ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಡಿಕೆ ಆಡಳಿತದಲ್ಲಿ ಡಿಸಿಎಂ ಹುದ್ದೆಗಳಿಗೆ ಕೊಕ್?

ಇನ್ನು ಡಿಸಿಎಂ ಹುದ್ದೆಗಳಿಗೆ ಕಚ್ಚಾಟ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಂಭವನೀಯ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಅವರು ಡಿಸಿಎಂ ಹುದ್ದೆಗಳ ಬಗ್ಗೆ ಆಸಕ್ತಿ ತೋರುತ್ತಿಲ್ಲ ಎಂದು ಮೂಲಗಳು ನಡೆಸಿವೆ. ಉಪಮುಖ್ಯಮಂತ್ರಿ ಹುದ್ದೆಗಳು ಹೆಚ್ಚಾದಷ್ಟು ಆಡಳಿತ ದಲ್ಲಿ ಕಿರಿಕಿರಿ ಉಂಟಾಗುವ ಸಾಧ್ಯತೆಯಿದ್ದು, ಇದರಿಂದ ಸಚಿವರಲ್ಲಿ ಭಿನ್ನಾಭಿಪ್ರಾಯಕ್ಕೆ ದಾರಿಯಾಗಲಿದೆ ಎನ್ನುವುದು ಡಿಕೆಶಿ ಆಪ್ತರ ವಾದ.

ಡಿಕೆ ಆಡಳಿತದಲ್ಲಿ ಡಿಸಿಎಂ ಹುದ್ದೆಗಳಿಗೆ ಕೊಕ್?

-

Profile
Ashok Nayak May 31, 2026 7:31 AM

ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು

ಉಪಮುಖ್ಯಮಂತ್ರಿ ಹುದ್ದೆಗೆ ಭಾರಿ ಪೈಪೋಟಿ

ಕಚ್ಚಾಟ ಹೆಚ್ಚಾದರೆ ಕೈಬಿಡುವ ಚಿಂತನೆ

ಸಂಭವನೀಯ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸರಕಾರದಲ್ಲಿ ಉಪ ಮುಖ್ಯಮಂತ್ರಿ ಹುದ್ದೆಗಳನ್ನು ಕೈ ಬಿಡುವ ಗಂಭೀರ ಚಿಂತನೆ ಶುರುವಾಗಿದೆ. ಕೇವಲ ಎರಡು ಡಿಸಿಎಂ ಹುದ್ದೆಗಳಿಗೆ ಮಾಡಲಾಗಿದ್ದ ಪ್ರಸ್ತಾಪ ದಿನ ಕಳೆದಂತೆ ಪೈಪೋಟಿ ಹೆಚ್ಚಾಗಿ ನಾಲ್ಕೈದು ಡಿಸಿಎಂ ಹುದ್ದೆಗಳವರೆಗೂ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಆ ಪ್ರಸ್ತಾಪವನ್ನು ಕೈಬಿಡಬೇಕು ಎಂದು ಪಕ್ಷದ ವರಿಷ್ಠರು ಆಲೋಚಿಸಿದ್ದಾರೆ ಎನ್ನಲಾಗಿದೆ.

ಈ ಮಧ್ಯೆ ಕಿರಿಯರಿಗೆ ಡಿಸಿಎಂ ಹುದ್ದೆಗಳನ್ನು ನೀಡಿದರೆ ಹಿರಿಯರಿಗೂ ನೀಡಬೇಕಾದ ಅನಿವಾರ್ಯ ಎದುರಾಗುತ್ತದೆ. ಜತೆಗೆ ಸಂಪುಟದಲ್ಲಿ ಅವಕಾಶ ಸಿಗದ ಹಿರಿಯರಿಗೆ ಅಪಮಾನ ಮಾಡಿದಂತಾಗುತ್ತದೆ ಎನ್ನುವ ಹಿನ್ನೆಲೆಯಲ್ಲಿ ಡಿಸಿಎಂ ಹುದ್ದೆಗಳೇ ಬೇಡ ಎನ್ನುವ ಚರ್ಚೆ ಶುರುವಾಗಿದೆ.

ಇನ್ನು ಡಿಸಿಎಂ ಹುದ್ದೆಗಳಿಗೆ ಕಚ್ಚಾಟ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಂಭವನೀಯ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಡಿಸಿಎಂ ಹುದ್ದೆಗಳ ಬಗ್ಗೆ ಆಸಕ್ತಿ ತೋರುತ್ತಿಲ್ಲ ಎಂದು ಮೂಲಗಳು ನಡೆಸಿವೆ. ಉಪಮುಖ್ಯಮಂತ್ರಿ ಹುದ್ದೆಗಳು ಹೆಚ್ಚಾದಷ್ಟು ಆಡಳಿತ ದಲ್ಲಿ ಕಿರಿಕಿರಿ ಉಂಟಾಗುವ ಸಾಧ್ಯತೆಯಿದ್ದು, ಇದರಿಂದ ಸಚಿವರಲ್ಲಿ ಭಿನ್ನಾಭಿಪ್ರಾಯಕ್ಕೆ ದಾರಿಯಾಗಲಿದೆ ಎನ್ನುವುದು ಡಿಕೆಶಿ ಆಪ್ತರ ವಾದ.

ಇದನ್ನೂ ಓದಿ: Vishweshwar Bhat Column: ಅಮೆರಿಕ ಮತ್ತು ಇರಾನ್‌ ಯುದ್ಧಕ್ಕೂ, ಬಿಯರ್‌ ಬಾಟಲಿಗೂ ಏನು ಸಂಬಂಧ ?

ಇದೆಲ್ಲಕ್ಕಿಂತ ಮುಖ್ಯವಾಗಿ ಹೊಸ ಮುಖ್ಯಮಂತ್ರಿ ಅಧಿಕಾರ ಸ್ವೀಕಾರವಾಗಬೇಕು. ನಂತರ ಸಚಿವ ಸಂಪುಟ ವಿಸ್ತರಣೆ ಆಗಬೇಕು. ಆದರೆ ಅದಕ್ಕೂ ಮುನ್ನವೇ ಉಪಮುಖ್ಯಮಂತ್ರಿ ಹುದ್ದೆಗೆ ಕಚ್ಚಾಟ ನಡೆಯುತ್ತಿರುವುದು ಪಕ್ಷದ ವರಿಷ್ಠರಿಗೆ ಹೊಸ ತಲೆನೋವು ತಂದಿದ್ದು, ಸದ್ಯಕ್ಕೆ ಇದರ ಸಹವಾಸವೇ ಬೇಡ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಹೀಗಾಗಿ ಸದ್ಯ ನಿರ್ಧಾರವಾಗಿರುವಂತೆ ಜೂನ್ 3ರಂದು ಸಂಜೆ 5 ಗಂಟೆಗೆ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಪದಗ್ರಹಣ ಮಾಡಲಿದ್ದು, ಜತೆಗೆ 10 ರಿಂದ 15 ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಇದಾದ ನಂತರ ಸಚಿವರಿಗೆ ಖಾತೆ ಹಂಚಿಕೆ ನಡೆಯಲಿದ್ದು, ಆಗ ತೀರಾ ಅನಿವಾರ್ಯ ವಾದರೆ ಮಾತ್ರ ಯತೀಂದ್ರ ಸಿದ್ದರಾಮಯ್ಯ ಹಾಗೂ ಪ್ರಿಯಾಂಕ್ ಖರ್ಗೆ ಅವರಿಬ್ಬರಿಗೆ ಡಿಸಿಎಂ ಹುದ್ದೆ ನೀಡುವ ಬಗ್ಗೆ ಚರ್ಚಿಸುವ ಸಾಧ್ಯತೆ ಇದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

ಏನಿದು ಡಿಸಿಎಂ ಹುದ್ದೆ ಗಲಾಟೆ ಏಕೆ?: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ನಂತರ ನೂತನ ಶಾಸಕಾಂಗ ಪಕ್ಷದ ನಾಯಕನಾಗಿ ಡಿ.ಕೆ.ಶಿವಕುಮಾರ್ ಅವರನ್ನು ಆಯ್ಕೆ ಮಾಡಲಾಗಿದ್ದು, ಅವರ ನೇತೃತ್ವದ ಹೊಸ ಆಡಳಿತ ಇನ್ನೂ ಅಸ್ತಿತ್ವಕ್ಕೇ ಬಂದಿಲ್ಲ. ಆಗಲೇ ಮುಂಬರುವ ಹೊಸ ಸಂಪುಟದಲ್ಲಿ ಡಿಸಿಎಂ ಹುದ್ದೆಗೆ ಕಚ್ಚಾಟ ಶುರುವಾಗಿದೆ. ಆರಂಭಿಕ ಪ್ರಸ್ತಾಪದ ಪ್ರಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಡಿಸಿಎಂ ಹುದ್ದೆ ನೀಡುವ ಬಗ್ಗೆ ಚಿಂತನೆ ಮಾಡಲಾಗಿತ್ತು.

ಆನಂತರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿ ಆಗುವ ಅವಕಾಶ ಕೈತಪ್ಪಿದ್ದರಿಂದ ಅವರ ಪುತ್ರ ಪ್ರಿಯಾಂಕ್ ಖರ್ಗೆ ಅವರಿಗೂ ಡಿಸಿಎಂ ಹುದ್ದೆ ನೀಡುವ ಪ್ರಸ್ತಾಪ ಮಾಡಲಾಗಿತ್ತು. ನಂತರದಲ್ಲಿ ಪಕ್ಷದ ಹಿರಿತನವನ್ನು ಆಧರಿಸಿ ಮತ್ತು ಜಾತಿ, ಧರ್ಮ ಹಾಗೂ ಪ್ರಾದೇಶಿಕತೆಯನ್ನು ಗಮನದಲ್ಲಿ ಜಮೀರ್ ಅಹಮದ್, ಯು.ಟಿ.ಖಾದರ್, ಕೆ.ಎಚ್.ಮುನಿಯಪ್ಪ, ಎಂ.ಬಿ.ಪಾಟೀಲ್ ಅವರಿಗೂ ಡಿಸಿಎಂ ಹುದ್ದೆ ನೀಡುವ ಚರ್ಚೆಗಳು ಗಂಭೀರವಾಗಿಯೇ ನಡೆದಿತ್ತು. ಹೀಗೆ ಡಿಸಿಎಂ ಹುದ್ದೆ ಪ್ರಸ್ತಾಪಗಳು ಹೆಚ್ಚಾಗುತ್ತಾ ಹೋಗಿ ಕನಿಷ್ಠ 4 ರಿಂದ 7 ಡಿಸಿಎಂ ಹುದ್ದೆಗಳನ್ನು ಸೃಷ್ಟಿಸಬೇಕಾದ ಅನಿವಾರ್ಯ ಎದುರಾಗಿತ್ತು.

ಇದರಿಂದ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಇಬ್ಬರಿಗೂ ಮುಜುಗರವಾಗುವ ಸನ್ನಿವೇಶ ಎದುರಾಗಿತ್ತು ಎನ್ನಲಾಗಿದೆ. ಈ ವಿಷಯ ಪಕ್ಷದ ಹೈಕಮಾಂಡ್ ಗಮನಕ್ಕೂ ಬಂದಿದ್ದರಿಂದ ಸದ್ಯಕ್ಕೆ ಇದರ ಪ್ರಸ್ತಾಪವನ್ನು ಕೈ ಬಿಡಿ, ಆ ನಂತರ ಪರಿಶೀಲಿಸೋಣ ಎಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಡಿಕೆಶಿಗೆ ಆರಂಭಿಕ ಜಯ

ಒಂದೊಮ್ಮೆ ಡಿಪಿಎಂ ಹುದ್ದೆ ಪ್ರಸ್ತಾಪ ಕೈಬಿಡುವುದಾದರೆ ಇದನ್ನು ಡಿ.ಕೆ.ಶಿವಕುಮಾರ್ ಅವರ ಆರಂಭಿಕ ಜಯ ಎನ್ನುವ ಅಭಿಪ್ರಾಯ ಅವರ ಆಪ್ತ ವಲಯ ಹೇಳುತ್ತಿದೆ. ಹಿರಿಯ ಸಚಿವರಲ್ಲಿ ಪೈಪೋಟಿ ಹೆಚ್ಚಾಗಿ ಡಿಸಿಎಂ ಹುದ್ದೆ ಬೇಡ ಎನ್ನುವ ಸ್ಥಿತಿಗೆ ಹೋದರೆ ಅದರಿಂದ ಡಿಕೆಶಿ ಅವರಿಗೆ ಹೆಚ್ಚು ಲಾಭ ತರುವ ಸಾಧ್ಯತೆ ಇದೆ. ಅಂದರೆ ಇರುವ ಅವಧಿ ಯಲ್ಲಿ ಅವರು ಸ್ವತಂತ್ರವಾಗಿ ಮತ್ತು ಸುಗಮವಾಗಿ ಆಡಳಿತ ನಡೆಸಲು ಅವರಿಗೆ ನೆರವಾಗು ತ್ತದೆ ಎನ್ನಲಾಗಿದೆ. ಇನ್ನು ಸರಕಾರದ ಆಡಳಿತಕ್ಕೆ ಸಂಬಂಧಿಸಿದಂತೆ ಸಮನ್ವಯ ಸಮಿತಿ ಗಳನ್ನು ಮಾಡುವುದಕ್ಕೆ ಆಸ್ಪದ ಇರದಂತಾಗುತ್ತದೆ ಎಂದು ಪಕ್ಷದ ಹಿರಿಯರು ವಿಶ್ಲೇಷಿಸಿ ದ್ದಾರೆ.

image

ಡಿಸಿಎಂ ಹುದ್ದೆಗಳನ್ನು ಹೆಚ್ಚು ಮಾಡಿದಷ್ಟು ಆಡಳಿತದಲ್ಲಿ ಗೊಂದಲವಾಗುತ್ತದೆ. ಆದ್ದರಿಂದ ಡಿಸಿಎಂ ಹುದ್ದೆಗಳನ್ನೇ ನೀಡಬಾರದು. ಇದು ಕರ್ನಾಟಕದಲ್ಲಿ ಮಾತ್ರವಲ್ಲ. ಬೇರೆ ಯಾವ ರಾಜ್ಯಗಳಲ್ಲೂ ಇರಬಾರದು.

- ರಾಮಲಿಂಗಾರೆಡ್ಡಿ, ಸಾರಿಗೆ ಸಚಿವ