Dr Vijay Darda Column: ಭಾರತ- ನೇಪಾಳದ ಗಾಯಕ್ಕೆ ಬಾಲೇನ್ ಮುಲಾಮು ಹಚ್ಚುವರೆ ?
ನೇಪಾಳದ ಹೊಸ ಪ್ರಧಾನಿ ಬಾಲೇನ್ ಶಾ ಅವರ ಅಕ್ಕ ಸುಜಾತಾ ಶಾ ಸೆಜೆಕನ್ ಬೆಂಗಳೂರಿನಲ್ಲಿ ವಾಸಿಸುತ್ತಾರೆ. ಬಾಲೇನ್ ಶಾ ನೇಪಾಳದ ಸಂಸತ್ ಚುನಾವಣೆಯಲ್ಲಿ ಭರ್ಜರಿ ಬಹುಮತ ದೊಂದಿಗೆ ಗೆದ್ದ ಸುದ್ದಿ ಬರುತ್ತಿದ್ದಂತೆ ಸುಜಾತಾ ಅಂತಾರಾಷ್ಟ್ರೀಯ ನ್ಯೂಸ್ ಏಜೆನ್ಸಿಯೊಂದಕ್ಕೆ ಸಂದರ್ಶನ ನೀಡಿದ್ದರು.
-
ಸಂಗತ
ನೇಪಾಳದಲ್ಲಿ ಕೆ.ಪಿ.ಶರ್ಮಾ ಓಲೀ ಮತ್ತು ರಮೇಶ್ ಲೇಖಕ್‌ರನ್ನು ಬಂಧಿಸಿರುವುದು ಚೀನಾಕ್ಕೆ ನೀಡಿರುವ ತಿರುಗೇಟು ಮತ್ತು ಭಾರತಕ್ಕೆ ಶುಭ ಶಕುನ. ಭಾರತ-ನೇಪಾಳ ಸಂಬಂಧದ ವಿಷಯದಲ್ಲಿ ಹೊಸ ಅಧ್ಯಾಯ ಬರೆಯುವ ಕ್ಷಣ ಬಂದಿದೆ. ಬಾಲೇನ್‌ರ ನಿರೀಕ್ಷೆಯನ್ನು ತಲುಪುವ ಜವಾಬ್ದಾರಿ ಭಾರತದ ಮೇಲೇ ಇದೆ.
ನೇಪಾಳದ ಹೊಸ ಪ್ರಧಾನಿ ಬಾಲೇನ್ ಶಾ ಅವರ ಅಕ್ಕ ಸುಜಾತಾ ಶಾ ಸೆಜೆಕನ್ ಬೆಂಗಳೂರಿ ನಲ್ಲಿ ವಾಸಿಸುತ್ತಾರೆ. ಬಾಲೇನ್ ಶಾ ನೇಪಾಳದ ಸಂಸತ್ ಚುನಾವಣೆಯಲ್ಲಿ ಭರ್ಜರಿ ಬಹುಮತದೊಂದಿಗೆ ಗೆದ್ದ ಸುದ್ದಿ ಬರುತ್ತಿದ್ದಂತೆ ಸುಜಾತಾ ಅಂತಾರಾಷ್ಟ್ರೀಯ ನ್ಯೂಸ್ ಏಜೆನ್ಸಿಯೊಂದಕ್ಕೆ ಸಂದರ್ಶನ ನೀಡಿದ್ದರು.
ಅದರಲ್ಲಿಅವರು, ‘ಭಾರತ ಹಾಗೂ ನೇಪಾಳದ ನಡುವಿನ ಸಂಬಂಧ ಶತಮಾನಕ್ಕೂ ಹಳೆಯದು. ಅದನ್ನು ಮುರಿಯಲುಯಾರಿಂದಲೂ ಸಾಧ್ಯವಿಲ್ಲ. ಇತ್ತೀಚೆಗೆ ತಲೆದೋರಿರುವ ಭಿನ್ನಾಭಿಪ್ರಾಯಗಳು ತಾತ್ಕಾಲಿಕವಷ್ಟೆ. ಭವಿಷ್ಯದಲ್ಲಿ ಮತ್ತೆ ಉಭಯ ದೇಶಗಳು ಒಂದಾಗು ತ್ತವೆ ಎಂದು ಹೇಳಿದ್ದರು.
ಬಾಲೇನ್ ಶಾ ಪ್ರಧಾನಿಯಾದರೆ ಮಾತ್ರ ಭಾರತ ಮತ್ತು ನೇಪಾಳದ ನಡುವಿನ ದ್ವಿಪಕ್ಷೀಯ ಸಂಬಂಧ ಸುಧಾರಿಸುತ್ತದೆ ಎಂದೂ ಆಕೆ ಸ್ಪಷ್ಟವಾಗಿ ಹೇಳಿದ್ದರು. ಈಗ ಸುಜಾತಾ ಅವರ ಆಸೆ ಈಡೇರಿದೆ. ಆಕೆಯ ತಮ್ಮ, 35 ವರ್ಷದ ರ‍್ಯಾಪರ್ ಹಾಡುಗಾರ ಬಾಲೇನ್ ಶಾ ನೇಪಾಳದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಹಾಗಿದ್ದರೆ ನಾವೀಗ ಭಾರತ ಮತ್ತು ನೇಪಾಳದ ನಡುವಿನ ಹಳಸಿದ ಸಂಬಂಧ ಸುಧಾರಿಸುತ್ತದೆ ಎಂದು ಆಶಿಸೋಣವೇ? ಬಾಲೇನ್ ಶಾ ಅಂತಹ ಪ್ರಯತ್ನಕ್ಕೆ ಕೈ ಹಾಕುತ್ತಾರೆಯೇ? ಕಳೆದ ಒಂದೂವರೆ ದಶಕದಲ್ಲಿ ಉಭಯ ದೇಶಗಳ ನಡುವಿನ ಸಂಬಂಧ ಹಳ್ಳ ಹಿಡಿದಿದೆ.
ನೇಪಾಳದಲ್ಲಿ ಕಮ್ಯುನಿಸ್ಟ್ ಪಕ್ಷ ಪ್ರವರ್ಧಮಾನಕ್ಕೆ ಬರುವುದಕ್ಕೂ ಮೊದಲು ಭಾರತದ ಜೊತೆಗೆ ಆ ದೇಶಯಾವ ರೀತಿಯ ಸೌಹಾರ್ದ ಮತ್ತು ಸ್ನೇಹಶೀಲವಾದ ಸಂಬಂಧ ಹೊಂದಿತ್ತೋ ಅಂತಹ ಪರಿಸ್ಥಿತಿ ಮರುಸ್ಥಾಪನೆಯಾಗುವಂತೆ ಬಾಲೇನ್ ಶಾ ಮಾಡುತ್ತಾ ರೆಯೇ? ಹಾಗೆ ಮಾಡುವುದು ಹೌದಾದರೆ ಅವರು ಚೀನಾದ ಜೊತೆಗೆ ಯಾವ ರೀತಿಯ ಸಂಬಂಧ ಇರಿಸಿಕೊಳ್ಳುತ್ತಾರೆ? ವ್ಯೂಹಾತ್ಮಕವಾಗಿ ಮತ್ತು ರಾಜತಾಂತ್ರಿಕವಾಗಿ ನೇಪಾಳವು ಜಾಗತಿಕ ಸೂಪರ್ ಪವರ್ ರಾಷ್ಟ್ರಗಳಿಗೆ ಬಹಳ ಅಗತ್ಯವಾಗಿ ಬೇಕಾದ ದೇಶ.
ಇದನ್ನೂ ಓದಿ: Dr ViJay Darda Column: ದುಬೈ ಮೇಲೆ ಇರಾನ್ ಏಕೆ ದಾಳಿ ಮಾಡಿದೆ ?
ಆದ್ದರಿಂದಲೇ ನೇಪಾಳದ ಕುರಿತು ಜಾಗತಿಕ ವೇದಿಕೆಯಲ್ಲಿ ಸಾಕಷ್ಟು ಪ್ರಶ್ನೆಗಳು ಬರುತ್ತಿರು ತ್ತವೆ. ನೇಪಾಳದಲ್ಲೂ, ನೆರೆದೇಶಗಳಲ್ಲೂ ಇಂತಹ ಪ್ರಶ್ನೆಗಳು ಹೆಚ್ಚು ಕೇಳಿಬರುತ್ತವೆ. ನೇಪಾಳದ ಜನರು ಬಾಲೇನ್ ಶಾ ಅವರಲ್ಲಿ ಅಪಾರವಾದ ನಂಬಿಕೆ ಯಿಟ್ಟಿದ್ದಾರೆ. 2008 ರಿಂದ ನೇಪಾಳಿಗರು ತಮ್ಮ ದೇಶದಲ್ಲಿ ನಾನಾರೀತಿಯ ಮೈತ್ರಿ ಸರಕಾರಗಳನ್ನೂ, ಅವುಗಳ ದುರಾಡಳಿತವನ್ನೂ ನೋಡಿ ಬೇಸತ್ತಿದ್ದರು. ಆಡಳಿತದಲ್ಲಿ ಚೀನಾದ ಹಸ್ತಕ್ಷೇಪ ವನ್ನು ಕಂಡು ಒಳಗೊಳಗೇ ಉರಿದುಕೊಂಡಿದ್ದರು.
ಅವರಿಗೊಂದು ಬಲಿಷ್ಠವಾದ ಸ್ವತಂತ್ರ ಸರಕಾರ ಬೇಕಿತ್ತು. ಅವರ ಆಶೋತ್ತರಗಳನ್ನು ಕೇಳಿಸಿಕೊಳ್ಳುವ ಗಟ್ಟಿಯಾದ ನಾಯಕ ಬೇಕಿತ್ತು. ಈ ಎಲ್ಲ ನಿರೀಕ್ಷೆಗಳ ಪರಿಣಾಮವಾಗಿ, ಬಹಳ ವರ್ಷಗಳ ಬಳಿಕ ನೇಪಾಳದಲ್ಲಿ ಬಾಲೇನ್ ನೇತೃತ್ವದ ರಾಷ್ಟ್ರೀಯ ಸ್ವತಂತ್ರ ಪಕ್ಷ ಉತ್ತಮ ಬಹುಮತ ಪಡೆದು ಅಧಿಕಾರಕ್ಕೆ ಏರಿದೆ.
ಸ್ಪಷ್ಟವಾಗಿ ಹೇಳಬೇಕು ಅಂದರೆ, ಈಗ ಬಾಲೇನ್ ಬಳಿ ಜನಾದೇಶವಿದೆ. ನೇಪಾಳವನ್ನು ಮರುನಿರ್ಮಾಣ ಮಾಡಲು ಬೇಕಾದ ಅಧಿಕಾರ ಕೂಡ ಅವರ ಕೈಯಲ್ಲಿದೆ. ಸರಕಾರಕ್ಕೆ ಅಭದ್ರತೆಯ ಭೀತಿಯಿಲ್ಲ. ಪ್ರಧಾನಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ತಕ್ಷಣ ಬಾಲೇನ್ ಶಾ ತಮ್ಮ ಪ್ರಪ್ರಥಮ ಸಚಿವ ಸಂಪುಟ ಸಭೆಯಲ್ಲೇ ಕಠಿಣ ಆಡಳಿತಕ್ಕೆ ಬದ್ಧತೆ ಯನ್ನು ಪ್ರದರ್ಶಿಸಿದ್ದಾರೆ.
ಬಾಲೇನ್ ಪ್ರಧಾನಿಯಾಗುವುದಕ್ಕೆ ಮೂಲ ಕಾರಣ ಈ ಹಿಂದೆ ನೇಪಾಳದಲ್ಲಿ ನಡೆದಿದ್ದ ಜೆನ್‌ಝೀ ಚಳವಳಿ. ಅದರಲ್ಲಿ ಯುವಕರ ನೇತೃತ್ವವನ್ನು ಸ್ವತಃ ಬಾಲೇನ್ ಅವರೇ ವಹಿಸಿ ದ್ದರು. ಆ ಹೋರಾಟದಲ್ಲಿ ಸರಕಾರದ ಗುಂಡಿನ ದಾಳಿಗೆ ಅನೇಕ ಯುವಕರು ಪ್ರಾಣ ಕಳೆದುಕೊಂಡಿದ್ದಾರೆ. ಅಂತಹ ಘಟನೆಗಳ ಬಗ್ಗೆ ತನಿಖೆ ನಡೆಸಲು ಗೌರಿ ಬಹಾದೂರ್ ಕರ್ಕಿ ನೇತೃತ್ವದಲ್ಲಿ ಆಯೋಗವನ್ನು ರಚಿಸಲಾಗಿತ್ತು.
ಆ ಆಯೋಗವು ಸುಶೀಲಾ ಕರ್ಕಿ ನೇತೃತ್ವದ ಮಧ್ಯಂತರ ಸರಕಾರಕ್ಕೆ ತನ್ನ ವರದಿಯನ್ನು ಸಲ್ಲಿಸಿತ್ತು. ಆ ವರದಿಯ ಆಧಾರದಲ್ಲಿ ತಕ್ಷಣ ಕ್ರಮ ಕೈಗೊಳ್ಳುವಂತೆ ಇದೀಗ ಬಾಲೇನ್ ಶಾ ಆದೇಶ ನೀಡಿದ್ದಾರೆ. ಆ ಆದೇಶದ ಬೆನ್ನಲ್ಲೇ ಮಾಜಿ ಪ್ರಧಾನಿ ಹಾಗೂ ನೇಪಾಳ್ ಕಮ್ಯುನಿಸ್ಟ್ ಪಾರ್ಟಿ ನಾಯಕ ಕೆ.ಪಿ.ಓಲೀ ಶರ್ಮಾ ಹಾಗೂ ಅವರ ಸರಕಾರದಲ್ಲಿ ಗೃಹ ಸಚಿವರಾಗಿದ್ದ ರಮೇಶ್ ಲೇಖಕ್ ರನ್ನು ಬಂಧಿಸಲಾಗಿದೆ.
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರವಿದ್ದಾಗ ಅಂದಿನ ಪ್ರಧಾನಿ ಕೆ.ಪಿ.ಓಲೀ ಚೀನಾದ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದರು. ಅಧಿಕಾರದಲ್ಲಿ ಇದ್ದಾಗಲೂ ಮತು ಅಧಿಕಾರಾವಧಿ ಮುಗಿದ ನಂತರವೂ ಚೀನಾದ ಪರ ಧೋರಣೆಗಳನ್ನು ಅವರು ಪ್ರದರ್ಶಿಸುತ್ತಿದ್ದುದು ಎಲ್ಲರಿಗೂ ಗೊತ್ತು. ಅವರು ಪ್ರಧಾನಿಯಾಗಿದ್ದಾಗ ನೇಪಾಳಕ್ಕೆ ಹೌ ಯಾಂಕಿ ಎನ್ನುವ ಹೆಣ್ಣು ಮಗಳು ಚೀನಾದ ರಾಯಭಾರಿಯಾಗಿದ್ದರು.
ಆಕೆ ಅತ್ಯಂತ ಸುಂದರಿ. ಓಲೀ ಮೇಲೆ ಹೌ ಯಾಂಕಿ ಪ್ರಬಲವಾದ ನಿಯಂತ್ರಣ ಹೊಂದಿ ದ್ದರು ಎಂಬ ಗುಸುಗುಸು ಎಲ್ಲೆಡೆ ಕೇಳಿಬರುತ್ತಿತ್ತು. ಇನ್ನು, ರಮೇಶ್ ಲೇಖಕ್ ಕೂಡ ಚೀನಾ ದ ಅಜೆಂಡಾವನ್ನು ನೇಪಾಳದಲ್ಲಿ ಹರಡುತ್ತಿದ್ದ ಪ್ರಭಾವಿ ವ್ಯಕ್ತಿ. ಹೀಗಾಗಿ ಈಗ ಬಾಲೇನ್ ಶಾ ಅವರು ಕೆ.ಪಿ.ಶರ್ಮಾ ಓಲೀ ಮತ್ತು ರಮೇಶ್‌ರನ್ನು ಬಂಧಿಸಿರುವುದು ಚೀನಾ ಕ್ಕೆ ಕಠಿಣ ಸಂದೇಶ ರವಾನೆ ಮಾಡಿದಂತಾಗಿದೆ.
‘ಎಡಪಂಥೀಯ ಸಿದ್ಧಾಂತವನ್ನು ಹರಡುವ ಉದ್ದೇಶದಿಂದ ನೇಪಾಳವನ್ನು ತನ್ನ ವಸಾಹತುವನ್ನಾಗಿ ಮಾಡಿಕೊಳ್ಳಲು ಚೀನಾ ಯತ್ನಿಸಿದರೆ ನಾವು ಒಪ್ಪುವುದಿಲ್ಲ ಎಂಬ ಸೂಚ್ಯವಾದ ಎಚ್ಚರಿಕೆಯ ಸಂದೇಶವು ಚೀನಾಕ್ಕೆ ರವಾನೆಯಾಗಿದೆ. ಓಲೀ ಮತ್ತು ರಮೇಶ್ ಬಂಧನಕ್ಕೆ ಚೀನಾ ಇನ್ನೂ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಖಂಡಿತ ಅದು ಈ ಎಲ್ಲಾ ಬೆಳವಣಿಗೆಗಳನ್ನೂ ಸೂಕ್ಷ್ಮವಾಗಿ ಗಮನಿಸುತ್ತಿರುತ್ತದೆ.
ಗಮನಾರ್ಹ ಸಂಗತಿಯೆಂದರೆ, ಬಾಲೇನ್ ಶಾ ಈ ಹಿಂದೆಯೂ ಚೀನಾದ ಹಿತಾಸಕ್ತಿಗಳನ್ನು ಕಡೆಗಣಿಸಿ ಸಡ್ಡು ಹೊಡೆದಿದ್ದರು. ಕೆ.ಪಿ.ಶರ್ಮಾ ಓಲೀ ಪ್ರಧಾನಿಯಾಗಿದ್ದಾಗ ಝಾಪಾ ಸಂಸದೀಯ ಕ್ಷೇತ್ರದ ವ್ಯಾಪ್ತಿಯಲ್ಲಿ ನೇಪಾಳ-ಚೀನಾ ಸ್ನೇಹಶೀಲ ಔದ್ಯೋಗಿಕ ಪಾರ್ಕ್ ಸ್ಥಾಪನೆಗೆ ಅಡಿಗಲ್ಲು ಹಾಕಲಾಗಿತ್ತು. ಆದರೆ, ಬಾಲೇನ್ ಶಾ ತಮ್ಮ ಚುನಾವಣಾ ಪ್ರಣಾಳಿಕೆ ಯಲ್ಲಿ ಈ ಯೋಜನೆಯನ್ನುಉದ್ದೇಶಪೂರ್ವಕವಾಗಿ ಕೈಬಿಟ್ಟಿದ್ದರು.
ಚೀನಾದ ಮಹತ್ವಾಕಾಂಕ್ಷಿ ಒನ್ ಬೆಲ್ಟ್ ಒನ್ ರೋಡ್ (ಬಿಆರ್‌ಐ) ಯೋಜನೆಯಲ್ಲಿ ಈ ಔದ್ಯೋಗಿಕ ಪಾರ್ಕ್ ಕೂಡ ಮಹತ್ವದ್ದಾಗಿತ್ತು. ಇದೆಲ್ಲವನ್ನೂ ನೋಡಿದರೆ ಚೀನಾದ ನಿರ್ದೇಶನದಂತೆ ಕೆಲಸ ಮಾಡುವ ವ್ಯಕ್ತಿ ತಾನಲ್ಲ ಎಂಬ ಸಂದೇಶವನ್ನು ಸರಿಯಾದ ರೀತಿಯಲ್ಲೇ ಬಾಲೇನ್ ಶಾ ರವಾನೆ ಮಾಡಿದ್ದಾರೆ.
ಹಾಗಿದ್ದರೆ ಇದು ಭಾರತಕ್ಕೆ ಧನಾತ್ಮಕ ಸುಳಿವೇ? ತಕ್ಕಮಟ್ಟಿಗೆ ಹೌದು. ಆದರೆ, ಚೀನಾದಿಂದ ಅಂತರ ಕಾಯ್ದುಕೊಳ್ಳಲು ನೇಪಾಳದ ಪ್ರಧಾನಿ ಮುಂದಾಗಿದ್ದಾರೆ ಎಂದ ಮಾತ್ರಕ್ಕೆ ಅವರು ಭಾರತವನ್ನು ಬಾಚಿ ತಬ್ಬಿಕೊಳ್ಳುತ್ತಾರೆ ಎಂದು ಕುರುಡಾಗಿ ಭಾವಿಸುವುದು ತಪ್ಪಾಗುತ್ತದೆ. ಇದಕ್ಕೆ ಈ ಹಿಂದಿನ ಎರಡು ನಿದರ್ಶನಗಳೇ ಉದಾಹರಣೆ.
ಬಾಲೇನ್ ಶಾ ಕಠ್ಮಂಡು ನಗರದ ಮೇಯರ್ ಆಗಿದ್ದಾಗ ಭಾರತದ ಆದಿಪುರುಷ್ ಸಿನಿಮಾ ವನ್ನು ನಿಷೇಧಿಸಿದ್ದರು. ಆ ಸಿನಿಮಾದಲ್ಲಿ ಸೀತೆಯನ್ನು ಭಾರತದ ಮಗಳು ಎಂಬಂತೆ ಬಿಂಬಿಸಿದ್ದಾರೆಂಬ ಕಾರಣಕ್ಕೆ ಅವರು ಕಠಿಣ ಕ್ರಮ ಕೈಗೊಂಡಿದ್ದರು. ಸೀತೆ ಹುಟ್ಟಿದ್ದು ಜನಕಪುರದಲ್ಲಿ, ಅದು ನೇಪಾಳದಲ್ಲಿದೆ ಎಂಬುದು ಪೌರಾಣಿಕ ಸತ್ಯ. ಅದನ್ನೇ ಎಲ್ಲರೂ ನಂಬುತ್ತಾರೆ. ಆದರೆ, ಸಿನಿಮಾದಲ್ಲಿ ಬೇರೆ ರೀತಿಯಲ್ಲಿ ಬಿಂಬಿಸಿದ್ದನ್ನು ಬಾಲೇನ್ ವಿರೋಧಿಸಿದ್ದರು.
ಮತ್ತೊಮ್ಮೆ, ಕೆ.ಪಿ.ಶರ್ಮಾ ಓಲೀ ಸರಕಾರ ಭಾರತದ ಉತ್ತರಾಖಂಡವನ್ನು ನೇಪಾಳದಲ್ಲಿ ಸೇರಿಸಿ ನಕ್ಷೆ ಬಿಡುಗಡೆ ಮಾಡಿತ್ತು. ಅದನ್ನು ಬಾಲೇನ್ ಶಾ ಬೆಂಬಲಿಸಿದ್ದು ಮಾತ್ರವಲ್ಲ, ತಮ್ಮ ಮೇಯರ್ ಕಚೇರಿಯಲ್ಲೂ ಆ ನಕ್ಷೆಯನ್ನೇ ದೊಡ್ಡದಾಗಿ ಹಾಕಿಕೊಂಡಿದ್ದರು. ಹೀಗಾಗಿ ಅವರಿಗೆ ಭಾರತದ ಮೇಲೆ ಕುರುಡು ಪ್ರೀತಿಯೇನೂ ಇಲ್ಲ. ನೇಪಾಳಿ ರಾಷ್ಟ್ರೀಯ ವಾದವನ್ನು ಮೆರೆಸುವುದಕ್ಕೆ ಏನು ಮಾಡಬೇಕೋ ಅದನ್ನೇ ಬಾಲೇನ್ ಮಾಡುತ್ತಾರೆ.
ನೇಪಾಳದ ಯುವಕರಿಗೆ ಬೇಸರವಾಗುವ ಏನನ್ನೂ ಅವರು ಮಾಡಲು ಹೋಗುವುದಿಲ್ಲ. ನೇಪಾಳದ ವ್ಯೂಹಾತ್ಮಕ ಆಸಕ್ತಿಗಳ ಮೇಲೆ ಕಣ್ಣಿಟ್ಟುಕೊಂಡೇ ಅವರು ವ್ಯವಹರಿಸುತ್ತಾರೆ ಎಂಬುದರಲ್ಲಿ ಅನುಮಾನವಿಲ್ಲ. ನೇಪಾಳ ಲ್ಯಾಂಡ್‌ಲಾಕ್ಡ್ ದೇಶ. ಅದರ ಸುತ್ತಲೂ ಬೇರೆ ದೇಶದ ಗಡಿಗಳಿವೆ. ಭಾರತದ ಜೊತೆ ನೇಪಾಳಕ್ಕೆ 1250 ಕಿ.ಮೀ. ಉದ್ದದ ಗಡಿಯಿದೆ.
ಚೀನಾ ಜೊತೆ 1414 ಕಿ.ಮೀ. ಉದ್ದದ ಗಡಿಯಿದೆ. ಚೀನಾದ ಜೊತೆಗಿನ ಗಡಿಯಲ್ಲಿ ಕಡಿದಾದ ಮತ್ತು ಎತ್ತರದ ಬೆಟ್ಟಗಳು, ಹಿಮಾಲಯದ ಪರ್ವತಗಳಿವೆ. ಹೀಗಾಗಿ ಚೀನಾಕ್ಕಿಂತ ಹೆಚ್ಚಾಗಿ ಭಾರತದ ಜೊತೆಗೆ ವ್ಯಾಪಾರ ನಡೆಸುವುದೇ ನೇಪಾಳಕ್ಕೆ ಲಾಗಾಯ್ತಿನಿಂದಲೂ ಅನುಕೂಲ ಕರ ಸಂಗತಿ. ಅಲ್ಲದೆ, ಭಾರತೀಯ ಸಂಸ್ಕೃತಿಗೆ ನೇಪಾಳದ ಸಂಸ್ಕೃತಿ ಹತ್ತಿರದಲ್ಲಿದೆ.
ನೇಪಾಳದಲ್ಲಿ ಹಿಂದೂಗಳು ಹೆಚ್ಚಿದ್ದಾರೆ. ಸ್ವತಃ ಬಾಲೇನ್ ಶಾ ಕೂಡ ಭಾರತೀಯ ಮೂಲದ ಧಾರ್ಮಿಕ ಗುಂಪಾಗಿರುವ ಮಧೇಸಿ ಸಮುದಾಯಕ್ಕೆ ಸೇರಿದವರು. ಆದರೆ ಅದನ್ನು ಅವರು ಹೆಚ್ಚಾಗಿ ತೋರಿಸಿಕೊಳ್ಳುವುದಿಲ್ಲ. ಚೀನಾದ ಜೊತೆಗೆ ನೇಪಾಳಕ್ಕೆ ಇಂತಹ ಯಾವುದೇ ಸಾಂಸ್ಕೃತಿಕ ಅಥವಾ ಸಾಮಾಜಿಕ ಸಾಮ್ಯತೆ ಇಲ್ಲ.
ನನ್ನ ಪ್ರಕಾರ ಬಾಲೇನ್ ಶಾ ಖಂಡಿತವಾಗಿಯೂ ಭಾರತದ ಕುರಿತು ಆಶಾಭಾವನೆ ಹೊಂದಿ ದ್ದಾರೆ. ಅವರ ನಿರೀಕ್ಷೆಗಳನ್ನು ತಲುಪುವುದಕ್ಕೆ ಭಾರತ ಸರಕಾರ ಗೌರವಯುತ ಸಹಕಾರ ಸಂಬಂಧದ ನಡೆಯನ್ನು ಪ್ರದರ್ಶಿಸಿದರೆ ಆಗ ಹಳೆಯ ಗಾಯಗಳು ಮಾಯುವುದರ ಜೊತೆಗೆ ಪರ್ವತ ಪ್ರದೇಶದಲ್ಲಿ ದ್ವಿಪಕ್ಷೀಯ ಸಹಕಾರದ ಹೊಸ ಬೆಚ್ಚಗಿನ ಗಾಳಿಯೂ ಬೀಸ ತೊಡಗುತ್ತದೆ.
ಹಳಿ ತಪ್ಪಿರುವ ಸಂಬಂಧವನ್ನು ಮತ್ತೆ ಸ್ನೇಹಪೂರ್ವಕವಾಗಿ ಕಟ್ಟಿಕೊಳ್ಳಲು ಇದು ನೇಪಾಳ ಮತ್ತು ಭಾರತ ಎರಡೂ ದೇಶಗಳಿಗೆ ಸಿಕ್ಕ ಒಳ್ಳೆಯ ಅವಕಾಶ. ಎಲ್ಲವೂ ಒಳ್ಳೆಯ ದಾಗಲಿದೆ, ಮತ್ತೊಮ್ಮೆ ಭಾರತದ ಸ್ನೇಹಿತ ರಾಷ್ಟ್ರವಾಗಿ ನೇಪಾಳ ಹೊರಹೊಮ್ಮಲಿದೆ ಎಂದು ಮನಸಾರೆ ಹಾರೈಸೋಣ.