ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Land Record Digitization: ಭೂ ದಾಖಲೆ ಡಿಜಿಟಲೀಕರಣ: ರಾಜ್ಯಕ್ಕೆ ಕಲಬುರಗಿ ಮಾದರಿ

ಕಲಬುರಗಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಸೇರಿ ಒಟ್ಟು 1,38,81,963 ಪುಟಗಳನ್ನು ಡಿಜಿಟಲೀ ಕರಿಸುವ ಗುರಿ ಹೊಂದಲಾಗಿತ್ತು. ಆದರೆ, ನಿರೀಕ್ಷೆ ಗಿಂತಲೂ ಹೆಚ್ಚಿನ ಅಂದರೆ 1,39,41,869 ಪುಟಗಳನ್ನು ಸ್ಕ್ಯಾನ್ ಮಾಡಿ ಸಾಫ್ಟ್‌ʼವೇರ್‌ಗೆ ಅಪ್‌ಲೋಡ್ ಮಾಡಲಾಗಿದೆ. ಈ ಮೂಲಕ ಶೇ.100.40 ರಷ್ಟು ಪ್ರಗತಿ ಸಾಧಿಸಲಾಗಿದೆ.

ಭೂ ದಾಖಲೆ ಡಿಜಿಟಲೀಕರಣ: ರಾಜ್ಯಕ್ಕೆ ಕಲಬುರಗಿ ಮಾದರಿ

-

Profile
Ashok Nayak Mar 29, 2026 11:49 AM

ದೇವೇಂದ್ರ ಜಾಡಿ ಕಲಬುರಗಿ

ಜಿಲ್ಲೆಯಲ್ಲಿ ಶೇ.100ರಷ್ಟು ಡಿಜಿಟಲೀಕರಣ ಪೂರ್ಣ

ಭೂ-ಸುರಕ್ಷಾ ಯೋಜನೆ ಪರಿಣಾಮಕಾರಿ ಅನುಷ್ಠಾನ

ಜಿಲ್ಲಾಡಳಿತಕ್ಕೆ ಮೆಚ್ಚುಗೆ

ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಭೂ-ಸುರಕ್ಷಾ ಯೋಜನೆಯು ಭೂ ದಾಖಲೆಗಳ ಸಂರಕ್ಷಣೆ ಯಲ್ಲಿ ಹೊಸ ಕ್ರಾಂತಿ ಸೃಷ್ಟಿಸುತ್ತಿದೆ. ಕಲಬುರಗಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಈ ಯೋಜನೆ ಯಡಿ ಹಳೆಯ ಭೂ ದಾಖಲೆಗಳ ಸ್ಕ್ಯಾನಿಂಗ್ ಮತ್ತು ಡಿಜಿಟಲೀಕರಣ ಪ್ರಕ್ರಿಯೆ ನೂರಕ್ಕೆ ನೂರ ರಷ್ಟು ಯಶಸ್ವಿಯಾಗಿ ಪೂರ್ಣಗೊಂಡಿದೆ. ಕಲಬುರಗಿ ಜಿಲ್ಲಾಡಳಿತದ ಪರಿಣಾಮಕಾರಿ ನಡೆ ರಾಜ್ಯಕ್ಕೆ ಮಾದರಿ ಆಗಿದೆ. ಇದರ ಫಲವಾಗಿ ಜಮೀನಿನ ಹಳೆ ದಾಖಲೆಗಳಿಗಾಗಿ ರೈತರ ಕಚೇರಿ ಅಲೆದಾಟ ತಪ್ಪಲಿದೆ.

ಚಿಂಚೋಳಿಯಿಂದ ಶುರುವಾದ ಯಶಸ್ಸು: ಮೊದಲು ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕನ್ನು ಪೈಲಟ್ ಯೋಜನೆಯಾಗಿ ಆಯ್ಕೆ ಮಾಡಿಕೊಳ್ಳಲಾಗಿತ್ತು. ಫೆಬ್ರವರಿ 2024ರಿಂದ ಆಗಸ್ಟ್ 2024ರ ಅವಧಿಯಲ್ಲಿ ಸುಮಾರು 16.52 ಲಕ್ಷ ಪುಟಗಳ ದತ್ತಾಂಶವನ್ನು ಡಿಜಿಟಲೀಕರಿಸ ಲಾಯಿತು.

ಈ ಯಶಸ್ಸಿನ ಬೆನ್ನಲ್ಲೇ ಜಿಲ್ಲೆಯ ಉಳಿದ ಎಲ್ಲಾ ತಾಲೂಕುಗಳಿಗೂ ಯೋಜನೆಯನ್ನು ವಿಸ್ತರಿಸ ಲಾಗಿದ್ದು, ಜನವರಿ 2025ರಿಂದ ಪೂರ್ಣ ಪ್ರಮಾಣದ ಕೆಲಸಗಳು ಆರಂಭವಾಗಿದ್ದವು. ಕೇವಲ ಒಂದೂವರೆ ವರ್ಷದ ಅವಧಿಯಲ್ಲಿ ಇಡೀ ಜಿಲ್ಲೆಯನ್ನೇ ಡಿಜಿಟಲ್ ಮಯವಾಗಿಸಿದೆ. ಜೂನ್ 1, 2025ರಿಂದಲೇ ಈ ದಾಖಲೆಗಳು ಡಿಜಿಟಲ್ ಸಹಿಯೊಂದಿಗೆ ಸಾರ್ವಜನಿಕರ ಕೈಸೇರುತ್ತಿರುವುದು ಆಡಳಿತದ ವೇಗಕ್ಕೆ ಹಿಡಿದ ಕನ್ನಡಿಯಾಗಿದೆ.

ಇದನ್ನೂ ಓದಿ: Kalaburagi news: ಜಾತ್ರೆಯ ರಥೋತ್ಸವದ ವೇಳೆ ರಥ ಹರಿದು ಮಹಿಳೆಯ ಕಾಲು ಕಟ್‌

1.39 ಕೋಟಿ ಪುಟಗಳ ದತ್ತಾಂಶ ಲಭ್ಯ: ಕಲಬುರಗಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಸೇರಿ ಒಟ್ಟು 1,38,81,963 ಪುಟಗಳನ್ನು ಡಿಜಿಟಲೀಕರಿಸುವ ಗುರಿ ಹೊಂದಲಾಗಿತ್ತು. ಆದರೆ, ನಿರೀಕ್ಷೆ ಗಿಂತಲೂ ಹೆಚ್ಚಿನ ಅಂದರೆ 1,39,41,869 ಪುಟಗಳನ್ನು ಸ್ಕ್ಯಾನ್ ಮಾಡಿ ಸಾಫ್ಟ್‌ʼವೇರ್‌ಗೆ ಅಪ್‌ ಲೋಡ್ ಮಾಡಲಾಗಿದೆ. ಈ ಮೂಲಕ ಶೇ.100.40 ರಷ್ಟು ಪ್ರಗತಿ ಸಾಧಿಸಲಾಗಿದೆ.

ಈಗಾಗಲೇ ಶೇ. 94.61 ರಷ್ಟು ದಾಖಲೆಗಳನ್ನು ಶಿರಸ್ತೇದಾರರು ಪರಿಶೀಲಿಸಿ ಅನುಮೋದಿಸಿದ್ದು, ಜೂನ್ 1, 2025ರಿಂದಲೇ ಇವು ಡಿಜಿಟಲ್ ಸಹಿಯೊಂದಿಗೆ ಸಾರ್ವಜನಿಕರಿಗೆ ಆನ್‌ಲೈನ್‌ನಲ್ಲಿ ಲಭ್ಯವಾಗುತ್ತಿವೆ.

ಡಿಸಿ ಮತ್ತು ಎಸಿ ಕಚೇರಿಗಳಲ್ಲೂ ಪ್ರಗತಿ: ತಾಲೂಕು ಮಟ್ಟದ ಯಶಸ್ಸಿನ ನಂತರ ಈಗ ಜಿಲ್ಲಾಧಿಕಾರಿ ಮತ್ತು ಉಪವಿಭಾಗಾಧಿಕಾರಿ ಕಚೇರಿಗಳಲ್ಲಿನ ದಾಖಲೆಗಳ ಡಿಜಿಟಲೀಕರಣಕ್ಕೆ ಚಾಲನೆ ನೀಡಲಾಗಿದೆ. ಪ್ರಸ್ತುತ ಕಲಬುರಗಿ ಜಿಲ್ಲೆಯಲ್ಲಿ ಈ ಪ್ರಕ್ರಿಯೆಯು ಶೇ.22.52 ರಷ್ಟು ಪೂರ್ಣ ಗೊಂಡಿದೆ. ಕಲಬುರಗಿ ಡಿಸಿ ಕಚೇರಿಯಲ್ಲಿ ಶೇ.31.50, ಕಲಬುರಗಿ ಎಸಿ ಕಚೇರಿಯಲ್ಲಿ ಶೇ.13.47 ಹಾಗೂ ಸೇಡಂ ಎಸಿ ಕಚೇರಿಯಲ್ಲಿ ಶೇ.11.12 ರಷ್ಟು ಪ್ರಗತಿ ದಾಖಲಾಗಿದೆ.

ನಾಗರಿಕರ ಪೋರ್ಟಲ್: ಸೌಲಭ್ಯಗಳ ಮಾಹಿತಿ: ಭೂ-ಸುರಕ್ಷಾ ಯೋಜನೆಯಡಿ ಡಿಜಿಟಲೀ ಕರಣಗೊಂಡ ದಾಖಲೆಗಳು ಈಗ ನಾಗರಿಕರ ಬೆರಳ ತುದಿಯಲ್ಲಿವೆ. ಸಾರ್ವಜನಿಕರು ಆನ್‌ಲೈನ್ ಪೋರ್ಟಲ್ ಅಥವಾ ನಾಡಕಚೇರಿಗಳ ಮೂಲಕ ಅರ್ಜಿ ಸಲ್ಲಿಸಿ, ಡಿಜಿಟಲ್ ಸಹಿಯಿರುವ ಅಧಿಕೃತ ದಾಖಲೆಗಳನ್ನು ಪಡೆಯಬಹುದು.

ಒಂದು ವೇಳೆ ದಾಖಲೆ ಲಭ್ಯವಿಲ್ಲದಿದ್ದರೆ, ಕೇವಲ 7 ದಿನಗಳಲ್ಲಿ ಡಿಜಿಟೈಸ್ ಮಾಡಿ ನೀಡುವ ಭರವಸೆ ನೀಡಲಾಗಿದೆ. ಇದು ಪಾರದರ್ಶಕತೆ ಹೆಚ್ಚಿಸುವುದಲ್ಲದೆ, ಮಧ್ಯವರ್ತಿಗಳ ಹಾವಳಿ ಮತ್ತು ಕಚೇರಿ ಅಲೆದಾಟವನ್ನು ಸಂಪೂರ್ಣವಾಗಿ ತಪ್ಪಿಸಲಿದೆ.

ಕಲಬುರಗಿಯ ಈ ಯಶಸ್ಸು ರಾಜ್ಯ ಸರಕಾರಕ್ಕೆ ದೊಡ್ಡ ಬಲ ತುಂಬಿದೆ. ಹಿಂದುಳಿದ ಜಿಲ್ಲೆ ಎನ್ನುವ ಹಣೆಪಟ್ಟಿ ಅಳಿಸಿ, ತಂತ್ರಜ್ಞಾನ ಬಳಕೆಯಲ್ಲಿ ಕಲಬುರಗಿ ಮೊದಲ ಸಾಲಿನಲ್ಲಿ ನಿಂತಿರುವುದು ಇಡೀ ರಾಜ್ಯಕ್ಕೆ ಹೆಮ್ಮೆಯ ವಿಷಯ. ಮುಂಬರುವ ದಿನಗಳಲ್ಲಿ ಇತರ ಜಿಲ್ಲೆಗಳಿಗೂ ಕಲಬುರಗಿ ಮಾದರಿ ಯನ್ನು ವಿಸ್ತರಿಸಲು ಸರಕಾರ ಚಿಂತನೆ ನಡೆಸುತ್ತಿದೆ.

ರೈತರ ಸಂಕಷ್ಟಕ್ಕೆ ಡಿಜಿಟಲ್ ಮುಕ್ತಿ

ಈ ಯೋಜನೆಯ ಯಶಸ್ಸಿನಿಂದಾಗಿ ಕಲಬುರಗಿ ಭಾಗದ ರೈತರ ಪಾಲಿಗೆ ಹೊಸ ಭರವಸೆ ಮೂಡಿ ದ್ದು, ಮಧ್ಯವರ್ತಿಗಳ ಹಾವಳಿ ಇಲ್ಲದೆ, ಕಚೇರಿಗಳಿಗೆ ಅಲೆಯುವ ಪ್ರಮೇಯವಿಲ್ಲದೆ ತಮ್ಮ ಜಮೀನಿನ ಹಳೆಯ ದಾಖಲೆಗಳನ್ನು ಆನ್‌ಲೈನ್‌ನಲ್ಲೇ ಪಡೆಯಬಹುದು. ಒಮ್ಮೆ ಡಿಜಿಟಲೀಕರಣ ಗೊಂಡು ಅಧಿಕಾರಿಗಳಿಂದ ಅನುಮೋದನೆ ಪಡೆದ ನಂತರ, ಈ ದಾಖಲೆಗಳಲ್ಲಿ ಯಾವುದೇ ಅಕ್ರಮ ತಿದ್ದುಪಡಿ ಅಥವಾ ವಂಚನೆ ಮಾಡಲು ಸಾಧ್ಯವಿಲ್ಲ. ಭೂ ವಿವಾದಗಳು ಅಥವಾ ಸಾಲ ಸೌಲಭ್ಯ ಗಳಿಗಾಗಿ ಹಳೆಯ ದಾಖಲೆ ಬೇಕಾದಲ್ಲಿ, ಕೇವಲ ಏಳು ದಿನಗಳೊಳಗೆ ಅದು ಸಾರ್ವಜನಿಕರಿಗೆ ಲಭ್ಯವಾಗಲಿದೆ.

ನಾಗರಿಕರಿಗೆ ಏನು ಪ್ರಯೋಜನ?

ಆನ್‌ಲೈನ್ ಲಭ್ಯತೆ: ನಾಗರಿಕರು ತಮ್ಮ ಭೂ ದಾಖಲೆಗಳನ್ನು ಆನ್ ಲೈನ್ ಮೂಲಕ ಅಥವಾ ನಾಡಕಚೇರಿಗಳಲ್ಲಿ ಅರ್ಜಿ ಸಲ್ಲಿಸಿ ಡಿಜಿಟಲ್ ಪ್ರತಿ ಪಡೆಯಬಹುದು.

ತ್ವರಿತ ಸೇವೆ: ದಾಖಲೆಗಳು ಡಿಜಿಟಲ್ ರೂಪದಲ್ಲಿದ್ದರೆ ಅದೇ ದಿನ ಪಡೆಯಬಹುದು. ಒಂದು ವೇಳೆ ಲಭ್ಯವಿಲ್ಲದಿದ್ದರೆ, 7 ದಿನಗಳ ಒಳಗೆ ಡಿಜಿಟೈಸ್ ಮಾಡಿ ನೀಡುವ ಭರವಸೆ ನೀಡಲಾಗಿದೆ.

ಸುರಕ್ಷತೆ: ಈ ದಾಖಲೆಗಳು ಡಿಜಿಟಲ್ ಸಹಿ ಹೊಂದಿರುವುದರಿಂದ ಹೆಚ್ಚು ವಿಶ್ವಾಸಾರ್ಹ. ಇವುಗಳಲ್ಲಿ ಅಕ್ರಮ ಬದಲಾವಣೆ ಅಥವಾ ತಿದ್ದುಪಡಿ ಮಾಡಲು ಸಾಧ್ಯವಿಲ್ಲ.

ವ್ಯವಹಾರಕ್ಕೆ ಸುಲಭ: ಜಮೀನು ಮಾರಾಟ, ಗಿರವಿ ಅಥವಾ ಕಾನೂನು ವಿವಾದಗಳ ಸಂದರ್ಭದಲ್ಲಿ ಈ ದಾಖಲೆಗಳು ಅಧಿಕೃತ ಆಧಾರವಾಗಲಿವೆ.

image

ಭೂ-ಸುರಕ್ಷಾ ಯೋಜನೆಯು ರೈತರ ಭೂ ದಾಖಲೆಗಳ ಸಮಗ್ರತೆಯನ್ನು ಕಾಪಾಡುವಲ್ಲಿ ಮೈಲಿ ಗಲ್ಲಾಗಿದೆ. ಕಲಬುರಗಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ 1.39 ಕೋಟಿಗೂ ಅಧಿಕ ಪುಟಗಳ ಸ್ಕ್ಯಾನಿಂಗ್ ಪೂರ್ಣಗೊಂಡಿದೆ. ಇದು ಅನಧಿಕೃತ ಬದಲಾವಣೆಗಳನ್ನು ತಡೆಯುವುದಲ್ಲದೆ, ನಾಗರಿಕರಿಗೆ ಪಾರದರ್ಶಕ ಮತ್ತು ವಿಶ್ವಾಸಾರ್ಹ ಸೇವೆಯನ್ನು ಒದಗಿಸುತ್ತದೆ. ಬಾಕಿ ಇರುವ ಡಿಸಿ ಮತ್ತು ಎಸಿ ಕಚೇರಿಗಳ ಡಿಜಿಟಲೀಕರಣವನ್ನೂ ಶೀಘ್ರವಾಗಿ ಪೂರ್ಣಗೊಳಿಸಲು ಆದ್ಯತೆ ನೀಡಲಾಗಿದೆ.

-ಫೌಜಿಯಾ ತರನ್ನುಮ್, ಜಿಲ್ಲಾಧಿಕಾರಿ