ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

45 Movie: ಶಿವಣ್ಣ, ಉಪೇಂದ್ರ, ರಾಜ್ ಬಿ ಶೆಟ್ಟಿ ಅಭಿನಯದ ʼ45ʼ ಸಿನಿಮಾ ಬಿಡುಗಡೆ ಯಾವಾಗ?

45 Movie: ಶಿವರಾಜಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ʼ45ʼ ಸಿನಿಮಾ ಆ.15ರಂದು ಬಿಡುಗಡೆಯಾಗಬೇಕಿತ್ತು ಆದರೆ ವಿ.ಎಫ್.ಎಕ್ಸ್ ಕಾರ್ಯ ಇನ್ನೂ ಪೂರ್ಣವಾಗಿರದ ಹಿನ್ನೆಲೆಯಲ್ಲಿ ʼ45ʼ ಚಿತ್ರ ಬಿಡುಗಡೆ ವಿಳಂಬವಾಗಿದೆ. ಈ ಕುರಿತ ಮಾಹಿತಿ ಇಲ್ಲಿದೆ.

ಶಿವಣ್ಣ, ಉಪೇಂದ್ರ, ರಾಜ್ ಬಿ ಶೆಟ್ಟಿ ಅಭಿನಯದ ʼ45ʼ ಸಿನಿಮಾ ಬಿಡುಗಡೆ ಯಾವಾಗ?

Profile Siddalinga Swamy Aug 20, 2025 3:23 PM

ಬೆಂಗಳೂರು: ಕರುನಾಡ ಚಕ್ರವರ್ತಿ ಶಿವರಾಜಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನದ ಹಾಗೂ ಎಂ. ರಮೇಶ್ ರೆಡ್ಡಿ ಅವರು ತಮ್ಮ ʼಸೂರಜ್ ಪ್ರೊಡಕ್ಷನ್ʼ ಬ್ಯಾನರ್‌ನಲ್ಲಿ ನಿರ್ಮಿಸುತ್ತಿರುವ ಕನ್ನಡದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ ʼ45ʼ (45 Movie) ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ.

ಕೆಲವು ತಿಂಗಳ ಹಿಂದೆ ವಿಶೇಷ ಟೀಸರ್ ಮೂಲಕ ಚಿತ್ರತಂಡ ಆಗಸ್ಟ್ 15ರಂದು ಚಿತ್ರ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ ಎಂಬ ವಿಷಯವನ್ನು ಹಂಚಿಕೊಂಡಿತ್ತು. ಕನ್ನಡದ ಮೂರು ಜನ ಹೆಸರಾಂತ ನಾಯಕನಟರ ಅಭಿಮಾನಿಗಳು ಈ ಸುದ್ದಿ ಕೇಳಿ ಸಂತಸಗೊಂಡು, ಚಿತ್ರ ಬಿಡುಗಡೆಗಾಗಿ ಕಾತುರದಿಂದ ಕಾಯುತ್ತಿದ್ದರು. ಕೆನಡಾದ ಪ್ರತಿಷ್ಠಿತ ʼMARZʼ ಸಂಸ್ಥೆ ಈ ಚಿತ್ರಕ್ಕೆ ವಿ.ಎಫ್.ಎಕ್ಸ್ ಕಾರ್ಯ ನಿರ್ವಹಿಸುತ್ತಿದ್ದು, ಈ ಸಂಸ್ಥೆ ವಿ.ಎಫ್.ಎಕ್ಸ್ ಮಾಡುತ್ತಿರುವ ಮೊದಲ ಕನ್ನಡ ಚಿತ್ರವಿದು. ಈ ಚಿತ್ರಕ್ಕೆ ಹಾಲಿವುಡ್‌ನ ಖ್ಯಾತ ತಂತ್ರಜ್ಞರಿಂದ ಸಿಜಿ ವರ್ಕ್ ನಡೆಯುತ್ತಿದ್ದು, ಇಂಡಿಯಾದಲ್ಲೇ ಅತೀ ಹೆಚ್ಚು ಸಿಜಿ (ವಿ.ಎಫ್.ಎಕ್ಸ್) ಅಳವಡಿಸಲಾಗುತ್ತಿರುವ ಮೊದಲ ಚಿತ್ರ ಕೂಡ ಇದು. ಹಾಗಾಗಿ ವಿ.ಎಫ್.ಎಕ್ಸ್ ಕಾರ್ಯ ಇನ್ನೂ ಪೂರ್ಣವಾಗಿರದ ಹಿನ್ನೆಲೆಯಲ್ಲಿ ಆಗಸ್ಟ್ 15 ರಂದು ʼ45ʼ ಚಿತ್ರ ಬಿಡುಗಡೆಯಾಗಿಲ್ಲ.‌

ಈ ಕುರಿತು ಮಾತನಾಡಿರುವ ಕೆನಡಾದ ಹೆಸರಾಂತ ವಿ.ಎಫ್.ಎಕ್ಸ್ ಸಂಸ್ಥೆ ʼMARZʼ ಸಂಸ್ಥೆಯ ಮುಖ್ಯಸ್ಥ ಹಾಗೂ ತಂತ್ರಜ್ಞ ಯಶ್ ಗೌಡ, ನಮ್ಮ ʼMARZʼ ಸಂಸ್ಥೆ ಸುಮಾರು ಹದಿನೈದು ವರ್ಷಗಳಿಂದ 500ಕ್ಕೂ ಅಧಿಕ ಹಾಲಿವುಡ್ ಚಿತ್ರಗಳಿಗೆ ವಿ.ಎಫ್.ಎಕ್ಸ್ ಕಾರ್ಯ ಮಾಡಿದೆ. ಸೂರಜ್ ಪ್ರೊಡಕ್ಷನ್ ಸಂಸ್ಥೆ‌ ಮೂಲಕ ರಮೇಶ್ ರೆಡ್ಡಿ ಅವರು ನಿರ್ಮಿಸುತ್ತಿರುವ, ಅರ್ಜುನ್ ಜನ್ಯ ಮೊದಲ ಬಾರಿಗೆ ನಿರ್ದೇಶಿಸುತ್ತಿರುವ ಹಾಗೂ ಶಿವರಾಜಕುಮಾರ್, ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ಅವರು ನಾಯಕರಾಗಿ ನಟಿಸಿರುವ ಪ್ಯಾನ್ ಇಂಡಿಯಾ ಸಿನಿಮಾ ʼ45ʼ ಗೆ ನಮ್ಮ ಸಂಸ್ಥೆ ವಿ.ಎಫ್.ಎಕ್ಸ್ ಕಾರ್ಯ ಮಾಡುತ್ತಿರುವುದು ನಮಗೆ ಹೆಮ್ಮೆ. ಇದು ನಮ್ಮ ಸಂಸ್ಥೆ ವಿ.ಎಫ್.ಎಕ್ಸ್ ಮಾಡುತ್ತಿರುವ ಮೊದಲ ಕನ್ನಡ ಚಿತ್ರ. ಈ ಚಿತ್ರದಲ್ಲಿ ಗ್ರಾಫಿಕ್ಸ್ ಮಹತ್ವದ ಪಾತ್ರ ವಹಿಸಲಿದೆ. ಆ ಕೆಲಸ ನಮ್ಮ ʼMARZʼ ನಲ್ಲಿ ಬಿರುಸಿನಿಂದ ಸಾಗಿದೆ. ಗ್ರಾಫಿಕ್ ಕೆಲಸಕ್ಕೆ ಹೆಚ್ಚು ಸಮಯ ತೆಗೆದುಕೊಳ್ಳುತ್ತಿರುವುದರಿಂದ ಈ ಚಿತ್ರ ಆಗಸ್ಟ್ 15 ರಂದು ಬಿಡುಗಡೆ ಮಾಡಲು ಆಗಲಿಲ್ಲ.

ಹಾಗಾಗಿ ಕನ್ನಡ ಸಿನಿಮಾ ಪ್ರೇಮಿಗಳಲ್ಲಿ ನಾವು ಕ್ಷಮೆ ಕೇಳುತ್ತೇವೆ. ಸೆಪ್ಟೆಂಬರ್ 16 ರ ಒಳಗೆ ವಿ.ಎಫ್.ಎಕ್ಸ್ ಕಾರ್ಯ ಮುಕ್ತಾಯವಾಗಲಿದೆ. ಆನಂತರ ಇನ್ನೊಂದು ತಿಂಗಳು ಕೆಲವು ಕೆಲಸಗಳಿರುತ್ತದೆ. ಅಕ್ಟೋಬರ್ 16ರ ಒಳಗೆ ಚಿತ್ರ ತೆರೆಗೆ ಬರಲು ಸಿದ್ದವಾಗುತ್ತದೆ. ಚಿತ್ರ ಬಿಡುಗಡೆ ಸ್ವಲ್ಪ ತಡವಾದರೂ ಅತ್ಯುತ್ತಮ ತಂತ್ರಜ್ಞಾನದಿಂದ ಕೂಡಿರುವ ಚಿತ್ರವಾಗಿ ʼ45ʼ ನಿಮ್ಮ ಮುಂದೆ ಬರಲಿದೆ. ಬಿಡುಗಡೆ ದಿನಾಂಕವನ್ನು ನಿರ್ಮಾಪಕರು ಸದ್ಯದಲ್ಲೇ ತಿಳಿಸಲಿದ್ದಾರೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ | Festival‌ Fashion 2025: ಗೌರಿ ಹಬ್ಬದ ಸೀಸನ್‌ನಲ್ಲಿ ಬಂತು ವೈವಿಧ್ಯಮಯ ಅತ್ಯಾಕರ್ಷಕ ಬಳೆಗಳು