Narendra S Gangolly Column: ಪರಧರ್ಮದ ವಿರುದ್ದ ಈ ಷಡ್ಯಂತ್ರವಾಗಿದ್ದರೆ ?
ಧರ್ಮಸ್ಥಳದ ಸೌಜನ್ಯ ಪರ ಹೋರಾಟದ ಹೆಸರಿನಲ್ಲಿ ನಡೆದ ‘ವ್ಯಕ್ತಿ-ದೇವರು- ಧರ್ಮ’ದ ಅವಹೇಳನ ವನ್ನು, ಷಡ್ಯಂತ್ರಗಳನ್ನು ಬೇರೊಂದು ಧರ್ಮದ ವಿರುದ್ಧ ಮಾಡಿದ್ದಿದ್ದರೆ, ಇಷ್ಟು ಹೊತ್ತಿಗೆ ರಾಜ್ಯಾ ದ್ಯಂತ ಭೀಕರ ಪ್ರತಿಭಟನೆಗಳು ನಡೆದುಬಿಡುತ್ತಿದ್ದವು, ‘ರಾಜ್ಯಕ್ಕೆ ಬೆಂಕಿ ಬಿದ್ದಿದೆ’ ಅಂತಾರಲ್ಲ ಅಂಥ ಪರಿಸ್ಥಿತಿ ನಿರ್ಮಾಣವಾಗಿರುತ್ತಿತ್ತು.


ಧರ್ಮಪೀಠ
ನರೇಂದ್ರ ಎಸ್.ಗಂಗೊಳ್ಳಿ
ಕಳೆದ ಕೆಲ ತಿಂಗಳಿಂದ ನಡೆಯುತ್ತಿರುವ ವಿಲಕ್ಷಣ ಪ್ರಹಸನವೊಂದನ್ನು ಇಡೀ ರಾಜ್ಯದ ಜನತೆ ಗಮನಿಸಿಕೊಂಡೇ ಬಂದಿದೆ. ವಿಶೇಷವಾಗಿ, ಕರ್ನಾಟಕದಲ್ಲಿನ ಹಿಂದೂಗಳ ಪಾಲಿಗೆ ಬಹುದೊಡ್ಡ ಪುಣ್ಯಕ್ಷೇತ್ರವಾಗಿ ಮತ್ತು ಆರಾಧನಾ ಕೇಂದ್ರವಾಗಿ ಗುರುತಿಸಿಕೊಂಡಿರುವ ಧರ್ಮಸ್ಥಳದ ಹೆಸರನ್ನು ಮತ್ತು ಅಲ್ಲಿನ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಹೆಸರನ್ನು ಹೇಗಾದರೂ ಮಾಡಿ ಹಾಳು ಮಾಡಬೇಕೆಂಬ ದುರುದ್ದೇಶವಿಟ್ಟುಕೊಂಡು ನಡೆಸಲಾದ ಪ್ರಹಸನವಿದು.
ಸೌಜನ್ಯ ಪ್ರಕರಣವನ್ನು ಮುಂದಿಟ್ಟುಕೊಂಡು ಅತ್ಯಂತ ವ್ಯವಸ್ಥಿತವಾಗಿ ಷಡ್ಯಂತ್ರವೊಂದನ್ನು ಹೆಣೆದು, ಅದನ್ನು ಹಂತಹಂತವಾಗಿ ಕಾರ್ಯಗತಗೊಳಿಸುತ್ತಾ, ಹೋರಾಟವಲ್ಲದ ಒಂದು ಹೋರಾಟವನ್ನು ಕೆಲ ವಿಕ್ಷಿಪ್ತರು ನಡೆಸಿದ್ದು ನಿಜಕ್ಕೂ ಖಂಡನೀಯ. ಬಹುಶಃ, ಹಿಂದೂಗಳಷ್ಟು ತಾಳ್ಮೆಯುಳ್ಳ ವ್ಯಕ್ತಿಗಳು ಈ ಜಗತ್ತಿನಲ್ಲಿ ಯಾರೂ ಇರಲಿಕ್ಕಿಲ್ಲ.
ಧರ್ಮಸ್ಥಳದ ಸೌಜನ್ಯ ಪರ ಹೋರಾಟದ ಹೆಸರಿನಲ್ಲಿ ನಡೆದ ‘ವ್ಯಕ್ತಿ-ದೇವರು- ಧರ್ಮ’ದ ಅವಹೇಳನವನ್ನು, ಷಡ್ಯಂತ್ರಗಳನ್ನು ಬೇರೊಂದು ಧರ್ಮದ ವಿರುದ್ಧ ಮಾಡಿದ್ದಿದ್ದರೆ, ಇಷ್ಟು ಹೊತ್ತಿಗೆ ರಾಜ್ಯಾದ್ಯಂತ ಭೀಕರ ಪ್ರತಿಭಟನೆಗಳು ನಡೆದುಬಿಡುತ್ತಿದ್ದವು, ‘ರಾಜ್ಯಕ್ಕೆ ಬೆಂಕಿ ಬಿದ್ದಿದೆ’ ಅಂತಾರಲ್ಲ ಅಂಥ ಪರಿಸ್ಥಿತಿ ನಿರ್ಮಾಣವಾಗಿರುತ್ತಿತ್ತು.
ಯಾರೋ ಒಬ್ಬ ಒಂದು ಧಾರ್ಮಿಕ ನಿಂದನೆಯ ಸಂದೇಶವನ್ನು ಜಾಲತಾಣದಲ್ಲಿ ಹರಿಬಿಟ್ಟ ಎನ್ನುವ ಕಾರಣಕ್ಕಾಗಿ ಪೊಲೀಸ್ ಸ್ಟೇಷನ್‌ಗಳಿಗೆ ನುಗ್ಗಿ ಪೊಲೀಸರ ಮೇಲೂ ಹಲ್ಲೆ ನಡೆಸಿ ಬೆಂಕಿ ಹಚ್ಚಿದವರನ್ನು, ಶಾಸಕರ ಮನೆಗೆ ನುಗ್ಗಿ ಧ್ವಂಸಗೈದಿದ್ದನ್ನು ನೋಡಿದ್ದೇವೆ. ಯಾರೋ ಮಾಡಿದ ಕುಕೃತ್ಯಗಳಿಗೆ ನಿಷ್ಪಾಪಿ ಜನರ ಬಲಿ ತೆಗೆದುಕೊಂಡಿದ್ದನ್ನೂ ಕಂಡಿದ್ದೇವೆ.
ಇದನ್ನೂ ಓದಿ: Dr T N Vasudevamurthy Column: ದಸರಾ ಉದ್ಘಾಟನೆಗೆ ಮಾನದಂಡವೇನು ?
ಇದೇ ರೀತಿಯಲ್ಲಿ ಹಿಂದೂಗಳೂ ಪ್ರತಿಕ್ರಿಯಿಸಿದ್ದಿದ್ದರೆ ಇಷ್ಟು ಹೊತ್ತಿಗೆ ಕರ್ನಾಟಕದ ಪರಿಸ್ಥಿತಿ ಏನಾಗಿರುತ್ತಿತ್ತು, ಒಮ್ಮೆ ಯೋಚಿಸಿ.
ಇಷ್ಟೆಲ್ಲ ಅನಾಹುತಗಳ ನಡುವೆಯೂ ಹಿಂದೂಗಳ ಸಹನೆಯನ್ನು ಮೆಚ್ಚಲೇಬೇಕು. ‘ಸತ್ಯದ ಪರ ಹೋರಾಟಕ್ಕೆ ನಿಲ್ಲುವ ಮೊದಲು ಕೊಂಚ ವಿಶ್ಲೇಷಣೆ ಮಾಡಿ ಮುಂದೆ ಹೋಗೋಣ, ಸರಿಯಾದ ಸಮಯಕ್ಕೆ ಕಾದುನೋಡೋಣ’ ಎನ್ನುವ ತಂತ್ರವನ್ನು ಬಹುತೇಕ ಹಿಂದೂಗಳು ಅನುಸರಿಸಿದ್ದು ಮೆಚ್ಚುವಂಥ ಅಂಶವಾದರೂ, ಬಹುತೇಕರು ಈ ಪ್ರಹಸನದ ಹಿಂದಿನ ಹುನ್ನಾರವನ್ನು ಅರಿಯು ವಲ್ಲಿ ವಿಫಲರಾಗಿದ್ದು ಬೇಸರ ತರಿಸಿತು.
ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ ಎನ್ನುವ ನೆಪದಲ್ಲಿ ಶ್ರದ್ಧಾಭಕ್ತಿಯ ಕೇಂದ್ರಗಳನ್ನೇ, ನಂಬಿದಂಥ ದೇವರುಗಳನ್ನೇ ಅವಹೇಳನ ಮಾಡುವುದನ್ನು ಯಾರು ತಾನೇ ಒಪ್ಪಲು ಸಾಧ್ಯ? ತನ್ನದೇ ಧರ್ಮ ದಲ್ಲಿ ಹೆಣ್ಣು ಮಕ್ಕಳ ಮೇಲೆ ದಿನನಿತ್ಯವೂ ಕಣ್ಣೆದುರೇ ಶೋಷಣೆಗಳು ನಡೆಯುವಾಗ ವನೊಬ್ಬನಿಗೆ ಧರ್ಮಸ್ಥಳದಲ್ಲಿ ನಡೆಯಿತೆನ್ನಲಾದ ಅತ್ಯಾಚಾರ/ಕೊಲೆ ಮಾತ್ರ ಪ್ರಮುಖವಾಗಿ ಕಂಡಿದ್ದು ಹೇಗೆ? ಅಜ್ಮೀರ್ ದರ್ಗಾ ಸೇರಿದಂತೆ ಬೇರೆ ವಿಚಾರಗಳ ಬಗ್ಗೆ ಆತ ಯಾಕೆ ಮಾತನಾಡುವುದಿಲ್ಲ? ಕೃತಕ ಬುದ್ಧಿಮತ್ತೆಯ ನೆರವಿನಿಂದ ವಿಡಿಯೋ ಯಾಕೆ ತಯಾರಾಗುವುದಿಲ್ಲ? ಈ ಪ್ರಶ್ನೆಗಳನ್ನೂ ಕೇಳ ಬೇಕಲ್ಲವೇ? ಎಲ್ಲಕ್ಕಿಂತ ವಿಚಿತ್ರ ಅನಿಸಿದ್ದು, ಯಾರೋ ಒಬ್ಬ ಕೃತಕ ಬುದ್ಧಿಮತ್ತೆಯನ್ನು ಬಳಸಿ ಕೊಂಡು ವಿಡಿಯೋವನ್ನು ತಯಾರಿಸಿ, ‘ಬುರುಡೆ ಸಿಕ್ಕಿತು’ ಎಂದೆಲ್ಲ ತಲೆಬುಡವಿಲ್ಲದ ಆಧಾರರಹಿತ ಸುದ್ದಿಗಳನ್ನು ಓತಪ್ರೋತವಾಗಿ ಬಿತ್ತರಿಸುತ್ತಿದ್ದರೆ, ನಮ್ಮಲ್ಲಿನ ಕೆಲವಷ್ಟು ತಲೆ ಕೆಟ್ಟವರು ಅದನ್ನೇ ಸತ್ಯ ಎಂದು ಭಾವಿಸಿ, ತಾವೇ ಮುಂದೆ ನಿಂತು ಎಲ್ಲರಿಗೂ ಆ ವಿಡಿಯೋವನ್ನು ತಲುಪಿಸಲು ಯತ್ನಿಸಿ ಧರ್ಮದ್ರೋಹದ ಕೆಲಸವೆಸಗಿದ್ದು.
ಇವರ‍್ಯಾರಿಗೂ ಈ ದೇಶದ ಸಂಸ್ಕೃತಿ, ಪರಂಪರೆ ಮತ್ತು ಈ ನೆಲದ ಸನಾತನ ಧರ್ಮದ ಬಗ್ಗೆ ಕನಿಷ್ಠ ಗೌರವವಾಗಲೀ, ಅದರ ಮೇಲಾದ ನಿರಂತರ ದಬ್ಬಾಳಿಕೆಗಳು, ಕಾಶ್ಮೀರ-ಪಶ್ಚಿಮ ಬಂಗಾಳ-ಕೇರಳ ಮುಂತಾದೆಡೆ ಆದ ಹಾಗೂ ಆಗುತ್ತಿರುವ ಘಟನೆಗಳ ಬಗ್ಗೆ ಗಂಭೀರ ಆಲೋಚನೆಗಳಾಗಲೀ ಇದ್ದಂತಿಲ್ಲ.
ಇಂಥವರ ಬಗ್ಗೆ ನಿಜಕ್ಕೂ ಅಸಹ್ಯ ಎನಿಸುತ್ತದೆ. ಸತ್ಯ-ಧರ್ಮದ ಪರ ಇರುತ್ತೇವೆ ಎನ್ನುವವರು ಮೊದಲು ಸತ್ಯಶೋಧನೆಯಲ್ಲಿ ತೊಡಗಬೇಕು, ಸಿಕ್ಕಂಥ ವಿಚಾರಗಳನ್ನು ವಿಶ್ಲೇಷಣೆಗೆ ಒಳಪಡಿಸ ಬೇಕು. ಅದು ಬಿಟ್ಟು ಯಾರೋ ಬಾಯಿಗೆ ಬಂದ ಹಾಗೆ ಹೇಳಿದ್ದನ್ನೆಲ್ಲಾ ನಂಬುತ್ತೇವೆ, ಆ ಬಗ್ಗೆ ಹೋರಾಟಕ್ಕೆ ಇಳಿದುಬಿಡುತ್ತೇವೆ ಎಂದರೆ? ಛೇ!
ಈ ಷಡ್ಯಂತ್ರದ ಭಾಗವಾಗಿರುವವರು ವಿಡಿಯೋವನ್ನು ಮಾತ್ರ ಬಿಡುಗಡೆ ಮಾಡುವಂಥದ್ದಲ್ಲ, ಬಳಿಕ ಅದನ್ನು ಹೇಗೆ ಜನಪ್ರಿಯಗೊಳಿಸಬೇಕು, ಯಾವ ರೀತಿಯ ಕಮೆಂಟ್ ಗಳನ್ನು ಹಾಕಬೇಕು ಮತ್ತು ಯಾವ ಯಾವ ಮೂಲಗಳಿಗೆ ಅವುಗಳನ್ನು ತಲುಪಿಸಬೇಕು ಎನ್ನುವುದರ ಬಗ್ಗೆಯೂ ಅತ್ಯಂತ ವ್ಯವಸ್ಥಿತವಾಗಿ ಯೋಜನೆಯನ್ನು ಮಾಡಿಕೊಂಡಿರುತ್ತಾರೆ. ಅದಕ್ಕೆ ಭರಪೂರ ಹಣ ಬಾರದೆ ಇರುತ್ತದೆಯೇ? ಬಾಯಿಗೆ ಬಂದಂತೆ ಮಾತನಾಡಿದವನನ್ನೇ ‘ಹುಲಿ’, ‘ಸಿಂಹ’ ಎಂದೆಲ್ಲಾ ಬಿಂಬಿಸುವಷ್ಟರ ಮಟ್ಟಿಗೆ ಇವರೆಲ್ಲ ತಮ್ಮ ಸ್ವಾಭಿಮಾನವನ್ನು ಕಳೆದುಕೊಳ್ಳುತ್ತಾರೆ. ಇದು ನಾಚಿಕೆ ಗೇಡಿನ ಸಂಗತಿ.
‘ಬುರುಡೆ ಅನಾಮಿಕ’ನ ಪ್ರಕರಣದ ತನಿಖೆಯನ್ನು ಎಸ್ ಐಟಿ ನಡೆಸುತ್ತಿರುವ ರೀತಿಯು ಜನ ಸಾಮಾನ್ಯರು ಆಡಿಕೊಳ್ಳುವ ಮಟ್ಟಕ್ಕೆ ಬಂದಿದೆ. ದಾಖಲೆ ಇದೆ ಎಂದಾದರೆ ಅದನ್ನು ತೋರಿಸಬಹು ದಲ್ಲವೇ? ಬಾಯಿಗೆ ಬಂದಂತೆ ಮಾತನಾಡಲು, ರೀಲ್ಸ್-ವಿಡಿಯೋ ಮಾಡಲು ಜೀವಭಯ ಇಲ್ಲದವ ರಿಗೆ ದಾಖಲೆ ತೋರಿಸಲು ಮಾತ್ರ ಜೀವಭಯವಂತೆ. ಇದಕ್ಕಿಂತ ದೊಡ್ಡ ಜೋಕ್ ಮತ್ತೇನಿದೆ ಸ್ವಾಮಿ?!
ಅಂತಿಮವಾಗಿ ಸುಳ್ಳುಗಳು ಬೆತ್ತಲಾಗುತ್ತಿವೆ. ಈ ಷಡ್ಯಂತ್ರದ ಸತ್ಯ ಶೀಘ್ರ ಬಯಲಾಗಬೇಕಿದೆ. ಯಾರೇ ತಪ್ಪು ಮಾಡಿದ್ದರೂ ಅದಕ್ಕೆ ಶಿಕ್ಷೆಯಾಗಲಿ; ಆದರೆ ಅದರ ನೆಪವಿಟ್ಟುಕೊಂಡು ಹಿಂದೂ ಧರ್ಮ ವನ್ನು, ದೇವರುಗಳನ್ನು ಅವಹೇಳನ ಮಾಡುವಷ್ಟರ ಮಟ್ಟಿಗೆ ಯಾರಾದರೂ ಮಾತನಾಡಿದರೆ ಅವರನ್ನು ಯಾವ ಕಾರಣಕ್ಕೂ ಕ್ಷಮಿಸಲಾಗದು.
ಹಿಂದೂಗಳಾದ ನಾವು ಮತ್ತೆ ಮತ್ತೆ ಮೂರ್ಖರಾಗುವುದು ಬೇಡ. ಅತಿಯಾದ ಒಳ್ಳೆಯತನ, ಅತಿಯಾದ ಸಹನೆ ಎರಡೂ ಆಪತ್ತಿಗೆ ಆಹ್ವಾನ. ಇದೇ ತಪ್ಪು ಮುಂದುವರಿದರೆ ನಮ್ಮನ್ನು ನಮ್ಮ ಮುಂದಿನ ಪೀಳಿಗೆಯು ಯಾವತ್ತಿಗೂ ಕ್ಷಮಿಸದು.
(ಲೇಖಕರು ವಾಣಿಜ್ಯಶಾಸ್ತ್ರದ ಉಪನ್ಯಾಸಕರು)