Harish Kera Column: ಭಯವಾಗುತ್ತದೆ ಎಂಬ ಬರಹಗಾರರಿಗೆ ಎರಡು ಮಾತು
ಒಂದು ಬರಹ ಬರೆಯುವುದು, ಮೇಜು ತಯಾರಿಸುವಷ್ಟೇ ಕಷ್ಟ. ಎರಡರಲ್ಲೂ ನಾವು ನಿಜವಾದ ವಸ್ತುಗಳ ಜೊತೆ ಕೆಲಸ ಮಾಡುತ್ತೇವೆ. ಮರ ಎಷ್ಟು ಗಟ್ಟಿಯೋ, ಜೀವನವೂ ಅಷ್ಟೇ ಗಟ್ಟಿ. ಎರಡರಲ್ಲೂ ತಂತ್ರಗಳು, ಕೌಶಲ್ಯಗಳು ಬೇಕಾಗುತ್ತವೆ. ನಿಜ ಹೇಳುವುದಾದರೆ ಇದರಲ್ಲಿ ಮ್ಯಾಜಿಕ್ ತುಂಬಾ ಕಡಿಮೆ.
-
ಕಾಡುದಾರಿ
ಭಯವಾಗುತ್ತಿದೆ. ಮುಂದೇನೂ ಬರೆಯಲಾರೆ ಎನಿಸುತ್ತಿದೆ. ರೈಟರ್ಸ್ ಬ್ಲಾಕ್ ಅಂತೀವಲ್ಲ- ಲೇಖಕನ ಲಕ್ವ- ಹಾಗಾಗಿಬಿಟ್ಟಿದೆ. ಏನು ಬರೆಯುವುದು ಎಂಬ ಸಂಕಷ್ಟ ಒಂದು ಕಡೆ. ಎಐ ಆತಂಕ ಇನ್ನೊಂದು ಕಡೆ. ಎಲ್ಲ ಕಡೆಯೂ ಎಐ ಬರುತ್ತಿದೆ. ಮನುಷ್ಯರಂತೆಯೇ ಬರೆಯು ತ್ತದೆ. ಕೆಲವೊಮ್ಮೆ ಮನುಷ್ಯರಿಗಿಂತ ಅಚ್ಚುಕಟ್ಟಾಗಿ, ಯಾವುದೇ ದೋಷಗಳಿಲ್ಲದೆ ಬರೆದು ಕೊಡು ತ್ತದೆ. ಸೊಗಸಾಗಿ ಅನುವಾದ ಮಾಡುತ್ತದೆ. ನಾವು ಅಪ್ರಸ್ತುತರಾಗುತ್ತೇವೇನೋ ಅನಿಸುತ್ತಿದೆ. ಹಾಗಂತ ಬರಹಗಾರ ಗೆಳೆಯನೊಬ್ಬ ಅಳಲು ತೋಡಿಕೊಳ್ಳುತ್ತಿದ್ದ.
ಅದೇ ಆತಂಕದಲ್ಲೇ ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್‌ನ ಒಂದು ಸಂದರ್ಶನ ನೋಡು ತ್ತಿದ್ದರೆ, ಅವನು ಹೀಗೆ ಹೇಳಿದ್ದು ಕಾಣಿಸಿತು- ‘ನಾನು ಏನನ್ನು ಬರೆಯಬೇಕೆಂದು ಮೊದಲೇ ನಿರ್ಧರಿಸಿದ್ದೆ. ಆದರೆ ಅದರಲ್ಲಿ ಏನೋ ಒಂದು ಕೊರತೆಯಿತ್ತು. ಅದೇನು ಅಂತ ಗೊತ್ತಾಗು ತ್ತಿರಲಿಲ್ಲ. ಕೊನೆಗೂ ಒಂದು ದಿನ ನನಗೆ ಆ ಸರಿಯಾದ ಆ ಧಾಟಿ ಅಥವಾ ಧ್ವನಿ ಸಿಕ್ಕಿತು.
ಅದೇ ಧಾಟಿಯನ್ನು ನಾನು ಮುಂದೆ ‘ಒನ್ ಹಂಡ್ರೆಡ್ ಇಯರ್ಸ್ ಆಫ್ ಸಾಲಿಟ್ಯೂಡ್’ ಪುಸ್ತಕದಲ್ಲಿ ಬಳಸಿದೆ. ಅದು ನನ್ನ ಅಜ್ಜಿ ಕಥೆ ಹೇಳುತ್ತಿದ್ದ ರೀತಿಯನ್ನು ಆಧರಿಸಿತ್ತು. ಆಕೆ ನಂಬಲಸಾಧ್ಯವಾದ ಮತ್ತು ಅದ್ಭುತವಾದ ಕತೆಗಳನ್ನು ಹೇಳುತ್ತಿದ್ದಳು. ಆದರೆ ಅದನ್ನು ತುಂಬಾ ಸಹಜವಾಗಿ ಹೇಳುತ್ತಿದ್ದಳು. ನನಗೆ ಆ ಧಾಟಿ ಸಿಕ್ಕಿದ ತಕ್ಷಣ ನಾನು ಸತತ ಹದಿನೆಂಟು ತಿಂಗಳ ಕಾಲ ಪ್ರತಿದಿನ ಕುಳಿತು ಬರೆದೆ. ಅದಕ್ಕೂ ಮೊದಲು ಈ ಕೃತಿ ಬರೆಯಲು ಪ್ರಯತ್ನಿಸಿದಾಗಲೆ, ನನಗೆ ಆ ಕಥೆಯ ಮೇಲೆ ನಂಬಿಕೆಯೇ ಇರಲಿಲ್ಲ.
ಇದನ್ನೂ ಓದಿ: Harish Kera Column: ಜಗದ ಜೀವಿಗಳ ಸಖ ಅಟೆನ್ ಬರೋ
ನಾನು ಮಾಡಬೇಕಾದ್ದು ಇಷ್ಟೇ ಎಂದು ನಂತರ ಅರಿವಾಯಿತು- ಮೊದಲು ನಾನು ಹೇಳಲಿರುವ ಕಥೆಗಳನ್ನು ನಾನೇ ನಂಬಬೇಕು. ನಂತರ ನನ್ನ ಅಜ್ಜಿ ಮಾಡುತ್ತಿದ್ದ ಹಾಗೆ ನಿರ್ಭಾವದಿಂದ ಕಥೆ ಹೇಳಬೇಕು.’ ಮಾರ್ಕ್ವೆಜ್ ಇನ್ನೂ ಮುಂದುವರಿದು ಹೇಳುತ್ತಾನೆ- ಕೊನೆಗೂ ಸಾಹಿತ್ಯ ಅನ್ನೋದು ಬಡಗಿ ಕೆಲಸ ಮಾಡಿದಂತೆಯೇ. ಎರಡೂ ತುಂಬಾ ಕಷ್ಟದ ಕೆಲಸಗಳು.
ಒಂದು ಬರಹ ಬರೆಯುವುದು, ಮೇಜು ತಯಾರಿಸುವಷ್ಟೇ ಕಷ್ಟ. ಎರಡರಲ್ಲೂ ನಾವು ನಿಜವಾದ ವಸ್ತುಗಳ ಜೊತೆ ಕೆಲಸ ಮಾಡುತ್ತೇವೆ. ಮರ ಎಷ್ಟು ಗಟ್ಟಿಯೋ, ಜೀವನವೂ ಅಷ್ಟೇ ಗಟ್ಟಿ. ಎರಡರಲ್ಲೂ ತಂತ್ರಗಳು, ಕೌಶಲ್ಯಗಳು ಬೇಕಾಗುತ್ತವೆ. ನಿಜ ಹೇಳುವುದಾದರೆ ಇದರಲ್ಲಿ ಮ್ಯಾಜಿಕ್ ತುಂಬಾ ಕಡಿಮೆ.
ಕಠಿಣ ಪರಿಶ್ರಮವೇ ಹೆಚ್ಚು. ಹತ್ತು ಶೇಕಡ ಸ್ಪೂರ್ತಿ ಇದ್ದರೆ, ತೊಂಬತ್ತು ಶೇಕಡ ಬೆವರು ಸುರಿಸುವಿಕೆ ಇರುತ್ತದೆ. ನಾನು ಯಾವತ್ತೂ ಮರದ ಕೆಲಸ ಮಾಡಿಲ್ಲ. ಆದರೆ ನನಗೆ ಅತ್ಯಂತ ಗೌರವಯುತ ಕೆಲಸ ಅದೇ ಅನಿಸುತ್ತದೆ. ಯಾರಿಂದಲೂ ಅದನ್ನು ಸುಲಭವಾಗಿ ಮಾಡಿಸಿಕೊಳ್ಳಲು ಸಾಧ್ಯವಿಲ್ಲ.
ಇನ್ನು ಸ್ಪೂರ್ತಿಯ ಬಗ್ಗೆ ಮಾರ್ಕ್ವೆಜ್ ಹೇಳುವ ಮಾತು ಅರ್ಥಪೂರ್ಣವಾಗಿದೆ- ನಿಮಗೆ ನಿಜವಾಗಿಯೂ ಇಷ್ಟವಾಗುವ ಒಂದು ವಿಷಯ ಸಿಕ್ಕಾಗ ‘ಸ್ಪೂರ್ತಿ’ ಸಿಗುತ್ತದೆ. ಅದು ನಿಮ್ಮ ಕೆಲಸವನ್ನು ಸುಲಭವಾಗಿಸುತ್ತದೆ. ಕಥೆಗಳನ್ನು ಬರೆಯಲು ‘ಅಂತಃಪ್ರಜ್ಞೆ’ (Intuition) ಬಹಳ ಮುಖ್ಯ.
ಯಾವುದು ವಾಸ್ತವ ಎಂಬುದನ್ನು ಅರ್ಥಮಾಡಿಕೊಳ್ಳಲು ಈ ವಿಶೇಷ ಗುಣ ಸಹಾಯ ಮಾಡುತ್ತದೆ. ಅದಕ್ಕೆ ಯಾವುದೇ ವೈಜ್ಞಾನಿಕ ಜ್ಞಾನ ಅಥವಾ ವಿಶೇಷ ಕಲಿಕೆಯ ಅಗತ್ಯ ವಿಲ್ಲ. ಗುರುತ್ವಾಕರ್ಷಣೆಯ ನಿಯಮಗಳನ್ನು ವಿಜ್ಞಾನಕ್ಕಿಂತ ಹೆಚ್ಚಾಗಿ ಅಂತಃಪ್ರಜ್ಞೆಯ ಮೂಲಕ ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು.
ಇದು ಯಾವುದೇ ಹೋರಾಟವಿಲ್ಲದೆಯೇ ಅನುಭವ ಪಡೆಯುವ ಒಂದು ದಾರಿ. ಕಾದಂಬರಿ ಕಾರನಿಗೆ ಅಂತಃಪ್ರಜ್ಞೆ ಅತ್ಯಗತ್ಯ. ಮೂಲತಃ ಇದು ‘ಬೌದ್ಧಿಕತೆ’ಗೆ (intellectualism) ವಿರುದ್ಧವಾದುದು. ಜಗತ್ತಿನಲ್ಲಿ ನಾನು ಅತ್ಯಂತ ಹೆಚ್ಚು ದ್ವೇಷಿಸುವ ವಿಷಯವೆಂದರೆ ಈ ಬೌದ್ಧಿಕತೆ- ಅಂದರೆ ವಾಸ್ತವ ಜಗತ್ತನ್ನು ಕೇವಲ ಒಂದು ಬದಲಾಗದ ಸಿದ್ಧಾಂತವನ್ನಾಗಿ ನೋಡುವುದು.
ಅಂತಃಪ್ರಜ್ಞೆಯಲ್ಲಿ ಒಂದು ಲಾಭವಿದೆ: ಅದು ಇದ್ದರೆ ಇದೆ, ಇಲ್ಲದಿದ್ದರೆ ಇಲ್ಲ. ಅಲ್ಲಿ ನೀವು ವೃತ್ತಾಕಾರದ ಮೊಳೆಯನ್ನು ಚೌಕಾಕಾರದ ರಂಧ್ರಕ್ಕೆ ತುರುಕಲು ವ್ಯರ್ಥ ಪ್ರಯತ್ನ ಮಾಡು ವುದಿಲ್ಲ. ಮಾರ್ಕ್ವೆಜ್ ಮಾತುಗಳಿಂದ ನಮಗೆ ಮೂರು ಅಂಶಗಳು ಸಿಕ್ಕಿದವು- ಅಂತಃಪ್ರಜ್ಞೆ, ಸ್ಪೂರ್ತಿ ಮತ್ತು ಪರಿಶ್ರಮ. ಇವು ಎಐಯಲ್ಲಿ ಇಲ್ಲ. ಆದ್ದರಿಂದ ಎಐ ಬಗ್ಗೆ ಭಯಪಡ ಬೇಕಿಲ್ಲ ಎಂದು ಆ ಬರಹಗಾರನಿಗೆ ತಿಳಿಸಿದೆ.
ಇದಾದ ಮೇಲೆ ಅರ್ನೆಸ್ಟ್ ಹೆಮಿಂಗ್ವೇ ಮತ್ತು ವಿಲಿಯಂ ಫಾಕ್ನರ್ ಕುರಿತು ಮಾರ್ಕ್ವೆಜ್ ಹೇಳಿದ ಈ ಮಾತುಗಳನ್ನೂ ಗಮನಿಸಬೇಕಾಯಿತು- ‘ಹೆಮಿಂಗ್ವೇ ಬರೆದ ಒಂದು ಮಾತು ನನ್ನ ಮೇಲೆ ಬಹಳ ಪ್ರಭಾವ ಬೀರಿತ್ತು: ಅವರಿಗೆ ಬರವಣಿಗೆ ಎನ್ನುವುದು ‘ಬಾಕ್ಸಿಂಗ್’ ಇದ್ದಂತೆ. ಅವರು ತಮ್ಮ ಆರೋಗ್ಯ ಮತ್ತು ಕ್ಷೇಮದ ಬಗ್ಗೆ ತುಂಬಾ ಕಾಳಜಿ ವಹಿಸುತ್ತಿದ್ದರು.
ಫಾಕ್ನರ್‌ಗೆ ಕುಡುಕ ಎಂಬ ಹೆಸರಿತ್ತು. ಆದರೆ ಅವರು ಸಂದರ್ಶನದಲ್ಲಿ ‘ಕುಡಿದಾಗ ಒಂದು ಸಾಲನ್ನೂ ಬರೆಯಲು ಸಾಧ್ಯವಿಲ್ಲ’ ಎಂದು ಹೇಳುತ್ತಿದ್ದರು. ಹೆಮಿಂಗ್ವೇ ಕೂಡ ಇದನ್ನೇ ಹೇಳಿದ್ದರು. ನನ್ನ ಕೆಲವು ಕೃತಿಗಳನ್ನು ಓದಿದ ಕೆಟ್ಟ ಓದುಗರು, ನಾನು ಮಾದಕ ದ್ರವ್ಯ ಸೇವಿಸಿ ಇವುಗಳನ್ನು ಬರೆದಿದ್ದೇನೆಯೇ ಎಂದು ಕೇಳಿದ್ದುಂಟು. ಇದು ಅವರಿಗೆ ಸಾಹಿತ್ಯದ ಬಗ್ಗೆಯಾಗಲಿ ಅಥವಾ ಮಾದಕ ದ್ರವ್ಯಗಳ ಬಗ್ಗೆಯಾಗಲಿ ಏನೂ ತಿಳಿದಿಲ್ಲ ಎಂಬುದನ್ನು ತೋರಿಸುತ್ತದೆ.
ಉತ್ತಮ ಬರಹಗಾರನಾಗಲು ಬರೆಯುವ ಪ್ರತಿಯೊಂದು ಕ್ಷಣದಲ್ಲೂ ನಿಮ್ಮ ಮತಿ ಬಹಳ ಸ್ಪಷ್ಟವಾಗಿರಬೇಕು. ಮತ್ತು ನೀವು ಆರೋಗ್ಯವಾಗಿರಬೇಕು. ಬರವಣಿಗೆ ಎನ್ನುವುದು ಒಂದು ‘ತ್ಯಾಗ’ ಎಂದು ನಂಬುವ ಹಳೆಯ ಕಾಲದ ರೊಮ್ಯಾಂಟಿಕ್ ಕಲ್ಪನೆಯನ್ನು ನಾನು ವಿರೋಧಿಸುತ್ತೇನೆ.
ಅಂದರೆ, ಬಡತನದಲ್ಲಿದ್ದಾಗ ಅಥವಾ ಮಾನಸಿಕವಾಗಿ ಕುಗ್ಗಿದಾಗ ಮಾತ್ರ ಉತ್ತಮ ಸಾಹಿತ್ಯ ಮೂಡಿಬರುತ್ತದೆ ಎಂಬುದು ತಪ್ಪು. ನನ್ನ ಪ್ರಕಾರ, ನೀವು ಬರೆಯುವಾಗ ದೈಹಿಕವಾಗಿ ಮತ್ತು ಮಾನಸಿಕವಾಗಿ ಉತ್ತಮ ಸ್ಥಿತಿಯಲ್ಲಿರಬೇಕು. ಸಾಹಿತ್ಯ ಸೃಷ್ಟಿಗೆ ಒಳ್ಳೆಯ ಆರೋಗ್ಯ ಬೇಕು. ಹಿಂದಿನ ಬರಹಗಾರರಿಗೆ ಇದು ತಿಳಿದಿತ್ತು. ಅವರು ಜೀವನವನ್ನು ಪ್ರೀತಿಸುತ್ತಿದ್ದ ವರು.’
ಇಂಥದೇ ಮಾತುಗಳನ್ನು ಹೆಮಿಂಗ್ವೇಯಂಥ ಹಲವು ಸಾಹಿತಿಗಳು ಹೇಳುತ್ತಾರೆ. ಅದನ್ನಿಟ್ಟುಕೊಂಡು ಪ್ರಸ್ತುತ ಏನಾಗುತ್ತಿದೆ ಎಂದು ನೋಡಬಹುದು. ಎಐ ಸಿದ್ಧಪಡಿಸಿದ ಬರಹಗಳು ಹೆಚ್ಚಾಗಿ ಯಾಂತ್ರಿಕ. ಅವುಗಳಲ್ಲಿ ವಾಕ್ಯ ರಚನೆಗಳು ಪುನರಾವರ್ತಿತ ವಾಗಿರುತ್ತವೆ.
ಧಾಟಿ ಏಕತಾನ. ಶೈಲಿಯನ್ನು ಮೊದಲೇ ಊಹಿಸಬಹುದು. ಎಐ ಬರವಣಿಗೆ ತಾಂತ್ರಿಕವಾಗಿ ಸರಿಯಾಗಿಯೇ ಇರುತ್ತದೆ. ಸಮಸ್ಯೆ ಏನೆಂದರೆ, ಅದರ ಎಲ್ಲ ಬರಹಗಳು ಒಂದೇ ಥರ. ಅಮೆರಿಕದ ಪಾಯಿಂಟರ್ ಇನ್‌ಸ್ಟಿಟ್ಯೂಟ್‌ನ ಮುಖ್ಯ ಎಐ ಬೋಧಕ ಅಲೆಕ್ಸ್ ಮಹದೇವನ್ ಅವರು ಎಐ ಬರವಣಿಗೆಯನ್ನು ‘ಆತ್ಮವಿಲ್ಲದ ಮತ್ತು ಸಾಧಾರಣ ಗುಣಮಟ್ಟದ’ ಬರಹ ಎಂದು ವರ್ಣಿಸುತ್ತಾರೆ. ಅದು ವ್ಯಾಕರಣಬದ್ಧವಾಗಿ ಸರಿಯಿರ ಬಹುದು, ಆದರೆ ಅದರಲ್ಲಿ ಕಲೆ ಇರುವುದಿಲ್ಲ. ಆದರೆ ಇನ್ನೊಂದು ವಿಚಿತ್ರ ಬೆಳವಣಿಗೆ ಆಗುತ್ತಿದೆ.
ಇಂದಿನ ಇಂಟರ್ನೆಟ್ ಇಂತಹ ಸಂವಹನವನ್ನೇ ಹೆಚ್ಚು ಇಷ್ಟಪಡುತ್ತಿದೆ. ತುಂಬಾ ಅಚ್ಚುಕಟ್ಟಾದ ಮತ್ತು ನಯವಾದ ಬರಹಗಳು ಹೆಚ್ಚುತ್ತಿವೆ. ಹೆಚ್ಚು ವೃತ್ತಿಪರವಾಗಿ, ಸಮರ್ಥವಾಗಿ ಮತ್ತು ಅಲ್ಗಾರಿದಂಗಳಿಗೆ ಪೂರಕವಾಗಿ ಇರುತ್ತವೆ. ಈ ಹಿಂದೆ ಕೇವಲ ಲಿಂಕ್ಡ್ ಇನ್ ಪೋಸ್ಟ್‌ಗಳು ಅಥವಾ ಕಂಪನಿ ಇಮೇಲ್‌ಗಳಿಗೆ ಸೀಮಿತವಾಗಿದ್ದ ಅತ್ಯಂತ ವೃತ್ತಿಪರ ಭಾಷೆ, ಈಗ ಅಂತರ್ಜಾಲದಲ್ಲಿ ನಮ್ಮ ದೈನಂದಿನ ಪೋಸ್ಟ್‌ಗಳಲ್ಲೂ ಕಾಣಿಸಿಕೊಳ್ಳುತ್ತಿದೆ.
ನೀವು ಫೇಸ್ಬುಕ್ ನೋಡಿದರೆ, ಅದು ಕೂಡ ಇಂಥ ಪೋಸ್ಟ್‌ಗಳನ್ನು ಪ್ರಮೋಟ್ ಮಾಡುವುದನ್ನು ಕಾಣಬಹುದು. ಮನುಷ್ಯರೂ ಅದನ್ನೇ ಅನುಕರಿಸತೊಡಗುವುದು ಇದರ ದೊಡ್ಡ ಅಪಾಯ. ನಾವು ಸಹಜವಾಗಿಯೇ ಸುತ್ತಮುತ್ತ ಸದಾ ಕೇಳುವ ಅಥವಾ ಕಾಣುವ ಸಂವಹನ ಶೈಲಿಗಳನ್ನು ಅನುಕರಿಸುತ್ತೇವೆ. ಭಾಷಾ ತಜ್ಞರು ಇದನ್ನು ಎಕ್ಸ್‌ಪೋಶರ್ ಎಫೆಕ್ಟ್ ಎನ್ನುತ್ತಾರೆ.
ಕಾಲಾನಂತರದಲ್ಲಿ ಜನ ಅಥವಾ ಲೇಖಕರು ತಮಗೇ ತಿಳಿಯದಂತೆ ಎಐ ವಾಕ್ಯಗಳ ಲಯ, ಪದಗಳು, ಧಾಟಿಯನ್ನು ಅನುಕರಿಸಲು ಪ್ರಾರಂಭಿಸುತ್ತಾರೆ. ಈಗ ಎಐ ಸಿದ್ಧಪಡಿಸಿದ ಬರಹಗಳು ಅಂತರ್ಜಾಲ ಮಾಹಿತಿಯಲ್ಲಿ ಹಾಸುಹೊಕ್ಕಾಗಿವೆ. ಹಾಗಾಗಿ ಈ ಶೈಲಿಗಳು ಜನ ಪ್ರತಿದಿನ ಬಳಸುವ ಡಿಜಿಟಲ್ ಪರಿಸರದ ಭಾಗವಾಗುತ್ತಿವೆ.
ನಿಧಾನವಾಗಿ ನೇರವಾಗಿ ಎಐ ಬಳಸಿ ಬರೆಯದವರೂ ಸಹ ಅರಿಯದಂತೆ ಎಐ ರೀತಿಯ ಬರೆಯಲು ಶುರುಮಾಡಬಹುದು. ಅಥವಾ, ತಾನು ಬರೆದದ್ದು ಎಐಯಂತಿದೆ ಎಂದು ಕಳವಳಪಡ ಲೂಬಹುದು.
ಇದೆಲ್ಲದರಿಂದ ಬಲ ಬಂದಿರುವುದೀಗ ಮನುಷ್ಯ ಸಹಜ ದೋಷ, ಅಪರಿಪೂರ್ಣತೆ, ತಪ್ಪು ಗಳಿಗೆ. ಹಿಂದೆ, ತಪ್ಪುಗಳು ಇರಬಾರದೆನ್ನಲಾಗುತ್ತಿತ್ತು. ಈಗ ಅದು ಇದ್ದರೇ ಅಥೆಂಟಿಕ್ ಮನುಷ್ಯಕೃತಿ ಎನ್ನಬಹುದು. ಅಕ್ಷರ ತಪ್ಪುಗಳು, ವ್ಯಾಕರಣ ದೋಷಗಳು, ಮಾತಿನ ಶೈಲಿ, ಭಾವನಾತ್ಮಕ ಅಸ್ತವ್ಯಸ್ತತೆ- ಇವೆಲ್ಲವೂ ಈಗ ಅಚ್ಚುಕಟ್ಟಾದ ಬರವಣಿಗೆಗಿಂತ ಹೆಚ್ಚು ‘ಮನುಷ್ಯ ಸಹಜ’ವಾಗಿ ಕಾಣುತ್ತಿವೆ.
ಅವುಗಳಲ್ಲಿ ವೈಯಕ್ತಿಕ ಅನುಭವ, ಅಚ್ಚರಿ, ಅನಿರೀಕ್ಷಿತ ತಿರುವುಗಳು, ಒರಟುತನ ಎಲ್ಲ ಇರುತ್ತವೆ. ಇಂದು ನಾವೆಲ್ಲರೂ ಇಂಥ ಬರವಣಿಗೆಯನ್ನು ಹುಡುಹುಡುಕಿ ಸವಿಯ ಬೇಕಾಗಿದೆ. ಅಂದರೆ, ದೋಷಪೂರಿತವಾಗಿದ್ದರೂ, ಏರಿಳಿತಗಳಿಂದ ಕೂಡಿದ್ದರೂ, ಅತ್ಯಂತ ಗಾಢವಾದ ಮಾನವೀಯ ಅಭಿವ್ಯಕ್ತಿ ಇರುವ ಬರವಣಿಗೆ. ಇದನ್ನು ನಕಲು ಮಾಡಲು ಎಐಗೆ ಸಾಧ್ಯವಿಲ್ಲ.
ಮನುಷ್ಯನ ಬರವಣಿಗೆಯಲ್ಲಿ ಅನಿರೀಕ್ಷಿತ ಅಂಶಗಳು ಮತ್ತು ವೈವಿಧ್ಯ ಇರುತ್ತದೆ. ಏಕೆಂದರೆ ಮನುಷ್ಯನೇ ಆಲೋಚನೆಗಳೇ ಹಾಗೆ ಏರಿಳಿತ, ಅಡೆತಡೆಗಳು, ಅಸಮತೋಲನದಿಂದ ಕೂಡಿದ್ದು.ಸಲ್ಮಾನ್ ರಶ್ದಿ ಬರವಣಿಗೆಯ ಕೌಶಲದ ಬಗ್ಗೆ ಹೇಳುತ್ತ ಈ ಮುಂದಿನ ಮಾತು ಗಳನ್ನು ಹೇಳುತ್ತಾರೆ- ‘ನಿಮ್ಮ ಬರವಣಿಗೆಯ ಕೌಶಲ ಉತ್ತಮಗೊಳಿಸಿಕೊಳ್ಳಲು ಒಂದು ಅತ್ಯುತ್ತಮ ಮಾರ್ಗ ಇದೆ. ಅದ್ಯಾವುದು ಅಂದ್ರೆ, ನಿಮ್ಮ ಬಗ್ಗೆ ನಿಮಗೇ ಆಳವಾದ ಅರಿವಿರು ವುದು ಮತ್ತು ನಿಮಗೆ ಯಾವುದು ಹೆಚ್ಚು ಮುಖ್ಯ ಎಂಬುದು ತಿಳಿದಿರುವುದು.
ನೀವು ಯಾರು? ಈ ಜಗತ್ತಿಗೆ ನೀವು ಏನು ಹೇಳಬೇಕಿದೆ? ಇದನ್ನು ನೀವು ಎಷ್ಟು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತೀರೋ, ಅಷ್ಟು ಚೆನ್ನಾಗಿ ನಿಮ್ಮ ಬರವಣಿಗೆಯ ಕೌಶಲ ಅರಳುತ್ತದೆ.’ ಮೇಲೆ ಹೇಳಿದ ಮಾರ್ಕ್ವೆಜ್ ಅವರ ವಿಚಾರಗಳಿಗೂ ಮತ್ತು ರಶ್ದಿ ಅವರ ಈ ಮಾತುಗಳಿಗೂ ಒಂದು ಸಾಮ್ಯ ಇದೆ. ಮಾರ್ಕ್ವೆಜ್ ‘ಅಜ್ಜಿ ಹೇಳುತ್ತಿದ್ದ ಕಥೆಗಳ ಧಾಟಿ’ ಅಥವಾ ‘ಅಂತಃಪ್ರಜ್ಞೆ’ಯ ಬಗ್ಗೆ ಮಾತನಾಡಿದರೆ, ರಶ್ದಿ ‘ಆತ್ಮಜ್ಞಾನ’ದ ಬಗ್ಗೆ ಮಾತನಾಡುತ್ತಿದ್ದಾರೆ.
ಎರಡೂ ಹೇಳುತ್ತಿರುವುದು ಒಂದನ್ನೇ. ಬರವಣಿಗೆ ಎಂಬುದು ಹೊರಗಿನ ತಂತ್ರಕ್ಕಿಂತ ಹೆಚ್ಚಾಗಿ ನಿಮ್ಮ ಒಳಗಿನಿಂದ ಬರಬೇಕಾದ ಧ್ವನಿ ಎಂಬುದನ್ನು. ನಮ್ಮ ಕನ್ನಡದ ಕಥೆಗಾರ ಜಯಂತ ಕಾಯ್ಕಿಣಿ ಆಗಾಗ ಹೇಳುತ್ತಿರುತ್ತಾರೆ- ‘ಕಥೆ ಬರೆಯಲು ಕುಳಿತುಕೊಳ್ಳುವಾಗ ನನ್ನ ತಲೆಯಲ್ಲಿ ಬೇರೇನೂ ಇರುವುದಿಲ್ಲ. ಮೊದಲ ಸಾಲು ಹುಟ್ಟಿಕೊಳ್ಳುತ್ತದೆ.
ಅದನ್ನು ಬರೆಯುತ್ತೇನೆ. ಮೊದಲ ಸಾಲಿನಿಂದ ಎರಡನೇ ಸಾಲು ಹುಟ್ಟಿಕೊಳ್ಳುತ್ತದೆ. ಹೀಗೆ ಯಾವುದೂ ಮೊದಲೇ ನಿಶ್ಚಿತವಾಗಿರುವುದಿಲ್ಲ. ಏನು ಬರೆಯಬೇಕಿದೆ ಎಂಬುದು ಮೊದಲೇ ತಿಳಿದಿರುವುದಿಲ್ಲ’ ಎಂದು. ಯಶವಂತ ಚಿತ್ತಾಲರ ಒಂದು ಮಾತನ್ನೂ ಅವರು ಕೋಟ್ ಮಾಡುತ್ತಾರೆ. ‘ಕೃತಿಯಲ್ಲಿ ಏನಾಗಲಿದೆ ಎಂಬುದನ್ನು ಮೊದಲೇ ತಿಳಿದುಕೊಂಡು ನಾನು ಬರೆಯುವುದಿಲ್ಲ. ತಿಳಿಯುವುದಕ್ಕಾಗಿಯೇ ಅದನ್ನು ಬರೆಯುತ್ತೇನೆ’ ಎಂಬುದದು.
ಹೆಚ್ಚು ಕಡಿಮೆ ಇದೇ ಅರ್ಥ ಬರುವ ಮಾತನ್ನು ಜಪಾನಿ ಕಾದಂಬರಿಕಾರ ಹರೂಕಿ ಮುರಾ ಕಮಿಯೂ ಹೇಳುತ್ತಾನೆ- ‘ನಾನು ಬರೆಯುತ್ತಿ ರುವಾಗ, ಕತೆಯಲ್ಲಿ ಯಾರು ಯಾವ ಕೃತ್ಯ ಎಸಗಿದ್ದಾರೆ ಎಂಬುದು ನನಗೂ ತಿಳಿದಿರೋದಿಲ್ಲ. ಓದುಗರು ಮತ್ತು ನಾನು ಒಂದೇ ನೆಲೆಯಲ್ಲಿರುತ್ತೇವೆ.
ನಾನು ಕಥೆ ಬರೆಯಲು ಪ್ರಾರಂಭಿಸಿ ದಾಗ, ಮುಂದೆ ಏನಾಗಲಿದೆ, ಅಂತ್ಯ ಏನು ಎಂದು ನನಗೆ ತಿಳಿದಿರುವುದಿಲ್ಲ. ಕೊಲೆ ಪ್ರಕರಣವಿದ್ದರೆ, ಕೊಲೆಗಾರ ಯಾರೆಂದೂ ನನಗೆ ತಿಳಿಯದು. ನಾನು ಪುಸ್ತಕವನ್ನು ಬರೆಯುವುದು ಏಕೆಂದರೆ, ಅದನ್ನು ಕಂಡುಹಿಡಿಯಲು. ಕೊಲೆಗಾರ ಯಾರೆಂದು ನನಗೆ ಮೊದಲೇ ತಿಳಿದಿದ್ದರೆ ನಾನು ಕಥೆ ಯಾಕೆ ಬರೆಯ ಬೇಕು?’ ಈ ಮಾತುಗಳ ಸಾಮ್ಯತೆ ನಮ್ಮನ್ನು ಚಕಿತಗೊಳಿಸುವಂತಿದೆ.
ಓದುಗರ ಹೃದಯ ಸ್ಪರ್ಶಿಸುವಂತೆ ಬರೆಯುವ ಸಾಹಿತಿಗಳು ವಿಶ್ವದುದ್ದಗಲಕ್ಕೂ ಬೇರೆ ಬೇರೆ ಥರ ಇದ್ದರೂ ಒಂದೇ ಥರ ಎನ್ನಬಹುದೋ ಏನೋ. ಆಮೇಲೆ, ನಮ್ಮ ದೇವನೂರು ಮಹಾದೇವ ಅವರು ಹೇಳಬಹುದಾದಂಥ ಒಂದು ಮಾತನ್ನೂ ಮುರಾಕಮಿ ಹೇಳುತ್ತಾನೆ. ಅದು ಹೀಗಿದೆ- ನಾನು ಕಾದಂಬರಿಗಳನ್ನು ಬರೆಯುವುದಕ್ಕೆ ಒಂದೇ ಒಂದು ಕಾರಣ ಇದೆ.
ಪ್ರತಿಯೊಬ್ಬ ಮಾನವನ ಆತ್ಮದ ಗೌರವದತ್ತ ಬೆಳಕು ಚೆಲ್ಲುವುದು. ಕಥೆಯ ಉದ್ದೇಶ ಎಚ್ಚರಿಕೆಯ ಗಂಟೆ ಬಾರಿಸುವಂತದ್ದು. ವ್ಯವಸ್ಥೆ ಎಂಬ ದೊಡ್ಡ ಶಕ್ತಿ ನಮ್ಮ ಆತ್ಮವನ್ನು ತನ್ನ ಬಲೆಗೆ ಸಿಕ್ಕಿಸಿ ಅವಮಾನ ಮಾಡದಂತೆ ಅದರ ಮೇಲೆ ಸದಾ ಬೆಳಕು ಹರಿಸುವುದು ಕಥೆಯ ಕೆಲಸ. ಪ್ರತಿಯೊಬ್ಬರ ಆತ್ಮವೂ ವಿಭಿನ್ನ, ವಿಶೇಷ ಎಂಬುದನ್ನು ಕಥೆಗಳ ಮೂಲಕ ಸ್ಪಷ್ಟಪಡಿಸುವುದು ಕಾದಂಬರಿಕಾರನ ಕೆಲಸ ಎಂದು ನಾನು ನಂಬುತ್ತೇನೆ.
ಜೀವನ, ಸಾವಿನ ಕಥೆಗಳು, ಪ್ರೀತಿಯ ಕಥೆಗಳು, ಜನರನ್ನು ಅಳಿಸುವ ಕಥೆಗಳು, ಭಯದಿಂದ ನಡುಗಿಸುವ ಕಥೆಗಳು, ನಗುವಿನಿಂದ ಕದಲಿಸುವ ಕಥೆಗಳು - ಇವೆಲ್ಲವನ್ನೂ ಬರೆಯುವುದು ಅದಕ್ಕಾಗಿಯೇ. ಆ ಕಾರಣಕ್ಕೇ ನಾವು ಪ್ರತಿ ದಿನ ತುಂಬಾ ಗಂಭೀರವಾಗಿ ಕಲ್ಪಿತ ಕಥೆಗಳನ್ನು ರಚಿಸುತ್ತಾ ಮುಂದುವರೆಯುತ್ತೇವೆ.