ಕಾಫಿ ಬೆಳೆಗಾರನಿಗೆ ಹೆಜ್ಜೆ ಹೆಜ್ಜೆಗೂ ಆತಂಕ
ಕೊಡಗಿಗೆ ಬರುವ ಪ್ರವಾಸಿಗರು ವನ್ಯಜೀವಿ ನೋಡಬೇಕೆಂದು ಬಯಸಿದರೆ ಇಲ್ಲಿನ ಕಾಪಿ ತೋಟಗಳಿಗೆ ಕರೆದೊಯ್ಯಬಹುದು ಎಂಬುದು ತಮಾಷೆಯ ಮಾತಂತೂ ಅಲ್ಲವೇ ಅಲ್ಲ. ಕೊಡಗಿನ ಕೃಷಿಕರನ್ನು ಆನೆಗಳಲ್ಲಿ ಎಷ್ಟು ವಿಧ ಎಂದು ಕೇಳಿ ನೋಡಿದರೆ ದೊರಕುವ ಉತ್ತರ - ಸಾಕಾನೆ, ಕಾಡಾನೆ ಮತ್ತು ತೋಟದಾನೆ...! ಕಾಡಾನೆ, ಸಾಕಾನೆ ಗೊತ್ತು.
 
                                -
 Ashok Nayak
                            
                                Jun 23, 2025 8:44 AM
                                
                                Ashok Nayak
                            
                                Jun 23, 2025 8:44 AM
                            ಅನಿಲ್ ಎಚ್.ಟಿ. ಮಡಿಕೇರಿ
ಪ್ರಾಣಿಗಳಿಗೆ ತೋಟಗಳೇ ಆಶ್ರಯ ತಾಣ
ಹುಲಿ, ಕರಡಿ, ಆನೆಗಳ ದಾಳಿ ಭಯ
ಪ್ರತಿಯೊಬ್ಬ ಬೆಳೆಗಾರನೂ ಯುದ್ದಕ್ಕೆ ಹೊರಟಂತೆ ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡೇ ತೆರಳ ಬೇಕಾಗಿದೆ. ಯಾವಾಗ ಯಾವ ಮೂಲೆಯಿಂದ ಶತ್ರುಗಳಂತೆ ಆನೆ, ಹುಲಿ, ಕರಡಿ ದಾಳಿ ಮಾಡುತ್ತದೆ ಯೋ ಎಂದು ಗೊತ್ತಾಗದಂಥ ಆತಂಕದ ಪರಿಸ್ಥಿತಿಯಲ್ಲಿ ಬೆಳೆಗಾರನಿರುತ್ತಾನೆ. ನಿಜವಾದ ಅರ್ಥದ ಲ್ಲಿಯೂ ಸೈನಿಕನಂತೆ ಆಗಿಬಿಟ್ಟಿದ್ದಾನೆ...!
ಗಮನಿಸಿ ನೋಡಿದರೆ, ಕೊಡಗಿನ ಬಹುತೇಕ ತೋಟಗಳು ಮೃಗಾಲಯವೇ ಆಗಿಬಿಟ್ಟಿವೆ. ಕಾಡಿನಲ್ಲಿರ ಬೇಕಾದ ವನ್ಯಜೀವಿಗಳು ಕಾಡು ಬಿಟ್ಟು ತೋಟ ಸೇರಿಕೊಂಡು ಬಿಟ್ಟಿದೆ. ಆನೆ, ಹುಲಿ, ಚಿರತೆ, ಕರಡಿ, ನವಿಲು, ಕಾಡೆಮ್ಮೆ, ಕಾಡುಕೋಣ, ಜತೆಗೇ ಸಾವಿರಾರು ಮಂಗಗಳಿಗೂ ಕಾಫಿ ತೋಟಗಳೇ ಆಶ್ರಯ ತಾಣವಾಗಿದೆ.
ಮೂರು ಬಗೆ ಆನೆ ಹಿಂಡು
ಕೊಡಗಿಗೆ ಬರುವ ಪ್ರವಾಸಿಗರು ವನ್ಯಜೀವಿ ನೋಡಬೇಕೆಂದು ಬಯಸಿದರೆ ಇಲ್ಲಿನ ಕಾಪಿ ತೋಟಗಳಿಗೆ ಕರೆದೊಯ್ಯಬಹುದು ಎಂಬುದು ತಮಾಷೆಯ ಮಾತಂತೂ ಅಲ್ಲವೇ ಅಲ್ಲ. ಕೊಡಗಿನ ಕೃಷಿಕರನ್ನು ಆನೆಗಳಲ್ಲಿ ಎಷ್ಟು ವಿಧ ಎಂದು ಕೇಳಿ ನೋಡಿದರೆ ದೊರಕುವ ಉತ್ತರ - ಸಾಕಾನೆ, ಕಾಡಾನೆ ಮತ್ತು ತೋಟದಾನೆ...! ಕಾಡಾನೆ, ಸಾಕಾನೆ ಗೊತ್ತು. ಇದು ಯಾವುದಿದು ತೋಟದಾನೆ ಎಂದರೆ, ನೊಂದ ಬೆಳೆಗಾರ ಹೇಳುತ್ತಾನೆ: ‘ನನ್ನದೇ ತೋಟದಲ್ಲಿ 20 ವರ್ಷಗಳಿಂದ ಬೀಡು ಬಿಟ್ಟಿರುವ ಆನೆಗಳಿವು. ನಾನು ಸಾಕದೇ ಇದ್ದರೂ ನನ್ನ ತೋಟದಲ್ಲಿ ಸಿಕ್ಕುವ ಹಲಸು, ಬಿದಿರು, ಸೊಪ್ಪು ತಿಂದು, ಕೆರೆ ನೀರು ಕುಡಿದು ನೆಮ್ಮದಿಯಿಂದ ಜೀವಿಸುತ್ತಾ ನಮ್ಮ ನೆಮ್ಮದಿ ಹಾಳು ಮಾಡುತ್ತಿವೆ.
ತೋಟದಲ್ಲಿಯೇ ಹುಟ್ಟಿ ಬೆಳೆದ ಅನೇಕ ಆನೆಗಳು 15-20 ವರ್ಷಗಳಿಂದ ಕಾಡನ್ನೇ ನೋಡದೇ ತೋಟಗಳಲ್ಲಿಯೇ ಸುತ್ತಾಡಿಕೊಂಡು ತೋಟವನ್ನೇ ಕಾಡಾಗಿಸಿಕೊಂಡಿವೆ. ಅವು ಅಲ್ಲಿಯೇ ಆನೆಗಳಾಗಿ ಬೆಳೆದಿವೆ. ಇವು ಒಂದರ್ಥ ದಲ್ಲಿ ತೋಟದ ಗಜಪಡೆಗಳಾಗಿ ಬೆಳೆಯುತ್ತವೆ..!
ಇದನ್ನೂ ಓದಿ:Roopa Gururaj Column: ಭಗವಂತನ ಮೇಲೆ ಸಂಪೂರ್ಣವಾದ ನಂಬಿಕೆ
ದಶಕಗಳ ಸಮಸ್ಯೆ
ರಾಜ್ಯದಲ್ಲಿ ಕಾಡಾನೆಗಳ ದಾಂಧಲೆಯ ಸಮಸ್ಯೆಗಳನ್ನು ಮೊದಲು ಎದುರಿಸಿದ್ದೇ ಕೊಡಗು ಜಿಲ್ಲೆ. ಈ ಸಮಸ್ಯೆಗೆ ಈಗ 25-26 ವರ್ಷಗಳಾಗಿದೆ. ನಂತರದ ವರ್ಷಗಳಲ್ಲಿ ಹಾಸನ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ರಾಮನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ ಜಿಲ್ಲೆ ಗಳಲ್ಲಿಯೂ ಕಾಡಾನೆ ದಾಳಿ ಸಮಸ್ಯೆ ವ್ಯಾಪಕ ವಾಯಿತು. ಕೊಡಗಿನಲ್ಲಿ ಮೊದಲು ಸಮಸ್ಯೆ ಕಾಣಿಸಿಕೊಂಡಾಗಲೇ ಈ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಂಡಿದ್ದರೆ ರಾಜ್ಯವ್ಯಾಪಿ ೮ ಜಿಲ್ಲೆಗಳಲ್ಲಿ ಕಾಡಾನೆ ಸಮಸ್ಯೆ ಇಷ್ಟೊಂದು ವ್ಯಾಪಕವಾಗಿ ವಿಸ್ತರಿಸುತ್ತಲೇ ಇರಲಿಲ್ಲ.
ವರ್ಷಕ್ಕೆ ೫೦ ಮಂದಿ ಬಲಿ
ವಿಪಯಾಸ ನೋಡಿ. ಕರ್ನಾಟಕದಲ್ಲಿಯೇ ವರ್ಷಕ್ಕೆ ೪೫-೫೦ ಜನ ಕಾಡಾನೆ ದಾಳಿಯಿಂದ ಸಾವನ್ನಪ್ಪುತ್ತಿದ್ದಾರೆ. ೨೦೦ ಕ್ಕೂ ಅಧಿಕ ಜನ ಕಾಡಾನೆ ದಾಳಿಯಿಂದ ಗಾಯಾಳುಗಳಾಗುತ್ತಿದ್ದಾರೆ. ಕಾಡಾನೆ ದಾಳಿಯಿಂದಾಗಿ ಹಾಸಿಗೆ ಹಿಡಿದಿರುವ ಕೊಡಗಿನ ೬ ಮಂದಿ ಸೇರಿದಂತೆ ರಾಜ್ಯದ ೨೨ ಮಂದಿಯ ಸ್ಥಿತಿ ದಾರುಣವಾಗಿದೆ.
ಸಮಸ್ಯೆಗೆ ಸದಾ ಸಿದ್ಧ ಉತ್ತರ
ಹೀಗಿದ್ದರೂ ರಾಜ್ಯ ಸರಕಾರಕ್ಕೆ ಕಾಡಾನೆ ಸಮಸ್ಯೆ ಎಂಬುದು ಗಂಭೀರ ಸಮಸ್ಯೆಯೇ ಅನ್ನಿಸಿಲ್ಲ. ಮಾನವ-ಕಾಡಾನೆ ಸಂಘರ್ಷ ಎಂಬ ಪ್ರಶ್ನೆ ಎದುರಾದಾಗಲೆಲ್ಲಾ, ಕಾಡಿನಲ್ಲಿ ವನ್ಯಜೀವಿಗಳಿಗೆ ಸೂಕ್ತ ಆಹಾರ ಕಲ್ಪಿಸುತ್ತೇವೆ. ಕಾಡಿನಲ್ಲಿ ಆಹಾರ, ನೀರು ದೊರಕದೇ ವನ್ಯ ಪ್ರಾಣಿಗಳು ನಾಡಿಗೆ ಲಗ್ಗೆ ಇಡುತ್ತಿವೆ ಎಂಬ ಸಿದ್ದ ಸಹಜ ಉತ್ತರ ದೊರಕುತ್ತಲೇ ಇದೆ. ಕಾರ್ಯಪಡೆ ರಚಿಸಿದ್ದೇವೆ, ಸೂಕ್ತ ವಾಹನ ನೀಡಿದ್ದೇವೆ. ನಿಯಂತ್ರಣ ಕೊಠಡಿಗಳು ತೆರೆದಿವೆ ಎಂಬೆಲ್ಲಾ ಉತ್ತರಗಳನ್ನು ಕೇಳಿ ಕೇಳಿ, ಕಿವಿ ಸುಸ್ತಾಗಿದೆ.
ಕಳೆದ ಎರಡೂವರೆ ದಶಕಗಳಿಂದ ಕಾಡಾನೆ ಮತ್ತು ವನ್ಯಜೀವಿ ಸಮಸ್ಯೆಯ ಬಗ್ಗೆ ಆಡಳಿತ ದಲ್ಲಿರುವವರನ್ನು ಪ್ರಶ್ನಿಸಿ ಪತ್ರಕರ್ತರಿಗೂ ಸಾಕಾಗಿ ಹೋಗಿದೆ. ಕಾರ್ಯಪಡೆಯ ವಾಹನಗಳು ಹಳತಾಗಿದೆ. ಸಿಬ್ಬಂದಿ ನಿವೃತ್ತರಾಗುತ್ತಿದ್ದಾರೆ. ಕಾಡೇ ನೋಡದ ಆನೆಗಳನ್ನೇ ಕಾಣದ ಅಧಿಕಾರಿಗಳು ಬೆಂಗಳೂರಿನ ಎಸಿ ರೂಮಿನಲ್ಲಿ ಕುಳಿತು ವನ್ಯಜೀವಿ ಸಮಸ್ಯೆ ಬಗೆಹರಿಸಲು ಹೊಸ ಹೊಸ ಆದೇಶಗಳ ನೀಡುತ್ತಾ ಬಂದಿದ್ದಾರೆ.
ಆನೆ, ಹುಲಿ ಸಂಖ್ಯೆ ಹೆಚ್ಚಳ
ಇತ್ತೀಚೆಗೆ ಸಮಸ್ಯೆ ಬಿಗಡಾಯಿಸಿದೆ. ಕಾಡಾನೆ, ಹುಲಿಗಳ ಸಂಖ್ಯೆ ಗಮನಾರ್ಹ ಹೆಚ್ಚಳವಾಗಿದೆ. ಕಾಫಿ ತೋಟಗಳು ವನ್ಯಜೀವಿಗಳ ತಾಣವಾಗಿದೆ. ತನ್ನದೇ ತೋಟಕ್ಕೇ ತೋಟ ಮಾಲೀಕ ಜೀವ ಭಯದಿಂದ ಕಾಲಿಡಬೇಕಾದ ದುಸ್ಥಿತಿ ಮುಂದುವರೆದೇ ಇದೆ.ರಾಜ್ಯದಲ್ಲಿ ಅರಣ್ಯ ಸಚಿವರಿದ್ದಾರೆ. ರಾಜ್ಯದಲ್ಲಿ ಕಾಡು ಇರುವುದೇ ಅಬ್ಬಬ್ಬಾ ಎಂದರೆ ೮ ಜಿಲ್ಲೆಗಳಲ್ಲಿ ಮಾತ್ರ.ಅರಣ್ಯ ಸಚಿವರಿಗೆ ೮ ಜಿಲ್ಲೆಗಳ ಆಗು ಹೋಗು ಗಮನಿಸಿ ಪರಿಹರಿಸಲು ಏನಿದೆ ಕಷ್ಟ ಎಂದು ಆ ಭಾಗದ ಜನ ಕೇಳುತ್ತಲೇ ಇದ್ದಾರೆ? ಕಳೆದ ಹತ್ತು ವರ್ಷದಲ್ಲಿ ಎಷ್ಟು ಅರಣ್ಯ ಸಚಿವರು ಕೊಡಗಿಗೆ ಭೇಟಿ ನೀಡಿದ್ದಾರೆ. ವನ್ಯ ಜೀವಿಗಳ ದಾಂಧಲೆ ಸಂಬಂಽತ ಕೊಡಗೂ ಸೇರಿದಂತೆ ಮಲೆನಾಡು ಜಿಲ್ಲೆಗಳ ಬೆಳೆಗಾರರ ಜತೆ ಎಷ್ಟು ಬಾರಿ ಚರ್ಚಿಸಿ ದ್ದಾರೆ?ಸಚಿವರ ಸಭೆಗಳು ಏನಿದ್ದರೂ ಅಧಿಕಾರಿಗಳಿಗೆ ಸೀಮಿತ. ಅದೂ ಬೆಂಗಳೂರಿನಲ್ಲಿಯೇ ಮಲೆನಾಡಿನ ಕಾಡಿನ ಬಗ್ಗೆ ಚರ್ಚಿಸಲಾಗುತ್ತಿದೆ.
ಕಾಫಿ ಹಣ್ಣು ಕಾಡಾನೆಗಳ ಪಾಲು
ಕೊಡಗಿನ ಕಾಡಾನೆಗಳ ಬಗ್ಗೆ ಹೇಳುವುದಾದರೆ, ಮೊದಲೆಲ್ಲಾ ತನ್ನ ಎದುರಿಗೆ ಸಿಕ್ಕಿದವರ ಮೇಲೆ ದಾಳಿ ಮಾಡುತ್ತಿದ್ದ ಆನೆಗಳು ಇತ್ತೀಚಿನ ವರ್ಷಗಳಲ್ಲಿ ಎಲ್ಲೆ ಮೀರಿ ದಾಂಧಲೆ ನಡೆಸಿವೆ. ಕಾಫಿ ಹಣ್ಣಿನ ರುಚಿ ಯನ್ನೂ ಸವಿಯಲಾರಂಭಿಸಿವೆ. ಕಾಪಿ ಫಸಲು ಇರುವ ತೋಟಗಳಲ್ಲಿ ಹೆಜ್ಜೆಯಿರಿ ಸುತ್ತಾ ಮನ ಬಂದಂತೆ ಸಾಗಿದಾಗ ನೂರಾರು ಕಾಫಿ ಗಿಡಗಳು ನೆಲಕಚ್ಚುತ್ತವೆ. ಇದಿಷ್ಟೇ ಸಾಲದು ಎಂಬಂತೆ ಇತ್ತೀ ಚಿನ ದಿನಗಳಲ್ಲಿ ಕಾಫಿ ಹಣ್ಣನ್ನೂ ತಿನ್ನುವ ಹೊಟ್ಟೆಬಾಕ ಆನೆಗಳು ಬೆಳೆಗಾರನ ನೆಮ್ಮದಿ ಕಸಿದುಕೊಂಡಿವೆ. ದಕ್ಷಿಣ ಕೊಡಗಿನ ಅನೇಕ ತೋಟಗಳಲ್ಲಿ ಕಾಫಿ ಹಣ್ಣು ಕಾಡಾನೆಗಳ ಪೌಷ್ಟಿಕ ಆಹಾರ ಆಗಿ ಖಾಲಿಯಾಗುತ್ತಿವೆ..!
ಕಾಡಾನೆಗಳ ಸ್ಥಳಾಂತರದ ಪ್ರಸ್ತಾಪವೂ ಸರಕಾರದ ಬಳಿಯಿದೆ. ಆದರೆ ಕೊಡಗಿನ ಮಟ್ಟಿಗೆ ಹೇಳುವಾದದಲ್ಲಿ ಜಿಲ್ಲೆಯಲ್ಲಿ 180 ಕಾಡಾನೆಗಳು ತೋಟಗಳಲ್ಲಿ ದಾಳಿ ನಡೆಸುತ್ತವೆ. ಈ ಬಗ್ಗೆ ಕೇಂದ್ರದ ಗಮನ ಸೆಳೆಯುವಲ್ಲಿ ಕಾಫಿ ಜಿಲ್ಲೆಗಳಿಗೆ ಸೇರಿದ ಸಂಸದರು ಪ್ರಮುಖ ಪಾತ್ರ ವಹಿಸಲೇ ಬೇಕಾಗಿದೆ ಯಾಕೆಂದರೆ ವನ್ಯಜೀವಿಗಳ ವಿಚಾರದಲ್ಲಿ ರಾಜ್ಯ ಸರಕಾರ ಒಂದೇ ನಿರ್ಧಾರ ಕೈಗೊಳ್ಳಲಾಗದು.
ಪರಿಹಾರಗಳೇನು
ಆನೆ ದಾಳಿ ತಡೆಗೆ ರೈಲ್ವೇ ಬ್ಯಾರಿಕೇಡ್ ನಿರ್ಮಾಣ, ಕಂದಕ ತೋಡುವಿಕೆ, ಇದೇ ಪರಿಹಾರೋಪಾಯ ಕೇಳಿಬರುತ್ತಿದೆಯೇ ಹೊರತಾಗಿ ಬೇರೆ ಯಾವುದೇ ಉಪಾಯ ವ್ಯಕ್ತವಾಗುತ್ತಿಲ್ಲ. ಹೊರರಾಜ್ಯಗಳಲ್ಲಿ ಇಂಥ ಸಮಸ್ಯೆ ನಿವಾರಣೆಗೆ ಯಾವೆಲ್ಲಾ ಪರಿಹಾರೋಪಾಯ ಕಂಡು ಹಿಡಿದಿದ್ದಾರೆ ಎಂಬ ಅಧ್ಯ ಯನ ಕೂಡ ಗಂಭೀರವಾಗಿ ಆಗಿಲ್ಲ. ಅರಣ್ಯ ಸಿಬ್ಬಂದಿಗಳಿಗೆ ಸೂಕ್ತ ಸೌಲತ್ತುನೀಡಿ. ಹೆಚ್ಚುವರಿ ಸಿಬ್ಬಂದಿ ಒದಗಿಸಿ, ಸೂಕ್ತ ರೀತಿ ಮಾರ್ಗದರ್ಶನ ನೀಡಬೇಕು. ಇಲ್ಲದೇ ಹೋದರೆ ಬೆಳೆಗಾರನಿಗೆ ಯಾವುದೇ ಪ್ರಯೋಜನ ಆಗದು.
*
ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳು ತಮ್ಮದೇ ಸಿದ್ದಸೂತ್ರದಿಂದ ಹೊರಬದು ವಾಸ್ತವ ನೆಲೆಗಟ್ಟಿನಲ್ಲಿ ಯೋಚಿಸಲೇಬೇಕಾಗಿದೆ. ಕೊಡಗಿನ ಸಮಸ್ಯೆ ಬಗ್ಗೆ ಸಮಗ್ರವಾಗಿ ನಾನೂ ಸಭೆಗಳಲ್ಲಿ ವಾದ ಮಂಡಿಸಿದ್ದೇನೆ. ಎಲ್ಲಿಯ ವರೆಗೂ ಶಾಶ್ವತ ಪರಿಹಾರ ಕಂಡುಕೊಳ್ಳಲು ನಾವೆಲ್ಲಾ ವಿಫಲ ರಾಗುತ್ತೇವೆಯೋ ಅಲ್ಲಿವರೆಗೆ ಬೆಂಗಳೂರಿನಲ್ಲಿ ಕುಳಿತ ಅಧಿಕಾರಿಗಳದ್ದೇ ಅಂತಿಮ ತೀರ್ಮಾನ ಎಂಬಂತಾಗಿದೆ.
-ಸಂಕೇತ್ ಪೂವಯ್ಯ ವನ್ಯಜೀವಿ ಮಂಡಳಿ ಸದಸ್ಯ
 
            