Children's Library: ಮಕ್ಕಳಿಂದ ಮಕ್ಕಳಿಗಾಗಿಯೇ ಸಜ್ಜಾದ ʼಮಕ್ಕಳ ಗ್ರಂಥಾಲಯʼ
ತಮ್ಮದೇ ಆಲೋಚನೆಯಿಂದ, ತಮ್ಮದೇ ಪ್ರಯತ್ನದಿಂದ ಮಕ್ಕಳೇ ನಿರ್ಮಿಸಿ ಉದ್ಘಾಟಿಸಿದ ದಿ ಎಂಗ್ ರೀಡರ್ ಎಂಬ ಬೇಸಿಗೆರಜೆ ಗ್ರಂಥಾಲಯ ಒಂದು ಮಾದರಿ ಪ್ರಯೋಗವಾಗಿ ಹೊರಹೊಮ್ಮಿದೆ. ಈ ವಿಶೇಷ ಪ್ರಯತ್ನದ ಹಿಂದೆ ಇದ್ದವರು ಅಥರ್ವ, ಸುಧನ್ವ ಮತ್ತು ಅಗಸ್ತ್ಯ ಎಂಬ ಮೂರು ಚಿಕ್ಕ ಮಕ್ಕಳು. ಓದಿನ ಮೇಲಿನ ಆಸಕ್ತಿ ಹಾಗೂ ಪುಸ್ತಕಗಳ ಮೆಚ್ಚುಗೆ ಇವರನ್ನು ಒಂದು ಹೊಸ ಪ್ರಯೋಗದತ್ತ ಕರೆದೊಯ್ದಿದೆ.
-
ವೈಭವ್ ಸಿ. ಕೊಳ್ಳಿ
ಮಕ್ಕಳಲ್ಲಿ ಸಾಹಿತ್ಯಾಸಕ್ತಿ ಬೆಳೆಸಲು ತ್ಯಾಗರಾಜನಗರದಲ್ಲಿ ವಿನೂತನ ಪ್ರಯತ್ನ
ಮಕ್ಕಳೇ ನಿರ್ವಹಿಸುತ್ತಿರುವ ಗ್ರಂಥಾಲಯ
ಬೆಂಗಳೂರು: ಬೇಸಿಗೆ ರಜೆ ಎಂದರೆ ಸಾಮಾನ್ಯವಾಗಿ ಆಟ, ಮೊಬೈಲ್, ಟಿವಿ ಎನ್ನುವ ಆಲೋಚನೆ ಯಲ್ಲಿಯೇ ಬಹುತೇಕ ಮಕ್ಕಳಿರುತ್ತಾರೆ. ಆದರೆ ಬೆಂಗಳೂರಿನ ತ್ಯಾಗರಾಜನಗರದಲ್ಲಿರುವ ಕೆಲ ಮಕ್ಕಳ ಇದನ್ನು ಮೀರಿ, ಸಾಹಿತ್ಯಾಸಕ್ತಿಯನ್ನು ಬೆಳೆಸಿಕೊಳ್ಳಲು ವಿಶಿಷ್ಟ ಪ್ರಯೋಗ ಇದೀಗ ಗಮನ ಸೆಳೆದಿದೆ.
ತಮ್ಮದೇ ಆಲೋಚನೆಯಿಂದ, ತಮ್ಮದೇ ಪ್ರಯತ್ನದಿಂದ ಮಕ್ಕಳೇ ನಿರ್ಮಿಸಿ ಉದ್ಘಾಟಿಸಿದ ದಿ ಎಂಗ್ ರೀಡರ್ ಎಂಬ ಬೇಸಿಗೆರಜೆ ಗ್ರಂಥಾಲಯ ಒಂದು ಮಾದರಿ ಪ್ರಯೋಗವಾಗಿ ಹೊರಹೊಮ್ಮಿದೆ. ಈ ವಿಶೇಷ ಪ್ರಯತ್ನದ ಹಿಂದೆ ಇದ್ದವರು ಅಥರ್ವ, ಸುಧನ್ವ ಮತ್ತು ಅಗಸ್ತ್ಯ ಎಂಬ ಮೂರು ಚಿಕ್ಕ ಮಕ್ಕಳು. ಓದಿನ ಮೇಲಿನ ಆಸಕ್ತಿ ಹಾಗೂ ಪುಸ್ತಕಗಳ ಮೆಚ್ಚುಗೆ ಇವರನ್ನು ಒಂದು ಹೊಸ ಪ್ರಯೋಗದತ್ತ ಕರೆದೊಯ್ಯದಿದೆ.
ಮನೆಯ ಒಂದು ಕೋಣೆಯನ್ನೇ ಗ್ರಂಥಾಲಯವಾಗಿ ರೂಪಿಸುವ ಆಲೋಚನೆ ಮೊದಲು ಮೂಡಿದ್ದು ಅಥರ್ವನ ಮನಸ್ಸಿನಲ್ಲಿ. ನಂತರ ತನ್ನ ಸಹೋದರರು ಮತ್ತು ಸ್ನೇಹಿತರೊಂದಿಗೆ ಚರ್ಚಿಸಿ, ಇದನ್ನು ಕಾರ್ಯರೂಪಕ್ಕೆ ತರುವ ನಿರ್ಧಾರಕ್ಕೆ ಬಂದಿದ್ದಾರೆ. ಈ ಯೋಜನೆಗೆ ಮನೆಯ ಹಿರಿಯ ಸಿ.ಆರ್ ಮೋಹನಕುಮಾರ್ ಅವರ ಪ್ರೋತ್ಸಾಹ ಮಹತ್ವದ ಪಾತ್ರ ವಹಿಸಿದೆ.
ಇದನ್ನೂ ಓದಿ: Bangalore News: ದಲಿತ ಸಂರಕ್ಷಕ ಸಮಿತಿ ಕರ್ನಾಟಕ ವತಿಯಿಂದ ವಿವಿಧ ಸಾಮಾಜಿಕ ಕಾರ್ಯಕ್ರಮ
ಮೊಮ್ಮಕ್ಕಳ ಆಸೆಯನ್ನು ನೆರವೇರಿಸಲು ತಾತ-ಅಜ್ಜಿ ಸಂಪೂರ್ಣ ಸಹಕಾರ ನೀಡಿದ್ದು, ಪುಸ್ತಕಗಳ ಸಂಗ್ರಹದಿಂದ ಹಿಡಿದು ಪೀಠೋಪಕರಣಗಳ ವ್ಯವಸ್ಥೆವರೆಗೆ ಎಲ್ಲವನ್ನೂ ಅಚ್ಚುಕಟ್ಟಾಗಿ ಸಿದ್ಧಪಡಿಸಿದ್ದಾರೆ.
ಗ್ರಂಥಾಲಯಕ್ಕೆ ದಿ ಎಂಗ್ ರೀಡರ್ ಎಂಬ ಆಕರ್ಷಕ ಹೆಸರನ್ನು ಅಥರ್ವನೇ ಆಯ್ಕೆ ಮಾಡಿ, ಉದ್ಘಾಟನೆ ಮಾಡಿದ್ದು ವಿಶೇಷವಾಗಿದೆ.
ರಾಮಾಯಣ, ಮಹಾಭಾರತ, ಶಂಕರಾಚಾರ್ಯ, ಸ್ವಾಮಿ ವಿವೇಕಾನಂದ ಸೇರಿದಂತೆ ಸಂಸ್ಕೃತಿ ಮತ್ತು ಮೌಲ್ಯಗಳನ್ನು ಪರಿಚಯಿಸುವ ನೂರಕ್ಕೂ ಹೆಚ್ಚು ಪುಸ್ತಕಗಳು ಲಭ್ಯವಿದ್ದು, ಮಕ್ಕಳಲ್ಲಿ ಓದು ಜತೆಗೆ ಸಂಸ್ಕಾರ ಬೆಳೆಸುವ ಪ್ರಯತ್ನ ನಡೆಯುತ್ತಿದೆ. ವಿಶೇಷವೆಂದರೆ, ಈ ಗ್ರಂಥಾಲಯ ಸಂಪೂರ್ಣ ಉಚಿತವಾಗಿದ್ದು, ಮಕ್ಕಳಿಗೆ ಓದಿನ ಆಸಕ್ತಿ ಬೆಳೆಸುವ ಉದ್ದೇಶದಿಂದ ಆರಂಭಿಸಲಾಗಿದೆ.
ಯಾವ ಫೀಸೂ ಇಲ್ಲ, ಎಲ್ಲ ಮಕ್ಕಳೂ ಬರಬಹುದು ಎಂಬ ಸಂದೇಶದೊಂದಿಗೆ ಈ ಪ್ರಯತ್ನ ಇನ್ನಷ್ಟು ಮೆಚ್ಚುಗೆಗೆ ಪಾತ್ರವಾಗಿದೆ. ಅಥರ್ವ ಸದ್ಯ 7ನೇ ತರಗತಿ, ತಮ್ಮ ಸುಧನ್ವ 3ನೇ ತರಗತಿ. ಈ ವಯಸ್ಸಿನಲ್ಲೇ ಈ ರೀತಿಯ ಆಲೋಚನೆ ಮಾಡಿರುವುದು ವಿಶೇಷ. ಈ ಪ್ರಯತ್ನ ಕೇವಲ ಒಂದು ಕುಟುಂಬದ ಚಿಕ್ಕ ಪ್ರಯೋಗ ವಾಗಿರದೇ, ಇಂದಿನ ಡಿಜಿಟಲ್ ಯುಗದಲ್ಲಿ ಮಕ್ಕಳನ್ನು ಪುಸ್ತಕಗಳತ್ತ ತಿರುಗಿಸುವ ಒಂದು ಪ್ರೇರಣಾದಾಯಕ ಹೆಜ್ಜೆಯಾಗಿದೆ.
ಮೊಬೈಲ್ ಮತ್ತು ಟಿವಿಯಿಂದ ದೂರವಿದ್ದು, ಕೈಯಲ್ಲಿ ಪುಸ್ತಕ ಹಿಡಿದು ಓದುತ್ತಿರುವ ಮಕ್ಕಳ ದೃಶ್ಯವೇ ಈ ಪ್ರಯತ್ನದ ದೊಡ್ಡ ಯಶಸ್ಸು. ಈ ರೀತಿಯ ಮಕ್ಕಳೇ ನಡೆಸುತ್ತಿರುವ ಲೈಬ್ರರಿ ಯೋಜನೆ ಇತರ ಪ್ರದೇಶಗಳಿಗೂ ಮಾದರಿಯಾಗಿದ್ದು, ಓದು ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವಲ್ಲಿ ಮಹತ್ವದ ಪಾತ್ರವಹಿಸುತ್ತಿದೆ. ಮಕ್ಕಳ ಸೃಜನಶೀಲತೆ ಮತ್ತು ಸಮಾಜದ ಬೆಂಬಲ ಒಟ್ಟುಗೂಡಿದಾಗ ಎಂತಹ ಅದ್ಭುತ ಸಾಧನೆ ಸಾಧ್ಯವೆಂಬುದಕ್ಕೆ ಇದು ಜೀವಂತ ಉದಾಹರಣೆ ಎನ್ನುವ ಮಾತುಗಳನ್ನು ಸ್ಥಳೀಯರು ಹೇಳುತ್ತಿದ್ದಾರೆ.
ಮಕ್ಕಳ ಲೈಬ್ರೆರಿಯ ವೈಶಿಷ್ಟ್ಯವೇನು?
ಈ ಲೈಬ್ರ್ರೆರಿಯ ವಿಶೇಷವೆಂದರೆ, ಇದನ್ನು ಸಂಪೂರ್ಣವಾಗಿ ಮಕ್ಕಳೇ ನಿರ್ವಹಿಸುತ್ತಿರುವುದು. ಪುಸ್ತಕಗಳನ್ನು ವಿಂಗಡಿಸುವುದರಿಂದ ಹಿಡಿದು, ಓದುಗರಿಗೆ ಮಾರ್ಗದರ್ಶನ ನೀಡುವವರೆಗೆ ಎಲ್ಲಾ ಕಾರ್ಯಗಳನ್ನು ಮಕ್ಕಳು ಜವಾಬ್ದಾರಿಯಿಂದ ನಿರ್ವಹಿಸುತ್ತಿದ್ದಾರೆ. ಇದರಿಂದ ಮಕ್ಕಳಲ್ಲಿ ನಾಯಕತ್ವ ಗುಣ, ಜವಾಬ್ದಾರಿ ಮನೋಭಾವ ಮತ್ತು ಸಂಘಟನೆ ಕೌಶಲ್ಯಗಳು ಬೆಳೆದುಕೊಳ್ಳುತ್ತಿವೆ. ಇಲ್ಲಿ ಮಕ್ಕಳಿಗೆ ವೈಯಕ್ತಿಕ ಮಾರ್ಗದರ್ಶನ ನೀಡಲಾಗುತ್ತಿದ್ದು, ಗುಂಪುಗಳಲ್ಲಿ ಓದು ಹಾಗೂ ಚರ್ಚೆಗಳು ನಡೆಯುತ್ತಿವೆ. ಇದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯಿಗೂ ವಿಶೇಷ ಗಮನ ಸಿಗುತ್ತದೆ.
![]()
ಪ್ರಸ್ತುತ ದಿನವೂ ನಾಲ್ಕರಿಂದ ಐದು ಮಕ್ಕಳು ಲೈಬ್ರರಿಗೆ ಭೇಟಿ ನೀಡಿ, ಪುಸ್ತಕ ಓದು ಹಾಗೂ ಜ್ಞಾನ ವೃದ್ಧಿಗೆ ಬಳಸುತ್ತಿದ್ದಾರೆ. ಲೈಬ್ರರಿ ಆರಂಭವಾದಾಗ ನಮ್ಮ ಬಳಿ ಯಾವುದೇ ದೊಡ್ಡ ಯೋಜನೆ ಇರಲಿಲ್ಲ. ಮನೆಯಲ್ಲಿದ್ದ ಕೆಲವೇ ಪುಸ್ತಕಗಳಿಂದ ಮಕ್ಕಳೇ ಸ್ವಯಂಪ್ರೇರಿತವಾಗಿ ಆರಂಭಿಸಿದ್ದಾರೆ. ಮಕ್ಕಳಲ್ಲಿ ಓದವ ಅಭ್ಯಾಸ ಬೆಳೆಸಬೇಕು, ಜತೆಗೆ ಅವರಲ್ಲಿಆತ್ಮವಿಶ್ವಾಸ ಹೆಚ್ಚಿಸಬೇಕು ಎಂಬುದೇ ನಮ್ಮ ಮುಖ್ಯ ಉದ್ದೇಶ.
- ಮೋಹನ್ ಕುಮಾರ್