ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shashidhara haladi Column: ಪ್ರಶಸ್ತಿಗಳ ಆಯ್ಕೆಯಲ್ಲಿ ವಶೀಲಿ ರಾಜಕಾರಣ !

ತಮ್ಮ ಜೀವನದುದ್ದಕ್ಕೂ ಕಾಂಗ್ರೆಸ್ ಪಕ್ಷದಲ್ಲಿದ್ದರೂ, ರಾಜಕಾರಣದ ಭಾಗವಾಗಿ, ಪಕ್ಷ ಬದಲಿಸಿ, 1977ರ ಜನತಾ ಪಕ್ಷದ ನೇತೃತ್ವದ ಸಮ್ಮಿಶ್ರ ಸರಕಾರದ ಪ್ರಧಾನಿ ಹುದ್ದೆ ಸ್ವೀಕರಿಸಿದ್ದ ಮೊರಾರ್ಜಿ ದೇಸಾಯಿ ಯವರಿಗೆ, ಪಕ್ಕದ ದೇಶದವರು ಅದೇಕೆ ‘ನಿಶಾನ್-ಎ-ಪಾಕಿಸ್ತಾನ್’ ನೀಡಿದರು ಎಂಬುದೇ ಆ ದಿಗ್ಭ್ರಮೆಗೆ ಕಾರಣ. ಆ ಕ್ಷಣದಲ್ಲಿ ಭಾರತ ಸರಕಾರಕ್ಕೆ ಎದುರಾದ ಬಿಕ್ಕಟ್ಟು ಎಂದರೆ- ನಾವಿನ್ನೂ ಮೊರಾರ್ಜಿ ಅವರಿಗೆ ‘ಭಾರತ ರತ್ನ’ ನೀಡಿಲ್ಲ, ಪಾಕ್‌ನವರು ಅವರ ದೇಶದ ಅತ್ಯುನ್ನತ ಪ್ರಶಸ್ತಿ ನೀಡಿದ್ದಾರೆ, ಇದನ್ನು ಹೇಗೆ ನಿಭಾಯಿಸುವುದು- ಎಂಬುದು

ಪ್ರಶಸ್ತಿಗಳ ಆಯ್ಕೆಯಲ್ಲಿ ವಶೀಲಿ ರಾಜಕಾರಣ !

ಶಶಾಂಕಣ

ಭಾರತ ಸರಕಾರವು 1990ರಲ್ಲಿ ಒಂದು ಸಣ್ಣ ಬಿಕ್ಕಟ್ಟಿನ ಪರಿಸ್ಥಿತಿಗೆ ಸಿಕ್ಕಿಹಾಕಿಕೊಂಡಿತು. ಅದು ತಾನೇ ಮಾಡಿಕೊಂಡ ಎಡವಟ್ಟು ಅಲ್ಲ, ಬದಲಿಗೆ ಪಕ್ಕದವರು ನಡೆಸಿದ ಕೀಟಲೆ. ನಮ್ಮ ನೆರೆಯ ದೇಶವಾದ ಪಾಕಿಸ್ತಾನದ ಒಂದು ಆಶ್ಚರ್ಯ ಹುಟ್ಟಿಸುವ ನಡೆಯೇ ಈ ಬಿಕ್ಕಟ್ಟಿಗೆ ಕಾರಣ. 1977 ರಿಂದ 1979ರ ತನಕ ನಮ್ಮ ದೇಶದ ಪ್ರಧಾನಿಯಾಗಿದ್ದ, ಸ್ವತಂತ್ರ ಭಾರತದ ಮೊತ್ತ ಮೊದಲ ಕಾಂಗ್ರೆ ಸ್ಸೇತರ ಸರಕಾರದ ಪ್ರಧಾನಿಯೂ ಆಗಿದ್ದ ಮೊರಾರ್ಜಿ ದೇಸಾಯಿ ಅವರಿಗೆ ಪಾಕಿಸ್ತಾನ ಸರಕಾರ ನೀಡುವ ಅತ್ಯುನ್ನತ ಪ್ರಶಸ್ತಿಯಾದ ‘ನಿಶಾನ್-ಎ-ಪಾಕಿಸ್ತಾನ್’ ಪ್ರಶಸ್ತಿಯನ್ನು ದಯಪಾಲಿ ಸಲಾಗಿತ್ತು.

ಆಗಾಗ ನಮ್ಮ ದೇಶದ ವಿರುದ್ಧ ಯುದ್ಧ ಮಾಡುತ್ತಿದ್ದ ಪಾಕಿಸ್ತಾನವು, ನಮ್ಮ ದೇಶದ ಮಾಜಿ ಪ್ರಧಾನಿಯವರಿಗೆ ತಾನು ನೀಡುವ ಅತ್ಯುನ್ನತ ಪ್ರಶಸ್ತಿಯನ್ನು ನೀಡುವುದು ಎಂದರೆ ಏನು ಸಾಮಾ ನ್ಯವೆ? ನೆಹರು ಅವರಿಗೆ ನೀಡಲಿಲ್ಲ, ಇಂದಿರಾ ಗಾಂಧಿಯವರಿಗೆ ನೀಡಲಿಲ್ಲ, ರಾಜೀವ್ ಗಾಂಧಿ ಯವರಿಗೆ ಕೊಡಲಿಲ್ಲ, ಶಾಸ್ತ್ರಿಯವರಿಗೆ ಕೊಡಲಿಲ್ಲ, ಮೊರಾರ್ಜಿಯವರಿಗೆ ಕೊಟ್ಟರು!

ಈ ಸುದ್ದಿಯು ಬಿತ್ತರವಾದಾಗ ನಮ್ಮ ದೇಶದ ಜನಸಾಮಾನ್ಯರಿಗೆ ಆದ ದಿಗ್ಭ್ರಮೆ ಇಂದಿಗೂ ನೆನಪಿದೆ. ತಮ್ಮ ಜೀವನದುದ್ದಕ್ಕೂ ಕಾಂಗ್ರೆಸ್ ಪಕ್ಷದಲ್ಲಿದ್ದರೂ, ರಾಜಕಾರಣದ ಭಾಗವಾಗಿ, ಪಕ್ಷ ಬದಲಿಸಿ, 1977ರ ಜನತಾ ಪಕ್ಷದ ನೇತೃತ್ವದ ಸಮ್ಮಿಶ್ರ ಸರಕಾರದ ಪ್ರಧಾನಿ ಹುದ್ದೆ ಸ್ವೀಕರಿಸಿದ್ದ ಮೊರಾರ್ಜಿ ದೇಸಾಯಿಯವರಿಗೆ, ಪಕ್ಕದ ದೇಶದವರು ಅದೇಕೆ ‘ನಿಶಾನ್-ಎ-ಪಾಕಿಸ್ತಾನ್’ ನೀಡಿದರು ಎಂಬುದೇ ಆ ದಿಗ್ಭ್ರಮೆಗೆ ಕಾರಣ. ಆ ಕ್ಷಣದಲ್ಲಿ ಭಾರತ ಸರಕಾರಕ್ಕೆ ಎದುರಾದ ಬಿಕ್ಕಟ್ಟು ಎಂದರೆ- ನಾವಿನ್ನೂ ಮೊರಾರ್ಜಿ ಅವರಿಗೆ ‘ಭಾರತ ರತ್ನ’ ನೀಡಿಲ್ಲ, ಪಾಕ್‌ನವರು ಅವರ ದೇಶದ ಅತ್ಯುನ್ನತ ಪ್ರಶಸ್ತಿ ನೀಡಿದ್ದಾರೆ, ಇದನ್ನು ಹೇಗೆ ನಿಭಾಯಿಸುವುದು- ಎಂಬುದು.

ಇದನ್ನೂ ಓದಿ: Shashidhara Halady Column: ಪ್ರವಾಸಿಗರಿಗೆ ಗುಂಡಿಕ್ಕುವ ಮನಸ್ಥಿತಿ ಎಂಥದ್ದು ?

ಅದಕ್ಕೊಂದು ಸರಳ ಉತ್ತರ ಕಂಡುಕೊಳ್ಳಲಾಯಿತು: 1991ರಲ್ಲಿ ಮೊರಾರ್ಜಿಯವರಿಗೆ ‘ಭಾರತ ರತ್ನ’ ನೀಡಿ, ಕೈತೊಳೆದುಕೊಳ್ಳಲಾಯಿತು. ಅದೇ ವರ್ಷ ರಾಜೀವ್ ಗಾಂಧಿ ಮತ್ತು ಪಟೇಲ್ ಅವರಿಗೂ ಭಾರತ ರತ್ನ ಪ್ರಶಸ್ತಿ (ಮರಣೋತ್ತರ) ನೀಡಿದ್ದು ಬೇರೆ ವಿಚಾರ. ಸಾಮಾನ್ಯವಾಗಿ ಪಾಕಿಸ್ತಾನಕ್ಕೆ ಸಹಾಯ ಮಾಡಿದವರಿಗೆ, ಆ ದೇಶದ ಪ್ರಗತಿಗೆ ಸಹಕರಿಸಿದವರಿಗೆ ‘ನಿಶಾನ್-ಎ-ಪಾಕಿಸ್ತಾನ್’ ಪ್ರಶಸ್ತಿಯನ್ನು ನೀಡಲಾಗುತ್ತದೆ.

ಆ ಪ್ರಶಸ್ತಿ ಪಡೆದವರ ಪಟ್ಟಿಯಲ್ಲಿ ಬ್ರಿಟನ್ನಿನ ರಾಣಿ, ಇರಾನಿನ ಶಾ, ಜೋರ್ಡಾನಿನ ರಾಜ, ಅಮೆರಿಕದ ಅಧ್ಯಕ್ಷ, ಇಂಡೋನೇಷ್ಯಾದ ಅಧ್ಯಕ್ಷ, ಒಮಾನ್‌ನ ಸುಲ್ತಾನ್, ಕತಾರ್‌ನ ಅಮೀರ್, ಸೌದಿ ಅರೇಬಿಯಾದ ರಾಜ ಸೇರಿ ದ್ದಾರೆ. ಮೊರಾರ್ಜಿಯವರಿಗೆ 1990ರಲ್ಲಿ ಪ್ರಶಸ್ತಿ ಪ್ರದಾನ ಮಾಡಿದರೂ, 1988ರಲ್ಲೇ ಅದನ್ನು ಘೋಷಣೆ ಮಾಡಲಾಗಿತ್ತು.

ಮೊರಾರ್ಜಿಯವರಿಗೆ ಅದೇಕೆ ಆ ಅತ್ಯುನ್ನತ ಪ್ರಶಸ್ತಿಯನ್ನು ಪಾಕಿಸ್ತಾನ ದಯಪಾಲಿಸಿತು ಎಂಬು ದಕ್ಕೆ ಹಲವು ವಿಶ್ಲೇಷಣೆಗಳನ್ನು ಮಾಡಲಾಗಿದೆ. ಅದರಲ್ಲಿ ಒಂದು ಎಂದರೆ, 1978ರಲ್ಲಿ ಮೊರಾರ್ಜಿ ಯವರು ಪ್ರಧಾನಿಯಾಗಿದ್ದಾಗ, ಪಾಕಿಸ್ತಾನದ ಅಧ್ಯಕ್ಷ ಜಿಯಾ ಉಲ್ ಹಕ್ ನೊಂದಿಗೆ ಸ್ನೇಹದಿಂದಿ ದ್ದರು ಮತ್ತು ಆಗಾಗ ಫೋನ್‌ನಲ್ಲಿ ಪರಸ್ಪರ ಮಾತಾಡುತ್ತಿದ್ದರು ಮತ್ತು ಅದೊಂದು ಸಂದರ್ಭದಲ್ಲಿ ನಮ್ಮ ದೇಶದ ‘ರಾ’ ಸಂಸ್ಥೆಯು ಪಾಕಿಸ್ತಾನದಲ್ಲಿ ನಡೆಸುತ್ತಿರುವ ಗುಪ್ತಚರ ಚಟುವಟಿಕೆಗಳ ವಿವರಗಳನ್ನು ಹೇಳಿಬಿಟ್ಟರು!

ಇಂಥ ಒಂದು ವಿಶ್ಲೇಷಣೆಗೆ ದೃಢವಾದ ಲಿಖಿತ ಆಧಾರ ಇಲ್ಲದೇ ಇದ್ದರೂ, ಸಾಂದರ್ಭಿಕ ಸಾಕ್ಷ್ಯ ಗಳನ್ನು ಹುಡುಕಲಾಗಿದೆ. ನಮ್ಮ ದೇಶದ ಗುಪ್ತಚರ ಸಂಸ್ಥೆಯಾದ ‘ರಾ’ (ಆರ್‌ಎಡಬ್ಲ್ಯು) ಅಧಿಕಾರಿ ಯಾಗಿದ್ದ ಬಿ.ರಾಮನ್ ಅವರು ತಮ್ಮ ಪುಸ್ತಕದಲ್ಲಿ ಹೀಗೆ ಬರೆದಿದ್ದಾರೆ: “...ಮೊರಾರ್ಜಿ ಅವರು ಪ್ರಯೋಗಿಸುತ್ತಿದ್ದ ನಾಟಿ ಚಿಕಿತ್ಸೆ ಮತ್ತು ಸ್ವ ಮೂತ್ರ ಚಿಕಿತ್ಸೆಯ ವಿವರ ತಿಳಿಯುವ ನೆಪದಿಂದ ಜಿಯಾ ಉಲ್ ಹಕ್, ಮೊರಾರ್ಜಿಯವರಿಗೆ ಆಗಾಗ ಪೋನ್ ಮಾಡುತ್ತಿದ್ದರು.

ಮೊರಾರ್ಜಿಗೆ ಇದರ ಕುರಿತು ಮಾತನಾಡುವುದಕ್ಕಿಂತ ಖುಷಿ ಇನ್ನೊಂದಿಲ್ಲ. ಕುತೂಹಲಭರಿತ ಧ್ವನಿಯಲ್ಲಿ ಜಿಯಾ ಕೇಳುತ್ತಿದ್ದರು- ‘ಎಕ್ಸಲೆನ್ಸಿ, ಒಂದು ದಿನದಲ್ಲಿ ಎಷ್ಟು ಬಾರಿ ಸ್ವಮೂತ್ರ ಕುಡಿಯಬೇಕು? ಬೆಳಗಿನ ಮೊದಲ ಮೂತ್ರವನ್ನೋ ಅಥವಾ ದಿನದ ಬೇರೆ ಸಮಯದ ಮೂತ್ರ ವನ್ನೋ?’. ಅದೊಂದು ದಿನ, ಇಂಥ ಮಾತುಗಳ ನಡುವೆ ಎಚ್ಚರಿಕೆ ಮರೆತ ಮೊರಾರ್ಜಿಯವರು ಬಾಯ್ತಪ್ಪಿ, ‘ಪಾಕಿಸ್ತಾನವು ಮಿಲಿಟರಿ ಉದ್ದೇಶಕ್ಕೆ ರಹಸ್ಯವಾಗಿ ಅಣು ಶಕ್ತಿಯನ್ನು ಬಳಸುವ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸುತ್ತಿರುವ ವಿಚಾರ ತನಗೆ ಗೊತ್ತು ಎಂದು ಬಿಟ್ಟರು..’. ಇದರ ಸುಳಿವು ದೊರೆತ ಜಿಯಾ ಉಲ್ ಹಕ್, ಪಾಕಿಸ್ತಾನದಲ್ಲಿದ್ದ ‘ರಾ’ ಪರವಾದ ಗುಪ್ತಚಾರರ ಕತೆ ಮುಗಿಸಿದ!

ಕುತೂಹಕಾರಿ ಸಂಗತಿ ಎಂದರೆ, ಜಿಯಾ ಮತ್ತು ಮೊರಾರ್ಜಿಯವರು ಆಗಾಗ ಫೋನ್‌ನಲ್ಲಿ ಮಾತ ನಾಡುತ್ತಿದ್ದರೂ, ಭೇಟಿಯಾಗಿದ್ದು ಒಂದೇ ಸಲ: ಕೆನ್ಯಾ ಅಧ್ಯಕ್ಷನ ಅಂತ್ಯಕ್ರಿಯೆಯಲ್ಲಿ, 1978ರಲ್ಲಿ...". ಕೇವಲ ಎರಡು ವರ್ಷ ನಮ್ಮ ದೇಶದ ಪ್ರಧಾನಿಯಾಗಿದ್ದ ಮೊರಾರ್ಜಿ ದೇಸಾಯಿ ಯವರು, ಹಲವು ದಾಖಲೆಗಳನ್ನು ಮಾಡಿದ್ದಾರೆ.

ತುರ್ತು ಪರಿಸ್ಥಿತಿಯ ಪರಿಣಾಮವಾಗಿ, ಸ್ವತಂತ್ರ ಭಾರತದಲ್ಲಿ ಮೊತ್ತ ಮೊದಲ ಬಾರಿ ಕಾಂಗ್ರೆಸ್ ಪಕ್ಷವು ಲೋಕಸಭಾ ಚುನಾವಣೆಯಲ್ಲಿ ಸೋತು ಹೋದಾಗ, ಜನತಾ ಪಕ್ಷದ ನೇತೃತ್ವದಲ್ಲಿ ಸಮ್ಮಿಶ್ರ ಸರಕಾರವು ದೆಹಲಿಯಲ್ಲಿ ಅಧಿಕಾರಕ್ಕೆ ಬಂತು ಮತ್ತು ಮೊರಾರ್ಜಿಯವರು ಮೊದಲ ಪ್ರಧಾನಿ ಯಾದರು. ಆದರೆ, ಸ್ವಾತಂತ್ರ್ಯ ಹೋರಾಟಗಾರ ರಾಗಿದ್ದ ಅವರು, ಮೊದಲಿನಿಂದಲೂ ಕಾಂಗ್ರೆಸ್ಪಕ್ಷ ದಲ್ಲೇ ಇದ್ದವರು, 1960ರ ದಶಕದಲ್ಲಿ ಪ್ರಧಾನಿ ಹುದ್ದೆಯನ್ನು ಅಲಂಕರಿಸಲು ಆಸೆಪಟ್ಟವರು.

ಅವರು 1967ರಿಂದ 1969ರ ತನಕ ಇಂದಿರಾಗಾಂಧಿಯವರ ನೇತೃತ್ವದ ಸರಕಾರದಲ್ಲಿ ಉಪ ಪ್ರಧಾನಿ ಯೂ ಆಗಿದ್ದರು! ತಮ್ಮ ಜೀವಮಾನದುದ್ದಕ್ಕೂ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ರಾಜಕಾರಣಿ ಯಾಗಿದ್ದ ಮೊರಾರ್ಜಿಯವರು, ಕೊನೆಗೂ ದೇಶದ ಪ್ರಧಾನಿಯಾಗಲು, ಜನತಾ ಪಕ್ಷಕ್ಕೆ ಸೇರಬೇಕಾ ಗಿದ್ದು ಒಂದು ವಿಪರ್ಯಾಸ; ಅದಕ್ಕೆ ತುರ್ತುಪರಿಸ್ಥಿತಿಯೂ ಕಾರಣ ಎನ್ನಬಹುದು.

ಅವರು 1977ರಲ್ಲಿ ಪ್ರಧಾನಿಯಾಗುವ ಮೂಲಕ, ನಮ್ಮ ದೇಶದ ಮೊತ್ತ ಮೊದಲ ಕಾಂಗ್ರೆಸ್ಸೇತರ ಸರಕಾರದ ನೇತೃತ್ವ ವಹಿಸಿದರು. ಬ್ರಿಟಿಷರ ಕಾಲದಲ್ಲೇ ಅವರು ಮುಂಬಯಿ ಸರಕಾರದ ಗೃಹ ಮಂತ್ರಿಯಾಗಿದ್ದರು ಮತ್ತು 1952ರಲ್ಲಿ ಮುಂಬಯಿ ರಾಜ್ಯದ ಮುಖ್ಯಮಂತ್ರಿಯೂ ಆಗಿದ್ದರು. ಇವೆಲ್ಲವೂ ಅವರು ಕಾಂಗ್ರೆಸ್‌ನಲ್ಲಿದ್ದಾಗಲೇ ನಡೆದದ್ದು. ಅದಕ್ಕೂ ಮುಂಚೆ ಮಹಾತ್ಮ ಗಾಂಧಿ ಯವರ ಜತೆ ಕೈಜೋಡಿಸಿ, ಬ್ರಿಟಿಷರ ವಿರುದ್ಧ ನಿರಂತರವಾಗಿ ಅಹಿಂಸಾತ್ಮಕ ಹೋರಾಟ ವನ್ನು ನಡೆಸಿದ್ದರು.

ಪಾಕಿಸ್ತಾನವು 1990ರಲ್ಲಿ ತಮಗೆ ನಿಶಾನ್-ಎ-ಪಾಕಿಸ್ತಾನ್ ಪ್ರಶಸ್ತಿ ನೀಡಿದಾಗ, ಮೊರಾರ್ಜಿಯವರು ಅದನ್ನು ಹೆಮ್ಮೆಯಿಂದಲೇ ಸ್ವೀಕರಿಸಿದರು, ಮತ್ತು ತಾವು ಪ್ರಧಾನಿಯಾಗಿದ್ದಾಗ ನೆರೆ ದೇಶದೊಂದಿಗೆ ಶಾಂತಿಯುತವಾಗಿ ವ್ಯವಹರಿಸಿದ್ದಕ್ಕಾಗಿ ಈ ಪ್ರಶಸ್ತಿ ಬಂದಿದೆ ಎಂದೇ ತಿಳಿದಿದ್ದರು; ಆದರೆ, ಅದು ಅವರ ಸುದೀರ್ಘ ರಾಜಕೀಯ ಜೀವನದಲ್ಲಿ ಒಂದು ಕಪ್ಪುಚುಕ್ಕಿ ಎಂದೇ ಇತರ ಹಲವು ರಾಜಕೀಯ ಪಂಡಿತರು ಪರಿಗಣಿಸಿದ್ದಾರೆ.

ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರಕಿದ ನಂತರ ಸ್ಥಾಪಿಸಲಾದ ‘ಭಾರತ ರತ್ನ’ ಪ್ರಶಸ್ತಿಯು, ನಮ್ಮ ದೇಶದ ಅತ್ಯುನ್ನತ ಪ್ರಶಸ್ತಿಯಾಗಿದೆ ಮತ್ತು ಮೊರಾರ್ಜಿಯವರಿಗೆ ಅನಿವಾರ್ಯವಾಗಿ 1991 ರಲ್ಲಿ ಅದನ್ನು ನೀಡಬೇಕಾಯಿತು. ಈ ಪ್ರಶಸ್ತಿಯುನಮ್ಮ ದೇಶದ ಪ್ರಧಾನಿಗಳಾಗಿದ್ದ ನೆಹರು, ಇಂದಿ ರಾಗಾಂಧಿ, ರಾಜೀವ್ ಗಾಂಧಿ, ಮೊರಾರ್ಜಿ, ಲಾಲ್ ಬಹಾದುರ್ ಶಾಸ್ತ್ರಿ, ವಾಜಪೇಯಿ, ಪಿ.ವಿ.ನರಸಿಂಹ ರಾವ್ ಅವರಿಗೆ ಮತ್ತು ಇತರ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ದೊರಕಿದೆ.

ಮಹಾತ್ಮ ಗಾಂಧೀಜಿಗೆ ಭಾರತ ರತ್ನ(ಮರಣೋತ್ತರ) ದೊರಕಿಲ್ಲ ಎಂದು ಕೆಲವರು ಒಮ್ಮೊಮ್ಮೆ ಹೇಳುವುದುಂಟು, ಆದರೆ ಗಾಂಧೀಜಿ ಇವೆಲ್ಲ ಪ್ರಶಸ್ತಿಗಿಂತ ಮೇಲೆ ನಿಲ್ಲುತ್ತಾರೆ ಎಂಬುದು ಸರಳ ಸತ್ಯ. ಭಾರತ ರತ್ನ ಪ್ರಶಸ್ತಿಗೆ ಹೋಲಿಸಬಹುದಾದ ಒಂದು ಪ್ರಶಸ್ತಿಯನ್ನು ಮಹಾತ್ಮ ಗಾಂಧಿಯವರು ಸ್ವೀಕರಿಸಿದ ಕಥೆ ಸ್ವಾರಸ್ಯಕರವಾಗಿದೆ.

ಭಾರತ ರತ್ನ ಪ್ರಶಸ್ತಿಯು ಸ್ಥಾಪನೆಯಾಗುವ ಮೊದಲು, ನಮ್ಮ ದೇಶದ ಅತ್ಯುನ್ನತ ಪ್ರಶಸ್ತಿ ಯೆಂದರೆ, ಕೈಸರ್-ಎ-ಹಿಂದ್. ಇದನ್ನು ಬ್ರಿಟಿಷರು 1900ರಿಂದ 1947ರ ತನಕ ನೀಡುತ್ತಿದ್ದರು. ‘ಭಾರತ ದೇಶದ (ಬ್ರಿಟಿಷ್ ರಾಜ್) ಹಿತಾಸಕ್ತಿಗಾಗಿ ಅತ್ಯುತ್ತಮ ಸೇವೆ ನೀಡಿದವರಿಗೆ’ ಇದನ್ನು ನೀಡು ತ್ತಿರುವುದಾಗಿ ಬ್ರಿಟಿಷ್ ಸರಕಾರ ಘೋಷಿಸಿಕೊಂಡಿತ್ತು. ಕೈಸರ್-ಎ-ಹಿಂದ್ ಎಂದರೆ ‘ಭಾರತದ ಸಾಮ್ರಾಟ’ ಎಂಬ ಅರ್ಥ!

ಇದನ್ನು ನೀಡುತ್ತಿದ್ದು ಮಾತ್ರ ಬ್ರಿಟನ್‌ನ ರಾಣಿ/ ರಾಜ! ಬ್ರಿಟಿಷರು ಮಹಾತ್ಮ ಗಾಂಧಿಯವರಿಗೆ ‘ಕೈಸರ್-ಎ-ಹಿಂದ್’ ಪ್ರಶಸ್ತಿಯನ್ನು ನೀಡಿದ್ದು 1915ರಲ್ಲಿ. ಅದಕ್ಕೆ ಅವರು ನೀಡಿದ ಕಾರಣ-ದಕ್ಷಿಣ ಆಫ್ರಿಕಾದಲ್ಲಿ ಯುದ್ಧದ ಸಮಯದಲ್ಲಿ ಬ್ರಿಟಿಷ್ ಸೈನಿಕರಿಗೆ ಆಂಬುಲೆನ್ಸ್ ಸೇವೆಯನ್ನು ನೀಡಿದ್ದ ಕ್ಕಾಗಿ.

ವಿಶೇಷವೆಂದರೆ, 1915ರ ಇಸವಿಯು ಗಾಂಧೀಜಿ ದಕ್ಷಿಣ ಆಫ್ರಿಕಾ ತೊರೆದು ಭಾರತಕ್ಕೆ ಬಂದ ವರ್ಷ. ಆ ವರ್ಷವೇ, ಅಂದಿನ ವೈಸ್ ರಾಯ್ ಲಾರ್ಡ್ ಹೆರ್ಡಿಂಜ್‌ನು ದೆಹಲಿಯಿಂದ ಮುಂಬಯಿಗೆ ಬಂದು, ಅಲ್ಲಿ ನಡೆದ ಸಮಾರಂಭದಲ್ಲಿ ಮಹಾತ್ಮ ಗಾಂಧಿಯವರಿಗೆ ಈ ಪ್ರಶಸ್ತಿಯನ್ನು ನೀಡಿದನು. ಅದನ್ನು ಗಾಂಧೀಜಿಯವರು ಸ್ವೀಕರಿಸಿದರು. ಆದರೆ, 1920ರಲ್ಲಿ ಈ ಪ್ರಶಸ್ತಿಯನ್ನು ಮತ್ತು ಇನ್ನಿತರ ಎರಡು ಮೆಡಲ್ ಗಳನ್ನು ಬ್ರಿಟಿಷ್ ಸರಕಾರಕ್ಕೆ ವಾಪಸು ಮಾಡಿದರು. ‘ಖಿಲಾಫತ್ ಚಳವಳಿಯ ಭಾಗವಾಗಿ ಆರಂಭಿಸಿದ ಅಸಹಕಾರ ಚಳವಳಿಯ ಭಾಗವಾಗಿ ಈ ಪ್ರಶಸ್ತಿಗಳನ್ನು ಹಿಂದಿರುಗಿಸುತ್ತಿದ್ದೇನೆ’ ಎಂದು ಅವರು ಬ್ರಿಟಿಷ್ ಸರಕಾರಕ್ಕೆ ಪತ್ರ ಬರೆದು ತಮ್ಮ ಪ್ರತಿಭಟನೆಯನ್ನು ದಾಖಲಿಸಿದರು.

1919ರಲ್ಲಿ ಬ್ರಿಟಿಷರು ಅಮೃತಸರದಲ್ಲಿ ನಡೆಸಿದ ಜಲಿಯನ್ ವಾಲಾಬಾಗ್ ಹತ್ಯಾಕಾಂಡವೂ ಇಲ್ಲಿ ನೆನಪಿಗೆ ಬರುತ್ತದೆ. ಮಹಾತ್ಮ ಗಾಂಧಿಯವರ ಕುರಿತು ಇನ್ನೊಂದು ವಿಚಾರವನ್ನು ಪ್ರಸ್ತಾಪಿಸ ಲೇಬೇಕು: ಅವರು ಎಂದಿಗೂ ಪ್ರಶಸ್ತಿಗಳ ಆಸೆಗೆ ಹೋರಾಟ ನಡೆಸಲಿಲ್ಲ, ಪ್ರಶಸ್ತಿ ಪಡೆಯಲೆಂದು ಲಾಬಿ ಮಾಡಿ ದವರೂ ಅಲ್ಲ. ಅವರು ಎಲ್ಲಾ ಪ್ರಶಸ್ತಿಗಳನ್ನು ಮೀರಿದ ಮಹಾತ್ಮ. ನೊಬೆಲ್ ಪ್ರಶಸ್ತಿಯ ಆಯ್ಕೆ ಪಟ್ಟಿಯಲ್ಲಿ ಮಹಾತ್ಮ ಗಾಂಧಿಯವರ ಹೆಸರು 5 ಬಾರಿ ನಮೂದಾಗಿದ್ದರೂ, ಅವರಿಗೆ ಪ್ರಶಸ್ತಿ ದೊರಕಲಿಲ್ಲ; ಕೊನೆಗೆ 1948ರಲ್ಲಿ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡುವ ಯೋಚನೆಯಿತ್ತು.

ಆದರೆ, ಅಷ್ಟರಲ್ಲಿ ಅವರ ಹತ್ಯೆಯಾಯಿತು, ಆದ್ದರಿಂದ, ನೊಬೆಲ್ ಪ್ರಶಸ್ತಿ ಅವರಿಗೆ ದೊರಕಲಿಲ್ಲ, ನೊಬೆಲ್‌ನ ಮಹತ್ವ ಅಷ್ಟರ ಮಟ್ಟಿಗೆ ಕಡಿಮೆಯಾಯಿತು ಎಂಬ ವಿಚಾರವೂ ಹಲವು ಕಡೆ ಚರ್ಚೆಗೆ ಒಳಗಾಗಿದೆ.ಸ್ವಾತಂತ್ರ್ಯ ಹೋರಾಟಗಾರರ ಪೈಕಿ ಸರೋಜಿನಿ ನಾಯ್ಡು ಸಹಾ, ‘ಕೈಸರ್ -ಎ-ಹಿಂದ್’ ಪ್ರಶಸ್ತಿಗೆ (1911) ಭಾಜನರಾಗಿದ್ದರು ಮತ್ತು ಅವರು, ಜಲಿಯನ್‌ವಾಲಾಬಾಗ್ ಹತ್ಯಾಕಾಂಡವನ್ನು ವಿರೋಧಿಸಿ ಆ ಪ್ರಶಸ್ತಿಯನ್ನು ಬ್ರಿಟಿಷ್ ಸರಕಾರಕ್ಕೆ ಹಿಂದಿರುಗಿಸಿದರು.

ಪ್ರಶಸ್ತಿ ಮತ್ತು ಪ್ರಶಸ್ತಿ ನೀಡುವ ರಾಜಕಾರಣದ ಕುರಿತು ಬರೆಯುತ್ತಾ ಹೋದರೆ ಅದು ಎಂದಿಗೂ ಮುಗಿಯದ ಬರಹವಾದೀತು. ಜಗತ್ತಿನ ಪ್ರಖ್ಯಾತ ಪ್ರಶಸ್ತಿಯಾದ ನೊಬೆಲ್, ಚಲನಚಿತ್ರ ಕ್ಷೇತ್ರದ ಆಸ್ಕರ್ ಪ್ರಶಸ್ತಿ ಎಲ್ಲವೂ ಹಲವು ವಿವಾದಗಳಿಗೆ ಒಳಗಾಗಿವೆ. ಅಂಥ ಪ್ರಶಸ್ತಿಗಳಿಗೆ ಆಯ್ಕೆ ಮಾಡು ವಾಗ ಸಾಕಷ್ಟು ರಾಜಕಾರಣ, ವಶೀಲಿ, ಲಾಬಿ, ಪಕ್ಷಪಾತನೀತಿ, ಸ್ಪಷ್ಟವಾಗಿ ವಿವರಿಸಲಾಗದ ವಿದ್ಯ ಮಾನಗಳು ನಡೆಯುತ್ತವೆ ಎಂಬುದು ಸ್ಪಷ್ಟ.

ನಮ್ಮ ದೇಶದ ಅತ್ಯುನ್ನತ ಪ್ರಶಸ್ತಿಯಾದ ಭಾರತ ರತ್ನ ಮತ್ತು ಪದ್ಮ ಪ್ರಶಸ್ತಿಗಳನ್ನು ನೀಡುವಾ ಗಲೂ, ಕೆಲವು ವಿಶಿಷ್ಟ ವಿದ್ಯಮಾನಗಳನ್ನು ಗಮನಿಸಬಹುದು. ಇಂಥ ಪ್ರಶಸ್ತಿಗಳ ಘೋಷಣೆ ಯಾದಾಗ, ಬೇರೆ ಬೇರೆ ರಾಜಕೀಯ ಪಕ್ಷಗಳು ಒಂದಲ್ಲಾ ಒಂದು ರೀತಿಯಲ್ಲಿ ಟೀಕೆಗಳ ಸುರಿಮಳೆ ಯನ್ನೇ ಸುರಿಸುತ್ತವೆ.

ಭಾರತ ರತ್ನ ಪ್ರಶಸ್ತಿಯ ಕುರಿತು ಹೇಳುವುದಾದರೆ, ನಮ್ಮ ದೇಶದ ಮೊದಲ ಪ್ರಧಾನಿ ನೆಹರು ಅವರು ತಾವೇ ಪ್ರಶಸ್ತಿಯನ್ನು ಕೊಟ್ಟು ಕೊಂಡರು ಮತ್ತು ಅವರ ಮಗಳು ಇಂದಿರಾ ಗಾಂಧಿ ಯವರು ಸಹ ತಾವೇ ಪ್ರಶಸ್ತಿಯನ್ನು ಕೊಟ್ಟುಕೊಂಡರು ಎಂದು ಹೇಳುವುದುಂಟು. ಏಕೆಂದರೆ, ಪ್ರಶಸ್ತಿ ಸ್ವೀಕರಿಸಿದಾಗ ಅವರಿನ್ನೂ ಪ್ರಧಾನ ಮಂತ್ರಿ ಸ್ಥಾನದಲ್ಲಿದ್ದರು. ಈ ಪ್ರಶಸ್ತಿ 1954ರಲ್ಲಿ ಆರಂಭವಾದಾಗ, ‘ಪ್ರಧಾನ ಮಂತ್ರಿಯವರು ರಾಷ್ಟ್ರಪತಿಗಳಿಗೆ ಶಿಫಾರಸು ಮಾಡಿದವರಿಗೆ’ ನೀಡುವ ಪ್ರಶಸ್ತಿ ಎಂದೇ ರೂಪಿಸಲಾಗಿದ್ದರಿಂದ, ಅವರಿಬ್ಬರು ಪಡೆದ ಪ್ರಶಸ್ತಿಯು ಇಂಥ ಒಂದು ಟೀಕೆಗೆ ಗುರಿಯಾಗಿದೆ.

ನೆಹರು ಅವರು ಭಾರತ ರತ್ನ ಪಡೆದ ವರ್ಷವೇ, ನಮ್ಮ ರಾಜ್ಯದ ಸರ್ ಎಂ. ವಿಶ್ವೇಶ್ವರಯ್ಯನವರಿಗೂ ಆ ಪ್ರಶಸ್ತಿಯನ್ನು ನೀಡಿದ್ದರು ಎಂಬುದು ವಿಶೇಷ.