Hari Paraak Column: ಕನ್ನಡದ ಹಟ್ಟಿಯಲ್ಲಿ ಇಂಗ್ಲಿಷಿನ ಹಟ್ʼಗಳು ಇರುತ್ತವೆ
ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಬಿಡುಗಡೆಯಾಗುತ್ತಿರುವ ಪ್ರತಿ ನಾಲ್ಕನೇ ಚಿತ್ರದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ಇರುತ್ತಾರೆ ಅನ್ನೋದು ಗಾಂಧಿನಗರದಲ್ಲಿ ಹುಟ್ಟಿಕೊಂಡಿರೋ ಹೊಸ ಮಾತು. ಆದರೆ ಅವರು ಸಿನಿಮಾದಲ್ಲಿ ಇರೋದೇ ಹೆಚ್ಚಿನ ಜನಕ್ಕೆ ಗೊತ್ತಿರಲ್ಲ ಅನ್ನೋದು ಇನ್ನೊಂದು ಮಾತು. ಆದರೆ ಅವರು ಸಿನಿಮಾದಲ್ಲಿ ಇದ್ದರೂ ಅವರಿದ್ದಿದ್ದು ಗೊತ್ತಾಗಲಿಲ್ಲ ಅನ್ನೋದು ಮಾತ್ರ ಜೋಕು.
-
ತುಂಟರಗಾಳಿ
ಸಿನಿಗನ್ನಡ
ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಬಿಡುಗಡೆಯಾಗುತ್ತಿರುವ ಪ್ರತಿ ನಾಲ್ಕನೇ ಚಿತ್ರದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ಇರುತ್ತಾರೆ ಅನ್ನೋದು ಗಾಂಧಿನಗರದಲ್ಲಿ ಹುಟ್ಟಿಕೊಂಡಿರೋ ಹೊಸ ಮಾತು. ಆದರೆ ಅವರು ಸಿನಿಮಾದಲ್ಲಿ ಇರೋದೇ ಹೆಚ್ಚಿನ ಜನಕ್ಕೆ ಗೊತ್ತಿರಲ್ಲ ಅನ್ನೋದು ಇನ್ನೊಂದು ಮಾತು. ಆದರೆ ಅವರು ಸಿನಿಮಾದಲ್ಲಿ ಇದ್ದರೂ ಅವರಿದ್ದಿದ್ದು ಗೊತ್ತಾಗಲಿಲ್ಲ ಅನ್ನೋದು ಮಾತ್ರ ಜೋಕು. ಹೌದು ರವಿಚಂದ್ರನ್ ಅವರೀಗ ಸಿಕ್ಕ ಸಿಕ್ಕ ಸಿನಿಮಾಗಳಲ್ಲಿ ನಟಿಸುತ್ತಾ ಇರೋದು ಎಲ್ಲರಿಗೂ ಗೊತ್ತು. ಆದರೆ ಅದರ ಪ್ರಮಾಣ ಈಗ ಜಾಸ್ತಿ ಆಗಿದೆ. ಅವರಿಗೆ ಅದೆಂಥ ಆರ್ಥಿಕ ಸಂಕಷ್ಟವೋ ಪಾಪ, ಸಿಕ್ಕ ಅವಕಾಶಗಳನ್ನು ಎರಡೂ ಕೈಚಾಚಿ ಬಾಚಿಕೊಳ್ಳುತ್ತಿದ್ದಾರೆ.
ಸಾಲ ತೀರಿಸೋಕೆ ರವಿ ಸರ್ ಅದನ್ನೆ ಮಾಡ್ತಾ ಇದ್ದಾರೆ ಅಂತ ಎಲ್ಲರೂ ಮಾತಾಡ್ತಾರೆ. ಆದರೆ ಸಾಲ ತೀರಿಸೋಕೆ ತಮ್ಮ ಇಮೇಜ್ ಅನ್ನೇ ಒತ್ತೆ ಇಡುವಂಥ ಪರಿಸ್ಥಿತಿ ಅವರಿಗೆ ಬಂದಿರೋದು ಮಾತ್ರ ಅವರ ಅಭಿಮಾನಿಗಳಿಗೆ ಬೇಸರದ ಸಂಗತಿ ಆಗಿದೆ. ಕೆಲವೊಂದು ಸಿನಿಮಾಗಳಲ್ಲಿ ಅವರು ಇದ್ದಾರೆ ಅನ್ನೋದನ್ನು ಬಿಡುಗಡೆ ಆಗುವವರೆಗೂ ಗೌಪ್ಯವಾಗಿ ಇರಿಸಲಾಗುತ್ತದೆ. ಅದರಿಂದ ಸಿನಿಮಾದಲ್ಲಿ ಅವರಿದ್ದಾರೆ ಅಂತಲಾದ್ರೂ ಹೋಗುವಂಥ ಪ್ರೇಕ್ಷಕರನ್ನು ದೂರ ಇಟ್ಟಂತಾಗುತ್ತಿದೆ.
ಇನ್ನು ಕೆಲವು ಸಿನಿಮಾಗಳಲ್ಲಿ ಅವರ ಪಾತ್ರ ಇದ್ದರೂ ಅರಿವಿಗೆ ಬಾರದಷ್ಟು ಗೌಣವಾಗಿರುತ್ತದೆ. ಪಾಪ, ರವಿಚಂದ್ರನ್ ಅವರು ಇಂತಹ ಪರಿಸ್ಥಿತಿಯಲ್ಲಿರುವಾಗ ಎಲ್ಲರೂ ಶಾಂತಿ ಕ್ರಾಂತಿ ರೀ ರಿಲೀಸ್ ಮಾಡಿ ಅಂದ್ರೆ ಅವರ ಪರಿಸ್ಥಿತಿ ಏನಾಗಬೇಡ. ಸದ್ಯಕ್ಕೆ ಸಿಎಂ ಡಿಕೆಶಿ ಅವರ ಗೆಳೆತನದ ಕಾರಣಕ್ಕೆ ಎಂಎಲ್‌ಸಿ ಆಗಲು ಹೊರಟಿರುವ ರವಿಚಂದ್ರನ್.
ಇದನ್ನೂ ಓದಿ: Hari Paraak Column: ಮೂಗು ತೂರಿಸೋ ಕೆಲ್ಸ ಮತ್ತು ಮೂಗು ತುರಿಸೋ ಕೆಲ್ಸ
ಲೂಸ್ ಟಾಕ್-ರವಿಚಂದ್ರನ್
ಬಾಲಿವುಡ್‌ನಲ್ಲಿ ನಿಮಗೂ ಸಲ್ಮಾನ್ ಖಾನ್‌ಗೂ ಯಾಕೆ ಆಗಿ ಬರಲ್ಲ?
- ಅದೇನೋಪ್ಪ, ಮೊದ್ಲು, ಎಲ್ಲ ಚೆನ್ನಾಗೇ ಇತ್ತು. ಅದ್ಯಾವ ಘಳಿಗೇಲಿ ಕರಣ್ ಅರ್ಜುನ್ ಅಂತ ಸಿನಿಮಾ ಮಾಡಿದ್ವೋ, ಇಬ್ರೂ ಕರ್ಣ, ಅರ್ಜುನನ್ ಥರಾನೇ ಆಗ್ಬಿಟ್ಟಿದೀವಿ.
ಅದೇನು ನೀವು ಇತ್ತೀಚೆಗೆ ಮಂಗಳೂರು ಮೂಲದ ವರು ಅಂತ ಹೇಳ್ಕೊಂಡ್ ತಿರ್ಗಾಡ್ತಿದೀರಲ್ಲ?
- ‘ಬಿ ಎ ರೋಮನ್ ವೆನ್ ಇನ್ ರೋಮ್’ ಅಂತಾರಲ್ಲ. ಹಂಗೆ. ನಾನು ಎಲ್ಲಿಗೆ ತಿರುಗಾಡೋಕ್ ಹೋಗ್ತಿನೋ ಅದೇ ನನ್ನ ಮೂಲ ಅಂತ ಹೇಳ್ಕೊಳ್ಳೋದು, ಜನರನ್ನು ಮರುಳು ಮಾಡೋ ನನ್ನ ಮೂಲಮಂತ್ರ.
ಓ ಹಂಗೆ, ಅದ್ಸರಿ, ನಿಮಗೆ ಸ್ವಂತ ಮಕ್ಕಳಿದ್ರೂ ಈ ಅಡಾಪ್ಟೆಡ್ ಮಗು ಕಥೆ ಯಾಕ್ ಶುರುವಾಯ್ತು?
- ಏನಿಲ್ಲ. ಎರಡು ಮಕ್ಕಳಾದ್ಮೇಲೆ ಇನ್ಮೇಲೆ ಮಕ್ಕಳು ‘ಸಾಕು ಮಗಾ’ ಅಂತ ಸುಮ್ಮನಾಗಿದ್ವಿ. ಆದ್ರೆ, ಅದೇನೋ ಆಮೇಲೆ ‘ಸಾಕು ಮಗ’ ಬೇಕು ಅನ್ನಿಸಿತು. ಹಂಗಾಗಿ ಈ ವ್ಯವಸ್ಥೆ.
ಹೋಗ್ಲಿ, ಮುಸ್ಲಿಂ ಆಗಿರೋದಕ್ಕೆ ಪ್ರತಿಸಲ ಫಾರಿನ್‌ಗೆ ಹೋದಾಗಲೂ ನಿಮಗೆ ಸಮಸ್ಯೆ ಆಗುತ್ತಂತೆ, ಯಾಕೆ?
- ರೀ ‘ಫಾರಿನ್ನಿಗೆ’ ಹೋದಾಗ ಸಮಸ್ಯೆ ಆಗುತ್ತೆ’ ಅಂತ ಡಬಲ್ ಮೀನಿಂಗ್ ಪ್ರಶ್ನೆ ಕೇಳಿದ್ರೆ ಜನ ತಪ್ಪು ತಿಳ್ಕೋತಾರೆ. ನಂಗೆ ಆ ಥರ ಸಮಸ್ಯೆ ಏನೂ ಇಲ್ಲ. ಮೋಷನ್ ಸರಿಯಾಗೇ ಆಗುತ್ತೆ. ವಿದೇಶಕ್ಕೆ ಹೋದಾಗ ಮಾತ್ರ ಪ್ರಾಬ್ಲಂ.
(ಕಾಲ್ಪನಿಕ ಸಂದರ್ಶನ)
ನೆಟ್ ಪಿಕ್ಸ್
ಘಾಟ್ ಸೆಕ್ಷನ್ ಒಂದರ ಕತ್ತಲ ರಸ್ತೆಯಲ್ಲಿ ಬಸ್ ಡ್ರೈವರ್ ಖೇಮು ತನ್ನ ಖಾಲಿ ಬಸ್ಸಿನಲ್ಲಿ ಹೋಗು ತ್ತಿದ್ದ. ಘಾಟ್‌ನ ತಿರುವಿನಲ್ಲಿ ಬಿಳಿ ಬಟ್ಟೆ ಧರಿಸಿದ್ದ, ಉದ್ದನೆಯ ಕೆಂಚು ಕೂದಲಿನ, ಸುಂದರಿ ಒಂಟಿ ಹುಡುಗಿಯೊಬ್ಬಳು ಕಾಣಿಸಿದಳು. ಬಸ್ ನೋಡಿದವಳೇ ಮೆಲ್ಲನೆ ಬಸ್ಸಿಗೆ ಅಡ್ಡ ಬಂದು ಕೈ ತೋರಿಸಿ ದಳು.
ಡ್ರೈವರ್ ಖೇಮು ನಿಲ್ಲಿಸಲೇಬೇಕಾಯ್ತು. ಹುಡುಗಿ ಬಸ್ ಹತ್ತಿದವಳೇ ಏನೂ ಮಾತನಾಡದೇ ಸುಮ್ಮನೇ ಹೋಗಿ ಬಸ್ಸಿನ ಕೊನೆಯ ಸಾಲಿನ ಸೀಟಿನಲ್ಲಿ ಕುಳಿತಳು. ಖೇಮು ಮುಂದೆ ಹೊರಟ. ಇದ್ದಕ್ಕಿದ್ದಂತೆ ಮಿಂಚು ಕಾಣಿಸಿಕೊಂಡಿತು. ಅದೇ ಸಮಯಕ್ಕೆ ಸರಿಯಾಗಿ ಡ್ರೈವರ್ ಮಿರರ್‌ನತ್ತ ನೋಡಿದ. ಬಸ್‌ನಲ್ಲಿ ಹಿಂದೆ ಕೂತ ಹುಡುಗಿ ಕಾಣಿಸಲಿಲ್ಲ. ಸಡನ್ನಾಗಿ ಬ್ರೇಕ್ ಹಾಕಿ ಬಸ್ ನಿಲ್ಲಿಸಿ ಹಿಂದೆ ನೋಡಿದರೆ ಹುಡುಗಿ ಅಲ್ಲೇ ಕೂತಿದ್ದಳು. ಇವನತ್ತಲೇ ನೋಡುತ್ತಿದ್ದಳು. ಆದರೆ ಅವಳ ಹಣೆಯಿಂದ ಸಣ್ಣ ರಕ್ತದ ಹನಿಯೊಂದು ಜಿನುಗುತ್ತಿತ್ತು.
ಡ್ರೈವರ್ ಖೇಮುಗೆ ಪ್ಯಾಂಟ್ ಒದ್ದೆಯಾಗುವಷ್ಟು ಭಯವಾಯಿತು. ಮೆಲ್ಲನೆ ಮುಂದೆ ತಿರುಗಿ ಮತ್ತೆ ಭಯದಲ್ಲೇ ಬಸ್ ಓಡಿಸಲಾರಂಭಿಸಿದ. ಮತ್ತೂ ಒಂದೆರಡು ಬಾರಿ ಇದೇ ಪುನರಾವರ್ತನೆ ಯಾಯಿತು.
ಹುಡುಗಿಯ ಮುಖದಲ್ಲಿ ರೌದ್ರತೆ ಹೆಚ್ಚಾಗಿತ್ತು. ಆಗಿದ್ದಾಗ್ಲಿ ಅಂತ ಖೇಮು ಆ ಭಯದ ಮೆಲ್ಲನೆ ಕೇಳಿ ಬಿಟ್ಟ, ನಿಜ ಹೇಳು ಯಾರು ನೀನು?’, ಹಣೆಯಿಂದ ಇಳಿಯುತ್ತಿದ್ದ ರಕ್ತವನ್ನು ಬೆರಳ ತುದಿಯಿಂದ ಮೆಲ್ಲನೆ ಒರೆಸಿಕೊಂಡ ಹುಡುಗಿ ಬಾಯಿಬಿಟ್ಟಳು ‘ಮಂಗ್ ನನ್ಮಗನೇ, ನಾನ್ ಯಾರಾದ್ರೆ ನಿಂಗೇನು?, ನನ್ ಮೊಬೈಲ್ ಫೋನ್ ಸೀಟ್ ಕೆಳಗೆ ಬಿದ್ದು ಹೋಗಿದೆ, ನಿನ್ ಬಸ್ಸಲ್ಲಿ ಲೈಟ್ ಬೇರೆ ಇಲ್ಲ. ಮಿಂಚು ಹೊಡೆದಾಗಲಾದ್ರೂ ಮೊಬೈಲ್ ಹುಡುಕೋಣ ಅಂತ ಬಗ್ಗಿದರೆ ನಾನು ಬಗ್ಗಿದಾಗೆಲ್ಲ ಬ್ರೇಕ್ ಹಾಕಿ, ಹಾಕಿ, ಮುಂದಿನ ಸೀಟಿಗೆ ನನ್ ಹಣೆ ಬಡಿದು ರಕ್ತ ಬರೋ ಹಾಗೆ ಮಾಡ್ತಾ ಇದೀಯಲ್ಲ, ತಲೆ ಇದ್ಯಾ ನಿಂಗೆ?
ಲೈನ್ ಮ್ಯಾನ್
ಸ್ಲೋ ಮೋಷನ್
- ದಾರಿಯಲ್ಲಿ ಒಂಟಿಯಾಗಿ ಹೋಗುತ್ತಿದ್ದ ಆಮೆಯ ಮೇಲೆ ಮೂರ್ನಾಲ್ಕು ಬಸವನ ಹುಳುಗಳು ಆಟ್ಯಾಕ್ ಮಾಡಿ ಹಲ್ಲೆ ಮಾಡಿದವು. ಕೇಸು ಪೊಲೀಸ್ ಸ್ಟೇಷನ್‌ಗೆ ಹೋಗಿ, ಕಂಪ್ಲೇಂಟ್ ಬರ್ಸ್ಕೊಳ್ಳು ವಾಗ ಕಾನ್‌ಸ್ಟೇಬಲ್ ಆಮೆಯನ್ನು ಕೇಳಿದ ‘ಇದೆಲ್ಲ ಹೇಗಾಯ್ತು.. ಆಮೆ ಹೇಳ್ತು, ‘ಇದೆಲ್ಲ ಎಷ್ಟು ಫಾಸ್ಟ್ ಆಗಿ ಆಗೋಯ್ತು ಅಂದ್ರೆ, ನಂಗೆ ಗೊತ್ತೇ ಆಗ್ಲಿಲ್ಲ’
ಮುದುಕ ಮುದುಕಿಯರು ತಮ್ಮ ಯೌವನದ ಸೌಂದರ್ಯ ನೆನಪಿಸಿಕೊಳ್ಳೋದು ಹೇಗೆ ?
- ‘ಅಂದ’ ಕಾಲತ್ತಿಲ್ ನಾನೂ ಸುಂದರವಾಗಿದ್ದೆ.
ಡೊಳ್ಳು ಹೊಟ್ಟೆಯ ರಾಜಕಾರಣಿಗಳು ಹೊಟ್ಟೆಗೇನ್ ತಿಂತಾರೆ ?
- ‘ಓಟ್ಸ್’
ಕೂದಲಿಲ್ಲದ ಮೊಟ್ಟೆ ತಲೆ ಇದ್ರೂ ಬುದ್ಧಿವಂತ ಆಗಿರುವವನು
- ಎಗ್-ನಾನಿ
ಇಂಗ್ಲಿಷ್‌ಗೂ ಕನ್ನಡಕ್ಕೂ ಅಂಥ ವ್ಯತ್ಯಾಸ ಏನಿಲ್ಲ
- ಕನ್ನಡದ ಹಟ್ಟಿಯಲ್ಲಿ ಇಂಗ್ಲಿಷಿನ ಹಟ್‌ಗಳು ಇರುತ್ತವೆ.
ಕಷ್ಟದಲ್ಲಿದ್ದಾಗ ಭಕ್ತರನ್ನು ಕಾಪಾಡುವ ದೇವರು- ಏಳು ಕುಂಡಲವಾಡ.
- ಬೇಕಂತಲೇ ಭಕ್ತರಿಗೆ ಕಷ್ಟ ಕೊಟ್ಟು, ಪರೀಕ್ಷೆ ಇಟ್ಟು ತಮಾಷೆ ಮಾಡುವ ದೇವರು ಏಳು ‘ಕಿಂಡಲ್’ವಾಡ
ಕಣ್ ಕಣ್ಣ ಸಲಿಗೆ
- ಖೇಮು ಕಣ್ಣು ಚೆಕ್ ಅಪ್ ಮಾಡಿಸಲು ಹೋಗಿದ್ದ. ಅಲ್ಲಿದ್ದ ಹುಡುಗಿ ಅವನ ಎಡಗಣ್ಣಿಗೆ ಒಂದೊಂದೇ ಲೆನ್ಸ್ ಹಾಕಿ ‘ಅಲ್ಲಿ ಬೋರ್ಡ್ ಮೇಲೆ ಬರೆದಿರೋದು ಕಾಣುತ್ತಾ, ಓದಿ’ ಅಂದಳು. ಖೇಮು ಓದಿದ.. ‘ಜಿ, ಡಿ, ಯು, ಬಿ, ಸಿ.’ ಮುಂದಿನ ಸಾಲು ಕಾಣಿಸಲಿಲ್ಲ. ಹುಡುಗಿ ಇನ್ನೊಂದು ಲೆನ್ಸ್ ಹಾಕಿ ‘ಈಗ ಕಾಣುತ್ತಾ...ಓದಿ’ ಅಂದ್ರು. ಹೌದು ಎಂದ ಖೇಮು ಓದಿದ...‘ಎ, ಜಿ, ಎಸ್, ಎಚ್, ಎಮ್’, ಸರಿ, ಈ ಬಾರಿ, ಹುಡುಗಿ ಖೇಮುನ ಬಲಗಣ್ಣಿಗೆ ಲೆನ್ಸ್ ಹಾಕಿ ‘ಕಾಣುತ್ತ, ಓದಿ’ ಅಂದಳು. ಖೇಮು ‘ಜಿ, ಡಿ, ಯು, ಬಿ, ಸಿ,’ ಮತ್ತು ’ಎ, ಜಿ, ಎಸ್, ಎಚ್, ಎಮ್’ ಅಂತ ಎರಡೂ ಸಾಲು ಓದಿಬಿಟ್ಟ. ಹುಡುಗಿ ಆಶ್ಚರ್ಯದಿಂದ ನಿಮ್ಮ ಬಲಗಣ್ಣು ಸ್ಟ್ರಾಂಗ್ ಅನ್ಸುತ್ತೆ. ಎರಡು ಸಾಲೂ ಕಾಣಿಸುತ್ತಲ್ಲ ಅಂದಳು. ಖೇಮು ಹೇಳಿದ ‘ಕಾಣಿಸ್ಲಿಲ್ಲ, ಆದ್ರೆ ಇವಾಗ್ ತಾನೇ ಓದಿದ್ದಲ್ವಾ, ನೆನ್ಪಿತ್ತು. ಹಂಗಾಗಿ ಹೇಳಿಬಿಟ್ಟೆ’