ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

West Bengal Election ground report by Raghav Sharma Nidle: ಬಂಗಾಳದ ರಣಕಣದಲ್ಲಿ ನಾನು ಕಂಡದ್ದು, ಕೇಳಿದ್ದು...

ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಯಾರು ಏನೇ ಹೇಳಲಿ, ಅವರು ದೇಶದ ಶ್ರೀಸಾಮಾನ್ಯ‌ ರೊಂದಿಗೆ ನೇರ ಕನೆಕ್ಟ್ ಆಗುವುದರಿಂದಲೇ ದೇಶಾದ್ಯಂತ ತಮ್ಮ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡಿ ದ್ದಾರೆ, ಜನರ ಪ್ರೀತಿ ಮತ್ತು ವಿಶ್ವಾಸವನ್ನು ಗಳಿಸಿದ್ದಾರೆ ಎನ್ನುವುದಕ್ಕೆ ಪಶ್ಚಿಮ ಬಂಗಾಳ ಕೂಡ ಸಾಕ್ಷಿಯಾಯಿತು.

ಬಂಗಾಳದ ರಣಕಣದಲ್ಲಿ ನಾನು ಕಂಡದ್ದು, ಕೇಳಿದ್ದು...

-

ಗ್ರೌಂಡ್‌ ರಿಪೋರ್ಟ್‌

ವಿಶ್ವವಾಣಿ ಬಂಗಾಳ ಚುನಾವಣಾ ಯಾತ್ರೆ

ತನ್ನ ಇತಿಹಾಸದ ಅತಿಹೆಚ್ಚು ಪ್ರಮಾಣದ ಮತದಾನಕ್ಕೆ ಸಾಕ್ಷಿಯಾಗಿರುವ ಪಶ್ಚಿಮ ಬಂಗಾಳ, ಮೇ 4ರಂದು ಬಿಜೆಪಿ ಮತ್ತು ಟಿಎಂಸಿಯ ಹಣೆಬರಹವನ್ನು ಹೊರಹಾಕಲಿದೆ. ಎರಡೂ ಪಕ್ಷಗಳ ನಡುವೆ ವಿಪರೀತ ಚುನಾವಣಾ ಹಣಾಹಣಿ ನಡೆದ ಈ ರಾಜ್ಯದಲ್ಲಿ ಬಿಜೆಪಿಗೆ ಹೊಸ ಇತಿಹಾಸ ಬರೆಯ ಬೇಕೆಂಬ ಆಶಯವಿದ್ದರೆ, ಹ್ಯಾಟ್ರಿಕ್ ಸಾಧನೆ ಬಳಿಕ ನಾಲ್ಕನೇ ಬಾರಿಗೆ ಅಧಿಕಾರದ ಗದ್ದುಗೆ ಏರಲು ಟಿಎಂಸಿ ತೀವ್ರ ಹೋರಾಟ ಮಾಡಿದೆ.

ದೇಶದ ಗಮನ ಸೆಳೆದ ಈ ರಾಜ್ಯದಲ್ಲಿ ಪ್ರವಾಸ ಮಾಡಿದ ‘ವಿಶ್ವವಾಣಿ’ ವಿಶೇಷ ಪ್ರತಿನಿಧಿ ರಾಘವ ಶರ್ಮ ನಿಡ್ಲೆ ಅವರು ಅಲ್ಲಿ ತಮಗೆ ಕಂಡ 10 ಕುತೂಹಲಕಾರಿ ಅಂಶಗಳನ್ನು ಇಲ್ಲಿ ದಾಖಲಿಸಿದ್ದಾರೆ.

ಮೋದಿ-ಕಾಮನ್‌ಮ್ಯಾನ್ ಕನೆಕ್ಟ್

Screenshot_3

ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಯಾರು ಏನೇ ಹೇಳಲಿ, ಅವರು ದೇಶದ ಶ್ರೀಸಾಮಾನ್ಯ‌ ರೊಂದಿಗೆ ನೇರ ಕನೆಕ್ಟ್ ಆಗುವುದರಿಂದಲೇ ದೇಶಾದ್ಯಂತ ತಮ್ಮ ಜನಪ್ರಿಯತೆಯನ್ನು ಹೆಚ್ಚಿಸಿ ಕೊಂಡಿದ್ದಾರೆ, ಜನರ ಪ್ರೀತಿ ಮತ್ತು ವಿಶ್ವಾಸವನ್ನು ಗಳಿಸಿದ್ದಾರೆ ಎನ್ನುವುದಕ್ಕೆ ಪಶ್ಚಿಮ ಬಂಗಾಳ ಕೂಡ ಸಾಕ್ಷಿಯಾಯಿತು.

ಜಾರ್‌ಗ್ರಾಮ್‌ನಲ್ಲಿ ಚುನಾವಣಾ ಪ್ರಚಾರ ಮುಗಿಸಿದ ಬಳಿಕ ಅವರು ಓರ್ವ ಬಡ ಜಾಲ್ಮುರಿ (ಚುರುಮುರಿ) ವ್ಯಾಪಾರಿ ಬಳಿ ತೆರಳಿ, ಅವನಿಂದ ಜಾಲ್ಮುರಿ ಮಾಡಿಸಿಕೊಂಡು ತಿಂದರು ಮತ್ತು ಅದನ್ನು ಅಲ್ಲಿದ್ದವರೊಂದಿಗೂ ಹಂಚಿಕೊಂಡರು. ಇದು ಸಾಮಾಜಿಕ ಜಾಲತಾಣಗಳಲ್ಲೂ ಭಾರಿ ಹವಾ ಎಬ್ಬಿಸಿತು.

ಇದನ್ನೂ ಓದಿ: West Bengal Election ground report by Raghav Sharma Nidle: ಅಭಿಷೇಕ್‌ ಬ್ಯಾನರ್ಜಿ ಭದ್ರಕೋಟೆಗೆ ಲಗ್ಗೆ ಸಾಧ್ಯವೇ ?

ಜನಸಾಮಾನ್ಯರಿಗೆ ‘ಪ್ರಧಾನಿ ನಮ್ಮ ಮನೆ-ಅಂಗಡಿ ಮುಂದೆ ಬಂದರು’ ಎನ್ನುವುದೇ ಜೀವನದ ಅತ್ಯಂತ ಸ್ಮರಣೀಯ, ದೈವಿಕ ಕ್ಷಣವಾಗಿ ಬಿಡುತ್ತದೆ. ಜಾರ್ʼಗ್ರಾಮ್ ಮತದಾರರು ಕೂಡ ಇಂಥದ್ದೇ ಸಂಭ್ರಮದ ಅಲೆಯಲ್ಲಿ ತೇಲಿದರು. ಮೋದಿ ವಿರೋಧಿಗಳು ಇದನ್ನು ‘ಪಬ್ಲಿಸಿಟಿ ಸ್ಟಂಟ್’ ಎಂದೆ ಮೂದಲಿಸಿದರು. ಆದರೆ, ಶ್ರೀಸಾಮಾನ್ಯ ಮಾತ್ರ ಇದನ್ನು ಬೇರೆಯದೇ ರೀತಿಯಲ್ಲಿ ಗ್ರಹಿಸುತ್ತಾನೆ ಮತ್ತು ನೋಡುತ್ತಾನೆ.

ಇದು ಪ್ರಧಾನಿ ಮೋದಿಯವರಿಗೂ ತಿಳಿದಿದ್ದು, ಬಡ ಮತವರ್ಗವನ್ನು ಅವರು ಇದೇ ರೀತಿಯಲ್ಲಿ ತಲುಪುತ್ತಾ, ತಮ್ಮ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಲೇ ಇದ್ದಾರೆ.

ಸಯಾನಿ ಘೋಷ್ ಆಕರ್ಷಣೆ

ಸಯಾನಿ

ಬಂಗಾಳದಲ್ಲಿ ಮಮತಾ ಬ್ಯಾನರ್ಜಿಯವರ ಉತ್ತರಾಧಿಕಾರಿ ಯಾರು? ಎಂಬ ಪ್ರಶ್ನೆ ಬಂದಾಗ ಎರಡು ಹೆಸರು ಕೇಳಿ ಬರುತ್ತವೆ. ಸಿಎಂ ಮಮತಾ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರ ಬಗ್ಗೆ ಒಂದಿಷ್ಟು ಮಂದಿ ಚರ್ಚೆ ಮಾಡಿದರೆ, ಅಚ್ಚರಿ ಎಂಬಂತೆ ಮತ್ತೆ ಕೆಲವರು 33 ವರ್ಷದ, ಜಾಧವಪುರ ಲೋಕಸಭಾ ಕ್ಷೇತ್ರದ ಸಂಸದೆ ಸಯಾನಿ ಘೋಷ್ ಹೆಸರನ್ನು ಉಲ್ಲೇಖಿಸುತ್ತಾರೆ. ಮಮತಾ ಬ್ಯಾನರ್ಜಿ ರೀತಿಯಂತೆ ಎದುರಾಳಿಗಳನ್ನು ತಮ್ಮದೇ ವಿಶಿಷ್ಟ ಶೈಲಿಯಲ್ಲಿ ವಾಗ್ಬಾಣಗಳ ಮೂಲಕ ತಿವಿಯುವ ಸಯಾನಿ ಘೋಷ್, ಬಂಗಾಳಿಗರ ಆಕರ್ಷಣೆಗೆ ಪಾತ್ರರಾಗಿದ್ದಾರೆ.

ಬಂಗಾಳಿ, ಹಿಂದಿ, ಇಂಗ್ಲಿಷ್ ಭಾಷೆಗಳನ್ನು ಅರಳುಹುರಿದಂತೆ ಮಾತನಾಡುವ ಸಯಾನಿ, ಸದ್ಯ ಟಿಎಂಸಿ ಯುವ ಘಟಕದ ಅಧ್ಯಕ್ಷೆ ಕೂಡ ಹೌದು. ಮಮತಾ ದೀದಿ, ಸೋದರಳಿಯನ ಭದ್ರ ಭವಿಷ್ಯಕ್ಕೆ ನಿಧಾನವಾಗಿ ವೇದಿಕೆ ಸೃಷ್ಟಿಸುತ್ತಿದ್ದರೂ, ಸಯಾನಿ ಘೋಷ್ ಹೊಸ ಸ್ಪರ್ಧಾಳು ಆಗಿ ಮುಂದಿರುವುದರಿಂದ ಭವಿಷ್ಯದಲ್ಲಿ ಎರಡು ಒಳ ಗುಂಪುಗಳ ರಚನೆಗೆ ಅದು ಕಾರಣವಾದರೂ ಅಚ್ಚರಿ ಇಲ್ಲ.

ಯಾದವ್-ಬನ್ಸಾಲ್ ಕಮಾಲ್

ಭೂ

ಕೇಂದ್ರ ಸಚಿವ ಭೂಪೇಂದ್ರ ಯಾದವ್ ಮತ್ತು ಪ್ರಧಾನ ಕಾರ್ಯದರ್ಶಿ ಸುನೀಲ್ ಬನ್ಸಾಲ್ ಅವರು ಬಂಗಾಳ ಚುನಾವಣೆಯ ‘ಮಾಸ್ಟರ್ ಸ್ಟ್ರಾಟಜಿಸ್ಟ್’ಗಳಾಗಿ ಹೊರಹೊಮ್ಮಿದ್ದಾರೆ. ಬಿಜೆಪಿ ಗೆಲ್ಲುವುದೋ ಸೋಲುವುದೋ ಗೊತ್ತಿಲ್ಲ. ಆದರೆ, ಪಕ್ಷದ ಅಡಿಪಾಯ ಗಟ್ಟಿಗೊಳಿಸುವುದರಲ್ಲಿ ಆರ್ಎಸ್‌ಎಸ್‌ನ ಜತೆಗೆ ಈ ಇಬ್ಬರ ಕೊಡುಗೆ ಕೂಡ ಗಮನಾರ್ಹ.

ಭೂಪೇಂದ್ರ ಯಾದವ್ ಈ ಹಿಂದೆ ಕೂಡ ಅನೇಕ ಚುನಾವಣೆಗಳಲ್ಲಿ ಉಸ್ತುವಾರಿಯಾಗಿ ಗಮನ ಸೆಳೆದಿದ್ದಾರೆ. ಜನಸಭೆಗಳಿಂದ ಹಿಡಿದು ಸ್ಟ್ರೀಟ್ ಮೀಟಿಂಗ್ ಹಾಗೂ ಸಣ್ಣ-ಸಣ್ಣ ಸಭೆಗಳನ್ನು ಏರ್ಪಡಿಸುವತ್ತ ಗಮನ ನೀಡಿದ ಈ ಇಬ್ಬರ ತಂಡ, ಒಂದು ಕ್ಷೇತ್ರದಲ್ಲಿ ಏಕಕಾಲಕ್ಕೆ 10 ರಿಂದ 15 ಸ್ಟ್ರೀಟ್ ಮೀಟಿಂಗ್ ನಡೆಯುವಂತೆಯೂ ನೋಡಿಕೊಂಡಿತು.

ನಾನು ಕೂಚ್ ಬೆಹಾರ್ ದಕ್ಷಿಣ ಕ್ಷೇತ್ರದಲ್ಲಿದ್ದಾಗ ಸಂಜೆ 6 ಗಂಟೆಗೆ ನಡೆಸಿದ್ದ ಸ್ಟ್ರೀಟ್ ಮೀಟಿಂಗ್ ಒಂದನ್ನು ವೀಕ್ಷಿಸಿದ್ದೆ. ಅದೇ ಸಮಯಕ್ಕೆ ಕ್ಷೇತ್ರದ ಇತರೆ ೧೩ ಕಡೆಯೂ ಸ್ಟ್ರೀಟ್ ಮೀಟಿಂಗ್ ಆಯೋಜಿಸಲಾಗಿತ್ತು. ಸ್ಥಳೀಯ ಮುಖಂಡರೊಬ್ಬರನ್ನು ಸಭೆಗೆ ಕರೆಸಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗೆ ಮತ ಹಾಕುವ ಕುರಿತು ಅಲ್ಲಿ ಭಾಷಣ ಮಾಡಿಸಲಾಗುತ್ತಿತ್ತು.

ಸು

ಚುನಾವಣೆಯ ಆರಂಭದಿಂದ ಹಿಡಿದು ಕೊನೆಯ ತನಕವೂ ಭೂಪೇಂದ್ರ ಯಾದವ್ ಮತ್ತು ಸುನೀಲ್ ಬನ್ಸಾಲ್ ಇಬ್ಬರೂ ಮಾಧ್ಯಮದಲ್ಲಿ ಕಾಣಿಸಿಕೊಳ್ಳದೆ, ತೆರೆಮರೆಯ ಜವಾಬ್ದಾರಿ ನಿರ್ವಹಿಸಿದರು. ಇದು ತಂತ್ರಗಾರಿಕೆಯ ಒಂದು ಭಾಗವಾಗಿತ್ತು. 2021ರ ಚುನಾವಣೆ ವೇಳೆ ಅಂದಿನ ಚುನಾವಣಾ ಉಸ್ತುವಾರಿ ವಿಜಯ ವರ್ಗೀಯ ಅತಿಯಾಗಿ ಮಾಧ್ಯಮಗಳ ಮುಂದೆ ಕಾಣಿಸಿಕೊಂಡ ದ್ದೂ ಸಮಸ್ಯೆ ಉಂಟು ಮಾಡಿತ್ತು.

ಈ ಬಾರಿ ಹಾಗಾಗಿಲ್ಲ. ಸುಮಾರು ಒಂದೂವರೆ ದಶಕದ ಹಿಂದೆ ಸುಪ್ರೀಂಕೋರ್ಟ್ ಅಂಗಳದಲ್ಲಿ ಕರಿಕೋಟು ಧರಿಸಿ ಹಿರಿಯ ನ್ಯಾಯವಾದಿಗಳ ಸುತ್ತಮುತ್ತ ಕಾಣಿಸಿಕೊಳ್ಳುತ್ತಿದ್ದ ರಾಜಸ್ಥಾನ ಮೂಲದ ಭೂಪೇಂದ್ರ ಯಾದವ್ ಅವರು, ದಿವಂಗತ ಅರುಣ್ ಜೇಟ್ಲಿಯವರ ನೆರಳ ಬೆಳೆದು ಬಂದವರು. ಈಗ ಮೋದಿ-ಶಾ ತಂಡದ ಪ್ರಮುಖ ರಣನೀತಿಕಾರರಲ್ಲಿ ಒಬ್ಬರಾಗಿದ್ದಾರೆ.

ಶಾ ಲೆಕ್ಕ ನಿಜವಾಗುವುದೇ?

2021ರ ಬಂಗಾಳ ಚುನಾವಣೆಯಲ್ಲಿ ಗೃಹ ಸಚಿವ ಅಮಿತ್ ಶಾ ಅವರು ‘ದೋ ಸೌ ಪಾರ್’ ಘೋಷಣೆ ಮೂಲಕ ಹವಾ ಎಬ್ಬಿಸಿದ್ದರು. ಆದರೆ ಫಲಿತಾಂಶದಲ್ಲಿ ಲೆಕ್ಕಾಚಾರ ಉಲ್ಟಾ ಆಗಿತ್ತು. ಈ ಸಲ ಮತ್ತೆ ಅಮಿತ್ ಶಾ ‘170 ಪಾರ್’ ಎಂದು ಘೋಷಿಸಿದ್ದಾರೆ. ಚುನಾವಣೆಯು ‘ಮೋದಿ ವರ್ಸಸ್ ದೀದಿ’ ಎಂಬಂತೆ ಬಿಂಬಿತವಾಗುತ್ತಿದ್ದರೂ, ವಾಸ್ತವದಲ್ಲಿ ಇದು ‘ದೀದಿ ವರ್ಸಸ್ ಅಮಿತ್ ಶಾ’ ಚುನಾವಣೆ. 20 ದಿನ ಬಂಗಾಳದ ಕುಳಿತ ಅಮಿತ್ ಶಾ, ಚುನಾವಣೆಯ ಸಂಪೂರ್ಣ ನೇತೃತ್ವ ವಹಿಸಿದ್ದರು. ಈ ಬಾರಿ ‘170 ಪಾರ್’ ಎಂದು ಅಮಿತ್ ಶಾ ಘೋಷಿಸಿದ್ದಾರೆ. ಅದು ನಿಜವಾದರೆ ಪಕ್ಷದಲ್ಲಿ ಶಾ ಬಿಗಿ ಹಿಡಿತ ಮತ್ತಷ್ಟು ಹೆಚ್ಚಲಿದ್ದು, 2027ರ ಉತ್ತರ ಪ್ರದೇಶ ಚುನಾವಣೆ ಸಂದರ್ಭದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಮೇಲೆ ಒತ್ತಡ ಹೆಚ್ಚಲಿದೆ.

ಒಂದು ವೇಳೆ ಅಮಿತ್ ಶಾ ಲೆಕ್ಕಾ ಮತ್ತೆ ಉಲ್ಟಾ ಹೊಡೆದರೆ, 2027ರಲ್ಲಿ ಯೋಗಿ ಹಾದಿ ಸುಗಮ ಗೊಳ್ಳಲಿರುವುದಲ್ಲದೆ, ಚುನಾವಣೆ ಕೂಡ ಅವರ ನಿಯಂತ್ರಣ ಮತ್ತು ನೇತೃತ್ವದ ನಡೆಯಲಿದೆ.

ಕುತೂಹಲದ ಶಂಶೇರ್‌ಗಂಜ್

ಬಂಗಾಳದ ಕೆಲ ಕ್ಷೇತ್ರಗಳಲ್ಲಿ ಎಸ್‌ಐಆರ್ ಪ್ರಕ್ರಿಯೆ ಬಿಜೆಪಿಗೆ ಹೇಗೆ ನೆರವಾಗುತ್ತಿದೆ ಎನ್ನುವುದಕ್ಕೆ ಮುರ್ಷಿದಾಬಾದ್ ಜಿಯ ಶಂಶೇರ್‌ಗಂಜ್ ಕ್ಷೇತ್ರ ಉತ್ತಮ ಉದಾಹರಣೆ ಆಗಬಲ್ಲದು. ವಕ್ಫ್ ತಿದ್ದುಪಡಿ ಕಾಯ್ದೆ ಹಿನ್ನೆಲೆಯಲ್ಲಿ ಕಳೆದ ವರ್ಷ‌ ಶಂಶೇರ್‌ಗಂಜ್‌ನಲ್ಲಿ ಹರಿಗೋವಿಂದ ದಾಸ್ ಮತ್ತು ಚಂದನ್ ದಾಸ್ ಎಂಬ ಇಬ್ಬರನ್ನು ಹತ್ಯೆ ಮಾಡಲಾಯಿತು ಮತ್ತು ಅನೇಕ ಹಿಂದೂ ಮನೆಗಳ ಮೇಲೆ ದಾಳಿಯೆಸಗಿ ಲೂಟಿ ಮಾಡಲಾಯಿತು.

ಇದರಿಂದಾಗಿ ಹಿಂದೂಗಳು ಮತ್ತು ಮಹಿಳೆಯರು ಮಾಲ್ಡಾ ಜಿಲ್ಲೆಯ ಪರ್ಲಾಲ್ಪುರ್ ಶಾಲೆಯ ನಿರಾಶ್ರಿತ ಶಿಬಿರ ಸೇರಿದ್ದರು. ತಮ್ಮ ಊರಿನಲ್ಲಿ ಬಿಎಸ್‌ಎಫ್ ಯೋಧರನ್ನು ನೇಮಿಸಿದ ನಂತರ ಈ ಹಿಂದೂಗಳು ಹಳ್ಳಿಗೆ ವಾಪಸಾದರು. ಶಂಶೇರ್‌ ಗಂಜ್‌ನಲ್ಲಿ ಎಸ್‌ಐಆರ್‌ಗೆ ಮುನ್ನ 2,52,881 ಮತದಾರರಿದ್ದರು.

91,616 ಜನರ ಹೆಸರು ಮತಪಟ್ಟಿಯಿಂದ ಅಳಿಸಿದ್ದರಿಂದ ಸಂಖ್ಯೆ 1.6 ಲಕ್ಷಕ್ಕೆ ಇಳಿದಿದೆ. ಇಲ್ಲಿ 49000 ಹಿಂದೂಗಳಿದ್ದರೆ, 1,12,265 ಮುಸ್ಲಿಮರಿzರೆ. ಎಸ್‌ಐಆರ್ ಬಳಿಕ ಹಿಂದೂಗಳ ಪ್ರಮಾಣ ಶೇ.20ರಿಂದ 30ಕ್ಕೆ ಏರಿದಂತಾಗಿದೆ. 2025ರ ಗಲಭೆ ಹಿನ್ನೆಲೆಯಲ್ಲಿ ಸುಮಾರು 98 ಶೇ. ಹಿಂದೂಗಳು ಈ ಬಾರಿ ಬಿಜೆಪಿಯನ್ನು ಬೆಂಬಲಿಸುವುದಾಗಿ ಘೋಷಿಸಿದ್ದಾರೆ.

2024ರ ಲೋಕಸಭಾ ಚುನಾವಣೆಯಲ್ಲಿ ಶೇ.80 ರಷ್ಟು ಮತಗಳು ಕಾಂಗ್ರೆಸ್ ಮತ್ತು ಟಿಎಂಸಿಗೆ ಬಿದ್ದಿದ್ದವು. ಈ ಬಾರಿ ಟಿಎಂಸಿ, ಎಡಪಕ್ಷ ಮತ್ತು ಬಿಜೆಪಿ ಕಣದಲ್ಲಿದ್ದು, ಸಂಖ್ಯೆಯಲ್ಲಿ ಕುಸಿತ ಕಂಡ ಮುಸ್ಲಿಂ ಮತಗಳು ಟಿಎಂಸಿ-ಎಡಪಕ್ಷಗಳ ಮಧ್ಯೆ ವಿಭಜನೆ ಆಗಬಹುದು. ಅಲ್ಲದೆ, 8 ಮುಸ್ಲಿಂ ಅಭ್ಯರ್ಥಿಗಳು ಪಕ್ಷೇತರರಾಗಿಯೂ ಸ್ಪರ್ಧಿಸುತ್ತಿದ್ದಾರೆ.

ಬಿಜೆಪಿಯಿಂದ 83 ವರ್ಷದ ಸ್ವಸ್ತಿ ಚರಣ್ ಘೋಷ್ ಅಭ್ಯರ್ಥಿಯಾಗಿದ್ದು, ಮುಸ್ಲಿಂ ಮತಗಳ ವಿಭಜನೆಯನ್ನೇ ಅವಲಂಬಿಸಿzರೆ. ಕೇವಲ ಶೇ.20ರಷ್ಟು ಹಿಂದೂಗಳಿದ್ದು ಬಿಜೆಪಿಯು ಗೆಲ್ಲಲು ಸಾಧ್ಯವೇ ಇಲ್ಲದ ರಾಜಕೀಯ ವಾತಾವರಣ ಇರುವ ಕ್ಷೇತ್ರವೊಂದರಲ್ಲಿ ರಾಜಕೀಯ ಹಿಂಸಾಚಾರ ಮತ್ತು ಎಸ್‌ಐಆರ್ ಪ್ರಕ್ರಿಯೆ ಹೇಗೆ ಬಿಜೆಪಿಗೆ ಅನುಕೂಲಕರ ಸ್ಥಿತಿ ನಿರ್ಮಾಣ ಮಾಡಿದೆ ಎನ್ನುವು ದಕ್ಕೆ ಮುರ್ಷಿದಾಬಾದ್‌ನ ಶಂಶೇರ್‌ಗಂಜ್ ಕ್ಷೇತ್ರವೇ ಉದಾಹರಣೆ.

ಪುನೀತ್ ರಾಜಕುಮಾರ್ ಅಭಿಮಾನಿ

ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಪ್ರವಾಸ ಮಾಡುತ್ತಿದ್ದಾಗ ನಾನು ಕೂಚ್ ಬೆಹಾರ್ ಉತ್ತರ ವಿಧಾನಸಭೆ ಕ್ಷೇತ್ರದಲ್ಲಿ ರಾಜೇಶ್ ಬಿಸ್ವಾಸ್ ಎಂಬ ಪುನೀತ್ ರಾಜ್‌ಕುಮಾರ್ ಅಭಿಮಾನಿಯೊಬ್ಬ ಸಿಕ್ಕಿದ್ದ. “ನಾನು ಬೆಂಗಳೂರಿನಿಂದ ಬಂದಿದ್ದೇನೆ" ಎಂದ ಕೂಡಲೇ ತನ್ನ ಸಣ್ಣ ಹೋಟೆಲ್‌ಗೆ ಖುಷಿ ಯಿಂದ ಸ್ವಾಗತಿಸಿದ ಆತ, ತಾನು ಕೂಡ ಬೆಂಗಳೂರು, ಮಂಗಳೂರು, ಬ್ರಹ್ಮಾವರ, ಮಣಿಪಾಲದಲ್ಲಿ ಅನೇಕ ವರ್ಷಗಳ ಕಾಲ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ್ದ ಕೆಲಸದಲ್ಲಿ ತೊಡಗಿಸಿ ಕೊಂಡಿದ್ದನ್ನು ನೆನಪಿಸಿಕೊಂಡ. ಸದ್ಯ ಬೆಂಗಳೂರು ಬಿಟ್ಟು ತನ್ನ ಸ್ವಂತ ಜಮೀನಲ್ಲಿ ಹೋಟೆಲ್ ನಡೆಸುತ್ತಿರುವ ರಾಜೇಶ್ ಬಿಸ್ವಾಸ್, “ಪುನೀತ್ ರಾಜ್ ಕುಮಾರ್ ನಟಿಸಿದ ಎಲ್ಲಾ ಸಿನಿಮಾಗಳನ್ನು ನೋಡಿದ್ದೇನೆ.

ನನಗೆ ಕನ್ನಡ ಸರಿ ಅರ್ಥ ಆಗುತ್ತಿರಲಿಲ್ಲ. ಆದರೆ, ಅವರ ನಟನೆ ಬಹಳ ಇಷ್ಟ ಆಗುತ್ತಿತ್ತು. ಡಬ್ಬಿಂಗ್ ಆದ ಎಲ್ಲಾ ಚಿತ್ರಗಳನ್ನು ತಪ್ಪದೆ ನೋಡಿದ್ದೇನೆ" ಎಂದು ಹೇಳಿಕೊಂಡ. “ಬೆಂಗಳೂರಿಗಿಂತ ಮಂಗಳೂರು ಹೆಚ್ಚು ಇಷ್ಟವಾಯ್ತು. ಅಲ್ಲಿ ವಂಚನೆ ಕಡಿಮೆ ಮತ್ತು ನಮ್ಮಂಥ ಹೊರಗಿನ ಜನಕ್ಕೂ ತುಂಬಾ ಸಹಕಾರ ನೀಡುತ್ತಾರೆ.

ಬೆಂಗಳೂರು ಕೂಡ ಚೆನ್ನಾಗಿದೆ. ಆದರೆ, ಬೆಂಗಳೂರಿನ ಆಟೋಗಳಲ್ಲಿ ದುಡ್ಡು ಲೂಟಿ ಮಾಡುತ್ತಾರೆ. ನನಗೆ ಕೆಟ್ಟ ಅನುಭವಗಳಾಗಿವೆ" ಎಂದ ರಾಜೇಶ್ ಬಿಸ್ವಾಸ್. “ಬಂಗಾಳದ ಹಿಂಸಾ ರಾಜಕಾರಣಕ್ಕೆ ಹೋಲಿಸಿದರೆ ಕರ್ನಾಟಕದ ರಾಜಕೀಯ ನೂರು ಪಾಲು ಉತ್ತಮ" ಎಂದು ಹೊಗಳಿದ ಬಿಸ್ವಾಸ್, “ರಾಜ್ಯಕ್ಕೆ ಪರಿವರ್ತನೆ ಬೇಕು. ಟಿಎಂಸಿಯವರನ್ನು ಬಡಿದಟ್ಟುವುದು ಅನಿವಾರ್ಯ. ಇದು ನಮ್ಮ ಅಸಿತ್ವದ ಪ್ರಶ್ನೆ. ಈ ಬಾರಿ ಬಿಜೆಪಿಗೇ ಮತ" ಎಂದು ಖಚಿತಪಡಿಸಿದ.

ಪ್ರಿಸೈಡಿಂಗ್ ಆಫೀಸರ್ ವೋಟು ಹಾಕಲಿಲ್ಲ!

ಹಿರಿಯ ಸ್ಕೂಲ್ ಟೀಚರ್ ಆಗಿರುವ ಮೀರ್ ಅಬ್ದುಲ್ ಕಳೆದ 20 ವರ್ಷಗಳಿಂದ ಚುನಾವಣೆಯಲ್ಲಿ ಪ್ರಿಸೈಡಿಂಗ್ ಆಫೀಸರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ವಿಚಿತ್ರ ಎಂದರೆ, ಎಸ್‌ಐಆರ್ ಪ್ರಕ್ರಿಯೆ ಯಲ್ಲಿ ಅವರ ಹೆಸರು ಅಳಿಸಿಹೋಗಿದ್ದು, ಮತದಾನ ಮಾಡುವ ಅವಕಾಶ ಕಳೆದುಕೊಂಡಿದ್ದಾರೆ.

ಹೂಗ್ಲಿ ಜಿಲ್ಲೆಯ ಪಂಡುವಾ ಎಂಬಲ್ಲಿರುವ ಹರಾಲ್ ಯುನೈಟೆಡ್ ಹೈ ಮದರಸಾ ಶಾಲೆಯಲ್ಲಿ ರಫೀಕ್ ಹಿರಿಯ ಶಿಕ್ಷಕರಾಗಿದ್ದಾರೆ. ಪೂರ್ವ ಬುರ್ ಧ್ವಾನ್‌ನ ಬಟಾರ್ ವಿಧಾನಸಭೆ ಕ್ಷೇತ್ರದ ಮತಪಟ್ಟಿ ಯಿಂದ ರಫೀಕ್ ಹೆಸರು ಡಿಲೀಟ್ ಆಗಿದ್ದು, ಸಂಬಂಧಪಟ್ಟ ದಾಖಲೆಗಳನ್ನು ನ್ಯಾಯಾಧೀಕರಣಕ್ಕೆ ಸಲ್ಲಿಸಿ, ಮತಪಟ್ಟಿಗೆ ಮರು ಸೇರ್ಪಡೆಗಾಗಿ ಅರ್ಜಿ ಹಾಕಿದ್ದಾರೆ. ಅವರ ಅರ್ಜಿ ಇನ್ನೂ ಇತ್ಯರ್ಥ ವಾಗದ ಕಾರಣ ಮತ ಹಾಕಲು ಸಾಧ್ಯವಾಗಿಲ್ಲ. ಆದರೆ, ಏಪ್ರಿಲ್ 28ರಂದು ಹೂಗ್ಲಿ ಜಿಲ್ಲೆಯ ಧನಿಯಾಖಾಲಿ ವೋಟಿಂಗ್ ಬೂತ್‌ನ ಪ್ರಿಸೈಡಿಂಗ್ ಆಫಿಸರ್ ಆಗಿ ಕಾರ್ಯನಿರ್ವಹಿಸಿ ದ್ದಾರೆ.

ಬಂಗಾಳದಲ್ಲೇ ಉಳಿದಿದ್ದ ಗಾಂಧೀಜಿ

Screenshot_2

1947ರ ಆಗ 15ರಂದು, ದೇಶದ ರಾಜಧಾನಿ ದೆಹಲಿಯ ಕೆಂಪುಕೋಟೆಯಲ್ಲಿ ಎಲ್ಲಾ ಪ್ರಮುಖ ನಾಯಕರು ರಾಷ್ಟ್ರಧ್ವಜ ಹಾರಿಸಿ, ಸಂಭ್ರಮಿಸುತ್ತಿದ್ದಾಗ ಮಹಾತ್ಮ ಗಾಂಧೀಜಿ ಮಾತ್ರ ಪಶ್ಚಿಮ ಬಂಗಾಳದ ಕೋಲ್ಕತ್ತಾದ ಬೇಲಿಯಾಘಾಟ್‌ನ ಉಳಿದಿದ್ದರು. ದೇಶ ವಿಭಜನೆ ವೇಳೆ ಎಡೆ ಕೋಮು ಗಲಭೆಗಳು ವ್ಯಾಪಕವಾಗಿ, ಬಂಗಾಳದಲ್ಲಿ ಕೂಡ ಕೋಮುಗಲಭೆಗಳು ನಡೆಯುತ್ತಿದ್ದವು. ಈ ಹಿನ್ನೆಲೆ ಯಲ್ಲಿ ಶಾಂತಿ ಸಂದೇಶ ಸಾರಲು ಆ.13ರಂದು ಕಲ್ಕತ್ತಾಗೆ ಅಗಮಿಸಿದ್ದ ಗಾಂಧೀಜಿ, ಬೇಲಿಯಾಘಾಟ್‌ ನ ಹೈದರಿ ಮಂಜಿಲ್‌ನಲ್ಲಿ ಸೆ.6ರ ತನಕ ವಾಸ್ತವ್ಯ ಹೂಡಿದ್ದರು. ಆ.15ರಂದು ಗಾಂಧೀಜಿ ಉಪವಾಸ ಆಚರಣೆ ಮಾಡಿ, ಕೋಮುಗಲಭೆ ಕೊನೆಗೊಳ್ಳಲಿ ಎಂದು ಪ್ರಾರ್ಥನೆ ಮಾಡಿದ್ದರು ಎಂದು ಇತಿಹಾಸ ಹೇಳುತ್ತದೆ.

ಹೊಸ ತಂತ್ರಗಾರಿಕೆ

2021ರಲ್ಲಿ ಮಾಡಿದ ತಪ್ಪುಗಳನ್ನು ಸರಿಪಡಿಸಿಕೊಂಡು ಚುನಾವಣಾ ಕಣಕ್ಕೆ ಜಿಗಿದ ಬಿಜೆಪಿ, ಈ ಬಾರಿ ಕೇಡರ್ ಜತೆಗೆ ಗಟ್ಟಿಯಾಗಿ ಇರುವವರನ್ನು ಗುರುತಿಸಿ ಟಿಕೆಟ್ ನೀಡಿತ್ತು. ಕಳೆದ ಬಾರಿ ಟಿಎಂಸಿ, ಎಡಪಕ್ಷಗಳಿಂದ ಬಂದ ಸುಮಾರು 120 ಮಂದಿಗೆ ಟಿಕೆಟ್ ನೀಡಿತ್ತು. ಆದರೆ ಅವರಲ್ಲಿ ಬಹುತೇಕರು ಸೋತ ನಂತರ ತಮ್ಮ ಮಾತೃಪಕ್ಷಗಳಿಗೆ ಸೇರಿಕೊಂಡರೆ, ಮತ್ತೆ ಕೆಲವರು ತಟಸ್ಥರಾಗಿ ಉಳಿದು ಕೊಂಡರು. ಈ ಬಾರಿ ಅಂಥ ಯಾರಿಗೂ ಆದ್ಯತೆ ನೀಡಬೇಡಿ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಕೂಡ ಸೂಚನೆ ಹೋಗಿತ್ತು. ಈ ಸಲದ ಮತ್ತೊಂದು ವಿಶೇಷ ಏನೆಂದರೆ, ಬಂಗಾಳ ದಲ್ಲಿದ್ದ ಬೇರೆ ರಾಜ್ಯಗಳ ಬಿಜೆಪಿ ನಾಯಕರು ತಮ್ಮ ಇರುವಿಕೆಯನ್ನು ಸೋಷಿಯಲ್ ಮೀಡಿಯಾ ದಲ್ಲಿ ತೋರಿಸಿಕೊಳ್ಳಲೇ ಇಲ್ಲ.

ಯಾರು ಎಲ್ಲಿ ಏನು ಕೆಲಸ ಮಾಡುತ್ತಿದ್ದಾರೆ ಎನ್ನುವುದು ಟಿಎಂಸಿಯವರಿಗೆ ಗೊತ್ತಾಗಬಾರದು ಎಂದೇ ಈ ತಂತ್ರಗಾರಿಕೆಯನ್ನು ಅನುಸರಿಸಲಾಗಿತ್ತು. ಕಳೆದ ಐದಾರು ತಿಂಗಳಿಂದ ಬಂಗಾಳಕ್ಕೆ ಆಗಾಗ್ಗೆ ಹೋಗಿ ಬರುತ್ತಿದ್ದ ಬಿಜೆಪಿ ನಾಯಕ ಸಿ.ಟಿ. ರವಿ ಕೂಡ ಕರ್ನಾಟಕಕ್ಕೆ ವಾಪಸಾಗುವ ಹಿಂದಿನ ದಿನ ಅಮಿತ್ ಶಾ ಅವರನ್ನು ಗಂಗಾಸಾಗರದಲ್ಲಿ ಭೇಟಿಯಾದ ಫೋಟೋ ಒಂದನ್ನು ಮಾತ್ರ ಹಂಚಿಕೊಂಡಿದ್ದರು. ಅದು ಬಿಟ್ಟರೆ, ಬೇರೆಲ್ಲೂ ಯಾವ ಫೋಟೋ ಕೂಡ ಹಾಕಬೇಡಿ ಎಂದು ಆಪ್ತರಿಗೆ ಅವರು ತಿಳಿಸಿದ್ದರಂತೆ.

ಸದ್ದು ಮಾಡದ ವಿಧೇಯಕದ ಸೋಲು

ಸಂಸತ್ತಿನಲ್ಲಿ ಮಹಿಳಾ ವಿಧೇಯಕ ತಿದ್ದುಪಡಿ ಮಸೂದೆಗೆ ಸೋಲಾದರೂ ಅದು ಬಂಗಾಳ ಚುನಾವಣಾ ಕಣದಲ್ಲಿ ಹೆಚ್ಚು ಸದ್ದು ಮಾಡಲಿಲ್ಲ. ‘ಟಿಎಂಸಿ ಸೇರಿ ವಿಪಕ್ಷಗಳು ಮಹಿಳಾ ವಿರೋಧಿ ಮನಸ್ಥಿತಿ ಹೊಂದಿವೆ’ ಎಂದು ಬಿಜೆಪಿ ಪ್ರಚಾರ ನಡೆಸಲು ಮುಂದಾದರೂ ಮತದಾರರ ಮಧ್ಯೆ ಅದು ವ್ಯಾಪಕ ಪರಿಣಾಮ ಬೀರಿದಂತೆ ಕಾಣಲಿಲ್ಲ. ರಾಜ್ಯದಲ್ಲಿ ಪರಿವರ್ತನೆ ಬಯಸಿದ್ದ ಮಂದಿ ಆಗಲೇ ತಮ್ಮ ಮತದ ಬಗ್ಗೆ ತೀರ್ಮಾನ ಮಾಡಿದ್ದರು. ಆದರೆ, ದೀದಿಯನ್ನು ಬೆಂಬಲಿಸಲು ಮನಸ್ಸು ಮಾಡಿದ್ದ ನಿರ್ದಿಷ್ಟ ಮಹಿಳಾ ವರ್ಗವನ್ನು ಮಹಿಳಾ ವಿಧೇಯಕದ ಸೋಲು ಹೆಚ್ಚು ವಿಚಲಿತಗೊಳಿಸಿದಂತೆ ಕಾಣಲಿಲ್ಲ.