ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Hari Paraak Column: ವಿಡಿಯೋ ? ಸೆಂಡ್‌ ಮೀ, ಸೆಂಡ್‌ ಮೀ

ಇವತ್ತು ವಿಡಿಯೋ ನೋಡಿದೆ. ಚೆನ್ನಾಗಿತ್ತು. ಅಂತ ಯಾರಾದ್ರೂ ಅಂದ್ರೆ ಸೆಂಡ್ ಮೀ, ಸೆಂಡ್ ಮೀ ಅಂತ ಕಾಮೆಂಟ್ ಮಾಡಂಗಿಲ್ಲ. ಯಾಕಂದ್ರೆ ಇದು ಆ ಥರ ವಿಡಿಯೋ ಅಲ್ಲ. ವಿಡಿಯೋ ಅನ್ನೋ ಸಿನಿಮಾ. ಬ್ಲಿಂಕ್ ಸಿನಿಮಾದ ಮೂಲಕ ಭರವಸೆ ಹುಟ್ಟಿಸಿದ್ದ ನಿರ್ದೇಶಕ ಶ್ರೀನಿಧಿ ಬೆಂಗಳೂರು ಅವರ ಮತ್ತೊಂದು ಸಿನಿಮಾ ತೆರೆಕಂಡಿದೆ. ಅದೇ ವಿಡಿಯೋ. Found footage ಅನ್ನೋದು 6-5=2 ಸಿನಿಮಾದ ಕಾನ್ಸೆಪ್ಟ್. ವಿಡಿಯೋದ ಫಸ್ಟ್ ಹಾಫ್ ಅದೇ narrative ಇದೆ.

ವಿಡಿಯೋ ? ಸೆಂಡ್‌ ಮೀ, ಸೆಂಡ್‌ ಮೀ

-

ಹರಿ ಪರಾಕ್‌
ಹರಿ ಪರಾಕ್‌ Sep 13, 2026 5:00 AM

ತುಂಟರಗಾಳಿ

ಸಿನಿಗನ್ನಡ

ಇವತ್ತು ವಿಡಿಯೋ ನೋಡಿದೆ. ಚೆನ್ನಾಗಿತ್ತು. ಅಂತ ಯಾರಾದ್ರೂ ಅಂದ್ರೆ ಸೆಂಡ್ ಮೀ, ಸೆಂಡ್ ಮೀ ಅಂತ ಕಾಮೆಂಟ್ ಮಾಡಂಗಿಲ್ಲ. ಯಾಕಂದ್ರೆ ಇದು ಆ ಥರ ವಿಡಿಯೋ ಅಲ್ಲ. ವಿಡಿಯೋ ಅನ್ನೋ ಸಿನಿಮಾ. ಬ್ಲಿಂಕ್ ಸಿನಿಮಾದ ಮೂಲಕ ಭರವಸೆ ಹುಟ್ಟಿಸಿದ್ದ ನಿರ್ದೇಶಕ ಶ್ರೀನಿಧಿ ಬೆಂಗಳೂರು ಅವರ ಮತ್ತೊಂದು ಸಿನಿಮಾ ತೆರೆಕಂಡಿದೆ. ಅದೇ ವಿಡಿಯೋ. Found footage ಅನ್ನೋದು 6-5=2 ಸಿನಿಮಾದ ಕಾನ್ಸೆಪ್ಟ್. ವಿಡಿಯೋದ ಫಸ್ಟ್ ಹಾಫ್ ಅದೇ narrative ಇದೆ. ಯೂಟ್ಯೂಬರ್ ಹುಡುಗರ ತಲೆಹರಟೆಗಳು ಇಲ್ಲಿನ ಮುಖ್ಯ ಹೂರಣ. ಆದರೆ ಇಲ್ಲಿ ಕೊಂಚ ಮನರಂಜನೆಯ ಕೊರತೆ ಇದೆ. ಉತ್ತಮ ಸೀನ್‌ಗಳು ನಗಿಸುವ ಸಂಭಾಷಣೆ ಇಟ್ಟು, ಈ ಭಾಗವನ್ನು ಹಿಲೇರಿಯಸ್ ಎನ್ನಿಸಬಹುದಾದ ಅವಕಾಶ ಇತ್ತು. ಆದರೆ ಆ ಕೆಲಸ ಆಗಿಲ್ಲ. ಹಾಗಾಗಿ ಫಸ್ಟ್ ಹಾಫ್ ವಿಶೇಷ ಏನಿಲ್ಲ. ‌

ಆದ್ರೆ ಸೆಕೆಂಡ್ ಹಾಫ್‌ʼನಲ್ಲಿ ಮೀಟರ್ ಆಫ್ ಆಗೋ ಥರ ಹಾರರ್ ಇದೆ. ಅದರಲ್ಲಿ ತುಂಬದ್ ಅನ್ನೋ ಹಾರರ್ ಸಿನಿಮಾ ಲೆವೆಲ್ಲಿನ flavour ತುಂಬಾ ಅಲ್ಲದಿದ್ರೂ, ಖಂಡಿತ ಇದೆ. ದೆವ್ವ ಇದೆಯಾ ಇಲ್ವಾ ಅಂತ ಅನುಮಾನ ಹುಟ್ಟಹಾಕಿ ಬರೀ ಸೌಂಡುಗಳಿಂದ ಹೆದರಿಸುವ ಚಿತ್ರ ಇದಲ್ಲ. ನಿಜವಾಗಿಯೂ ಭಯ ಹುಟ್ಟಿಸುವ ಸನ್ನಿವೇಶಗಳನ್ನು ತೋರಿಸಿ ಹೆದರಿಸುತ್ತಾರೆ ನಿರ್ದೇಶಕ ಶ್ರೀನಿಧಿ. ಅಂದಹಾಗೆ, ಈ ಹಾರರ್ ಕಥೆ ಕೊಂಚ ವಿಲಕ್ಷಣ ಅನ್ನಿಸಬಹುದು, ಆದ್ರೆ ಅವಲಕ್ಷಣ ಅಂತೂ ಅನ್ನಿಸಲ್ಲ. ಒಂದೊಳ್ಳೆ ಹಾರರ್ ಸಿನಿಮಾ ಅನುಭವ ಬೇಕು ಅಂದ್ರೆ ವಿಡಿಯೋ ನೋಡಬಹುದು.

ಇದನ್ನೂ ಓದಿ: Hari Paraak Column: ಕನ್ನಡದ ಹಟ್ಟಿಯಲ್ಲಿ ಇಂಗ್ಲಿಷಿನ ಹಟ್‌ʼಗಳು ಇರುತ್ತವೆ

ಲೂಸ್‌ ಟಾಕ್‌ –ನರೇಂದ್ರ ಮೋದಿ

ಸಾರ್ ಇನ್ನು ಮೂರ್ ದಿನಕ್ಕೆ ನಿಮ್ಮ ಹುಟ್ಟುಹಬ್ಬ. ನಿಮ್ಮ ಹುಟ್ಟುಹಬ್ಬದ ದಿನ ನಿಮಗೆ ಮೂರು Hಗಳ ಸೂತ್ರಗಳನ್ನು ಹೇಳಲಾ?

- ಹುಟ್ಟಿದ ಹಬ್ಬನೂ ಸುಳ್ ಹೇಳಿರಬಹುದು ಅಂತ ವಿರೋಧಿಗಳು ಆಡ್ಕೊತಾ ಇದ್ದಾರೆ. ಇದರ ಮಧ್ಯೆ ನಿಮ್ದು ಬೇರೆ, ಸರಿ, ಅದೇನ್ ಹೇಳಿ.

ಏನಿಲ್ಲ ಅದೇ, ಹ್ಯಾಪಿ -ಹುಟ್ಟು -ಹಬ್ಬ ಅಂತ. ಮೂರು H ಬರುತ್ತಲ್ವಾ, ಅದಕ್ಕೇ ನಿಮ್ಮ ಸ್ಟೈಲಲ್ಲಿ ಹೇಳ್ದೆ.

- ಓಹ್.. ಅಂತೂ ನೀವೂ ನನ್ನ ಸೂತ್ರ ಪಾಲಿಸ್ತೀರಾ?. ಜನ ನನ್ನ ದೇಶದ ಸೂತ್ರಧಾರ ಅನ್ನೋದು ಇದಕ್ಕೇ ಅಂತ ಇವತ್ತು ಗೊತ್ತಾಯ್ತು.

ಸರಿ, ನಿಮ್ಮ ಹುಟ್ಟುಹಬ್ಬಕ್ಕೆ ಯೋಗಿ ಆದಿತ್ಯನಾಥ್ ಏನ್ ಗಿಫ್ಟ್ ಕೊಡಬಹುದು?

- ಅಯ್ಯೋ,. ಸುಮ್ನಿರ್ರಿ, ಅವ್ರ್ ವಿಷ್ಯ ಬೇಡ. ಮೊನ್ನೆ ಯಾರೋ ಮಗು ನಾಮಕರಣ ಅಂತ ಕರೆದಿದ್ರೆ ಅಲ್ಲಿ ಹೋಗಿ ಮಗು ಹೆಸರು ಬದಲಾಯಿಸ್ತೀನಿ ಅಂತ ಕೂತಿದ್ರು. ಕೊನೆಗೆ ಯೋಗಿಗಳೇ ಬದಲಾಯಿಸೋಕೆ ಮಗುಗೆ ಇನ್ನೂ ಹೆಸರೇ ಇಟ್ಟಿಲ್ಲ ಸುಮ್ನಿರ್ರಿ ಅಂತ ಹೇಳಿ ಸಮಾಧಾನ ಮಾಡಿದೆ.

ಹೋಗ್ಲಿ, ಕೇಕ್ ಆದ್ರೂ ಕಟ್ ಮಾಡ್ತೀರಾ, ಇಲ್ವಾ?

- ಇಲ್ಲ, ಗೊತ್ತಲ್ಲ, ನಾ ಖಾವೂಂಗಾ, ನಾ ಖಾನೇ ದೂಂಗಾ ಕೇಕ್‌ಗೂ ಹಿಂಗಂತೀರಲ್ಲ ಸಾರ್, ಸರಿ, ಹುಟ್ಟಿದ ಹಬ್ಬಕ್ಕೆ ಪಾರ್ಟಿ ಇಲ್ವಾ? - ಅವತ್ತು ಬನ್ನಿ ಟೀ ಕೊಡಿಸ್ತೀನಿ. ‌

(ಕಾಲ್ಪನಿಕ ಸಂದರ್ಶನ)

ನೆಟ್‌ ಪಿಕ್ಸ್

ಎಂಜಿನಿಯರಿಂಗ್ ಓದಿದ್ದ ಖೇಮು ಮತ್ತೆ ಸೋಮು ಒಂದ್ ಇಂಟರ್ ವ್ಯೂಗೆ ಹೋಗಿದ್ರು. ಇಬ್ಬರಿಗೂ ಎಷ್ಟೇ ಹುಡುಕಿದ್ರೂ ಕೆಲಸ ಸಿಗ್ತಾ ಇರಲಿಲ್ಲ. ಅದರಲ್ಲೂ ಖೇಮುಗಂತೂ ಕೆಲಸದ ಅವಶ್ಯಕತೆ ತುಂಬಾ ಇತ್ತು. ಪ್ರತಿಬಾರಿಯಂತೆ ಈ ಬಾರಿಯೂ ಯಾರು ಮೊದಲು ಒಳಗೆ ಹೋಗಿ ಬರ್ತಾರೋ ಅವರು, ಸಂದರ್ಶನ ಕೊಠಡಿಯಿಂದ ಹೊರಗೆ ಬಂದ ಮೇಲೆ ಅಲ್ಲಿ ಕೇಳಿದ ಪ್ರಶ್ನೆಗಳನ್ನು ಇನ್ನೊಬ್ಬರಿಗೆ ಹೇಳಬೇಕು ಅಂತ ಕರಾರು ಆಗಿತ್ತು. ಸರಿ ಇಬ್ಬರೂ ಹೋಗಿ ಇಂಟರ್‌ವ್ಯೂಗೆ ರೆಡಿ ಆಗಿ ಕೂತರು. ಈ ಬಾರಿ ಮೊದಲು ಸೋಮು ವನ್ನು ಒಳಗೆ ಕರೆದರು. ಒಳಗೆ ಹೋಗಿ ಕೂತ ಸೋಮುವನ್ನು ಸಂದರ್ಶಕರು ಪ್ರಶ್ನೆ ಮಾಡಲು ಶುರು ಮಾಡಿದರು. ಎಲ್ಲಾ ವೈಯಕ್ತಿಕ ವಿವರಗಳನ್ನು ಕೇಳಿದ ಮೇಲೆ ನಾಲೆಡ್ಜ್ ಬೇಸ್ಡ್ ಪ್ರಶ್ನೆಗಳ ಸರದಿ ಆರಂಭವಾಯಿತು. ಸಂದರ್ಶಕರು ಶುರು ಮಾಡಿದರು.

ನೀವು ಒಂದು ರೈಲಿನಲ್ಲಿ ಹೋಗ್ತಾ ಇದ್ದೀರಾ. ಟ್ರೈನ್‌ನ ಕಂಪಾರ್ಟ್ಮೆಂಟ್ ತುಂಬಾ ಬಿಸಿ ಆಗೋಕೆ ಶುರುವಾಗಿದೆ. ಆಗ ನೀವು ಏನು ಮಾಡುತ್ತೀರಿ? ನಾನಿರುವ ಕಂಪಾರ್ಟ್‌ಮೆಂಟ್‌ನ ಕಿಟಕಿ ತೆಗೀತೀನಿ ಸರಿ, ಈಗ ಕಿಟಕಿಯ ವಿಸ್ತೀರ್ಣ 1.5 ಸ್ಕ್ವೇರ್ ಮೀಟರ್ ಅಂದುಕೊಳ್ಳೋಣ. ಕಂಪಾರ್ಟ್‌ಮೆಂಟ್‌ನ ವಾಲ್ಯೂಮ್ 12 ಮೀಟರ್ ಕ್ಯೂಬ್ ಇದೆ, ಟ್ರೈನ್ ಗಂಟೆಗೆ 80 ಕಿಲೋಮೀಟರ್ ವೇಗದಲ್ಲಿ ಉತ್ತರಮುಖವಾಗಿ ಚಲಿಸುತ್ತಿದೆ. ಗಾಳಿ ದಕ್ಷಿಣದ ಕಡೆಯಿಂದ 5 ಕಿಮೀ ವೇಗದಲ್ಲಿ ಬೀಸುತ್ತಿದೆ.

ಹಾಗಾದ್ರೆ, ಸೆಖೆ ಅಂತ ನೀವು ಕಂಪಾರ್ಟ್‌ಮೆಂಟ್ ಕಿಟಕಿ ತೆಗೆದ ಮೇಲೆ ಕಂಪಾರ್ಟ್‌ಮೆಂಟ್ ಕೂಲ್ ಆಗೋಕೆ ಎಷ್ಟು ಹೊತ್ತು ಬೇಕು? ಸೋಮುಗೆ ಪಿತ್ತ ನೆತ್ತಿಗೇರಿ, ಇದಕ್ಕಿಂತ ಕೆಲಸ ಕೊಡಲ್ಲ ಅಂತ ನೇರವಾಗಿ ಹೇಳಿ ಅಂತ ಬಯ್ದು ಎದ್ದು ಬಂದ. ಹೊರಗೆ ಬಂದ ಸೋಮು ಮುಖ ನೋಡಿದ ಖೇಮುಗೆ ಗಾಬರಿ ಆಯ್ತು. ಆದ್ರೂ ಏನ್ ಪ್ರಶ್ನೆ ಕೇಳಿದ್ರು ಅಂದಿದ್ದಕ್ಕೆ ಸೋಮು ಅವರು ಕೇಳಿದ ಪ್ರಶ್ನೆ ಹೇಳಿದ. ಖೇಮು ಅದಕ್ಕೆ ಉತ್ತರ ಏನು ಅಂತ ಹುಡುಕಿಕೊಳ್ಳುವಷ್ಟರಲ್ಲಿ ಒಳಗಿನಿಂದ ಅವನಿಗೆ ಕರೆ ಬಂತು. ಒಲ್ಲದ ಮನಸ್ಸಿನಿಂದಲೇ ಖೇಮು ಒಳಗೆ ಹೋದ. ಮಾಮೂಲಿ ಪ್ರಶ್ನೆಗಳ ಸರದಿ ಮುಗಿಯಿತು.

ಆಕ್ಚುವಲ್ ಪ್ರಶ್ನೆಗಳು ಶುರುವಾದ್ವು. ನೀವು ಒಂದು ರೈಲಿನಲ್ಲಿ ಹೋಗ್ತಾ ಇದ್ದೀರಾ. ಟ್ರೈನ್‌ನ ಕಂಪಾರ್ಟ್‌ಮೆಂಟ್ ತುಂಬಾ ಬಿಸಿ ಆಗೋಕೆ ಶುರುವಾಗಿದೆ. ಆಗ ನೀವು ಏನು ಮಾಡುತ್ತೀರಿ?

ನಾನು, ನನ್ನ ಕೋಟ್ ಬಿಚ್ತೀನಿ

ಆಗ್ಲೂ ಬಿಸಿ ಕಮ್ಮಿ ಆಗದೇ ಇದ್ರೆ?

ನಾನು, ನನ್ನ ಶರ್ಟ್ ಬಿಚ್ತೀನಿ

ಆಗ್ಲೂ ಬಿಸಿ ಕಮ್ಮಿ ಆಗದೇ ಇದ್ರೆ?

ಪ್ಯಾಂಟ್ ಬಿಚ್ತೀನಿ

ಆಗ್ಲೂ ಬಿಸಿ ಕಮ್ಮಿ ಆಗದೇ ಇದ್ರೆ?

ಅವ್ನಜ್ಜಿ ಅದೇನಾರಾ ಆಗ್ಲಿ, ಬೇಕಿದ್ರೆ ಚಡ್ಡಿನೂ ಬಿಚ್ತೀನಿ. ಆದ್ರೆ ಆ ಕಿಟಕಿ ಮಾತ್ರ ತೆಗೆಯಲ್ಲ.

ಲೈನ್‌ ಮ್ಯಾನ್

ಜಾತ್ಯತೀತನ ಮನೆ ಮುಂದಿನ ಬೋರ್ಡ್ ‌

- ಜಾತಿ ಕೇಳಿ ಸ್ನೇಹ ಕಳೆದುಕೊಳ್ಳಬೇಡಿ

ವ್ಯತ್ಯಾಸ ಕಂಡು ಹಿಡಿಯಿರಿ

- ಒಳ್ಳೆಯ ಮಕ್ಕಳ ‘ಸಿನಿಮಾ’

- ಒಳ್ಳೆಯ ‘ಮಕ್ಕಳ’ ಸಿನಿಮಾ

ಸಮುದ್ರ ತೀರದಲ್ಲಿ ವಿಷ್ಣುವರ್ಧನ್ ಅವರ ಮರಳಿನ ಮೂರ್ತಿ ನಿರ್ಮಾಣ ಆಗಿದ್ದನ್ನು ನೋಡಿದ ಅಭಿಮಾನಿಗಳ ಮಾತು

- ಇವರು, ಕಡಲ ತೀರದ ಅಭಿನಯ ಭಾರ್ಗವ

ಮೂತ್ರಪಿಂಡದಲ್ಲಿರುವ ಕಲ್ಲು ತೆಗೆಯುವ ಆಪರೇಶನ್ ಮಾಡಿದ ಮೇಲೆ ರೋಗಿಗೆ ಆಗುವ ಮೂತ್ರ ವಿಸರ್ಜನೆ

- ಸುಸೂತ್ರ

ಭಾರತ ಸರ್ಕಾರ, ಆರ್ಮಿ, ರಾ ಏಜೆಂಟ್, ಪಾಕಿಸ್ತಾನ, ಒಂದೆರಡು ವಿಮಾನಗಳು ಇವನ್ನೆ ಒಟ್ಟಾಗಿ ಏನಂತ ಕರೆಯಬಹುದು ?

- ಅಕ್ಷಯ್ ಕುಮಾರ್ ಸಿನಿಮಾ

ಚಿಕ್ಕವಯಸ್ಸಿನಲ್ಲಿ ಚಾಕ್ಲೇಟ್ ಆಸೆಗಾಗಿ ಬಾಲನಟ ಆದವನು ದೊಡ್ಡವನಾದ ಮೇಲೆ ಏನಾಗ್ತಾನೆ?

- ಚಾಕ್ಲೇಟ್ ಹೀರೋ

ಹೇಳಿದ್ದನ್ನೇ ಹೇಳಿ ಬೋರ್ ಹೊಡೆಸುವ ಸಿನಿಮಾ

- ಕೊರಿಯನ್ ಸಿನಿಮಾ

ಚಾನಲ್‌ಗಳಲ್ಲಿ ಹರಿಯುವ ನೀರಿಗೆ ಇರುವ ಗುಣ

- ಚನಲಶೀಲತೆ

ದುಬೈ ದೊರೆಗಳ ಹತ್ರ ಬಂಗಾರದ ಕಾರಿದೆಯಂತೆ

- ಉಜ್ಜಿಕೊಂಡು ಹೋದವನಿಗೂ ಲಾಭ