ವಿಮಾನದಲ್ಲೂ ಕರಾವಳಿಯ ಚಿಕನ್ ಪುಳಿಮುಂಚಿಯ ಸ್ವಾದ, ಫಿಲ್ಟರ್ ಕಾಫಿಯ ಘಮ! ಹೊಸ ಮೆನು ಬಿಡುಗಡೆ ಮಾಡಿದ ಆಕಾಶ ಏರ್
Akasa Air: ಖ್ಯಾತ ವಿಮಾನಯಾನ ಸಂಸ್ಥೆ ಆಕಾಶ ಏರ್, ತನ್ನ 'ಕೆಫೆ ಆಕಾಶ'ದ ಅಡಿಯಲ್ಲಿ ಹೊಸ ಊಟದ ಮೆನುವನ್ನು ಪರಿಚಯಿಸಿದೆ. ವಿಶೇಷವಾಗಿ ಕರ್ನಾಟಕದ ಕರಾವಳಿಯ ಜನಪ್ರಿಯ 'ಚಿಕನ್ ಪುಳಿಮುಂಚಿ'ಯ ರುಚಿಯನ್ನು ಜಾಗತಿಕ ಮಟ್ಟದಲ್ಲಿ ಪ್ರಸಿದ್ಧವಾಗಿರುವ ಸುಶಿ ಶೈಲಿಯಲ್ಲಿ ಬೆರೆಸಿ 'ಚಿಕನ್ ಪುಳಿಮುಂಚಿ ಸುಶಿ'ಯಾಗಿ ನೀಡಲಾಗುತ್ತಿದೆ.
-
ಬೆಂಗಳೂರು , ಅ.26: ವಿಮಾನ ಪ್ರಯಾಣದ ವೇಳೆ ಊಟದ ಅನುಭವವನ್ನು ಮತ್ತಷ್ಟು ಸ್ಮರಣೀಯವಾಗಿಸಲು ಖ್ಯಾತ ವಿಮಾನಯಾನ ಸಂಸ್ಥೆ ಆಕಾಶ ಏರ್ (Akasa Air), ತನ್ನ 'ಕೆಫೆ ಆಕಾಶ'ದ ಅಡಿಯಲ್ಲಿ ಹೊಸ ಊಟದ ಮೆನುವನ್ನು ಪರಿಚಯಿಸಿದೆ. ಇಂದಿನ ಪ್ರಯಾಣಿಕರ ಬದಲಾಗುತ್ತಿರುವ ಅಭಿರುಚಿಗೆ ತಕ್ಕಂತೆ ದೇಶಿ ಸ್ವಾದ ಮತ್ತು ಜಾಗತಿಕ ಶೈಲಿಯ ತಿನಿಸುಗಳನ್ನು ಈ ಹೊಸ ಮೆನುವಿನಲ್ಲಿ ಸೇರಿಸಲಾಗಿದೆ. ಆಕಾಶ ಏರ್ ಸಂಸ್ಥೆ ಆರಂಭವಾದ ನಂತರ ಪರಿಚಯಿಸುತ್ತಿರುವ ನಾಲ್ಕನೇ ಮೆನು ಇದಾಗಿದ್ದು, ಪ್ರಯಾಣಿಕರಿಗೆ ಆರೋಗ್ಯಕರ, ಪ್ರೋಟೀನ್ ಭರಿತ ಹಾಗೂ ವೈವಿಧ್ಯಮಯ ಆಹಾರಗಳನ್ನು ಒದಗಿಸುವ ಉದ್ದೇಶದಿಂದ ಇದನ್ನು ತಯಾರಿಸಲಾಗಿದೆ.
ಕರಾವಳಿ ಸ್ವಾದದಿಂದ ಜಾಗತಿಕ ತಿನಿಸುಗಳವರೆಗೆ ವೈವಿಧ್ಯಮಯ ಆಯ್ಕೆ
ಹೊಸ ಮೆನುವಿನಲ್ಲಿ ಸಾಂಪ್ರದಾಯಿಕ ಹಾಗೂ ಜಾಗತಿಕ ಶೈಲಿಯ ಹಲವು ಹೊಸ ತಿನಿಸುಗಳನ್ನು ಪರಿಚಯಿಸಲಾಗಿದೆ. ವಿಶೇಷವಾಗಿ ಕರ್ನಾಟಕದ ಕರಾವಳಿಯ ಜನಪ್ರಿಯ 'ಚಿಕನ್ ಪುಳಿಮುಂಚಿ'ಯ ರುಚಿಯನ್ನು ಜಾಗತಿಕ ಮಟ್ಟದಲ್ಲಿ ಪ್ರಸಿದ್ಧವಾಗಿರುವ ಸುಶಿ ಶೈಲಿಯಲ್ಲಿ ಬೆರೆಸಿ 'ಚಿಕನ್ ಪುಳಿಮುಂಚಿ ಸುಶಿ'ಯಾಗಿ ನೀಡಲಾಗುತ್ತಿದೆ.
ಇದರೊಂದಿಗೆ ಪ್ರೋಟೀನ್ ಭರಿತ ವಿಯೆಟ್ನಾಮೀಸ್ ಚಿಕನ್ ಸಲಾಡ್, ಮ್ಯಾಂಗೋ ಆಚಾರಿ ರುಚಿಯೊಂದಿಗೆ ಗ್ರಿಲ್ಡ್ ಚಿಕನ್ ಸ್ಟೀಕ್ ಹಾಗೂ ಏಷ್ಯನ್ ಚಿಕನ್ ಸ್ಯಾಂಡ್ವಿಚ್ಗಳನ್ನು ಪ್ರಯಾಣಿಕರು ಸವಿಯಬಹುದು. ಸಸ್ಯಾಹಾರಿಗಳಿಗೆ ಮತ್ತು ಜೈನ ಶೈಲಿಯ ಊಟ ಇಷ್ಟಪಡುವವರಿಗಾಗಿ ತಾಜಾ ತರಕಾರಿಗಳೊಂದಿಗೆ 'ತಂದೂರಿ ಸೋಯಾ ರ್ಯಾಪ್' ಅನ್ನು ಪರಿಚಯಿಸಲಾಗಿದೆ. ಇನ್ನು ವಿಮಾನದಲ್ಲಿ ಪ್ರಯಾಣಿಸುವ ಮಕ್ಕಳಿಗಾಗಿಯೇ ವಿಶೇಷವಾಗಿ 'ಕಿಡ್ಸ್ ಸ್ಕೈ ಟ್ರೀಟ್ಸ್' ಕಾಂಬೋ ಕೂಡ ಲಭ್ಯವಿದೆ.
ವಿಶಿಷ್ಟ ಪಾನೀಯಗಳ ಸೇರ್ಪಡೆ
ಊಟದ ಜತೆಗೆ ವಿಭಿನ್ನ ಪಾನೀಯಗಳನ್ನು ಸಹ ಮೆನುವಿನಲ್ಲಿ ಸೇರಿಸಲಾಗಿದೆ. ಹಿಮಾಲಯದ ಬೆರ್ರಿ ಹಣ್ಣಿನಿಂದ ತಯಾರಿಸಿದ 'ಪೆಪ್ಪಿಂಗ್ ಸೀ ಬಕ್ಥಾರ್ನ್', ಕೊಲಂಬಿಯನ್ ಬ್ರೂ ದಕ್ಷಿಣ ಭಾರತೀಯ ಫಿಲ್ಟರ್ ಕಾಫಿ ಹಾಗೂ ಸಕ್ಕರೆ ರಹಿತ ಕಾಫಿಯಂತಹ ವಿಶಿಷ್ಟ ಪಾನೀಯಗಳು ಪ್ರಯಾಣಿಕರಿಗೆ ಲಭ್ಯವಿವೆ.
ಹೊಸ ಮೆನುವಿನ ಕುರಿತು ಮಾತನಾಡಿರುವ ಆಕಾಶ ಏರ್ನ ಮುಖ್ಯ ಮಾರುಕಟ್ಟೆ ಅಧಿಕಾರಿ ನಾರಾಯಣ್ ಟಿ.ವಿ., “ವಿಮಾನದೊಳಗೆ ನೀಡುವ ಆಹಾರವು ಪ್ರಯಾಣದ ಅನುಭವವನ್ನು ಹೆಚ್ಚಿಸುತ್ತದೆ ಮತ್ತು ಆಯಾ ಸಂಸ್ಕೃತಿಯೊಂದಿಗೆ ನಮ್ಮನ್ನು ಬೆಸೆಯುತ್ತದೆ. ಭಾರತೀಯ ಮತ್ತು ಜಾಗತಿಕ ಶೈಲಿಯ, ಆರೋಗ್ಯಕರ ಹಾಗೂ ಪ್ರೋಟೀನ್-ಭರಿತ ಆಹಾರಗಳನ್ನು ಪ್ರಯಾಣಿಕರಿಗೆ ನೀಡುವುದೇ ನಮ್ಮ ಪ್ರಮುಖ ಗುರಿಯಾಗಿದೆ” ಎಂದಿದ್ದಾರೆ.
ಆಕಾಶ ಏರ್ 2022ರ ಆಗಸ್ಟ್ನಲ್ಲಿ ತನ್ನ ಸೇವೆ ಆರಂಭಿಸಿದ ದಿನದಿಂದಲೂ ವಿವಿಧ ಹಬ್ಬಗಳ ಸಂದರ್ಭದಲ್ಲಿ ವಿಶೇಷ ಊಟವನ್ನು ನೀಡುತ್ತಾ ಬಂದಿದೆ. ಮಕರ ಸಂಕ್ರಾಂತಿ, ದೀಪಾವಳಿ, ಕ್ರಿಸ್ಮಸ್, ಓಣಂ, ರಂಜಾನ್, ಗಣೇಶ ಚತುರ್ಥಿ ಸೇರಿದಂತೆ ವಿವಿಧ ಹಬ್ಬಗಳ ಸಮಯದಲ್ಲಿ ಆಯಾ ಆಚರಣೆಗೆ ತಕ್ಕಂತಹ ವಿಶೇಷ ತಿನಿಸುಗಳನ್ನು ನೀಡಲಾಗುತ್ತದೆ. ಅಲ್ಲದೆ, ಪ್ರಯಾಣದ ಮಧ್ಯೆ ಹುಟ್ಟುಹಬ್ಬ ಅಥವಾ ಇನ್ನಿತರ ವಿಶೇಷ ದಿನಗಳನ್ನು ಆಚರಿಸಲು ಪ್ರಯಾಣಿಕರು ಮೊದಲೇ ಕೇಕ್ ಆರ್ಡರ್ ಮಾಡುವ ಸೌಲಭ್ಯವೂ ಕೆಫೆ ಆಕಾಶದಲ್ಲಿದೆ.
ಗೂಗಲ್ಗೇ ಸೆಡ್ಡು ಹೊಡೆದ ಭಾರತದ 'ಚಾರಿಯಟ್': 10 ಭಾಷೆಗಳಲ್ಲಿ ಹೊಸ 'ಎಐ ವಾಯ್ಸ್ ಮಾಡೆಲ್' ಬಿಡುಗಡೆ!
ಇದರ ಜತೆಗೆ ಪರಿಸರ ಕಾಳಜಿಗೂ ಸಂಸ್ಥೆ ಒತ್ತು ನೀಡಿದ್ದು, ಊಟವನ್ನು ನೀಡಲು ಬಳಸುವ ಪ್ಯಾಕೇಜಿಂಗ್ ಸಂಪೂರ್ಣವಾಗಿ ಮರುಬಳಕೆ ಮಾಡಬಹುದಾದ ಕಾಗದದಿಂದ ಮಾಡಲ್ಪಟ್ಟಿದೆ. ಇದರಲ್ಲಿ ಯಾವುದೇ ಬ್ಲೀಚಿಂಗ್ ಅಥವಾ ರಾಸಾಯನಿಕಗಳನ್ನು ಬಳಸಿರುವುದಿಲ್ಲ. ಊಟ ಮಾಡಲು ಪ್ಲಾಸ್ಟಿಕ್ ಬದಲು ನೈಸರ್ಗಿಕವಾಗಿ ಕರಗುವ ಮರದ ಚಮಚಗಳನ್ನು ನೀಡಲಾಗುತ್ತದೆ. ಈ ಹೊಸ ಮೆನು ಆಕಾಶ ಏರ್ನ ಎಲ್ಲಾ ವಿಮಾನಗಳಲ್ಲಿ ಲಭ್ಯವಿದ್ದು, ಗ್ರಾಹಕರು ಸಂಸ್ಥೆಯ ಅಧಿಕೃತ ವೆಬ್ಸೈಟ್, ಮೊಬೈಲ್ ಆ್ಯಪ್ ಅಥವಾ ಟ್ರಾವೆಲ್ ಏಜೆಂಟ್ಗಳ ಮೂಲಕ ಮುಂಚಿತವಾಗಿ ಊಟವನ್ನು ಕಾಯ್ದಿರಿಸಬಹುದಾಗಿದೆ.