ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Srivathsa Joshi Column: ಕನಕದಾಸರು ಆ ಬಾಳೆಹಣ್ಣನ್ನು ತಿನ್ನಲೇ ಇಲ್ಲವೇಕೆ ?

ಕುಟುಂಬ, ಸಮಾಜ ಅನ್ನೋದಕ್ಕೆಲ್ಲ ಅರ್ಥವೇ ಇಲ್ಲ. ಮಾನವೀಯ ಸಂಬಂಧಗಳ ಒಂದೊಂದು ಎಳೆಯೂ ಛಿದ್ರಛಿದ್ರ. ಕಾಡಿನಲ್ಲಾದರೂ ಪ್ರಾಣಿಗಳೆಲ್ಲ ಒಂದು ಅಲಿಖಿತ ನೀತಿ ನಿಯಮ ಪಾಲಿಸಿ ಸಹಬಾಳ್ವೆ ನಡೆಸುತ್ತಿರುವಾಗ ನಾಡಿನ ಮನುಷ್ಯಪ್ರಾಣಿ ಅವುಗಳಿಗಿಂತಲೂ ಕಡೆ ಎನ್ನಿಸಿಕೊಳ್ಳುವಂಥ ಅಸಹ್ಯ ಅನೂಹ್ಯ ಸನ್ನಿವೇಶ!

ಕನಕದಾಸರು ಆ ಬಾಳೆಹಣ್ಣನ್ನು ತಿನ್ನಲೇ ಇಲ್ಲವೇಕೆ ?

-

ತಿಳಿರುತೋರಣ

ಅವರಿಗೆ ಹಸಿವಾಗಿರಲಿಲ್ಲವೇನೋ. ಅಥವಾ ಆವತ್ತು ಕೂಡ ಏಕಾದಶಿಯ ಉಪವಾಸ ಆಚರಣೆ ಮಾಡಬೇಕು ಎಂದುಕೊಂಡರೇನೋ. ಅಥವಾ ಬಾಳೆಹಣ್ಣು ತಿಂದ ಮೇಲೆ ಸಿಪ್ಪೆ ಎಲ್ಲಿ ಬಿಸಾಡಲಿ ಎಂಬ ಚಿಂತೆ ಅವರನ್ನು ಕಾಡಿರಬಹುದು. ಅಥವಾ ಅವರಿಗೆ ಸಿಕ್ಕಿದ ಬಾಳೆಹಣ್ಣು ಹೊರಗಿಂದ ಇನ್ನೂ ಹಸುರಾಗಿಯೇ ಇದ್ದು ಹಳದಿಬಣ್ಣಕ್ಕೆ ತಿರುಗಿ ಪಕ್ವವಾಗಿ ದ್ದಿಲ್ಲವಿರಬಹುದು. ಅಥವಾ ಅವರಿಗೆ ನಂಜನಗೂಡಿನ ರಸಬಾಳೆ ಮಾತ್ರ ಇಷ್ಟವಾಗು ತ್ತಿದ್ದದ್ದು, ಬೇರೆ ತಳಿಗಳು ಅಂದ್ರೆ ಪಚ್ಚಬಾಳೆ, ಏಲಕ್ಕಿಬಾಳೆ, ಬೂದುಬಾಳೆ, ಚಂದ್ರಬಾಳೆ ಗಳೆಲ್ಲ ಸೇರುತ್ತಿರಲಿಲ್ಲವಿರಬಹುದು... ಹೀಗೆ ಹಲವಾರು ತರ್ಲೆ ಉತ್ತರಗಳನ್ನು ಆ ಪ್ರಶ್ನೆಗೆ ಕೊಡಬಹುದು.

ಆದರೆ ಅವ್ಯಾವುವೂ ಸರಿಯುತ್ತರಗಳಲ್ಲ, ಕನಕದಾಸರು ಬಾಳೆಹಣ್ಣನ್ನು ತಿನ್ನದೇ ಇರುವು ದಕ್ಕೆ ಬೇರೆಯೇ ಕಾರಣವಿತ್ತು, ಅದರ ಹಿಂದೊಂದು ತಲಸ್ಪರ್ಶಿ ತರ್ಕ ಇತ್ತು, ಆಧ್ಯಾತ್ಮಿಕ ಔನ್ನತ್ಯದ ಚಿಂತನೆ ಇತ್ತು- ಎಂದು ನಾವೆಲ್ಲ ಆ ಕಥೆಯನ್ನು ಕೇಳಿ/ಓದಿ ಬಲ್ಲೆವು. ಇರಲಿ, ಅದನ್ನು ಆಮೇಲೆ ನೋಡೋಣವಂತೆ. ಮೊದಲಿಗೆ ಮನುಷ್ಯಸ್ವಭಾವದ ಬಗೆಗೆ, ಅದರಲ್ಲೂ ಪ್ರಾಮಾಣಿಕತೆಯ ಬಗೆಗೆ ಲೈಟಾಗಿ ಒಂದಷ್ಟು ಚಿಂತನೆ: ‘ತುತ್ತು ಅನ್ನ ತಿನ್ನೋಕೆ ಬೊಗಸೆ ನೀರು ಕುಡಿಯೋಕೆ, ತುಂಡು ಬಟ್ಟೆ ಸಾಕು ನನ್ನ ಮಾನ ಮುಚ್ಚೋಕೆ, ಅಂಗೈಯಗಲ ಜಾಗ ಸಾಕು ಹಾಯಾಗಿರೋಕೆ’ ಇವು ‘ಜಿಮ್ಮಿಗಲ್ಲು’ ಚಿತ್ರದ ‘ಜಿಮ್ಮಿ’ (ವಿಷ್ಣುವರ್ಧನ್)ಗಷ್ಟೇ ಅಲ್ಲ, ಪ್ರಪಂಚದಲ್ಲಿ ಪ್ರತಿಯೊಬ್ಬ ಮನುಷ್ಯನಿಗೂ ಅತ್ಯಂತ ಮೂಲಭೂತ ಅಗತ್ಯಗಳು.

ಇದನ್ನೇ ಹಿಂದಿಯಲ್ಲಿ ‘ರೋಟಿ ಕಪಡಾ ಔರ್ ಮಕಾನ್’ ಎನ್ನುವುದು. ಇದೇನೂ ನಿನ್ನೆ ಮೊನ್ನೆ ಕಂಡುಕೊಂಡ ಹೊಸ ಸಂಶೋಧನೆಯಲ್ಲ. ಆದರೆ, ಒಂದು ವೇಳೆ ಪ್ರತಿಯೊಬ್ಬ ಮನುಷ್ಯನೂ ಕೇವಲ ಸ್ವಾರ್ಥಿಯಾಗಿ, ತನ್ನೊಬ್ಬನ ಉಳಿವು-ಅಳಿವಿನ ಬಗ್ಗೆಯಷ್ಟೇ ಚಿಂತಿಸುವವನಾಗಿದ್ದರೆ ಹೇಗಿರುತ್ತಿತ್ತು? ಪರಸ್ಪರ ವಿಶ್ವಾಸ, ಸಹಾಯ, ಸಹಕಾರ ಅಂತೆಲ್ಲ ಏನೂ ಇಲ್ಲ.

ಕುಟುಂಬ, ಸಮಾಜ ಅನ್ನೋದಕ್ಕೆಲ್ಲ ಅರ್ಥವೇ ಇಲ್ಲ. ಮಾನವೀಯ ಸಂಬಂಧಗಳ ಒಂದೊಂದು ಎಳೆಯೂ ಛಿದ್ರಛಿದ್ರ. ಕಾಡಿನಲ್ಲಾದರೂ ಪ್ರಾಣಿಗಳೆಲ್ಲ ಒಂದು ಅಲಿಖಿತ ನೀತಿ ನಿಯಮ ಪಾಲಿಸಿ ಸಹಬಾಳ್ವೆ ನಡೆಸುತ್ತಿರುವಾಗ ನಾಡಿನ ಮನುಷ್ಯಪ್ರಾಣಿ ಅವುಗಳಿ ಗಿಂತಲೂ ಕಡೆ ಎನ್ನಿಸಿಕೊಳ್ಳುವಂಥ ಅಸಹ್ಯ ಅನೂಹ್ಯ ಸನ್ನಿವೇಶ!

ಪುಣ್ಯಕ್ಕೆ ಹಾಗೆ ಇಲ್ಲ ಪರಿಸ್ಥಿತಿ. ಎಷ್ಟೋ ಸಂದರ್ಭಗಳಲ್ಲಿ ನಮಗೆ ಗುರುತು-ಪರಿಚಯ ಇಲ್ಲದವರ ಬಗ್ಗೆ ಕೂಡ ನಾವು ಉದಾರಿಗಳಾಗುತ್ತೇವೆ. ಮುಂದೆ ಅವರು ಭೇಟಿಯಾಗು ತ್ತಾರೋ ಇಲ್ಲವೋ, ಮಾಡಿದ ಉಪಕಾರಕ್ಕೆ ಪ್ರತಿಫಲ ದೊರಕುತ್ತದೋ ಇಲ್ಲವೋ ಮುಂತಾಗಿ ಯಾವೊಂದು ಆಲೋಚನೆಯೂ ಇಲ್ಲದೆ ಆ ಕ್ಷಣಕ್ಕೆ ಏನು ಸಾಧ್ಯವಾಯ್ತೋ ಅಷ್ಟನ್ನು ಮಾಡುತ್ತೇವೆ.

ಇದನ್ನೂ ಓದಿ:Srivathsa Joshi Column: ಸ್ತ್ರೀ ಎಂದರೆ ಅಷ್ಟೇ ಸಾಕೆ? ಇನ್ನೂ ಇಪ್ಪತ್ತೆಂಟು ಹೆಸರು ಬೇಕೆ?

ಕಣ್ಣು ಕಾಣದ ಮುದುಕನನ್ನು ಕೈಹಿಡಿದು ರಸ್ತೆ ದಾಟಿಸುತ್ತೇವೆ. ಕಂಕುಳಲ್ಲಿ ಮಗು, ಕೈಯಲ್ಲೊಂದು ಭಾರದ ಚೀಲ ಹಿಡಿದುಕೊಂಡು ಬಸ್ ಹತ್ತುವ ಹೆಂಗಸಿಗೆ ಸೀಟ್ ಬಿಟ್ಟು ಕೊಡುತ್ತೇವೆ. ‘ಪ್ರಯಾಣಿಕರು ಮರೆತುಹೋಗಿದ್ದ ಪರ್ಸ್ ಮರಳಿಸಿದ ಆಟೋ ಚಾಲಕ’ ರೀತಿಯ ಸುದ್ದಿಗಳನ್ನು ಆಗಾಗ ಓದುತ್ತೇವೆ.

ನಾವೂ ಯಾವಾಗಲೂ ಪ್ರಾಮಾಣಿಕರಾಗಿರಬೇಕು ಎಂದು ಸಂಕಲ್ಪಿಸುತ್ತೇವೆ. ನೆರೆ-ಬರ-ಭೂಕಂಪಗಳಿಂದ ತತ್ತರಿಸಿದವರ ಜಾತಿಮತ ಲೆಕ್ಕಿಸದೆ ಮನಮಿಡಿಯುತ್ತೇವೆ, ನಮ್ಮ ಕೈಲಾದ ಸಹಾಯ ಮಾಡುತ್ತೇವೆ. ‘ಕೊಟ್ಟದ್ದು ತನಗೆ ಬಚ್ಚಿಟ್ಟದ್ದು ಪರರಿಗೆ’ ಎಂಬಂಥ ಸರಳ ಸಂದೇಶಗಳಿಂದಿರಬಹುದು, ‘ಪರೋಪಕಾರಾರ್ಥಮಿದಂ ಶರೀರಂ’ ಎಂದುಕೊಂಡೇ ಗಂಧದ ಕೊರಡಿನಂತೆ ಬಾಳು ಸವೆಸುವವರನ್ನು ಆದರ್ಶವಾಗಿಟ್ಟುಕೊಂಡು ಇರಬಹುದು, ಸಂತರ ಸದ್ಬೋಧೆಯಿಂದಿರಬಹುದು ಅಂತೂ ಅನಾಮಧೇಯ ಒಳ್ಳೆತನ ಮತ್ತು ಔದಾರ್ಯ ಗಳು ಈ ಪ್ರಪಂಚದಲ್ಲಿ ಇನ್ನೂ ಜೀವಂತವಾಗಿಯೇ ಇವೆ ಎನ್ನುವುದು ಹದಿನಾರಾಣೆ ಸತ್ಯ.

ಸತ್ಯವಂತ ಮಾದನ ಕಥೆ ನಮಗೆಲ್ಲ ಗೊತ್ತಿರುವಂಥದ್ದೇ. ಅದೇ- ಒಂದು ಹಳ್ಳಿಯಲ್ಲಿ ಮಾದ ಎಂಬುವನೊಬ್ಬನು ಮರ ಕಡಿದು ಸೌದೆ ತಯಾರಿಸಿ ಮಾರುವ ವೃತ್ತಿ ಮಾಡಿಕೊಂಡಿದ್ದದ್ದು, ತನ್ನ ಕೆಲಸದಲ್ಲಿ ಪ್ರಾಮಾಣಿಕನಾಗಿದ್ದು ಕಷ್ಟಪಟ್ಟು ದುಡಿಯುತ್ತಿದ್ದದ್ದು, ದಿನನಿತ್ಯದ ಖರ್ಚಿಗೆ ಬೇಕಾದಷ್ಟೇ ಹಣ ಸಂಪಾದಿಸುತ್ತ ಸರಳ ಜೀವನದಿಂದ ತೃಪ್ತನಾಗಿದ್ದದ್ದು, ಒಂದು ದಿನ ನದಿಯ ಬಳಿ ಮರ ಕಡಿಯುತ್ತಿದ್ದಾಗ ಅವನ ಕೊಡಲಿ ಕೈಯಿಂದ ಜಾರಿ ನದಿಯಲ್ಲಿ ಬಿದ್ದದ್ದು, ನದಿ ಆಳವಾಗಿದ್ದರಿಂದ ಕೊಡಲಿಯನ್ನು ಹೇಗೆ ಹಿಂಪಡೆಯುವುದೆಂದು ಮಾದ ಯೋಚನೆಗೊಳಗಾದದ್ದು, ತನ್ನ ಬಳಿ ಇದ್ದದ್ದೇ ಒಂದು ಕೊಡಲಿ, ಅದನ್ನು ಕಳೆದುಕೊಂಡು ಜೀವನವನ್ನು ಹೇಗೆ ಸಾಗಿಸುವುದೆಂದು ಚಿಂತಿತನಾದದ್ದು, ದುಃಖಿತನಾಗಿ ದೇವರನ್ನು ಪ್ರಾರ್ಥಿಸಿದಾಗ ದೇವರು ಪ್ರತ್ಯಕ್ಷನಾಗಿ ಮೊದಲಿಗೆ ನದಿಯ ಆಳದಿಂದ ಬೆಳ್ಳಿಯ ಮತ್ತು ಬಂಗಾರದ ಕೊಡಲಿಗಳನ್ನು ತೋರಿಸಿದ್ದು, ಮಾದ ಅವು ತನ್ನದಲ್ಲವೆಂದೂ ಅವುಗಳಿಂದ ತನಗೇನೂ ಪ್ರಯೋಜನ ಇಲ್ಲವೆಂದೂ ಹೇಳಿದ್ದು, ದೇವರು ಮುಗುಳ್ನಕ್ಕು ಕೊನೆಗೆ ಮಾದನ ಅಸಲಿ ಕಬ್ಬಿಣದ ಕೊಡಲಿಯನ್ನೇ ತೆಗೆದು “ಇದು ನಿನ್ನ ಕೊಡಲಿಯೇ?" ಎಂದು ಕೇಳಿದ್ದು, ಅದಕ್ಕೆ ಮಾದ “ಹೌದು! ಇದು ನನ್ನದು! ಧನ್ಯವಾದಗಳು" ಎಂದಿದ್ದು, ದೇವರು ಅವನ ಪ್ರಾಮಾಣಿಕತೆಗೆ ಮೆಚ್ಚಿ ಮೂರೂ ಕೊಡಲಿಗಳನ್ನಿತ್ತು ಹರಸಿದ್ದು... ತಲೆಮಾರಿಂದ ತಲೆಮಾರಿಗೆ ದಾಟಿಬಂದಿರುವ ಕಥೆಯಿದು.

eye

ಮಾದನ ಕಥೆಯನ್ನೇನೋ ಓದಿ ಬಲ್ಲೆವು. ನಮ್ಮಲ್ಲಿ ‘ಮಾದ’ತನ ಇದೆಯೇ? ಇದ್ದರೆ ಎಷ್ಟಿದೆ? ಕಳೆದ ವರ್ಷ ಏಪ್ರಿಲ್‌ನಲ್ಲಿ ಜಪಾನ್ ದೇಶದಲ್ಲಿ ನಡೆದ ವಿದ್ಯಮಾನವೊಂದು ಈ ಸಂದರ್ಭ ದಲ್ಲಿ ಪ್ರಸ್ತಾವಿಸಲು ಯೋಗ್ಯವೆನಿಸುತ್ತದೆ.

2025ರ ಏಪ್ರಿಲ್ 8ರಂದು ಜಪಾನ್‌ನಲ್ಲಿ 100ಕ್ಕಿಂತಲೂ ಹೆಚ್ಚು ಹೆದ್ದಾರಿ ಟೋಲ್‌ಗೇಟ್‌ಗಳು ದೊಡ್ಡದೊಂದು ತಾಂತ್ರಿಕದೋಷದ ಕಾರಣದಿಂದ ಕೆಲಸ ನಿಲ್ಲಿಸಿದವು. ರಸ್ತೆಗಳಲ್ಲಿ ಸಂಚಾರ ಸಿಕ್ಕು ಆಗಬಾರದೆಂಬ ದೃಷ್ಟಿಯಿಂದ ಅಧಿಕಾರಿಗಳು ಎಲ್ಲ ಗೇಟ್‌ಗಳನ್ನು ತೆರೆದಿಟ್ಟರು.

ಸಾವಿರಾರು ವಾಹನಗಳು ಟೋಲ್ ಪಾವತಿಸದೆ ಹೋಗಲು ಅವಕಾಶ ದೊರಕಿತು. ಸುಮಾರು 38 ಗಂಟೆಗಳ ಕಾಲ ಹೀಗೆ ಅನಿವಾರ್ಯವಾಗಿ ಮುಕ್ತಸಂಚಾರದ ವ್ಯವಸ್ಥೆ ಮಾಡಬೇಕಾಗಿ ಬಂತು. ಹೆದ್ದಾರಿಗಳನ್ನು ನಿರ್ವಹಿಸುವ ಸಂಸ್ಥೆಯು ಚಾಲಕರನ್ನು ಆಮೇಲೆ ಆನ್‌ಲೈನ್‌ನಲ್ಲಿ ಟೋಲ್ ಹಣ ಪಾವತಿಸುವಂತೆ ವಿನಂತಿಸಿತು. ಆ ಅವಧಿಯಲ್ಲಿ ಯಾವ್ಯಾವ ವಾಹನಗಳು ಎಷ್ಟು ಬಾರಿ ಟೋಲ್‌ಗೇಟ್‌ಗಳ ಮೂಲಕ ಸಂಚರಿಸಿದವೆಂಬ ಮಾಹಿತಿಯೇನೂ ಸಂಸ್ಥೆಯ ಬಳಿ ಇರಲಿಲ್ಲ.

ಆದರೆ 24000ಕ್ಕಿಂತಲೂ ಹೆಚ್ಚು ಚಾಲಕರು ಸ್ವಯಂಪ್ರೇರಿತರಾಗಿ ಸಂಸ್ಥೆಯ ವೆಬ್‌ಸೈಟ್‌ಗೆ ಹೋಗಿ ತಮ್ಮ ಟೋಲ್ ಹಣವನ್ನು ಪಾವತಿಸಿದರು! ಈ ಸುದ್ದಿ ಮತ್ತು ವಿಡಿಯೊ ತುಣುಕು ಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದವು. ಜಪಾನಿಯರ ಪ್ರಾಮಾಣಿಕತೆ, ಹೊಣೆ ಗಾರಿಕೆ, ಅಲ್ಲಿನ ಸಮಾಜದಲ್ಲಿರುವ ಬಲವಾದ ಸಾಮಾಜಿಕ ಮೌಲ್ಯಗಳನ್ನು ಮತ್ತೊಮ್ಮೆ ಪ್ರಪಂಚಕ್ಕೆ ಪರಿಚಯಿಸಿದವು.

ರೈಲಿನ ಆಗಮನ/ನಿರ್ಗಮನ ಹತ್ತಿಪ್ಪತ್ತು ಸೆಕೆಂಡುಗಳಷ್ಟು ತಡವಾದರೂ ಸಿಬ್ಬಂದಿಯು ಪ್ರಯಾಣಿಕರ ಕ್ಷಮೆ ಯಾಚಿಸುವ ಪರಿಪಾಠವಿರುವ ಜಪಾನ್‌ನಲ್ಲಿ ಅಂಥ ಪ್ರಾಮಾಣಿಕತೆಯ ಅಸ್ತಿತ್ವ ಮತ್ತು ಪ್ರದರ್ಶನ ಆಶ್ಚರ್ಯವೇ ಅಲ್ಲ. ಬೇರೆ ದೇಶಗಳಲ್ಲಾದರೆ- ಭಾರತ ಅಂತಷ್ಟೇ ಅಂದುಕೊಳ್ಳಬೇಡಿ, ಅಮೆರಿಕದಲ್ಲೂ- ಇದು ಖಂಡಿತ ವ್ಯಕ್ತವಾಗುತ್ತಿರಲಿಲ್ಲ.

ಪೊಲೀಸ್ ವಾಹನ ಕಂಡಾಗ ಮಾತ್ರ ಬಾಲ ಮುದುರಿಸಿಕೊಂಡು ವೇಗ ತಗ್ಗಿಸುವ, ಕ್ಯಾಮರಾ ಇರುವ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಮಾತ್ರ ರೆಡ್‌ಲೈಟ್ ಜಂಪ್ ಮಾಡಲು ಹಿಂಜರಿಯುವ ಡ್ರೈವರರು ಈ ದೇಶದಲ್ಲಿ ಬೇಕಾದಷ್ಟಿದ್ದಾರೆಂದು ಗಮನಿಸಿದ್ದೇನೆ. ರೋಮ್‌ನಲ್ಲಿ ರೋಮನ್ನನಾಗಿರು ಎಂದುಕೊಂಡು ಇಲ್ಲಿರುವ ವಲಸಿಗರು ನಾವೂ ಕೆಲವೊಮ್ಮೆ ಮಾಡುತ್ತೇವೆ, ಇಲ್ಲವೆನ್ನಲಾರೆ.

“ನನ್ನ ತಪ್ಪನ್ನು ಯಾರೂ ನೋಡಿರಲಿಕ್ಕಿಲ್ಲ, ನಾನು ಮಾಡಿದ್ದು ತಪ್ಪಾದರೂ ಬೇರಾರಿಗೂ ಗೊತ್ತಾಗಿರಲಿಕ್ಕಿಲ್ಲ" ಎಂದುಕೊಳ್ಳುತ್ತೇವೆ. ಸುಭಗರಂತೆ ನಟಿಸುತ್ತೇವೆ. ಲೋಕದ ಕಣ್ಣಿಗೆ ತಾನೊಬ್ಬ ಸಾಚಾ ಶುದ್ಧಾತ್ಮ ಅನಿಸಿಕೊಳ್ಳಬೇಕೆಂಬ ಬಯಕೆ, ಅದಕ್ಕೆ ತಕ್ಕಷ್ಟು ಹೆದರಿಕೆ ಎಲ್ಲರಿಗೂ ಇರುತ್ತದೆ.

ಈ ಬಗ್ಗೆ ಮನಃಶಾಸ್ತ್ರಜ್ಞರು ಇನ್ನಷ್ಟು ಬೆಳಕು ಚೆಲ್ಲುತ್ತಾರೆ. ಮನುಷ್ಯನಲ್ಲಿ ಒಳ್ಳೆತನವೂ ಸುಖಾಸುಮ್ಮನೆ ಇರುವುದಿಲ್ಲ. ತನ್ನ ವಾಂಛೆಗಳಿಗಾಗಿ ಏನನ್ನೂ ಮಾಡಬಲ್ಲನಾದರೂ ‘ಸಮಾಜದ ದೃಷ್ಟಿ’ಯಲ್ಲಿ ತನ್ನ ಗೌರವಕ್ಕೆ ಚ್ಯುತಿ ಬರಬಾರದೆಂದು ಸಾಮಾನ್ಯವಾಗಿ ಪ್ರತಿಯೊಬ್ಬನಿಗೂ ಕಾಳಜಿ ಇರುತ್ತದೆ.

ಸ್ವಾರ್ಥ, ಮೋಸ, ವಂಚನೆಗಳಲ್ಲಿ ತೊಡಗಿರುವವರು ಒಂದೊಮ್ಮೆ ಸಿರಿವಂತರಾದರೂ ಅದು ಶಾಶ್ವತವಲ್ಲ ಎಂದು ಇತಿಹಾಸದುದ್ದಕ್ಕೂ ಸಾಕ್ಷಿಗಳೇ ಇವೆಯಲ್ಲ? ಇತಿಹಾಸವೇಕೆ ಈಗಲೂ ಕೆಲವು ಸಿರಿವಂತರೇ ಜೈಲುಕಂಬಿ ಎಣಿಸುತ್ತಿರುವವರೂ ಇದ್ದಾರಲ್ಲ! ಹಾಗಾಗಿ ‘ಸಮಾಜದ ದೃಷ್ಟಿ’ ತನ್ನ ಮೇಲಿರುತ್ತದೆ ಎಂಬ ಹೆದರಿಕೆ, ಲಜ್ಜೆಗೆಟ್ಟ ದಗಾಕೋರರಿಗೆ ಇರದಿದ್ದರೂ ಸರಳ ಮನಸ್ಸಿನ ಶ್ರೀಸಾಮಾನ್ಯನಿಗೆ ಇದ್ದೇ ಇರುತ್ತದೆ.

ಆ ಹೆದರಿಕೆಯೇ ಒಳ್ಳೆತನಕ್ಕೆ, ಸಹಕಾರಯುತ ಸಹಬಾಳ್ವೆಗೆ ಸಹಾಯಕವಾಗುತ್ತದೆ. ಯಾರಾ ದರೂ ತನ್ನನ್ನು ನೋಡುತ್ತಿದ್ದಾರೆ ಅಥವಾ ಗಮನಿಸುತ್ತಿದ್ದಾರೆ ಎಂಬ ಅರಿವು ಇದ್ದಾಗ ಮನುಷ್ಯನ ವರ್ತನೆಯ ಖದರೇ ಬೇರೆ. ಎಲ್ಲಿಯವರೆಗೆಂದರೆ ಆ ‘ನೋಡುವ ಕಣ್ಣು’ಗಳು ನಿಜವೇ ಆಗಿರಬೇಕಾದ್ದಿಲ್ಲ. ಸರ್ವೈಲೆನ್ಸ್ ಕ್ಯಾಮರಾ, ಕ್ಲೋಸ್ಡ್ ಸರ್ಕ್ಯೂಟ್ ಟಿವಿ ರೀತಿಯ ವಿದ್ಯುನ್ಮಾನ ನೇತ್ರಗಳಾಗಿರಬೇಕಂತನೂ ಇಲ್ಲ.

ಕಣ್ಣುಗಳನ್ನು ಹೋಲುವ ಚಿತ್ರವಿದ್ದರೂ ಸಾಕು, ಅದನ್ನು ನೋಡಿ ಮಿದುಳು ಜಾಗೃತ ವಾಗುತ್ತದಂತೆ. ಒಂದು ಪ್ರಯೋಗದಲ್ಲಿ, ಹಾಳೆ-ಪೆನ್ನಿನ ಬದಲು ಕಂಪ್ಯೂಟರ್‌ನಲ್ಲಿ ಪರೀಕ್ಷೆ ತೆಗೆದುಕೊಂಡಿದ್ದ ವಿದ್ಯಾರ್ಥಿಗಳು, ಪರದೆಯ ಮೇಲೆ ಪುಟ್ಟದಾದ ಜೋಡಿಕಣ್ಣುಗಳ ಚಿತ್ರವಿದ್ದುದರಿಂದ ಹೆಚ್ಚಿನ ಪ್ರಾಮಾಣಿಕತೆ ತೋರಿದ್ದನ್ನು ಪರೀಕ್ಷಕರು ಗಮನಿಸಿದ್ದಾರಂತೆ.

ಇಂಗ್ಲೆಂಡ್‌ನ ವಿಶ್ವವಿದ್ಯಾಲಯವೊಂದರ ಸೈಕಾಲಜಿ ವಿಭಾಗದವರು ನಡೆಸಿದ ಒಂದು ವಿಶಿಷ್ಟ ಸಮೀಕ್ಷೆಯ ಫಲಿತಾಂಶ ಕೂಡ ಕಣ್ಗಾವಲಿನ ಹಿರಿಮೆಯನ್ನು ಪುಷ್ಟೀಕರಿಸಿದೆ. ಅಲ್ಲಿ ಸೈಕಾಲಜಿ ವಿಭಾಗದ ‘ಟೀ ರೂಮ್’ನಲ್ಲಿ ಕಾಲೇಜಿನ ಸಿಬ್ಬಂದಿಗೆ, ವಿದ್ಯಾರ್ಥಿಗಳಿಗೆ, ಅಧ್ಯಯನ ವಸ್ತುವಾಗಿ ಸ್ವಯಂಸ್ಪೂರ್ತಿಯಿಂದ ಬರುವ ಸಾರ್ವಜನಿಕರಿಗೆಂದು ಟೀ, ಕಾಫಿ ಒದಗಿಸುವ ವ್ಯವಸ್ಥೆಯಿತ್ತು.

ದುಡ್ಡು ವಸೂಲಿಗೆ ಅಲ್ಲಿ ಯಾರೂ ಇರುತ್ತಿರಲಿಲ್ಲ. ನಾಣ್ಯ ಹಾಕಿದರೆ ಮಾತ್ರ ಕಾಫಿ ಸುರಿಸುವ ಯಂತ್ರ ಇದ್ದದ್ದೂ ಅಲ್ಲ. ಬಿಸಿನೀರು, ಹಾಲು, ಸಕ್ಕರೆ, ಟೀ-ಬ್ಯಾಗ್, ಕಾಫಿಪುಡಿ ಇಟ್ಟಿದ್ದನ್ನು ಬಳಸಿ ಸ್ವಂತ ಟೀ/ಕಾಫಿ ಮಾಡಿಕೊಳ್ಳಬೇಕು. ಅಲ್ಲೇ ಪಕ್ಕದಲ್ಲಿಟ್ಟಿದ್ದ ‘ಪ್ರಾಮಾಣಿಕತೆ ಪೆಟ್ಟಿಗೆ’ಯಲ್ಲಿ ದುಡ್ಡು ಹಾಕಬೇಕು. ಒಂದು ಕಪ್ ಕಾಫಿಗಾದರೆ ಇಂತಿಷ್ಟು, ಟೀಗಾದರೆ ಇಂತಿಷ್ಟು, ಚಾಕೊಲೇಟ್ ಮಿಲ್ಕ್‌ಗೆ ಇಂತಿಷ್ಟು ಅಂತೆಲ್ಲ ಬರೆದ ಫಲಕವನ್ನು ಕಣ್ಣಿಗೆ ಕಾಣುವಂತೆ, ಕಣ್ಣಿನ ಎತ್ತರಕ್ಕೆ ಬರುವಂತೆ ಇಡಲಾಗಿತ್ತು.

ಗುಪ್ತವಾಗಿ ಸಮೀಕ್ಷಾರ್ಥಿಗಳಿಗೆ ತಿಳಿಯದಂತೆ ಸಮೀಕ್ಷೆ ನಡೆಸಿದ್ದ ಸೈಕಾಲಜಿ ವಿಭಾಗದ ಮುಖ್ಯಸ್ಥೆ ಏನು ಮಾಡುತ್ತಿದ್ದರೆಂದರೆ ಪ್ರತಿವಾರವೂ ದರ ಪಟ್ಟಿಯ ಫಲಕವನ್ನು ಬದಲಾಯಿಸುತ್ತಿದ್ದರು. ದರಗಳು ಅವೇ ಆದರೂ ಅದನ್ನು ಬರೆದ ಕಾಗದದ ಹಾಳೆ ಪ್ರತಿವಾರ ಹೊಸತು. ದರ ಪಟ್ಟಿಯ ಮೇಲ್ಗಡೆ ಪುಟ್ಟದಾದ ಒಂದು ಚಿತ್ರ. ಒಂದು ವಾರ ಜೋಡಿ ಕಣ್ಣುಗಳ ಚಿತ್ರ; ಮುಂದಿನವಾರ ಹೂವಿನ ಚಿತ್ರ; ಅದರ ನಂತರದ ವಾರ ಮತ್ತೆ ಜೋಡಿ ಕಣ್ಣುಗಳ ಚಿತ್ರ. ಮತ್ತೊಮ್ಮೆ ಹೂವಿನ ಚಿತ್ರ... ಹೀಗೆ ಆವರ್ತನ.

ಜೋಡಿ ಕಣ್ಣುಗಳ ಚಿತ್ರವನ್ನು ದೃಷ್ಟಿಸಿದರೆ ನಿಜವಾಗಿಯೂ ಆ ಕಣ್ಣುಗಳು ನಮ್ಮನ್ನೇ ನೋಡುತ್ತಿವೆಯೇನೋ ಎಂಬಂತಿರುತ್ತಿತ್ತು, ಅಷ್ಟು ಚಾಕಚಕ್ಯತೆಯಿಂದ ನೈಜವೆನಿಸುವ ಚಿತ್ರಗಳನ್ನೇ ಆಯ್ದುಕೊಳ್ಳುತ್ತಿದ್ದರು ಆ ಸಮೀಕ್ಷಕಿ. ಹತ್ತು ವಾರಗಳ ಕಾಲ ಸಮೀಕ್ಷೆ ನಡೆಯಿತು. ಒಂದು ಆಶ್ಚರ್ಯಕರ ಸತ್ಯಾಂಶ ಅದರಿಂದ ಹೊರಬಂತು. ದರ ಪಟ್ಟಿಯ ಮೇಲೆ ಕಣ್ಣುಗಳ ಚಿತ್ರವಿದ್ದ ವಾರಗಳಲ್ಲಿ ಮೂರು ಪಟ್ಟು ಹಣ ಜಮೆಯಾಗುತ್ತಿತ್ತು!

ನೈಜವಾದರೂ ಅಷ್ಟೇ, ಚಿತ್ರದಲ್ಲಾದರೂ ಅಷ್ಟೇ, ಕಣ್ಣು ಮುಖ ಇತ್ಯಾದಿಗಳನ್ನು ಕಂಡಾಗ ನಮ್ಮ ಮಿದುಳಿನ ನರಗಳು ತೀವ್ರವಾಗಿ ಸಂವೇದಿಸುವುದನ್ನು ಮನಃಶಾಸ್ತ್ರಜ್ಞರು ತುಂಬಾ ಹಿಂದೆಯೇ ಕಂಡುಕೊಂಡಿದ್ದಾರೆ. ಹಾಗಾಗಿ ಟೀ-ರೂಮ್‌ನಲ್ಲಿ ದರ ಪಟ್ಟಿಯ ಮೇಲೆ ಕಣ್ಣುಗಳ ಚಿತ್ರವನ್ನು ನೋಡಿ ಗಿರಾಕಿಗಳ ಮಿದುಳಿನಲ್ಲಿ ವಿಶೇಷ ಸಂವೇದನೆ ಆಗಿರುವುದು ಹೌದು. ಪ್ರಾಮಾಣಿಕ ಪೆಟ್ಟಿಗೆಯೊಳಗೆ ತಾನು ಕರಾರುವಾಕ್ಕಾಗಿ ದುಡ್ಡು ಹಾಕಬೇಕು ಎಂಬ ಎಚ್ಚರ ಮೂಡಿರುವುದೂ ಹೌದು. ಆ ಪ್ರಕಾರ ದುಡ್ಡು ಜಮೆಯಾಗಿರುವುದೂ ಹೌದು.

ಕನಕದಾಸರ ಕಥೆಯಲ್ಲಿಯೂ ಹಾಗೆಯೇ ಅಲ್ಲವೇ ಆದದ್ದು? ಗುರು ವ್ಯಾಸರಾಯರು ಶಿಷ್ಯರನ್ನೆಲ್ಲ ಕರೆದು ಒಂದೊಂದು ಬಾಳೆಹಣ್ಣು ಕೊಟ್ಟು ಯಾರೂ ನೋಡದೇ ಇರುವಲ್ಲಿ ಹೋಗಿ ತಿಂದುಕೊಂಡು ಬನ್ನಿ ಎಂದರು. ಒಬ್ಬೊಬ್ಬರು ಒಂದೊಂದು ಜಾಗವನ್ನು, ಯಾರೂ ನೋಡುತ್ತಿಲ್ಲ ಎಂದು ತಮಗೆ ಸಮಾಧಾನವೆನಿಸಿದ ಆಯಕಟ್ಟಿನ ಸ್ಥಳವನ್ನು ಆಯ್ದುಕೊಂಡು ಅಲ್ಲಿ ಬಾಳೆಹಣ್ಣು ಭಕ್ಷಣ ಮಾಡಿ ಬಂದರು.

ಬಂದು ಗುರುಗಳಿಗೆ ವರದಿಯೊಪ್ಪಿಸಿದರು. ‘ಭಕ್ತ ಕನಕದಾಸ’ ಚಿತ್ರದಲ್ಲಿ ಇದನ್ನು ತಮಾಷೆಯಾಗಿಯೇ ತೋರಿಸಿದ್ದಾರೆ. “ಊರುಮುಂದ್ಲು ಮುಖ್ಯಪ್ರಾಣ ಗುಡಿಯ ಹತ್ರ ಯಾರೂ ಇಲ್ಲದ್ದನ್ನು ನೋಡಿ ಅಲ್ಲಿ ತಿಂದ್ಕೊಂಡ್ಬಂದೆ!" ಎಂದು ಒಬ್ಬಾತನೆಂದರೆ “ಮನೆಗೆ ಹೋದೆ, ಹಾಸ್ಗೆ ಹಾಸ್ಕೊಂಡು, ಶ್ರೀಗಳು ದಯಪಾಲಿಸಿದ ಶಾಲುಜೋಡಿಯಲ್ಲಿ ಒಂದನ್ನು ತೆಗೆದುಕೊಂಡು ಪೂರ್ತಿ ಮುಸುಕುಹಾಕ್ಕೊಂಡು, ಸಿಪ್ಪೆಸಹಿತ ಸುಲಿಯದ ಹಾಗೆ ಇಡೀ ಬಾಳೆಹಣ್ಣನ್ನು ಹಾಗೇ ಬಾಯೊಳಗಿಟ್ಕೊಂಡು ಗುಳುಕ್ಕಂತ ನುಂಗ್ಬಿಟ್ಟೆ!" ಎಂದು ಇನ್ನೊಬ್ಬ ನೆನ್ನುತ್ತಾನೆ.

“ಯಾರೂ ನೋಡಲಿಲ್ಲವೇ?" ಎಂದು ಗುರುಗಳು ನಸುನಕ್ಕು ಕೇಳಿದಾಗ “ಒಂದು ಸೊಳ್ಳೆ ಸಹ ನೋಡಲಿಲ್ಲ ಸ್ವಾಮೀ!" ಎಂದು ಹೆಮ್ಮೆಯಿಂದ ದೃಢಪಡಿಸುತ್ತಾನೆ. ಮಗದೊಬ್ಬವ “ಜಳಕ ಮಾಡ್ಲಿಕ್ಕೆ ನದಿಯಲ್ಲಿ ಮುಳುಗುವಾಗ ಮೂಗು ಹಿಡ್ಕೊಂಡು ನಾರಾಯಣಾ ಅಂತ ಮುಳುಗುಹಾಕ್ದೆ, ಕೃಷ್ಣಾ ಅಂತ ಮೇಲೆದ್ದೆ, ಅಷ್ಟರೊಳಗೆ ಬಾಳೆಹಣ್ಣು ತಿಂದುಮುಗಿಸ್ದೆ!" ಎಂದು ತನ್ನ ಜಾಣತನವನ್ನು ಪ್ರದರ್ಶಿಸುತ್ತಾನೆ.

ನಾಲ್ಕನೆಯವನಂತೂ- ಬಹಿರ್ದೆಶೆಗೆ ಹೋದಾಗ ಬಾಳೆಹಣ್ಣು ತಿಂದು ಬಂದವನು- “ಹೇಳಬಾರದ ಸ್ಥಳದಲ್ಲಿ ಹೋಗಿ ತಿಂದುಬಂದೆ ಸ್ವಾಮೀ" ಎನ್ನುತ್ತಾನೆ. ಕನಕನಿಗಾದರೋ ಎಲ್ಲಿ ಹೋದರೂ ‘ದೇವರ ಕಣ್ಣು’ ಕಾಣಿಸುತ್ತದೆ. ಅಪ್ಪಟ ಪ್ರಾಮಾಣಿಕತೆ ಹೆಡೆಯೆತ್ತಿ ನಿಲ್ಲುತ್ತದೆ.

ನೋಡುವ/ಗಮನಿಸುವ ಮನುಷ್ಯರು ಇಲ್ಲದೇ ಇರಬಹುದು, ಆದರೆ ದೇವರು ಇಲ್ಲದ ಸ್ಥಳವೇ ಸಿಗುತ್ತಿಲ್ಲವಲ್ಲ ಎಂಬ ದಿವ್ಯಸತ್ಯದ ಮನವರಿಕೆಯಾಗುತ್ತದೆ. ಬಾಳೆಹಣ್ಣನ್ನು ಹಾಗೇ ಕೈಯಲ್ಲಿ ಹಿಡಿದುಕೊಂಡು ಗುರುಗಳ ಬಳಿಗೆ ವಾಪಸಾಗುತ್ತಾನೆ.

“ಎಲ್ಲೆಲ್ಲಿ ಹೋದ್ರೂ ಪರಮಾತ್ಮ, ತತ್ತ್ವಾಭಿಮಾನಿಗಳಾದ ಆ ದೇವತೆಗಳು, ಮನುಷ್ಯರು ಮಾಡುವ ಸಕಲ ಕೆಲಸಗಳನ್ನೂ ನೋಡ್ತಾನೇ ಇರ್ತಾರೆ. ಎಲ್ಲಿ ಅವರುಗಳು ನೋಡೋ ದಿಲ್ವೋ ಅಂಥ ಏಕಾಂತ ಸ್ಥಳವೇನಾದ್ರೂ ಬುದ್ಧಿಯಲ್ಲಿದ್ದರೆ ಮಹಾಸ್ವಾಮಿಗಳು ಅಪ್ಪಣೆ ಮಾಡ್ಬೇಕು, ಅಲ್ಲಿಗ್ಹೋಗಿ ತಿಂದುಬರುತ್ತೇನೆ" ಎಂದು ಗುರುಗಳಲ್ಲಿ ಬಿನ್ನವಿಸಿ ಕೈಮುಗಿಯು ತ್ತಾನೆ.

ಅಂದರೆ, ಇಂಗ್ಲೆಂಡ್‌ನ ವಿಶ್ವವಿದ್ಯಾಲಯದ ಸೈಕಾಲಜಿ ವಿಭಾಗದವರು ನಾಲ್ಕಾರು ದಶಕ ಗಳ ಹಿಂದೆಯಷ್ಟೇ ಕಂಡುಕೊಂಡಿದ್ದನ್ನು ನಾಲ್ಕು ನೂರು ವರ್ಷಗಳ ಹಿಂದೆಯೇ ಪ್ರತಿ ಪಾದಿಸಿದ್ದರು ಕನಕದಾಸರು. ಅಷ್ಟೇ ಅಲ್ಲ, ಅವರೇನೂ ಕಣ್ಣುಗಳ ಚಿತ್ರ ನೋಡಿ ಜಾಗೃತ ರಾದವರಲ್ಲ. ಸತ್ಯ ಮತ್ತು ಪ್ರಾಮಾಣಿಕತೆಗಳೆಂಬ ತಮ್ಮ ಒಳಗಣ್ಣುಗಳಿಂದ ಭಗವಂತ ನನ್ನು ನೋಡಿ ಎಚ್ಚರಗೊಂಡವರು.

ಭಗವಂತನಿಲ್ಲದ ಸ್ಥಳವೇ ಇಲ್ಲ ಎಂದು ಎಚ್ಚರಿಸಿದವರು. ಆ ಎಚ್ಚರದಿಂದಲೇ ಉಚ್ಚ ಮಟ್ಟಕ್ಕೇರಿದವರು. ಇಂಥದೊಂದು ಸಚ್ಚಿಂತನೆಗೆ ಮುಕುಟಪ್ರಾಯವಾಗಿ, ಪ್ರೊ.ಎಂ.ವಿ. ಸೀತಾರಾಮಯ್ಯನವರದೊಂದು ಕವನ ‘ಏನು ಭಯ?’ ಎಂಬ ಶೀರ್ಷಿಕೆಯದು. ಸುತ್ತಮುತ್ತ ಅಲ್ಲ ನಮ್ಮೊಳಗೇ ಭಗವಂತನಿದ್ದಾನೆಂದ ಮೇಲೆ ನಮಗೆ ಅಪ್ರಾಮಾಣಿಕತೆಯ ಭಯವೇ ಬೇಡ ಎಂದು ಸಾರುವ ಸುಂದರ ಸುನೀತವಿದು:

ಏನು ಭಯ ನಮಗ್ಯಾರ ಭಯ

ತಾನೇ ತಾನಾಗಿಹುದಭಯ ||

ಪರರೊಡವೆಯನು ಮುಟ್ಟದ ತನಕ

ಪರದೂಷಣೆಯನು ಮಾಡದ ತನಕ

ಪರಸತಿಗೆ ಮನವಿಕ್ಕದ ತನಕ

ಪರಸುಖಕಿಹವನು ಬಾಳುವ ತನಕ ||

ನ್ಯಾಯಮಾರ್ಗದಲಿ ನಡೆಯುವವರೆಗೆ

ಕಾಯಕದಲಿ ಕೈ ಸೋಲದವರೆಗೆ

ಹೇಯ ಕೃತ್ಯಗಳ ಹೇಸುವವರೆಗೆ

ಮಾಯೆಮೋಸಗಳ ಮಾಡದವರೆಗೆ ||

ಧನದ ಗಳಿಕೆ ದಾನಕೈವುದಕಾಗಿರೆ

ತನಗೆಂಬುದ ಬಿಟ್ಟು ಪರರಿಗೆನುತ್ತಿರೆ

ಜನುಮದ ಹಂಗಿಗೆ ಜೋತು ಬೀಳದೆ

ಮನವ ರಾಘವನ ಮನೆಯ ಮಾಡಿರೆ ||