ಇರಾನ್- ಇಸ್ರೇಲ್ ಸಮರ: ಪೆಟ್ರೋಲ್ ಬೆಲೆ 200 ರುಪಾಯಿ ಆಗುತ್ತಾ?
Iran Israel War: ಕೊಲ್ಲಿ ದೇಶಗಳ ಆಕಾಶ ಯುದ್ಧವಿಮಾನಗಳ ಹೊಗೆಯಿಂದ ಮಸುಕಾಗಿದೆ. ಈ ಮಧ್ಯೆ ಹೊರ್ಮುಜ್ ಜಲಸಂಧಿಯಲ್ಲಿ ಇರಾನ್ ಬ್ಲಾಕ್ ಮಾಡಿದರೆ ಎಲ್ಲ ದೇಶಗಳಿಗೂ ಅದರ ಬಿಸಿ ತಟ್ಟುತ್ತದೆ. ಕನಿಷ್ಠ ಒಂದು ವಾರ ಈ ಜಲಸಂಧಿಯನ್ನು ಬ್ಲಾಕ್ ಮಾಡಿದರೆ ಜಗತ್ತು ತೈಲಕ್ಕಾಗಿ ಬಾಯಿ ಬಾಯಿ ಬಿಡಬೇಕಾಗುತ್ತದೆ. ಆಗ ತೈಲ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ.
ಸಾಂದರ್ಭಿಕ ಚಿತ್ರ. -
ಬೆಂಗಳೂರು, ಮಾ. 3: ಒಂದು ಕಡೆಯಿಂದ ಅಮೆರಿಕ ಹಾಗೂ ಇಸ್ರೇಲ್ ಸೇರಿಕೊಂಡು ಇರಾನ್ ಮೇಲೆ ಕ್ಷಿಪಣಿಗಳ ಮಳೆಯನ್ನು ಸುರಿಸ್ತಾ ಇವೆ. ಇನ್ನೊಂದು ಕಡೆಯಿಂದ ಇರಾನ್, ಇಸ್ರೇಲ್ ಸೇರಿದಂತೆ ಸುತ್ತಮುತ್ತಲಿನ ಗಲ್ಫ್ ದೇಶಗಳ ಮೇಲೆಲ್ಲಾ ಸೂಸೈಡ್ ಡ್ರೋನ್‌ಗಳ ಅಟ್ಯಾಕ್ ಮಾಡ್ತಾ ಇದೆ. ಕೊಲ್ಲಿ ದೇಶಗಳ ಆಕಾಶ ಯುದ್ಧವಿಮಾನಗಳ ಹೊಗೆಯಿಂದ ಮಸುಕಾಗಿದೆ. ಗಲ್ಫ್ ನೆಲ ರಕ್ತರಂಜಿತವಾಗಿದೆ. ಈಗ ಇದ್ದಕ್ಕಿದ್ದಂತೆ ಯಾವುದೇ ಒಂದು ತೈಲ ಬಾವಿಗೆ ಬೆಂಕಿ ಬಿದ್ದರೂ ಅದು ನೂರಾರು ಎಕರೆಗಟ್ಟಲೆ ವ್ಯಾಪ್ತಿಯಲ್ಲಿ ಧಗಧಗಿಸಿ ಉರಿಯತೊಡಗುತ್ತದೆ. ವರ್ಷಗಟ್ಟಲೆ ಈ ಬೆಂಕಿ ಆರುವುದೇ ಇಲ್ಲ. ಈ ತೈಲ ಬಾವಿಯನ್ನೇ ನಂಬಿಕೊಂಡ ಆ ದೇಶ ಕಚ್ಚಾ ತೈಲ ರಫ್ತು ನಿಲ್ಲಿಸುತ್ತದೆ. ಆ ತೈಲವನ್ನು ನಂಬಿಕೊಂಡ ದೇಶಗಳಲ್ಲಿ ಹಾಹಾಕಾರ ಶುರುವಾಗುತ್ತದೆ. ಇಂದು ಪೆಟ್ರೋಲ್ ಮತ್ತು ಡೀಸೆಲ್ ದರ ಕಡೆಗಣಿಸಿ ಬದುಕುತ್ತೇನೆ ಎನ್ನುವ ಧೈರ್ಯ ಯಾವ ದೇಶಕ್ಕೂ ಇಲ್ಲ. ಹೀಗಾಗಿ ಭಾರತ ಕೂಡ ಈ ಮಹಾಕದನದ ಫಲಾನುಭವಿ (Iran Israel War). ಪೆಟ್ರೋಲ್- ಡೀಸೆಲ್ ಬೆಲೆ ಏರಿಕೆಯಾದರೆ ಜನಸಾಮಾನ್ಯನ ಬದುಕು ದುರ್ಭರವಾಗುತ್ತದೆ. ಇನ್ನೊಂದೇ ವಾರ ಸಮರ ಮುಂದುವರಿದರೂ ಸಾಕು, ಪೆಟ್ರೋಲ್ ಬಂಕ್‌ಗಳಲ್ಲಿ ಹಲ್‌ಚಲ್ ಶುರುವಾಗುತ್ತದೆ. ಆದರೆ ಪೆಟ್ರೋಲ್ ಬೆಲೆ ಎಷ್ಟು ಏರಲಿದೆ, ಯಾವಾಗ ಏರುತ್ತೆ, ಮತ್ತೆ ಇಳಿಯುತ್ತಾ- ಇವೆಲ್ಲವೂ ಈಗ ಕುತೂಹಲ ಮೂಡಿಸಿರುವ ಪ್ರಶ್ನೆಗಳು.
ಭಾರತದ ಸ್ಥಿತಿ ಇಲ್ಲಿ ಸೂಕ್ಷ್ಮವಾಗಿದೆ. ಭಾರತಕ್ಕೆ ಇಸ್ರೇಲ್ ಜತೆ ಹತ್ತಿರದ ತಂತ್ರಜ್ಞಾನ ಮತ್ತು ರಕ್ಷಣಾತ್ಮಕ ಸಂಬಂಧಗಳಿವೆ. ಅದೇ ಸಮಯದಲ್ಲಿ ಇರಾನ್ ಜೊತೆ ದೀರ್ಘಕಾಲದ ಇತಿಹಾಸದ, ತೈಲ ವ್ಯಾಪಾರದ ಸಂಬಂಧವೂ ಇದೆ. ಇರಾನ್‌ನ ಚಾಬಹಾರ್ ಬಂದರನ್ನು ಅಭಿವೃದ್ಧಿಪಡಿಸಲು ಭಾರತ ಕೈಜೋಡಿಸಿತ್ತು. ಇದೀಗ ಗಲ್ಫ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಅದು ಕೂಡ ಅರ್ಧಕ್ಕೆ ನಿಂತಿದೆ.
ವಿಡಿಯೊ ಇಲ್ಲಿದೆ:
ಇದೀಗ ಮುಖ್ಯ ಆತಂಕ ಎದುರಾಗಿರೋದು ಹೋರ್ಮುಜ್ ಜಲಸಂಧಿಯಲ್ಲಿ. Strait of Hormuz, ಇದು ಜಗತ್ತಿನ ಅತ್ಯಂತ ಮಹತ್ವದ ಸಾಗರ ಮಾರ್ಗಗಳಲ್ಲಿ ಒಂದು. ಜಾಗತಿಕ ಕಚ್ಚಾ ತೈಲ ಸರಬರಾಜಿನ ಸುಮಾರು 20–25% ಹಡಗುಗಳು ಈ ಸಣ್ಣ ಕಾಲುವೆ ಮಾರ್ಗದ ಮೂಲಕ ಸಾಗುತ್ತದೆ. ದಕ್ಷಿಣ ಏಷ್ಯಾದ ದೊಡ್ಡ ಆರ್ಥಿಕತೆಯ ದೇಶಗಳಾದ ಭಾರತ, ಚೀನಾ, ಜಪಾನ್ ಮತ್ತು ದಕ್ಷಿಣ ಕೊರಿಯಾಗಳಿಗೆ ಹೊರ್ಮುಜ್ ಮೂಲಕವೇ ಅವುಗಳ ಸುಮಾರು 40% ಕಚ್ಚಾ ತೈಲ ಇದೇ ಮಾರ್ಗದ ಮೂಲಕ ಬರುತ್ತದೆ. ಈ ಮಾರ್ಗದ ಮೇಲಿನ ಹಿಡಿತ ಇರಾನ್ ಬಳಿ ಇದೆ. ಇರಾನ್‌ನ ಪಕ್ಕದಲ್ಲೇ ಹೊರ್ಮುಜ್ ಇರೋದರಿಂದ, ಈ ಹಡಗುಗಳ ಮೇಲೆ ದಾಳಿ ಮಾಡೋದು ಇರಾನ್‌ಗೆ ಸುಲಭ. ಹೊರ್ಮುಜ್ ಜಲಸಂಧಿಯಲ್ಲಿ ಇರಾನ್ ಬ್ಲಾಕ್ ಮಾಡಿದರೆ ಎಲ್ಲ ದೇಶಗಳಿಗೂ ಅದರ ಬಿಸಿ ತಟ್ಟುತ್ತದೆ. ಕನಿಷ್ಠ ಒಂದು ವಾರ ಈ ಜಲಸಂಧಿಯನ್ನು ಬ್ಲಾಕ್ ಮಾಡಿದರೆ ಜಗತ್ತು ತೈಲಕ್ಕಾಗಿ ಬಾಯಿ ಬಾಯಿ ಬಿಡಬೇಕಾಗುತ್ತದೆ.
ಅಪಾಯದಲ್ಲಿ ಇರಾನ್‌ನ ಹಾರ್ಮುಜ್ ಜಲಸಂಧಿ: ಭಾರತದ ಮೇಲೇನು ಪರಿಣಾಮ? ಇಂಧನ ದರ ಏರಿಕೆಯಾಗುತ್ತಾ?
ಇನ್ನು ತೈಲ ಶೀಪ್ಪಿಂಗ್ ಕಂಪನಿಗಳಲ್ಲಿ ಕೆಲಸ ಮಾಡ್ತಾ ಇರುವ ಭಾರತೀಯ ಸಿಬ್ಬಂದಿಯ ಸುರಕ್ಷತೆ ಕೂಡ ಒಂದು ಪ್ರಶ್ನೆಯಾಗಿದೆ. ಭಾರತದ ಡೈರೆಕ್ಟರ್ ಜನರಲ್ ಆಫ್ ಶಿಪ್ಪಿಂಗ್ ಅವರು ಭಾರತೀಯ ನಾವಿಕರು ಹಾಗೂ ಶಿಪ್ಪಿಂಗ್ ಕಂಪನಿಗಳಿಗೆ ಎಚ್ಚರಿಕೆ ನೀಡಿದ್ದು, ಇರಾನ್ ಪ್ರದೇಶಕ್ಕೆ ಸಿಬ್ಬಂದಿಯನ್ನು ಕಳುಹಿಸಬಾರದು ಎಂದು ಸಲಹೆ ನೀಡಿದೆ. ಶಿಪ್ಪಿಂಗ್ ಇನ್ಶೂರೆನ್ಸ್ ಪ್ರೀಮಿಯಂ ಒಂದೇ ರಾತ್ರಿ ಸುಮಾರು 50% ಏರಿಕೆಯಾಗಿದೆ. ಅಂದರೆ, ಒಂದು ಹಡಗು ಮುಳುಗಡೆಯಾದರೆ ಅಥವಾ ಅದರ ಮೇಲೆ ಅಟ್ಯಾಕ್ ಆದರೆ ವಿಮಾ ಕಂಪನಿಗಳು ಒಂದೂವರೆಪಟ್ಟು ವಿಮೆ ನೀಡಬೇಕಾಗುತ್ತದೆ. ಇಂಥ ಸ್ಥಿತಿಯಲ್ಲಿ ಯಾರೂ ವಿಮೆ ನೀಡೋಲ್ಲ ಹಾಗ ರಿಸ್ಕ್ ತಗೊಳ್ಳಲು ಶಿಪ್ಪಿಂಗ್ ಕಂಪನಿಗಳೂ ಸಿದ್ಧವಿಲ್ಲ.
ಭಾರತದ ತೈಲ ಆಮದು ಮೇಲೆ ಪರಿಣಾಮ
ಭಾರತ ದೇಶ ತನ್ನ ಕಚ್ಚಾ ತೈಲ ಅಗತ್ಯದ ಸುಮಾರು 90% ಆಮದು ಮಾಡಿಕೊಳ್ಳುತ್ತದೆ. ಅದರಲ್ಲಿ ಸುಮಾರು 25ರಿಂದ 27 ಲಕ್ಷ ಬ್ಯಾರೆಲ್ ತೈಲ ಪ್ರತಿದಿನವೂ ಕುವೈತ್, ಸೌದಿ ಅರೇಬಿಯಾ, ಇರಾಕ್ ಮತ್ತು ಯುಎಇ ದೇಶಗಳಿಂದ ಬರುತ್ತದೆ. ಅದೆಲ್ಲವೂ ಹೋರ್ಮುಜ್ ಮಾರ್ಗದ ಮೂಲಕ ಬರಬೇಕಿದೆ. ಇತ್ತೀಚಿನ ಕೆಲವು ವರ್ಷಗಳಲ್ಲಿ ರಷ್ಯಾದಿಂದ ತೈಲ ಖರೀದಿ ಮೇಲೆ ಅಮೆರಿಕಾ ಒತ್ತಡ ಹೇರಿದ ನಂತರ, ಭಾರತವು ಗಲ್ಪ್ ದೇಶಗಳ ಕಡೆಗೆ ಹೆಚ್ಚು ಮುಖ ಮಾಡಿದೆ. ಇದರಿಂದಾಗಿ ಹೋರ್ಮುಜ್ ಮೇಲಿನ ನಮ್ಮ ಅವಲಂಬನೆ ಹೆಚ್ಚಾಗಿದೆ.
ಆದರೆ ಭಾರತ ಇನ್ನೂ 40ಕ್ಕೂ ಹೆಚ್ಚು ದೇಶಗಳಿಂದ ತೈಲ ಖರೀದಿಸುತ್ತಿದೆ. ಈ ದೇಶಗಳು ಅಮೆರಿಕಾ, ಪಶ್ಚಿಮ ಆಫ್ರಿಕಾ, ರಷ್ಯಾ, ಲ್ಯಾಟಿನ್ ಅಮೆರಿಕಾ, ವೆನೆಜುವೆಲಾ ಇತ್ಯಾದಿ. ಇದರಿಂದ ಸ್ವಲ್ಪ ಕಾಲ ಸರಬರಾಜು ಸಮತೋಲನ ಸಾಧಿಸಬಹುದು.

ವಿಶ್ಲೇಷಕರ ಪ್ರಕಾರ, ತೈಲದ ಪ್ರಮಾಣ ತಕ್ಷಣವೇ ಏನೂ ಕಡಿಮೆ ಆಗೋಲ್ಲ. ಯಾಕೆಂದರೆ ಸುಮಾರು 72 ದಿನಗಳಿಗೆ ಆಗೋವಷ್ಟು ತೈಲ ಭಾರತದ ಬಳಿ ದಾಸ್ತಾನು ಇದೆ. ಮಂಗಳೂರು ಆಹಾಗೂ ವಿಶಾಖಪಟ್ಟಣಂಗಳಲ್ಲಿ ಇರುವ ಬೃಹತ್ ತೈಲ ದಾಸ್ತಾನು ಆಗರಗಳಲ್ಲಿ ಈ ತೈಲವಿದೆ. ಎರಡು ತಿಂಗಳು ಇಡೀ ದೇಶಕ್ಕೆ ತೈಲದ ಭಯವಿಲ್ಲ. ಆದರೆ ಬೆಲೆ ಮೇಲೆ ಖಂಡಿತವಾಗಿಯೂ ಈ ವಾರದಲ್ಲೇ ಪರಿಣಾಮ ಕಾಣಬಹುದು. ಇರಾನ್‌ನ 33 ಲಕ್ಷ ಬ್ಯಾರೆಲ್ ಉತ್ಪಾದನೆ ಹಾಗೂ ರಫ್ತಿಗೆ ಅಡ್ಡಿಯಾದರೆ, ತೈಲ ಬೆಲೆ 9ರಿಂದ 15% ಏರಬಹುದು. ಬ್ಯಾರೆಲ್‌ಗೆ 70 ಡಾಲರ್ ಇದ್ದದ್ದು 76ರಿಂದ 81 ಡಾಲರ್ ಆಗಬಹುದು. ಪ್ರತಿ 10 ಡಾಲರ್ ಏರಿಕೆಯಿಂದ ಭಾರತದ ವಾರ್ಷಿಕ ಆಮದು ವೆಚ್ಚ 13–14 ಬಿಲಿಯನ್ ಡಾಲರ್ ಹೆಚ್ಚಾಗಬಹುದು. ಇದರಿಂದ ಕರೆಂಟ್ ಅಕೌಂಟ್ ಡೆಫಿಸಿಟ್ ಹೆಚ್ಚಾಗಿ ರೂಪಾಯಿ ದುರ್ಬಲವಾಗಬಹುದು.
ತಜ್ಞರು ಹೇಳುವ ಪ್ರಕಾರ ದೀರ್ಘಕಾಲ ಯುದ್ಧ ಮುಂದುವರಿದರೆ ಜಾಗತಿಕ ಇಂಧನ ಆರ್ಥಿಕತೆ ಕುಗ್ಗುತ್ತದೆ. ಹೇಗೂ ನಾವು ರಷ್ಯಾದ ತೈಲದಿಂದ ದೂರ ಸರಿಯುತ್ತವಂತೆ ಅಮೆರಿಕ ಮಾಡಿದೆ. ಈ ಸಮಯದಲ್ಲಿ ಪಶ್ಚಿಮ ಏಷ್ಯಾದಲ್ಲಿನ ಅಶಾಂತಿ ಭಾರತದ ದುರ್ಬಲತೆಯನ್ನು ತೋರಿಸಿದೆ. ಪೆಟ್ರೋಲ್‌ಗೆ ಬೆಲೆ ಜಾಸ್ತಿಯಾದರೆ ಎಲ್ಲ ವಸ್ತುಗಳ ಬೆಲೆಯೂ ಹೆಚ್ಚಾಗುತ್ತದೆ. ಜನಸಾಮಾನ್ಯ ಹಾಹಾಕಾರ ಮಾಡುವಂತಾಗುತ್ತೆ. ಹೀಗಾಗಿ, ವಿದ್ಯುದೀಕರಣ ಹೆಚ್ಚಿಸೋದು, ಎಲೆಕ್ಟ್ರಿಕ್ ವಾಹನ, ಇಥನಾಲ್ ಮಿಶ್ರಣ ನೀತಿ ಸ್ಪೀಡ್ ಮಾಡಲೂ ಇದು ಅವಕಾಶ ಎನ್ನಬಹುದು.
ಅಕ್ಕಿ ಮತ್ತು ಚಹಾ ರಫ್ತಿಗೂ ಹೊಡೆತ
ಇರಾನ್‌ಗೆ ಭಾರತ ದೊಡ್ಡ ಪ್ರಮಾಣದಲ್ಲಿ ಬಾಸ್ಮತಿ ಅಕ್ಕಿ ರಫ್ತು ಮಾಡುತ್ತೆ. ಭಾರತದ ಬಾಸ್ಮತಿ ರಫ್ತಿನ ಸುಮಾರು 25% ಪಾಲುದಾರ ಇರಾನ್. ಹಾಗೇ ಇರಾಕ್ ಇನ್ನೂ 20%. ಒಟ್ಟಾರೆ ವರ್ಷಕ್ಕೆ 20 ಲಕ್ಷ ಟನ್‌ಗಿಂತ ಹೆಚ್ಚು ಅಂದರೆ 200 ಕೋಟಿ ಡಾಲರ್ ಮೌಲ್ಯದ ರಫ್ತು ಮಾಡುತ್ತೆ. 2024–25ರಲ್ಲಿ ಮಾತ್ರ ಭಾರತ 120 ಕೋಟಿ ಡಾಲರ್ ಮೌಲ್ಯದ ಬಾಸ್ಮತಿ ಅಕ್ಕಿ ಇರಾನ್‌ಗೆ ರಫ್ತು ಮಾಡಿದೆ. ಯುದ್ಧದ ಮುಂಚೆಯೇ ದೊಡ್ಡ ಆರ್ಡರ್‌ಗಳಿಂದ ದೇಶೀಯ ಬೆಲೆ ಕಿಲೋಗೆ ₹10 ಏರಿತ್ತು. ಈಗ ರಫ್ತು ಕುಸಿದರೆ ಬಾಸ್ಮತಿ ಮೌಲ್ಯ ಕುಸಿಯುತ್ತೆ. ಚಹಾ ರಫ್ತಿಗೂ ಹೊಡೆತ ಬೀಳಬಹುದು. ಕಳೆದ ಹಣಕಾಸು ವರ್ಷದಲ್ಲಿ ಭಾರತ ಇರಾನ್‌ಗೆ ಸುಮಾರು 700 ಕೋಟಿ ಡಾಲರ್ ಮೌಲ್ಯದ ಚಹಾ ರಫ್ತು ಮಾಡಿತ್ತು.
ಇರಾನ್, ಬಹ್ರೈನ್, ಕುವೈತ್, ಕತಾರ್ ಮತ್ತು ಯುಎಇ ಸೇರಿ ಭಾರತದ ವ್ಯಾಪಾರ ಮೌಲ್ಯ 117.32 ಶತಕೋಟಿ ಡಾಲರ್. ಇದರಲ್ಲಿ ಯುಎಇ ಮಾತ್ರ ಸುಮಾರು 100 ಶತಕೋಟಿ ಡಾಲರ್ ಪಾಲು ಹೊಂದಿದೆ. 2022ರ ಭಾರತ– ಯುಎಇ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ ವ್ಯಾಪಾರವನ್ನು ಹೆಚ್ಚಿಸಿತ್ತು. ಆದರೆ ದೀರ್ಘಕಾಲದ ಅಸ್ಥಿರತೆ ಸರಬರಾಜು ಸರಪಳಿ ಮತ್ತು ವ್ಯಾಪಾರಕ್ಕೆ ಅಡ್ಡಿಯಾಗಬಹುದು.
ಪಶ್ಚಿಮ ಏಷ್ಯಾ ಉದ್ವಿಗ್ನ: ಕಚ್ಚಾ ತೈಲ ಬೆಲೆ ಏರಿಕೆ; ಭಾರತದ ಮೇಲೇನು ಪರಿಣಾಮ?
ಚೀನಾದ ಪಾತ್ರ
ತಜ್ಞರ ಪ್ರಕಾರ, ಚೀನಾ ಇರಾನ್‌ನ ಕಚ್ಚಾ ತೈಲ ರಫ್ತಿನಲ್ಲಿ ಸುಮಾರು 90% ಅಂದರೆ 1–1.5 ದಶಲಕ್ಷ ಬ್ಯಾರೆಲ್ ಪ್ರತಿದಿನ ಖರೀದಿಸುತ್ತದೆ. ಈ ಸರಬರಾಜು ಕಡಿಮೆಯಾದರೆ, ಚೀನಾ ರಷ್ಯಾ, ಇರಾಕ್, ಸೌದಿ ಅರೇಬಿಯಾ ಹಾಗೂ ಪಶ್ಚಿಮ ಆಫ್ರಿಕಾ ತೈಲಕ್ಕಾಗಿ ಹೆಚ್ಚು ಬೆಲೆ ಕೊಡಬೇಕಾಗಬಹುದು. ಭಾರತವೂ ಇದೇ ಮಾರುಕಟ್ಟೆಗಳಲ್ಲಿ ಅವಲಂಬಿತವಾಗಿರುವುದರಿಂದ, ಇಂಧನ ಹೆಚ್ಚು ದುಬಾರಿಯಾಗುತ್ತೆ.
ಅಂತಿಮವಾಗಿ, ಕಚ್ಚಾ ತೈಲದ ಪ್ರಮಾಣದಲ್ಲಿ ದೊಡ್ಡ ಮಟ್ಟದ ಕೊರತೆ ಆಗದಿದ್ದರೂ, ಬೆಲೆ ಏರಿಕೆ ಹೆಚ್ಚಾಗುತ್ತೆ. ಗಲ್ಫ್‌ನ ಈ ಘರ್ಷಣೆ ಕೇವಲ ಯುದ್ಧವಲ್ಲ. ಇದು ಭಾರತದ ಇಂಧನ ಭದ್ರತೆ, ಆರ್ಥಿಕ ಸ್ಥಿತಿ, ರಫ್ತು ವ್ಯಾಪಾರ ಮತ್ತು ವಿದೇಶಾಂಗ ನೀತಿ ಮೇಲೂ ನೇರ ಪರಿಣಾಮ ಬೀರುತ್ತೆ. ತಜ್ಞರು ಹೇಳೋ ಮಾತು ಒಂದೇನೆ - ಭಾರತ ಈಗ ದೀರ್ಘಕಾಲಿಕ ಇಂಧನ ತಂತ್ರದಲ್ಲಿ ದೊಡ್ಡ ಬದಲಾವಣೆ ಮಾಡಬೇಕಾದ ಸಮಯ ಬಂದಿದೆ.