ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Keshava Prasad B Column: ವರ್ಷದೊಳಗೆ ಸಾಫ್ಟ್‌ʼವೇರ್‌ ಎಂಜಿನಿಯರ್ʼಗಳು ಕಣ್ಮರೆ ?!

‘ಎಐ’ ಭೀತಿ, ಅಮೆರಿಕದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಹಾವಳಿ ಆಘಾತದ ಅಲೆ ಎಬ್ಬಿಸಿದೆ. ‘ಎಸ್ ಆಂಡ್ ಪಿ ನಾರ್ತ್ ಅಮೆರಿಕನ್ ಸಾಫ್ಟ್‌ʼವೇರ್ ಇಂಡೆಕ್ಸ್’ ಜನವರಿ ಒಂದೇ ತಿಂಗಳಿನಲ್ಲಿ 15‌ ಪರ್ಸೆಂಟ್ ಕುಸಿದಿದೆ. 2008ರ ಜಾಗತಿಕ ಹಿಂಜರಿತದ ಕಾಲದ ಕುಸಿತದ ಬಳಿಕ ಇದು ಗರಿಷ್ಠ ಮಟ್ಟದ ಇಳಿಕೆಯಾಗಿದೆ. ಅಂತಾರಾಷ್ಟ್ರೀಯ ಐಟಿ ಕಂಪನಿಗಳ ಮಾರುಕಟ್ಟೆ ಮೌಲ್ಯದಲ್ಲಿ 2 ಲಕ್ಷ ಕೋಟಿ ಡಾಲರ್ ಕರಗಿದೆ.

ವರ್ಷದೊಳಗೆ ಸಾಫ್ಟ್‌ʼವೇರ್‌ ಎಂಜಿನಿಯರ್ʼಗಳು ಕಣ್ಮರೆ ?!

-

ಮನಿ ಮೈಂಡೆಡ್

ಕೃತಕ ಬುದ್ಧಿಮತ್ತೆಯ ಟೂಲ್‌ಗಳ ಪರಿಣಾಮ, ಮಾಹಿತಿ ತಂತ್ರeನ ಕ್ಷೇತ್ರದ ಸಾಂಪ್ರದಾಯಿಕ ಆದಾಯ ಮೂಲಗಳು ಬತ್ತಿ ಹೋಗುವ, ಆರ್ಡರ್‌ಗಳೇ ಸಿಗದಿರುವ ಭೀತಿ ಉಂಟಾಗಿದೆ. ಐಟಿ ಸೆಕ್ಟರ್ ಎಂದರೆ ಕಾರ್ಮಿಕ ಕೇಂದ್ರಿತ ಹೊರಗುತ್ತಿಗೆಯ ಸೇವೆಗಳನ್ನು ನೀಡುವಂಥದು. ಅವುಗಳೇ ಐಟಿ ಕಂಪನಿಗಳ ಆದಾಯ ಮೂಲ. ಆದರೆ ಎಐ ಟೂಲ್‌ಗಳು ಅಗ್ಗದ ವೆಚ್ಚದಲ್ಲಿ ಸಾಫ್ಟ್‌ʼವೇರ್ ಕೋಡಿಂಗ್ ಸೇರಿದಂತೆ ಎಲ್ಲ ಕೆಲಸಗಳನ್ನೂ ಮಾಡಬಲ್ಲವು. ಇದರಿಂದ ಐಟಿ ಕಂಪನಿಗಳ ಅಸ್ತಿತ್ವಕ್ಕೇ ಆತಂಕ ಉಂಟಾಗಿದೆ.

ಸಾಫ್ಟ್‌ʼವೇರ್ ಎಂಜಿನಿಯರ್ ಎಂದರೆ ಎಲ್ಲರಿಗೂ ಹೆಮ್ಮೆ. ಅವರಿಗೆ ಸಿಗೋ ಸಂಬಳ, ಲಕ್ಸುರಿ ಲೈಫ್‌ʼ ಸ್ಟೈಲ್ ಇತರರಿಗೆ ವಿಸ್ಮಯ ಮೂಡಿಸುತ್ತಿತ್ತು. ಆದರೆ ಇದೀಗ ಆಂಥ್ರೊಪಿಕ್, ಜೋಹೊ, ಗೂಗಲ್ ಮುಖ್ಯಸ್ಥರ ಹೇಳಿಕೆಗಳನ್ನು ಕೇಳಿದರೆ ಕಳವಳಕಾರಿಯಾಗಿವೆ. ಒಂದು ವೇಳೆ ಇವರು ಹೇಳುತ್ತಿರುವು ದೆಲ್ಲ ನಿಜವಾದರೆ, ಅದು ಕೇವಲ ಟೆಕ್ಕಿಗಳ ಸಮಸ್ಯೆಯಾಗಿ ಉಳಿಯುವುದಿಲ್ಲ; ಆರ್ಥಿಕ, ಸಾಮಾಜಿಕ, ಜನಜೀವನಕ್ಕೇ ಹೊಡೆತ ನೀಡಲಿದೆ.

ಏಕೆಂದರೆ, ಕೃತಕ ಬುದ್ಧಿಮತ್ತೆ (ಎಐ) ಟೂಲ್‌ಗಳು ಟೆಕ್ಕಿಗಳ ಕೆಲಸಗಳನ್ನು ತಾವೇ ಮಾಡಲಿವೆ! ಹೀಗಾಗಿ ಐಟಿ ಹೊರಗುತ್ತಿಗೆಯನ್ನೇ ನೆಚ್ಚಿಕೊಂಡಿರುವ ಕಂಪನಿಗಳಿಗೆ ಹೊಡೆತ ಬೀಳಲಿದೆ. ಆದರೆ ಒಂದಂತೂ ವಾಸ್ತವ. ಐಟಿ ಹೊರಗುತ್ತಿಗೆ ಇಂಡಸ್ಟ್ರಿಯ ಸಾಂಪ್ರದಾಯಿಕ ಚಹರೆಯೇ ಬದಲಾಗುತ್ತಿದೆ.

“ಇನ್ನು ಕೇವಲ 6-12 ತಿಂಗಳುಗಳಲ್ಲಿ ಸಾಫ್ಟ್‌ʼವೇರ್ ಎಂಜಿನಿಯರಿಂಗ್ ಹುzಗಳು ಬಹುತೇಕ ಅನಗತ್ಯ ವಾಗಲಿವೆ. ಏಕೆಂದರೆ ಹೈಟೆಕ್ ಎಐ ಟೂಲ್‌ಗಳು ಆ ಕೆಲಸಗಳನ್ನು ತಾವೇ ಮಾಡಲಿವೆ" ಎಂದು ಆಂಥ್ರೊಪಿಕ್ ಕಂಪನಿಯ ಸಿಇಒ ಡರಿಯೊ ಅಮೋಡಿ ಅವರು, ದಾವೋಸ್‌ನ ವರ್ಲ್ಡ್ ಇಕನಾಮಿಕ್ ಫೋರಮ್‌ನಲ್ಲಿ ಎಚ್ಚರಿಸಿದ್ದಾರೆ.

“ಎಐ ಟೂಲ್‌ಗಳು ಪ್ರೋಗ್ರಾಮರ್‌ಗಳಿಗೆ ನೆರವಾಗುವುದು ಮಾತ್ರವಲ್ಲದೆ, ವೇಗವಾಗಿ ಬಹುತೇಕ ಕೋಡಿಂಗ್ ಕೆಲಸಗಳನ್ನು ನಿರ್ವಹಿಸಲಿವೆ. ಸಾಫ್ಟ್‌ʼವೇರ್ ಕೋಡ್ ಬರೆಯುವುದು, ‘ಬಗ್’ಗಳನ್ನು ಬಗೆಹರಿಸುವುದು, ಮನುಷ್ಯರ ನೆರವಿಲ್ಲದೆಯೇ ಸಂಪೂರ್ಣವಾಗಿ ಅಪ್ಲಿಕೇಶನ್‌ಗಳನ್ನು ತಯಾರಿಸುವುದು ‘ಎಐ’ಗೆ ಸಾಧ್ಯವಾಗಲಿದೆ.

ಇದನ್ನೂ ಓದಿ: Keshava Prasad B Column: ಇದು ಟ್ರಂಪ್‌ ಅಲ್ಲ, ಪ್ರಧಾನಿ ಮೋದಿಯವರ ಆರ್ಟ್‌ ಆಫ್‌ ಡೀಲ್‌ !

ಟೆಕ್ಕಿಗಳು ಅದನ್ನು ರಿವ್ಯೂ ಮತ್ತು ಫೈನ್ ಟ್ಯೂನ್ ಮಾಡಿದರೆ ಕೆಲಸ ಮುಗಿಯಿತು. ತಾವೇ ಕೋಡಿಂಗ್ ಬರೆಯುತ್ತಾ ಕೂರಬೇಕಿಲ್ಲ" ಎಂದು ಡಿರಿಯೊ ಅಮೋಡಿ ಹೇಳಿದ್ದಾರೆ. ಇದರ ಬೆನ್ನ ಟೆಕ್ ಜಗತ್ತಿನಲ್ಲಿ ಅಲಕಲವಾಗಿದೆ. ಕಳೆದ 8-10 ದಿನಗಳಿಂದ ಜಾಗತಿಕ ಮಾಹಿತಿ ತಂತ್ರಜ್ಞಾನ ಕ್ಷೇತ್ರ ತತ್ತರಿಸಿದೆ.

ಸ್ಟಾಕ್ ಮಾರ್ಕೆಟ್‌ನಲ್ಲಿ ದಿಗ್ಗಜ ಐಟಿ ಕಂಪನಿಗಳ ಮಾರುಕಟ್ಟೆ ಮೌಲ್ಯದಲ್ಲಿ ಭಾರಿ ಕುಸಿತ ಸಂಭವಿಸಿದೆ. ಭಾರತದ ಐಟಿ ಸೆಕ್ಟರ್ ಕಂಪಿಸಿದೆ. ನಿಫ್ಟಿ ಐಟಿ ಇಂಡೆಕ್ಸ್ ಫೆಬ್ರವರಿಯಲ್ಲಿ 8 ಪರ್ಸೆಂಟ್‌ಗೂ ಹೆಚ್ಚು ಕುಸಿದಿದೆ. ಕಂಪನಿಗಳಿಗೆ 2.5 ಲಕ್ಷ ಕೋಟಿ ರುಪಾಯಿ ನಷ್ಟವಾಗಿದೆ.

ಇದರಿಂದ ಟಿಸಿಎಸ್, ಇನ್ಫೋಸಿಸ್ ಮತ್ತು ವಿಪ್ರೊ ಮೊದಲಾದ ಐಟಿ ಕಂಪನಿಗಳ ಮಾರುಕಟ್ಟೆ ಬಂಡವಾಳ ಮೌಲ್ಯ ಇಳಿಯುತ್ತಿದೆ. ಅಮೆರಿಕದ ಆಂಥ್ರೊಪಿಕ್ ಐಟಿ ಕಂಪನಿಯ ಹೊಸ ಆಟೊ ಮೇಷನ್ ಟೂಲ್‌ಗಳು ದಿಗ್ಗಜ ಐಟಿ ಕಂಪನಿಗಳಲ್ಲಿ ನಡುಕ ಸೃಷ್ಟಿಸಿದೆ. ಹೂಡಿಕೆದಾರರು ಭಯಭೀತ ರಾಗಿ ಷೇರುಗಳನ್ನು ಮಾರಾಟ ಮಾಡುತ್ತಿದ್ದಾರೆ.

‘ಎಐ’ ಭೀತಿ, ಅಮೆರಿಕದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಹಾವಳಿ ಆಘಾತದ ಅಲೆ ಎಬ್ಬಿಸಿದೆ. ‘ಎಸ್ ಆಂಡ್ ಪಿ ನಾರ್ತ್ ಅಮೆರಿಕನ್ ಸಾಫ್ಟ್‌ʼವೇರ್ ಇಂಡೆಕ್ಸ್’ ಜನವರಿ ಒಂದೇ ತಿಂಗಳಿನಲ್ಲಿ 15‌ ಪರ್ಸೆಂಟ್ ಕುಸಿದಿದೆ. 2008ರ ಜಾಗತಿಕ ಹಿಂಜರಿತದ ಕಾಲದ ಕುಸಿತದ ಬಳಿಕ ಇದು ಗರಿಷ್ಠ ಮಟ್ಟದ ಇಳಿಕೆಯಾಗಿದೆ. ಅಂತಾರಾಷ್ಟ್ರೀಯ ಐಟಿ ಕಂಪನಿಗಳ ಮಾರುಕಟ್ಟೆ ಮೌಲ್ಯದಲ್ಲಿ 2 ಲಕ್ಷ ಕೋಟಿ ಡಾಲರ್ ಕರಗಿದೆ.

Anthro R

ಹಾಗಾದರೆ ಆಗಿದ್ದೇನು? ಕೃತಕ ಬುದ್ಧಿಮತ್ತೆಯ ಟೂಲ್‌ಗಳ ಪರಿಣಾಮ, ಮಾಹಿತಿ ತಂತ್ರeನ ಕ್ಷೇತ್ರದ ಸಾಂಪ್ರದಾಯಿಕ ಆದಾಯ ಮೂಲಗಳು ಬತ್ತಿಹೋಗುವ, ಆರ್ಡರ್‌ಗಳೇ ಸಿಗದಿರುವ ಭೀತಿ ಉಂಟಾ ಗಿದೆ. ಹೇಳಿಕೇಳಿ ಐಟಿ ಸೆಕ್ಟರ್ ಎಂದರೆ ಕಾರ್ಮಿಕ ಕೇಂದ್ರಿತ ಹೊರಗುತ್ತಿಗೆಯ ಸೇವೆಗಳನ್ನು ನೀಡುತ್ತವೆ. ಅವುಗಳೇ ಐಟಿ ಕಂಪನಿಗಳ ಆದಾಯ ಮೂಲ. ಆದರೆ ಎಐ ಟೂಲ್‌ಗಳು ಅಗ್ಗದ ವೆಚ್ಚದಲ್ಲಿ ಸಾಫ್ಟ್‌ʼವೇರ್ ಕೋಡಿಂಗ್ ಸೇರಿದಂತೆ ಎಲ್ಲ ಕೆಲಸಗಳನ್ನೂ ಮಾಡಬಲ್ಲವು.

ಇದರಿಂದ ಐಟಿ ಕಂಪನಿಗಳ ಅಸ್ತಿತ್ವಕ್ಕೇ ಆತಂಕ ಉಂಟಾಗಿದೆ. ಇತ್ತೀಚೆಗೆ ಅಮೆರಿಕ ಮೂಲದ ಆಂಥ್ರೊಪಿಕ್ ಕಂಪನಿ ಅಭಿವೃದ್ಧಿಪಡಿಸಿರುವ ಎಐ ಟೂಲ್ ಆದ ಕ್ಲಾಡ್ *(Claude)* ಮಾಹಿತಿ ತಂತ್ರಜ್ಞಾನ ವಲಯದಲ್ಲಿ ಸುನಾಮಿಯಂತೆ ಅಪ್ಪಳಿಸಿದೆ. ಈ ‘ಕ್ಲಾಡ್ ಕೋ ವರ್ಕ್ ಏಜೆಂಟ್ ಎಐ ಟೂಲ್’ ಕಾನೂನು, ಸೇಲ್ಸ್, ಮಾರ್ಕೆಟಿಂಗ್, ಡೇಟಾ ಅನಾಲಿಸಿಸ್ ಕ್ಷೇತ್ರದಲ್ಲಿ ತಾನಾಗಿಯೇ ಟಾಸ್ಕ್‌ ಗಳನ್ನು ನಿರ್ವಹಿಸಬಲ್ಲದು. ‌

ಇದು ಐಟಿ ಕಂಪನಿಗಳ ಷೇರುಗಳ ಕುಸಿತಕ್ಕೆ ಕಾರಣವಾಗಿದೆ. ಬ್ರೋಕರೇಜ್ ಮೋತಿಲಾಲ್ ಓಸ್ವಾಲ್ ಪ್ರಕಾರ ಮುಂಬರುವ ನಾಲ್ಕು ವರ್ಷಗಳಲ್ಲಿ ಎಐ ಪರಿಣಾಮ ಐಟಿ ಕಂಪನಿಗಳ ಅದಾಯದಲ್ಲಿ 9-12 ಪರ್ಸೆಂಟ್ ಇಳಿಕೆಯಾಗಲಿದೆ. ಕನ್ನಡಿಗರಾದ ರಾಹುಲ್ ಪಾಟೀಲ್ ಅವರು ಈ ಆಂಥ್ರೊಪಿಕ್ ಕಂಪನಿಯ ಮುಖ್ಯ ತಂತ್ರಜ್ಞಾನ ಅಧಿಕಾರಿ (ಸಿಟಿಒ) ಎಂಬುದು ವಿಶೇಷ.

2025ರ ಅಕ್ಟೋಬರ್‌ನಲ್ಲಿ ಅವರು ಸಿಟಿಒ ಆಗಿ ನೇಮಕವಾಗಿದ್ದರು. ಕ್ಲಾಡ್ ಎಐ ಟೂಲ್ ಅನ್ನು ಅವರೇ ತಯಾರಿಸಿದ್ದು ಅಲ್ಲವಾದರೂ, ತಂಡವನ್ನು ಮುನ್ನಡೆಸುವಲ್ಲಿ ಅವರು ಗಣನೀಯ ಪಾತ್ರ ನಿರ್ವಹಿಸಿದ್ದಾರೆ. ಈ ಕ್ಲಾಡ್ ಕೇವಲ ಚಾಟ್ ಬೋಟ್ ಅಲ್ಲ. ಅದಕ್ಕೂ ಮಿಗಿಲಾದ ಕೆಲಸಗಳನ್ನು ಮಾಡುತ್ತದೆ.

ಐಟಿ ಕಂಪನಿಗಳು ಎಐ ಮೂಲಕ ‘ವೈಬ್ ಕೋಡಿಂಗ್’ ಮಾಡಿ ಸಾಫ್ಟ್‌ʼವೇರ್‌ಗಳನ್ನು ಅಭಿವೃದ್ಧಿಪ ಡಿಸಬಹುದು. ಇದರಿಂದ ದುಬಾರಿ ಸಾಫ್ಟ್‌ʼವೇರ್ ಲೈಸೆನ್ಸ್‌ಗಳು ಮತ್ತು ‘ಸೀಟ್ ಬೇಲ್ಟ್’ ಲೈಸೆನ್ಸಿಂಗ್ ಪದ್ಧತಿಗಳು ಕಂಪನಿಗಳಿಗೆ ಬೇಕಾಗುವುದಿಲ್ಲ. 2025ರಲ್ಲಿ ಸ್ಲೊವಾಕಿಯಾದ ಎಐ ಸಂಶೋಧಕ ಆಂಡ್ರೆ ಕರ್ಪಾಥಿ ಎಂಬುವರು ‘ವೈಬ್ ಕೋಡಿಂಗ್’ ಎಂಬ ಎಐ ಸಾಫ್ಟ್‌ʼವೇರ್ ಮಾದರಿಯನ್ನು ಸಂಶೋಧಿಸಿ ದ್ದರು.

ಇದರ ವಿಶೇಷತೆ ಏನೆಂದರೆ ಸಾಂಪ್ರದಾಯಿಕ ಸಾಫ್ಟ್‌ʼವೇರ್ ಕೋಡ್ ಬರೆಯದೆಯೂ, ಸಹಜ ಭಾಷೆ ಯಲ್ಲಿ ಸಾಫ್ಟ್‌ʼವೇರ್ ಅಪ್ಲಿಕೇಶನ್ʼಗಳನ್ನು ಸೃಷ್ಟಿಸಬಹುದು. ಹೀಗಾಗಿ ಐಟಿ ತಂತ್ರಜ್ಞರಲ್ಲದ ಬಳಕೆ ದಾರರೂ ಸಾಫ್ಟ್‌ʼವೇರ್ ಅಪ್ಲಿಕೇಶನ್‌ಗಳನ್ನು (ಆಪ್) ತಯಾರಿಸಬಹುದು!

ಎಐ ಕೋಡಿಂಗ್ ಟೂಲ್‌ಗಳು ಜನಪ್ರಿಯವಾಗುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಐಟಿ ಸರ್ವೀಸ್ ಇಂಡಸ್ಟ್ರಿ ಕೂಡ ನೇರವಾಗಿ ಆತಂಕದಲ್ಲಿದೆ. ಆದರೆ ಅದೊಂದೇ ಕಾರಣವಲ್ಲ. ಬಹುರಾಷ್ಟ್ರೀಯ ಕಂಪನಿಗಳು ಭಾರತದಲ್ಲಿ ಗ್ಲೋಬಲ್ ಕೇಪಬಿಲಿಟಿ ಸೆಂಟರ್ʼಗಳನ್ನು ಹೆಚ್ಚಿಸುತ್ತಿರುವುದು, ಅಮೆರಿಕದ ರಕ್ಷಣಾತ್ಮಕ ನೀತಿ, ಸೈಬರ್ ಸೆಕ್ಯುರಿಟಿ ಸಮಸ್ಯೆಗಳು ಕೂಡ ಸ್ಥಳೀಯ ಐಟಿ ಕಂಪನಿಗಳಿಗೆ ಸವಾಲಾಗಿ ಪರಿಣಮಿಸಿವೆ.

ಎಂಟ್ರಿ ಲೆವೆಲ್‌ನಲ್ಲಿರುವ ಐಟಿ ಜಾಬ್ಸ್, ‌ಬೇಸಿಕ್ ಕೋಡಿಂಗ್, ನಿಯಮಿತ ಡೇಟಾ ಪ್ರೊಸೆಸಿಂಗ್, ಕಸ್ಟಮರ್ ಸಪೋರ್ಟ್, ಆಡಳಿತಾತ್ಮಕ ಕೆಲಸಗಳು ಕಡಿಮೆಯಾಗಬಹುದು. ಆದರೆ ಎಐ ಆಧಾರಿತ ಹೊಸ ಉದ್ಯೋಗಗಳೂ ಸೃಷ್ಟಿಯಾಗಬಹುದು. ಆದ್ದರಿಂದ ಕೌಶಲ ಕಲಿಕೆ ಇಲ್ಲಿ ಮುಖ್ಯವಾಗುತ್ತದೆ. ಇತಿಹಾಸವನ್ನು ಅವಲೋಕಿಸಿದರೆ, ಕೆಲವು ಉದ್ಯೋಗಗಳು ಕಣ್ಮರೆಯಾಗುತ್ತವೆ. ಆದರೆ ಟೆಕ್ನಾಲಜಿ ಯಗುವ ಪಲ್ಲಟದಿಂದ ಹೊಸ ಕೆಲಸಗಳೂ ಸೃಷ್ಟಿಯಾಗುತ್ತವೆ.

ಈಗ ನೋಡಿ, ಇದುವರೆಗೂ ಹೇಗಿತ್ತು? ಭಾರತದ ಐಟಿ ಹೊರಗುತ್ತಿಗೆಯ ಕಂಪನಿಗಳಾದ ಇನ್ಫೋಸಿಸ್, ಟಿಸಿಎಸ್, ಎಚ್ʼಸಿಎಲ್ ಮೊದಲಾದವುಗಳು ಬಹುರಾಷ್ಟ್ರೀಯ ಕಂಪನಿಗಳಿಗೆ ಐಟಿ ಹೊರಗುತ್ತಿಗೆ ಸೇವೆಯನ್ನು ನೀಡುತ್ತಿದ್ದವು. ಭಾರತದಲ್ಲಿ ಲಕ್ಷಾಂತರ ಟೆಕ್ಕಿಗಳಿಗೆ ಕೆಲಸ ಕೊಟ್ಟಿದ್ದವು. ದೊಡ್ಡ ದೊಡ್ಡ ಔಟ್‌ಸೋರ್ಸ್ ಗುತ್ತಿಗೆಗಳನ್ನು ಪಡೆದು ಬೆಳೆದಿದ್ದವು. ಆದರೆ ಇತ್ತೀಚಿನ ವರ್ಷ ಗಳಲ್ಲಿ ಈ ಟ್ರೆಂಡ್ ಬದಲಾಗುತ್ತಿದೆ! ಎಂಎನ್‌ಸಿಗಳು ಭಾರತದಲ್ಲಿಯೇ ತಮ್ಮ ಗ್ಲೋಬಲ್ ಕೇಪಬಿಲಿಟಿ ಸೆಂಟರ್‌ಗಳನ್ನು ನಿರ್ಮಿಸುತ್ತಿವೆ!

ಪ್ರತಿಭಾವಂತ ಟೆಕ್ಕಿಗಳನ್ನು ನೇರವಾಗಿ ನೇಮಕ ಮಾಡಿಕೊಳ್ಳುತ್ತಿವೆ. ಇದರಿಂದಾಗಿ ಭಾರತದ ಸಾಂಪ್ರದಾಯಿಕ ಥರ್ಡ್ ಪಾರ್ಟಿ ಐಟಿ ಸರ್ವೀಸ್ ಕಂಪನಿಗಳಿಗೆ ಬೇಡಿಕೆ ಕಡಿಮೆಯಾಗುವ ಆತಂಕ ಉಂಟಾಗಿದೆ. ಇದನ್ನೇ ಐಟಿ ಇಂಡಸ್ಟ್ರಿಯ ಚಹರೆಯೇ ಬದಲಾಗುತ್ತಿದೆ ಎನ್ನುತ್ತಿರುವುದು.

ಹೀಗಿದ್ದರೂ, ಐಟಿ ಇಂಡಸ್ಟ್ರಿಯ ಟೆಕ್ಕಿಗಳಿಗೆ ಸಾಂತ್ವನ ಹೇಳಿರುವ ನಾಯಕರು ಇದ್ದಾರೆ. ಜೊಹೊ ಸ್ಥಾಪಕ ಶ್ರೀಧರ್ʼವೆಂಬು ಅವರು ಶೀಘ್ರದ ಸಾಫ್ಟ್‌ʼವೇರ್ ಎಂಜಿನಿಯರಿಂಗ್ ಹುದ್ದೆಗಳು ನಶಿಸಿ ಹೋಗಲಿವೆ ಎಂಬುದನ್ನು ನಂಬುವುದಿಲ್ಲ. ಆದರೂ, ಅಮೋಡಿಯವರ ಎಚ್ಚರಿಕೆಯನ್ನು ಗಂಭೀರ ವಾಗಿ ಪರಿಗಣಿಸಲೂ ಸಲಹೆ ನೀಡಿದ್ದಾರೆ.

ವಿಶ್ವದ ಅತ್ಯಾಧುನಿಕ ಎಐ ಟೂಲ್‌ಗಳನ್ನು ತಯಾರಿಸುತ್ತಿರುವ ಕಂಪನಿಯ ಸಿಇಒ ಅಮೋಡಿ ಆಗಿರುವುದರಿಂದ ಅವರ ಮಾತನ್ನು ತೀರಾ ಕಡೆಗಣಿಸುವಂತಿಲ್ಲ. ಅಗತ್ಯ ಬಿದ್ದರೆ ಪರ್ಯಾಯ ಮಾರ್ಗಗಳನ್ನೂ ಅನುಸರಿಸಲು ಟೆಕ್ಕಿಗಳು ಸಿದ್ಧರಾಗಿರಬೇಕು ಎನ್ನುತ್ತಾರೆ ಅವರು.

ಇನ್ನು ಕೆಲ ತಜ್ಞರ ಪ್ರಕಾರ ಎಐ ಟೂಲ್‌ಗಳು ಕೋಡ್‌ಗಳನ್ನು ವೇಗವಾಗಿ ಬರೆಯಬಹುದಾದರೂ, ಸಂಕೀರ್ಣ ನಿರ್ಧಾರಗಳನ್ನು ಕೈಗೊಳ್ಳುವ ಸಾಮರ್ಥ್ಯವನ್ನು ಸದ್ಯಕ್ಕೆ ಹೊಂದಿಲ್ಲ. ತಕ್ಷಣ ಹುಟ್ಟಿ ಕೊಳ್ಳುವ ಸಮಸ್ಯೆಗಳು ಅವುಗಳಿಗೆ ಅರ್ಥವಾಗದು. ಸಾಫ್ಟ್‌ʼವೇರ್‌ಗಳ ತಯಾರಿಕೆಯ ಸ್ವರೂಪ ಬದಲಾಗಬಹುದು.

ಪ್ರೋಗ್ರಾಮರ್‌ಗಳು ಕೋಡ್ ಬರೆಯುವ ಸಮಯ ಕಡಿಮೆಯಾಗಬಹುದು. ಅದಕ್ಕಿಂತಲೂ ವ್ಯವಸ್ಥೆ ಯ ಪ್ಲಾನಿಂಗ್, ಎಐ ಸೃಷ್ಟಿಸಿದ ಕೆಲಸಗಳನ್ನು ಪರಿಶೀಲಿಸುವುದು, ಉನ್ನತ ಮಟ್ಟದ ಸಮಸ್ಯೆ ಗಳನ್ನು ಬಗೆಹರಿಸುವುದು- ಹೀಗೆ ಬೇರೆ ಕೆಲಸಗಳನ್ನು ಮಾಡಬೇಕಾಗಿ ಬರಬಹುದು.

ಅಂದರೆ ‘ಸಾಫ್ಟ್‌ʼವೇರ್ ಎಂಜಿನಿಯರ್’ ಹುದ್ದೆಯ ಹೆಸರು ಬದಲಾಗಬಹುದು, ಅವರ ಕೌಶಲಗಳಿಗೆ ಬೇಡಿಕೆ ಇದ್ದೇ ಇರುತ್ತದೆ. ಐಎಂಇ ಕ್ಯಾಪಿಟಲ್‌ನ ಸಿಇಒ ಆಶಿ ಆನಂದ್ ಅವರ ಪ್ರಕಾರ, ಐಟಿ ಸ್ಟಾಕ್‌ ಗಳ ಇತ್ತೀಚಿನ ದರ ಕುಸಿತದ ಬಗ್ಗೆ ಆತಂಕ ಪಡಬೇಕಾದ ಅಗತ್ಯವಿಲ್ಲ. ಇದು ಎಐ ಆತಂಕಕ್ಕೆ ಅತಿಯಾದ ರಿಯಾಕ್ಷನ್ ಅಷ್ಟೇ. ಎಐನಿಂದ ದಕ್ಷತೆ ಹೆಚ್ಚಲಿದೆ. ಲಾಭಾಂಶ ಏರಿಕೆಯಾಗಲಿದೆ.

ಇನ್ಫೋಸಿಸ್ ಸ್ಥಾಪಕ ನಾರಾಯಣಮೂರ್ತಿಯವರೂ, “ಎಐ ಟೂಲ್‌ಗಳು ಉತ್ಪಾದಕತೆಯನ್ನು ಹೆಚ್ಚಿಸಲಿವೆ. ಅವು ಉದ್ಯೋಗಗಳನ್ನು ಕಸಿದುಕೊಳ್ಳವು. ಕೋಡಿಂಗ್‌ನ ಗುಣಮಟ್ಟವನ್ನು ಹೆಚ್ಚಿಸಲು ಎಐ ಬಳಸಿಕೊಳ್ಳಿ" ಎಂಬ ಸಲಹೆಯನ್ನು ನೀಡುತ್ತಾರೆ.

ಎನ್‌ವಿಡಿಯಾದ ಸಿಇಒ ಜೆನ್ಸನ್ ಹ್ಯೂಯಾಂಗ್ ಕೂಡ “ಎಐ ತಂತ್ರಜ್ಞಾನವು ಸಾಫ್ಟ್‌ʼವೇರ್ ಅನ್ನು ಸಂಪೂರ್ಣವಾಗಿ ಬದಲಾಯಿಸುತ್ತದೆ ಎನ್ನುವುದು ಜಗತ್ತಿನ ಅತ್ಯಂತ ಅತಾರ್ಕಿಕವಾದ ಹೇಳಿಕೆ ಯಾಗಿದೆ" ಎನ್ನುತ್ತಾರೆ. ಬೆಂಗಳೂರಿನಲ್ಲಿ 25 ಲಕ್ಷ ಟೆಕ್ಕಿಗಳು ಕೆಲಸ ಮಾಡುತ್ತಾರೆ. ದೇಶದ ಐಟಿ ರಫ್ತಿನಲ್ಲಿ 40 ಪರ್ಸೆಂಟ್ ಬೆಂಗಳೂರಿನಿಂದ ಬರುತ್ತಿದೆ. ಕರ್ನಾಟಕದ ಸಾಫ್ಟ್‌ʼವೇರ್ ರಫ್ತಿನ ಮೌಲ್ಯ ವೇ ಬರೋಬ್ಬರಿ 3.2 ಲಕ್ಷ ಕೋಟಿ ರುಪಾಯಿಗಳಾಗಿದೆ. ಆದ್ದರಿಂದ ಐಟಿ ಇಂಡಸ್ಟ್ರಿ ಅತ್ಯಂತ ಪ್ರಬುದ್ಧವಾಗಿದೆ. ಯಾವುದೇ ಆಘಾತಗಳನ್ನು ಜೀರ್ಣಿಸಿಕೊಳ್ಳಬಲ್ಲ ಸಾಮರ್ಥ್ಯವನ್ನು ಗಳಿಸಿದೆ. ಆದರೆ ಬದಲಾವಣೆಗಳಿಗೆ ಹೊಂದಿಕೊಳ್ಳುವುದು ಅನಿವಾರ್ಯ.