ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

CCRI: ಕಾಫಿ ಸಂಶೋಧನಾ ಕೇಂದ್ರಕ್ಕೆ ಶತಮಾನೋತ್ಸವ ಸಂಭ್ರಮ

ಇಂದಿನಿಂದ ಮೂರು ದಿನಗಳು ಕಾಫಿ ಸಂಬಂಧಿತ ವಿವಿಧ ವಿಚಾರಗಳ ಬಗ್ಗೆ ಗೋಷ್ಠಿ, ಪ್ರದರ್ಶನ ಗಳಿಗೆ ಈ ಕೇಂದ್ರ ಸಜ್ಜಾಗಿದೆ. ಭಾರತದ ಕಾಫಿ ಕೃಷಿ ಸಂಶೋಧನೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಕಾಫಿ ನಾಡಿನ ಈ ಹೆಮ್ಮೆಯ ಕೇಂದ್ರದ ಶತಮಾನ ಸಂಭ್ರ ಮಕ್ಕಾಗಿ ಚಿಕ್ಕಮಗಳೂರು ಜಿಲ್ಲೆಯ ಬಾಳೆ ಹೊನ್ನೂರು ಎಂಬ ಪಟ್ಟಣ ಹಬ್ಬದ ಸಂಭ್ರಮದಿಂದ ಸಜ್ಜುಗೊಂಡಿದೆ.

ಕಾಫಿ ಸಂಶೋಧನಾ ಕೇಂದ್ರಕ್ಕೆ ಶತಮಾನೋತ್ಸವ ಸಂಭ್ರಮ

-

Ashok Nayak
Ashok Nayak Dec 20, 2025 4:18 PM

ಅನಿಲ್ ಎಚ್.ಟಿ., ಬಾಳೆಹೊನ್ನೂರು

ಇಂದಿನಿಂದ ಮೂರು ದಿನ ಬಾಳೆಹೊನ್ನೂರಿನಲ್ಲಿ ಸಮಾವೇಶ

ಒಟ್ಟು 15 ಗೋಷ್ಠಿಗಳಲ್ಲಿ ದೇಶವಿದೇಶಗಳ ಕಾಫಿ ಕೃಷಿ ತಜ್ಞರು ಭಾಗಿ

ಏಳು ಕಾಫಿ ಬೀಜಗಳಿಂದ ಏಳು ಲಕ್ಷ ಟನ್ ವೈಭವದ ಭವಿಷ್ಯಕ್ಕಾಗಿ ಟ್ಯಾಗ್ ಲೈನ್

ಕಾಫಿ ಕೃಷಿಯಲ್ಲಿನ ನವ ತಂತ್ರಜ್ಞಾನ, ಕಾಫಿಯ ಸಮಸ್ಯೆಗಳ ಪರಿಹಾರದ ದೃಷ್ಟಿಯಿಂದ 1925 ರಲ್ಲಿ ಚಿಕ್ಕಮಗಳೂರಿನ ಬಾಳೆಹೊನ್ನೂರಿನಲ್ಲಿ ಸ್ಥಾಪಿತವಾದ ರಾಷ್ಟ್ರೀಯ ಕಾಫಿ ಸಂಶೋಧನಾ ಕೇಂದ್ರಕ್ಕೆ ಈಗ ಶತಮಾನದ ಸಂಭ್ರಮ.

ಇಂದಿನಿಂದ ಮೂರು ದಿನಗಳು ಕಾಫಿ ಸಂಬಂಧಿತ ವಿವಿಧ ವಿಚಾರಗಳ ಬಗ್ಗೆ ಗೋಷ್ಠಿ, ಪ್ರದರ್ಶನ ಗಳಿಗೆ ಈ ಕೇಂದ್ರ ಸಜ್ಜಾಗಿದೆ. ಭಾರತದ ಕಾಫಿ ಕೃಷಿ ಸಂಶೋಧನೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಕಾಫಿ ನಾಡಿನ ಈ ಹೆಮ್ಮೆಯ ಕೇಂದ್ರದ ಶತಮಾನ ಸಂಭ್ರ ಮಕ್ಕಾಗಿ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಎಂಬ ಪಟ್ಟಣ ಹಬ್ಬದ ಸಂಭ್ರಮದಿಂದ ಸಜ್ಜುಗೊಂಡಿದೆ.

ಕಾಫಿ ಸಂಶೋಧನಾ ಕೇಂದ್ರಕ್ಕೆ 5 ಕಿ.ಮೀ. ದೂರದಿಂದಲೇ ರಸ್ತೆಯ ಇಕ್ಕೆಲಗಳಲ್ಲಿ ತೋರಣ, ವಿದ್ಯುದ್ದೀಪಾಲಂಕರ, ಮಾಡಲಾಗಿದ್ದು, ಬಾಳೆಹೊನ್ನೂರಿನ ಜನತೆ ತಮ್ಮ ಮನೆಯ ಹಬ್ಬದಂತೆ ಕೇಂದ್ರದ ಶತಮಾನೋತ್ಸವಕ್ಕಾಗಿ ಆಗಮಿಸಲಿರುವ ದೇಶವಿದೇಶಗಳ ಅತಿಥಿ ಗಣ್ಯರನ್ನು ಸ್ವಾಗತಿಸಲು ಸಿದ್ದರಾಗಿದ್ದಾರೆ.

ಮೂರು ದಿನಗಳ ಸಮಾರಂಭಕ್ಕೆ 30 ಸಾವಿರ ಜನರನ್ನು ನಿರೀಕ್ಷಿಸಲಾಗಿದೆ. ಭಾರತೀಯ ಕಾಫಿ ಸಂಶೋಧನಾ ಕೇಂದ್ರದ ಶತಮಾನೋತ್ಸವ ಕಾರ್ಯಕ್ರಮಕ್ಕಾಗಿ ಬಾರತೀಯ ಕಾಫಿ ಮಂಡಳಿಯು ಅಂದಾಜು 3.50 ಕೋಟಿ ರು. ವೆಚ್ಚ ಮಾಡುತ್ತಿದೆ. ಕಾಫಿ ರಫ್ತುದಾರರು, ಕೃಷಿಕರು, ಯಂತ್ರೋಪ ಕರಣಗಳು, ಕಾಫಿ ಕೆಫೆಗಳು, ವ್ಯಾಪಾರೋದ್ಯಮಿಗಳು, ಸಂಶೋಧನಾ ಸಂಸ್ಥೆಗಳಿಗೆ ಮೀಸಲಿಟ್ಟಿರುವ 130 ಪ್ರದರ್ಶನ ಮಳಿಗೆಗಳು ಕೂಡ ಸಾವಿರಾರು ಕೃಷಿಕರ ಮನಸೆಳೆಯಲು ಸಜ್ಜಾಗುತ್ತಿದೆ.

ಇದನ್ನೂ ಓದಿ: India squad for T20 World Cup: 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಗೆ ಭಾರತ ತಂಡ ಪ್ರಕಟ!

ಶತಮಾನೋತ್ಸವದ ಅಂಗವಾಗಿ ಅರೇಬಿಕಾ ಕಾಫಿಯಲ್ಲಿ ಬಿಳಿಕಾಂಡಕೊರಕ ನಿವಾರಕ ಅಂಶ ಹೊಂದಿರುವ ಕುಬ್ಜ ತಳಿಯ ಸೆಲೆಕ್ಷನ್ 15 ಎಂಬ ಹೊಸ ತಳಿಯನ್ನು ಸೆಕ್ಷನ್ 14 ಎಂಬ ತಳಿಯೊಂದಿಗೆ ಕೇಂದ್ರವು ಲೋಕಾರ್ಪಣೆ ಮಾಡುತ್ತಿದೆ. ಈವರೆಗೂ ಈ ಕೇಂದ್ರದಿಂದ 13 ನೂತನ ಕಾಫಿ ತಳಿಗಳು ಬಳಕೆಗೆ ದೊರಕಿರುವುದು ವಿಶೇಷವಾಗಿದೆ.

ಕಾಫಿ ಬೆಳೆಗೆ ಕೀಟಬಾಧೆ ಮತ್ತು ರೋಗಗಳು ಕಾಡತೊಡಗಿದ್ದಾಗ ಅಂದಿನ ಮೈಸೂರು ಸಂಸ್ಥಾನದ ಮಹಾರಾಜ ನಾಲ್ಡಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿಯಿಂದಾಗಿ ಕೊಪ್ಪ ಗ್ರಾಮದಲ್ಲಿ 1925ನೇ ಡಿಸೆಂಬರ್ 15 ರಂದು ಕಾಫಿಗಾಗಿಯೇ ಮೀಸಲಾಗಿರುವ ಪ್ರಯೋಗಾಲದ ಈ ಕೇಂದ್ರ ಸ್ಥಾಪನೆಯಾಯಿತು. 1927ರಲ್ಲಿ ಬಾಳೆಹೊನ್ನೂರಿನ ಈಗಿನ ಸ್ಥಳಕ್ಕೆ ಸ್ಥಳಾಂತರಗೊಂಡಿತ್ತು.

1946ರಲ್ಲಿ ರಾಷ್ಟ್ರೀಯ ಕೇಂದ್ರೀಯ ಕಾಫಿ ಸಂಶೋಧನಾ ಕೇಂದ್ರ ಎಂಬ ಹೆಸರನ್ನು ಇದು ಪಡೆದುಕೊಂಡಿತ್ತು. ಕಳೆದ 1 ಶತಮಾನದಿಂದ ಲಕ್ಷಾಂತರ ಕಾಫಿ ಕೃಷಿಕರಿಗೆ ಅನೇಕ ವಿಧದಲ್ಲಿ ವರದಾನವಾಗಿ ಪರಿಣಮಿಸಿರುವ ಈ ಕೇಂದ್ರವು ಕಾಫಿಗೆ ಸಂಬಂಧಿಸಿದಂತೆ ಸಂಶೋಧನೆಗಳು, ಹೊಸ ತಳಿಯ ಕಾಫಿ ತಳಿಯ ಸೃಷ್ಟಿ, ಕಾಫಿಯ ಗುಣಮಟ್ಟ ಹೆಚ್ಚಳಕ್ಕೆ ಯೋಜನೆ, ಮಣ್ಣಿನ ಗುಣಮಟ್ಟ ಪರೀಕ್ಷೆ, ಕಾಫಿಗೆ ತಗುಲುವ ವಿವಿಧ ರೋಗಗಳಿಗೆ ಪರಿಹಾರ ಸೇರಿದಂತೆ ಭಾರತದಲ್ಲಿಯೇ ಅತ್ಯಾ ಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡ ಪ್ರಾಯೋಗಿಕ ಕೇಂದ್ರವಾಗಿಯೂ ಬಾಳೆಹೊನ್ನೂ ರಿನ ಕಾಫಿ ಸಂಶೋಧನಾ ಕೇಂದ್ರ ಪ್ರಸಿದ್ದಿ ಪಡೆದಿದೆ.

ಶತಮಾನೋತ್ಸವಕ್ಕೆ ಸಚಿವರು, ಗಣ್ಯರು

ಇಂದು ಶನಿವಾರ ಬೆಳಗ್ಗೆ 10 ಗಂಟೆಗೆ ಶತಮಾನೋತ್ಸವ ಸಮಾರಂಭವನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಉದ್ಘಾಟಿಸಲಿದ್ದಾರೆ. ಸಚಿವರಾದ ಕೆ.ಜೆ.ಜಾರ್ಜ್, ಎಸ್.ಎಸ್.ಮಲ್ಲಿಕಾರ್ಜುನ್, ವಿಧಾನಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ, ಮಡಿಕೇರಿ ಶಾಸಕ ಡಾ.ಮಂಥರ್ ಗೌಡ, ಶಾಸಕ ಸುಜಾಕುಶಾಲಪ್ಪ, ಸಂಸದ ಯದುವೀರ್ ಒಡೆಯರ್, ಕೋಟಾ ಶ್ರೀನಿವಾಸ ಪೂಜಾರಿ, ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕರಾದ ರಾಜೇಗೌಡ. ಶ್ರೇಯಸ್ ಪಟೇಲ್, ಎ.ಮಂಜು, ಎಸ್.ಎಲ್. ಬೋಜೇಗೌಡ, ಡಾ.ಧನಂಜಯ್ ಸರ್ಜಿ ಸೇರಿದಂತೆ ಕಾಪಿ ಜಿಲ್ಲೆಗಳ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.

ಸಮಾರೋಪ ಸಮಾರಂಭದಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪಾಲ್ಗೊಳ್ಳಲಿದ್ದಾರೆ. ಶನಿವಾರದಿಂದ ಸೋಮವಾರದವರೆಗೆ ಕೇಂದ್ರದ ಎರಡೂ ಸಭಾಂಗಣಗಳಲ್ಲಿ ದೇಶವಿದೇಶಗಳ ವಿವಿಧ ತಜ್ಞರು, 15 ಗೋಷ್ಠಿಗಳಲ್ಲಿ ಮಾಹಿತಿ ನೀಡಲಿದ್ದಾರೆ.

ಭಾರತದಲ್ಲಿ ಕಾಈ ಬಳಕೆದಾರರ ಹೆಚ್ಚಳ

ದಿನದಿಂದ ದಿನಕ್ಕೆ ಭಾರತದಲ್ಲಿ ಕಾಫಿಯ ಆಂತರಿಕ ಬಳಕೆ ಹೆಚ್ಚಾಗುತ್ತಲೇ ಇರುವುದು ಆಶಾ ದಾಯಕ ಬೆಳವಣಿಗೆಯಾಗಿದೆ. ಕೆಫೆ ಸಂಸ್ಕೃತಿ ಕೂಡ ಕಾಫಿಯ ಬೇಡಿಕೆ ಹೆಚ್ಚಿಸುವಲ್ಲಿ ಪ್ರಮುಖ ಕಾರಣವಾಗಿದೆ. ಸ್ಪೆಶಾಲಿಟಿ ಕಾಫಿಗೂ ಬೇಡಿಕೆ ಕಂಡುಬರುತ್ತಿದೆ. ಇವೆಲ್ಲ ಆಶಾವಾದದ ಮಧ್ಯೆ ಬಾಳೆಹೊನ್ನೂರಿನಲ್ಲಿ ಕಾಫಿಯ ಯಶೋಗಾಥೆಯ ಸಂಭ್ರಮ ಕಂಡು ಬರುತ್ತಿದೆ.

ಭಾರತದಾದ್ಯಂತ ಐದು ಸಂಶೋಧನಾ ಕೇಂದ್ರಗಳು

ಬಾಳೆಹೊನ್ನೂರು ಕಾಫಿ ಸಂಶೋಧನಾ ಕೇಂದ್ರ, ಚೆಟ್ಟಳ್ಳಿಯ ಸಂಶೋಧನಾ ಕೇಂದ್ರ ಸೇರಿದಂತೆ ಭಾರತದಾದ್ಯಂತ ಐದು ಸಂಶೋಧನಾ ಕೇಂದ್ರಗಳು ಕಾಫಿಗಾಗಿಯೇ ಮೀಸಲಿದ್ದು ಇದರಲ್ಲಿ 130 ವಿಜ್ಞಾನಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಬಾಳೆಹೊನ್ನೂರಿನ ಕಾಫಿ ಸಂಶೋಧನಾ ಕೇಂದ್ರದಲ್ಲಿ ಹಲವಾರು ವರ್ಷಗಳಿಂದ ಯೂರೋಪ್, ನೇಪಾಳ, ಶ್ರೀಲಂಕಾ, ಕೀನ್ಯಾ, ಸಿಂಗಾಪುರ ಸೇರಿದಂತೆ ಜಗತ್ತಿನ ವಿವಿಧೆಡೆಗಳ ಕಾಫಿ ಬಗ್ಗೆ ಮಾಹಿತಿ ಕಾರ್ಯಾಗಾರ ಆಯೋಜಿಸುತ್ತಾ ಬರಲಾಗಿದೆ. ಈ ಮೂಲಕ ಭಾರತದ ಕಾಫಿಯನ್ನು ವಿಶ್ವದಗಲಕ್ಕೂ ಪಸರಿಸುವ ಕೈಂಕರ್ಯದಲ್ಲಿಯೂ ಈ ಸಂಶೋ ಧನಾ ಕೇಂದ್ರ ಹೆಸರುವಾಸಿಯಾಗಿದೆ.

ಗಿಡದಿಂದ ಕಾಫಿ ಕಪ್ ವರೆಗೆ

7 ಕಾಫಿ ಬೀಜಗಳಿಂದ 7 ಲಕ್ಷ ಟನ್ ಗಳ ವೈಭವದ ಭವಿಷ್ಯಕ್ಕಾಗಿ .. ಎಂಬ ಧ್ಯೇಯ ವಾಕ್ಯದೊಂದಿಗೆ ಭಾರತೀಯ ಕಾಫಿ ಮಂಡಳಿಯು ಕೇಂದ್ರ ವಾಣಿಜ್ಯ , ಕೈಗಾರಿಕಾ ಸಚಿವಾಲಯದ ಸಹಕಾರದಲ್ಲಿ ಬಾಳೆಹೊನ್ನೂರು ಕಾಫಿ ಸಂಶೋಧನಾ ಕೇಂದ್ರದ ಶತಮಾನೋತ್ಸವ ಸಮಾರಂಭ ಆಯೋಜಿ ಸುತ್ತಿದೆ. ಪ್ರಸ್ತುತ ಬಾರತದ ಕಾಫಿ ಉತ್ಪಾದನೆಯಾಗಿರುವ 3.50 ಲಕ್ಷ ಮೆಟ್ರಿಕ್ ಟನ್ ಗಳಿಂದ 7 ಲಕ್ಷ ಮೆಟ್ರಿಕ್ ಟನ್ ಗಳವರೆಗೆ ಹೆಚ್ಚಿಸಲು ಮುಂದಾಗಲಿದೆ. ಚಿಕ್ಕಮಗಳೂರಿನ ಸಂತ ಬಾಬಾಬುಡನ್ 1670 ರಲ್ಲಿ ಹಜ್ ಯಾತ್ರೆ ಮುಗಿಸಿ ಮರಳುವಾಗ ಕಾಫಿಯ 7 ಬೀಜಗಳನ್ನು ಭಾರತಕ್ಕೆ ರಹಸ್ಯವಾಗಿ ತಂದು ಇಲ್ಲಿನ ಗಿರಿಯಲ್ಲಿ ನೆಡುವ ಮೂಲಕ ಕಾಫಿಯ ಉಗಮಕ್ಕೆ ಕಾರಣನಾದ. ಆ 7 ಬೀಜಗಳನ್ನೇ ಧ್ಯೇಯವಾಕ್ಯದಲ್ಲಿ ಅಳವಡಿಸಿಕೊಂಡು ಭಾರತದ ಕಾಫಿ ಉತ್ಪಾದನೆಯನ್ನು 7 ಲಕ್ಷ ಮಟ್ರಿಕ್ ಟನ್ ಗೆ ಕೊಂಡೊಯ್ಯಲು ಕೃಷಿಕರ ಸಹಕಾರ ಅಗತ್ಯವಾಗಿದೆ. ಗಿಡದಿಂದ ಕಾಫಿ ಕಪ್ ನವರೆಗೆ ಕಾಫಿಯ ಸಮಗ್ರ ಅಭಿವೃದ್ದಿಯೇ ಮಂಡಳಿಯ ಚಿಂತನೆ ಎನ್ನುತ್ತಾರೆ.

-ದಿನೇಶ್ ದೇವವಂದ ಭಾರತೀಯ ಕಾಫಿ ಮಂಡಳಿ ಅಧ್ಯಕ್ಷ

*

ಕಾಫಿಯ ಪ್ರಸ್ತುತ ಬೆಳವಣಿಗೆಗಳಂತೆಯೇ ಮುಂದಿನ 100 ವರ್ಷಗಳಲ್ಲಿ ಕಾಫಿ ಲೋಕದ ಅಗತ್ಯತೆ ಗಳೇನು ಎಂಬ ಬಗ್ಗೆ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಗಮನ ಕೇಂದ್ರೀಕರಿಸುತ್ತಿದ್ದೇವೆ. ಪ್ರಧಾನಿ ಮೋದಿಯವರು ಕಾಫಿಯ ಬಗ್ಗೆ ಮನ್ ಕೀ ಬಾತ್ ನಲ್ಲಿ ಸ್ಮರಿಸಿರುವುದೂ ಕೂಡ ಭವಿಷ್ಯತ್ತಿನ ಕಾಫಿ ಬಗ್ಗೆ ಭರವಸೆ ಮೂಡಿಸಿದೆ. 25 ಪ್ರಾಯೋಗಿಕ ಪ್ರದರ್ಶನ ಮತ್ತೊಂದು ವಿಶೇಷವಾಗಿದೆ.

-ಎಂ. ಕೂರ್ಮರಾವ್, ಕಾರ್ಯದರ್ಶಿ, ಕಾಫಿ ಮಂಡಳಿ