Roopa Gururaj Column: ಸ್ಕ್ವಾಡ್ರನ್ ಲೀಡರ್ ಭಾವನಾ ಕಾಂತ್: ಆಕಾಶವನ್ನೇ ಗೆದ್ದ ಭಾರತದ ಹೆಮ್ಮೆಯ ಪುತ್ರಿ
ಬಿಹಾರದ ದರ್ಭಾಂಗದಂತಹ ಒಂದು ಸಣ್ಣ ಪಟ್ಟಣದಿಂದ ಬಂದ ಹುಡುಗಿಯೊಬ್ಬಳು ಆಕಾಶದ ಎತ್ತರವನ್ನು ಮುಟ್ಟುವ ಕನಸು ಕಾಣುವುದು ಮತ್ತು ಆ ಕನಸನ್ನು ಕೇವಲ ನನಸಾಗಿಸುವುದು ಮಾತ್ರ ವಲ್ಲದೆ, ಇಡೀ ದೇಶವೇ ತನ್ನತ್ತ ಹೆಮ್ಮೆಯಿಂದ ತಿರುಗಿ ನೋಡುವಂತೆ ಮಾಡುವುದು ನಿಜಕ್ಕೂ ಒಂದು ಅದ್ಭುತ ಹಾಗೂ ರೋಮಾಂಚಕಾರಿ ಕಥೆ. ಈ ಕಥೆಯ ನಾಯಕಿ ಬೇರಾರೂ ಅಲ್ಲ, ಭಾರತೀಯ ವಾಯುಪಡೆಯ ( Indian Air Force ) ಹೆಮ್ಮೆಯ ಸ್ಕ್ವಾಡ್ರನ್ ಲೀಡರ್ ಭಾವನಾ ಕಾಂತ್.
-
ಒಂದೊಳ್ಳೆ ಮಾತು
ಬಿಹಾರದ ದರ್ಭಾಂಗದಂತಹ ಒಂದು ಸಣ್ಣ ಪಟ್ಟಣದಿಂದ ಬಂದ ಹುಡುಗಿಯೊಬ್ಬಳು ಆಕಾಶದ ಎತ್ತರವನ್ನು ಮುಟ್ಟುವ ಕನಸು ಕಾಣುವುದು ಮತ್ತು ಆ ಕನಸನ್ನು ಕೇವಲ ನನಸಾಗಿಸುವುದು ಮಾತ್ರ ವಲ್ಲದೆ, ಇಡೀ ದೇಶವೇ ತನ್ನತ್ತ ಹೆಮ್ಮೆಯಿಂದ ತಿರುಗಿ ನೋಡುವಂತೆ ಮಾಡುವುದು ನಿಜಕ್ಕೂ ಒಂದು ಅದ್ಭುತ ಹಾಗೂ ರೋಮಾಂಚಕಾರಿ ಕಥೆ. ಈ ಕಥೆಯ ನಾಯಕಿ ಬೇರಾರೂ ಅಲ್ಲ, ಭಾರತೀಯ ವಾಯುಪಡೆಯ ( Indian Air Force ) ಹೆಮ್ಮೆಯ ಸ್ಕ್ವಾಡ್ರನ್ ಲೀಡರ್ ಭಾವನಾ ಕಾಂತ್. ತಮ್ಮ ಅಪ್ರತಿಮ ಧೈರ್ಯ, ಛಲ ಮತ್ತು ಕಠಿಣ ಪರಿಶ್ರಮದಿಂದ ಅವರು ಭಾರತೀಯ ಸೇನಾ ಇತಿಹಾಸದಲ್ಲಿ ಮತ್ತೊಂದು ಹೊಸ ಮೈಲಿಗಲ್ಲನ್ನು ಸ್ಥಾಪಿಸಿದ್ದಾರೆ.
ಭಾರತೀಯ ವಾಯುಪಡೆಯು ಮಹಿಳೆಯರಿಗೂ ಫೈಟರ್ ಪೈಲಟ್ ಆಗಲು ಅವಕಾಶ ನೀಡಿದಾಗ, ಆ ಸವಾಲನ್ನು ಎದೆಯೊಡ್ಡಿ ಸ್ವೀಕರಿಸಿದವರಲ್ಲಿ ಭಾವನಾ ಮುಂಚೂಣಿಯಲ್ಲಿದ್ದರು. ಭಾರತದ ಮೊಟ್ಟಮೊದಲ ಮೂವರು ಮಹಿಳಾ ಫೈಟರ್ ಪೈಲಟ್‌ಗಳಲ್ಲಿ ಒಬ್ಬರಾಗಿ ಕಮಿಷನ್ ಪಡೆಯುವ ಮೂಲಕ ಅವರು ಇತಿಹಾಸ ನಿರ್ಮಿಸಿದರು.
ಹಗಲು ಹೊತ್ತಿನ ಫೈಟರ್ ಯುದ್ಧ ಕಾರ್ಯಾಚರಣೆಗಳಿಗೆ (Daytime fighter combat missions) ಅಧಿಕೃತವಾಗಿ ಅರ್ಹತೆ ಪಡೆದ ಭಾರತದ ಮೊದಲ ಮಹಿಳಾ ಪೈಲಟ್ ಎಂಬ ಕೀರ್ತಿಗೆ ಅವರು ಭಾಜನ ರಾದರು. ನವದೆಹಲಿಯ ರಾಜಪಥದಲ್ಲಿ ನಡೆದ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಪಾಲ್ಗೊಂಡ ಮೊದಲ ಮಹಿಳಾ ಫೈಟರ್ ಪೈಲಟ್ ಎಂಬ ಹೆಗ್ಗಳಿಕೆಯೂ ಅವರ ಮುಡಿಗೇರಿತು.
ಇದನ್ನೂ ಓದಿ: Roopa Gururaj Column: ವೇನ ರಾಜನ ವಿನಾಶಕ್ಕೆ ಕಾರಣವಾದ ಅವನ ಅಹಂಕಾರ
ಅಲ್ಲಿಂದ ಶುರುವಾದ ಅವರ ವಿಜಯಯಾತ್ರೆ ಇಂದಿಗೂ ನಿಂತಿಲ್ಲ. ಇದೀಗ, ತಮ್ಮ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿಯನ್ನು ಭಾವನಾ ಕಾಂತ್ ಸೇರಿಸಿದ್ದಾರೆ. ಗ್ವಾಲಿಯರ್‌ನಲ್ಲಿರುವ ಭಾರತೀಯ ವಾಯುಪಡೆಯ TACDE ಕೇಂದ್ರದಲ್ಲಿ ‘ಫೈಟರ್ ಕಾಂಬ್ಯಾಟ್ ಲೀಡರ್’ (ಎಫ್ʼಸಿಎಲ್) ಎಂಬ ಪ್ರತಿಷ್ಠಿತ ಕೋರ್ಸ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಮೊಟ್ಟ ಮೊದಲ ಮಹಿಳಾ ಫೈಟರ್ ಪೈಲಟ್ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.
ಈ ಎಫ್ʼಸಿಎಲ್ ಕೋರ್ಸ್ ಎನ್ನುವುದು ಸಾಮಾನ್ಯವಾದ ತರಬೇತಿಯಲ್ಲ. ಇದು ಬರೋಬ್ಬರಿ 20 ವಾರಗಳ ಕಾಲ ನಡೆಯುವ ಅತ್ಯಂತ ಕಠಿಣ ಹಾಗೂ ಸವಾಲಿನ ತರಬೇತಿ. ಕೇವಲ ಆಯ್ದ, ಅತ್ಯುತ್ತಮ ಫೈಟರ್ ಪೈಲಟ್‌ಗಳಿಗೆ ಮಾತ್ರ ಇದರಲ್ಲಿ ಪಾಲ್ಗೊಳ್ಳುವ ಅವಕಾಶ ಸಿಗುತ್ತದೆ. ಈ ಕೋರ್ಸ್ ಅನ್ನು ಪೂರ್ಣಗೊಳಿಸುವುದು ಎಂದರೆ, ಕೇವಲ ಯುದ್ಧ ವಿಮಾನವನ್ನು ಚಲಾಯಿಸುವು ದಷ್ಟೇ ಅಲ್ಲ, ಬದಲಾಗಿ ಅತ್ಯಂತ ಸಂಕೀರ್ಣವಾದ ವಾಯು ಯುದ್ಧ ಕಾರ್ಯಾಚರಣೆಗಳನ್ನು ( Complex air combat missions) ಮುಂಚೂಣಿಯಲ್ಲಿ ನಿಂತು ಮುನ್ನಡೆಸುವ ಸಾಮರ್ಥ್ಯವನ್ನು ಸಾಬೀತುಪಡಿಸಿದಂತೆ. ಭಾವನಾ ಅವರ ಸಮವಸ್ತ್ರದ ಮೇಲಿರುವ ಈ ಹೊಸ ಬ್ಯಾಡ್ಜ್ ಕೇವಲ ಲಾಂಛನವಲ್ಲ.
ಇದು ಅವರನ್ನು ಭಾರತೀಯ ವಾಯುಪಡೆಯ ಮುಂಚೂಣಿ ಯುದ್ಧ ತಂತ್ರಜ್ಞರ ( Frontline combat tacticians) ಸಾಲಿನಲ್ಲಿ ಹೆಮ್ಮೆಯಿಂದ ನಿಲ್ಲಿಸಿದೆ. ಹೆಣ್ಣುಮಕ್ಕಳಿಗೆ ಯುದ್ಧಭೂಮಿ ಒಗ್ಗುವು ದಿಲ್ಲ ಎನ್ನುವ ಸಮಾಜದ ಹಳೆಯ ಕಲ್ಪನೆಗಳಿಗೆ, ಆಕಾಶದ ಯುದ್ಧದ ತಂತ್ರಗಳನ್ನು ರೂಪಿಸುವ ಭಾವನಾ ಕಾಂತ್ ಅವರ ಈ ಯಶೋಗಾಥೆ ಒಂದು ದಿಟ್ಟ ಉತ್ತರ. ಅವರು ಭೇದಿಸುತ್ತಿರುವ ಪ್ರತಿಯೊಂದು ಅಡೆತಡೆಗಳೂ, ದೇಶದ ಅಸಂಖ್ಯಾತ ಹೆಣ್ಣು ಮಕ್ಕಳಿಗೆ ಹೊಸ ಭರವಸೆ ಯನ್ನು ನೀಡುತ್ತಿವೆ.
ಬಿಹಾರದ ದರ್ಭಾಂಗದಿಂದ ಶುರುವಾದ ಈ ಪಯಣ, ಇಂದು ಇಡೀ ದೇಶಕ್ಕೆ ಸ್ಪೂರ್ತಿಯಾಗಿದೆ. ಇಂದು ಭಾರತದ ಯಾವುದೇ ಮೂಲೆ ಯಲ್ಲಿರುವ ಒಬ್ಬ ಹೆಣ್ಣುಮಗಳು ಆಕಾಶದತ್ತ ಮುಖಮಾಡಿ ನೋಡಿದಾಗ, ಅವಳ ಕಣ್ಣುಗಳಲ್ಲಿ ಕೇವಲ ಮೋಡಗಳಷ್ಟೇ ಕಾಣುವುದಿಲ್ಲ; ಬದಲಾಗಿ, ಭಾವನಾ ಕಾಂತ್ ಅವರಂತಹ ಧೀರ ಮಹಿಳೆ ಎತ್ತರದಲ್ಲಿ ಹಾರಾಡುತ್ತಿರುವುದು ಕಾಣು ತ್ತದೆ. ತಾನೂ ಕೂಡ ಅಡೆತಡೆಗಳನ್ನು ಮೀರಿ ಆಕಾಶವನ್ನು ಆಳಬಲ್ಲೆ ಎಂಬ ಅಚಲವಾದ ವಿಶ್ವಾಸ ಆಕೆಯ ಮನಸ್ಸಿ ನಲ್ಲಿ ಮೂಡುತ್ತದೆ. ಆಕಾಶದ ಎಲ್ಲೆಗಳನ್ನು ಮೀರಿ ಬೆಳೆಯುತ್ತಿರುವ ಭಾರತೀಯ ವಾಯುಪಡೆಯ ಈ ಹೆಮ್ಮೆಯ ಪುತ್ರಿಗೆ ಇಡೀ ದೇಶದ ಸಲಾಂ!
ನಮ್ಮ ಮನೆಯ ಹೆಣ್ಣು ಮಕ್ಕಳಿಗೆ ಇಂತಹ ನಿದರ್ಶನಗಳನ್ನ ನೀಡಿ ಅವರನ್ನು ಬದುಕಿನಲ್ಲಿ ಗುರಿ ಯತ್ತ ಮುಖ ಮಾಡಿ ಎಂತಹ ಕಷ್ಟವೇ ಬರಲಿ ಅಂದುಕೊಂಡದ್ದನ್ನು ಸಾಧಿಸಬೇಕು ಎಂದು ಪ್ರೇರೇಪಿಸಬೇಕು. ಶಾಲಾ ಕಾಲೇಜುಗಳಲ್ಲಿ ಸುತ್ತಲಿನ ಸಮಾಜದಲ್ಲಿ ನಮ್ಮನ್ನು ಅನು ಮಾನಿಸುವ ನಮ್ಮ ದಾರಿಗೆ ಅಡ್ಡ ಬರುವ ನೂರಾರು ಪ್ರಯತ್ನಗಳು ನಿರಂತರವಾಗಿ ನಡೆದಿರುತ್ತದೆ. ಆದರೆ ಪರಿಶ್ರಮ ನಿಶ್ಚಲವಾದ ಗುರಿ ಇದ್ದಾಗ ಯಾವುದೂ ಅಸಾಧ್ಯವಲ್ಲ.