Sand Mining: ಮರಳು ದಂಧೆ: ಬರಿದಾಗುತ್ತಿದೆ ಕೃಷ್ಣೆಯ ಒಡಲು
ಕಳೆದ ವರ್ಷ ಸಹ ಬರೋಬ್ಬರಿ 7 ಕೋಟಿ ರು.ಮೌಲ್ಯದ ಅಕ್ರಮ ಮರಳು ವಶಕ್ಕೆ ಪಡೆದಿದ್ದರು. ಜತೆಗೆ 2025ರ ಅಂತ್ಯಕ್ಕೆ 94 ಪ್ರಕರಣ ದಾಖಲು ಮಾಡಲಾಗಿತ್ತು. ಆದರೆ, 2026ರ ಆರಂಭದಲ್ಲಿ ಯೇ 22.58 ಕೋಟಿ ಮರಳು ಜಪ್ತಿಯಾಗಿರುವುದು ಕೃಷ್ಣೆ ಒಡಲು ಬಗೆದಿರುವ ಪರಿ ಕುರಿತು ಕಳವಳ ತರಿಸಿದೆ.
-
ವೀರೇಶ ಎಸ್. ಕೆಂಭಾವಿ ಯಾದಗಿರಿ
ಒಂದೇ ತಿಂಗಳಿನಲ್ಲಿ 22.58 ಕೋಟಿ ರುಪಾಯಿ ಮೌಲ್ಯದ ಅಕ್ರಮ ಮರಳು ದಾಸ್ತಾನು ಜಪ್ತಿ
ರಾಜಕೀಯ ನಾಯಕರ ಕರಿನೆರಳಿನಲ್ಲಿ ದಂಧೆ, ಅಸಹಾಯಕರಾಗುತ್ತಿರುವ ಆಡಳಿತ ವರ್ಗ
ಜಿಲ್ಲೆಯ ಕೃಷ್ಣಾ ನದಿ ತೀರದಲ್ಲಿ ಅಕ್ರಮ ಮರಳುಗಾರಿಕೆಗೆ ಬ್ರೇಕ್ ಬೀಳುತ್ತಿಲ್ಲ. ಈ ನಡುವೆ ಭರ್ಜರಿ ಕಾರ್ಯಚರಣೆ ನಡೆಸಿರುವ ಪೊಲೀಸರು ತಿಂಗಳೊಯೊಳಗೆ 22.58 ಕೋಟಿ ರು. ಮೌಲ್ಯದ ಅಕ್ರಮ ದಾಸ್ತಾನು ಮರಳು ವಶಕ್ಕೆ ಪಡೆಯಲಾಗಿದೆ.
ಕೃಷ್ಣಾ ನದಿ ತೀರದ ಟೊಣ್ಣೂರಿನಲ್ಲಿ 5.39 ಕೋಟಿ ರು. ಮೌಲ್ಯದ ಹಾಗೂ ಸುರಪುರ ತಾಲೂಕಿನ ಚೌಡೇಶ್ವರಿಹಾಳ್, ಹೆಮ್ಮಡಗಿ, ಕರ್ನಾಳ್, ಅಡೊಡ್ಡಗಿ ಸೇರಿ ವಿವಿಧ ಕಡೆ ದಾಳಿ ನಡೆಸಿದ ಪೊಲೀಸ್ ಹಾಗೂ ಗಣಿ ಇಲಾಖೆ ಅಧಿಕಾರಿಗಳ ತಂಡವು ಬರೋಬ್ಬರಿ 17.19 ಕೋಟಿ ರು. ಮೌಲ್ಯದ ಮರಳು ದಾಸ್ತಾನನ್ನು ಜಪ್ತಿ ಮಾಡಿದೆ.
ಕಳೆದ ವರ್ಷ ಸಹ ಬರೋಬ್ಬರಿ 7 ಕೋಟಿ ರು.ಮೌಲ್ಯದ ಅಕ್ರಮ ಮರಳು ವಶಕ್ಕೆ ಪಡೆದಿದ್ದರು. ಜತೆಗೆ 2025ರ ಅಂತ್ಯಕ್ಕೆ 94 ಪ್ರಕರಣ ದಾಖಲು ಮಾಡಲಾಗಿತ್ತು. ಆದರೆ, 2026ರ ಆರಂಭದಲ್ಲಿಯೇ 22.58 ಕೋಟಿ ಮರಳು ಜಪ್ತಿಯಾಗಿರುವುದು ಕೃಷ್ಣೆ ಒಡಲು ಬಗೆದಿರುವ ಪರಿ ಕುರಿತು ಕಳವಳ ತರಿಸಿದೆ.
ಅಕ್ರಮ ಮರಳು ದಂಧೆ ನಡೆಯುವ ಪ್ರಮುಖ ಸ್ಥಳಗಳು: ವಡಗೇರಾ ತಾಲೂಕಿನ ಹಯ್ಯಾಳ, ಯಕ್ಷಂತಿ, ಟೊಣ್ಣೂರ್ ಹಾಗೂ ಸುರಪುರ ತಾಲೂಕಿನ ಚೌಡೇಶ್ವರಿಹಾಳ್, ಹೆಮ್ಮಡಗಿ, ಕರ್ನಾಳ್, ಹೇಮನೂರ, ಶೆಳ್ಳಗಿ ಗ್ರಾಮದಲ್ಲಿ ಮರಳು ದಂಧೆ ಅವ್ಯಾಹತವಾಗಿದೆ. ನಿತ್ಯ ಇಲ್ಲಿ ನೂರಾರು ಟಿಪ್ಪರ್‌ಗಳು ಮರಳು ಹೊತ್ತು ರಾಜಾರೋಷವಾಗಿ ಸಂಚರಿಸುತ್ತಿವೆ.
ಇದನ್ನೂ ಓದಿ: Illegal Mining: ಅಕ್ರಮ ಗಣಿಗಾರಿಕೆ ವಿಚಾರಣೆಗೆ ತ್ವರಿತ ನ್ಯಾಯಾಲಯ, ಬಿ ರಿಪೋರ್ಟ್‌ಗಳ ಹಿಂಪಡೆಯಲು ರಾಜ್ಯ ಸರ್ಕಾರ ತೀರ್ಮಾನ
ರಾಜಕೀಯ ನಾಯಕರ ಕರಿನೆರಳಲ್ಲಿ ದಂಧೆ?: ಮೊದಲ್ಲೆಲ್ಲಾ ರಾತ್ರಿ ವೇಳೆ ನಡೆಯುತ್ತಿದ್ದ ಅಕ್ರಮ ಮರಳು ಮಾರಾಟ ದಂಧೆ ಇತ್ತೀಚೆಗೆ ಹಗಲಲ್ಲಿ ಆರಂಭಗೊಂಡಿದೆ. ಇದಕ್ಕೆ ರಾಜಕೀಯ ನಾಯಕರ ಕೃಪಕಟಾಕ್ಷ ಇದೆ ಎನ್ನಲಾಗಿದೆ. ಹೀಗಾಗಿ ಅಧಿಕಾರಿಗಳು ಕೂಡ ಅಸಹಾಯಕರಾಗಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಮರಳುಗಳ್ಳರಿಗೆ ರತ್ನ ಕಂಬಳಿ ಹಾಸಿಕೂಟ್ಟಂತಾಗಿದೆ. ಈ ಮಧ್ಯೆಯೂ ಇತ್ತೀಚಿನ ದಿನಗಳಲ್ಲಿ ಅಧಿಕಾರಿಗಳು ಸಾಕಷ್ಟು ಕಡೆಗಳಲ್ಲಿ ದಾಳಿ ನಡೆಸಿ, ಕೋಟ್ಯಂತರ ರುಪಾಯಿಗಳ ಮೌಲ್ಯದ ಅಕ್ರಮ ಮರಳು ದಾಸ್ತಾನನ್ನು ಜಪ್ತಿ ಮಾಡಿದ್ದಾರೆ.
ಕೃಷ್ಣೆಯ ಒಡಲು ಬಗೆದು ಬರಿದಾಗಿಸುವ ಕಾರ್ಯ ನಿರಂತರವಾಗಿ ನಡೆಯುತ್ತಲಿದೆ. ದಿನನಿತ್ಯ ಮರಳುಗಳ್ಳರ ಹಾವಳಿಗೆ ಗಣಿಗಾರಿಕೆ ಮಾಡುವ ಸುತ್ತಲಿನ ಜನರು ಸಹ ರೋಸಿ ಹೋಗಿದ್ದಾರೆ. ಇನ್ನಾದರೂ ಇದಕ್ಕೆ ಮೂಗುದಾರ ಹಾಕುವ ಕಾರ್ಯ ಆಡಳಿತ ವರ್ಗದಿಂದ ಆಗಬೇಕಿದೆ.
ಕಳೆದ 3 ವರ್ಷದಲ್ಲಿ ದಾಖಲಾದ ಮರಳು ಸಂಬಂಧಿತ ಪ್ರಕರಣಗಳು
2023-110 ಕೇಸ್, 22 ಆರೋಪಿಗಳು
2024-97 ಕೇಸ್, 217 ಆರೋಪಿಗಳು
2025-94 ಕೇಸ್, 201 ಆರೋಪಿಗಳು
![]()
ಕೆಲವೆಡೆ ಅಧಿಕಾರಿಗಳೇ ಈ ದಂಧೆಗೆ ಬೆನ್ನುಲುಬಾಗಿದ್ದಾರೆ ಎನ್ನಲಾಗಿದೆ. ಕೆಲ ಪೊಲೀಸ್ ಅಧಿಕಾರಿಗಳಿಗೆ ಅಕ್ರಮದ ಹೂರಣ ಗೊತ್ತಿದ್ದರೂ ಏನೂ ಮಾಡುತ್ತಿಲ್ಲ. ಅಕ್ರಮ ಮರಳು ದಂಧೆ ನಡೆಸುವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ರೌಡಿ ಶೀಟರ್ ಅಥವಾ ಗಡಿಪಾರು ಮಾಡುವ ರೀತಿ ಆಗಬೇಕು. ಅಂದಾಗ ಮಾತ್ರ ಉಳಿದವರಿಗೂ ಜಿಲ್ಲಾಡಳಿತ ನೀಡುವ ಶಿಕ್ಷೆ ಎಚ್ಚರಿಕೆ ಗಂಟೆಯಾಗುತ್ತದೆ.
- ಟಿ.ಎನ್.ಭೀಮುನಾಯಕ ಕರವೇ ಜಿಲ್ಲಾಧ್ಯಕ್ಷ, ಯಾದಗಿರಿ
![]()
ಅಕ್ರಮ ಮರಳು ದಂಧೆ ತಡೆಗೆ ಕಡಿವಾಣ ಹಾಕುತ್ತಿದ್ದೇವೆ. ಅಕ್ರಮ ಮರಳು ಸಂಗ್ರಹ ಮಾಡುವ ಸ್ಥಳಗಳ ಮೇಲೆ ನಿಗಾ ಇಡಲಾಗಿದೆ. ಅಕ್ರಮ ಮರಳು ಸಂಬಂಧ ಮಾಹಿತಿ ಅಥವಾ ದೂರು ಬಂದ ಕೂಡಲೇ ಕಾರ್ಯ ಪ್ರವೃತ್ತರಾಗಿ ಕ್ರಮ ಜರುಗಸಲಾಗುತ್ತಿದೆ. ಅಲ್ಲದೇ ಟ್ರಾಕ್ಟರ್, ಜೆಸಿಬಿ ಸೇರಿ 20 ವಾಹನಗಳ ನೋಂದಣಿ ರದ್ದುಪಡಿಸಲಾಗಿದೆ.
- ಪೃಥ್ವಿಕ್ ಶಂಕರ್ ಎಸ್‌ಪಿ, ಯಾದಗಿರಿ