ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ranjith H Ashwath Column: ಇವಿಎಂ ಬದಿಗಿಟ್ಟು ಸಾಧಿಸಲು ಹೊರಟಿದ್ದೇನನ್ನು ?

ಒಂದು ವೇಳೆ ಬ್ಯಾಲೆಟ್ ಪೇಪರ್ ಬಳಸಿಕೊಂಡು ಕಾಂಗ್ರೆಸ್ಸಿಗರು ಗೆದ್ದರೆ ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕರು ಮಾಡುತ್ತಿರುವ ‘ಮತಗಳ್ಳತನ’ದ ಆರೋಪವನ್ನೇ ಮತ್ತೊಂದು ಸ್ವರೂಪದಲ್ಲಿ ಬಿಜೆಪಿಗರು ಮಾಡುತ್ತಾರೆ. ಒಂದು ವೇಳೆ ಕಾಂಗ್ರೆಸ್ ಮೇಲುಗೈ ಸಾಧಿಸಲು ಸಾಧ್ಯವಾಗದಿದ್ದರೆ ಅದಕ್ಕೆ ಮತ್ತೊಂದು ರೀತಿಯ ಟೀಕೆ ಮಾಡುವುದಂತೂ ಸತ್ಯ.

ಇವಿಎಂ ಬದಿಗಿಟ್ಟು ಸಾಧಿಸಲು ಹೊರಟಿದ್ದೇನನ್ನು ?

-

ಅಶ್ವತ್ಥಕಟ್ಟೆ

ranjith.hoskere@gmail.com

ದೇಶದಲ್ಲಿ ಕಳೆದ ಒಂದು ದಶಕದಿಂದ, ಯಾವುದೇ ಚುನಾವಣೆಯಲ್ಲಿ ಬಿಜೆಪಿಯೇತರ ಪಕ್ಷಗಳು ಸೋತಾಗ ‘ವಿದ್ಯುನ್ಮಾನ ಮತಯಂತ್ರ’ದ (ಇವಿಎಂ) ವಿಷಯ ಮುನ್ನೆಲೆಗೆ ಬರುತ್ತದೆ. ಇವಿಎಂ ಬಗ್ಗೆ ಅನುಮಾನಿಸುವ ಜತೆಜತೆಗೆ ಈ ಹಿಂದೆ ನಡೆಯುತ್ತಿದ್ದ ‘ಮತಪತ್ರ’ ಮಾದರಿಯ ಚುನಾವಣೆ ಪ್ರಕ್ರಿಯೆಯನ್ನು ಮರುಜಾರಿಗೊಳಿಸಬೇಕು ಎನ್ನುವ ಚರ್ಚೆ ಬರುತ್ತದೆ.

ಅದಾದ ಬಳಿಕ ಕೆಲವೊಂದಷ್ಟು ಮಂದಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುತ್ತಾರೆ. ಬಳಿಕ ಆ ಅರ್ಜಿ ವಜಾಗೊಳ್ಳುತ್ತದೆ. ಅಲ್ಲಿಗೆ ಚುನಾವಣೆಯ ಸೋಲಿನ ಪರಾಮರ್ಶೆ ಅಂತ್ಯವಾಗುತ್ತದೆ. ಇದು ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ನಡೆದುಕೊಂಡು ಬಂದಿರುವ ಸಾಮಾನ್ಯ ಪ್ರಕ್ರಿಯೆ.

ಆದರೆ ಈ ಬಾರಿ ಯಾವುದೇ ಚುನಾವಣೆ ಇಲ್ಲದಿದ್ದರೂ ಕರ್ನಾಟಕದಲ್ಲಿ ‘ಇವಿಎಂ-ಬ್ಯಾಲೆಟ್ ಪೇಪರ್’ ಸಮರ ಶುರುವಾಗಿದೆ. ಇದಕ್ಕೆ ಕಾರಣ ಕಳೆದ ವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಸರಕಾರವು ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡ ಆ ಒಂದು ತೀರ್ಮಾನ.

ರಾಜ್ಯ ಸರಕಾರ ಹಾಗೂ ರಾಜ್ಯ ಚುನಾವಣಾ ಆಯೋಗದ ವ್ಯಾಪ್ತಿಯಲ್ಲಿರುವ ಸ್ಥಳೀಯ ಸಂಸ್ಥೆಗಳಿಗೆ ಶೀಘ್ರದಲ್ಲಿಯೇ ಚುನಾವಣೆ ನಡೆಸಬೇಕಿದ್ದು, ಅವುಗಳನ್ನು ಇವಿಎಂ ಬದಲಿಗೆ ಮತಪತ್ರದ ಮೂಲಕ ನಡೆಸುವುದಾಗಿ ಅದು ಘೋಷಿಸಿದೆ.

ಇದನ್ನೂ ಓದಿ: Ranjith H Ashwath Column: ಎಲ್ಲದಕ್ಕೂ ಸಿಬಿಐ ತನಿಖೆಯೊಂದೇ ಪರಿಹಾರವೇ ?

ಬ್ಯಾಲೆಟ್ ಪೇಪರ್ ಬಳಕೆಗೆ ಬೇಕಿರುವ ಕಾನೂನಿಗೆ ತಿದ್ದುಪಡಿಯನ್ನು ತರುವ ಮಾತುಗಳನ್ನು ಸರಕಾರ ಹೇಳಿದೆ. ಮತಪತ್ರದ ಮೂಲಕ ಚುನಾವಣೆ ನಡೆಸುವುದು ಭಾರತದ ಮಟ್ಟಿಗೆ ಎರಡು ದಶಕದ ಹಿಂದಿನ ಮಾತು. ಆದರೆ ಅಭಿವೃದ್ಧಿ ಹೊಂದಿರುವ ದೇಶಗಳಾದ ಅಮೆರಿಕ ಸೇರಿದಂತೆ ಅನೇಕ ದೇಶಗಳಲ್ಲಿ ಈಗಲೂ ಮತಪತ್ರದ ಮೂಲಕವೇ ಮತದಾನ ನಡೆಯುತ್ತದೆ. ಇದೇ ವಾದ ವನ್ನು ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ.

ಆದರೆ, ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಸಾಂಪ್ರದಾಯಿಕ ಪದ್ಧತಿಯಲ್ಲಿದ್ದಾರೆ ಎನ್ನುವ ಮಾತ್ರಕ್ಕೆ ನಾವು ತಂತ್ರಜ್ಞಾನವನ್ನು ಬಳಸಿಕೊಂಡು ಚುನಾವಣೆ ನಡೆಸಬಾರದು ಎಂದಲ್ಲವಲ್ಲ. ಅನೇಕ ರಾಷ್ಟ್ರಗಳು ದೇಶದಲ್ಲಿರುವ ಇವಿಎಂ ಚುನಾವಣಾ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳಲು ಭಾರತಕ್ಕೆ ಭೇಟಿ ನೀಡಿರುವುದು ಎಲ್ಲರಿಗೂ ಗೊತ್ತಿರುವ ವಿಷಯ.

ಹಾಗೆ ನೋಡಿದರೆ, ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ನಿಖರತೆಯನ್ನು ಜಾರಿಗೆ ತರಬೇಕು ಹಾಗೂ ಅಕ್ರಮವನ್ನು ತಡೆಯಬೇಕು ಎನ್ನುವ ಆಲೋಚನೆಯನ್ನು ಮಾಡಿದ್ದು 1988-89ರ ಅವಧಿ ಯಲ್ಲಿ. ಆಗಲೇ ಇವಿಎಂ ಬಳಕೆಯ ಆಲೋಚನೆಯೂ ಮುನ್ನೆಲೆಗೆ ಬಂತು. 1992ರ ಅವಧಿಯಲ್ಲಿ ಕೆಲವೊಂದಷ್ಟು ಬದಲಾವಣೆಯೊಂದಿಗೆ ಕಾನೂನು ರೂಪಿಸಲಾಯಿತು.

Ranjith H A 0909

ಆದರೆ ಇವಿಎಂ ದೇಶದಲ್ಲಿಯೇ ಮೊದಲ ಬಾರಿಗೆ ಬಳಕೆಯಾಗಿದ್ದು 1998ರಲ್ಲಿ. ಬಳಿಕ 2001ರಲ್ಲಿ ನಾಲ್ಕು ರಾಜ್ಯಗಳ ವಿಧಾಸಭಾ ಚುನಾವಣೆಯಲ್ಲಿ ಬಳಸಿ, ಇದು ಸರಿಯಾಗಿದೆ ಎನ್ನುವುದನ್ನು ಎಲ್ಲರೂ ಖಚಿತಪಡಿಸಿಕೊಂಡ ಬಳಿಕ, 2004ರ ಲೋಕಸಭಾ ಚುನಾವಣೆಯಲ್ಲಿ ದೇಶದೆಲ್ಲೆಡೆ ಬಳಸ ಲಾಯಿತು. ಬಳಿಕ ಮತದಾರ ಯಾರಿಗೆ ಮತ ಹಾಕಿದ್ದಾನೆ ಎಂದು ಖಚಿತಪಡಿಸಿಕೊಳ್ಳಲು 2013ರಲ್ಲಿ ವಿವಿ ಪ್ಯಾಟ್ ಅನ್ನು ಪ್ರಾಯೋಗಿಕವಾಗಿ ಬಳಸಿ, ಇದೀಗ ದೇಶಾದ್ಯಂತ ಬಳಸಲಾಗುತ್ತಿದೆ.

ಪೂರ್ಣ ಪ್ರಮಾಣದಲ್ಲಿ ಇವಿಎಂ ಪರಿಚಯಿಸಿ ಮೊದಲ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಬೀಗಿದ್ದು ಕಾಂಗ್ರೆಸ್. 2001ರಿಂದ 2013ರ ನಡುವೆ ನಡೆದ ಹಲವು ರಾಜ್ಯಗಳ ವಿಧಾನಸಭೆ, ಲೋಕ ಸಭಾ ಚುನಾವಣೆಯ ವೇಳೆ ಇವಿಎಂ ಮೂಲಕವೇ ಕಾಂಗ್ರೆಸ್ ಅಧಿಕಾರದ ಗದ್ದುಗೆಯನ್ನು ಏರಿತ್ತು. 2014ರಲ್ಲಿ ಯಾವಾಗ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸುವುದರ ಜತೆಜತೆಗೆ ಕಾಂಗ್ರೆಸ್ ನೆಲಕಚ್ಚಿತ್ತೋ ಅಲ್ಲಿಂದ ಇವಿಎಂಗಳ ಮೇಲಿನ ವಿಶ್ವಾಸಾ ರ್ಹತೆಯನ್ನು ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳು ಪ್ರಶ್ನಿಸಲು ಶುರು ಮಾಡಿವೆ. ಕಾಂಗ್ರೆಸ್ ಮಾತ್ರ ವಲ್ಲದೇ, ಪ್ರತಿಪಕ್ಷದಲ್ಲಿರುವ ಹತ್ತಾರು ಪಕ್ಷಗಳು ತಮ್ಮ ಸೋಲಿನ ಹೊಣೆಯನ್ನು ಇವಿಎಂ ಮೇಲೆ ಹೊರಿಸುತ್ತಾ ಬಂದಿವೆ.

ಇದೇ ಇವಿಎಂ ಬಳಸಿಕೊಂಡು ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದಾಗ ‘ಮೌನ’ವಾಗುವ ನಾಯಕರು, ಸೋತಾಗ ಮಾತ್ರ ‘ಇವಿಎಂಗಳು ಹ್ಯಾಕ್ ಆಗಿವೆ’ ಎನ್ನುವ ಆರೋಪ ಮಾಡಿಕೊಂಡು ಓಡಾಡುವು ದನ್ನು ನೋಡಿದ್ದೇವೆ. ಪ್ರತಿಬಾರಿ ಇವಿಎಂ ಹ್ಯಾಕ್ ಎನ್ನುವ ಆರೋಪ ಬಂದಾಗ ಚುನಾವಣಾ ಆಯೋಗ ಸಾಕ್ಷಿ ಕೇಳುತ್ತದೆ. ಸಾಕ್ಷಿ ಕೇಳಿದಾಗ ನೀಡದ ಪ್ರತಿಪಕ್ಷದವರು ‘ಹಿಟ್ ಆಂಡ್ ರನ್’ ಮಾಡಿಕೊಂಡು ಓಡಾಡಿಕೊಂಡಿರುತ್ತಾರೆ. ಈ ರೀತಿಯ ಆರೋಪಗಳಿಗೆ ಉತ್ತರ ನೀಡುವ ಕಾರಣ ಕ್ಕಾಗಿಯೇ, ‘ಲೈವ್ ಆಗಿ ಹ್ಯಾಕ್ ಮಾಡಿ’ ಎನ್ನುವ ಓಪನ್ ಚಾಲೆಂಜ್ ಮಾಡಿದ್ದರೂ ಅದಕ್ಕೆ ಯಾರೊ ಬ್ಬರೂ ಮುಂದೆ ಬರಲಿಲ್ಲ ಎನ್ನುವುದು ವಾಸ್ತವ.

ಇದಿಷ್ಟೇ ಅಲ್ಲ, ಅನೇಕ ಪಕ್ಷಗಳು, ಅನೇಕ ಸಮಯದಲ್ಲಿ ಇವಿಎಂ ವಿಶ್ವಾಸಾರ್ಹತೆಯನ್ನು ಮುಂದಿಟ್ಟುಕೊಂಡೇ ಸುಪ್ರೀಂ ಕೋರ್ಟ್ ಕದ ತಟ್ಟಿವೆ. ಆದರೆ ಆ ಎಲ್ಲ ಸಮಯದಲ್ಲಿಯೂ ಇವಿಎಂ ದೋಷವನ್ನು ಸಾಬೀತುಪಡಿಸುವಲ್ಲಿ ಅವು ವಿಫಲವಾಗಿವೆ. ಈ ಎಲ್ಲದರ ಹೊರತಾಗಿಯೂ ಇವಿಎಂ ಮೂಲಕ ನಡೆದಿರುವ ಚುನಾವಣೆಗಳಲ್ಲಿ ಬಿಜೆಪಿ ಹಾಗೂ ಅದರ ಮೈತ್ರಿ ಪಕ್ಷಗಳು ಮಾತ್ರ ಗೆಲುವಿನ ಕೇಕೆ ಹಾಕಿಲ್ಲ.

ಕಳೆದ ಎರಡು ದಶಕದ ಚುನಾವಣೆಯಲ್ಲಿ ಬಿಜೆಪಿ ಹೊರತಾಗಿಯೂ, ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ಗೆಲುವು ದಾಖಲಿಸಿದೆ. 2013ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಇದೇ ಇವಿಎಂ ನಲ್ಲಿಯೇ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್, ದೆಹಲಿಯಲ್ಲಿ ಆಪ್, ತೆಲಂಗಾಣ, ರಾಜಸ್ಥಾನ, ಕೇರಳ, ತಮಿಳುನಾಡು ಸೇರಿದಂತೆ ಹಲವು ರಾಜ್ಯ ಗಳಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಒಂದಂಕಿ ದಾಟಲು ಸಾಧ್ಯವಾಗಲಿಲ್ಲ.

ಒಂದು ವೇಳೆ ಇವಿಎಂ ಅನ್ನು ಹ್ಯಾಕ್ ಮಾಡಿ ಮತಗಳನ್ನು ಆಚೀಚೆ ಮಾಡುವುದು ಸಾಧ್ಯವೆನ್ನುವು ದಾದರೆ ಬಿಜೆಪಿ ನಾಯಕರು ಕೇವಲ ಲೋಕಸಭಾ ಚುನಾವಣೆಯಲ್ಲಿ ಏಕೆ ಮಾಡಬೇಕು? ಎಲ್ಲ ವಿಧಾನಸಭಾ ಚುನಾವಣೆಯಲ್ಲಿಯೂ ಮಾಡಬಹುದಲ್ಲವೇ ಎನ್ನುವ ಪ್ರಶ್ನೆಗೆ ಕಾಂಗ್ರೆಸ್ಸಿಗರ ಬಳಿ ಉತ್ತರವಿಲ್ಲ.

ಬ್ಯಾಲೆಟ್ ಪೇಪರ್‌ನಲ್ಲಿ ಚುನಾವಣೆ ನಡೆಸಲು ಅಗತ್ಯ ತಿದ್ದುಪಡಿ ತರುವುದಾಗಿ ಸರಕಾರವು ಹೇಳುತ್ತಿದ್ದಂತೆ ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ಮುಗಿಬಿದ್ದರು, ಇದು ಕಾನೂನುಬಾಹಿರ ಎನ್ನುವ ಮಾತುಗಳನ್ನು ಆಡಿದರು. ಆದರೆ ಈಗಲೂ ದೇಶದ ಬಹುತೇಕ ರಾಜ್ಯಗಳಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಬ್ಯಾಲೆಟ್ ಮೂಲಕವೇ ಚುನಾವಣೆ ನಡೆಯುತ್ತದೆ ಎನ್ನುವುದು ವಾಸ್ತವ. ಈ ವಿಷಯವನ್ನು ಸ್ವತಃ ರಾಜ್ಯ ಚುನಾವಣಾ ಆಯೋಗದ ಆಯುಕ್ತರೇ ಸ್ಪಷ್ಟಪಡಿಸಿದ್ದಾರೆ. ಈ ಕಾರಣಕ್ಕಾಗಿಯೇ, ಬ್ಯಾಲೆಟ್ ಮೂಲಕ ಚುನಾವಣೆ ನಡೆಸಬೇಕು ಎನ್ನುವ ಸೂಚನೆ ಬಂದರೆ, ಅದೊಂದು ‘ದೊಡ್ಡ’ ವಿಷಯವಲ್ಲ.

ಏಕೆಂದರೆ, ಈಗಲೂ ಆಯೋಗಕ್ಕೆ ಹಾಗೂ ಮತದಾರರಿಗೆ ಬ್ಯಾಲೆಟ್ ಮತಪತ್ರ ದಲ್ಲಿ ಚುನಾವಣೆ ಮಾಡುವುದು ಹೇಗೆ ಎನ್ನುವುದು ಗೊತ್ತಿದೆ. ಆದರೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಸೇರಿದಂತೆ ಇನ್ನುಳಿದ ಸ್ಥಳೀಯ ಸಂಸ್ಥೆಗಳಿಗೆ ಇವಿಎಂ ಮೂಲಕ ನಡೆಯುತ್ತಿದ್ದುದರ ಬದಲಿಗೆ ಅಲ್ಲಿಯೂ ಬ್ಯಾಲೆಟ್ ಪೇಪರ್ ಮೂಲಕ ನಡೆಸುವುದು ಹೊಸದು.

ಹಾಗೆಂದ ಮಾತ್ರಕ್ಕೆ, ಮತಪತ್ರದ ಮೂಲಕ ಚುನಾವಣೆ ನಡೆಸುವುದರಿಂದ ಎಲ್ಲವೂ ಸುಸೂತ್ರ ವಾಗಲಿದೆ ಎಂದಿಲ್ಲ. ಏಕೆಂದರೆ, ಇವಿಎಂಗೆ ಹೋಲಿಸಿದರೆ ಮತಪತ್ರದ ಮೂಲಕ ಚುನಾವಣೆ ನಡೆಸುವುದು ದುಬಾರಿ ಹಾಗೂ ಹೆಚ್ಚು ಸಮಯ ಹೀರುವ ಪ್ರಕ್ರಿಯೆ. ಇದಿಷ್ಟೇ ಅಲ್ಲದೆ, ಒಂದು ಲೋಕಸಭಾ ಚುನಾವಣೆಯನ್ನು ನಡೆಸಲು ಸುಮಾರು ೧೦ ಸಾವಿರ ಟನ್ ಪೇಪರ್ ಅಗತ್ಯವಿದೆ. ಅಂದರೆ ಸುಮಾರು ಎರಡು ಲಕ್ಷ ಮರಗಳನ್ನು ಕಡಿಯಬೇಕು.

ಇದೀಗ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆ ನಡೆಸಲು ಈ ಪ್ರಮಾಣದಲ್ಲಿ ಪರಿಸರ ನಾಶವಾಗದಿದ್ದರೂ, ಕನಿಷ್ಠ ಶೇ.10ರಷ್ಟು ಮರಗಳನ್ನಾದರೂ ಕಡಿಯಬೇಕಾಗುತ್ತದೆ, ಅದು ಪರಿಸರದ ಮೇಲೆಯೂ ಪರಿಣಾಮ ಬೀರುತ್ತದೆ. ಈ ಎಲ್ಲವನ್ನು ಮೀರಿ ಇವಿಎಂನಲ್ಲಿ ‘ಬೂತ್ ಕ್ಯಾಪ್ಚರಿಂಗ್’ ಸುಲಭ ವಾಗಿರಲಿಲ್ಲ.

ಆದರೀಗ ಬ್ಯಾಲೆಟ್ ಪೇಪರ್‌ನಲ್ಲಿ ಇದು ಸುಲಭವಾಗಲಿದೆ. ಆದ್ದರಿಂದ ಇವಿಎಂ ಬಳಸಿಕೊಂಡು ಈಗಾಗಲೇ ಅಧಿಕಾರದ ಗದ್ದುಗೆಯಲ್ಲಿರುವ ಕಾಂಗ್ರೆಸ್‌ನಿಂದ ಬ್ಯಾಲೆಟ್ ಪೇಪರ್‌ನ ಬಳಕೆಯ ಬೇಡಿಕೆಯ ಅಗತ್ಯವೇನಿತ್ತು ಎನ್ನುವುದು ಹಲವರ ಪ್ರಶ್ನೆಯಾಗಿದೆ. ಕಾಂಗ್ರೆಸ್ ಸರಕಾರದ ತೀರ್ಮಾನ ವನ್ನು ಸಹಜವಾಗಿಯೇ ಬಿಜೆಪಿ ನಾಯಕರು ತೀವ್ರವಾಗಿ ವಿರೋಧಿಸಿದ್ದಾರೆ.

ಹೈಕಮಾಂಡ್ ಮೆಚ್ಚಿಸಲು ಇಡೀ ಚುನಾವಣಾ ವ್ಯವಸ್ಥೆಯನ್ನು 30 ವರ್ಷ ಹಿಂದಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ಕೆಲವರು ಟೀಕಿಸಿದರೆ, ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ‘ಅಕ್ರಮ’ ವೆಸಲು ಬ್ಯಾಲೆಟ್ ಪೇಪರ್ ಮರುಸ್ಥಾಪಿಸಲು ಸರಕಾರ ಮುಂದಾಗಿದೆ ಎನ್ನುವ ಹೇಳಿಕೆಯನ್ನು ಕೆಲವರು ಮಾಡುತ್ತಿದ್ದಾರೆ. ಈ ಎಲ್ಲ ಹೇಳಿಕೆಗಳ ಹೊರತಾಗಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಬ್ಯಾಲೆಟ್ ಪೇಪರ್ ವಿರುದ್ಧ ‘ಕಾನೂನು’ ಹೋರಾಟದ ಮಾತುಗಳನ್ನು ಆಡಿದ್ದಾರೆ.

ಆದರೆ ಬಿಜೆಪಿ ನಾಯಕರು ಈ ವಿಷಯದಲ್ಲಿ ಕಾನೂನು ಹೋರಾಟ ನಡೆಸಿದರೆ, ಸರಕಾರದ ಈ ನಿರ್ಧಾರಕ್ಕೆ ಯಾವುದೇ ಸಮಸ್ಯೆಯಾಗುವುದಿಲ್ಲ ಎನ್ನುವುದು ವಾಸ್ತವ. ಏಕೆಂದರೆ, ಈಗಾಗಲೇ ರಾಜ್ಯ ಚುನಾವಣಾ ಆಯುಕ್ತ ಜಿ.ಎಸ್. ಸಂಗ್ರೇಶಿ ಅವರೇ ಸ್ಪಷ್ಟಪಡಿಸಿರುವಂತೆ, ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ನಡೆಸುವುದು ರಾಜ್ಯ ಚುನಾವಣಾ ಆಯೋಗದ ಜವಾಬ್ದಾರಿ. ಈ ಚುನಾವಣೆ ಗಳನ್ನು ಯಾವ ರೀತಿಯಲ್ಲಿ ನಡೆಸಬೇಕು? ತಯಾರಿ, ಅನುದಾನ ಹೇಗೆ? ಎಂಬ ವಿಷಯದಲ್ಲಿ ಕೇಂದ್ರ ಚುನಾವಣಾ ಆಯೋಗ ಮಧ್ಯಪ್ರವೇಶಿಸಲು ಬರುವುದಿಲ್ಲ.

ರಾಜ್ಯ ಸರಕಾರ ರೂಪಿಸಿರುವ ಕಾನೂನುಗಳ ಆಧಾರದಲ್ಲಿ, ರಾಜ್ಯ ಚುನಾವಣಾ ಆಯೋಗವೇ ಅದನ್ನು ತೀರ್ಮಾನಿಸಬೇಕು. ಇದರೊಂದಿಗೆ, ಸ್ಥಳೀಯ ಸಂಸ್ಥೆ ಚುನಾವಣೆಯನ್ನು ಬ್ಯಾಲೆಟ್ ಅಥವಾ ಇವಿಎಂ ಈ ಎರಡರ ಪೈಕಿ ಒಂದರಲ್ಲಿ ಮಾಡಲು ಕಾನೂನಿನಲ್ಲಿ ಅವಕಾಶವಿದೆ ಎನ್ನುವುದು ಸರಕಾರದ ವಾದವಾಗಿದೆ.

ಗ್ರಾಮ ಪಂಚಾಯಿತಿ ಚುನಾವಣೆಗಳು ಈಗಲೂ ಬ್ಯಾಲೆಟ್ ಪೇಪರ್‌ನಲ್ಲಿ ನಡೆಯುವುದರಿಂದ, ಇನ್ನುಳಿದ ಸ್ಥಳೀಯ ಸಂಸ್ಥೆಗಳಿಗೆ ಇದನ್ನು ವಿಸ್ತರಿಸುವುದು ಬಹುದೊಡ್ಡ ಸವಾಲೇ ನಲ್ಲ. ಹೀಗಿರು ವಾಗ, ನ್ಯಾಯಾಲಯದಲ್ಲಿ ಈ ವಿಷಯವನ್ನು ಯಾವ ರೀತಿಯಲ್ಲಿ ಬಿಜೆಪಿ ಮಂಡಿಸಲಿದೆ ಎನ್ನುವುದು ಹಲವರಲ್ಲಿ ಕುತೂಹಲ ಮೂಡಿಸಿದೆ.

ಚುನಾವಣೆಯ ವಿಷಯದಲ್ಲಿ ಸ್ಪಷ್ಟ ಕಾನೂನು ಇರುವುದರಿಂದ ಬಿಜೆಪಿ ನಾಯಕರು ಕಾನೂನು ಹೋರಾಟದ ಹೊರತಾಗಿಯೂ, ಬ್ಯಾಲೆಟ್ ಪೇಪರ್ ಬಳಸುವು ದನ್ನು ತಡೆಯುವುದು ಅಂದು ಕೊಂಡಷ್ಟು ಸುಲಭವಾಗಿಲ್ಲ. ರಾಜ್ಯ ಚುನಾವಣಾ ಆಯುಕ್ತರೇ ಹೇಳಿರುವಂತೆ, ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಈಗಲೂ ಬ್ಯಾಲೆಟ್ ಪೇಪರ್ ಬಳಕೆಯಿರುವುದರಿಂದ, ಅದೇ ಮಾದರಿಯನ್ನು ಇತರೆ ಸ್ಥಳೀಯ ಸಂಸ್ಥೆ ಚುನಾವಣೆಗಳಿಗೆ ವಿಸ್ತರಿಸುವುದು ‘ತ್ರಾಸ’ ವಾಗುವುದಿಲ್ಲ.

ಆದರೆ ರಾಜಕೀಯ ಕಾರಣಗಳನ್ನು ಬಿಟ್ಟು ನೋಡಿದರೆ, ದೇಶದಲ್ಲಿ ಅಳವಡಿಸಿಕೊಂಡಿರುವ ಇವಿಎಂ ಎನ್ನುವುದು ‘ಅದ್ಭುತ’ ಹಾಗೂ ಪಾರದರ್ಶಕ ವ್ಯವಸ್ಥೆಯಾಗಿದೆ. ಹೀಗಿರುವಾಗ, ರಾಜಕೀಯ ಕಾರಣಕ್ಕೆ ಅಥವಾ ಬಿಜೆಪಿ ನಾಯಕರು ಆರೋಪಿಸುತ್ತಿರುವಂತೆ ರಾಹುಲ್ ‘ರಾಗ‘ಕ್ಕೆ ತಾಳ ಹಾಕಲು ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಮತಯಂತ್ರ ಬದಲಿಗೆ, ಮತಪತ್ರವನ್ನು ಬಳಸಲು ಮುಂದಾಗಿ ‘ಸಾಧಿಸುವುದು’ ಏನಿದೆ? ಒಂದು ವೇಳೆ ಬ್ಯಾಲೆಟ್ ಪೇಪರ್ ಬಳಸಿಕೊಂಡು ಕಾಂಗ್ರೆಸ್ಸಿಗರು ಗೆದ್ದರೆ ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕರು ಮಾಡುತ್ತಿರುವ ‘ಮತಗಳ್ಳತನ’ದ ಆರೋಪವನ್ನೇ ಮತ್ತೊಂದು ಸ್ವರೂಪದಲ್ಲಿ ಬಿಜೆಪಿಗರು ಮಾಡುತ್ತಾರೆ. ಒಂದು ವೇಳೆ ಕಾಂಗ್ರೆಸ್ ಮೇಲುಗೈ ಸಾಧಿಸಲು ಸಾಧ್ಯವಾಗದಿದ್ದರೆ ಅದಕ್ಕೆ ಮತ್ತೊಂದು ರೀತಿಯ ಟೀಕೆ ಮಾಡುವುದಂತೂ ಸತ್ಯ. ಹೀಗಿರುವಾಗ, ಸ್ಥಳೀಯ ಸಂಸ್ಥೆ ಚುನಾವಣೆಗೆ ಬ್ಯಾಲೆಟ್ ಪೇಪರ್ ಬಳಸುವ ಅಗತ್ಯತೆ ನಿಜಕ್ಕೂ ಕಾಂಗ್ರೆಸ್‌ಗೆ ಇತ್ತೇ? ಎನ್ನುವ ಪ್ರಶ್ನೆಗೆ ಸರಕಾರವೇ ಉತ್ತರಿಸಬೇಕಿದೆ.