನೊಂದೆಡೆ, ಜರ್ಮನಿ ಯೇ ಮೊದಲಾದ ಟ್ರಂಪ್‌ರ ಐರೋಪ್ಯ ಮಿತ್ರದೇಶಗಳು ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸಿಲ್ಲ. ಅವು ರಷ್ಯಾ ವಿರುದ್ಧದ ಯುದ್ಧದಲ್ಲಿ ಉಕ್ರೇನ್‌ನ ಪರ ವಹಿಸಿವೆ. ಹಾಗಿದ್ದರೆ ಭಾರತದ ಬಗೆಗಿನ ಟ್ರಂಪ್‌ರ ತಾರತಮ್ಯಕ್ಕೆ ಕಾರಣವೇನು? ಅವರ ಸುಳ್ಳು ಮಾತು ಜಗಜ್ಜಾಹೀರಾಗುತ್ತಿದ್ದಂತೆ ಭಾರತದ ವಿಶ್ವಾಸಾರ್ಹತೆ ಹೆಚ್ಚಿದೆ.
ಮೋದಿಯವರು ‘ಭಾರತದ ವ್ಯೂಹಾತ್ಮಕ ಸ್ವಾಯತ್ತತೆಯನ್ನು ಪ್ರಶ್ನಿಸಲು ಯಾರಿಗೂ ಅಧಿಕಾರ ವಿಲ್ಲ’ ಎಂದಿದ್ದಾರೆ. ಟ್ರಂಪ್‌ರನ್ನು ಭೇಟಿಯಾಗಲು ಪುಟಿನ್ ಅಲಾಸ್ಕಾಗೆ ಹೊರಡುವುದಕ್ಕೂ ಮೊದಲೇ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮಾಸ್ಕೋಗೆ ಹೋಗಿ ಪುಟಿನ್‌ರನ್ನು ಭೇಟಿಯಾಗಿ ಬಂದಿದ್ದಾರೆ ಇತ್ತ ಭಾರತ-ಚೀನಾಗಳು ಹಳ್ಳ ಹಿಡಿದಿದ್ದ ತಮ್ಮ ಸಂಬಂಧವನ್ನು ಸರಿಪಡಿಸಿಕೊಂಡವು.
ಆಗಸ್ಟ್ ಅಂತ್ಯದಲ್ಲಿ ಮೋದಿ ಚೀನಾಕ್ಕೆ ಹೊರಡುವುದಕ್ಕೂ ಮೊದಲೇ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಭಾರತಕ್ಕೆ ಬಂದು ಅಜಿತ್ ದೋವಲ್ ಜತೆ ಮಾತುಕತೆ ನಡೆಸಿದರು. ಟ್ರಂಪ್‌ರ ತಾರತಮ್ಯಕ್ಕೆ ಚೀನಾ ಕೂಡ ಟಾಂಗ್ ನೀಡತೊಡಗಿತು. ‘ಚೀನಾ ತನ್ನ ಅಪರೂಪದ ಖನಿಜಗಳನ್ನು ಅಮೆರಿಕಕ್ಕೆ ಪೂರೈಸದಿದ್ದರೆ ಶೇ.200ರಷ್ಟು ತೆರಿಗೆ ವಿಧಿಸುತ್ತೇನೆ; ನಾನು ಸರಿಯಾಗಿ ಆಟವಾಡಿದರೆ ಚೀನಾ ಸರ್ವನಾಶವಾಗುತ್ತದೆ’ ಎಂದು ಟ್ರಂಪ್ ಹೆದರಿಸಿದ್ದರು.
ಅದಕ್ಕೆ ಪ್ರತಿಯಾಗಿ ಚೀನಾ ತಾನು ಭಾರತದ ಜತೆಗೆ ಖನಿಜ ವ್ಯಾಪಾರ ಪುನರಾರಂಭಿಸುವುದಾಗಿ ಪ್ರಕಟಿಸಿತು. ಮೋದಿಯೀಗ 7 ವರ್ಷದ ಬಳಿಕ ಚೀನಾಕ್ಕೆ ಭೇಟಿಯಿತ್ತು, ಅಲ್ಲಿನ ಶಾಂಘೈ ಸಹಕಾರ ಶೃಂಗದಲ್ಲಿ ಪಾಲ್ಗೊಂಡಿದ್ದಾರೆ. ಮೋದಿ-ಪುಟಿನ್ -ಜಿನ್‌ಪಿಂಗ್ ಮೇಲೆ ಜಗತ್ತೇ ಕಣ್ಣು ನೆಟ್ಟಿದೆ. ಅದು ವಾಷಿಂಗ್ಟನ್‌ಗೆ ಭೀತಿ ಹುಟ್ಟಿಸಿದೆ. ಈ ಮೂವರೂ ಸೇರಿ ಉಕ್ರೇನ್ ವಿಷಯದಲ್ಲಿನ ಟ್ರಂಪ್‌ರ ಲೆಕ್ಕಾ ಚಾರವನ್ನು ಬುಡಮೇಲು ಮಾಡುತ್ತಾರೆಯೇ? ಟ್ರಂಪ್‌ಗೆ ಉಕ್ರೇನ್ ಅಧ್ಯಕ್ಷ ಜೆಲೆನ್‌ಸ್ಕಿ ಕೊಡಬೇಕಾದ ಬಾಕಿಯೇನೂ ಇಲ್ಲ.
ಅವರಿಗೆ ಶ್ವೇತಭವನದಲ್ಲಿ ಈಗಾಗಲೇ ಮುಖಭಂಗವಾಗಿದೆ. ಅದಕ್ಕಿಂತ ಹೆಚ್ಚಾಗಿ ಅಮೆರಿಕದ ಅಧಿಕಾರಿಗಳು ಉಕ್ರೇನ್ ಮೇಲೆ ನಾವಿನ್ನು ಒಂದೇ ಒಂದು ಡಾಲರ್ ಕೂಡ ಹೆಚ್ಚು ಖರ್ಚು ಮಾಡುವುದಿಲ್ಲ ಎನ್ನುತ್ತಾ ಮರ್ಯಾದೆ ಕಳೆಯುತ್ತಿದ್ದಾರೆ. ಅಷ್ಟಕ್ಕೂ, ಉಕ್ರೇನ್ ವಿಷಯದಲ್ಲಿ ಅಮೆರಿಕಕ್ಕೆ ಲಾಭವೇ ಆಗುತ್ತಿದೆ. ಅಮೆರಿಕದ ಕಂಪನಿಗಳು ಉಕ್ರೇನ್‌ಗೆ ಶಸ್ತ್ರಾಸ್ತ್ರಗಳನ್ನು ಮಾರುತ್ತಿವೆ.
ಅದಕ್ಕೆ ಅಮೆರಿಕ ಶೇ.10ರಷ್ಟು ಹೆಚ್ಚು ತೆರಿಗೆ ವಿಧಿಸುತ್ತಿದೆ. ಅಮೆರಿಕದ ಜತೆಗೆ ಕೈಜೋಡಿಸಿ ಉಕ್ರೇನ್‌ಗೆ ನೆರವಾಗುತ್ತೇನೆ ಎಂದಿದ್ದ ಯುರೋಪ್ ಈಗ ಅಮೆರಿಕ ಹಿಂದೆ ಸರಿದ ಮೇಲೂ ಮಾತು ಉಳಿಸಿ ಕೊಳ್ಳಲು ಯತ್ನಿಸುತ್ತಾ ಅಸಹಾಯಕನಾಗಿ ನಷ್ಟ ಅನುಭವಿಸುತ್ತಿದೆ. ಜರ್ಮನಿಯ ಏಂಜೆಲಾ ಮರ್ಕೆಲ್, ಬ್ರಿಟನ್ನಿನ ಡೇವಿಡ್ ಕೆಮರೂನ್, ಫ್ರಾನ್ಸ್‌ನ ಎಮ್ಯಾನುಯೆಲ್ ಮ್ಯಾಕ್ರನ್‌ರ ಅದಕ್ಷ ಆಡಳಿತದಿಂದ ಯುರೋಪ್ ಈಗಷ್ಟೇ ಚೇತರಿಸಿಕೊಳ್ಳುತ್ತಿದೆ.
ಹೀಗಾಗಿ ಅಲ್ಲಿನ ದೇಶಗಳು ಇನ್ನುಮುಂದೆ ತಾವು ನಷ್ಟ ಅನುಭವಿಸಿಕೊಂಡು ಅಮೆರಿಕದ ತಾಳಕ್ಕೆ ಕುಣಿಯುವುದು ಅನುಮಾನ. ಆದರೆ ಅಲ್ಲಿನ ಪರಿಸ್ಥಿತಿ ಸರಿಯಾಗಲು ಇನ್ನೂ 6-7 ವರ್ಷ ಬೇಕು.
ಅಮೆರಿಕದ ಮಾತು ಕೇಳಿ ನಷ್ಟ ಅನುಭವಿಸಿದ ಜೆಲೆನ್‌ಸ್ಕಿ ಈಗ ನೇರವಾಗಿಯೇ ಅಮೆರಿಕಕ್ಕೆ ಸಂದೇಶ ಕಳುಹಿಸಿ ತಾವು ಭಾರತದ ನೆರವು ಪಡೆಯುವುದಾಗಿ ಹೇಳಿದ್ದಾರೆ. ಎಲ್ಲಾ ದೇಶಗಳೂ ಎಚ್ಚರಿಕೆ ಯಿಂದ ಮಾತನಾಡತೊಡಗಿವೆ. ಈ ಹಂತದಲ್ಲಿ, 1988 ಹಾಗೂ 1993ರ ನಡುವೆ ಹಿಮಾಲಯದಲ್ಲಿ ಎಳೆದ ಕದನವಿರಾಮದ ಗಡಿಯ ಸೂತ್ರವನ್ನು ಪುನರ್‌ನವೀಕರಣ ಮಾಡಿಕೊಂಡು ಭಾರತ ಎಚ್ಚರಿಕೆಯ ಹೆಜ್ಜೆ ಇರಿಸಿ ತನ್ನ ಕೈ ಮೇಲಾಗುವಂತೆ ಮಾಡಿಕೊಳ್ಳುತ್ತದೆಯೇ? ಯಾವುದೇ ನಿರ್ಧಾ ರಕ್ಕೆ ಬಾರದಿರುವುದರಲ್ಲೇ ನೈಜಪರಿಹಾರ ಅಡಗಿದೆ ಎಂಬ ಸೂತ್ರಕ್ಕೆ ತಕ್ಕಂತೆ ಈ ಹಿಂದೆ ಕದನ ವಿರಾಮ ಏರ್ಪಟ್ಟಿತ್ತು.
ಕದನವಿರಾಮ ರೇಖೆ ಅಂದರೆ ಗಡಿಯಲ್ಲ. ತಂತಮ್ಮ ವಾದಕ್ಕೆ ಮನ್ನಣೆ ಸಿಗುವಂತೆ ಎರಡೂ ಕಡೆಯವರು ಸುಮ್ಮನಿರುವ ಒಪ್ಪಂದವದು. ಆದರೆ ಅದು ಸಂಘರ್ಷ ನಿಲ್ಲಿಸಲು ಹಾಗೂ ದ್ವಿ ಪಕ್ಷೀಯ ಸಂಬಂಧ, ವ್ಯಾಪಾರ, ಸಂಚಾರ ಹಾಗೂ ಮಾತುಕತೆಗಳು ಪುನರಾರಂಭವಾಗುವುದಕ್ಕೆ ವೇದಿಕೆಯಾಗುವಂತೆ ನೋಡಿಕೊಳ್ಳಲು ಸಹಕಾರಿಯಾಗಬಹುದು.
ಜಗತ್ತಿನ ಕೆಲ ದೇಶಗಳ ನಡುವೆ ಈ ಹಿಂದೆ ನಿಂತುಹೋಗಿದ್ದ ವ್ಯಾಪಾರ ಮತ್ತು ಮಾತುಕತೆಯ ಪುನರಾರಂಭಕ್ಕೆ ಟ್ರಂಪ್‌ರ ಎಡವಟ್ಟುಗಳು ವೇದಿಕೆಯಾಗುತ್ತಿವೆ. ತಮ್ಮ ಹೊಡೆತಕ್ಕೆ ಎಲ್ಲರೂ ಹೆದರುತ್ತಾರೆ ಎಂದು ಟ್ರಂಪ್ ಭಾವಿಸಿದ್ದರು. ಬದಲಿಗೆ ಬ್ರಿಕ್ಸ್ ಮತ್ತು ಎಸ್‌ಸಿಒ ದೇಶಗಳು ಧಿಗ್ಗನೆದ್ದಿವೆ. ಟ್ರಂಪ್ ಅಮೆರಿಕವನ್ನು ಮತ್ತೆ ಗ್ರೇಟ್ ಮಾಡುತ್ತೇನೆಂದು ಹೊರಟಿದ್ದರು. ಆದರೆ ಅವರ ಅವಧಿ ಮುಗಿಯುವ ವೇಳೆಗೆ ಅಮೆರಿಕ ಮತ್ತೊಮ್ಮೆ ಮೊದಲ ಮಹಾಯುದ್ಧದದ ಬಳಿಕ ಆಗಿದ್ದಷ್ಟೇ ದುರ್ಬಲವಾಗುವಂತೆ ತೋರುತ್ತಿದೆ.
2020 ಮತ್ತು 2030ರ ದಶಕದಲ್ಲಿ ಅಮೆರಿಕದ ಸೇನೆ ಜಗತ್ತಿನ ಬಲಿಷ್ಠ ಸೇನೆಯೇ ಆಗಿ ಉಳಿದರೂ, ದೇಶಕ್ಕೆ ಸರಿಯಾದ ರಾಜಕೀಯ ನಾಯಕತ್ವವಿಲ್ಲದಿದ್ದರೆ ಸೇನೆಗಳು ಕೇವಲ ಅಲಂಕಾರದ ಸರಕಾಗಿ ಬಿಡುತ್ತವೆಯೇ ವಿನಾ ಪ್ರಯೋಜನವೇನೂ ಸಿಗದು. ಯುರೋಪಿನ ಸ್ನೇಹಿತರು ಇರಿಸಿದ್ದ ನಂಬಿಕೆ ಯನ್ನು ಟ್ರಂಪ್ ಪಂಕ್ಚರ್ ಮಾಡಿದ್ದಾರೆ, ವಿಶ್ವಮಟ್ಟದಲ್ಲಿ ಅಮೆರಿಕಕ್ಕಿದ್ದ ಮಿಕ್ಕ ಸ್ನೇಹಿತರೂ ನಂಬಿಕೆ ಕಳೆದುಕೊಳ್ಳುವಂತೆ ಮಾಡಿದ್ದಾರೆ.
ಕೆಲ ನಿರ್ಧಾರಗಳು ಮತ್ತು ಜಾಗತಿಕ ನಾಯಕರು ಬಳಸುವ ಭಾಷೆಗಳು ಇತರ ದೇಶಗಳ ಮೇಲೆ ಗಂಭೀರ ಪರಿಣಾಮ ಬೀರುತ್ತವೆ. ಭಾರತ, ಚೀನಾ, ರಷ್ಯಾ, ಬ್ರೆಜಿಲ್, ದಕ್ಷಿಣ ಆಫ್ರಿಕಾಗಳು ಪರಸ್ಪರ ಸಹಕಾರದಿಂದ ತಮ್ಮ ಶಕ್ತಿ ಹೆಚ್ಚಿಸಿಕೊಂಡು, ಯಾರಿಗೂ ತಲೆಬಾಗದ ಹಂತಕ್ಕೆ ತಲುಪುತ್ತಿವೆ. ತನಗೆ ಇನ್ನಷ್ಟು ಸಮಯ ಬೇಕೆಂದು ಯುರೋಪ್ ಚಿಕ್ಕ ಮಕ್ಕಳಂತೆ ಅತ್ತಿಂದಿತ್ತ ಅಡ್ಡಾಡುತ್ತಿದೆ. ಅಮೆರಿಕ ತನ್ನ ಜಾಗದಲ್ಲಿ ಭದ್ರವಾಗಿ ನಿಲ್ಲುವುದಕ್ಕೇ ಪರದಾಡುವಂಥ ಸ್ಥಿತಿಯನ್ನು ಟ್ರಂಪ್ ತಂದಿಡುತ್ತಿದ್ದಾರೆ.
ಬ್ರಿಕ್ಸ್, ಎಸ್‌ಸಿಒ, ಬಳಿಕ ಶೀಘ್ರದಲ್ಲೇ ಆಸಿಯಾನ್ ದೇಶಗಳೂ ಟ್ರಂಪ್ ತಮ್ಮ ಕೊಡೆಯನ್ನು ಬಿಚ್ಚಲು ಜಾಗವಿಲ್ಲದಂತೆ ಮಾಡುತ್ತವೆ. ಆಸಿಯಾನ್ ಸಾಮಾನ್ಯವಾಗಿ ಕಾದು ನೋಡುವ ತಂತ್ರ ಅನುಸರಿಸಿ, ನಂತರ ಸ್ವಂತಹಿತಕ್ಕೆ ತಕ್ಕಂತೆ ನಡೆದುಕೊಳ್ಳುತ್ತದೆ. ಜಗತ್ತಿಗೊಂದು ಹೊಸ ಆರ್ಡರ್ ತರಲು ಟ್ರಂಪ್ ಬಯಸಿದ್ದರು. ಅದೀಗ ಬಂದಿದೆ.
(ಲೇಖಕರು ಹಿರಿಯ ಪತ್ರಕರ್ತರು)