ಇನ್ಮುಂದೆ ಸಬ್ಸಿಡಿ ಸಹಿತ ಎಲ್‌ಪಿಜಿ ರೀಫಿಲ್‌ಗೆ ಆಧಾರ್ ಬಯೋಮೆಟ್ರಿಕ್ ದೃಢೀಕರಣ ಕಡ್ಡಾಯ
LPG Rule: ಅಕ್ಟೋಬರ್ ತಿಂಗಳ ಪ್ರಾರಂಭದಿಂದ ಸಬ್ಸಿಡಿ ಸಹಿತ ಎಲ್‌ಪಿಜಿ ಮರುಪೂರಣಕ್ಕೆ ಆಧಾರ್ ಬಯೋಮೆಟ್ರಿಕ್ ದೃಢೀಕರಣವನ್ನು ಕಡ್ಡಾಯಗೊಳಿಸಲಾಗಿದೆ. ಅರ್ಹ ಫಲಾನುಭವಿಗಳಿಗೆ ಮಾತ್ರ ಸಬ್ಸಿಡಿ ಸಿಗುವುದನ್ನು ಖಚಿತ ಪಡಿಸಿಕೊಳ್ಳಲು ಈ ನಿಯಮವನ್ನು ಜಾರಿಗೊಳಿಸಲಾಗಿದೆ. ಇದರಿಂದ ಗೃಹ ಬಳಕೆಯ ಸಿಲಿಂಡರ್ ಅನ್ನು ವಾಣಿಜ್ಯ ಮತ್ತು ಕೈಗಾರಿಕಾ ಉದ್ದೇಶಗಳಿಗೆ ಅಕ್ರಮವಾಗಿ ಬಳಸುವುದನ್ನು ತಡೆಯಬಹುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಸಂಗ್ರಹ ಚಿತ್ರ -
ನವದೆಹಲಿ: ಗೃಹ ಬಳಕೆ ಅಡುಗೆ ಸಿಲಿಂಡರ್ (LPG) ದುರುಪಯೋಗವಾಗುವುದನ್ನು ತಡೆಗಟ್ಟಲು ಕೇಂದ್ರ ಸರ್ಕಾರವು ಅಕ್ಟೋಬರ್ ತಿಂಗಳ ಆರಂಭದಿಂದ ಸಬ್ಸಿಡಿ ಸಹಿತ ಎಲ್‌ಪಿಜಿ (LPG subsidy) ಮರುಪೂರಣಕ್ಕೆ ಆಧಾರ್ ಬಯೋಮೆಟ್ರಿಕ್ ದೃಢೀಕರಣವನ್ನು (biometric Aadhaar authentication) ಕಡ್ಡಾಯಗೊಳಿಸಿದೆ. ಈ ಕುರಿತು ಶನಿವಾರ ಮಾಹಿತಿ ನೀಡಿರುವ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ (Petroleum and Natural Gas Ministry), ಅಕ್ಟೋಬರ್ 1ರಿಂದ ನಿಯಂತ್ರಿತ ಚಿಲ್ಲರೆ ಮಾರಾಟ ದರ ಮತ್ತು ಅನ್ವಯವಾಗುವ ಸಬ್ಸಿಡಿ ಹೊಂದಿರುವ ಗೃಹಬಳಕೆಯ ಎಲ್‌ಪಿಜಿ (LPG Rule) ರೀಫಿಲ್ ಗಳಿಗೆ ಬಯೋಮೆಟ್ರಿಕ್ ಆಧಾರ್ ದೃಢೀಕರಣ ಕಡ್ಡಾಯ ಎಂದು ತಿಳಿಸಿದೆ.
ಅಕ್ಟೋಬರ್ 1ರಿಂದ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಗಳ ಮರುಪೂರಣಕ್ಕೆ ಗ್ರಾಹಕರು ಬಯೋಮೆಟ್ರಿಕ್ ಆಧಾರ್ ದೃಢೀಕರಣ ಪೂರ್ಣಗೊಳಿಸಲೇಬೇಕು. ಇದರಿಂದ ಅರ್ಹ ಫಲಾನುಭವಿಗಳು ಸಬ್ಸಿಡಿ ಪ್ರಯೋಜನ ಪಡೆಯುವುದನ್ನು ಖಚಿತಪಡಿಸಿಕೊಳ್ಳಬಹುದು ಎಂದು ತಿಳಿಸಿದೆ.
ಮರುಪೂರಣ ಸಿಲಿಂಡರ್ ಗೆ ಆಧಾರ್ ದೃಢೀಕರಣವನ್ನು ಕಡ್ಡಾಯಗೊಳಿಸುವುದರಿಂದ ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್ ವಾಣಿಜ್ಯ ಮತ್ತು ಕೈಗಾರಿಕಾ ಉದ್ದೇಶಗಳಿಗೆ ಅಕ್ರಮವಾಗಿ ಬಳಕೆಯಾಗುವುದನ್ನು ತಡೆಯಬಹುದು. ಅಲ್ಲದೇ ಇದರಿಂದ ನಕಲಿ ಮತ್ತು ಅನರ್ಹ ಸಂಪರ್ಕಗಳನ್ನು ರದ್ದುಗೊಳಿಸಬಹುದಾಗಿದೆ ಎಂದು ಹೇಳಿದೆ.
ಆಧಾರ್ ದೃಢೀಕರಣದ ಕಾರಣಕ್ಕೆ ಯಾವುದೇ ಅರ್ಹ ಕುಟುಂಬಕ್ಕೆ ಎಲ್‌ಪಿಜಿ ಸಿಲಿಂಡರ್ ಪೂರೈಕೆಯನ್ನು ನಿರಾಕರಿಸಲಾಗುವುದಿಲ್ಲ. ಈಗಾಗಲೇ ಬಯೋಮೆಟ್ರಿಕ್ ಆಧಾರ್ ದೃಢೀಕರಣ ಮಾಡಿರುವ ಗ್ರಾಹಕರು ಅದನ್ನು ಮತ್ತೆ ಮಾಡುವ ಅಗತ್ಯವಿಲ್ಲ. ಅವರಿಗೆ ಮರುಪೂರಣ ಸೇವೆಗಳು ನಿರಂತರವಾಗಿರುತ್ತದೆ. ಆದರೆ ದೃಢೀಕರಣ ಮಾಡದೇ ಇರುವ ಗ್ರಾಹಕರು ದೃಢೀಕರಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ಬಳಿಕವೇ ಸಬ್ಸಿಡಿ ಸಹಿತ ದರದಲ್ಲಿ ಮರುಪೂರಣ ಬುಕ್ಕಿಂಗ್ ಮಾಡಲು ಸಾಧ್ಯವಾಗುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಆಧಾರ್ ಬಯೋಮೆಟ್ರಿಕ್ ದೃಢೀಕರಣವನ್ನು ಗ್ರಾಹಕರು ಮನೆಗೆ ವಿತರಣೆಯಾಗುವ ತೈಲ ಮಾರುಕಟ್ಟೆ ಕಂಪೆನಿಯ ಇಂಡೇನ್- IndianOil ONE, ಭಾರತ್- HelloBPCL, ಹೆಚ್ ಪಿ- HP PAY ಅಪ್ಲಿಕೇಶನ್‌ಗಳನ್ನು ಬಳಸಿಕೊಂಡು ದೃಢೀಕರಣ ಮಾಡಬಹುದು. ಇಲ್ಲವಾದರೆ ವಿತರಕರ ಶೋರೂಮ್ ಗೆ ಭೇಟಿ ನೀಡಿ ಅಲ್ಲಿ ದೃಢೀಕರಣವನ್ನು ನಡೆಸಬಹುದಾಗಿದೆ. ಒಂದು ವೇಳೆ ಇದರಲ್ಲಿ ಮಾಡಲಾಗದಿದ್ದರೆ ಓಎಂಸಿಯ ಡಿಜಿಟಲ್ ಚಾನೆಲ್ ಗಳಾದ ಗ್ರಾಹಕ ವೆಬ್ ಪೋರ್ಟಲ್, ಮೊಬೈಲ್ ಅಪ್ಲಿಕೇಶನ್, ವಾಟ್ಸಾಪ್ ಚಾಟ್‌ಬಾಟ್, ಐವಿಆರ್ ಎಸ್ ಅಥವಾ ಇತರ ಆಯ್ಕೆ ಇರುವ ಸೌಲಭ್ಯಗಳನ್ನು ಬಳಸಿಕೊಂಡು ನೋಂದಾಯಿಸಬೇಕು ಎಂದು ಕೇಂದ್ರ ಸಚಿವಾಲಯ ತಿಳಿಸಿದೆ.
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಪ್ರಕಾರ ಸೆಪ್ಟೆಂಬರ್ 19ರ ವೇಳೆಗೆ ದೇಶಾದ್ಯಂತ ಇರುವ ಒಟ್ಟು ಗೃಹಬಳಕೆಯ ಎಲ್‌ಪಿಜಿ ಗ್ರಾಹಕರ ಪೈಕಿ ಶೇಕಡಾ 89.9 ರಷ್ಟು ಅಂದರೆ 27.43 ಕೋಟಿ ಗ್ರಾಹಕರು ತಮ್ಮ ಆಧಾರ್ ಬಯೋಮೆಟ್ರಿಕ್ ದೃಢೀಕರಣವನ್ನು ಪೂರ್ಣಗೊಳಿಸಿದ್ದಾರೆ ಎಂದು ಹೇಳಿದೆ.
ಬಯೋಮೆಟ್ರಿಕ್ ದೃಢೀಕರಣವನ್ನು ಪೂರ್ಣಗೊಳಿಸಲು ಇಚ್ಛಿಸದ ಅಥವಾ ಸಾಧ್ಯವಾಗದ ಗ್ರಾಹಕರು ಎಲ್‌ಪಿಜಿಯನ್ನು ಪಡೆಯಬಹುದು. ಆದರೆ ಇದಕ್ಕಾಗಿ ಅವರಿಗೆ ಸಬ್ಸಿಡಿ ಸಿಗುವುದಿಲ್ಲ. ಅವರು ಮಾರುಕಟ್ಟೆ ದರದಲ್ಲಿ ಸ್ಥಳೀಯ ಲಭ್ಯತೆಗೆ ಅನುಗುಣವಾಗಿ 5 ಕೆಜಿ ಅಥವಾ 10 ಕೆಜಿ ಸಿಲಿಂಡರ್‌ಗಳನ್ನು ಪಡೆಯಬಹುದಾಗಿದೆ.
ಅಕ್ಟೋಬರ್ 2023 ರಿಂದ ಎಲ್ ಪಿಜಿ ಬಯೋಮೆಟ್ರಿಕ್ ದೃಢೀಕರಣ ಅಭಿಯಾನವನ್ನು ಪ್ರಾರಂಭಿಸಿತ್ತು. ಇದಕ್ಕಾಗಿ ಹಲವು ಬಾರಿ ಕೇಂದ್ರ ಸರ್ಕಾರವು ಗಡುವನ್ನು ವಿಧಿಸಿ ವಿಸ್ತರಣೆ ಮಾಡಿತ್ತು. ಅಂತಿಮವಾಗಿ ಗಡುವು ವಿಸ್ತರಣೆಯನ್ನು ನಿಲ್ಲಿಸಲು ಸರ್ಕಾರ ತೀರ್ಮಾನಿಸಿದೆ.
ಯುಪಿಐ ಶುಲ್ಕ ಹೊರೆ ಗ್ರಾಹಕರಿಗೆ ಬೀಳದಂತೆ ಖಚಿತ ಪಡಿಸಿಕೊಳ್ಳಲು ಕೇಂದ್ರದಿಂದ ಕ್ರಮ
ದೇಶೀಯ ಎಲ್‌ಪಿಜಿ ಮಾರಾಟದಿಂದಾಗುವ ನಷ್ಟವನ್ನು ಭರಿಸಲು ಸರ್ಕಾರವು ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳಿಗೆ 22,000 ಕೋಟಿ ರೂಪಾಯಿ ಪರಿಹಾರವನ್ನು ಪಾವತಿಸಿದೆ. 2025-26 ಮತ್ತು 2026-27 ರ ಪ್ರತಿ ವರ್ಷವೂ ತಲಾ 30,000 ಕೋಟಿ ರೂಪಾಯಿಗಳನ್ನು ಪಾವತಿಸುತ್ತಿದೆ ಎಂದು ಸಚಿವಾಲಯ ತಿಳಿಸಿದೆ.