Ravi Sajangadde Column: ಕೆಂಪುಕೋಟೆಯಿಂದ ಮೊಳಗಲಿದೆ ವಂದೇ ಮಾತರಂ
ಭಾರತದ ‘ಅಮೃತ ಕಾಲ’ದ ಈ ಸಂಭ್ರಮದ ಸಮಯದಲ್ಲಿ, ಸ್ವಾತಂತ್ರ್ಯ ಚಳುವಳಿಯ ಮೂಲ ಮಂತ್ರ ಗಳಲ್ಲಿ ಒಂದಾಗಿದ್ದ ‘ವಂದೇ ಮಾತರಂ’ಗೆ ಇಂತಹ ಅತ್ಯುನ್ನತ ರಾಷ್ಟ್ರೀಯ ಗೌರವ ಲಭಿಸುತ್ತಿರುವುದು ಹೆಮ್ಮೆ, ಭಕ್ತಿ ಮತ್ತು ರೋಮಾಂಚನಕಾರಿ ವಿಚಾರ! 1875ರಲ್ಲಿ ರಚನೆಯಾದ ‘ವಂದೇ ಮಾತರಂ’ ಗೀತೆ, ಬ್ರಿಟಿಷ್ ಆಡಳಿತದ ವಿರುದ್ಧದ ಹೋರಾಟದಲ್ಲಿ ಕೋಟ್ಯಂತರ ಕ್ರಾಂತಿಕಾರಿಗಳಿಗೆ ಆತ್ಮಬಲ- ಆತ್ಮ ಸ್ಥೈರ್ಯ ನೀಡಿ ದೇಶಪ್ರೇಮವನ್ನು ಬಡಿದೆಬ್ಬಿಸಿತ್ತು.
-
ರಾಷ್ಟ್ರೀಯ ಗೀತೆ
ರವೀ ಸಜಂಗದ್ದೆ
ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ‘ಜನಗಣಮನ’ ಗೀತೆಯ ಒಟ್ಟೊಟ್ಟಿಗೆ ಪ್ರಜೆಗಳಲ್ಲಿ ದೇಶಭಕ್ತಿಯ ಕಿಚ್ಚನ್ನು ಹೊತ್ತಿಸಿ, ‘ಸ್ವರಾಜ್ಯ’ದ ಕನಸಿಗೆ ಬಲ ನೀಡಿದ ಮಹೋನ್ನತ ರಾಷ್ಟ್ರೀಯ ಗೀತೆ ‘ವಂದೇ ಮಾತರಂ’. ಬಂಕಿಮಚಂದ್ರ ಚಟರ್ಜಿಯವರು ರಚಿಸಿ, 150 ವರ್ಷಗಳು ಪೂರ್ಣ ಗೊಂಡಿರುವ ಸಂದರ್ಭದಲ್ಲಿ ಮತ್ತು ದೇಶದ 80ನೆಯ ಸ್ವಾತಂತ್ರ್ಯ ದಿನಾಚರಣೆಯ ಶುಭ ಘಳಿಗೆ ಯಲ್ಲಿ ದೆಹಲಿಯ ಐತಿಹಾಸಿಕ ಕೆಂಪುಕೋ ಟೆಯ ಮೇಲಿನಿಂದ ಇದೇ ಪ್ರಪ್ರಥಮ ಬಾರಿಗೆ ಈ ದೇಶಭಕ್ತಿ ಗೀತೆಯು ಅಧಿಕೃತವಾಗಿ ಮೊಳಗಲಿದೆ. ಕಳೆದ ವಾರವಷ್ಟೇ ಸಂಸತ್ ಅಧಿವೇಶನದ ಸಂದರ್ಭದಲ್ಲಿ ಮೊದಲ ಬಾರಿಗೆ ‘ವಂದೇ ಮಾತರಂ’ ಸಂಸತ್ತಿನಲ್ಲಿ ಮೊಳಗಿತ್ತು!
ಭಾರತದ ‘ಅಮೃತ ಕಾಲ’ದ ಈ ಸಂಭ್ರಮದ ಸಮಯದಲ್ಲಿ, ಸ್ವಾತಂತ್ರ್ಯ ಚಳುವಳಿಯ ಮೂಲ ಮಂತ್ರ ಗಳಲ್ಲಿ ಒಂದಾಗಿದ್ದ ‘ವಂದೇ ಮಾತರಂ’ಗೆ ಇಂತಹ ಅತ್ಯುನ್ನತ ರಾಷ್ಟ್ರೀಯ ಗೌರವ ಲಭಿಸು ತ್ತಿರುವುದು ಹೆಮ್ಮೆ, ಭಕ್ತಿ ಮತ್ತು ರೋಮಾಂಚನಕಾರಿ ವಿಚಾರ! 1875ರಲ್ಲಿ ರಚನೆಯಾದ ‘ವಂದೇ ಮಾತರಂ’ ಗೀತೆ, ಬ್ರಿಟಿಷ್ ಆಡಳಿತದ ವಿರುದ್ಧದ ಹೋರಾಟದಲ್ಲಿ ಕೋಟ್ಯಂತರ ಕ್ರಾಂತಿಕಾರಿಗಳಿಗೆ ಆತ್ಮಬಲ- ಆತ್ಮಸ್ಥೈರ್ಯ ನೀಡಿ ದೇಶಪ್ರೇಮವನ್ನು ಬಡಿದೆಬ್ಬಿಸಿತ್ತು.
ರವೀಂದ್ರ ನಾಥ ಟ್ಯಾಗೋರರು 1896ರ ಕಾಂಗ್ರೆಸ್ ಅಧಿವೇಶನ ದಲ್ಲಿ ಇದನ್ನು ಪ್ರಥಮ ಬಾರಿಗೆ ಹಾಡಿದ ದಿನದಿಂದ ಹಿಡಿದು, ಭಗತ್ ಸಿಂಗ್, ಚಂದ್ರಶೇಖರ ಆಜಾದ್, ಅಶಾಖು ಖಾನ್ ಅವರಂತಹ ನೂರಾರು ಯುವ ವೀರರು ದೇಶಕ್ಕಾಗಿ ಗಲ್ಲಿಗೇರುವ ಮುನ್ನ ‘ವಂದೇ ಮಾತರಂ’ ಎಂದು ಘೋಷಣೆ ಕೂಗುವವರೆಗೆ; ರೇಡಿಯೋ, ದೂರದರ್ಶನದ ಬೆಳಗಿನ ಪ್ರಸಾರದಲ್ಲಿ ದಿನಾಲೂ ಇಂಪಾಗಿ ‘ವಂದೇ ಮಾತರಂ’ ಬರುತ್ತಿದ್ದ ಆ ದಿನಗಳಿಂದ ತೊಡಗಿ ಈಗ ಸಂಸತ್ ಭವನದಲ್ಲಿ ಮತ್ತು ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಮೊಳಗುತ್ತಿರುವ ಈ ಗೀತೆಯು ದೇಶದ ಸಾಂಸ್ಕೃತಿಕ, ರಾಜಕೀಯ ಮತ್ತು ಇತಿಹಾಸದ ಉಚ್ಚ ಸಂಕೇತವಾಗಿ ಬೆಳೆದು ನಿಂತಿದೆ.
ಇದನ್ನೂ ಓದಿ: Ravi Sajangadde Column: ಡಿಜಿಟಲ್ ಪಾವತಿ ಶುಲ್ಕ: ಸಾಧಕ ಬಾಧಕಗಳು
ವಿಶೇಷವೆಂದರೆ, ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ವಂದೇ ಮಾತರಂನ ಆರೂ ಚರಣಗಳನ್ನು ಹಾಡಲಿದ್ದಾರೆ. ಪ್ರಧಾನಿಗಳ ಆಗಮನವಾದ ಕೂಡಲೇ ‘ವಂದೇ ಮಾತರಂ’ ಗೀತ ಗಾಯನ ನಡೆಯಲಿದೆ. ಅದಾದ ನಂತರ ತ್ರಿವರ್ಣ ಧ್ವಜಾರೋಹಣ ನೆರವೇರಿ ರಾಷ್ಟ್ರಗೀತೆ ‘ಜನ ಗಣ ಮನ’ ಧ್ವನಿಸಲಿದೆ. ಬಳಿಕ ಪ್ರಧಾನಿಯವರು ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಭಾಷಣದ ಮುಕ್ತಾಯದ ಕೊನೆಗೂ ರಾಷ್ಟ್ರಗೀತೆಯ ಜೊತೆಗೆ ವಂದೇ ಮಾತರಂನ ಎಲ್ಲಾ ಆರೂ ಚರಣಗಳನ್ನು ಮತ್ತೆ ಹಾಡಲಾಗುತ್ತದೆ. ರಕ್ಷಣಾ ಸಚಿವಾಲಯದ ಅಧಿಕೃತ ಆಹ್ವಾನ ಪತ್ರಿಕೆಗಳಲ್ಲಿ ‘ವಂದೇ ಮಾತರಂ’ನ ಆರೂ ಚರಣಗಳನ್ನು ಮುದ್ರಿಸಲಾಗಿದೆ!
ಕೆಂಪುಕೋಟೆಯಲ್ಲಿ ಸ್ವಾತಂತ್ರ್ಯ ಸಂಭ್ರಮದ ಸಂದರ್ಭದಲ್ಲಿ ವಂದೇ ಮಾತರಂನ ವೈಭವವನ್ನು ದೇಶದ ಜನರ ಕಣ್ಣಿಗೆ ಕಟ್ಟುವಂತೆ ಬಿಂಬಿಸಲು ವಿಶಿಷ್ಟ ದೃಶ್ಯ ವಿನ್ಯಾಸಗಳನ್ನು ರೂಪಿಸಲಾಗಿದೆ. ಜ್ಞಾನಪಥದಲ್ಲಿ ಎನ್‌ಸಿಸಿಯ 2500 ಆಯ್ದ ಕೆಡೆಟ್‌ಗಳು ಮತ್ತು ‘ಮೈ ಭಾರತ್’ನ ಸ್ವಯಂಸೇವಕರು ಬೃಹತ್ ಮಾನವ ರಚನೆಯ ಮೂಲಕ ದೇವನಾಗರಿ ಲಿಪಿಯಲ್ಲಿ ‘ವಂದೇ ಮಾತರಂ’ ಪದ ಸಂಯೋಜನೆಯನ್ನು ಪ್ರದರ್ಶಿಸಲಿದ್ದಾರೆ. ಕೆಂಪುಕೋಟೆಯ ಗೋಡೆಗಳ ಎರಡೂ ಬದಿಗಳಲ್ಲಿ ಹೂವುಗಳ ಅಲಂಕಾರದಿಂದ ‘ವಂದೇ ಮಾತರಂ’ ಎಂದು ಬರೆದು ಕಲಾತ್ಮಕವಾಗಿ ವಿನ್ಯಾಸಗೊಳಿಸ ಲಾಗಿದೆ.
ಕಾರ್ಯಕ್ರಮದಲ್ಲಿ ಭಾರತೀಯ ವಾಯುಪಡೆಯ ಎಂಐ-17 ಹೆಲಿಕಾಪ್ಟರ್ ಆಕಾಶದಲ್ಲಿ ಹಾರುತ್ತಾ ‘ವಂದೇ ಮಾತರಂ- 150 ವರ್ಷಗಳು’ ಎಂಬ ಬ್ಯಾನರ್ ಪ್ರದರ್ಶಿಸಿ, ನೆರೆದಿರುವ ಜನಸ್ತೋಮದ ಮೇಲೆ ಪುಷ್ಪವೃಷ್ಟಿ ಬೀರಲಿದೆ. ಈ ದೃಶ್ಯವು ದೇಶದ ಸಶಸ್ತ್ರ ಪಡೆಗಳ ಶಕ್ತಿ, ಶಿಸ್ತು ಹಾಗೂ ರಾಷ್ಟ್ರೀಯ ಭಾವನೆಯ ಅದ್ಭುತ ಸಂಗಮಕ್ಕೆ ಸಾಕ್ಷಿಯಾಗಲಿದೆ. ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ಐತಿಹಾಸಿಕ!
ಇದು ಆಧುನಿಕ ಭಾರತದ ಯುವ ಪೀಳಿಗೆಯ ‘ವಿಕಸಿತ ಭಾರತ’ದ ಕಲ್ಪನೆಗೂ ದೀವಟಿಕೆ ಯಾಗಲಿದೆ. ಈ ಬಾರಿಯ ಸ್ವಾತಂತ್ರ್ಯೋತ್ಸವಕ್ಕೆ ‘ವಿಕಸಿತ ಭಾರತಕ್ಕೆ ಯುವ ನಾಯಕತ್ವ’ ಮತ್ತು ‘ಯುವಶಕ್ತಿ- ವಿಕಸಿತ ಭಾರತ 2047ರತ್ತ ಪಯಣ’ ಎಂಬ ಪರಿಕಲ್ಪನೆಯನ್ನು ನಿಗದಿಪಡಿಸಲಾಗಿದೆ.
2047ರ ಸ್ವಾತಂತ್ರ್ಯ ಶತಮಾನೋತ್ಸವದ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ಪರಿಪೂರ್ಣ ರಾಷ್ಟ್ರವನ್ನಾಗಿಸುವ ಉನ್ನತ ಯೋಜನೆಯಲ್ಲಿ ‘ಯುವಜನತೆ ವಹಿಸಬೇಕಾದ ನಿರ್ಣಾಯಕ ಪಾತ್ರ’ ದ ಕುರಿತು ಸರಕಾರ ವಿಶೇಷ ಗಮನ- ಮುತುವರ್ಜಿ ಹರಿಸಿದೆ. ಈ ಕಾರಣಕ್ಕಾಗಿ, 2026ರ ಅಂತಾ ರಾಷ್ಟ್ರೀಯ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಹಾಗೂ ಗಣಿತ ಒಲಿಂಪಿಯಾಡ್ ಸ್ಪರ್ಧೆ ಗಳಲ್ಲಿ ಪದಕ ಗೆದ್ದು ಕೀರ್ತಿ ತಂದಿರುವ 19 ಯುವ ಸಾಧಕ ವಿದ್ಯಾರ್ಥಿಗಳಿಗೆ ಆಹ್ವಾನ ನೀಡಲಾಗಿದೆ.
ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಯುವಶಕ್ತಿ ಸಾಧಿಸುತ್ತಿರುವ ಅಪಾರ ಪ್ರಗತಿ ಯನ್ನು ಜಗತ್ತಿಗೆ ಪ್ರದರ್ಶಿಸಲು ಈ ವಿನೂತನ ಹೆಜ್ಜೆ ಇಡಲಾಗಿದೆ. ಇದು ಅನ್ಯಾನ್ಯ ಕಾರಣಗಳಿಂದ ಕೇಂದ್ರ ಸರಕಾರದ ಮೇಲೆ ಮುಗಿಬೀಳುತ್ತಿರುವ ‘ಜೆನ್ ಝಿ’ಯ ಕೋಪ ತಣಿಸುವ ಪ್ರಯತ್ನದಂತೆ ಭಾಸವಾಗುತ್ತಿದೆ! ಸ್ವಾತಂತ್ರ್ಯೋತ್ಸವ ಸಂಭ್ರಮ ಇಮ್ಮಡಿಗೊಳಿಸಲು ದೇಶದ ಮೂಲೆಮೂಲೆಗಳಿಂದ ಸುಮಾರು 5000 ದಷ್ಟು ವಿಶೇಷ ಅತಿಥಿಗಳನ್ನು ಆಹ್ವಾನಿಸಲಾಗಿದೆ.
ದೇಶದ ಪ್ರಗತಿಗೆ ನಿಸ್ವಾರ್ಥವಾಗಿ ಶ್ರಮಿಸುತ್ತಿರುವ ಯುವ ನವೋದ್ಯಮಿಗಳು, ವಿವಿಧ ರಂಗಗಳ ಸೃಜನಶೀಲರು, ಅನನ್ಯ ಸಂಶೋಧಕರು, ಪ್ರಗತಿಪರ ಕೃಷಿಕರು, ಕುಶಲಕರ್ಮಿಗಳು, ಸ್ವಚ್ಛತಾ ಕಾರ್ಮಿಕರು ಮತ್ತು ಸರಕಾರದ ವಿವಿಧ ಜನಕಲ್ಯಾಣ ಯೋಜನೆಗಳ ಫಲಾನುಭವಿಗಳು ಇರಲಿದ್ದಾರೆ.
ಇದಲ್ಲದೆ ದೇಶದ ವಿವಿಧ ಭಾಗಗಳ 1500ಕ್ಕೂ ಹೆಚ್ಚು ನಾಗರಿಕರು ತಂತಮ್ಮ ಸಾಂಪ್ರದಾಯಿಕ ಉಡುಪುಗಳಲ್ಲಿ ಆಗಮಿಸಿ ಕೆಂಪುಕೋಟೆಯಲ್ಲಿ ಭಾರತದ ‘ವೈವಿಧ್ಯತೆಯಲ್ಲಿ ಏಕತೆ’ಯ ಕಿರು ರೂಪಕವನ್ನು ಪ್ರದರ್ಶಿಸಲಿದ್ದಾರೆ. ಇದರ ಜೊತೆಗೆ ರಕ್ಷಣಾ ಸಚಿವಾಲಯವು MyGov ಸಹಯೋಗ ದೊಂದಿಗೆ ಆಯೋಜಿಸಿದ್ದ ಎಐ ತಂತ್ರಜ್ಞಾನದ ಪಾತ್ರ, ಕಲಾ ಪ್ರದರ್ಶನ ಹಾಗೂ ಪ್ರಬಂಧ ಸ್ಪರ್ಧೆ ಗಳಲ್ಲಿ ವಿಜೇತರಾದ 600ಕ್ಕೂ ಹೆಚ್ಚು ಶಾಲಾ-ಕಾಲೇಜು ವಿದ್ಯಾರ್ಥಿಗಳೂ ಸ್ವಾತಂತ್ರ್ಯ ಸಂಭ್ರಮದಲ್ಲಿ ಭಾಗಿಯಾಗುತ್ತಿದ್ದಾರೆ.
ವಂದೇ ಮಾತರಂ ಗೀತೆಗೆ ಅರ್ಹ ಗೌರವ ಮತ್ತದರ ಪಾವಿತ್ರ್ಯ ಕಾಯ್ದು-ಕಾಪಾಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಶಾಸನಾತ್ಮಕವಾಗಿ ಮಹತ್ವದ ಹೆಜ್ಜೆಯಿಟ್ಟಿದೆ. ಸಂಸತ್ತಿನಲ್ಲಿ ಅಂಗೀಕಾರಗೊಂಡ ‘ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ತಿದ್ದುಪಡಿ ವಿಧೇಯಕ 2026’ರಲ್ಲಿ ರಾಷ್ಟ್ರಧ್ವಜ, ರಾಷ್ಟ್ರ ಗೀತೆ ‘ಜನಗಣಮನ’ಕ್ಕೆ ನೀಡಲಾಗಿರುವ ಶಾಸನಬದ್ಧ ಕಾನೂನು, ಗೌರವ ಮತ್ತು ರಕ್ಷಣೆಯನ್ನು ‘ವಂದೇ ಮಾತರಂ’ಗೂ ವಿಸ್ತರಿಸಿದೆ.
ಈ ಕಾಯ್ದೆಯ ನಿಬಂಧನೆಗಳ ಪ್ರಕಾರ, ರಾಷ್ಟ್ರಧ್ವಜ, ರಾಷ್ಟ್ರಗೀತೆ ಮತ್ತು ‘ವಂದೇ ಮಾತರಂ’ಗೆ ಯಾವುದೇ ರೀತಿಯಲ್ಲಿ ಅವಮಾನ ಮಾಡುವುದು, ಗಾಯನಕ್ಕೆ ಅಡ್ಡಿಪಡಿಸುವುದು ಮುಂತಾದ ಕೃತ್ಯಗಳು ಶಿಕ್ಷಾರ್ಹ ಅಪರಾಧಗಳು. ಅಪರಾಧ ಎಸಗುವ ವ್ಯಕ್ತಿಗೆ ಗರಿಷ್ಠ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ, ದಂಡ ಅಥವಾ ಎರಡನ್ನೂ ವಿಧಿಸುವ ನಿಯಮವಿದೆ. ದೇಶದ ಸಾರ್ವಭೌಮತೆ, ಸಾಂಸ್ಕೃತಿಕ ಹೆಮ್ಮೆಯನ್ನು ಶಾಸನಬದ್ಧ ವಾಗಿ ಎತ್ತಿಹಿಡಿಯುವ ಅತುಲ್ಯ ಮತ್ತು ಶ್ಲಾಘನೀಯ ಕಾರ್ಯವಿದು.
ವಂದೇ ಮಾತರಂನ 150ನೆಯ ವರ್ಷಾಚರಣೆಯ ಸಂಭ್ರಮವು ದೇಶಾದ್ಯಂತ ನಡೆಯುತ್ತಿದೆ. ಆಗ 8 ರಿಂದ 15ರವರೆಗೆ ದೇಶದ 343ರಷ್ಟು ಪ್ರಮುಖ ಐತಿಹಾಸಿಕ ಹಾಗೂ ಸಾರ್ವಜನಿಕ ಕೇಂದ್ರ-ಸ್ಥಳ ಗಳಲ್ಲಿ ಭಾರತೀಯ ಭೂಸೇನೆ, ನೌಕಾಪಡೆ, ವಾಯುಪಡೆ, ಕರಾವಳಿ ಕಾವಲು ಪಡೆ, ಎನ್‌ಸಿಸಿ ಹಾಗೂ ವಿವಿಧ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳ ಮಿಲಿಟರಿ ಬ್ಯಾಂಡ್ ತಂಡಗಳು ಸಾರ್ವಜನಿಕವಾಗಿ ದೇಶಭಕ್ತಿ ಗೀತೆಗಳು ಮತ್ತು ವಂದೇ ಮಾತರಂನ ನಾದವನ್ನು ಮೊಳಗಿಸಿವೆ.
ವಿಶೇಷವಾಗಿ, ಈ ಗೀತೆಯ ರಚನೆಕಾರ ಚಟರ್ಜಿಯವರ ಜನ್ಮಸ್ಥಳ ಪಶ್ಚಿಮ ಬಂಗಾಳದ ನೈಹಾಟಿ ಯಲ್ಲಿ ಭಾರತೀಯ ಸೇನೆಯು ಪ್ರತ್ಯೇಕ ಬ್ಯಾಂಡ್ ಕಾರ್ಯಕ್ರಮ ಆಯೋಜಿಸಿ ಆ ಮಹಾನ್ ಸಾಹಿತಿಗೆ ಭಾವಪೂರ್ಣ ಗೌರವ ನಮನ ಸಲ್ಲಿಸಿದೆ. ಈ ಬ್ಯಾಂಡ್ ಪ್ರದರ್ಶನಗಳು ದೇಶದ ನಾಗರಿಕರಲ್ಲಿ, ವಿಶೇಷವಾಗಿ ಯುವಜನತೆ ಯಲ್ಲಿ ದೇಶಪ್ರೇಮದ ಹೊಸ ಕ್ರಾಂತಿಕಾರಿ ಕಿಚ್ಚನ್ನು ನಿಸ್ಸಂಶಯವಾಗಿ ಪುನರುಜ್ಜೀವನಗೊಳಿಸಿವೆ.
ದೇಶವು ಇತ್ತೀಚಿನ ದಶಕಗಳಲ್ಲಿ ಸಾಧಿಸಿದ ಪ್ರಗತಿಯನ್ನು ಪ್ರದರ್ಶಿಸುವ ಕಟ್ ಔಟ್‌ಗಳು ಮತ್ತು ವೈಜ್ಞಾನಿಕ ಪ್ರದರ್ಶನ ಮಂಟಪಗಳನ್ನು ಕೆಂಪುಕೋಟೆಯ ಪರಿಸರದಲ್ಲಿ ಸಿದ್ಧಪಡಿಸಲಾಗಿದೆ. ಭಾರತದ ಬಾಹ್ಯಾಕಾಶ ತಂತ್ರeನದ ಮೈಲುಗಲ್ಲುಗಳು, ಪರಮಾಣು ರಂಗದ ಸ್ವಾವಲಂಬನೆ, ರಕ್ಷಣಾ ಕ್ಷೇತ್ರದಲ್ಲಿ ದೇಶ ಸಾಧಿಸಿರುವ ‘ಆತ್ಮನಿರ್ಭ ರತೆ’ಯ ಚಿತ್ರಣ ಮುಂತಾದವುಗಳನ್ನು ಇಲ್ಲಿ ಪ್ರದರ್ಶಿಸ ಲಾಗುತ್ತದೆ.
ಪ್ರೇಕ್ಷಕರ ಆಸನಗಳ ಬ್ಲಾಕ್ ಗಳಿಗೆ ಭಾರತದ ಪ್ರಮುಖ ಸರೋವರಗಳ ಹೆಸರಿಡಲಾಗಿದೆ. ನೂತನ ಜಲಚಾಲಿತ ಹೈಡ್ರಾಲಿಕ್ ಆಸನಗ ಳನ್ನು ಬಳಸಲಾಗಿದ್ದು ಇದು ರಾಷ್ಟ್ರೀಯ ಐಕ್ಯತೆಯ ಸಂಕೇತ ವಾಗಿ ಕಂಗೊಳಿಸುತ್ತಿದೆ. ಗಮನಾರ್ಹ ವಿಷಯವೆಂದರೆ, 77ನೇ ಗಣರಾಜ್ಯೋತ್ಸವ ಮತ್ತು ದೆಹಲಿಯ ಕೆಂಪುಕೋಟೆಯಲ್ಲಿ ನಡೆದ ಭಾರತ್ ಪವರ್ ಕಾರ್ಯಕ್ರಮಗಳಲ್ಲಿಯೂ ‘ವಂದೇ ಮಾತರಂ 150’ ಪರಿಕಲ್ಪನೆಯನ್ನು ಮುಖ್ಯ ವಸ್ತುವಾಗಿ ಬಳಸಿಕೊಳ್ಳಲಾಗಿತ್ತು, ಅದರ ಮುಂದುವರಿದ ಭಾಗವನ್ನು 80ನೆಯ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಕಾಣಬಹುದು.
ಭಾರತೀಯ ಸಶಸ್ತ್ರ ಪಡೆ ಮತ್ತು ದೆಹಲಿ ಪೊಲೀಸ್ ತುಕಡಿಗಳು ನಡೆಸಲಿರುವ ವಿಶಿಷ್ಟ ಪಥ ಸಂಚಲನ, ದೇಶದ ವಿವಿಧ ಭಾಗಗಳಿಂದ ಆಯ್ಕೆಯಾದ ಶಾಲಾ ಮಕ್ಕಳು ಮತ್ತು ಪ್ರಸಿದ್ದ ಸಾಂಪ್ರ ದಾಯಿಕ ಕಲಾ ತಂಡಗಳು ನಡೆಸಿಕೊಡ ಲಿರುವ ಕಲಾ ಪ್ರದರ್ಶನಗಳು ಸ್ವಾತಂತ್ರ್ಯ ಸಂಭ್ರಮಕ್ಕೆ ಅಪಾರ ಮೆರುಗು ನೀಡಲಿವೆ.
ರಕ್ಷಣಾ ಪಡೆಗಳ ಪರೇಡ್ ರಾಷ್ಟ್ರದ ಭದ್ರತೆ ಮತ್ತು ಸಾರ್ವಭೌಮತ್ವದ ಗಟ್ಟಿ ಸಂದೇಶ ನೀಡಿದರೆ, ಸಾಂಸ್ಕೃತಿಕ ಪ್ರದರ್ಶನಗಳು ಭಾರತದ ವೈವಿಧ್ಯಮಯ ಪರಂಪರೆಯ ಸೌಂದರ್ಯವನ್ನು ಅನಾವರಣಗೊಳಿಸಲಿವೆ. ಈ ಸಾಂಸ್ಕೃತಿಕ ವೈಭವವು ಕೆಂಪುಕೋಟೆಯ ಆವರಣದಲ್ಲಿ ಒಂದು ಭಕ್ತಿಯ ಹಾಗೂ ರೋಮಾಂಚನಕಾರಿ ವಾತಾವರಣವನ್ನು ಸೃಷ್ಟಿಸಲಿದೆ.
ಇಂತಹ ಅಪೂರ್ವ ಆಚರಣೆಯು ಭಾರತದ ಪ್ರಗತಿ ಹಾಗೂ ಒಗ್ಗಟ್ಟಿನ ಜಾಗತಿಕ ಸಂಕೇತವಾಗಿ ಇತಿಹಾಸದ ಪುಟಗಳಲ್ಲಿ ಶಾಶ್ವತವಾಗಿ ದಾಖಲಾಗಲಿದೆ. ಕೋಟ್ಯಂತರ ಭಾರತೀಯರಿಗೆ ಬ್ರಿಟಿಷರ ದಾಸ್ಯದ ಸಂಕೋಲೆಗಳನ್ನು ಕಳಚಲು ಪ್ರೇರಣೆಯಾಗಿದ್ದ ವಂದೇ ಮಾತರಂ ಗೀತೆ, 150 ವರ್ಷಗಳ ಸುದೀರ್ಘ-ಚಾರಿತ್ರಿಕ ಪಯಣದ ನಂತರವೂ ತನ್ನ ಆಕರ್ಷಣೆ, ಪವಿತ್ರತೆ ಹಾಗೂ ಸಾಂಸ್ಕೃತಿಕ ಚೈತನ್ಯವನ್ನು ಎಳ್ಳಷ್ಟೂ ಕಳೆದುಕೊಂಡಿಲ್ಲ!
ವಂದೇ ಮಾತರಂನ ಆ ಶ್ರೇಷ್ಠ ಸಾಲುಗಳು 21ನೇ ಶತಮಾನದ ‘ವಿಕಸಿತ ಭಾರತ’ದ ಕನಸನ್ನು ನನಸು ಮಾಡಲು ಯುವಜನತೆಗೆ ಹೊಸ ಶಕ್ತಿ ತುಂಬುತ್ತಿವೆ. ಐತಿಹಾಸಿಕ ಕೆಂಪುಕೋಟೆಯಿಂದ ಚೊಚ್ಚಲ ಬಾರಿಗೆ ಆರೂ ಚರಣಗಳೊಂದಿಗೆ ಭಕ್ತಿಭಾವದಿಂದ, ದೊಡ್ಡ ಸ್ವರದಲ್ಲಿ ಮೊಳಗಲಿರುವ ವಂದೇ ಮಾತರಂ, ದೇಶದ ಭವ್ಯ ಗತಕಾಲ ಹಾಗೂ ಭವಿಷ್ಯದ ವಿಕಸಿತ ಭಾರತವನ್ನು ಜೋಡಿಸುವ ಸಾಂಸ್ಕೃತಿಕ ಸೇತುವೆಯಾಗಿ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ನಿಲ್ಲಲಿದೆ.
80ನೇ ಸ್ವಾತಂತ್ರ್ಯ ದಿನಾಚರಣೆಯ ಈ ಪುಣ್ಯಪರ್ವವು ಪ್ರತಿಯೊಬ್ಬ ಭಾರತೀಯನಲ್ಲೂ ತಾಯ್ನಾಡಿ ನ ಬಗೆಗಿನ ಭಕ್ತಿ ಹಾಗೂ ರಾಷ್ಟ್ರೀಯತೆಯ ಭಾವನೆಯನ್ನು ಜಾಗೃತಗೊಳಿಸಿ, ದೇಶವನ್ನು ಜಗತ್ತಿನ ಸರ್ವೋಚ್ಚ ಮುಂಚೂಣಿಗೆ ಕೊಂಡೊಯ್ಯುವ ‘ವಿಶ್ವಗುರು’ ಸಂಕಲ್ಪಕ್ಕೆ ಖಂಡಿತಾ ನವೋಲ್ಲಾಸ ಮತ್ತು ಚೈತನ್ಯ ನೀಡಲಿದೆ. ಎಲ್ಲರಿಗೂ 80ನೆಯ ಸ್ವಾತಂತ್ರ್ಯ ದಿನಾಚರಣೆ ಮತ್ತು ವಂದೇ ಮಾತರಂನ 150ನೆಯ ವರ್ಷಾಚರಣೆಯ ಶುಭಕಾಮನೆಗಳು. ಜೈ ಹಿಂದ್. ‘ಸುಖದಾಂ ವರದಾಂ ಮಾತರಂ, ವಂದೇ ಮಾತರಂ.