Raghava Sharma Nidle Column: ನಿತಿನ್ ನಬಿನ್ ಆಯ್ಕೆಯು ಹಿರಿಯರಿಗೆ ಕೊಟ್ಟ ಸಂದೇಶವೇನು ?
ನಿತಿನ್ ನಬಿನ್ ಪಟ್ಟಾಭಿಷೇಕದ ಹಿಂದೆ ಬಿಜೆಪಿಯ ಇತರೆ ಹಿರಿತಲೆಗಳಿಗೂ ಸಂದೇಶವಿದೆ ಎನ್ನುವುದನ್ನು ಎಷ್ಟು ಜನ ಅರ್ಥಮಾಡಿಕೊಂಡಿದ್ದಾರೋ ಗೊತ್ತಿಲ್ಲ. ಪಕ್ಷ ಹಾಗೂ ಸಂಘಟನೆಯ ಭವಿಷ್ಯವನ್ನು ಗಮನ ದಲ್ಲಿಟ್ಟುಕೊಂಡು, ನೀವು ಕೂಡ ಅಧಿಕಾರಕ್ಕಂಟಿಕೊಂಡು ಕೂರಬೇಡಿ, ಹೊಸ ಪೀಳಿಗೆಗೆ ಅವಕಾಶ ಮಾಡಿಕೊಡಿ ಎಂಬುದನ್ನು ಮೋದಿ-ಶಾ ಇಬ್ಬರೂ ಸೂಚ್ಯವಾಗಿ ತಿಳಿಸಿದ್ದಾರೆ.
-
ಜನಪಥ
ಕರ್ನಾಟಕದಲ್ಲಿ ಮಾಜಿ ಮುಖ್ಯಮಂತ್ರಿಗಳಾಗಿದ್ದವರು, ವಯಸ್ಸಾದರೂ ಅಧಿಕಾರಕ್ಕಾಗಿ ಹಪಹಪಿಸುತ್ತಿರುವ ರಾಜ್ಯದ ಹಿರಿ ತಲೆಗಳನ್ನೂ ಒಳಗೊಂಡು, ಚುನಾವಣೆ ಟಿಕೆಟ್ ಕೇಳುತ್ತಾ ಇರುವ ಬೇರೆ ರಾಜ್ಯಗಳ ಹಿರಿಯ ನಾಯಕರಿಗೂ ನಿತಿನ್ ನಬಿನ್ ಆಯ್ಕೆ ಕಟು ಸಂದೇಶ ರವಾನೆ ಮಾಡಿದಂತಿದೆ. ಈ ಆಯ್ಕೆಯ ಮೂಲಕ ಬಿಜೆಪಿಯು ರಾಜಕೀಯದಲ್ಲಿ ಹೊಸ ಮನ್ವಂತರಕ್ಕೆ ನಾಂದಿ ಹಾಡಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹುದ್ದೆಗೆ 45 ವರ್ಷದ, ಬಿಹಾರದ ಸಚಿವರಾಗಿದ್ದ ನಿತಿನ್ ನಬಿನ್‌ರನ್ನೇ ಏಕೆ ಆಯ್ಕೆ ಮಾಡಲಾಯಿತು ಎಂಬ ಪ್ರಶ್ನೆಗೆ ಬಿಜೆಪಿಯ ಅನೇಕ ನಾಯಕರು ತಲೆಕೆರೆದುಕೊಂಡು ಯೋಚಿಸುತ್ತಿದ್ದರೆ, ಅರ್ಹರಾಗಿದ್ದರೂ ಈ ಪದವಿ ಸಿಗಲಿಲ್ಲವಲ್ಲ ಎಂದು ದಿಲ್ಲಿಯಲ್ಲಿ ಕೂತ ಪಕ್ಷದ ಕೆಲ ಹಿರಿ ತಲೆಗಳಲ್ಲಿ ಹತಾಶೆ ಮನೆಮಾಡಿದೆ.
ಮೋದಿ-ಶಾ ಕಾರ್ಯವೈಖರಿಯೇ ಹಾಗೆ. ಅವರಿಬ್ಬರು ಯಾವಾಗ ಏನು ಯೋಚಿಸುತ್ತಾರೆ, ಕಾರ್ಯ ತಂತ್ರಗಳನ್ನು ಹೇಗೆ ಅನುಷ್ಠಾನಗೊಳಿಸುತ್ತಾರೆ ಎಂಬ ಕನಿಷ್ಠ ಕಲ್ಪನೆಯೂ ಪಕ್ಷದ ಮೂರನೇ ವ್ಯಕ್ತಿಗೆ ಇರುವುದಿಲ್ಲ. ಅವರ ನಿರ್ಧಾರಗಳನ್ನು ಒಪ್ಪುವುದು ಅನಿವಾರ್ಯವೇ ವಿನಾ, ಅಲ್ಲಿ ದೂಸ್ರಾ ಮಾತನಾಡುವ ಹಾಗಿಲ್ಲ.
ಇರಲಿ, ನಿತಿನ್ ನಬಿನ್‌ಗೆ ಈ ಹುದ್ದೆ ಸಿಕ್ಕಿದ್ದಾದರೂ ಹೇಗೆ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಮುನ್ನ ನಬಿನ್ ಮತ್ತು ಪಿಎಂ ಮೋದಿ ನಡುವಿನ ಸಂಬಂಧವನ್ನು ಗಟ್ಟಿಗೊಳಿಸಿದ್ದ ಕುತೂಹಲ ಕಾರಿ ಘಟನೆಯೊಂದರ ಬಗ್ಗೆ ತಿಳಿದುಕೊಳ್ಳಲೇಬೇಕು.
2010ರ ಬಿಹಾರ ವಿಧಾನಸಭೆ ಚುನಾವಣೆ ಹತ್ತಿರದಲ್ಲಿತ್ತು. ಕೋಸಿ ನದಿ ಪ್ರವಾಹದಿಂದ ನದಿ ಕಣಿವೆ ಜನ ತತ್ತರಿಸಿ ಹೋಗಿದ್ದರು. ಸಂತ್ರಸ್ತ ಬಿಹಾರಿಗರಿಗೆಂದು ಗುಜರಾತಿನ ಅಂದಿನ ಸಿಎಂ ಆಗಿದ್ದ ನರೇಂದ್ರ ಮೋದಿ ಅವರು 5 ಕೋಟಿ ರುಪಾಯಿ ಪರಿಹಾರದ ಚೆಕ್ ಅನ್ನು ಬಿಹಾರ ಸರಕಾರಕ್ಕೆ ಕಳುಹಿಸಿಕೊಟ್ಟಿದ್ದರು.
ಇದನ್ನೂ ಓದಿ: Raghava Sharma Nidle Column: ಕಟ್ರ ಈದ್ಗಾ ಎನ್ನುವುದನ್ನು ಬ್ರಿಟಿಷ್ ಆಡಳಿತವೇ ಒಪ್ಪಿರಲಿಲ್ಲ !
ಇದೇ ವೇಳೆ ಪಟನಾದಲ್ಲಿ 2 ದಿನಗಳ ಬಿಜೆಪಿ ಕಾರ್ಯಕಾರಿಣಿ ಆಯೋಜನೆಯಾಗಿತ್ತು ಮತ್ತು ನರೇಂದ್ರ ಮೋದಿ ಕೂಡ ಬರುವವರಿದ್ದರು. ಬಿಜೆಪಿ ನಾಯಕರು ಪಟನಾ ಬಿಡುವ ಮುನ್ನ ತಮ್ಮ ಮನೆಗೆ ಭೋಜನಕೂಟಕ್ಕೆ ಬರಬೇಕು ಎಂದು ಅಂದಿನ ಬಿಹಾರ ಸಿಎಂ ನಿತೀಶ್ ಕುಮಾರ್ ಆಹ್ವಾನ ನೀಡಿದ್ದರು. ಆದರೆ, ಕಾರ್ಯಕಾರಿಣಿಯ 2ನೇ ದಿನದಂದು ಪಟನಾದಲ್ಲಿ ಪ್ರಕಟವಾಗುತ್ತಿದ್ದ ಹಿಂದು ಸ್ತಾನ್ ಮತ್ತು ಜಾಗರಣ್ ಪತ್ರಿಕೆಗಳ ಮುಖಪುಟದಲ್ಲಿ ನಿತೀಶ್ ಕುಮಾರ್-ನರೇಂದ್ರ ಮೋದಿ ಕೈ-ಕೈ ಹಿಡಿದ ಚಿತ್ರ ಪ್ರಕಟವಾಗಿ, 5 ಕೋಟಿ ರುಪಾಯಿ ಪರಿಹಾರ ನೀಡಿದ ನರೇಂದ್ರ ಮೋದಿಯವರಿಗೆ ಅಭಿನಂದನೆಯನ್ನು ತಿಳಿಸಲಾಗಿತ್ತು.
ಈ ಜಾಹೀರಾತು ರಾಜಕೀಯ ವಲಯದಲ್ಲಿ ಅಲ್ಲೋಲ ಕಲ್ಲೋಲ ಎಬ್ಬಿಸಿತ್ತು. 2002ರ ಗುಜರಾತ್ ಗಲಭೆ ಕಾರಣಕ್ಕಾಗಿ ಮೋದಿಯವರನ್ನು ಬಹಿರಂಗವಾಗಿ ದ್ವೇಷಿಸುತ್ತಿದ್ದ ನಿತೀಶ್ ಕುಮಾರ್, ಜಾಹೀ ರಾತಿನ ಚಿತ್ರ ಕಂಡು ಮತ್ತಷ್ಟು ವ್ಯಗ್ರಗೊಂಡಿದ್ದರು. ನಿತೀಶರ ಒಳಸಿಟ್ಟನ್ನು ಅರಿತಿದ್ದ ನರೇಂದ್ರ ಮೋದಿ, ಅವರ ಇರಿಸುಮುರಿಸಿನ ಸನ್ನಿವೇಶ ಕಂಡು ಒಳಗಿಂದೊಳಗೇ ನಕ್ಕಿದ್ದರು.
ಈ ಘಟನೆಯ 1 ವರ್ಷ ಮುನ್ನ ಅಂದರೆ 2009ರ ಲೋಕಸಭಾ ಚುನಾವಣೆಗೆ ಎಲ್.ಕೆ.ಆಡ್ವಾಣಿ ಅವರು ಎನ್ʼಡಿಎ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿಯಾಗಿದ್ದರಿಂದ ಪಂಜಾಬಿನ ಲೂಧಿಯಾನ ದಲ್ಲಿ ಎನ್‌ಡಿಎ ಬಲಪ್ರದರ್ಶನದ ಸಮಾವೇಶವನ್ನು ಕರೆಯಲಾಗಿತ್ತು. ಆದರೆ, ನರೇಂದ್ರ ಮೋದಿ ಯವರು ಪಾಲ್ಗೊಳ್ಳುವ ಕಾರಣದಿಂದಾಗಿ ಸಭೆಗೆ ಬರಲು ನಿತೀಶ್ ಕುಮಾರ್ ಒಪ್ಪಿರಲಿಲ್ಲ.
ನಂತರ ಅರುಣ್ ಜೇಟ್ಲಿ ಮಾತು ಕೇಳಿ ನಿತೀಶ್ ಸಭೆಗೆ ಬಂದಿದ್ದರು. ಆದರೆ, ಸಮಾವೇಶದಲ್ಲಿ ನಿತೀಶ್ ಜತೆ ಕೈ-ಕೈ ಹಿಡಿದು ಚಿತ್ರಕ್ಕೆ ಪೋಸ್ ನೀಡುವಲ್ಲಿ ಯಶಸ್ವಿಯಾಗಿದ್ದ ನರೇಂದ್ರ ಮೋದಿ, ನಿತೀಶರನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದ್ದರು. ಈ ಚಿತ್ರ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದರಿಂದ ನಿತೀಶರ ಆಕ್ರೋಶ ದುಪ್ಪಟ್ಟಾಗಿತ್ತು. ಬರೋಬ್ಬರಿ 1 ವರ್ಷದ ನಂತರ, ಮತ್ತದೇ ಚಿತ್ರ ಪ್ರಕಟಗೊಂಡ ಪರಿಣಾಮ ಎನ್‌ಡಿಎ ಮಿತ್ರರಿಗೆಂದು ಪಟನಾದಲ್ಲಿ ಏರ್ಪಡಿಸಿದ್ದ ಭೋಜನಕೂಟವನ್ನೇ ನಿತೀಶ್ ರದ್ದು ಗೊಳಿಸಿದರು.
ಅಷ್ಟರಮಟ್ಟಿಗೆ ಅವರು ಮೋದಿಯವರನ್ನು ದ್ವೇಷಿಸುತ್ತಿದ್ದರು. 2010ರ ಈ ಚಿತ್ರವನ್ನು ಪಟನಾ ನಗರದ ವಿವಿಧೆಡೆ ಪೋಸ್ಟರ್‌ಗಳಂತೆ ಪ್ರಕಟ ಮಾಡಿದ್ದು ಅಂದಿನ ಬಿಜೆಪಿ ಯುವ ಶಾಸಕರಾಗಿದ್ದ ನಿತಿನ್ ನಬಿನ್ ಮತ್ತು ರಾಮೇಶ್ವರ್ ಚೌರಾಸಿಯಾ. ಆ ಘಟನಾವಳಿಯು ನಿತಿನ್ ನಬಿನ್ ಬಗ್ಗೆ ಮೋದಿಯವರಿಗೆ ವಿಶೇಷ ಕಾಳಜಿ, ಅಭಿಮಾನ, ಮೃದು ಧೋರಣೆ ಮೂಡಲು ಪ್ರೇರೇಪಿಸಿತ್ತು.
ಈಗ 15 ವರ್ಷಗಳ ನಂತರ ನಿತಿನ್ ನಬಿನ್ ಅಧಿಕೃತವಾಗಿ ಪ್ರಧಾನಿ ನರೇಂದ್ರ ಮೋದಿಯವರ ಆಪ್ತ ಕೂಟಕ್ಕೆ ಸೇರಿಕೊಂಡಿದ್ದಾರೆ. ಮೋದಿಯವರು ರಾಷ್ಟ್ರ ರಾಜಕೀಯ ಪ್ರವೇಶ ಮಾಡುವ ಮುನ್ನವೇ ಅವರನ್ನು ಗುರುತಿಸಿ, ಸಮ್ಮಾನಿಸಿದ್ದ ನಿತಿನ್ ನಬಿನ್, ಮೋದಿ ಕಾರಣದಿಂದಾಗಿಯೇ ಈಗ ದಿಲ್ಲಿ ಪವರ್ ಕಾರಿಡಾರ್‌ನ ಬಹುಮುಖ್ಯ ಸ್ಥಾನಕ್ಕೇರಿದ್ದಾರೆ.
ನಬಿನ್ ಜತೆಗಿದ್ದ ರಾಮೇಶ್ವರ್ ಚೌರಾಸಿಯಾ 2020ರಲ್ಲಿ ಬಿಜೆಪಿ ಬಿಟ್ಟು ಬಿಹಾರದ ಲೋಕಜನಶಕ್ತಿ ಪಾರ್ಟಿ ಸೇರಿದರು. ಆದರೆ, ನಿತಿನ್ ನಬಿನ್ ಪ್ರತಿ ಚುನಾವಣೆಯನ್ನೂ ಗೆದ್ದು, ಬಿಜೆಪಿಯಲ್ಲಿ ನೆಲೆ ಭದ್ರಗೊಳಿಸಿ, ರಾಜ್ಯ ರಾಜಧಾನಿ ಪಟನಾದಿಂದ ರಾಷ್ಟ್ರ ರಾಜಧಾನಿ ದಿಲ್ಲಿಗೆ ಹಾರಿದ್ದಾರೆ.
ಬಿಜೆಪಿ ಕಾರ್ಯಚಟುವಟಿಕೆಗಳ ಹಿಂದೆ ಆರ್‌ಎಸ್‌ಎಸ್ ಛಾಯೆಯಿದ್ದರೂ, ಮೋದಿ-ಅಮಿತ್ ಶಾ ಈ ಛಾಯೆಯಿಂದ ಹೊರಬಂದು ರಾಜಕಾರಣ ಮಾಡುತ್ತಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಸಂಘದ ಒಳಗೊಳ್ಳುವಿಕೆ ಕಡಿಮೆ ಇದ್ದದ್ದು ಇದಕ್ಕೊಂದು ಸಾಕ್ಷಿಯಾಗಿತ್ತು. ಹಾಗೆ ನೋಡಿದರೆ, ಮಾಜಿ ಶಾಸಕ ಹಾಗೂ ಬಿಜೆಪಿ ನಾಯಕರಾಗಿದ್ದ ನಿತಿನ್ ನಬಿನ್‌ರ ತಂದೆ ನಬಿನ್ ಕಿಶೋರ್ ಪ್ರಸಾದ್ ಸಿನ್ಹಾ ಸಂಘದ ಹಾಲಿ ಅಧ್ಯಕ್ಷ ಮೋಹನ್ ಭಾಗವತ್ ಸೇರಿ ಅನೇಕರೊಂದಿಗೆ ಒಡನಾಟ ಹೊಂದಿದ್ದವರು. ಆದರೆ ಹೊಸ ಪೀಳಿಗೆಯ ನಿತಿನ್ ನಬಿನ್ ಸಂಘದೊಂದಿಗೆ ಹೆಚ್ಚು ಬೆರೆತಿದ್ದವರೇ ನಲ್ಲ. ಅವರು ಪ್ರತಿನಿಧಿಸುವ ಕಾಯಸ್ಥ ಸಮುದಾಯ ಬಿಹಾರದ ಪ್ರಬಲ ಸಮುದಾಯವೂ ಅಲ್ಲ. ಸಮುದಾಯದ ಜನಸಂಖ್ಯೆ ಶೇ.1ಕ್ಕಿಂತಲೂ ಕಡಿಮೆ. ಹಾಗಾಗಿಯೇ ನಿತಿನ್ ನಬಿನ್ ಆಯ್ಕೆಯನ್ನು ಬೆರಳೆಣಿಕೆ ಮಂದಿ ಬಿಟ್ಟರೆ ಬಿಜೆಪಿಯ ಮತ್ಯಾರೂ ನಿರೀಕ್ಷಿಸಿರಲಿಲ್ಲ.
ಪಟನಾ ಪಶ್ಚಿಮ ಕ್ಷೇತ್ರದಿಂದ ಏಳು ಬಾರಿ ಶಾಸಕರಾಗಿದ್ದ ತಂದೆ ನಬಿನ್ ಕಿಶೋರ್ ಪ್ರಸಾದ್ ಸಿನ್ಹಾರ ಮರಣದ ನಂತರ ಚುನಾವಣಾ ರಾಜಕೀಯಕ್ಕೆ ಪ್ರವೇಶಿಸಿದ್ದ ನಿತಿನ್, 2006ರಲ್ಲಿ ತಂದೆ ಪ್ರತಿನಿಧಿಸಿದ್ದ ಪಟನಾ ಪಶ್ಚಿಮ ಕ್ಷೇತ್ರದ ಉಪಚುನಾವಣೆಯಲ್ಲಿ ಗೆದ್ದಿದ್ದರು. ಕ್ಷೇತ್ರ ಪುನರ್ ವಿಂಗಡಣೆಯ ನಂತರ, ಪಟನಾದ ಬಂಕಿಪುರ ಕ್ಷೇತ್ರದಲ್ಲಿ ಸ್ಪರ್ಧಿಸಿ, 2010, 2015, 2020 ಮತ್ತು 2025ರಲ್ಲಿ ಆಯ್ಕೆಯಾಗುತ್ತಾ ಬಂದರು. ವಂಶ ರಾಜಕಾರಣದ ಕುಡಿಯಾಗಿದ್ದರೂ, ನಂತರದಲ್ಲಿ ವೈಯಕ್ತಿಕ ವರ್ಚಸ್ಸನ್ನು ಬೆಳೆಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ರಾಜ್ಯ ರಸ್ತೆ ನಿರ್ಮಾಣ, ನಗರಾಭಿವೃದ್ಧಿ, ವಸತಿ, ಕಾನೂನು ಮತ್ತು ನ್ಯಾಯದ ಖಾತೆಗಳನ್ನು ನಿಭಾ ಯಿಸಿದ್ದಾರೆ. ನಿತಿನ್ ನಬಿನ್ ಆಯ್ಕೆಯ ಮೂಲಕ ಬಿಜೆಪಿಯು ರಾಜಕೀಯದಲ್ಲಿ ಹೊಸ ಮನ್ವಂತರ ಕ್ಕೆ ನಾಂದಿ ಹಾಡಿದೆ, ಯುವ ನಾಯಕತ್ವವನ್ನು ಬೆಳೆಸುವ ದಿಟ್ಟ ಕ್ರಮ ಕೈಗೊಂಡಿದೆ ಎಂದೆ ವಿಶ್ಲೇಷಣೆಗಳನ್ನು ಮಾಡಬಹುದು. ಆದರೆ, ನರೇಂದ್ರ ಮೋದಿ-ಅಮಿತ್ ಶಾಗೆ ತಮ್ಮ ಕಾರ್ಯತಂತ್ರ ಗಳನ್ನು ಪಕ್ಷದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬಲ್ಲ ವ್ಯಕ್ತಿ ಬೇಕೇ ವಿನಾ, ನಿರ್ದೇಶನ ಅಥವಾ ಸೂಚನೆ ನೀಡಬಲ್ಲ ವ್ಯಕ್ತಿ ಬೇಕಿಲ್ಲ ಎನ್ನುವುದೂ ವಾಸ್ತವವೇ. ವಿವಿಧ ಚುನಾವಣೆಗಳನ್ನು ಕೂಡ ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಹಾಗೂ ಅಮಿತ್ ಶಾ ತಂತ್ರಗಾರಿಕೆಯಿಂದಾಗಿ ಬಿಜೆಪಿ ಗೆಲ್ಲುತ್ತಿರುವಾಗ ಅವರಿಬ್ಬರ ನಿರ್ದೇಶನಗಳನ್ನು ಸ್ವೀಕರಿಸುವುದು ಪಕ್ಷದ ಪ್ರತಿಯೊಬ್ಬರಿಗೂ ಅನಿವಾರ್ಯವೂ ಹೌದು.
“ನಮ್ಮ ಗೆಲುವಿಗೆ ಮೋದಿಯವರ ಜನಪ್ರಿಯತೆ ಕೂಡ ಕಾರಣ" ಎಂದು ಬಿಜೆಪಿಯ ಎಷ್ಟೋ ಸಂಸದರು, ಶಾಸಕರು ಒಪ್ಪಿಕೊಳ್ಳುವುದರಿಂದ ಸದ್ಯದ ಮಟ್ಟಿಗೆ ಮೋದಿ-ಶಾ ಪಕ್ಷದ ಪ್ರಶ್ನಾತೀತ ನಾಯಕರು. ದೇಶದ ಇತರೆ ಪಕ್ಷಗಳಿಗೆ ಹೋಲಿಸಿದರೆ, ನಾವು ಯುವ ನಾಯಕತ್ವಕ್ಕೆ ಆದ್ಯತೆ ನೀಡಿದ್ದೇವೆ ಎಂಬ ನಿರೂಪಣೆ ಬಿಜೆಪಿಗೆ ರಾಜಕೀಯವಾಗಿ ಲಾಭ ತರಬಲ್ಲದು.
ಏಕೆಂದರೆ, ಕಾಂಗ್ರೆಸ್, ಆರ್‌ಜೆಡಿ ಅಥವಾ ಸಮಾಜವಾದಿ ಪಕ್ಷಗಳಿಗೆ ಹೋಲಿಸಿದರೆ ಬಿಜೆಪಿಯ ಕ್ರಮವು ಭಿನ್ನವಾಗಿ ಕಾಣುತ್ತದೆ. ತಳಮಟ್ಟದ ಕಾರ್ಯಕರ್ತನೊಬ್ಬ ಪಕ್ಷದ ಅತ್ಯುನ್ನತ ಹುದ್ದೆಗೆ ಏರಬಹುದು ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ 83 ವರ್ಷ, ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್‌ರಿಗೆ 77 ವರ್ಷ, ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್‌ಗೆ 85 ವಯಸ್ಸಾಗಿದ್ದರೆ, ಬಿಎಸ್‌ಪಿಯ ಮಾಯಾವತಿಗೆ 69 ವರ್ಷ ಮತ್ತು ಡಿಎಂಕೆಯ ಅಧ್ಯಕ್ಷ ಎಂ.ಕೆ.ಸ್ಟಾಲಿನ್‌ಗೆ 72 ವರ್ಷ.
ಇವರೆಲ್ಲರಿಗಿಂತ 45 ವರ್ಷದ ನಿತಿನ್ ನಬಿನ್ ವಯಸ್ಸಿನಲ್ಲಿ ಸಣ್ಣವರು ಹಾಗೂ ದೇಶಾದ್ಯಂತ ಚುರುಕುತನದಿಂದ ಪ್ರವಾಸ ಮಾಡಬಲ್ಲ ಸಾಮರ್ಥ್ಯವಿರುವವರು. ದೇಶದ ಯುವಕರನ್ನು ತಲುಪಲು ಕೂಡ ಇದು ಪಕ್ಷಕ್ಕೆ ಅನುಕೂಲಕರ. ಅಮಿತ್ ಶಾ ಅವರು 2014ರಲ್ಲಿ ಪಕ್ಷದ ಅಧ್ಯಕ್ಷ ರಾದಾಗ ಅವರಿಗೆ 49. ಅವರ ದಾಖಲೆಯನ್ನೂ ನಿತಿನ್ ನವೀನ್ ಮುರಿದಿದ್ದಾರೆ.
ನಿತಿನ್ ನಬಿನ್ ಪಟ್ಟಾಭಿಷೇಕದ ಹಿಂದೆ ಬಿಜೆಪಿಯ ಇತರೆ ಹಿರಿತಲೆಗಳಿಗೂ ಸಂದೇಶವಿದೆ ಎನ್ನುವು ದನ್ನು ಎಷ್ಟು ಜನ ಅರ್ಥಮಾಡಿಕೊಂಡಿದ್ದಾರೋ ಗೊತ್ತಿಲ್ಲ. ಪಕ್ಷ ಹಾಗೂ ಸಂಘಟನೆಯ ಭವಿಷ್ಯ ವನ್ನು ಗಮನದಲ್ಲಿಟ್ಟುಕೊಂಡು, ನೀವು ಕೂಡ ಅಧಿಕಾರಕ್ಕಂಟಿಕೊಂಡು ಕೂರಬೇಡಿ, ಹೊಸ ಪೀಳಿಗೆಗೆ ಅವಕಾಶ ಮಾಡಿಕೊಡಿ ಎಂಬುದನ್ನು ಮೋದಿ-ಶಾ ಇಬ್ಬರೂ ಸೂಚ್ಯವಾಗಿ ತಿಳಿಸಿದ್ದಾರೆ.
ಗುಜರಾತಿನಲ್ಲೂ ಇದೇ ಪ್ರಯೋಗ ಮಾಡಿದ್ದ ಮೋದಿ-ಶಾ, 2021ರಲ್ಲಿ 35 ವರ್ಷದ ಹರ್ಷ್ ಸಾಂಘ್ವಿ ಅವರನ್ನು ಗೃಹ ಸಚಿವರನ್ನಾಗಿ ನೇಮಿಸಿದ್ದರು. ಇದೇ ಹರ್ಷ್ ಸಾಂಘ್ವಿ ಈಗ ರಾಜ್ಯದ ಉಪ ಮುಖ್ಯಮಂತ್ರಿಯಾಗಿದ್ದಾರೆ. ತಮಿಳುನಾಡಿನಲ್ಲಿ ಅಣ್ಣಾಮಲೈ ಅವರನ್ನು ರಾಜಕಾರಣಕ್ಕೆ ಕರೆದು ಕೊಂದು ಬಂದಿದ್ದೂ ಅದೇ ಉದ್ದೇಶದಿಂದ.
“ನಿತಿನ್ ನಬಿನ್ ವಯಸ್ಸಿನಲ್ಲಿ ಕಿರಿಯರಾಗಿರುವುದರಿಂದ ಅವರನ್ನು ನಿತಿನ್ ಅಥವಾ ನಬಿನ್ ಎಂದು ಹೆಸರಿಟ್ಟು ಕರೆಯಬೇಡಿ; ‘ಅಧ್ಯಕ್ಷ್ʼಜೀ’ ಎಂದು ಗೌರವದಿಂದ ಕರೆಯಬೇಕು" ಅಂತ ಪಕ್ಷದ ಎಲ್ಲಾ ಹಿರಿಯರಿಗೂ ಸೂಚ್ಯವಾಗಿ ತಿಳಿಸಲಾಗಿದೆಯಂತೆ. ಅಂದರೆ, ಒಂದೋ ಹೊಸ ರಾಜಕಾರಣದ ಮಾದರಿಗೆ ಹೊಂದಿಕೊಳ್ಳಬೇಕು, ಇಲ್ಲವೇ ನಿಮ್ಮ ದಾರಿ ನೀವು ನೋಡಿಕೊಳ್ಳಬೇಕು ಎನ್ನುವುದೇ ಇದರ ಹಿಂದಿರುವ ಸಂದೇಶ. ಪ್ರಧಾನಿ ನರೇಂದ್ರ ಮೋದಿ ಅವರೂ, “ನಿತಿನ್ ನಬಿನ್ ಜೀ ಅವರು ನನ್ನ ಹೊಸ ಬಾಸ್" ಎನ್ನುವ ಮೂಲಕ ಉಳಿದವರೂ ಇದೇ ರೀತಿ ಸಂಬೋಧಿಸಬೇಕು ಎಂದಿದ್ದಾರೆ.
ಕರ್ನಾಟಕದಲ್ಲಿ ಮಾಜಿ ಮುಖ್ಯಮಂತ್ರಿಗಳಾಗಿದ್ದವರು, ವಯಸ್ಸಾದರೂ ಅಧಿಕಾರಕ್ಕಾಗಿ ಹಪಹಪಿಸು ತ್ತಿರುವ ರಾಜ್ಯದ ಹಿರಿ ತಲೆಗಳನ್ನೂ ಒಳಗೊಂಡು, ಚುನಾವಣೆ ಟಿಕೆಟ್ ಕೇಳುತ್ತಾ ಇರುವ ಬೇರೆ ರಾಜ್ಯಗಳ ಹಿರಿಯ ನಾಯಕರಿಗೂ ನಿತಿನ್ ನಬಿನ್ ಆಯ್ಕೆ ಕಟುಸಂದೇಶ ರವಾನೆ ಮಾಡಿದಂತಿದೆ.
ಕೇಂದ್ರ ಸಚಿವರಾದ ಪಿಯೂಷ್ ಗೋಯೆಲ್, ಧರ್ಮೇಂದ್ರ ಪ್ರಧಾನ್, ಭೂಪೇಂದ್ರ ಯಾದವ್ ಸೇರಿ ಅನೇಕರ ಹಿರಿತನ, ಅನುಭವಗಳನ್ನು ಪಕ್ಕಕ್ಕಿಟ್ಟು ನಿತಿನ್ ನಬಿನ್‌ರನ್ನು ಉನ್ನತ ಸ್ಥಾನದಲ್ಲಿ ಕೂರಿಸಿರುವುದರ ಹಿಂದಿನ ಉದ್ದೇಶ ಸದ್ಯಕ್ಕೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಮಾತ್ರ ಅರ್ಥ ವಾದಂತಿದೆ.
ನಿತಿನ್ ನಬಿನ್ ರಾಷ್ಟ್ರೀಯ ಅಧ್ಯಕ್ಷ ಹುದ್ದೆಗೆ ನಾಮಪತ್ರ ಸಲ್ಲಿಸುವ 1 ದಿನಕ್ಕೆ ಮುನ್ನ ಮಾತನಾಡಿದ್ದ ಸಚಿವ ಗಡ್ಕರಿ, “ಪೀಳಿಗೆಗಳು ಕ್ರಮೇಣ ಬದಲಾಗಬೇಕು. ನಾವು ನಿಧಾನವಾಗಿ ನಿವೃತ್ತಿ ಹೊಂದಿ ಹೊಸ ತಲೆಮಾರಿಗೆ ಜವಾಬ್ದಾರಿ ನೀಡಬೇಕು. ವ್ಯವಸ್ಥೆ ಸುಗಮವಾಗಿ ಸಾಗಲು ಪ್ರಾರಂಭಿಸಿ ದಾಗ ನಾವು ಅದರಿಂದ ಹಿಂದೆ ಸರಿದು ಬೇರೆ ಯಾವುದಾದರೂ ಕೆಲಸ ಮಾಡಿಕೊಂಡಿರಬೇಕು" ಎಂದಿದ್ದರು.
ಗಡ್ಕರಿಯವರ ಈ ಮಾತುಗಳನ್ನು ಕೇಳಿದರೆ, 2029ರ ಲೋಕಸಭಾ ಚುನಾವಣೆಯಲ್ಲಿ ಅವರು ಸ್ಪರ್ಧಿಸುವುದು ಅನುಮಾನ. ಹಾಗಾದರೆ, ಉಳಿದ ಹಿರಿತಲೆಗಳದ್ದೂ ಇದೇ ಕಥೆ ಇರಬಹುದಾ? ಕೆಲ ದಿನಗಳ ಹಿಂದೆ ಕರ್ನಾಟಕದ ಬಿಜೆಪಿ ಸಂಸದರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡಿದ್ದ ಪ್ರಧಾನಿ ಮೋದಿಯವರು, ಸಂಸದರ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನ ಹೊರ ಹಾಕಿದ್ದರು.
“ಕಾರ್ಯಕರ್ತರು ಹಾಗೂ ಜನರೊಂದಿಗೆ ನೀವು ಎಷ್ಟರಮಟ್ಟಿಗೆ ಕನೆಕ್ಟ್ ಮತ್ತು ಗ್ರೌಂಡೆಡ್ ಆಗಿದ್ದೀರಿ ಎಂಬುದು ನಮಗೆ ಗೊತ್ತಿದೆ. ಸುಮ್ಮನೆ ‘ಹಾಗೆ ಮಾಡಿದ್ದೇವೆ, ಹೀಗೆ ಮಾಡಿದ್ದೇವೆ’ ಎಂದು ಕಥೆ ಹೇಳಬೇಡಿ" ಎಂದು ನೇರವಾಗಿ ತಿಳಿಸಿದ್ದರು. “30 ವರ್ಷದ ಹಿಂದಿನ ಮಾದರಿಯಲ್ಲಿ ರಾಜಕಾರಣ ಮಾಡುತ್ತಾ ಕುಳಿತರೆ ಉಳಿಗಾಲವಿಲ್ಲ" ಎಂದಿದ್ದರು ಮೋದಿ.
ತಮ್ಮ ಈ ಮಾನಸಿಕತೆಯನ್ನು ಅರ್ಥಮಾಡಿಕೊಳ್ಳುವ ಮತ್ತು ಅನುಷ್ಠಾನಗೊಳಿಸುವ ವ್ಯಕ್ತಿಗಳು ಮೋದಿ-ಶಾ ಅವರಿಗೆ ಬೇಕಾಗಿದ್ದಾರೆ. ಇಂಥದ್ದೊಂದು ಟಾಸ್ಕ್ ಅನ್ನು ನಿತಿನ್ ನಬಿನ್ ಹೇಗೆ ನಿರ್ವಹಿಸುತ್ತಾರೆ ಎನ್ನುವುದು ಕುತೂಹಲಕರ. ನಿತಿನ್ ನಬಿನ್ ಆಯ್ಕೆಯ ಸಂದೇಶ ಅವಲೋಕಿಸಿ ದರೆ- ಕರ್ನಾಟಕದಲ್ಲಿ ಕಿರಿ ವಯಸ್ಸಿನ ಬಿ.ವೈ. ವಿಜಯೇಂದ್ರರ ಸ್ಥಾನ ಭದ್ರವಾಗಿದೆ ಎಂದನಿಸುವುದು ಸುಳ್ಳಲ್ಲ.