ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Thimmanna Bhagwath Column: ವಿದೇಶಿ ದೇಣಿಗೆ ನಿಯಂತ್ರಣಕ್ಕೆ ಅಮೆರಿಕದ ವಿರೋಧವೇಕೆ?

ಏನಿದು ವಿದೇಶಿ ದೇಣಿಗೆ ನಿಯಂತ್ರಣ ಕಾಯಿದೆ? ವಿದೇಶಿ ದೇಣಿಗೆ (ನಿಯಂತ್ರಣ) ಕಾಯಿದೆ ಹೊಸದಲ್ಲ. 1976ರಲ್ಲಿ ಇಂದಿರಾ ಗಾಂಧಿಯವರು ಪ್ರಧಾನಿಯಾಗಿದ್ದಾಗ ಈ ಕಾಯಿದೆ ಜಾರಿಗೆ ಬಂತು. ಆನಂತರ 2010ರ ಯುಪಿಎ ಸರಕಾರ, ಪರಿಷ್ಕೃತ ವಿದೇಶಿ ದೇಣಿಗೆ (ನಿಯಂತ್ರಣ) ಕಾಯಿದೆ 2010ನ್ನು ಜಾರಿಗೆ ತಂದಿತು.

ವಿದೇಶಿ ದೇಣಿಗೆ ನಿಯಂತ್ರಣಕ್ಕೆ ಅಮೆರಿಕದ ವಿರೋಧವೇಕೆ?

-

Profile
Ashok Nayak Aug 10, 2026 6:01 AM

ಕಾನೂನ್ ಸೆನ್ಸ್

ತಿಮ್ಮಣ್ಣ ಭಾಗವತ್

ಬಹು ಚರ್ಚಿತ ವಿದೇಶಿ ದೇಣಿಗೆ (ನಿಯಂತ್ರಣ) ತಿದ್ದುಪಡಿ ಮಸೂದೆ (FCRA) ಲೋಕಸಭೆಯಲ್ಲಿ ಮಂಡನೆಯಾಗಿದೆ. ಭಾರತದ ವಿಪಕ್ಷಗಳು ಇದನ್ನೂ ವಿರೋಧಿಸುತ್ತಿರುವದು ಆಶ್ಚರ್ಯವಲ್ಲ ವಾದರೂ, ಅಮೆರಿಕದ ಕಾಂಗ್ರೆಸ್ ಕೂಡಾ ಇದನ್ನು ಟೀಕಿಸುತ್ತಿರುವದು ಈಗ ಚರ್ಚೆಯ ವಿಷಯ. ಆಮೆರಿಕದ ರಿಪಬ್ಲಿಕನ್ ಪಕ್ಷದ ಕಾಂಗ್ರೆಸ್ ಸಂಸದ ರೈಲಿ ಮೂರ್, ಇದೊಂದು ಕ್ರೈಸ್ತ ವಿರೋಧಿ ಕಾಯಿದೆಯಾಗಿದ್ದು ಸರಕಾರಕ್ಕೆ ಚರ್ಚ್‌ಗಳನ್ನು ವಶಕ್ಕೆ ಪಡೆಯುವ ಅಧಿಕಾರ ನೀಡುತ್ತದೆ. ಇದು ಜಾರಿಗೆ ಬಂದರೆ ಭಾರತ ಮತ್ತು ಅಮೇರಿಕದ ದ್ವಿಪಕ್ಷೀಯ ಸಂಬಂಧಗಳಿಗೆ ಧಕ್ಕೆ ಬರಲಿದೆ ಎಂದಿ ದ್ದಾರೆ.

ಕೇರಳದ ಸಂಸದ ಶಶಿ ತರೂರ್, ಇದೊಂದು ಕ್ರೂರ ಕಾಯಿದೆ ಎಂದು ಹೇಳಿದ್ದಾರೆ. ಈ ಟೀಕೆಗಳಿಗೆ ಉತ್ತರವಾಗಿ ಪ್ರಧಾನಿಯವರು, ‘ಮೋದಿಯ ವಿರುದ್ಧ ದೊಡ್ಡ ಗಲಾಟೆಯಾಗುತ್ತಿದೆ ಅಂದರೆ ಮೋದಿ ಎಲ್ಲೋ ಒಂದು ಕಡೆ ಕೀಲಿಯನ್ನು ಬಿಗಿಗೊಳಿಸಿದ್ದಾರೆ ಎಂದೇ ತಿಳಿಯಬೇಕು’ ಎಂದು ಮಾರ್ಮಿಕ ಉತ್ತರ ನೀಡಿದ್ದಾರೆ. ‘ಭಾರತದಲ್ಲಿ ಶಾಸನಗಳನ್ನು ಜಾರಿಗೊಳಿಸುವದು ದೇಶದ ಆಂತರಿಕ ವಿಷಯ. ನಮ್ಮ ಸಂಸತ್ತು ಈ ಕುರಿತು ಸೂಕ್ತ ನಿರ್ಣಯ ಕೈಗೊಳ್ಳುತ್ತದೆ. ಅಮೆರಿಕದಂಥ ರಾಷ್ಟ್ರಗಳಲ್ಲಿಯೂ ವಿದೇಶಿ ಹಣದ ಹರಿವನ್ನು ನಿಯಂತ್ರಿಸಲು ಕಾಯಿದೆಗಳಿವೆ’ ಎಂದು ಭಾರತದ ವಿದೇಶಾಂಗ ಇಲಾಖೆಯ ಅಧಿಕೃತ ಪ್ರತಿಕ್ರಿಯೆಯಲ್ಲಿ ತಿಳಿಸಲಾಗಿದೆ.

ಏನಿದು ವಿದೇಶಿ ದೇಣಿಗೆ ನಿಯಂತ್ರಣ ಕಾಯಿದೆ? ವಿದೇಶಿ ದೇಣಿಗೆ (ನಿಯಂತ್ರಣ) ಕಾಯಿದೆ ಹೊಸದಲ್ಲ. 1976ರಲ್ಲಿ ಇಂದಿರಾ ಗಾಂಧಿಯವರು ಪ್ರಧಾನಿಯಾಗಿದ್ದಾಗ ಈ ಕಾಯಿದೆ ಜಾರಿಗೆ ಬಂತು. ಆನಂತರ 2010ರ ಯುಪಿಎ ಸರಕಾರ, ಪರಿಷ್ಕೃತ ವಿದೇಶಿ ದೇಣಿಗೆ (ನಿಯಂತ್ರಣ) ಕಾಯಿದೆ 2010ನ್ನು ಜಾರಿಗೆ ತಂದಿತು.

2010ರ ಕಾಯಿದೆಯಲ್ಲಿ ಪ್ರಮುಖವಾಗಿ ಚುನಾವಣಾ ಅಭ್ಯರ್ಥಿಗಳು, ಸರಕಾರಿ ಹುದ್ದೆಯಲ್ಲಿರು ವವರು, ಸುದ್ದಿ ಮಾಧ್ಯಮಗಳಿಗೆ ಸಂಬಂಧಿಸಿದವರು, ಶಾಸಕರು, ಸಂಸದ್ಸದಸ್ಯರು, ಯಾವುದೇ ರಾಜಕೀಯ ಪಕ್ಷಗಳು ಅಥವಾ ಅವುಗಳ ಪದಾಧಿಕಾರಿಗಳು ವಿದೇಶಿ ದೇಣಿಗೆ ಪಡೆಯುವದರ ವಿರುದ್ಧ ನಿರ್ಬಂಧ ವಿಧಿಸಲಾಗಿದೆ. ಶಾಸಕರು, ಸಂಸದ್ಸದಸ್ಯರು ಮುಂತಾದವರು ತಮ್ಮ ವಿದೇಶಿ ಪ್ರವಾಸದ ವೇಳೆ ಯಾವದೇ ವಿದೇಶಿ ವ್ಯಕ್ತಿ ಅಥವಾ ಸಂಸ್ಥೆಯ ಆತಿಥ್ಯ ಸ್ವೀಕರಿಸಬಾರದು. ದೇಶದ ಹಿತಾಸಕ್ತಿಯ ದೃಷ್ಟಿಯಿಂದ ಯಾವದೇ ವ್ಯಕ್ತಿ ಅಥವಾ ಸಂಸ್ಥೆ ವಿದೇಶಿ ದೇಣಿಗೆಯನ್ನು ಪಡೆಯದಂತೆ ನಿರ್ಬಂಧ ವಿಧಿಸುವ ಅಥವಾ ಪೂರ್ವಾನುಮತಿ ಪಡೆಯಲು ಆದೇಶಿಸುವ ಅಧಿಕಾರ ಕೇಂದ್ರ ಸರಕಾರಕ್ಕಿದೆ.

ಇದನ್ನೂ ಓದಿ: Thimmanna Bhagawat Column: ಸರಕಾರವನ್ನೇ ಒತ್ತೆಯಾಗಿಸಿದ ಪ್ರತಿಭಟನೆ: ಸ್ವಾತಂತ್ರ್ಯ ಸ್ವೇಚ್ಛೆಯಲ್ಲ

ಕಡ್ಡಾಯ ನೋಂದಣಿ ಮತ್ತು ನೋಂದಣಿಯ ಅಮಾನತು ನವೀಕರಣದ ನಿರಾಕರಣೆ ಮುಂತಾದ ಆಧಿಕಾರ ಸರಕಾರಕ್ಕಿದೆ. ಹಾಗೆ ನೋಂದಣಿ ರದ್ದಾದ ಸಂಸ್ಥೆಗಳು ವಿದೇಶಿ ದೇಣಿಗೆಯ ಹಣದಿಂದ ಪಡೆದ ಆಸ್ತಿಗಳು ಸರಕಾರ ಅಧಿಸೂಚಿಸಿದ ಅಧಿಕಾರಿಯ ಸುಪರ್ದಿಯಲ್ಲಿರಬೇಕು ಮತ್ತು ಅಂಥ ಅಧಿಕಾರಿಯು ಅಂಥ ಆಸ್ತಿಗಳನ್ನು ವಿಲೇವಾರಿ ಮಾಡುವ ಅಧಿಕಾರ ಹೊಂದಿರುತ್ತಾನೆ ಮತ್ತು ಅಗತ್ಯವೆನಿಸಿದರೆ ಅಂಥ ಸಂಸ್ಥೆಗಳ ಆಡಳಿತವನ್ನು ನಿರ್ವಹಿಸುವ ಅಧಿಕಾರವನ್ನೂ ಹೊಂದಿರು ತ್ತಾನೆ. (15ನೇ ಕಲಮು 2010ರ ಕಾಯಿದೆ).

2026ರ ತಿದ್ದುಪಡಿಯಲ್ಲಿ ಏನಿದೆ?: ಇಷ್ಟೊಂದು ಗದ್ದಲ ಎಬ್ಬಿಸಿರುವ ಈ ತಿದ್ದುಪಡಿ ಮಸೂದೆ ಯಲ್ಲಿ ಮೇಲ್ನೋಟಕ್ಕೆ ಅಂಥ Draconian ಅಂಶಗಳೇನೂ ಕಾಣುವದಿಲ್ಲ. ಅದರಲ್ಲಿ ಸೂಚಿಸಲಾದ ಕೆಲವು ಮುಖ್ಯ ತಿದ್ದುಪಡಿಗಳು ಹೀಗಿವೆ:

೧. ಪೂರ್ವಾನುಮತಿಯ ಆಧಾರದಲ್ಲಿ ದೇಣಿಗೆ ಪಡೆಯಲು ಮತ್ತು ಅವುಗಳನ್ನು ಉಪಯೋಗಿಸಲು ಕಾಲಮಿತಿಯ ನಿಗದಿ. (12ನೇ ಕಲಮು)

೨. ನೋಂದಣಿಯು ಅಮಾನತಾದಾಗ ವಿದೇಶಿ ದೇಣಿಗೆಯಿಂದ ಪಡೆದುಕೊಂಡ ಆಸ್ತಿಗಳ ನಿರ್ವಹಣೆ. (13ನೇ ಕಲಮು)

೩. ಸರಕಾರವು ಯಾವದೇ ಸಂಸ್ಥೆಯ ನೋಂದಣಿಯನ್ನು ನವೀಕರಿಸಲು ನಿರಾಕರಿಸಿದರೆ, ನೋಂದಣಿಯ ಅವಧಿ ಮುಗಿದಾಗ, ಅಥವಾ ನೋಂದಣಿ ನವೀಕರಣವಾಗದಿದ್ದರೆ ಅಂಥ ಸಂಸ್ಥೆಗಳ ನೋಂದಣಿಯನ್ನು ಸಮಾಪ್ತಿ ಪಡಿಸಲು ( Cessation ) ಸರಕಾರಕ್ಕೆ ಅಧಿಕಾರ ನೀಡುವದು. (14ಬಿ)

೪. ಸಂಸ್ಥೆಗಳ ಆಡಳಿತವನ್ನು ವಹಿಸಿಕೊಳ್ಳಲು ಸರಕಾರಕ್ಕೆ ಅಧಿಕಾರ ನೀಡುವ, 2010ರ ಕಾಯಿದೆಯ 15ನೇ ಕಲಮನ್ನು ರದ್ದು ಪಡಿಸಿ ಅದರ ಬದಲು ಹೊಸ ಅಧ್ಯಾಯವನ್ನು (IIIA) ಸೇರಿಸುವದು.

೫. ಈ ಕಾಯಿದೆಯಡಿ ದಂಡ ವಿಧಿಸುವ ಕ್ರಮವನ್ನು ತರ್ಕಬದ್ಧಗೊಳಿಸುವದು. (35ನೇ ಕಲಮು)

೬. ಸಂಸ್ಥೆಗಳ ವಿರುದ್ಧ ತನಿಖೆ ನಡೆಸಲು ಕೇಂದ್ರ ಸರಕಾರದ ಅನುಮತಿಯನ್ನು ಕಡ್ಡಾಯ ಗೊಳಿಸುವದು.

fcra ok

ಈ ತಿದ್ದುಪಡಿಗಳನ್ನು ಹೊರತು ಪಡಿಸಿದರೆ 2010ರ ಕಾಯಿದೆಯ ಎಲ್ಲಾ ಕಲಮುಗಳೂ ಹಾಗೇ ಇರುತ್ತವೆ. ಈ ತಿದ್ದುಪಡಿಗಳಲ್ಲಿ ಪ್ರಮುಖವಾದ 14ಬಿ ಕಲಮು ಮತ್ತು ಅಧ್ಯಾಯ IIIA ಬಹು ಚರ್ಚಿತ ವಿಷಯ. ನೋಂದಣಿ ಮತ್ತು ನೋಂದಣಿಯ ನವೀಕರಣ 2010ರ ಕಾಯಿದೆಯಲ್ಲೂ ಕಡ್ಡಾಯವಾಗಿದೆ. ಆದರೆ ಹಾಗೆ ನವೀಕರಣ ಮಾಡಿಸಿಕೊಳ್ಳಲು ಯಾವದೇ ಸಂಸ್ಥೆ ವಿಫಲವಾದರೆ ಅಥವಾ ಅಂಥ ನವೀಕರಣವನ್ನು ಸರಕಾರ ಒಪ್ಪದಿದ್ದರೆ/ತಿರಸ್ಕರಿಸಿದರೆ ಆಗ ಆ ಸಂಸ್ಥೆಯನ್ನು ಮುಂದುವರಿಸದಿರಲು ಯಾವದೇ ಸೂಕ್ತ ಕಲಮು ಇರಲಿಲ್ಲ. ಆದರೆ ಈಗ ನೋಂದಣಿ ನವೀಕರಣ ವಾಗದ ಸಂಘ ಸಂಸ್ಥೆಗಳನ್ನು ಸ್ಥಗಿತಗೊಳಿಸುವ/ ಮುಚ್ಚುವ ಅಧಿಕಾರ ಸರಕಾರಕ್ಕೆ ಸಿಗುತ್ತದೆ. (14ಬಿ)

ಇನ್ನು ಅಧ್ಯಾಯ IIIA ಪ್ರಕಾರ ಹಿಂದಿನ ಕಾಯಿದೆಯ 15ನೇ ಕಲಮಿನಲ್ಲಿರುವ ಬಹುತೇಕ ಅಂಶಗಳನ್ನೇ ಉಳಿಸಿಕೊಳ್ಳಲಾಗಿದೆ. ಹೊಸ ಕಲಮು 16 ಎ (ಎಫ್) ಪ್ರಕಾರ, ನೋಂದಣಿ ರದ್ದಾದ, ನವೀಕರಣವಾಗದ, ನವೀಕರಣವನ್ನು ತಿರಸ್ಕರಿಸಿದ ಅಥವಾ ನೋಂದಣಿ ಪತ್ರವನ್ನು ಹಿಂದಿರು ಗಿಸಿದ ಹಾಗೂ ‌14ಬಿ ಅನ್ವಯ ಸ್ಥಗಿತಗೊಂಡ ಪ್ರಕರಣಗಳಲ್ಲಿ ಅಂಥ ಸಂಸ್ಥೆಗಳು ವಿದೇಶಿ ದೇಣಿಗೆ ಯಿಂದ ಪಡೆದ ಆಸ್ತಿ ಹಾಗೂ ಸಂಪತ್ತುಗಳು ಸರಕಾರ ನಿಗದಿಪಡಿಸಿದ ಅಧಿಕಾರಿಯ ( Designated Authority) ಅಧೀನಕ್ಕೆ ತಾತ್ಕಾಲಿಕವಾಗಿ ಸೇರ್ಪಡೆಗೊಳ್ಳುತ್ತವೆ.

ಅಂಥ ಸಂಸ್ಥೆಗಳ ಪದಾಧಿಕಾರಿಗಳು ಈ ಕುರಿತು ಅಂಥ ನಿಗದಿತ ಅಧಿಕಾರಿಗೆ ಅಂಥ ಆಸ್ತಿಗಳನ್ನು ಮರಳಿಸುವಂತೆ ಅರ್ಜಿ ಸಲ್ಲಿಸಬಹುದು. ಅಂಥ ಸಂದರ್ಭಗಳಲ್ಲಿ ಆ ಅಧಿಕಾರಿಯು ಸೂಕ್ತವೆನಿಸಿದರೆ ತನ್ನ ವಶಕ್ಕೆ ಬಂದ ಅಂಥ ಆಸ್ತಿಗಳನ್ನು ಮರಳಿಸಬಹುದು. ಹಾಗೆ ಅರ್ಜಿ ಸಲ್ಲಿಸದಿದ್ದರೆ ಅಥವಾ ಅಂಥ ಅರ್ಜಿಗಳು ತಿರಸ್ಕೃತವಾದರೆ ಅಂಥ ಆಸ್ತಿಗಳು ನಿಗದಿ ಪಡಿಸಿದ ಅಧಿಕಾರಿಯ ಕಾಯಂ ಅಧೀನಕ್ಕೆ ಒಳಪಡುತ್ತವೆ ಮತ್ತು ಅಂಥ ಆಸ್ತಿಗಳ ನಿರ್ವಹಣೆ ಮತ್ತು ವಿಲೇವಾರಿಯನ್ನು ನಿಗದಿತ ಅಧಿಕಾರಿ ಕೈಗೊಳ್ಳಬಹುದು. ಇನ್ನು ಕಾಯಿದೆಯ ಉಲ್ಲಂಘನೆಗೆ ವಿಧಿಸಬಹುದಾದ ಜೈಲು ಶಿಕ್ಷೆಯನ್ನು 5 ವರ್ಷದಿಂದ ಒಂದು ವರ್ಷಕ್ಕೆ ಇಳಿಸಲಾಗಿದೆ.

ಈಗ ತಿದ್ದುಪಡಿ ಕಾಯಿದೆಯನ್ವಯ ಚರ್ಚುಗಳನ್ನು ಸರಕಾರ ವಶಕ್ಕೆ ಪಡೆಯಬಹುದು ಎಂಬ ಆರೋಪದ ಕುರಿತು ವಿಚಾರ ಮಾಡೋಣ. 2010ರ ಕಾಯಿದೆಯ 15ನೇ ಕಲಮಿನಲ್ಲಿ ಕೂಡಾ ಅಂಥ ಸಂಸ್ಥೆಗಳ ಆಡಳಿತವನ್ನು ನಿಗದಿತ ಅಧಿಕಾರಿ ವಹಿಸಿಕೊಳ್ಳಬಹುದು ಎಂದು ಸ್ಪಷ್ಟವಾಗಿ ಹೇಳಲಾಗಿದೆ.

ತಿದ್ದುಪಡಿ ಕಾಯಿದೆಯಲ್ಲಿ ಈ ಕುರಿತು ಹೊಸತೇನೂ ಸೇರಿಸಲಾಗಿಲ್ಲ. ಆದರೆ ಹಾಗೆ ಆಡಳಿತ ವಹಿಸಿಕೊಳ್ಳುವ ಅಥವಾ ಆಸ್ತಿಗಳನ್ನು ವಿಲೇವಾರಿ ಮಾಡುವ ಸಂದರ್ಭದಲ್ಲಿ ಅಂಥ ಸಂಸ್ಥೆಗಳು ಧಾರ್ಮಿಕ ಸ್ವರೂಪದ್ದಾಗಿದ್ದರೆ ಅಂತ ಧಾರ್ಮಿಕ ಸ್ವರೂಪವನ್ನು ಉಳಿಸಿಕೊಳ್ಳಬೇಕು ಎಂಬುದನ್ನು ಹೊಸದಾಗಿ ಸೇರಿಸಲಾಗಿದೆ.

ಇಲ್ಲಿ ಗಮನಿಸಬೇಕಾದ ಇನ್ನೊಂದು ಅಂಶವೆಂದರೆ 2010ರ ಕಾಯಿದೆಯ 15ನೇ ಕಲಮಿನಲ್ಲಿ ಸಂಸ್ಥೆಗಳು ಅರ್ಜಿ ಸಲ್ಲಿಸಿ ಆಸ್ತಿಯನ್ನು ಮರಳಿಪಡೆಯುವ ಅವಕಾಶ ಸ್ಪಷ್ಟವಾಗಿ ಇರಲಿಲ್ಲ. ಈಗ ತಾತ್ಕಾಲಿಕ ಸುಪರ್ದಿ ಮತ್ತು ಕಾಯಂ ಸುಪರ್ದಿ ಎಂಬ ವ್ಯವಸ್ಥೆಯ ಮೂಲಕ ಅದಕ್ಕೆ ಸ್ಪಷ್ಟ ಅವಕಾಶವನ್ನು ಕಲ್ಪಿಸಲಾಗಿದೆ. ಅಪೀಲಿಗೆ ಅವಕಾಶವಿಲ್ಲ ಎಂಬ ಆರೋಪ ಪೂರ್ತಿ ಸುಳ್ಳು. ಯಾಕೆಂದರೆ ಹಳೆಯ ಕಾಯಿದೆಯ 31ನೇ ಕಲಮಿನಲ್ಲಿ ಇದ್ದ ಅವಕಾಶವನ್ನು ಬದಲಿಸಲಾಗಿಲ್ಲ ಅಥವಾ ರದ್ದು ಮಾಡಲಾಗಿಲ್ಲ. ಆದ್ದರಿಂದ ಈ ಕಾಯಿದೆಯು ಕ್ರೈಸ್ತ ವಿರೋಧಿ ಅಥವಾ ಚರ್ಚು ಗಳನ್ನು ವಶಪಡಿಸಲು ರೂಪಿಸಲಾಗಿದೆ ಎಂಬ ಆರೋಪಗಳು ಕೇವಲ ಜನರನ್ನು ತಪ್ಪು ದಾರಿಗೆಳೆ ಯಲು ಮಾತ್ರ ಎಂಬುದು ಸ್ಪಷ್ಟ.

ಆದರೆ ಈ ಕಾಯಿದೆಯ ವಿರುದ್ಧ ಬಾಯಿ ಬಡಿದುಕೊಂಡು ಕೂಗಾಡುತ್ತಿರುವವರ ಮುಖ್ಯ ವಿರೋಧ, ಆ ಕಾಯಿದೆಯಡಿಯಲ್ಲಿ ರೂಪಿಸಲಾಗಿರುವ ನಿಯಮಾವಳಿಗಳ ಕುರಿತು ಇದೆ. ಪ್ರಮುಖವಾಗಿ ಮತಾಂತರವನ್ನು (Proselytism) ಧಾರ್ಮಿಕ ಚಟುವಟಿಕೆಯ ಅಡಿಯಲ್ಲಿ ಸ್ಪಷ್ಟವಾಗಿ ಹೊರಗಿಡುವ ಮೂಲಕ ಆ ಉದ್ದೇಶಕ್ಕೆ ನೇರವಾಗಿ ಅಥವಾ ಪರೋಕ್ಷವಾಗಿ ವಿದೇಶಿ ಹಣದ ಹರಿವನ್ನು ತಡೆಯಲಾಗುತ್ತಿದೆ. ವಿದೇಶಿ ದೇಣಿಗೆಗಳನ್ನು ಯಾವೆಲ್ಲ ಉದ್ದೇಶಗಳಿಗೆ ಬಳಸಬಹುದು ಎಂಬ ಯಾದಿಯನ್ನೂ ನಿಯಮಗಳಲ್ಲಿ ನೀಡಲಾಗಿದ್ದು ಅಂಥ ಉದ್ದೇಶಗಳಿಗೆ ಮಾತ್ರ ನೋಂದಣಿಗೆ ಅರ್ಜಿ ಸಲ್ಲಿಸಬಹುದು. ಆ ಯಾದಿಯಲ್ಲಿ ಮತಾಂತರದ ಉದ್ದೇಶಕ್ಕೆ ಬಳಸಬಾರದು ಎಂಬ ಸ್ಪಷ್ಟ ನಿಯಮವಿದೆ.

ನೋಂದಣಿಗೆ ಅರ್ಜಿ ಸಲ್ಲಿಸುವ ಎನ್‌ಜಿಒಗಳು ತಮ್ಮ ತಮ್ಮ ಭೌಗೋಳಿಕ ವ್ಯಾಪ್ತಿಯನ್ನು ಸ್ಪಷ್ಟ ಪಡಿಸಬೇಕು. ಕೇರಳದಲ್ಲಿರುವ ಎನ್‌ಜಿಒ ವಿಜೋರಂನಲ್ಲಿ ಕಾರ್ಯ ನಿರ್ವಹಿಸುವದಾದಲ್ಲಿ ಅಂತಾರಾಜ್ಯ ನಿರ್ವಹಣೆಯ ನೋಂದಣಿಯನ್ನು ಪಡೆಯಬೇಕು ಮತ್ತು ಆಯಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ಸಂಬಂಧಿಸಿ ಶುಲ್ಕ ಪಾವತಿಸಬೇಕು.

ವಿದೇಶೀಯರು ಸಂಸ್ಥೆಗಳ ಪದಾಧಿಕಾರಿಗಳಾಗಲು ಅವಕಾಶವಿಲ್ಲ. ವಿವಿಧ ಸಂಸ್ಥೆ ಅಥವಾ ವ್ಯಕ್ತಿಗಳ ಮೂಲಕ ದೇಣಿಗೆ ಹರಿದು ಬಂದಲ್ಲಿ ಅದು ಮೂಲದಲ್ಲಿ ಯಾರಿಂದ ಬಂತು ಎಂಬುದನ್ನು ಸ್ಪಷ್ಟ ಪಡಿಸಬೇಕಾಗುತ್ತದೆ. ಸಂಸ್ಥೆಗಳ ನಿರ್ವಹಣೆ ಮತ್ತು ಕಾರ್ಯಗಳ ಪಾರದರ್ಶಕತೆಯಲ್ಲಿ ಯಾವದೇ ವ್ಯತ್ಯಯಗಳ ಕುರಿತು ತನಿಖೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವ ಅಧಿಕಾರ ಸರಕಾರಕ್ಕೆ ಸಿಗುತ್ತದೆ.

ವಿದೇಶಗಳಲ್ಲಿನ ಸಂಸ್ಥೆಗಳು ಭಾರತದ ಎನ್‌ಜಿಒಗಳಿಗೆ ಯಾಕೆ ದೇಣಿಗೆ ನೀಡುತ್ತವೆ ಎಂಬುದು ನಿಜಕ್ಕೂ ಆಶ್ಚರ್ಯದ ವಿಷಯ. ಅದು ಅಭಿವೃದ್ಧಿಯ ಕುರಿತಾಗಿದ್ದರೆ ಭಾರತ ಸರಕಾರದ ಮೂಲಕ ನೀಡಲು ಅವುಗಳಿಗೆ ಯಾವ ಸಮಸ್ಯೆಯೂ ಇರಬಾರದು. ಆಷ್ಟಾಗಿ ಈಗ ಭಾರತಕ್ಕೆ ದೇಣಿಗೆ ಪಡೆದು ದೇಶದ ಅಭಿವೃದ್ಧಿ ಮಾಡುವ ದಾರಿದ್ರ್ಯವಿಲ್ಲ. ಆಯ್ಕೆಯಾದ ಹೊಸದರಲ್ಲಿ ಡೊನಾಲ್ಡ್ ಟ್ರಂಪ್‌ ರವರು ಭಾರತದ ಚುನಾವಣೆಯ ಸಂದರ್ಭದಲ್ಲಿ ಅಮೇರಿಕದಿಂದ 21 ಮಿಲಿಯನ್ ಡಾಲರ್ ಹಣ ಭಾರತಕ್ಕೆ ಹರಿದಿದೆ ಎಂದು ಹೇಳಿದ್ದಾಗಿ ವರದಿಯಾಗಿತ್ತು.

ಅಮೇರಿಕದ ಸೆಕ್ರೆಟರಿ ಮಾರ್ಕ್ ರುಬಿಯೋ, ಕಳೆದ ಮೇನಲ್ಲಿ ಭಾರತಕ್ಕೆ ಭೇಟಿ ನೀಡಿದಾಗ ದೆಹಲಿಗಿಂತ ಮೊದಲು ಕೋಲ್ಕತ್ತಾದಲ್ಲಿನ ಮದರ್ ಆಫ್ ಚ್ಯಾರಿಟಿ ಸಂಸ್ಥೆಗೆ ಭೇಟಿ ನೀಡಿದ್ದು ಅನೇಕ ಊಹಾಪೋಹಗಳಿಗೆ ಕಾರಣವಾಗಿತ್ತು. ಮದರ್ ಆಫ್ ಚ್ಯಾರಿಟಿಯ ಸಂಸ್ಥೆಗೆ ಅಮೆರಿಕ ಮತ್ತು ಇತರ ವಿದೇಶಗಳಿಂದ ಸಾಕಷ್ಟು ಹಣ ಹರಿದು ಬರುತ್ತದೆ. ಹಾಗೆ ನೋಡಿದರೆ ಜಂತರ್ ಮಂತರ್ ಪ್ರತಿಭಟನೆಯ ಕೇಂದ್ರ ಬಿಂದು ವಾಂಗ್‌ಚುಕ್ ಅವರ ಶಿಕ್ಷಣ ಸಂಸ್ಥೆಗಳು ಕೂಡಾ ವಿದೇಶಿ ನೆರವು ಪಡೆಯುತ್ತಿವೆ ಎಂದು ಹೇಳಲಾಗಿದೆ. ಇಂಥ ಘಟನೆಗಳಿಗೆ ಮತ್ತು ಎಫ್‌ʼಸಿಆರ್‌ಎ ವಿರೋಧಕ್ಕೆ ಇರುವ ಸಂಬಂಧ ಕಾಕತಾಳೀಯವೆನಿಸುವದಿಲ್ಲ.

ಯಾವದೇ ಶಾಸನ ಜಾರಿ ಮಾಡುವದು ಭಾರತದ ಆಂತರಿಕ ವಿಷಯವಾಗಿದ್ದು ಅದನ್ನು ಮಾಡಲು ಭಾರತದ ಸಂಸತ್ತು ಸರ್ವಶಕ್ತವಾಗಿದೆ. ಆ ಕುರಿತು ಸಂಸತ್ತಿನಲ್ಲಿ ಚರ್ಚಿಸಲು ಭಾರತದ ವಿರೋಧ ಪಕ್ಷಗಳು ಸಂಪೂರ್ಣ ಸ್ವತಂತ್ರವಾಗಿವೆ. ಆದರೆ ಅವರು ರಸ್ತೆಯಲ್ಲಿ ಗದ್ದಲ ಮಾಡುತ್ತಿದ್ದಾರೆ. ಈ ಬಿಲ್ ಕುರಿತು ಭಾರತದ ಸಂಸತ್ತಿಗಿಂತ ಮೊದಲೇ ಅಮೆರಿಕದ ಸಂಸತ್ತಿನಲ್ಲಿ ಚರ್ಚೆಯಾಗಿದೆ. ಭಾರತದ ಪ್ರಧಾನಿ ಅಮೇರಿಕ ಹೇಳಿದಂತೆ ಕೇಳುತ್ತಾರೆ ಎಂಬ ಆರೋಪ ಮಾಡುವ ವಿಪಕ್ಷಗಳು ಭಾರತದ ಸಂಸತ್ತು ತರಹೊರಟಿರುವ ಕಾನೂನಿಗೆ ಅಮೆರಿಕದ ವಿರೋಧದ ಕುರಿತು ಬಾಯಿಗೆ ಬೀಗ ಹಾಕಿಕೊಂಡಿವೆ. ಮತಾಂತರಕ್ಕೆ ವಿದೇಶಿ ಹಣ ಬಳಕೆಯಾಗಬಾರದೆಂದು ಕಾನೂನು ತಂದು ಸ್ಕ್ರೂ ಬಿಗಿ ಮಾಡಿದರೆ ಭಾರತದ ಕಾಂಗ್ರೆಸ್ಸಿಗಾಗಲೀ ಅಮೆರಿಕದ ಸಂಸದರಿಗಾಗಲೀ ಯಾಕೆ ತಲೆಬಿಸಿ ಎಂಬುದು ಅರ್ಥವಾಗದ ವಿಷಯವೇನಲ್ಲ.